ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ: ಹಣ ಮರಳಿಸಲು ಮುಂದಾದ ಲ್ಯಾಂಬೋರ್ಗಿನಿ ಮಾಲೀಕ

Published 3 ಜುಲೈ 2024, 16:19 IST
Last Updated 3 ಜುಲೈ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಹಣದ ಅಕ್ರಮ ವರ್ಗಾವಣೆ ಹಗರಣದ ಆರೋಪಿ ಸತ್ಯನಾರಾಯಣ ವರ್ಮಾಗೆ ಮಾರಿದ್ದ ಲ್ಯಾಂಬೋರ್ಗಿನಿ ಕಾರನ್ನು ಹಿಂಪಡೆದು, ₹3.32 ಕೋಟಿಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಒಪ್ಪಿಸಲು ಹೈದರಾಬಾದ್‌ನ ಉದ್ಯಮಿ ಮುಂದೆ ಬಂದಿದ್ದಾರೆ.

ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವರ್ಮಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಲಪಟಾಯಿಸಿದ್ದ ಹಣ ಬಳಸಿ ಸೆಕೆಂಡ್‌ ಹ್ಯಾಂಡ್‌ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಅದಕ್ಕೆ ₹3.32 ಕೋಟಿ ಪಾವತಿಸಿದ್ದರು. ಕಾರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ, ಮಾರಾಟ ಮಾಡಿದ್ದ ಕಾರು ಮಳಿಗೆ ಮಾಲೀಕರಿಗೆ ನೋಟಿಸ್‌ ನೀಡಿದ್ದರು.

‘ವರ್ಮಾ ಅವರಿಗೆ ಮಾರಿದ್ದ ಕಾರನ್ನು ವಾಪಸ್‌ ಪಡೆದುಕೊಂಡು ₹3.32 ಕೋಟಿಯನ್ನು ತನಿಖಾ ತಂಡಕ್ಕೆ ಒಪ್ಪಿಸುವುದಾಗಿ ಕಾರು ಮಾರಾಟ ಮಳಿಗೆ ಮಾಲೀಕ ಪತ್ರ ಸಲ್ಲಿಸಿದ್ದಾರೆ. ಕಾರನ್ನು ಮಾಲೀಕರಿಗೆ ಮರಳಿಸಿ, ನಿಗಮದ ಹಣ ಪಡೆದುಕೊಳ್ಳಲು ನ್ಯಾಯಾಲಯದ ಅನುಮತಿ ಅಗತ್ಯ. ಮಳಿಗೆಯ ಮಾಲೀಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೆ ಹಣ ಮರಳಿಸಿದರೆ ಕಾರನ್ನು ವಾಪಸ್‌ ಕೊಡುವುದಾಗಿ ನಿರಾಕ್ಷೇಪಣಾ ಪತ್ರ ಸಲ್ಲಿಸುತ್ತೇವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನ್ಯಾಯಾಲಯ ಅನುಮತಿ ನೀಡಿದ ಬಳಿಕ ಕಾರು ಮಾರಾಟ ಮಾಡಿದ್ದ ವ್ಯಕ್ತಿಯಿಂದ ₹3.32 ಕೋಟಿ ಪಡೆದುಕೊಂಡು ವಾಹನವನ್ನು ವಾಪಸ್‌ ನೀಡಲಾಗುವುದು ಎಂದರು.

ಮತ್ತಷ್ಟು ಹಣ ಜಪ್ತಿಗೆ ಸಿದ್ಧತೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣವನ್ನು ಪಡೆದಿರುವವರ ಪತ್ತೆಗೆ ಶೋಧ ಮುಂದುವರಿದೆ. ಅಂತ ವ್ಯಕ್ತಿಗಳ ಮತ್ತಷ್ಟು ಬ್ಯಾಂಕ್‌ ಖಾತೆಗಳ ಮಾಹಿತಿ ಸಂಗ್ರಹಿಸಲಾಗಿದೆ. ಮತ್ತಷ್ಟು ಹಣ ಜಪ್ತಿಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT