ವಿಶಿಷ್ಟವಾಗಿ ಕಳೆದ ಮೂವತ್ತು ವಾರಗಳು
ವಿಜ್ಞಾನಿಯ ಹಾಗೆ ಮನಸ್ಸು ಅದೇನನ್ನೋ ಹುಡುಕುತ್ತಿರುವ ದಿನಗಳು. ಬುಟ್ಟಿ ಹೆಣೆಯುವವನು ಕಾಡಿನಲ್ಲಿ ಮೆತ್ತಗಿನ, ಬೇಕಾದ ಹಾಗೆ ಬಾಗುವ, ಬಾಳಿಕೆ ಬರುವ ಬಿದಿರಿಗಾಗಿ ಹುಡುಕಾಡುವಂತೆ ನಾನು ವಸ್ತುವಿಗಾಗಿ ಹುಡುಕಾಡುತ್ತಿದ್ದೆ. ಅದೃಷ್ಟವಂತ ಬೇಟೆಗಾರನ ಕಾಲ ಬುಡಕ್ಕೇ ಬಂದು ಸಿಕ್ಕಿಹಾಕಿಕೊಳ್ಳುವ ಬೇಟೆಯಂತೆ ಕೆಲವೊಮ್ಮೆ ಅಂಕಣಕ್ಕೆ ವಸ್ತುಗಳು ತಾವಾಗಿಯೇ ಎದುರಾಗುತ್ತಿದ್ದವು. ಪಳಗಿಸುವುದು ಮಾತ್ರವೇ ನನ್ನ ಕೆಲಸ ಅಂದುಕೊಂಡದ್ದೂ ಅನೇಕ ಸಲ ಸುಳ್ಳಾಗುತ್ತಿತ್ತು. ಮನಸ್ಸಿನಲ್ಲಿ ಸೊಗಸಾಗಿ ಅಚ್ಚೊತ್ತಿದಂತೆ ಮೂಡಿದ್ದು ಅಕ್ಷರಕ್ಕೆ ಬರುವ ಹೊತ್ತಿಗೆ ಪೇಲವವಾಗಿ ತೋರುತ್ತಿತ್ತು. ಮತ್ತೆ ಹೊಸ ವಸ್ತುವಿನ ಹುಡುಕಾಟ. ಅಂತರಂಗ ಅಟ್ಟಕ್ಕೆ ನೆನಪಿನ ಏಣಿ ಇಡುವ ಕೆಲಸ. ದಣಿವಾದಷ್ಟೂ ಹೆಚ್ಚು ಹೆಚ್ಚು ಸಂತೋಷವಾಗುವ ಕ್ರಿಯೆಗಳಲ್ಲಿ ನಟನೆ ಒಂದು ಅನ್ನುವುದು ಗೊತ್ತಿತ್ತು, ಬರವಣಿಗೆಯೂ ಅಂಥದ್ದೇ ಅನ್ನುವುದು ಗೊತ್ತಾದದ್ದು ಈ ವಾರಾಂಕಣದ ಸಹವಾಸಕ್ಕೆ ಬಿದ್ದ ನಂತರವೇ.

ನಾನು ಅಂಕಣಗಳ ಅಭಿಮಾನಿಯಂತೂ ಹೌದು. ಲಂಕೇಶರ, ತೇಜಸ್ವಿಯವರ, ಜಯಂತ ಕಾಯ್ಕಿಣಿಯ ಅಂಕಣಗಳನ್ನು ಒಂದೂ ಬಿಡದಂತೆ ಓದುತ್ತಿದ್ದೆ. ಬೇರೆ ಬೇರೆ ಭಾಷೆಗಳಲ್ಲಿ ಬರುತ್ತಿದ್ದ ಅಂಕಣಗಳತ್ತ ಕಣ್ಣಾಡಿಸುತ್ತಿದ್ದೆ. ಅವುಗಳನ್ನು ಓದುವಾಗಲೆಲ್ಲ ಕೆಲವೊಮ್ಮೆ ಅವುಗಳ ವಿಸ್ತಾರ, ಆಳ ಕಂಡು ಅಚ್ಚರಿಯಾಗುತ್ತಿತ್ತು. ತನ್ನ ಆತ್ಮವನ್ನೇ ತೇಯ್ದು ಬರೆದಂಥ ಎಷ್ಟೋ ಅಂಕಣಗಳನ್ನೂ ನಾನು ಓದಿದ್ದೇನೆ. ಅವುಗಳ ನೋವು ನನ್ನನ್ನೂ ತಟ್ಟುತ್ತಿತ್ತು.

ಬರೆಯುವುದು ಸುಲಭ ಅಲ್ಲವೇ ಅಲ್ಲ. ಒಂದು ಪುಟ ಬರೆಯಬೇಕಿದ್ದರೆ ಸಾವಿರ ಪುಟಗಳನ್ನು ಮನಸ್ಸಿನಲ್ಲೇ ಬರೆದು ಹರಿದು ಹಾಕಿರಬೇಕು. ಇಲ್ಲದೇ ಹೋದರೆ ಬರೆದದ್ದು ಟೊಳ್ಳಾಗುತ್ತದೆ. ಸುಳ್ಳಾಗುತ್ತದೆ. ನಾನಿದನ್ನು ಹೇಳಬೇಕು ಅಂತ ಅಂದುಕೊಳ್ಳುವ ಹೊತ್ತಿಗೆ, ಮನಸ್ಸಿನೊಳಗಿನ ಮಿತ್ರ ಧುತ್ತೆಂದು ಪ್ರತ್ಯಕ್ಷವಾಗುತ್ತಾನೆ. ನೀನಿದನ್ನು ಯಾಕೆ ಹೇಳಬೇಕು ಅಂತ ಕೇಳುತ್ತಾನೆ. ಯಾರೂ ಇದನ್ನೆಲ್ಲ ಹೇಳಿಯೇ ಇಲ್ಲವೇ ಎಂದು ಪ್ರಶ್ನಿಸುತ್ತಾನೆ. ಬೇರೆಯವರು ಹೇಳಿದ್ದರೆ ನೀನು ಮತ್ಯಾಕೆ ಹೇಳುತ್ತೀಯ ಅಂತ ಕೇಳುತ್ತಾನೆ. ನಿನಗೇ ವಿಶಿಷ್ಟವಾದದ್ದನ್ನು ಹೇಳು ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಡುತ್ತಾನೆ.

ನನಗೇ ವಿಶಿಷ್ಟವಾದದ್ದನ್ನು ಬರೆಯುವುದು ಸುಲಭ ಅಲ್ಲ. ಬರೆದ ನಂತರ ಅದಕ್ಕೆ ಬರುವ ಪ್ರತಿಕ್ರಿಯೆಗಳನ್ನು ಎದುರಿಸುವುದು ಮತ್ತೂ ಕಷ್ಟ. ಒಂದು ವಾರ ಮುಂಬಯಿಯ ಗೆಳೆತಿಯೊಬ್ಬಳ ಬಗ್ಗೆ ಬರೆದಿದ್ದೆ. ಆವತ್ತು ಮನೆಯಲ್ಲಿ ಮುನಿಸಿನ ಮಹಾನವಮಿ. ಅವಳ ನೆನಪು ಈಗೇಕೆ ಎಂಬ ಪ್ರಶ್ನೆ. ಕಾನ್ ಫೆಸ್ಟಿವಲ್ ಬಗ್ಗೆ ಬರೆದಾಗ ನಿರ್ದೇಶಕರೊಬ್ಬರು ಫೋನ್ ಮಾಡಿ, ಇನ್ನೂ ಗಾಢವಾಗಿ ಬರೆಯಬೇಕಿತ್ತು ಅಂತ ಸಲಹೆ ಕೊಟ್ಟಿದ್ದರು. ಮತ್ತೊಂದು ವಾರ ಸೀದಾ ಸಾದ ಓದುಗನ ನೇರಾನೇರ ಪ್ರಶ್ನೆ. ಈ ವಾರದ ಅಂಕಣದಲ್ಲಿ ನಿಮ್ಮ ಜೀವನದ ಖಾಸಗಿ ಕತೆಯೇ ಇಲ್ಲ. ನಿಮ್ಮ ಬದುಕಲ್ಲಿ ನಡೆದ ಘಟನೆಯ ಪ್ರಸ್ತಾಪವೇ ಇಲ್ಲ ಎಂಬ ಆಕ್ಷೇಪ.

ಇವನ್ನೆಲ್ಲ ತಳ್ಳಿಹಾಕುವಂತಿಲ್ಲ. ಓದುಗ ತನ್ನ ಸಮಯವನ್ನು ನಮಗೆ ಕೊಟ್ಟಿರುತ್ತಾನೆ. ಅವನ ಇಷ್ಟಕ್ಕೆ ತಕ್ಕಂತೆ ಬರೆಯಬೇಕು ಅಂತ ನನಗೆ ಯಾವತ್ತೂ ಅನ್ನಿಸಿಲ್ಲ. ಆದರೆ ಓದುಗರಿಗೆ ಈತ ಬರೆಯುತ್ತಿರುವುದು ಪ್ರಾಮಾಣಿಕವಾದ ಅನುಭವ ಅನ್ನಿಸುವಂತೆ ಬರೆದರೆ ಸಾಕು. ಹಾಗನ್ನಿಸಬೇಕಿದ್ದರೆ ಪ್ರಾಮಾಣಿಕವಾದ ಅನುಭವಗಳನ್ನೇ ಬರೆಯಬೇಕಲ್ಲ. ಅಂಥ ಅನುಭವಗಳನ್ನು ಅಗೆದು ತೆಗೆಯುವ ಗಣಿಗಾರಿಕೆ ಶುರುಮಾಡಿದೆ. ತೆರೆಯುತ್ತಾ ಹೋದಂತೆ ಪುಟಗಳು ಹಿಂದಕ್ಕೆ ಉರುಳತೊಡಗಿದವು. ಮನಸ್ಸು ಅಲ್ಲಲ್ಲಿ
ಧ್ಯಾನಸ್ಥವಾಯಿತು. ಯಾವುದೋ ಕತೆ ಹಾಳೆಗೆ ಮಗುಚಿಕೊಂಡಿತು. ನೆನಪಿನ ಚಿಲುಮೆ ಉಕ್ಕತೊಡಗಿತು.

ಇದೀಗ ಮೂವತ್ತು ಅಂಕಣಗಳನ್ನು ಒಟ್ಟುಗೂಡಿಸಿದ, ಅವರವರ ಭಾವಕ್ಕೆ ಎಂಬ ಪುಸ್ತಕ ಹೊರಬರುತ್ತಿದೆ. ಆ ಪುಸ್ತಕಕ್ಕೆ ಬರೆದ ಮುನ್ನುಡಿಯನ್ನು ಇಲ್ಲಿ ಕೊಟ್ಟಿದ್ದೇನೆ.

ಬರೆಯುತ್ತೇನೆ ಅಂದುಕೊಂಡಿರಲಿಲ್ಲ. ಬರೆಯಲು ಸಾಧ್ಯ ಎಂಬ ಭ್ರಮೆಯೂ ನನಗಿರಲಿಲ್ಲ. ಆದರೆ ‘ಅವರವರ ಭಾವಕ್ಕೆ’, ನನ್ನ ಎರಡನೆಯ ಪುಸ್ತಕವಾಗಿ ನಿಮ್ಮ ಮುಂದಿದೆ.

ಪುಸ್ತಕಕ್ಕೊಂದು ಮುನ್ನುಡಿ ಬೇಕು ಅಂದಾಗ ಯೋಚನೆಯಾಯಿತು. ವಾರಪೂರ್ತಿ ಯೋಚಿಸಿ ಒಂದು ಅಂಕಣ ಬರೆಯಬಹುದು. ವರ್ಷಪೂರ್ತಿ ಯೋಚಿಸಿದರೂ ಮೊದಲ ಮಾತು ಬರೆಯುವುದು ಕೊಂಚ ಕಷ್ಟವೇ. ಈ ಸಂಕಲನದಲ್ಲಿರುವ ಮೂವತ್ತು ಲೇಖನಗಳನ್ನು ಬರೆದ ಕ್ಷಣಗಳು ನನ್ನ ಕಣ್ಣಮುಂದೆ ಹಾದುಹೋದವು. ಆ ತೀವ್ರತೆ, ಉಲ್ಲಾಸ ಮತ್ತು ಒತ್ತಾಯಗಳನ್ನು ಮತ್ತೆ ಒಗ್ಗೂಡಿಸಿಕೊಂಡು ಮುನ್ನುಡಿಯ ಮೂರು ಮಾತುಗಳಲ್ಲಿ ಹೇಳುವುದಾದರೂ ಹೇಗೆ?ಇಲ್ಲಿಯ ಬರಹಗಳನ್ನು ನನ್ನನ್ನು ಸ್ಪಷ್ಟವಾಗಿಸುತ್ತಾ ಹೋದದ್ದನ್ನು ಹೇಗೆ ವಿವರಿಸಲಿ?ಕೇರಳದಲ್ಲಿ, ದೆಹಲಿಯ ವಿಮಾನ ನಿಲ್ದಾಣದಲ್ಲಿ, ಹೈದರಾಬಾದಿನ ನನ್ನ ತೋಟದಲ್ಲಿ, ಬೆಂಗಳೂರಿನ ಆಫೀಸಿನಲ್ಲಿ, ಚೆನ್ನೈಯ ಶೂಟಿಂಗ್ ತಾಣದಲ್ಲಿ- ಹೀಗೆ ಎಲ್ಲೆಂದರಲ್ಲಿ ಮಳೆಬಿದ್ದೊಡನೆ ನೆಲದಿಂದ ಮೊಳಕೆ ಒಡೆಯುವ ನೀಲಿ ಹೂವುಗಳ ಹಾಗೆ ಅರಳಿದ ಬರಹಗಳೆಲ್ಲ ಇಲ್ಲಿ ಒಟ್ಟಾಗಿವೆ.

ಮತ್ತೊಂದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ನನ್ನ ಅಂಕಣ ಒಂದು ದಿನ ದಿಢೀರನೆ ನಿಂತಿತು. ಅಲ್ಲಿಯ ತನಕ ನನ್ನ ಬದುಕಿನಲ್ಲಿ ಯಾವ ಮುನ್ಸೂಚನೆಯೂ ಇಲ್ಲದೇ ಸುರಿಯಲಾರಂಭಿಸಿದ ಹೊಸ ಮಳೆ ನಿಂತಂತಾಗಿ, ಏನೋ ಆಗಿಹೋಯಿತು ಅಂತ ಸುಮ್ಮನಾದೆ. ಆದರೆ ಹಟ ಬಿಡದ ತ್ರಿವಿಕ್ರಮನಂತೆ ಗೆಳೆಯ ಜೋಗಿ ‘ಬರೆಯಲೇಬೇಕು’ ಎಂದು ಬೆನ್ನು ಹತ್ತಿದರು. ‘ಪ್ರಜಾವಾಣಿ’ಯ ಶಾಂತಕುಮಾರ್ ಅವರಿಗೆ ನನ್ನನ್ನು ಪರಿಚಯಿಸಿದರು. ಅವರು ನಮ್ಮ ಪತ್ರಿಕೆಗೆ ತಕ್ಷಣದಿಂದಲೇ ಬರೆಯಿರಿ ಎಂದರು. ಹೀಗೆ ಶುರುವಾಯಿತು ಪಯಣದ ಎರಡನೆಯ ಪಥಸಂಚಲನ. ಒಂದು ಇನ್ನೊಂದಕ್ಕೆ, ಇನ್ನೊಂದು ಮತ್ತೊಂದಕ್ಕೆ ದಾರಿ ಮಾಡಿಕೊಡುವುದು ಅಂದರೆ ಇದೇ ಅಲ್ಲವೇ?

ಬರೆಯುವುದು ಎಂದರೆ ಹೆಚ್ಚು ಶಿಸ್ತುಬದ್ಧನಾಗುವುದು. ಆಗೀಗ ಹೊಳೆಯುತ್ತಿದ್ದ ಸಂಗತಿಗಳನ್ನೆಲ್ಲ ಮನಸ್ಸಿನಲ್ಲೇ ಟಿಪ್ಪಣಿ ಮಾಡಿಟ್ಟುಕೊಳ್ಳುವುದು. ಅದನ್ನು ವಿಸ್ತರಿಸಲು ಯತ್ನಿಸುವುದು, ಎಂದೋ ಕೇಳಿದ ಕತೆಗಳನ್ನು ನೆನಪಿಸಿಕೊಳ್ಳುವುದು, ಆ ಕತೆಯನ್ನು ವರ್ತಮಾನಕ್ಕೆ ತಂದು ನಿಲ್ಲಿಸಿ ಅದು ಹೊಳೆಸುವ ಹೊಸ ಅರ್ಥಗಳನ್ನು ಗ್ರಹಿಸುವುದು- ಇವೆಲ್ಲ ನಿಧಾನವಾಗಿ ನನ್ನನ್ನು ಹೊಸ ಮನುಷ್ಯನನ್ನಾಗಿ ಮಾಡಿದವು. ನನ್ನೊಳಗೆ ಹೊಸ ಹುಟ್ಟಿಗೆ ಕಾರಣವಾಯಿತು. ಇದು ಏಕಾಂತದಲ್ಲಿ ನಡೆಯುವ ಕೆಲಸವೇ ಆದರೂ ಪ್ರೀತಿಯ ಓದುಗರಾದ ನಿಮ್ಮ ಸ್ಪಂದನವಿಲ್ಲದೇ ಹೋದರೆ ಇದಕ್ಕೆಲ್ಲ ಅರ್ಥವಿಲ್ಲ.

ನೀವು ನನ್ನ ಬರಹಗಳನ್ನು ಪ್ರೀತಿಸುತ್ತಿದ್ದೀರಿ ಎಂಬುದಕ್ಕೆ ಸಾಕ್ಷಿಯಾಗಿ ನನ್ನ ಮೊದಲ ಅಂಕಣ ಬರಹಗಳ ಸಂಕಲನ ಇರುವುದೆಲ್ಲ ಬಿಟ್ಟು... ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ನಾಲ್ಕು ಮುದ್ರಣ ಕಂಡಿತು. ಈಗಲೂ ಹೋದಲ್ಲೆಲ್ಲ ಒಬ್ಬರೋ ಇಬ್ಬರೋ ಆ ಪುಸ್ತಕದ ಕುರಿತು ಹೇಳುತ್ತಾ ನನ್ನ ಉತ್ಸಾಹ ಹೆಚ್ಚಿಸುತ್ತಿರುತ್ತಾರೆ. ಓದಿ ಏನೂ ಹೇಳದೇ ಉಳಿದವರು ಇನ್ನಷ್ಟು ಮಂದಿ ಇದ್ದೀರಿ ಅನ್ನುವುದೂ ನನಗೆ ಗೊತ್ತು. ಓದು- ಬರಹದ ವಿಚಾರದಲ್ಲಿ ಕೆ.ಎಸ್. ನರಸಿಂಹಸ್ವಾಮಿಗಳು ಹೇಳಿದ ಹಾಗೆ, ‘ಹೊಳೆದದ್ದು ತಾರೆ, ಉಳಿದದ್ದು ಆಕಾಶ’. ನನ್ನ ಪಾಲಿನ ತಾರೆಗಳಾದ ನಿಮ್ಮೆಲ್ಲರಿಗೂ ಕೃತಜ್ಞತೆ. ನನ್ನ ಬರಹವನ್ನು ಮತ್ತೊಂದು ದಿಗಂತಕ್ಕೆ ಒಯ್ಯುವುದಕ್ಕೆ ನೆರವಾದ ‘ಪ್ರಜಾವಾಣಿ’ ಬಳಗದ ಎಲ್ಲರಿಗೂ ವಂದನೆ. ನನ್ನ ಪಯಣದಲ್ಲಿ ನಿರಂತರ ಜೊತೆಯಾಗಿರುವ ಜೋಗಿಗೂ ಈ ಅಂಕಣಗಳ ಹನಿಯನ್ನು ಒಂದೆಡೆ ಕಲೆಹಾಕಿ ಕಣಜವಾಗಿಸಿ ನಿಮ್ಮ ಮುಂದಿಡುತ್ತಿರುವ ಸಾವಣ್ಣ ಪ್ರಕಾಶನದ ಜಮೀಲರಿಗೂ ಪ್ರೀತಿ.

ಈ ಅಂಕಣಗಳು ಗೆಳೆಯ ಕಾಯ್ಕಿಣಿ ಹೇಳುವಂತೆ ನನ್ನ ಬೊಗಸೆಗೆ ಬಿದ್ದ ಮಳೆ. ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಈ ಮುನ್ನುಡಿ ಬರೆದಾದ ನಂತರ ಮತ್ತೆ ಯೋಚಿಸುತ್ತಾ ಕೂತೆ. ಈ ಅಂಕಣಗಳು ನನಗೆ ಎಷ್ಟೋ ಮಂದಿಯ ಪ್ರೀತಿಯನ್ನು ಕೊಟ್ಟಿವೆ. ಕೆಲವರ ದ್ವೇಷಕ್ಕೂ ಕಾರಣವಾಗಿವೆ. ಕೆಲವರು ನನ್ನನ್ನು ಮೊದಲಿಗಿಂತ ಹೆಚ್ಚು ಗೌರವದಿಂದ ಕಾಣತೊಡಗಿದ್ದಾರೆ. ಒಳಗೊಳಗೇ ಗೇಲಿ ಮಾಡುವವರೂ ಇರಬಹುದು. ಯಾವತ್ತೂ ಗುಣಾತ್ಮಕ ಅಲ್ಲದ ಟೀಕೆಗಳನ್ನು ನಾನು ಹತ್ತಿರಕ್ಕೆ ಬಿಟ್ಟುಕೊಂಡವನಲ್ಲವೇ ಅಲ್ಲ. ಅವುಗಳಿಂದ ಯಾವ ಉಪಯೋಗವೂ ಇಲ್ಲ.

ಪ್ರತಿಯೊಬ್ಬ ತಂದೆಯ ಒಳಗೂ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಿರುತ್ತಾನೆ ಎಂದು ಕೇಳಿದ್ದೆ. ಪ್ರತಿಯೊಬ್ಬ ಅಂಕಣಕಾರನ ಒಳಗೂ ಒಬ್ಬ ಎಚ್ಚರಿಸುವ ವ್ಯಕ್ತಿ ಆತನಿಗೇ ಗೊತ್ತಿಲ್ಲದಂತೆ ಅವಿತುಕುಳಿತಿರುತ್ತಾನೆ. ಒಂದೊಂದು ಅಕ್ಷರ ಬರೆಯುವ ಹೊತ್ತಿಗೂ ಅಂತರಂಗ ವಿಮರ್ಶಕ ‘ನೀನಿದನ್ನು ಹೇಳುತ್ತಿರುವುದು ನಿನ್ನ ಜೊತೆಗಾರರಿಗೆ, ಸಮಕಾಲೀನರಿಗೆ, ತರುಣರಿಗೆ. ಎಚ್ಚರದಿಂದ ಮಾತಾಡು. ಭ್ರಮೆಗಳನ್ನು ಬಿತ್ತಬೇಡ, ಸುಳ್ಳುಗಳಿಂದ ಅಂಕಣವನ್ನು ಅಲಂಕರಿಸಬೇಡ’ಎಂದು ಹೇಳುತ್ತಿರುತ್ತಾನೆ.ಅವನ ಮಾತುಗಳನ್ನು ನಾನು ಚಾಚೂ ತಪ್ಪದೇ ಪಾಲಿಸಿದ್ದೇನೆ. ನನ್ನ ವೈಯಕ್ತಿಕ ನಿಲುವುಗಳನ್ನು ನಾನಿಲ್ಲಿ ತುಂಬುವುದಕ್ಕೆ ಹೋಗಿಲ್ಲ. ಅನುಭವವನ್ನಷ್ಟೇ ಹೇಳುತ್ತಾ, ಅದರಿಂದ ಯಾರು ಏನನ್ನು ಬೇಕಿದ್ದರೂ ಕಲಿಯಬಹುದು ಎಂಬ ಮುಕ್ತತೆಯನ್ನು ಕೊಟ್ಟಿದ್ದೇನೆ.

ಈ ಪಯಣ ಹೀಗೆಯೇ ಮುಂದುವರಿಯಲಿದೆ. ಐವತ್ತು ಪ್ಲಸ್ ವರುಷಗಳ ಬದುಕು ಕೊಟ್ಟ ಅಚ್ಚರಿ, ಕಂಡ ತಿರುವು, ತಿದ್ದಿ ಹೇಳಿದ ಪಾಠ, ಎದುರಾದ ಆತಂಕ, ಬದಲಾದ ನಿಲುವು- ಇವನ್ನೆಲ್ಲ ಹೇಳಬೇಕಾಗಿದೆ. ಹುಟ್ಟುವಾಗ ಬೆರಳಷ್ಟಿದ್ದ ನದಿ ಹರಿಯುತ್ತಾ ಬಯಲಂತೆ ಆಗುವ ಹಾಗೆ, ನನ್ನ ಬರಹವೂ ಕಿರುತೊರೆಗಳನ್ನೂ ಝರಿಗಳನ್ನೂ ಉಪನದಿಗಳನ್ನೂ ಒಳಗೊಳ್ಳುತ್ತಾ ವಿಸ್ತಾರವಾಗುತ್ತಿದೆ.

ಇದಕ್ಕೆ ಒಡ್ಡಿಕೊಳ್ಳುವ ಸವಾಲಿನ ಸುಖವೇ ಬೇರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.