ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆ ವಿಚಾರವಾಗಿ ಚೀನಾದ ಪ್ರಾಮಾಣಿಕತೆ ಪ್ರಶ್ನಿಸಿದ US

Published : 28 ಸೆಪ್ಟೆಂಬರ್ 2024, 2:56 IST
Last Updated : 28 ಸೆಪ್ಟೆಂಬರ್ 2024, 2:56 IST
ಫಾಲೋ ಮಾಡಿ
Comments

ನ್ಯೂಯಾರ್ಕ್‌: ಯುದ್ಧಪೀಡಿತ ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ವಿಚಾರವಾಗಿ ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಅವರು ಚೀನಾದ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾ ತನ್ನ ಹೋರಾಟ ಮುಂದುವರಿಸಲು ಚೀನಾ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯ ಮಹಾ ಅಧಿವೇಶನದ ಸಂದರ್ಭದಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರನ್ನು ಭೇಟಿಯಾದ ಬ್ಲಿಂಕೆನ್‌, ರಷ್ಯಾ–ಉಕ್ರೇನ್‌ ಸಂಘರ್ಷದ ಕುರಿತು ಚರ್ಚಿಸಿದ್ದಾರೆ.

ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ರಾಜತಾಂತ್ರಿಕ ಮಾರ್ಗ ಅನುಸರಿಸಲಾಗುವುದು ಎಂದಿರುವ ಬ್ಲಿಂಕೆನ್‌, ರಷ್ಯಾಗೆ ಚೀನಾದಿಂದ ಶಸ್ತ್ರಾಸ್ತ್ರ ಸರಬರಾಜಾಗುತ್ತಿರುವ ಬಗ್ಗೆ ತನ್ನ ಕಳವಳ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ 'ಯುದ್ಧ ಯಂತ್ರ'ಕ್ಕೆ ಚೀನಾ ಇಂಧನವಾಗಿದೆ ಎಂದು ಆರೋಪಿಸಿದ್ದಾರೆ.

'ಚೀನಾ ಒಂದೆಡೆ ತಾನು ಶಾಂತಿ ಬಯಸುವುದಾಗಿ ಮತ್ತು ಸಂಘರ್ಷ ಅಂತ್ಯಗೊಳ್ಳುವುದನ್ನು ಎದುರು ನೋಡುತ್ತಿರುವುದಾಗಿ ಹೇಳುತ್ತದೆ. ಆದರೆ, ಇನ್ನೊಂದೆಡೆ ಪುಟಿನ್‌ ಆಕ್ರಮಣಶೀಲತೆಯನ್ನು ಮುಂದುವರಿಸಲು ನೆರವಾಗುವಂತೆ ತನ್ನ ಕಂಪನಿಗಳಿಗೆ ಅನುಮತಿ ನೀಡುತ್ತದೆ' ಎಂದು ಮಾಧ್ಯಮದವರೊಂದಿಗೆ ಹೇಳಿದ್ದಾರೆ.

'ರಷ್ಯಾವನ್ನು ಚೀನಾದಿಂದ ದೂರಮಾಡುವುದು ನಮ್ಮ ಉದ್ದೇಶವಲ್ಲ. ಸಂಬಂಧದ ವಿಚಾರ ಅವರಿಗೆ ಬಿಟ್ಟದ್ದು. ಆದರೆ, ಆ ಸಂಬಂಧವು ಯುದ್ಧ ಮುಂದುವರಿಸಲು ರಷ್ಯಾಕ್ಕೆ ಬೇಕಾದ ಸಾಮಗ್ರಿಗಳನ್ನು ರವಾನಿಸಲು ಬಳಕೆಯಾಗುತ್ತಿದೆ. ಅದು ನಮಗೆಲ್ಲ, ಅದರಲ್ಲೂ ಮುಖ್ಯವಾಗಿ ಯುರೋಪ್‌ಗೆ ಸಮಸ್ಯೆಯಾಗಿ ಪರಿಣಮಿಸಿದೆ' ಎಂದು ಒತ್ತಿಹೇಳಿದ್ದಾರೆ.

ರಾಕೆಟ್‌ಗಳು, ಶಸ್ತ್ರಸಜ್ಜಿತ ಯುದ್ಧ ವಾಹನಗಳೂ ಸೇರಿದಂತೆ ರಷ್ಯಾಕ್ಕೆ ಅಗತ್ಯವಿರುವ ಶೇ 70 ರಷ್ಟು ಯಂತ್ರೋಪಕರಣಗಳನ್ನು ಚೀನಾ ಒದಗಿಸಿದೆ ಎಂದು ಬ್ಲಿಂಕೆನ್‌ ಆರೋಪಿಸಿದ್ದಾರೆ.

ಆದರೆ, 'ಉಕ್ರೇನ್ ಸಂಘರ್ಷದ ವಿಚಾರದಲ್ಲಿ ಚೀನಾದ ನಿಲುವು ಮುಕ್ತ ಮತ್ತು ಸ್ಪಷ್ಟವಾಗಿದೆ. ಸದಾ ಶಾಂತಿಯುತ ಮಾತುಕತೆಯನ್ನು ಪ್ರತಿಪಾದಿಸುತ್ತದೆ. ರಾಜತಾಂತ್ರಿಕ ಪರಿಹಾರವನ್ನು ಬೆಂಬಲಿಸುತ್ತದೆ' ಎಂಬುದಾಗಿ ವಾಂಗ್ ಅವರು ಬ್ಲಿಂಕೆನ್‌ಗೆ ತಿಳಿಸಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿಕೆ ನೀಡಿದೆ.

'ಚೀನಾ ಕುರಿತು ಗೊಂದಲಮಯ ಹೇಳಿಕೆ ನೀಡುವುದನ್ನು, ಸಮಸ್ಯೆಯನ್ನು ಬಳಸಿಕೊಂಡು ವಿಭಜನೆ ಸೃಷ್ಟಿಸುವುದನ್ನು ಯುಎಸ್‌ ಬಿಡಬೇಕು' ಎಂದು ಸಲಹೆ ನೀಡಿರುವುದಾಗಿಯೂ ಸಚಿವಾಲಯ ಉಲ್ಲೇಖಿಸಿದೆ.

ವಾಂಗ್‌ ಅವರು ಮಂಗಳವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧಿವೇಶನದಲ್ಲಿ, 'ಉಕ್ರೇನ್‌ ಬಿಕ್ಕಟ್ಟಿಗೆ ಚೀನಾ ಕಾರಣವಲ್ಲ ಅಥವಾ ಯಾರ ಪರವೂ ಇಲ್ಲ. ಶಾಂತಿಯ ಪರ ನಿಂತಿದೆ' ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT