ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್‌ಗೆ ರೌಡಿಗಳ ನಂಟು: ತನಿಖೆ ವೇಳೆ ಪತ್ತೆ

ಹತ್ಯೆ ಪ್ರಕರಣದ ತನಿಖೆ ಚುರುಕು, ಡ್ರಗ್ಸ್‌ ಸೇವನೆ ಪತ್ತೆಗೆ ರಕ್ತದ ಮಾದರಿ ಸಂಗ್ರಹ
Published : 18 ಜೂನ್ 2024, 23:30 IST
Last Updated : 18 ಜೂನ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ ಮತ್ತು ತಂಡದ ಸದಸ್ಯರ ಮೊಬೈಲ್ ಕರೆಗಳ ವಿವರ, ವಾಟ್ಸ್‌ಆ್ಯಪ್‌ ಅನ್ನು ತಾಂತ್ರಿಕ ತಜ್ಞರು ಪರಿಶೀಲಿಸಿದ್ದು, ಬಂಧಿತ ಆರೋಪಿಗಳ ಪೈಕಿ ಕೆಲವರು ರೌಡಿಗಳ ಸಂಪರ್ಕದಲ್ಲಿ ಇದ್ದದ್ದು ಗೊತ್ತಾಗಿದೆ.

‘ಬಂಧಿತ ಆರೋಪಿಗಳ ಆರು ತಿಂಗಳ ಮೊಬೈಲ್‌ ಕರೆಗಳ ವಿವರ ಪಡೆಯಲಾಗುತ್ತಿದೆ. ಬಂಧಿತರು ರೌಡಿಗಳ ಸಂಪರ್ಕದಲ್ಲಿ ಇರುವುದು ತನಿಖೆಯಿಂದ ಬಯಲಾಗುತ್ತಿದೆ. ಆರೋಪಿಗಳು ಯಾವ ಉದ್ದೇಶದಿಂದ ರೌಡಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ದರ್ಶನ್‌ ಮ್ಯಾನೇಜರ್ ನಾಗರಾಜ್‌ ಅಲಿಯಾಸ್‌ ನಾಗ, ಕಾರು ಚಾಲಕ ಲಕ್ಷ್ಮಣ್‌ ಅವರ ಮೊಬೈಲ್‌ ಪರಿಶೀಲನೆ ನಡೆಸಲಾಗಿದೆ. ಈ ಇಬ್ಬರು ರೌಡಿಗಳೊಂದಿಗೆ ಚರ್ಚಿಸಿರುವ ಮಾಹಿತಿ ಲಭಿಸಿದೆ. ನಟ ಬೇರೆ ಬೇರೆ ಜಿಲ್ಲೆಗಳಿಗೆ ಸಿನಿಮಾ ಪ್ರಚಾರಕ್ಕೆ ತೆರಳಿದ್ದಾಗ ಆಯಾ ಭಾಗದಲ್ಲಿ ಅಭಿಮಾನಿಗಳನ್ನು ಸೇರಿಸಲು ರೌಡಿ ಚಟುವಟಿಕೆಗಳಲ್ಲಿ ಭಾಗಿ ಆದವರ ಜತೆಗೆ ಮಾತುಕತೆ ನಡೆಸಿರುವ ಸಾಧ್ಯತೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.

ದಾಖಲೆ ಪತ್ರ ಜಪ್ತಿ: ‘ಆರೋಪಿ ಪವಿತ್ರಾಗೌಡ ಅವರ ಮನೆಯಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮಹಜರು ನಡೆಸಿದ್ದಾಗ, ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ದಾಖಲೆ ಪತ್ರಗಳು ಪತ್ತೆಯಾಗಿದ್ದವು. ಅವುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕಳೆದ 10 ವರ್ಷದಿಂದ ಆರ್‌ಆರ್‌ ನಗರದ ಕೆಂಚೇನಹಳ್ಳಿ ರಸ್ತೆ 24ನೇ ಕ್ರಾಸ್‌ನ ಮನೆಯಲ್ಲಿ ಪವಿತ್ರಾ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಇನ್‌ಸ್ಟಾಗ್ರಾಮ್‌ ಸೇರಿ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಹಾಗೂ ಚಿತ್ರ ಕಳುಹಿಸುತ್ತಿದ್ದಾರೆ ಎಂಬ ಕಾರಣಕ್ಕೆ ರೇಣುಕಸ್ವಾಮಿ ಅಪಹರಿಸಿ ಕೊಲೆ ಮಾಡಲಾಗಿದ್ದು, ಅವರು ಸಂದೇಶ ಕಳುಹಿಸುತ್ತಿದ್ದ ಖಾತೆಗಳನ್ನು ತಾಂತ್ರಿಕ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಸ್ವಂತ ಖಾತೆ ತೆರೆದಿದ್ದ ರೇಣುಕಸ್ವಾಮಿ, ಬಳಿಕ ‘ರೆಡ್ಡಿ’ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪವಿತ್ರಾಗೌಡ ಅವರಿಗೆ ಸಂದೇಶ ಕಳುಹಿಸುತ್ತಿದ್ದರು. ಆರೋಪಿಗಳು ಸಹ ಬೇರೆ ಬೇರೆ ಸಿಮ್ ಬಳಸಿ ಅವರೊಂದಿಗೆ ಚಾಟಿಂಗ್‌ ನಡೆಸಿರುವುದು ಪತ್ತೆಯಾಗಿದೆ. ಅವರ ಇನ್‌ಸ್ಟಾಗ್ರಾಮ್‌ ನಕಲಿ ಖಾತೆಯ ಮಾಹಿತಿಗಾಗಿ ಕಂಪನಿಗೆ ಪತ್ರ ಬರೆದು ಮಾಹಿತಿ ಕೇಳಲಾಗುವುದು’ ಎಂದು ಪೊಲೀಸರು ಹೇಳಿದರು.

ಕೊಲೆ ಮಾಡಿರುವ ಆರೋಪಿಗಳು ಡ್ರಗ್ಸ್ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ‘ಕಬ್ಬಿಣದ ರಾಡ್, ಬೆಲ್ಟ್‌ಗಳಿಂದ ಹಲ್ಲೆ ನಡೆಸಿ ಹಾಗೂ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದರು. ಆರೋಪಿಗಳು ಡ್ರಗ್ಸ್‌ ತೆಗೆದುಕೊಂಡಿದ್ದರೇ ಇಲ್ಲವೇ ಎಂಬುದನ್ನು ಪತ್ತೆಹಚ್ಚಲು ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪವಿತ್ರಾಗೌಡ
ಪವಿತ್ರಾಗೌಡ

ಕಾರ್ಮಿಕರನ್ನು ರಾಜಕಾಲುವೆಗೆ ಇಳಿಸಿದ್ದಕ್ಕೆ ಆಕ್ಷೇಪ

ಸಾಕ್ಷ್ಯನಾಶ ಪಡಿಸಲು ಆರೋಪಿಗಳು ರಾಜಕಾಲುವೆಗೆ ಕೊಲೆಯಾದ ವ್ಯಕ್ತಿಯ ಮೊಬೈಲ್‌ ಎಸೆದಿದ್ದರು. ಮೊಬೈಲ್‌ ಹುಡುಕಲು ಹತ್ತಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಗಿತ್ತು. ಕಲುಷಿತ ನೀರಿನಲ್ಲಿ ಕಾರ್ಮಿಕರು ಮೂಗು ಮುಚ್ಚಿಕೊಂಡು ಹುಡುಕಾಟ ನಡೆಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ‘ಪೌರ ಕಾರ್ಮಿಕರ ಬದಲಿಗೆ ಕೊಲೆ ಮಾಡಿದ್ದ ಆರೋಪಿಗಳನ್ನೇ ರಾಜಕಾಲುವೆಯಲ್ಲಿ ಹರಿಯುತ್ತಿರುವ ಕಲುಷಿತ ನೀರಿಗೆ ಇಳಿಸಿ ಮೊಬೈಲ್‌ ಹುಡುಕಿಸಬೇಕಿತ್ತು’ ಎಂದು ಹಲವರು ಹೇಳಿದ್ದಾರೆ.  

ಪವಿತ್ರಾಗೌಡಗೆ ತಲೆ ಸುತ್ತು– ಚಿಕಿತ್ಸೆ

ತಲೆ ಸುತ್ತಿನಿಂದ ಬಳಲುತ್ತಿದ್ದ ಪವಿತ್ರಾಗೌಡ ಅವರಿಗೆ ಮಲ್ಲತ್ತಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವಿಚಾರಣೆಗಾಗಿ ಇವರನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದರು. ಠಾಣೆಯ ಸೆಲ್‌ನಲ್ಲಿ ಮಂಗಳವಾರ ಸಂಜೆ ಅವರು ಅಸ್ವಸ್ಥರಾಗಿದ್ದರು. ‘ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆ ತರಲಾಯಿತು’ ಎಂದು ಪೊಲೀಸರು ಹೇಳಿದರು.

ಮೈಸೂರಿಗೆ ದರ್ಶನ್‌ ಕರೆದೊಯ್ಯದೇ ಮಹಜರು

ಕೃತ್ಯ ನಡೆದ ಬಳಿಕ ದರ್ಶನ್‌ ಮೈಸೂರಿಗೆ ತೆರಳಿದ್ದರು. ಅಲ್ಲಿನ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಮಂಗಳವಾರ ಬೆಳಿಗ್ಗೆ ದರ್ಶನ್‌ ಅವರನ್ನು ಮೈಸೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲು ಪೊಲೀಸರು ನಿರ್ಧರಿಸಿದ್ದರು. ಆದರೆ ಅವರನ್ನು ಕರೆದೊಯ್ಯಲಿಲ್ಲ. ‘ಕಾರು ಚಾಲಕ ಲಕ್ಷ್ಮಣ್‌ ಹಾಗೂ ಮ್ಯಾನೇಜರ್‌ ನಾಗರಾಜ್‌ ಎಂಬುವರನ್ನು ಕರೆದೊಯ್ದು ಮಹಜರು ನಡೆಸಲಾಗಿದೆ. ದರ್ಶನ್‌ ಅವರನ್ನು ಠಾಣೆಯಲ್ಲೇ ವಿಚಾರಣೆ ನಡೆಸಲಾಯಿತು. ಭದ್ರತೆ ಕಾರಣದಿಂದ ಅವರನ್ನು ಮೈಸೂರಿಗೆ ಕರೆದೊಯ್ಯಲಿಲ್ಲ’ ಎಂದು ಮೂಲಗಳು ಹೇಳಿವೆ. ಎಲೆಕ್ಟ್ರಿಕ್‌ ಶಾಕ್ ನೀಡಿದ್ದ ಆರೋಪಿ ಧನರಾಜ್‌ ಅವರನ್ನು ಪಟ್ಟಣಗೆರೆಯ ಶೆಡ್‌ಗೆ ಕರೆದೊಯ್ದು ಮಹಜರು ನಡೆಸಲಾಯಿತು. ಶೆಡ್‌ ಮಾಲೀಕ ಜಯಣ್ಣ ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಸೋಮವಾರ ರಾತ್ರಿ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT