ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಶೋಕ ವಿರುದ್ಧ ಪ್ರದೀಪ್ ಈಶ್ವರ್ ಹಕ್ಕುಚ್ಯುತಿ ಮಂಡನೆ

Published : 22 ಜುಲೈ 2024, 18:16 IST
Last Updated : 22 ಜುಲೈ 2024, 18:16 IST
ಫಾಲೋ ಮಾಡಿ
Comments

ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್. ಅಶೋಕ ವಿರುದ್ಧ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ಅವರು ವಿಧಾನಸಭೆಯಲ್ಲಿ ಸೋಮವಾರ ಹಕ್ಕುಚ್ಯುತಿ ಮಂಡಿಸಿದರು.

ಸಂವಿಧಾನದ ಪೀಠಿಕೆ ಉಲ್ಲೇಖಿಸಿ ಮಾತನಾಡಿದ ಅವರು, ‘ವಿರೋಧಪಕ್ಷದ ನಾಯಕರು ನನ್ನ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಈ ರೀತಿ ಮಾಡಿದರೆ, ಹೊಸ ಶಾಸಕರ ಕನಸು ನನಸಾಗುವುದಿಲ್ಲ. ನಾನು ಬಡತನದಿಂದ, ನೋವು ಅನುಭವಿಸಿ ಬಂದಿದ್ದೇನೆ. ನನ್ನ ತಂದೆ, ತಾಯಿಗೆ ಅನಾರೋಗ್ಯವಾದಾಗ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಆ ಕಾರಣಕ್ಕಾಗಿ ನನ್ನ ಕ್ಷೇತ್ರದಲ್ಲಿ 10 ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದೇನೆ. ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದಿದ್ದೇನೆ’ ಎಂದರು.

ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ. ಖಾದರ್‌, ‘ವಿಧಾನಸಭೆಯಲ್ಲಿ ಶುಕ್ರವಾರ ನಡೆದಿರುವ ವಿಚಾರಕ್ಕೆ ಸೀಮಿತವಾಗಿ ಮಾತನಾಡಿ’ ಎಂದರು.

ಸ್ಪಷ್ಟನೆ ನೀಡಿದ ಆರ್. ಅಶೋಕ, ‘ನಾವು ಶುಕ್ರವಾರ ಧರಣಿ ನಡೆಸುವಾಗ ಪ್ರದೀಪ್ ಈಶ್ವರ್ ಮಾತನಾಡಿದರು. ಆಗ ನಾನು ಅವಾಚ್ಯ ಶಬ್ದ ಬಳಕೆ ಮಾಡಿರುವುದಾಗಿ ಅವರು ಹೇಳುತ್ತಿದ್ದಾರೆ. ಆದರೆ, ಆ ರೀತಿ ಪದಬಳಕೆ ಮಾಡಿರುವುದು ದಾಖಲೆಗಳಲ್ಲಿ ಇಲ್ಲ. ಪ್ರದೀಪ್ ಈಶ್ವರ್‌ ಅವರು ರೋಷಾವೇಶದಲ್ಲಿ ದೊಡ್ಡ ಪದ ಬಳಕೆ ಮಾಡಿದ್ದಾರೆ. ಒಂದು ವೇಳೆ ಆ ರೀತಿ ಪದಬಳಕೆ ಮಾಡಿದ್ದರೆ ಕಡತದಿಂದ ತೆಗೆಸಿ, ತಪ್ಪಾಗಿದ್ದರೆ ತಪ್ಪೇ’ ಎಂದರು.

ಕಾನೂನು ಸಚಿವ ಎಚ್‌.ಕೆ. ಪಾಟೀಲ, ‘ಈ ವಿಷಯವನ್ನು ಮುಂದುವರಿಸದೆ, ಇಲ್ಲಿಗೇ ಬಿಡಿ’ ಎಂದು ಸಲಹೆ ನೀಡಿದರು. ಆಗ ಸಭಾಧ್ಯಕ್ಷರು ಆಡಿಯೊ, ವಿಡಿಯೊ ದಾಖಲೆಗಳನ್ನು ಪರಿಶೀಲಿಸಿ, ಹಕ್ಕುಚ್ಯುತಿ ಮಂಡನೆಯ ಸೂಚನೆ ಬಗ್ಗೆ ನಿರ್ಣಯ ಪ್ರಕಟಿಸುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT