ಜಯಪ್ರಕಾಶ್ ನಾರಾಯಣ್ ಪಕ್ಷ ವ್ಯವಸ್ಥೆಗೆ ವಿರೋಧವಾಗಿದ್ದರು. ಪಕ್ಷಾತೀತವಾದ ಸರ್ಕಾರ ಇರಬೇಕು. ಮತದಾರರು ಸಜ್ಜನರನ್ನು ಆಯ್ಕೆ ಮಾಡಿದರೆ ಸಾಕು, ಅವರು ಕೇವಲ ಒಂದು ಪಕ್ಷಕ್ಕೆ ಸೇರಿದವರಾಗಿರಬಾರದು ಎಂಬುದು ಅವರ ವಾದ. ಪಕ್ಷದ ಅಧಿಕಾರ ಪಕ್ಷಪಾತಿಯಾಗುತ್ತದೆ ಎಂಬುದು ಅವರ ಮೂಲ ನಿಲುವು.

ಈಗ ಒಂದು ಬಗೆಯ ಪಕ್ಷಾತೀತ ಸರ್ಕಾರವೇ ನಮ್ಮದಾಗಿಬಿಟ್ಟಿದೆ. ಯಾವ ಪಕ್ಷದಿಂದ ಗೆದ್ದವರನ್ನು ಬೇಕಾದರೂ ಆಡಳಿತದಲ್ಲಿರುವ ಪಕ್ಷ ಖರೀದಿಸಬಹುದು. ಅಥವಾ ಅಧಿಕಾರದಲ್ಲಿರುವ ಪಕ್ಷದಿಂದ ದುಡ್ಡು ಕೊಟ್ಟು ಸದಸ್ಯರನ್ನು ರಾಜೀನಾಮೆ ಕೊಡುವಂತೆ ಮಾಡಿ ಇನ್ನೊಂದು ಪಕ್ಷ ಅಧಿಕಾರಕ್ಕೆ ಬರಬಹುದೆಂದು ಸರ್ವತ್ರರೂ ನಂಬುತ್ತಾರೆ. ಅಂದರೆ ಪಕ್ಷದ ಹೆಸರಿನಲ್ಲೇ ಜಯಪ್ರಕಾಶ್ ನಾರಾಯಣರು ಬಯಸಿದ ಪಕ್ಷಾತೀತ ಸರ್ಕಾರ ಜಾರಿಗೆ ಬಂದುಬಿಟ್ಟಿದೆ. ಪಾಪ, ಜಯಪ್ರಕಾಶರು ಬಯಸಿದ್ದು ಇದನ್ನಲ್ಲ.

ಎಂ. ಎನ್. ರಾಯ್ ಕೂಡಾ ಹೀಗೆಯೇ ಪಕ್ಷಾತೀತ ವ್ಯವಸ್ಥೆಯೊಂದರ ಪರವಾಗಿ ವಾದಿಸಿದ್ದರು. ಅವರೂ ಈಗಿನ ಮಾದರಿಯ ಪಕ್ಷಾತೀತ ಸರ್ಕಾರವೊಂದನ್ನು ನಿರೀಕ್ಷಿಸಿರಲಿಲ್ಲ. ಯೌವನದ ದಿನಗಳಲ್ಲಿ ಪಕ್ಷದ ಪರಿಕಲ್ಪನೆಯನ್ನು ವಿರೋಧಿಸಿದ್ದ ರಾಯ್ವಾದಿ ಒಬ್ಬರು ನನಗೆ ಹೇಳಿದ್ದರು ‘ನಮ್ಮ ದೇಶದಲ್ಲಿ ಒಂದು ಜಾತ್ರೆ ಹೇಗೆ ನಡೆಯುತ್ತದೆ. ಎಲ್ಲ ಜನರೂ ಬರುತ್ತಾರೆ, ತೇರನ್ನೆಳೆದು ಸುತ್ತಾಡಿಸಿ ಮತ್ತೆ ಹಿಂದಕ್ಕೆ ತಂದು ಬಿಟ್ಟು ಸ್ನಾನ ಮಾಡಿ, ಊಟ ಮಾಡಿ ತಮ್ಮ ತಮ್ಮ ಮನೆಗೆ ಹೋಗುತ್ತಾರೆ. ಸರ್ಕಾರವೂ ನಡೆಯಬೇಕಾದ್ದು ಹೀಗೆ’. ಗಾಂಧೀಜಿಯ ಸ್ವರಾಜ್ಯದ ಕಲ್ಪನೆಯೂ ಈ ಬಗೆಯ ವಿಕೇಂದ್ರಿತವಾದ ಆಡಳಿತ ವ್ಯವಸ್ಥೆಯಾಗಿತ್ತು. ಆದರೆ ಈ ಬಗೆಯ ಆಲೋಚನೆ ಸದ್ಯದಲ್ಲಿ ಕೈಗೂಡುವಂಥದ್ದಲ್ಲ ಎಂದುಕೊಂಡಿದ್ದ ನನಗೆ ಪಕ್ಷದಿಂದ ಗೆದ್ದವರು ಮತ್ತೊಂದು ಪಕ್ಷಕ್ಕೆ ಅನಾಯಾಸವಾಗಿ ಹೋಗುವುದನ್ನು ಕಂಡು ಗಾಬರಿಯಾಗತೊಡಗಿದೆ. ಒಬ್ಬ ರಾಜಕಾರಣಿ ಎದುರಾದರೆ ನಾವು ಕೇಳಬೇಕಾದ ಪ್ರಶ್ನೆ ‘ನೀವು ಈಗ ಎಲ್ಲಿದ್ದೀರಿ’ ಎಂಬುದಾಗಿ ಬಿಟ್ಟಿದೆ.

ನಾವು ಬ್ರಿಟನ್ನಿನ ಮಾದರಿಯ ಪ್ರಜಾತಂತ್ರ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡವರು. ಬ್ರಿಟನ್ನಿನಲ್ಲಿ ಅಲ್ಪಸ್ವಲ್ಪವಾದರೂ ತಾತ್ವಿಕತೆಯ ಆಧಾರದ ಮೇಲೆ ಪಕ್ಷಗಳು ನಿಂತಿವೆ. ಜನ ಆಯ್ಕೆ ಮಾಡುವಾಗ ತಮಗೆ ಬೇಕಾದ್ದನ್ನು ಆಯ್ಕೆ ಮಾಡುತ್ತಾರೆ ಎಂಬುದಕ್ಕೆ ಒಂದು ಸಾಕ್ಷಿಯೆಂದರೆ ಎರಡನೇ ಮಹಾಯುದ್ಧದ ನಂತರ ಚರ್ಚಿಲ್ಲರನ್ನು ಸೋಲಿಸಿ ಲೇಬರ್ ಪಕ್ಷದ ಆಟ್ಲಿಯನ್ನು ಆಯ್ಕೆ ಮಾಡಿದ್ದು. ಈ ಆಯ್ಕೆ ಮಾಡುವಾಗ ಬ್ರಿಟನ್ನಿನ ಸಾಮಾನ್ಯ ಜನರು ಚರ್ಚಿಲ್ರನ್ನು ಮಹಾಯುದ್ಧದ ಹೀರೋ ಎಂದೇ ಆರಾಧಿಸುತ್ತಿದ್ದರು. ಆದರೆ ಈ ಆರಾಧನೆ ಆಯ್ಕೆಯ ಮೇಲೆ ಪರಿಣಾಮ ಬೀರಲಿಲ್ಲ. ಅಂಥ ಸದಾ ಚುಟ್ಟ ಸೇದುತ್ತಿದ್ದ ಚರ್ಚಿಲ್ರನ್ನು ಆರಾಧಿಸುವ ಜನರು ಅವನಲ್ಲಿ ಒಂದೇ ಒಂದು ತಪ್ಪನ್ನು ಹುಡುಕುತ್ತಾರೆ. ಅದೇನೆಂದರೆ ಲಿಬರಲ್ ಪಕ್ಷದಲ್ಲಿದ್ದ ಚರ್ಚಿಲ್ ಪಕ್ಷಾಂತರಿಯಾಗಿ ಕನ್ಸರ್ವೇಟಿವ್ ಆದವನೆಂದು.

ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ಚುನಾವಣೆಗೆ ನಿಂತಿದ್ದಾಗ ಆಕೆಯ ವಿರುದ್ಧ ಪ್ರಚಾರಕ್ಕೆ ನಾನೂ ಹೋಗಿದ್ದೆ. ಸಣ್ಣ ಹಳ್ಳಿಯೊಂದರಲ್ಲಿ ಬೀಡಿ, ಬೆಂಕಿಪೊಟ್ಟಣ, ದವಸ, ಧಾನ್ಯ ಮಾರುತ್ತಿದ್ದ ಬ್ಯಾರಿಯೊಬ್ಬರನ್ನು ಮಾತನಾಡಿಸಿದ್ದೆ. ಅವರು ನನ್ನ ಪ್ರಶ್ನೆಗೆ ನಗುನಗುತ್ತಾ ಹೀಗೆ ಉತ್ತರಿಸಿದ್ದರು: ‘ನಾನು ನಂಬುವುದು ಇಬ್ಬರನ್ನೇ’. ‘ಯಾರವರು’ ಎಂಬ ನನ್ನ ಪ್ರಶ್ನೆಗೆ ಅವರ ಉತ್ತರ ‘ಇಂದಿರಾಗಾಂಧಿ ಮತ್ತು ರಾಮ್ ಭಟ್ಟರು. ಇಂದಿರಾಗಾಂಧಿ ತಮ್ಮ ಪಕ್ಷ ಬಿಟ್ಟು ಬೇರೆ ಪಕ್ಷವನ್ನು ಸೇರುವುದಿಲ್ಲ. ರಾಮಭಟ್ಟರೂ ಕೂಡಾ ಜನಸಂಘವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಆದ್ದರಿಂದ ಇವರಿಬ್ಬರನ್ನೇ ನಾನು ನಂಬುವುದು’. ಜನಸಂಘ ನಂತರ ಬಿಜೆಪಿಯಾಯಿತು. ಅದು ತನ್ನ ಅಧಿಕಾರ ದಾಹದಿಂದಾಗಿ ರಾಮಭಟ್ಟರನ್ನೂ ಕಳೆದುಕೊಂಡಿತು.

ಹೀಗೆಲ್ಲಾ ಆಗಬಾರದೆಂದು ಅಂದುಕೊಳ್ಳುವ ನಾವು ಆಗುವುದೇ ಹೀಗೆ ಎಂದು ಸಿನಿಕರಾಗಿ ಯೋಚಿಸಬಾರದು. ಈಗ ಯಾಕೆ ಯಾವ ಪಕ್ಷದವರಾದರೂ ಪಕ್ಷಾಂತರಿಗಳಾಗುತ್ತಾರೆ ನೋಡೋಣ. ಆಯ್ಕೆಯಾಗುವವರು ತಮ್ಮ ಹಣವನ್ನೇ ಖರ್ಚು ಮಾಡಿ ಆಯ್ಕೆಯಾಗಿರುತ್ತಾರೆಯೇ ಹೊರತು ಪಕ್ಷ ಕೊಡುವ ಹಣದಿಂದಲ್ಲ. ಅಥವಾ ಸರ್ಕಾರವೇ ಚುನಾವಣಾ ಆಯೋಗದ ನೇತೃತ್ವದಲ್ಲಿ ಖರ್ಚುಮಾಡುವ ಹಣದಿಂದಲ್ಲ. ಅಂದರೆ ಎಲ್ಲ ಪಕ್ಷಗಳೂ ಕೋಟ್ಯಂತರ ಖರ್ಚು ಮಾಡಬಲ್ಲವರನ್ನು ಮಾತ್ರ ತಮ್ಮ ಅಭ್ಯರ್ಥಿಗಳನ್ನಾಗಿ ನಿಲ್ಲಿಸುತ್ತವೆ. ಪಕ್ಷದ ತತ್ವಗಳಿಗೆ ಬದ್ಧರಾದವರು ಅವರಿಗೆ ಮುಖ್ಯರಲ್ಲ. ಹೀಗೆ ಖರ್ಚು ಮಾಡಿ ಗೆದ್ದು ಬಂದವರು ತಮಗೆ ಓಟು ಕೊಡಬಲ್ಲವರಿಗೆ, ಕೊಡಬೇಕೆನ್ನುವಂತೆ ಪ್ರೇರೇಪಿಸುವ ಯಾವುದಾದರೊಂದು ಪಕ್ಷಕ್ಕೆ ಅರ್ಜಿ ಹಾಕಿ ತಮ್ಮ ಸದಸ್ಯತ್ವವನ್ನು ಪಡೆದಿರುತ್ತಾರೆ. ಹೀಗೆ ಆಯ್ಕೆಯಾದವರು ತಾವು ಖರ್ಚು ಮಾಡಿದ ಹಣವನ್ನು ಮತ್ತೆ ಗಳಿಸಬೇಕು. ಜೊತೆಗೆ ಇನ್ನೊಂದು ಸಾರಿ ಚುನಾವಣೆಗೆ ನಿಲ್ಲಬಲ್ಲಷ್ಟು ಹಣವನ್ನೂ ಮಾಡಬೇಕು. ಜೊತೆಗೆ ತಮಗೆ ಕೆಲಸ ಮಾಡಿದವರಿಗೂ ಲಾಭವಾಗುವಂತೆ ನೋಡಿಕೊಳ್ಳಬೇಕು. ಆದ್ದರಿಂದ ಇವರು ಪಕ್ಷ ಬದ್ಧರಾಗಿ ಇರುತ್ತಾರೆಂದು ಹೇಳುವಂತಿಲ್ಲ. ಅವರಿಗೆ ಹಣವೇ ಮುಖ್ಯವಾಗಿರುತ್ತದೆ. ಈ ಪಕ್ಷಾಂತರದಲ್ಲಿ ನಿಜವಾಗಿ ಮಾತನಾಡುವುದು ಹಣವೇ ಹೊರತು ತತ್ವವಲ್ಲ.

ಒಂದು ಪಕ್ಷವನ್ನು ಬಲವಾಗಿ ಕಟ್ಟಬೇಕೆಂದು ಬಯಸುವವರು ಕೆಲವು ಸಾಮಾನ್ಯ ತತ್ವಗಳಲ್ಲಿ, ವಿಚಾರಗಳಲ್ಲಿ ನಂಬಿಕೆ ಉಳ್ಳವರಾಗಿರಬೇಕು. ಮೊದಲನೆಯದು ಪಕ್ಷದ ಒಳಗೆ ಅನಿರ್ಬಂಧಿತವಾದ ಭಿನ್ನಾಭಿಪ್ರಾಯಗಳ ಚರ್ಚೆಗೆ ಅವಕಾಶವಿರಬೇಕು. ಈ ಚರ್ಚೆಯ ನಂತರ ಪಕ್ಷ ಒಂದು ತೀರ್ಮಾನ ತೆಗೆದುಕೊಂಡ ನಂತರ ಚರ್ಚೆ ಎಷ್ಟು ಅನಿರ್ಬಂಧಿತವಾಗಿರಬೇಕೋ ಅವರ ಕಾರ್ಯಾಚರಣೆಯ ಸ್ವಾತಂತ್ರ್ಯ ಅಷ್ಟೇ ನಿರ್ಬಂಧಿತವಾಗಿರಬೇಕು. ಪಕ್ಷ ಒಟ್ಟಾಗಿ ತೆಗೆದುಕೊಂಡ ನಿರ್ಣಯವನ್ನು ಉಲ್ಲಂಘಿಸಿ ಅವರು ನಡೆಯಬಾರದು. ಈಗ ಇದು ತಿರುಗು ಮುರುಗಾಗಿದೆ. ಮಾತಿನಲ್ಲಿ ಅವರು ನಿರ್ಬಂಧಿತರಾಗಿ ಮಾತನಾಡುತ್ತಿರುತ್ತಾರೆ. ತಮ್ಮ ಯಾವ ಭಿನ್ನಾಭಿಪ್ರಾಯವನ್ನೂ ಅವರು ವ್ಯಕ್ತಪಡಿಸುವುದಿಲ್ಲ. ಹೀಗೆ ವಿಧೇಯರಂತೆ ಕಾಣಿಸುವವರು ಅವರ ಕಾರ್ಯ ತಂತ್ರದಲ್ಲಿ ಮಾತ್ರ ಸ್ವಚ್ಛಂದರಾಗಿರುತ್ತಾರೆ. ಆದ್ದರಿಂದಲೇ ನಿನ್ನೆ ಪಕ್ಷದ ದಾಸಾನುದಾಸನಂತೆ ಮಾತನಾಡಿದವನು ಇವತ್ತು ಯಾವುದೋ ರೆಸಾರ್ಟ್ನಲ್ಲಿ ಕುಳಿತು ಅಥವಾ ಮನೆಯಲ್ಲೇ ಕುಳಿತು ತನ್ನನ್ನು ಮಾರಿಕೊಳ್ಳಲು ಅವಕಾಶ ಮಾಡಿಕೊಂಡಿರುತ್ತಾನೆ.

ಕರ್ನಾಟಕದಲ್ಲಿ ಆದದ್ದನ್ನು ನೋಡೋಣ. ವಿಧಾನಸಭೆಯಲ್ಲಿ ಯಾವ ಶಿಸ್ತೂ ಇಲ್ಲದಂತೆ ವರ್ತಿಸಿದವರು ಬಿಜೆಪಿಯ ಬಹುಮತವನ್ನು ಸಂಶಯದಿಂದ ನೋಡಿ ರಾಜ್ಯಪಾಲರಿಂದ ಸರ್ಕಾರವನ್ನು ವಜಾ ಮಾಡಬೇಕೆಂಬ ಆದೇಶ ಪಡೆದು ಸಂತೋಷಪಟ್ಟಿದ್ದರು. ನಮ್ಮ ಪುಣ್ಯಕ್ಕೆ ಒಂದು ಸಂವಿಧಾನವಿದೆ. ಇದರ ಪ್ರಕಾರ ರಾಜ್ಯಪಾಲರ ಶಿಫಾರಸನ್ನು ಕೇಂದ್ರವು ಒಪ್ಪಿಕೊಳ್ಳಲಿಲ್ಲ. ಆದ್ದರಿಂದ ತಾನು ಕೊಟ್ಟ ಶಿಫಾರಸಿಗೆ ವಿರುದ್ಧವಾಗಿ ಮತ್ತೆ ಬಹುಮತದ ಪರೀಕ್ಷೆಗೆ ಮುಖ್ಯಮಂತ್ರಿಗಳನ್ನು ಒಳಪಡಿಸಿ ಅವರು ಗೆದ್ದಿದ್ದಾರೆಂಬ ಇನ್ನೊಂದು ಶಿಫಾರಸನ್ನು ಕಳುಹಿಸಿದರು. ಇಲ್ಲಿಗೂ ನಾಟಕ ಮುಗಿಯುವಂತೆ ಕಾಣುತ್ತಿಲ್ಲ. ಗೆದ್ದು ಬಂದ ಹಲವರು ತಾವು ಮಾಡಿದ ಖರ್ಚನ್ನು ಬಹು ಬೇಗನೆ ಸಂಪಾದಿಸಲು ಮಂತ್ರಿಗಳಾಗಲೇಬೇಕು. ಆದರೆ ಎಷ್ಟು ಜನರನ್ನು ಮಂತ್ರಿಗಳನ್ನಾಗಿ ಮಾಡಲು ಸಾಧ್ಯ? ಇಲ್ಲೂ ನಮ್ಮ ಸಂವಿಧಾನ ಆ ಬಗೆಯ ಲೂಟಿಯಾಗದಂತೆ ತಡೆಯನ್ನು ಏರ್ಪಡಿಸಿದೆ. ಇನ್ನೊಂದು ತಡೆ ಇದ್ದಿದ್ದರೆ ಒಳ್ಳೆಯದಿತ್ತು. ಕ್ಯಾಬಿನೆಟ್ ದರ್ಜೆಯ ಸ್ಥಾನವುಳ್ಳ ನಿಗಮ ಮಂಡಳಿಗಳಿಗೆ ಎಂಎಲ್ಎಗಳು ಯಾರೂ ಅಧ್ಯಕ್ಷರಾಗಬಾರದೆಂಬ ನಿಯಮವಿರಬೇಕಾಗಿತ್ತು. ಆಗಲೂ ಎಂಎಲ್ಎಗಳಾಗಿ ಅವರು ಲೂಟಿ ಮಾಡಬಾರದೆಂದು ನಾವು ಬಯಸುವುದಾದರೆ ಜನರೂ ತಮ್ಮ ಕರ್ತವ್ಯವನ್ನು ಮತ್ತು ತಮ್ಮ ಹಕ್ಕುಗಳನ್ನು ತಿಳಿದವರಾಗಿರಬೇಕು.

1963ನೇ ಇಸ್ವಿಯಲ್ಲಿ ನಾನು ಇಂಗ್ಲೆಂಡಿಗೆ ಓದಲು ಹೋದಾಗ ಲೇಬರ್ ಪಕ್ಷದ ವಿಲ್ಸನ್ ಪ್ರಧಾನಿಯಾದರು. ಅವರು ಚುನಾವಣೆಗೆ ನಿಲ್ಲಿಸಿದ್ದು ಬಹುತೇಕ ಶಾಲಾ ಅಧ್ಯಾಪಕರನ್ನು. ಶ್ರೀಮಂತರೇ ಪಾರ್ಲಿಮೆಂಟ್ ಸದಸ್ಯರಾಗಿದ್ದಾಗ ಅವರಿಗೆ ಸಿಗುತ್ತಿದ್ದ ವೇತನ ಬಹಳ ಕಡಿಮೆಯಾಗಿತ್ತು. ಪಾರ್ಲಿಮೆಂಟ್ ಸದಸ್ಯರಾದ ಈ ಅಧ್ಯಾಪಕರು ತಮ್ಮ ವೃತ್ತಿಗೆ ಸಿಗುತ್ತಿದ್ದ ಸಂಬಳದಷ್ಟಾದರೂ ವೇತನ ಸಿಗಬೇಕೆಂದು ಕೋರಿದರು. ಇಲ್ಲವಾದರೆ ಅವರ ಸಂಸಾರಗಳು ಬದುಕುವುದು ಹೇಗೆ? ಆದ್ದರಿಂದ ಅತ್ಯಂತ ಅಗತ್ಯವಾಗಿಯೇ ಪಾರ್ಲಿಮೆಂಟ್ ಸದಸ್ಯರ ವೇತನವನ್ನು ಹೆಚ್ಚು ಮಾಡುವ ನಿರ್ಣಯವನ್ನು ವಿಷಾದದಿಂದಲೇ ತೆಗೆದುಕೊಳ್ಳಬೇಕಾಗಿ ಬಂತು. ಈ ಬಗ್ಗೆ ನಡೆದ ಚರ್ಚೆ ನನಗಿನ್ನೂ ನೆನಪಿದೆ. ಅವರು ಕೇಳಿದ ವೇತನವನ್ನು ಕೊಡದಿದ್ದಲ್ಲಿ ಅವರಿಗೆ ದುರ್ಮಾರ್ಗದಲ್ಲಿ ಹಣ ಮಾಡಬೇಕಾದ ಅನಿವಾರ್ಯತೆ ಇರುತ್ತಿತ್ತು. ಈಗ ನಮ್ಮ ರಾಜಕಾರಣಿಗಳಲ್ಲಿ ಧನದಾಹ ಎಷ್ಟು ಹೆಚ್ಚಿದೆಯೆಂದರೆ ಅವರು ದುರ್ಮಾರ್ಗದಲ್ಲಿ ಹಣಗಳಿಸುವುದಷ್ಟೇ ಅಲ್ಲದೆ ಸಂಬಳವಾಗಿಯೂ ತಮಗೆ ಹೆಚ್ಚು ಹಣ ಬೇಕೆಂದು ಹೋರಾಡಲು ಶುರು ಮಾಡಿದ್ದಾರೆ.

ಭಾರತದ ಜನ ಸಹನಶೀಲರು. ಆದರೆ ಇಲ್ಲಿ ಸಹನೆಗೆ ಒಂದು ಮಿತಿ ಎನ್ನುವುದು ಇರುತ್ತದೆ. ಇಂದಿರಾಗಾಂಧಿಯನ್ನು ಸೋಲಿಸಿದಾಗ ಜನ ತಾವು ಎಲ್ಲಿಯ ತನಕ ಸಹಿಸುತ್ತೇವೆ ಎಂಬುದನ್ನು ತೋರಿಸಿದ್ದರು. ಆದರೆ ಯಾವುದೋ ಒಂದು ರಾಜಕೀಯ ಪಕ್ಷ ಕೆಟ್ಟಿದ್ದರೆ ಇನ್ನೊಂದು ಪಕ್ಷವನ್ನು ಆರಿಸಬಹುದು. ಆದರೆ ಇವತ್ತು ನಮ್ಮ ಕರ್ನಾಟಕದಲ್ಲಿ ಆಡಳಿತ ಪಕ್ಷವೂ ವಿರೋಧ ಪಕ್ಷಗಳೂ ಒಂದೇ ಬಗೆಯ ಪಕ್ಷಾಂತರದ ವಹಿವಾಟಿನಲ್ಲಿ ತೊಡಗಿದ್ದಾಗ ಜನ ಯಾರನ್ನೂ ಆಯ್ಕೆ ಮಾಡಲು ಸಾಧ್ಯ. ಆದ್ದರಿಂದ ಭರವಸೆಯೇ ಇಲ್ಲದ ರಾಜಕೀಯ ಪಕ್ಷ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಸೃಷ್ಟಿಸುತ್ತಿದ್ದೇವೆ. ಇದರಿಂದ ಯಾವ ರಾಜಕೀಯ ಪಕ್ಷ ದಣಿದಿರಬಹುದು ಎಂದು ಯೋಚಿಸಿದರೆ ಯಾರೂ ದಣಿದಂತೆ ಕಾಣುವುದಿಲ್ಲ. ಯಾಕೆಂದರೆ ಬೇಕಾದಷ್ಟು ಹಣ ಎಲ್ಲ ನಾಯಕರ ಕೈಯಲ್ಲಿಯೂ ಇರುವಂತೆ ಕಾಣುತ್ತದೆ.

ರಾಜಕೀಯ ಪಕ್ಷಗಳು ಇದರಿಂದ ದಣಿಯದೇ ಇದ್ದರೂ ಸಾಮಾನ್ಯ ಮನುಷ್ಯರು ದಣಿದಿದ್ದಾರೆ. ಪ್ರಜ್ಞಾವಂತರಂತೂ ರಾಜಕೀಯವೆಂದರೆ ಹೇಸಿಗೆ ಪಡುತ್ತಿರುವಂತೆ ಕಾಣುತ್ತಿದೆ. ನಮಗೊಂದು ಸಂವಿಧಾನವಿರುವುದು ನಮ್ಮ ಪುಣ್ಯ ಎಂದೆ. ಆದರೆ ಈ ಸಂವಿಧಾನದ ಅಡಿಯಲ್ಲಿ ನೈತಿಕ ಕಾರಣಕ್ಕಾಗಿ ಒಂದು ಸರ್ಕಾರವನ್ನು ವಜಾ ಮಾಡುವುದು ಬಹಳ ಕಷ್ಟ. ಕಷ್ಟ ಮಾತ್ರವಲ್ಲ, ಅಸಾಧ್ಯವೂ ಇರಬಹುದು. ಆದ್ದರಿಂದ ಇನ್ನೊಂದು ಚುನಾವಣೆಯ ತನಕ ಜನ ಕಾಯಬೇಕಾಗುತ್ತದೆ. ಈಗ ಗೆದ್ದು ಬಂದವರೇ ತಮ್ಮ ನಾಮಗಳನ್ನು ಬದಲು ಮಾಡಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಪ್ರಾಯಶಃ ನಾವು ಸಹಿಸಿಕೊಳ್ಳಬೇಕಾಗುತ್ತದೆ. ಪ್ರಜಾತಂತ್ರದಲ್ಲಿ ಇರುವ ಒಂದು ಊನವೆಂದರೆ ಬಹುಮತ ಪಡೆದವರು ಆಳಬೇಕೆಂಬುದು. ಆದರೆ ಈ ಪ್ರಜಾತಂತ್ರದಲ್ಲೇ ಇರುವ ಇನ್ನೊಂದು ಅಂಶವೆಂದರೆ ಸತ್ಯ ಬಹುಮತವನ್ನು ಪಡೆದಿರಬೇಕು ಎಂಬುದು ಅದರ ಆಶಯವೇ ಹೊರತಾಗಿ ಶಾಶ್ವತ ಸತ್ಯವೇನಲ್ಲ.

ನನಗೆ ನೆನಪಿರುವಂತೆ ಕರ್ನಾಟಕದಲ್ಲೇ ಶಾಂತವೇರಿ ಗೋಪಾಲಗೌಡರು ವಿರೋಧ ಪಕ್ಷದಲ್ಲಿದ್ದಾಗ ಇರುವ ಒಂದು ಐದಾರು ಮಂದಿ ದೊಡ್ಡ ವಿರೋಧ ಪಕ್ಷದಂತೆಯೇ ಕಾಣುತ್ತಿದ್ದರು. ಅಂದರೆ ಅವರ ವಿರೋಧವನ್ನು ಗಂಭೀರವಾಗಿ ಗಮನಿಸುವ ಶಕ್ತಿ ಇದ್ದ ಮತ್ತು ನೈತಿಕತೆಯೂ ಇದ್ದ ನಿಜಲಿಂಗಪ್ಪ ಮತ್ತು ಹನುಮಂತಯ್ಯನಂಥವರು ಆಡಳಿತ ಪಕ್ಷದಲ್ಲಿದ್ದರು. ಮತ್ತು ನಮ್ಮ ಎಲ್ಲ ಸುದ್ದಿ ಮಾಧ್ಯಮಗಳು ಮುಖ್ಯವಾದ ಸತ್ಯವನ್ನು ಅದು ಆಳುವ ಪಕ್ಷವೋ ವಿರೋಧ ಪಕ್ಷವೋ ಎಂದು ಭೇದ ಮಾಡದೆ ಸಮಾನ ಪ್ರಾಮುಖ್ಯದೊಂದಿಗೆ ಜನರ ಎದುರು ಇಡುತ್ತಿದ್ದವು. ಇದು ಇವತ್ತಿಗೆ ಅಸಾಧ್ಯವಾದುದೇನೂ ಅಲ್ಲ. ಆದ್ದರಿಂದ ಅಂಥ ಸತ್ಯಗಳು ಟೆಲಿವಿಷನ್ನಲ್ಲಿ ಮೆರೆಯದೇ ಇದ್ದರೂ ನಮಗೆ ಕಾಣುವಂತೆ ಮಾಡುವ ಇತರ ಸುದ್ದಿ ಮಾಧ್ಯಮಗಳು ಜಾಗೃತವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.