ಮೇ ತಿಂಗಳು ಪೂರ್ತಿ, ನರೇಂದ್ರ ಮೋದಿ ಸರ್ಕಾರದ ಒಂದು ವರ್ಷದ ಮೌಲ್ಯಮಾಪನಕ್ಕೆ ಮೀಸಲು ಇಡಲಾಗಿತ್ತು. ಪ್ರತಿಯೊಬ್ಬರೂ ಮೋದಿ ಅವರನ್ನು ವಿಭಿನ್ನ ನೆಲೆಗಳಲ್ಲಿ ನಿಕಷಕ್ಕೆ ಒಳಪಡಿಸಿರುವುದು ಅತಿಯಾಯಿತು ಎನ್ನುವ ಭಾವನೆಯನ್ನೂ ಮೂಡಿಸಿತು. ಈ ಹಿಂದಿನ ಯಾವೊಬ್ಬ ಮುಖಂಡ ಅಥವಾ ಸರ್ಕಾರವನ್ನು ಈ ಪರಿಯ ನಿಷ್ಠುರತೆ, ವ್ಯಾಪಕತೆ ಮತ್ತು ಉತ್ಸಾಹದಿಂದ ಮೌಲ್ಯಮಾಪನ ಮಾಡಿದ ನಿದರ್ಶನಗಳೇ ಇಲ್ಲ. ಇದಕ್ಕೆ ಈ ಮೊದಲಿನ ಯಾವೊಬ್ಬ ಪ್ರಧಾನಿಯೂ ಈ ಪ್ರಮಾಣದ ಗರಿಷ್ಠ ಮಟ್ಟದ ನಿರೀಕ್ಷೆಗಳನ್ನು ಮೂಡಿಸಿರಲಿಲ್ಲ ಎನ್ನುವುದೂ ಮುಖ್ಯ.

ರಾಜಕೀಯ ವಿಶ್ಲೇಷಕರು, ಆರ್ಥಿಕ ತಜ್ಞರು, ಮಾಧ್ಯಮ ಪ್ರಭುಗಳು, ಸ್ವಯಂ ಘೋಷಿತ ಪರಿಣತರ ಅಭಿಪ್ರಾಯ ಏನೇ ಇರಲಿ ಜನಾಭಿಪ್ರಾಯ ಸಂಗ್ರಹದ ಸಮೀಕ್ಷೆಗಳು ನರೇಂದ್ರ ಮೋದಿ ಅವರನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಅರವಿಂದ ಕೇಜ್ರಿವಾಲ್ ಅವರಿಗಿಂತ ಮುಂಚೂಣಿಗೆ ತಂದು ನಿಲ್ಲಿಸಿವೆ. ಸದ್ಯದ ಕಾಲ ಘಟ್ಟದಲ್ಲಿ ಮೋದಿ ಅವರೊಬ್ಬ ಅತ್ಯುತ್ತಮ ಪ್ರಧಾನಿ ಎನ್ನುವುದನ್ನು ಸಮೀಕ್ಷೆಗಳು ಸಾಬೀತುಪಡಿಸಿವೆ. ಅವರ ವರ್ಚಸ್ಸಿಗೆ ಕಿಂಚಿತ್ತೂ ಧಕ್ಕೆಯಾಗಿಲ್ಲದಿರುವುದೂ ಈ ಜನಾಭಿಪ್ರಾಯ ಸಂಗ್ರಹದಲ್ಲಿ ಕಂಡು ಬಂದಿದೆ.

ಆದರೆ ಸಾರ್ವಜನಿಕರ ಸ್ಮರಣಶಕ್ತಿ ತುಂಬ ಕಡಿಮೆ ಇರುವುದು ನಮಗೆಲ್ಲ ಗೊತ್ತಿರುವಂತಹ ಸಂಗತಿ. ಜನರ ಮನಸ್ಸು ಮುಂಗಾರಿನಂತೆ ಸದಾ ಚಂಚಲ ಮತ್ತು ಎಣಿಕೆಗೆ ಸಿಗದಷ್ಟು ನಿಗೂಢವಾಗಿರುತ್ತದೆ. ಇದಕ್ಕೆ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯೇ ಒಳ್ಳೆಯ ನಿದರ್ಶನ. ಮೋದಿ ಅವರಿಗೆ ಒಳ್ಳೆಯ ದೂರದೃಷ್ಟಿ ಇದೆ ಸರಿ. ಆದರೆ, ಅವರು ಈಗ ತಾವು ನೀಡಿದ್ದ ಭರವಸೆಗಳ ಜಾರಿಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕಾಗಿದೆ. ನನ್ನ ಎಣಿಕೆ ಪ್ರಕಾರ ಅವರು ನಾಲ್ಕು ಪ್ರಮುಖ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಬೇಕಾಗಿದೆ.

ಭೂಸ್ವಾಧೀನ ಮಸೂದೆಯು ಹೊಸ ಸರ್ಕಾರದ ವಿವಾದದ ಮೈಲಿಗಲ್ಲು ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಬಿಜೆಪಿ ಮುಖಂಡರು ರೈತಾಪಿ ವರ್ಗದ ಮನಸ್ಸು ಓದುವಲ್ಲಿ ವಿಫಲರಾಗಿದ್ದಾರೆ ಎಂದೇ ಅನಿಸುತ್ತದೆ. ರೈತರು ಸಂಕಷ್ಟದಲ್ಲಿ ಬೇಯುತ್ತಿದ್ದಾರೆ. ಕೃಷಿ ವಲಯವು ತೀವ್ರ ಸ್ವರೂಪದ ಸಮಸ್ಯೆಗಳ ಪಿಡುಗಿಗೆ ಒಳಗಾಗಿದೆ. ವರ್ಷಗಳ ಉದ್ದಕ್ಕೂ ಈ ಕ್ಷೇತ್ರವನ್ನು ನಿರ್ಲಕ್ಷಿಸುತ್ತಲೇ ಬರಲಾಗಿದೆ. ಈ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಪ್ರತಿ ಪಕ್ಷವೂ ರೈತರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಅವರನ್ನು ಶೋಷಿಸುತ್ತಲೇ ಬಂದಿದೆ. ಈಗ ಅವರ ಬಗ್ಗೆ ಆಷಾಢಭೂತಿತನ ಪ್ರದರ್ಶಿಸುತ್ತಿರುವುದರಿಂದ ರೈತರು ಇನ್ನಷ್ಟು ಆಕ್ರೋಶಗೊಂಡಿದ್ದಾರೆ.

ಅತ್ಯುತ್ತಮ ಭೂ ಮಸೂದೆ, ಜನಪ್ರಿಯ ಘೋಷಣೆಗಳು, ಮೋದಿ ಮತ್ತವರ ತಂಡದ ರಾಷ್ಟ್ರವ್ಯಾಪಿ ಪ್ರಚಾರವಾಗಲಿ ರೈತರ ಆರ್ಥಿಕ ಸಂಕಷ್ಟವನ್ನು ದೂರ ಮಾಡಲಾರವು. ಗ್ರಾಮೀಣ ಮೂಲ ಸೌಕರ್ಯಗಳಾದ ಉತ್ತಮ ರಸ್ತೆ, ಗುಣಮಟ್ಟದ ಕೈಗೆಟುಕುವ ವಿದ್ಯುತ್, ಬೇಗನೆ ಕೊಳೆಯುವ ತರಕಾರಿ, ತೋಟಗಾರಿಕೆ ಉತ್ಪನ್ನಗಳನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ತ್ವರಿತವಾಗಿ ಸಾಗಿಸುವ ವ್ಯವಸ್ಥಿತ ಪೂರೈಕೆ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸಿಕೊಡಬೇಕಾಗಿದೆ.

ಕೃಷಿಕರ ಬಗೆಗಿನ ಕಾಳಜಿಯು ಬಹು ಬ್ರ್ಯಾಂಡ್ ಚಿಲ್ಲರೆ ವಹಿವಾಟಿನ ಜತೆಗೆ ತಳಕು ಹಾಕಿಕೊಂಡಿದೆ. ಇಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಮೊಲ ಮತ್ತು ಬೇಟೆನಾಯಿಗಳನ್ನು ಜತೆಯಲ್ಲಿಯೇ ಕರೆದೊಯ್ಯುತ್ತಿದೆ. ಬಹುಬ್ರ್ಯಾಂಡ್ ಚಿಲ್ಲರೆ ವಹಿವಾಟು ಗ್ರಾಮೀಣ ಪ್ರದೇಶದಲ್ಲಿ ಅಸಂಖ್ಯ ಪೂರಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ. ಜತೆಗೆ, ಕೃಷಿ ತ್ಯಾಜ್ಯದ ಪ್ರಮಾಣ ತಗ್ಗಿಸಿ ರೈತರಿಗೆ ನ್ಯಾಯೋಚಿತ ಬೆಲೆ ದೊರೆಯಲು ನೆರವಾಗಲಿದೆ. ಸಕಾಲಕ್ಕೆ ಮಾರುಕಟ್ಟೆಗೆ ತಲುಪದಿರುವುದರಿಂದ ನಮ್ಮ ಕೃಷಿ ಉತ್ಪನ್ನಗಳಲ್ಲಿ ಶೇ 40ರಷ್ಟು ಸರಕು ತ್ಯಾಜ್ಯ ರೂಪದಲ್ಲಿ ವ್ಯರ್ಥವಾಗುತ್ತಿದೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ.

ಬಿಜೆಪಿಯ ಸಾಂಪ್ರದಾಯಿಕ ‘ವೋಟ್ ಬ್ಯಾಂಕ್’ ಆಗಿರುವ ಸಣ್ಣ - ಪುಟ್ಟ ವ್ಯಾಪಾರಸ್ಥರ ಹಿತಾಸಕ್ತಿಗೆ ಧಕ್ಕೆ ತರಲಿದೆ ಎನ್ನುವ ಕಾರಣಕ್ಕೆ, ಬಿಜೆಪಿಯು ಬಹುಬ್ರ್ಯಾಂಡ್ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅನುಮತಿ ನೀಡುತ್ತಿಲ್ಲ. ಇದು ರೈತರ ಹಿತಾಸಕ್ತಿಗೂ ಮತ್ತು ಮೋದಿ ಅವರ ಸುಧಾರಣಾ ಕಾರ್ಯಸೂಚಿಗೂ ವಿರುದ್ಧವಾಗಿದೆ. ಎಫ್ಡಿಐಗೆ ಬಾಗಿಲು ಮುಚ್ಚುವ ಮೂಲಕ ಬಿಜೆಪಿ ಬಂಡವಾಳಶಾಹಿಗಳನ್ನು ರಕ್ಷಿಸುತ್ತಿದೆ ಎನ್ನುವ ಆರೋಪಕ್ಕೆ ತಾನೇ ಎಡೆಮಾಡಿಕೊಟ್ಟಿದೆ.

ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಒಟ್ಟಾರೆ ಜನಸಂಖ್ಯೆಯ ಶೇ 60ರಷ್ಟು ರೈತಾಪಿ ವರ್ಗ ನಿಧಾನವಾಗಿ ಇತರ ಉದ್ಯೋಗಗಳತ್ತ ವರ್ಗಾವಣೆಗೊಳ್ಳಬೇಕು. ಇದು ಒಂದೇ ರಾತ್ರಿಯಲ್ಲಿ ಆಗುವುದಿಲ್ಲ. ಮೂಲ ಸೌಕರ್ಯಗಳ ನಿರ್ಮಾಣ, ಆರ್ಥಿಕ ಸುಧಾರಣಾ ಕ್ರಮಗಳ ಜಾರಿ, ಉದ್ದಿಮೆ ವಹಿವಾಟು ಆರಂಭಕ್ಕೆ ಸೂಕ್ತ ಪರಿಸರ ಕಲ್ಪಿಸಿಕೊಡುವುದರಿಂದ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ನಮ್ಮ ಅವಾಸ್ತವಿಕ ಯೋಜನೆಗಳಿಂದಾಗಿಯೇ ಭಾರತೀಯರು ಬಡವರಾಗಿದ್ದಾರೆಯೇ ಹೊರತು, ನೈಸರ್ಗಿಕ ಸಂಪನ್ಮೂಲಗಳು ಮತ್ತು ಉದ್ಯಮಶೀಲತೆಯ ಉತ್ಸಾಹದ ಕೊರತೆಯಿಂದಲ್ಲ. ನಮ್ಮಲ್ಲಿ ಸಂಪನ್ಮೂಲ ಮತ್ತು ಉದ್ಯಮಶೀಲತೆಗೇನೂ ಕೊರತೆ ಇಲ್ಲ. ಖಾಸಗಿ ವಲಯಕ್ಕೆ ಮುಕ್ತ ಅವಕಾಶ ಕೊಟ್ಟರೆ ಉದ್ಯೋಗ ಅವಕಾಶಗಳು ಗಮನಾರ್ಹವಾಗಿ ಹೆಚ್ಚಲಿವೆ. ಇದರಿಂದ ಸಂಪತ್ತಿನ ಅಸಮಾನತೆಯೂ ತಗ್ಗಲಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕತಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮೀಣ ಪ್ರದೇಶದ ಮೂಲೆಮೂಲೆಗಳಲ್ಲಿ ವ್ಯಾಪಕವಾಗಿ ಪಸರಿಸುವ ಚಲನಶೀಲ ಖಾಸಗಿ ವಲಯ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದು ಮತ್ತು ಖಾಸಗಿಯವರು ಸ್ವಂತದ ಲಾಭಕ್ಕೆ ಕೂಟ ರಚಿಸಿಕೊಳ್ಳದಂತೆ ನೋಡಿಕೊಳ್ಳುವುದು ಮೋದಿ ಅವರ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಮುಕ್ತ ಆರ್ಥಿಕತೆಯ ಪಾಶ್ಚಿಮಾತ್ಯ ದೇಶಗಳಲ್ಲಿನ ದುರಾಸೆಯ ಬಂಡವಾಳಶಾಹಿಗಳು ಸಹ, ಅಧಿಕಾರದಲ್ಲಿ ಇರುವವರ ಜತೆ ಸೇರಿಕೊಂಡು ವ್ಯವಸ್ಥೆಯನ್ನೇ ಶೋಷಿಸುವ ಪ್ರವೃತ್ತಿ ಕಂಡು ಬರುತ್ತದೆ. ಕಮ್ಯುನಿಸ್ಟ್ ಸರ್ಕಾರ ಇರುವ ಚೀನಾ ಕೂಡ ಬಂಡವಾಳಶಾಹಿ ಮತ್ತು ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅಸಮಾನ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ‘ಬಂಡವಾಳಶಾಹಿ ಸ್ನೇಹಿ’ ವ್ಯವಸ್ಥೆಯನ್ನು ನಿಭಾಯಿಸುವುದೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸಬ್ಸಿಡಿಗಳು ಫಲಾನುಭವಿಗಳ ಕೈಸೇರುವಂತೆ ಮಾಡುವುದು ಮೋದಿ ಅವರ ಎದುರು ಇರುವ ಮೂರನೆ ಅತಿದೊಡ್ಡ ಸವಾಲು ಆಗಿದೆ. ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಜನಪ್ರಿಯ ಸಬ್ಸಿಡಿ ಯೋಜನೆಗಳನ್ನು ತಾವು ಕೈಬಿಡುವುದಾಗಿ ಮೋದಿ ಘೋಷಿಸಿದ್ದರು. ‘ನರೇಗಾ’ ಮತ್ತಿತರ ಯೋಜನೆಗಳು ‘ವೈಫಲ್ಯದ ಸ್ಮಾರಕ’ಗಳು ಎಂದೂ ಅವರು ಟೀಕಿಸಿದ್ದರು. ಕೆಲ ಮಟ್ಟಿಗೆ ಹಣವು ಬಡವರ ಕೈಸೇರಿರುವುದು ನಿಜವಾಗಿದ್ದರೂ, ಬಡತನ ನಿರ್ಮೂಲನೆಯಾಗಲಿ, ದೀರ್ಘಕಾಲ ಬಾಳಿಕೆ ಬರುವ ಮೂಲ ಸೌಕರ್ಯ ಯೋಜನೆಗಳ ನಿರ್ಮಾಣವಾಗಲಿ, ಉದ್ಯೋಗ ಅವಕಾಶಗಳ ಸೃಷ್ಟಿಯಾಗಲಿ ಕಂಡು ಬಂದಿಲ್ಲ. ಸಬ್ಸಿಡಿ ಹಣ ಗಮನಾರ್ಹವಾಗಿ ಸೋರಿಕೆಯಾಗಿರುವುದೂ ನಿಜ.

ಭೂ ಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಪಕ್ಷಕ್ಕೆ ಆಗಿರುವ ಹಿನ್ನಡೆ, ಉಳ್ಳವರ ಪರ ಇರುವ ‘ಸೂಟು ಬೂಟಿನ ಸರ್ಕಾರ’ ಎಂದು ರಾಹುಲ್ ಗಾಂಧಿ ಹೋದಲ್ಲಿ ಬಂದಲ್ಲೆಲ್ಲ ಟೀಕಿಸುತ್ತಿರುವುದರಿಂದ ಬಿಜೆಪಿ ಮುಖಂಡರಲ್ಲಿ ಈಗ ಕೊಂಚ ಮಟ್ಟಿಗೆ ಅಭದ್ರತೆಯ ಭಾವನೆ ಕಂಡು ಬರುತ್ತಿದೆ. ರೈತರ ಹಿತಾಸಕ್ತಿ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಕೂಡ ಪ್ರಾಮಾಣಿಕ ಕಾಳಜಿ ತೋರಿಸುತ್ತಿಲ್ಲ. ಬಿಹಾರ ಸೇರಿದಂತೆ ಇತರ ರಾಜ್ಯಗಳಲ್ಲಿನ ಚುನಾವಣೆ ಮೇಲೆ ಕಣ್ಣಿಟ್ಟು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದೆಯಷ್ಟೆ.

ಮೋದಿ ಪ್ರತಿಪಕ್ಷಗಳ ಬೆದರಿಕೆಗೆ ಹೆದರಿ ಇಲ್ಲವೆ ಶರಣಾಗತರಾಗಿ, ಸುಧಾರಣಾ ಕ್ರಮಗಳಿಂದ ಹಿಂದೆ ಸರಿಯಬಾರದು. ನಿರೀಕ್ಷಿಸಿದ ವೇಗದಲ್ಲಿ ಆರ್ಥಿಕ ವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಸಾಧ್ಯವಾಗದೆ ಕೆಲ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವ ಮೂಲಕ ಅವರು ಸದ್ಯಕ್ಕೆ ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಆಗಿದೆ. ಶ್ರದ್ಧಾಪೂರ್ವಕವಾಗಿ ಶ್ರಮಿಸಿದರೆ ಮಾತ್ರ 5ರಿಂದ 10 ವರ್ಷಗಳ ಅವಧಿಯಲ್ಲಿ ಮೂಲ ಸೌಕರ್ಯಗಳ ನಿರ್ಮಾಣ, ಕೈಗೆಟುಕುವ ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಕಲ್ಪಿಸಲು ಸಾಧ್ಯ.

ಇತ್ತೀಚಿನ ಭಾಷಣಗಳಲ್ಲಿ ಮೋದಿ ಅವರು ತಮ್ಮ ಸರ್ಕಾರ ಬಡವರ ಪರವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಶ್ರಮಿಸುತ್ತಿದ್ದಾರೆ. ತಾವೊಬ್ಬ ಉದ್ದಿಮೆ, ಖಾಸಗಿ ವಲಯದ ಪರವಾಗಿದ್ದು, ಬಂಡವಾಳಶಾಹಿ ಮತ್ತು ಆರ್ಥಿಕ ಒಕ್ಕೂಟಗಳ ಪರ ಇಲ್ಲ ಎನ್ನುವುದರ ಬಗ್ಗೆ ಜನರಲ್ಲಿ ಸಂಶಯಕ್ಕೆ ಎಣೆಯಿಲ್ಲದಂತೆ ನಂಬಿಕೆ ಮೂಡಿಸಬೇಕಾಗಿದೆ.

ದೇಶದ ಪ್ರತಿಯೊಬ್ಬ ಪ್ರಜೆಯೂ ಸಿರಿವಂತನಾಗುವ ಕನಸು ಕಾಣುತ್ತಿರುತ್ತಾನೆ. ಮಧ್ಯಮ ವರ್ಗದವರಾಗಲು ಬಡವರು, ಸಿರಿವಂತರಾಗಲು ಮಧ್ಯಮವರ್ಗದವರು ಬಯಸುತ್ತಿರುತ್ತಾರೆ. ಬಡವ – ಬಲ್ಲಿದರ ಕನಸುಗಳನ್ನೆಲ್ಲ ನನಸಾಗಿಸಲು ನಮಗೆ ಉತ್ತಮ, ದಕ್ಷ ಸರ್ಕಾರದ ಅಗತ್ಯ ತುಂಬ ಇದೆ. ದಕ್ಷ ಆಡಳಿತ ನೀಡುವುದೇ ಮೋದಿ ಅವರ ಚುನಾವಣಾ ಪ್ರಚಾರದ ಪ್ರಮುಖ ವಾಗ್ದಾನವಾಗಿತ್ತು. ಆರ್ಥಿಕ ಉದಾರೀಕರಣವು ದೀರ್ಘಾವಧಿ ಪರಿಣಾಮ ಬೀರುವ ಆಡಳಿತಾತ್ಮಕ, ಪೊಲೀಸ್ ಮತ್ತು ನ್ಯಾಯಾಂಗ ಸುಧಾರಣಾ ಕ್ರಮಗಳನ್ನೂ ಒಳಗೊಂಡಿರಬೇಕಾಗಿದೆ.

ಸಾಂಸ್ಥಿಕ ಮಟ್ಟದಲ್ಲಿನ ಬದಲಾವಣೆಗಳು ವ್ಯವಸ್ಥಿತವಾಗಿರಬೇಕೆ ಹೊರತು, ಪ್ರಾಮಾಣಿಕ ವ್ಯಕ್ತಿಗಳ ಮೇಲಷ್ಟೇ ಅವಲಂಬಿಸಿರಬಾರದು. ಮೋದಿ ಅವರು ಪ್ರಾಮಾಣಿಕರಾಗಿರುವುದರ ಜತೆಗೆ ಸಮರ್ಥ ನಾಯಕತ್ವ ಗುಣವನ್ನೂ ಹೊಂದಿದ್ದಾರೆ. ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರ ನಿಗ್ರಹಿಸಲು ಅವರು ಲೋಹದ ಮುಷ್ಟಿಯನ್ನೂ ಬಳಸುತ್ತಾರೆ ಎನ್ನುವುದೂ ನಿಜ. ದಕ್ಷ ಆಡಳಿತವು ಕೆಲವೇ ಕೆಲ ಪ್ರಾಮಾಣಿಕ ವ್ಯಕ್ತಿಗಳನ್ನು ಅವಲಂಬಿಸಿರುವುದಿಲ್ಲ. ವ್ಯವಸ್ಥೆ, ಕಾಲ ಕಾಲಕ್ಕೆ ಪರಾಮರ್ಶೆ, ವಿಶ್ವಾಸಾರ್ಹತೆ ಮತ್ತು ದಂಡನೆ– ದಕ್ಷ ಆಡಳಿತವನ್ನು ನಿರ್ವಹಿಸುವ ಇತರ ಮಾನದಂಡಗಳಾಗಿವೆ.

ಮಹಾನ್ ನಾಯಕನೊಬ್ಬ ತನ್ನನ್ನೂ ಮೀರಿದ ಶಾಶ್ವತವಾದ ಸಂಸ್ಥೆಗಳನ್ನು ನಿರ್ಮಾಣ ಮಾಡಬಲ್ಲ. ಹೀಗಾಗಿ ಆತ ಕೈಗೊಂಡ ಸುಧಾರಣಾ ಕ್ರಮಗಳು ಗ್ರಾಮ ಮಟ್ಟದಲ್ಲಿನ ಜನಸಾಮಾನ್ಯರನ್ನೂ ತಲುಪಬಲ್ಲವು. ಉತ್ತಮ, ದಕ್ಷ ಆಡಳಿತ ನೀಡಲು ವ್ಯವಸ್ಥೆ ಕೂಡ ಯಾವುದೇ ಪ್ರಭಾವಕ್ಕೆ ಒಳಗಾಗದೇ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ.

ಬಡತನ ದೂರ ಮಾಡುವ ಉದ್ದೇಶದ ಭ್ರಷ್ಟಾಚಾರ ನಿಗ್ರಹಿಸಲು ಮೋದಿ, ಕೇಂದ್ರದಲ್ಲಿನ ಲೋಕಪಾಲ್ ಮತ್ತು ರಾಜ್ಯಮಟ್ಟದಲ್ಲಿನ ಲೋಕಾಯುಕ್ತಕ್ಕೆ ಇನ್ನಷ್ಟು ಜೀವ ತುಂಬಬೇಕಾಗುತ್ತದೆ. ಇತರ ದೇಶಗಳಲ್ಲಿ ಇರುವಂತೆ ಅಗತ್ಯ ಬಿದ್ದರೆ ಪ್ರಧಾನಿ ಕಚೇರಿಯನ್ನು ಲೋಕಪಾಲ್ ವ್ಯಾಪ್ತಿಯಿಂದ ಹೊರಗಿಡಲು ಮಸೂದೆಗೆ ಸೂಕ್ತ ತಿದ್ದುಪಡಿಯನ್ನೂ ತರಬಹುದು. ಇದಕ್ಕಾಗಿ ಇನ್ನಷ್ಟು ಸಮಯ ವ್ಯರ್ಥ ಮಾಡಬಾರದಷ್ಟೆ. ಸ್ವಸ್ಥ, ಸಂತಸಮಯ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಸೂಕ್ತ ವಾತಾವರಣ ಕಲ್ಪಿಸಲೂ ಮೋದಿ ಆದ್ಯತೆ ನೀಡಬೇಕಾಗಿದೆ. ಸ್ವಾತಂತ್ರ್ಯವೇ ಇಲ್ಲದ ಬರೀ ಸಂಪತ್ತು ಸೃಷ್ಟಿಯೇ ಮುಖ್ಯ ಉದ್ದೇಶವಾಗಿರುವ ಚೀನಾ ಅಭಿವೃದ್ಧಿ ಮಾದರಿ ನಮಗೆ ಯಾವತ್ತೂ ಆದರ್ಶವಾಗಿರಬಾರದು.

ಸಹನೆ, ಬಹು ಸಂಸ್ಕೃತಿ, ವೈವಿಧ್ಯತೆಯಲ್ಲಿ ಏಕತೆ, ಸೃಜನಶೀಲತೆಗೆ ಇರುವ ಸ್ವಾತಂತ್ರ್ಯದಲ್ಲಿಯೇ ಭಾರತದ ಶ್ರೇಷ್ಠತೆ ಅಡಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್ ಅವರ ಆಶಯದಂತೆ, ‘ಭಾರತವು ಬರೀ ಶಾಪಿಂಗ್ ಮಾಲ್ಗಳಿಂದ ತುಂಬಿರುವ ದುಬೈ ಅಥವಾ ಸಿಂಗಪುರ ಆಗಲು ಬಯಸಬಾರದು. ಅಲ್ಪಮತೀಯ ತಲೆಮಾರಿನಿಂದ ತುಂಬಿರುವ ದೇಶವೂ ಆಗಬಾರದು’.

ಇಲ್ಲಿ, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಫ್ರಾನ್ಸ್ನ ತತ್ವಜ್ಞಾನಿ ಆಲ್ಬರ್ಟ್ ಕಮು ಅವರು ಆಧುನಿಕ ಸಮಾಜವನ್ನು ಬಣ್ಣಿಸಿರುವುದನ್ನೂ ಉಲ್ಲೇಖಿಸಬಹುದು. ‘ಆಧುನಿಕ ಮಾನವನನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಬಹುದು. ಆತ ವ್ಯಭಿಚಾರಿಯಾಗಿರುತ್ತಾನೆ. ದಿನಪತ್ರಿಕೆಗಳನ್ನು ಓದುತ್ತಾನೆ ಅಥವಾ ಮನೆಗೆ ಬಂದು ಟೆಲಿವಿಷನ್ ಸುದ್ದಿಗಳನ್ನು ವೀಕ್ಷಿಸಿ ಮಲಗುತ್ತಾನೆ’ ಎಂದು ಕಮು ವ್ಯಾಖ್ಯಾನಿಸಿದ್ದಾನೆ. ಈ ಕಾರಣಕ್ಕೆ, ಮೋದಿ ಅವರು ಬರೀ ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ಬಗ್ಗೆ ಗಮನ ನೀಡಿದರಷ್ಟೇ ಸಾಲದು ತೀವ್ರತರವಾಗಿ ಬದುಕು ಸೃಷ್ಟಿಸುವ ಸ್ವಾತಂತ್ರ್ಯವೂ ಅಗತ್ಯ.

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.