ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election Results 2024 | ಕುಗ್ಗಿದ ಬಿಜೆಪಿ: ಹಿಗ್ಗಿದ ಕಾಂಗ್ರೆಸ್‌

ಕಮಲ ಅರಳಲು ದಳ ಊರುಗೋಲು: ಸಿದ್ದರಾಮಯ್ಯ ಅಧಿಕಾರ ಅಬಾಧಿತ
Published 5 ಜೂನ್ 2024, 0:11 IST
Last Updated 5 ಜೂನ್ 2024, 0:11 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ ಹಾಗೂ ಸಾಮರ್ಥ್ಯ ಪ್ರದರ್ಶನದ ಸವಾಲೊಡ್ಡಿದ್ದ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯ ಬಲ ಕುಗ್ಗಿದ್ದರೆ, ಕಾಂಗ್ರೆಸ್‌ ಶಕ್ತಿ ಹಿಗ್ಗಿದೆ. ಇನ್ನೇನು ಭವಿಷ್ಯವೇ ಮುಗಿದು ಹೋಯಿತೆಂಬ ಭೀತಿಯಲ್ಲಿದ್ದ ದಳಪತಿಗಳಿಗೆ ಜೀವ ಚೈತನ್ಯವನ್ನೂ ಫಲಿತಾಂಶ ತಂದುಕೊಟ್ಟಿದೆ.

ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 135ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್‌, ಈ ಚುನಾವಣೆಯಲ್ಲೂ ಭಾರಿ ಸಂಖ್ಯೆಯಲ್ಲಿ ಗೆಲುವು ಸಾಧಿಸಬಹುದೆಂಬ ಉಮೇದಿನ
ಲ್ಲಿತ್ತು. ಆರ್ಥಿಕತೆ ಉತ್ತಮವಾಗಿಲ್ಲದೇ ಇದ್ದರೂ, ಲೋಕಸಭೆಯಲ್ಲೂ ಸಾಧನೆ ಮಾಡಲೇಬೇಕೆಂಬ ಆಕಾಂಕ್ಷೆಯಲ್ಲಿ  ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ್ದ ‘ಗ್ಯಾರಂಟಿ’ಗಳನ್ನು ಜಾರಿ ಮಾಡುವ ಧೈರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಂಡಿದ್ದರು.

ಗ್ಯಾರಂಟಿಗಳು ಭರ್ಜರಿ ಜಯ ಕೊಡಿಸಬಹುದೆಂಬ ಕಾಂಗ್ರೆಸ್ ನಾಯಕರ ವಿಶ್ವಾಸ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ. ಇಡೀ ದೇಶದಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್‌ ಚೇತರಿಸಿಕೊಂಡಿದೆ. ಹೀಗಿರುವಾಗ ಕಾಂಗ್ರೆಸ್‌ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಗೆದ್ದ ಸಂಖ್ಯೆ ಹೆಚ್ಚಿದೆಯಾದರೂ ಸಂಭ್ರಮ ಪಡುವಂತಹದ್ದು ಏನೂ ಇಲ್ಲ. ಹಿಂದೆ ಗೆದ್ದಿದ್ದ ಒಂದು ಸ್ಥಾನವನ್ನು ಕಳೆದುಕೊಂಡಿದ್ದರೂ 9 ಸ್ಥಾನಗಳಲ್ಲಿ ಗೆಲ್ಲುವಲ್ಲಿ ಪಕ್ಷ ಯಶಸ್ವಿಯಾಗಿದೆ. ಗ್ಯಾರಂಟಿ ಹಾಗೂ ಸರ್ಕಾರದ ವರ್ಚಸ್ಸಿಗಿಂತ ಬಿಜೆಪಿ ಮತ್ತು ಪ್ರಧಾನಿ ಮೋದಿ ಅಲೆಗೆ ಜನ ಮತ ಹಾಕಿರುವುದನ್ನು ಚುನಾವಣೆ ಫಲಿತಾಂಶ ತೋರಿಸಿದೆ. ಜತೆಗೆ, ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಬಿಜೆಪಿಗೆ ಪರಿವರ್ತನೆಗೊಂಡ ಒಕ್ಕಲಿಗರ ಮತಗಳು ಹಾಗೂ ಒಕ್ಕಲಿಗ–ಲಿಂಗಾಯತ ನಾಯಕರ ಸಖ್ಯದ ರಾಜಕೀಯ ಬಿಜೆಪಿಯ ಮರ್ಯಾದೆಯನ್ನು ಉಳಿಸಿದೆ. ಯಡಿಯೂರಪ್ಪನವರ ಹಿಂದಿರುವ ಲಿಂಗಾಯತ ಮತಬ್ಯಾಂಕ್ ಕೂಡ ಪಕ್ಷವನ್ನು ಕೈಬಿಟ್ಟಿಲ್ಲ ಎಂಬುದು ಲಿಂಗಾಯತ ಸಮುದಾಯ ನಿರ್ಣಾಯಕ
ವಾಗಿರುವ ಕ್ಷೇತ್ರಗಳ ಫಲಿತಾಂಶ ಸಾಬೀತುಪಡಿಸಿದೆ.

ಸಿದ್ದರಾಮಯ್ಯ ತಮ್ಮ ಸ್ವಂತ ಜಿಲ್ಲೆ ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಸೋತಿದ್ದಾರೆ. ಆದರೆ, ತಮ್ಮ ಸ್ವಕ್ಷೇತ್ರ ವರುಣವನ್ನು ಒಳಗೊಳ್ಳುವ ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದಾರೆ.

ಬಳ್ಳಾರಿಯಿಂದ ಹಿಡಿದು ಕಲಬುರಗಿವರೆಗಿನ ಕಲ್ಯಾಣ ಕರ್ನಾಟಕದ ಕ್ಷೇತ್ರಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯನವರ ವರ್ಚಸ್ಸು ಗೆಲುವಿನ ದಾರಿಯನ್ನು ಸಲೀಸು ಮಾಡಿದೆ.

ಈ ಕ್ಷೇತ್ರಗಳ ಗೆಲುವಿನ ಶ್ರೇಯ ಇಬ್ಬರೂ ನಾಯಕರಿಗೆ ಸಲ್ಲಬೇಕು. ಬಿಜೆಪಿಯ ಒಳಜಗಳ, ಅಭ್ಯರ್ಥಿ ಆಯ್ಕೆಯ ಗೊಂದಲವೂ ಕಾಂಗ್ರೆಸ್ ಗೆಲುವಿನ ಹಾದಿಯನ್ನು ಸುಲಭಗೊಳಿಸಿತು.

2019ರಲ್ಲಿ ಏಕಾಂಗಿಯಾಗಿ 25 ಹಾಗೂ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು. ಮೋದಿ ವರ್ಚಸ್ಸು ಒಂದೇ ಕಮಲ ಅರಳಿಸಲು ಕಾರಣವಾಗಿದ್ದರೆ 20 ಕ್ಷೇತ್ರಗಳಲ್ಲಾದರೂ ಬಿಜೆಪಿ ಗೆಲ್ಲಬೇಕಿತ್ತು.

ಜೆಡಿಎಸ್ ಮೈತ್ರಿ ಇಲ್ಲದೇ ಇದ್ದರೆ ಬಿಜೆಪಿ 9ಕ್ಕೆ ಇಳಿದು, ಕಾಂಗ್ರೆಸ್ ಬಲ 17ಕ್ಕೆ ಏರಿರುತ್ತಿತ್ತು. ಜೆಡಿಎಸ್‌ ಜತೆಗಿನ ಸಖ್ಯದಿಂದಾಗಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಯಾಸವಿಲ್ಲದೇ ದಡ ಸೇರಿದರು. ಅಸಾಧ್ಯ ಎನಿಸಬಹುದಾದ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರಿನ ಎರಡು ಕ್ಷೇತ್ರಗಳಲ್ಲಿ ಒಕ್ಕಲಿಗರ ಮತಗಳು ಪೂರ್ತಿಯಾಗಿ ಜೆಡಿಎಸ್ ಕಾರಣಕ್ಕೆ ಬಿಜೆಪಿ ಕಡೆ ಹರಿದವು. ಹೀಗಾಗಿ,
ಹಿನ್ನಡೆಯಾದರೂ ತಲೆ ಎತ್ತಿ ನಡೆಯಬಹುದಾದಷ್ಟು ಫಲಿತಾಂಶ ಬಿಜೆಪಿಗೆ ದಕ್ಕಿತು.

ಡಿಕೆಶಿಗೆ ಮುಖಭಂಗ: ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ನಡೆಯುತ್ತಿದ್ದ ಪೈಪೋಟಿಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ತಮ್ಮ ಭದ್ರಕೋಟೆಯಾದ ಗ್ರಾಮಾಂತರದಲ್ಲಿ ತನ್ನ ತಮ್ಮನನ್ನೇ ಗೆಲ್ಲಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಮತ ಬಾಹುಳ್ಯ ಹಾಗೂ ಮತ ಹಾಕಿಸುವಲ್ಲಿ ತಮ್ಮದೇ ಪ್ರಭಾವ ಬೀರುವ ಒಕ್ಕಲಿಗರೇ ಪ್ರಧಾನವಾಗಿರುವ ಕ್ಷೇತ್ರಗಳಲ್ಲೆಲ್ಲ ಬಿಜೆಪಿ ಗೆದ್ದಿದೆ. ಪ್ರಜ್ವಲ್ ಪ್ರಮಾದ ಹಾಗೂ ಕಾಂಗ್ರೆಸ್–ಜೆಡಿಎಸ್‌ ಪೈಪೋಟಿ ಮಧ್ಯೆ ಹಾಸನ ಮಾತ್ರ ಕಾಂಗ್ರೆಸ್‌ಗೆ ದಕ್ಕಿದೆ.

ಒಕ್ಕಲಿಗ ಸಮುದಾಯವು ಶಿವಕುಮಾರ್ ಅವರ ಬೆನ್ನಿಗೆ ಇಲ್ಲ ಎಂಬುದನ್ನು ಫಲಿತಾಂಶ ತೋರಿಸಿದೆ. ಈ ಸಮುದಾಯದ ಹೆಚ್ಚಿನವರ ನಿಷ್ಠೆ ಎಚ್.ಡಿ. ದೇವೇಗೌಡರಿಗೆ ವಿನಃ ಶಿವಕುಮಾರ್ ಅವರಿಗಲ್ಲ ಎಂಬುದು ಫಲಿತಾಂಶದ ಸಾರ. ಈ ಚುನಾವಣೆಯಲ್ಲಿ ಸಮುದಾಯದ ಮೇಲೆ ಹಿಡಿತ ಹೊಂದಿದ ಧಾರ್ಮಿಕ ಕೇಂದ್ರಗಳೂ ಪ್ರಧಾನ ಪಾತ್ರ ವಹಿಸಿರುವುದನ್ನೂ ಕಡೆಗಣಿಸುವ ಹಾಗಿಲ್ಲ. 

ಜೆಡಿಎಸ್‌ಗೆ ಚೈತನ್ಯ: ವಿಧಾನಸಭೆ ಚುನಾವಣೆಯಲ್ಲಿ 19 ಕ್ಷೇತ್ರದಲ್ಲಷ್ಟೇ ಗೆಲ್ಲಲು ಸಾಧ್ಯವಾಗಿದ್ದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ಜೆಡಿಎಸ್‌ ಭವಿಷ್ಯ ಕತ್ತಲಲ್ಲಿ ಇತ್ತು. ಅನೇಕ ಶಾಸಕರನ್ನು ಸೆಳೆದು, ಜೆಡಿಎಸ್ ದುರ್ಬಲಗೊಳಿಸುವ ಯತ್ನವನ್ನು ಕಾಂಗ್ರೆಸ್ ನಾಯಕರು ಹೆಣೆದಿದ್ದರು. ಒಂದೂ ಕ್ಷೇತ್ರದಲ್ಲಿ ಗೆಲ್ಲದೇ ಇದ್ದರೆ ಜೆಡಿಎಸ್‌ ಮೂಲೆಗುಂಪಾಗಲಿತ್ತು. ಮಂಡ್ಯದಲ್ಲಿ ಕುಮಾರಸ್ವಾಮಿ, ಕೋಲಾರದಲ್ಲಿ ಮಲ್ಲೇಶಬಾಬು ಗೆದ್ದಿದ್ದು, ‍ಪಕ್ಷಕ್ಕೆ ಜೀವದ್ರವ್ಯ ಸಿಕ್ಕಂತಾಗಿದೆ. ಇನ್ನು ಬಿಜೆಪಿ ಗೆಲುವಿಗೆ ಊರುಗೋಲಾಗಿರುವುದರಿಂದಾಗಿ, ಆ ಪಕ್ಷದ ನೆರವಿನ ಆಸರೆಯೂ ದಳಪತಿಗಳಿಗೆ ಸಿಗಲಿದೆ. ಇದು ಪಕ್ಷದ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದು, ಮತ್ತೆ ಪುಟಿದೇಳುವ ಆಸೆಗೆ ಚುನಾವಣೆ ನೀರೆರದಿದೆ.

ಸರ್ಕಾರ ಭದ್ರ: ಬಿಜೆಪಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು, ಅಧಿಕಾರ ಹಿಡಿದರೆ ರಾಜ್ಯ ಸರ್ಕಾರ ಪತನವಾಗುತ್ತದೆ. ಕಾಂಗ್ರೆಸ್ ಇಬ್ಭಾಗವಾಗುತ್ತದೆ ಎಂದು ಕಮಲದ ನಾಯಕರು ಹೇಳಿದ್ದುಂಟು. ಪ್ರಧಾನಿಯಾಗುವವರಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವುದೇ ಸವಾಲಾಗುವ ಪರಿಸ್ಥಿತಿ ಇದೆ. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರ ಹಂಗಿನಲ್ಲಿರಬೇಕಾದ ಅನಿವಾರ್ಯ ಬಿಜೆಪಿಗೆ ಇದೆ. ಹೀಗಿರುವಾಗ, ಇನ್ನು ನಾಲ್ಕು ವರ್ಷ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಆಸೆಗೂ ಈ ಫಲಿತಾಂಶ ಕಲ್ಲುಹಾಕಿದೆ.

ವಿಧಾನಸಭೆಯ 3, ಮೇಲ್ಮನೆಯ 1ಕ್ಕೆ ಉಪ ಚುನಾವಣೆ
ವಿಧಾನಸಭೆ ಪ್ರತಿನಿಧಿಸುತ್ತಿರುವ ಎಚ್‌.ಡಿ. ಕುಮಾರಸ್ವಾಮಿ (ಚನ್ನಪಟ್ಟಣ), ಬಸವರಾಜ ಬೊಮ್ಮಾಯಿ (ಶಿಗ್ಗಾವಿ) ಹಾಗೂ ಈ. ತುಕಾರಾಂ (ಸಂಡೂರು) ಹಾಗೂ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ (ದಕ್ಷಿಣ ಕನ್ನಡ) ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇವರು ತಾವು ಹೊಂದಿರುವ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರೆ, ಆರು ತಿಂಗಳೊಳಗೆ ಉಪ ಚುನಾವಣೆ ನಡೆಯಬೇಕಿದೆ. ರಾಜ್ಯವು ಮತ್ತೊಮ್ಮೆ ಈ ಚುನಾವಣೆಗೆ ಸಜ್ಜಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT