ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಸಲು ಸಚಿವ ಸಂಪುಟ ಅಸ್ತು

Published 26 ಜುಲೈ 2024, 11:17 IST
Last Updated 26 ಜುಲೈ 2024, 11:17 IST
ಅಕ್ಷರ ಗಾತ್ರ

ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಶುಕ್ರವಾರ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ, ರಾಮನಗರ ಜಿಲ್ಲೆಯೂ ಬ್ರ್ಯಾಂಡ್‌ ಬೆಂಗಳೂರಿನ ಭಾಗವಾಗಬೇಕು ಮತ್ತು ಅಲ್ಲಿ ಅಭಿವೃದ್ಧಿ ಆಗಬೇಕು ಎಂಬ ಕಾರಣಕ್ಕೆ ಹೊಸ ನಾಮಕರಣ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಹೆಸರು ಬದಲಿಸಲು ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಪ್ರಮುಖ ವ್ಯಕ್ತಿಗಳಿಂದ ಒತ್ತಾಯವಿತ್ತು. ಇದರಲ್ಲಿ ಹಿತಾಸಕ್ತಿ ಇಲ್ಲ. ಚುನಾವಣೆ ದೃಷ್ಠಿಯಿಂದಲೂ ಮಾಡಿದ್ದಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಪುನರ್‌ನಾಮಕರಣ ಮಾಡುವುದರಿಂದ ಸ್ಥಳೀಯರಿಗೆ ಬೆಂಗಳೂರು ಬ್ರ್ಯಾಂಡ್‌ನ ಎಲ್ಲ ಪ್ರಯೋಜನಗಳು ಸಿಗಲಿವೆ. ಅಲ್ಲಿನ ಆಸ್ತಿ ಮೌಲ್ಯವೂ ಹೆಚ್ಚಾಗಲಿದೆ ಎಂದು ಪಾಟೀಲ ತಿಳಿಸಿದರು.

ರಾಮನಗರ ಹಿಂದೆ ಬೆಂಗಳೂರಿನ ಭಾಗವೇ ಆಗಿತ್ತು. ಮತ್ತೆ ಬೆಂಗಳೂರಿಗೆ ಸೇರಿಸಲಾಗುತ್ತಿದೆ. ಹೆಸರು ಬದಲಿಸುವ ಸಂಬಂಧ ಕೂಡಲೇ ಅಧಿಸೂಚನೆ ಹೊರಡಿಸಲಾಗುವುದು. ಆ ನಂತರದ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ಆರಂಭಿಸಲಿದೆ ಎಂದು ಅವರು ಹೇಳಿದರು.

ರಾಮನಗರವನ್ನು ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿತ್ತು. ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜಿಲ್ಲಾ ಕೇಂದ್ರವಾಗಿದೆ.

ಈಗ ಕೇಂದ್ರ ಭಾರಿ ಕೈಗಾರಿಕೆ ಸಚಿರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾವು ಪ್ರತಿನಿಧಿಸುತ್ತಿದ್ದ ರಾಮನಗರ ಕ್ಷೇತ್ರವನ್ನು ಕೇಂದ್ರ ಸ್ಥಾನವಾಗಿಟ್ಟು ಪ್ರತ್ಯೇಕ ಜಿಲ್ಲೆಯನ್ನು ಘೋಷಿಸಿದ್ದರು.

ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ನಾಲ್ಕು ತಾಲ್ಲೂಕುಗಳು ಜಿಲ್ಲೆಯ ಭಾಗವಾಗಿದ್ದವು. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಪ್ರಕಟಿಸಿದ್ದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರು, ‘ರಾಜ್ಯದಲ್ಲಿ ಮತ್ತೆ ತಮ್ಮ ಸರ್ಕಾರ ಬರಲಿದ್ದು, ದಕ್ಷಿಣ ಜಿಲ್ಲೆ ಹೆಸರನ್ನು ಕಿತ್ತೆಸೆದು ರಾಮನಗರ ಎಂದು ಮರು ನಾಮಕರಣ ಮಾಡಿಯೇ ಸಿದ್ಧ’ ಎಂದು ಅಬ್ಬರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT