ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಬ್, ಗನ್, ಬುಲೆಟ್‌ಗಳ ನಡುವೆ ಶಾಂತಿ ಮಾತುಕತೆ ಸಫಲವಾಗಲ್ಲ: ಪುಟಿನ್‌ಗೆ ಮೋದಿ

Published 9 ಜುಲೈ 2024, 14:41 IST
Last Updated 9 ಜುಲೈ 2024, 14:41 IST
ಅಕ್ಷರ ಗಾತ್ರ

ಮಾಸ್ಕೊ: ಬಾಂಬ್, ಗನ್ ಮತ್ತು ಬುಲೆಟ್‌ಗಳ ನಡುವೆ ಶಾಂತಿ ಮಾತುಕತೆ ಸಫಲವಾಗುವುದಿಲ್ಲ. ಯುದ್ಧ ಭೂಮಿಯಲ್ಲಿ ಯಾವುದೇ ಸಂಘರ್ಷಕ್ಕೆ ಪರಿಹಾರ ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧದ ಕುರಿತಂತೆ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.

ದೂರದರ್ಶನದಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ಪುಟಿನ್‌ ಜೊತೆಗಿನ ಮಾತುಕತೆ ಬಗ್ಗೆ ಮೋದಿ ಹೇಳಿದ್ದಾರೆ. ಭಾರತವು ಶಾಂತಿ ಪರವಾಗಿದೆ ಎಂಬ ಸಂದೇಶವನ್ನು ವಿಶ್ವ ಸಮುದಾಯಕ್ಕೆ ನೀಡಿದ್ದಾರೆ. ಉಕ್ರೇನ್ ಜೊತೆಗಿನ ಸಂಘರ್ಷ ಅಂತ್ಯಗೊಳಿಸುವ ಪರವಾಗಿ ಭಾರತ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

‘ಹೊಸ ಪೀಳಿಗೆಗೆ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಶಾಂತಿ ಅತ್ಯಾವಶ್ಯಕ. ಬಾಂಬ್, ಗನ್ ಮತ್ತು ಬುಲೆಟ್‌ಗಳ ನಡುವೆ ಶಾಂತಿ ಮಾತುಕತೆ ಸಫಲವಾಗುವುದಿಲ್ಲ’ಎಂದಿದ್ದಾರೆ.

ಪುಟಿನ್ ಜೊತೆಗಿನ ಅನೌಪಚಾರಿಕ ಸಭೆಯನ್ನು ಉಲ್ಲೇಖಿಸಿದ ಮೋದಿ, ಅವರ ಮಾತು ಭರವಸೆ ಹೆಚ್ಚಿಸಿದೆ ಎಂದಿದ್ದಾರೆ.

‘ಮಾನವೀಯತೆ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರಿಗೂ ಜೀವಗಳ ಹಾನಿಯಾದಾಗ ನೋವಾಗುತ್ತದೆ. ಅದನ್ನೂ ಮಿರಿ, ಮುಗ್ಧ ಮಕ್ಕಳ ಹತ್ಯೆಯಾದಾಗ, ಅದು ಅತ್ಯಂತ ಹೃದಯ ವಿದ್ರಾವಕ ಮತ್ತು ಅತ್ಯಂತ ನೋವಿನ ಸಂಗತಿ’ಎಂದು ಮೋದಿ ಹೇಳಿದ್ದಾರೆ.

‘ನಿನ್ನೆಯ ನಮ್ಮ ಸಭೆಯಲ್ಲಿ ಉಕ್ರೇನ್ ಕುರಿತ ಪರಸ್ಪರ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದೇವೆ. ಜಾಗತಿಕವಾಗಿ ಶಾಂತಿ ಮತ್ತು ಸ್ಥಿರತೆಯ ನಿರೀಕ್ಷೆಗಳನ್ನು ನಾನು ನಿಮ್ಮ ಮುಂದಿಡುತ್ತಿದ್ದೇನೆ’ಎಂದು ಮೋದಿ ಹೇಳಿದ್ದಾರೆ.

ಭಾರತದ ಇಂಧನ ವಲಯದ ಅಭಿವೃದ್ಧಿಗೆ ರಷ್ಯಾ ಸಹಾಯವನ್ನೂ ಮೋದಿ ನೆನೆದಿದ್ದಾರೆ.

ಜಗತ್ತು ಆಹಾರ, ಇಂಧನ ಮತ್ತು ರಾಸಾಯನಿಕ ಗೊಬ್ಬರದ ಕೊರತೆಯಿಂದ ತತ್ತರಿಸುತ್ತಿದ್ದಾಗ ಈ ಯಾವುದೇ ಸಮಸ್ಯೆ ರೈತರಿಗೆ ಎದುರಾಗಲು ನಾವು ಬಿಡಲಿಲ್ಲ. ರಷ್ಯಾ ಜೊತೆಗಿನ ನಮ್ಮ ಸ್ನೇಹ ಪ್ರಮುಖ ಪಾತ್ರ ವಹಿಸಿತು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT