ರಾಜಧಾನಿಯಲ್ಲಿ ಇಂದು ಸಂಭ್ರಮದ ಹಬ್ಬ. ಕನ್ನಡದ ತೇರನ್ನು ಎಳೆಯಲು ಎಲ್ಲರೂ ಸಜ್ಜಾಗಿದ್ದಾರೆ. ಚಿತ್ರರಂಗದವರೂ ತೇರು ಎಳೆಯಲು ಸಿದ್ಧರಾಗಿ ಶುಕ್ರವಾರ ಚಿತ್ರ ಚಟುವಟಿಕೆಗಳಿಗೆ ರಜೆ ಘೋಷಿಸಿ ಸಮ್ಮೇಳನ ಸಭಾಂಗಣದಲ್ಲಿ ಹಾಜರಾಗಲು ಫರ್ಮಾನು ಹೊರಡಿಸಿದ್ದಾರೆ.

ಎಲ್ಲಾ ಸರಿ, ಈಗ ನಾವು ಕೇಳಬೇಕಾದ ಪ್ರಶ್ನೆಯೊಂದಿದೆ. ಕನ್ನಡ ಸಾಹಿತ್ಯ ಪರಿಷತ್‌ಗೂ ಚಲನಚಿತ್ರರಂಗಕ್ಕೂ ಸಂಬಂಧವಿದೆಯೇ? ಈ ಪ್ರಶ್ನೆಯನ್ನು ಸಾಹಿತ್ಯ ಪರಿಷತ್‌ನ ಇಂದಿನ ಪದಾಧಿಕಾರಿಗಳು ಪ್ರಶ್ನಿಸಿಕೊಳ್ಳಬೇಕು. ಚಿತ್ರರಂಗದ ಏಳಿಗೆ ಬಗ್ಗೆ, ಇಂದಿನ ಚಲನಚಿತ್ರಗಳಲ್ಲಿ ಬಳಕೆ ಆಗುತ್ತಿರುವ ಭಾಷೆಯ ಬಗ್ಗೆ, ಚಲನಚಿತ್ರ ಸಾಹಿತ್ಯದ ಬಗ್ಗೆ ಸಾಹಿತ್ಯ ಪರಿಷತ್ ಎಂದಾದರೂ ಒಂದು ನಿಮಿಷವಾದರೂ ಚಿಂತಿಸಿದೆಯೇ? ದೃಶ್ಯಮಾಧ್ಯಮವೂ ಪೂರಕ ಸಾಹಿತ್ಯವಾಗಿ ಪ್ರವಹಿಸುತ್ತಿರುವ ಕಾಣ್ಕೆಯನ್ನು ಗುರುತಿಸುವ ಛಾತಿಯೇ ಸಾಹಿತ್ಯ ಪರಿಷತ್‌ಗೆ ಇಲ್ಲವಾಯಿತೇ? ಸಾಹಿತ್ಯ ಸಮ್ಮೇಳನ ಎಂದರೆ, ಚರಿತ್ರೆಯ ಬಗ್ಗೆ ಒಂದು ವಿಚಾರಗೋಷ್ಠಿ, ಕವಿಗೋಷ್ಠಿ, ದೊಡ್ಡ ಕವಿಗಳದು ಒಂದು, ಚಿಕ್ಕ ಕವಿಗಳದೊಂದು, ತವಕ, ತಲ್ಲಣಗಳು ಎಂಬ ಹೆಸರಿನಲ್ಲಿ ಮತ್ತೊಂದು ಗೋಷ್ಠಿ... ಹೀಗೆ ಸಂಪ್ರದಾಯ ಬದ್ಧ ಸಮಾವೇಶ ಮಾಡಿ ಕೈ ತೊಳೆದುಕೊಳ್ಳುವುದೇ ಸಮ್ಮೇಳನಗಳ ಗುರಿಯಾಗಿದೆ.

ಚಲನಚಿತ್ರ ಕ್ಷೇತ್ರಕ್ಕೂ, ಸಾಹಿತ್ಯ ಪರಿಷತ್‌ಗೂ ದೊಡ್ಡದೊಂದು ಕಂದಕ ನಿರ್ಮಾಣವಾಗಿ ಬಹಳ ವರ್ಷಗಳಾಯಿತು. ಸಿನಿಮಾ ಸಾಹಿತಿಗಳನ್ನಾಗಲಿ, ನಿರ್ದೇಶಕರನ್ನಾಗಲಿ ಸಾಹಿತ್ಯ ಪರಿಷತ್ ಎಂದೂ ಒಳಗಡೆ ಬಿಟ್ಟುಕೊಂಡಿಲ್ಲ. ಸಿನಿಮಾದಲ್ಲಿ ಆಗುತ್ತಿರುವ ಬದಲಾವಣೆಗೆ, ಅಲ್ಲಿಂದ ಜನಸಾಮಾನ್ಯರನ್ನು ಮುಟ್ಟುತ್ತಿರುವ ಜನಪದದ ಬಗ್ಗೆಯಾಗಲಿ ಸಾಹಿತ್ಯ ಕ್ಷೇತ್ರದಿಂದ ಗಂಭೀರ ಅಧ್ಯಯನವೇ ಆಗುತ್ತಿಲ್ಲ. ಕಲೆ, ಸಂಗೀತ, ಸಿನಿಮಾ, ರಂಗಭೂಮಿ... ಹೀಗೆ ಎಲ್ಲ ಪ್ರಕಾರವೂ ಸಮಗ್ರ ಕನ್ನಡದ ತೆಕ್ಕೆಗೇ ಬರುತ್ತದೆ ಎನ್ನುವ ಮೂಲಭೂತ ಅಂಶವನ್ನು ಸಾಹಿತ್ಯ ಪರಿಷತ್ ಮರೆತಿರುವುದರಿಂದ ಕನ್ನಡ ಸಿನಿಮಾ ಇಂದು ಏಕಾಂಗಿಯಾಗಿದೆ.

ಈ ಕಾರಣದಿಂದಲೇ ಕನ್ನಡ ಸಿನಿಮಾಗೆ ಬರುವ ಎಲ್ಲ ಸಮಸ್ಯೆಗಳನ್ನೂ ಸಿನಿಮಾರಂಗದವರೇ ಬಗೆಹರಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಹಿಂದೆ ಸಮಕಾಲೀನ ಪರಿಸ್ಥಿತಿಗೆ, ಕನ್ನಡದ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ ವೇದಿಕೆಯಾಗಿತ್ತು. ಹೀಗಾಗಿ ಸಮಸ್ತ ಕನ್ನಡಿಗರಿಗೆ ಸಮ್ಮೇಳನ ಎನ್ನುವುದು ಮನೆಯ ಹಬ್ಬವೇ ಆಗುತ್ತಿತ್ತು. ಅಂತಹ ವಾತಾವರಣ ಬರಬರುತ್ತಾ ಸಂಕುಚಿತವಾಗಲಾರಂಭಿಸಿತು. 1944ನೇ ಡಿಸೆಂಬರ್‌ನಲ್ಲಿ ರಬಕವಿಯಲ್ಲಿ ಸ.ಸ.ಬಸವನಾಳ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಮೊದಲನೆಯ ನಿರ್ಣಯ ಹೀಗಿದೆ: ಭಾರತ ಸರ್ಕಾರದಿಂದ ನಿರ್ಮಿಸಲ್ಪಡುತ್ತಿರುವ ಪ್ರಚಾರ ಚಿತ್ರಗಳಲ್ಲಿ ಪ್ರಾಂತೀಯ ಭಾಷೆಗಳಿಗೆ ಪ್ರಾಧಾನ್ಯವಿದ್ದರೂ ಕನ್ನಡಕ್ಕೆ ಯಾವ ಸ್ಥಾನವನ್ನೂ ಕೊಡದಿರುವುದು ಶೋಚನೀಯವಾಗಿದೆ. ಇನ್ನುಮುಂದೆ ಕನ್ನಡಕ್ಕೆ ಯೋಗ್ಯ ಸ್ಥಾನ ಕೊಡಬೇಕು. ಚಿತ್ರಗಳನ್ನು ನಿರ್ಮಾಣ ಮಾಡಲು ಮುಂಬರುವ ಕನ್ನಡಿಗರಿಗೆ ಸಾಕಷ್ಟು ಲೈಸೆನ್ಸ್‌ಗಳನ್ನು ಕೊಟ್ಟು ಪ್ರೋತ್ಸಾಹಿಸಬೇಕೆಂದೂ ಈ ಸಮ್ಮೇಳನ ಹಿಂದೂಸ್ತಾನ ಸರ್ಕಾರವನ್ನು ಕೇಳಿಕೊಳ್ಳುತ್ತದೆ.

ಎರಡನೇ ನಿರ್ಣಯ: ಇಂಡಿಯಾ ಸರ್ಕಾರ ಕನ್ನಡವನ್ನು ದಕ್ಷಿಣ ಭಾರತದ ಭಾಗಕ್ಕೆ ಸೇರಿಸಿದ್ದರೂ ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಕಚ್ಚಾ ಫಿಲಂಗಳನ್ನು ಒದಗಿಸದಿರುವುದರಿಂದ ಕನ್ನಡನಾಡಿನ ಉದ್ಯಮಕ್ಕೆ ಧಕ್ಕೆ ತಗುಲಿದೆ. ಇಂಡಿಯಾ ಸರ್ಕಾರ ತಮ್ಮ ನಿರ್ಧಾರವನ್ನು ಪುನರಾವಲೋಚಿಸಿ, ಕರ್ನಾಟಕವನ್ನು ತಮ್ಮ ಫಿಲಂ ಹಂಚಿಕೆಯಲ್ಲಿ ಒಂದು ಪ್ರತ್ಯೇಕ ಪ್ರಾಂತವೆಂದು ಪರಿಗಣಿಸಿ ಮಿಕ್ಕ ಭಾಷೆಗಳಿಗೆ ಕೊಟ್ಟಿರುವಷ್ಟೇ ಕಚ್ಚಾ ಫಿಲಂ ಅನ್ನು ಕೊಡಬೇಕೆಂದು ಈ ಸಮ್ಮೇಳನ ಪ್ರಾರ್ಥಿಸುತ್ತದೆ.

ಕನ್ನಡ ಸಾಹಿತ್ಯ ಸಮ್ಮೇಳನ ಈ ರೀತಿಯ ನಿರ್ಣಯವನ್ನು ತೆಗೆದುಕೊಂಡ ಕಾಲವನ್ನು ಗಮನಿಸಿ, 1944ರ ವೇಳೆಗೆ ವಾಕ್ಚಿತ್ರಯುಗ ಆರಂಭವಾಗಿ ಹತ್ತು ವರ್ಷಗಳಷ್ಟೇ ಆಗಿತ್ತು. ಕನ್ನಡ ಸಿನಿಮಾ ನಿರ್ಮಾಣಕ್ಕೆ ಹಣ ಒದಗಿಸುವವರೇ ಇರಲಿಲ್ಲ. ರಂಗಭೂಮಿಯ ಸಾಮ್ರಾಟರು, ವ್ಯಾಪಾರಿಗಳು ಸಿನಿಮಾ ನಿರ್ಮಾಪಕರಾಗಿದ್ದರು. ಅದುವರೆಗೆ ಬಿಡುಗಡೆಯಾದದ್ದು ಕೇವಲ 15 ಕನ್ನಡ ಚಿತ್ರಗಳು ಮಾತ್ರ.

ಮಹಾಯುದ್ಧದ ಸಮಯ. ಕಚ್ಚಾಫಿಲಂ ರೇಷನಿಂಗ್ ಆಗಿತ್ತು. ಸ್ಟುಡಿಯೋ ಹೊಂದಿರುವವರು, ಅತಿ ಹೆಚ್ಚು ಸಿನಿಮಾ ನಿರ್ಮಿಸುತ್ತಿದ್ದವರಿಗೆ ಮಾತ್ರ ಕೇಂದ್ರ ಸರ್ಕಾರ ಕಚ್ಚಾಫಿಲಂ ನೀಡುತ್ತಿತ್ತು. ತಮಿಳುನಾಡು ಆಗ ಚಲನಚಿತ್ರ ಉದ್ಯಮದ ಕೇಂದ್ರವಾಗಿದ್ದುದರಿಂದ ಕೇಂದ್ರಸರ್ಕಾರ ಮದ್ರಾಸಿಗೇ ಹೆಚ್ಚು ಆದ್ಯತೆ ನೀಡುತ್ತಿತ್ತು. ಕನ್ನಡ ಚಲನಚಿತ್ರ ತೆಗೆಯುವ ವ್ಯಾಮೋಹ ಹೊಂದಿರುವ ಯಾರಿಗೆ ಕಚ್ಚಾ ಫಿಲಂ ದೊರಕುತ್ತದೋ ಅವರನ್ನು ಅಂಗಲಾಚುವ ಸ್ಥಿತಿ ಇತ್ತು. ಕಚ್ಚಾ ಫಿಲಂ ಅಭಾವದಿಂದ ಒಂದೂ ಚಲನಚಿತ್ರ ತಯಾರಾಗದ ಉದಾಹರಣೆಯೂ ಇದೆ. 1945ರಿಂದ 50ರವರೆಗೂ ಕನ್ನಡ ಚಲನಚಿತ್ರ ಚಟುವಟಿಕೆಯೇ ಸ್ಥಗಿತವಾಗಿತ್ತು. ಇಂತಹ ಸಮಯದಲ್ಲಿ ಸಾಹಿತಿಗಳು ಚಿಂತಾಕ್ರಾಂತರಾದರು. ಕನ್ನಡ ಸಂಸ್ಕೃತಿಗೆ ಪೂರಕವಾಗುವ ಇಂತಹ ದೃಶ್ಯ ಮಾಧ್ಯಮದ ಅಗತ್ಯವನ್ನು ಮನಗಂಡರು. ಕೇಂದ್ರ ಸರ್ಕಾರದ ನೀತಿಯನ್ನು ಅಂದರೆ, ಅಂದಿನ ಬ್ರಿಟಿಷ್ ಸರ್ಕಾರದ ಮಲತಾಯಿ ಧೋರಣೆಯನ್ನು ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತಾಪಿಸಿ ಕೇಂದ್ರಕ್ಕೆ ಚಲನ ಚಿತ್ರರಂಗವನ್ನು ಉಳಿಸಬೇಕೆಂಬ ಕಳಕಳಿಯ ಎರಡು ನಿರ್ಣಯಗಳನ್ನು ಕಳುಹಿಸಿಕೊಟ್ಟರು. ಕನ್ನಡದ ಸಾಹಿತಿಗಳು ಈ ಮೂಲಕ ಚಿತ್ರರಂಗಕ್ಕೆ ಬೆಂಬಲವಾಗಿ ನಿಂತರು.

ಚಲನಚಿತ್ರ ಮಾಧ್ಯಮದ ಉಳಿವಿಗೆ ಅದರ ಸಂಕಟಗಳಿಗೆ ಸಾಹಿತಿಗಳು ಸ್ಪಂದಿಸಿದ ಮೊದಲನೆಯ ಉದಾಹರಣೆ ಇದು. ಅಂದರೆ ಆರಂಭದ ಕಾಲದಲ್ಲಿ ಸಾಹಿತಿಗಳೂ ಚಲನಚಿತ್ರ ಕ್ಷೇತ್ರವೂ ಕೈಹಿಡಿದು ಮುನ್ನಡೆದಿದ್ದವು,

ಮತ್ತೆ ಸಾಹಿತಿಗಳು ಕನ್ನಡ ಚಲನಚಿತ್ರವನ್ನು ಉಳಿಸುವ ಕಂಕಣತೊಟ್ಟು ಬೀದಿಗಿಳಿದ ಉದಾಹರಣೆ 1960ರಲ್ಲಿ ನಡೆದಿದೆ. ಮಣಿಪಾಲದಲ್ಲಿ 1960ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅ.ನ.ಕೃ. ಅವರು ಕನ್ನಡ ಚಿತ್ರರಂಗವನ್ನು, ಕನ್ನಡತನವನ್ನು ಉಳಿಸಲು ಕನ್ನಡಿಗರು ಬೀದಿಗಿಳಿದು ಹೋರಾಟ ನಡೆಸಬೇಕೆಂದು ಸಾಹಿತ್ಯ ಸಮ್ಮೇಳನದ ವೇದಿಕೆಯಿಂದಲೇ ಕರೆ ನೀಡುತ್ತಾರೆ. ಪರಭಾಷಾ ನಟಿಯರಿಗೆ ಸಂಭಾಷಣೆ ಹೇಳಿಕೊಟ್ಟು, ಅವರ ವರ್ತನೆಗಳನ್ನು ಸಹಿಸಲಾಗದೆ ಚಿತ್ರಸಾಹಿತ್ಯ ರಚನೆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬೇಸರದಿಂದ ನಿರ್ಗಮಿಸಿದ್ದ ಅ.ನ.ಕೃ. ಅವರಿಗೆ ಕನ್ನಡ ಚಿತ್ರರಂಗ ಸಂಪೂರ್ಣ ಕನ್ನಡಿಗರ ತೆಕ್ಕೆಗೆ ಬರಬೇಕೆಂಬ ಹಟವಿತ್ತು. ‘ವಾಕ್ಚಿತ್ರ ದಿಕ್ಕು ತಪ್ಪಿದೆ. ಕಲಾವಿದರು ಬಂಡವಾಳಗಾರರ ಕೈಗೊಂಬೆಗಳಾಗಿದ್ದಾರೆ. ಸಾಹಿತಿ ಅವರ ಅಭಿರುಚಿಗೆ ಅಕ್ಷರ ಪೋಣಿಸುವ ದರ್ಜಿಯಾದರೆ, ಸಂಗೀತಗಾರ ಅವರ ಪೋಷಣೆಗೆ ಸಿಲುಕಿ ತನ್ನ ಕ್ರಿಯಾತ್ಮಕ ಕಲೆಗೆ ತಿಲತರ್ಪಣವನ್ನರ್ಪಿಸಿದ’ ಎಂದು ಹೇಳುತ್ತಲೇ ಇದ್ದ ಅ.ನ.ಕೃ. ಸಾಹಿತ್ಯ ಸಮ್ಮೇಳನ ವೇದಿಕೆಯಿಂದ ಕರೆ ನೀಡಿದ ನಂತರ ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳ ವಿರುದ್ಧ ಜನರ ಆಕ್ರೋಶ ಭುಗಿಲೆದ್ದು ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ನಡೆಯಿತು.

ಅರವತ್ತರ ದಶಕದಲ್ಲಿ ಡಬ್ಬಿಂಗ್ ಚಿತ್ರಗಳು ಕನ್ನಡಕ್ಕೆ ಕಂಟಕಪ್ರಾಯವಾಗಿದ್ದವು. ಅದ್ದೂರಿಯಾಗಿ ಚಿತ್ರಿತವಾಗುತ್ತಿದ್ದ ತೆಲುಗು, ತಮಿಳು ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬರುತ್ತಿದ್ದವು. ಕನ್ನಡಿಗರೇ ಅದರ ಸಾಹಿತ್ಯ ರಚನೆ ಮಾಡುತ್ತಿದ್ದರು. ಬಹಳ ಕಷ್ಟಪಟ್ಟು ಅತಿ ಕಡಿಮೆ ವೆಚ್ಚದಲ್ಲಿ ತಯಾರಾಗುತ್ತಿದ್ದ ಕನ್ನಡ ಚಿತ್ರಗಳನ್ನು ನೋಡುವವರೇ ಇರಲಿಲ್ಲ. ಹೀಗಾಗಿ ಅಂದು ಡಬ್ಬಿಂಗ್ ವಿರೋಧಿ ಚಳವಳಿ ವ್ಯಾಪಕವಾಯಿತು. ಸತತ ನಾಲ್ಕು ವರ್ಷಗಳ ಪ್ರತಿರೋಧದ ನಂತರ ಡಬ್ಬಿಂಗ್ ಕಾಲ್ಕಿತ್ತಿತು. ಕನ್ನಡ ಚಿತ್ರಗಳು ಹೆಚ್ಚು ಹೆಚ್ಚು ತಯಾರಾಗಲು ಈ ಚಳವಳಿ ನೆರವಾಯಿತು. ಇಂತಹ ಒಂದು ಚಳವಳಿಗೆ ಪ್ರೇರಕಶಕ್ತಿಯಾದದ್ದು ಕನ್ನಡ ಸಾಹಿತಿಗಳು. ಕನ್ನಡ ಸಾಹಿತ್ಯ ಪರಿಷತ್ ಅಂತಹ ವೇದಿಕೆಯೊಂದನ್ನು ಕಲ್ಪಿಸಿತು.

ಆನಂತರದ ದಿನಗಳಲ್ಲಿ ನಡೆದ ಎಲ್ಲ ಸಮ್ಮೇಳನಗಳೂ ಸಿನಿಮಾರಂಗವನ್ನು ಮರೆತೇ ಬಿಟ್ಟವು. ಯಾವ ಅಧ್ಯಕ್ಷರೂ ಚಲನಚಿತ್ರರಂಗದ ಸಮಸ್ಯೆಗಳನ್ನು ಪ್ರಸ್ತಾಪಿಸಲೇ ಇಲ್ಲ. ಅದರ ಬದಲು ಕನ್ನಡ ಭಾಷೆಯನ್ನು ಸಿನಿಮಾದವರು ಹಾಳು ಮಾಡುತ್ತಿದ್ದಾರೆ, ಕನ್ನಡ ಸಂಸ್ಕೃತಿಯನ್ನು ಸಿನಿಮಾದವರು ಹಾಳು ಮಾಡುತ್ತಿದ್ದಾರೆ ಎಂದೆಲ್ಲಾ ಸಿದ್ಧ ಉತ್ತರಗಳನ್ನು ಎಲ್ಲರೂ ಸದಾಕಾಲ ಹೇಳುತ್ತಲೇ ಬಂದರು.

ಕನ್ನಡ ಚಿತ್ರಗಳಿಗೆ ಮೆಜೆಸ್ಟಿಕ್‌ನಲ್ಲಿ ಚಿತ್ರಮಂದಿರ ಸಿಗಲಿಲ್ಲ. ಚಿತ್ರರಂಗದವರು ರಾಜ್‌ಕುಮಾರ್ ಅವರ ನೇತೃತ್ವದಲ್ಲಿ ಹೋರಾಡಿ ಅದನ್ನು ದಕ್ಕಿಸಿಕೊಂಡರು. ನವೆಂಬರ್ ಪೂರಾ ಕನ್ನಡಚಿತ್ರ ಪ್ರದರ್ಶನ ಮಾಡಬೇಕೆಂದು ಹೋರಾಡಿ ಗೆದ್ದರು. ಕಿರುತೆರೆಯಲ್ಲಿ ಡಬ್ಬಿಂಗ್ ಇಣುಕಿ ಹಾಕಿದಾಗ ಮತ್ತೆ ರಾಜ್‌ಕುಮಾರ್ ಅವರಿಂದ ಚಳವಳಿಯ ಬೆದರಿಕೆ ಹಾಕಿಸಿ ಅದನ್ನು ಸ್ಥಗಿತಗೊಳಿಸಿದರು. ಕನ್ನಡ ಚಿತ್ರರಂಗ ಕನ್ನಡದ ಸಾಂಸ್ಕೃತಿಕ ಆವರಣದಲ್ಲಿ ಏಕಾಂಗಿಯಾಗಿ ತನ್ನ ಸುತ್ತಲಿನ ಸಮಸ್ಯೆಗಳನ್ನು ಬಿಡಿಸಿಕೊಳ್ಳುತ್ತಾ ಬಂದಿದೆ.

ಕನ್ನಡ ಚಿತ್ರರಂಗ ಮತ್ತೆ ಸ್ಥಿತ್ಯಂತರದ ಸಂಕಟದಲ್ಲಿದೆ. ಪರಭಾಷಾ ಚಿತ್ರಗಳ ಪಾರಮ್ಯ ಮತ್ತೆ ಸದ್ದಿಲ್ಲದೆ ತಳ ಊರುತ್ತಿದೆ. ಹೊಸತನವನ್ನು ಜನ ಬಯಸುತ್ತಿದ್ದಾರೆ. ಅದನ್ನು ಕೊಡಲಾಗದ ಸ್ಥಿತಿಯನ್ನು ಚಿತ್ರರಂಗ ತಲುಪಿದೆ. ಡಬ್ಬಿಂಗ್ ಚಿತ್ರಗಳಿಗೆ ಅವಕಾಶ ಕೊಡಬೇಕು ಎಂಬ ವಾದ ಚಿತ್ರರಂಗದಲ್ಲಿ ಮೆಲ್ಲನೆ ತಲೆ ಎತ್ತಿದೆ. ಬೇರೆ ಎಲ್ಲ ರಾಜ್ಯಗಳಲ್ಲೂ ಆಂಗ್ಲ, ಹಿಂದಿ ಹಾಗೂ ಇತರ ಎಲ್ಲ ಭಾಷೆಯ ಚಿತ್ರಗಳನ್ನು ಆಯಾ ಭಾಷೆಯಲ್ಲೇ ಡಬ್ಬಿಂಗ್ ಮೂಲಕ ನೋಡುತ್ತಿರುವಾಗ ಕನ್ನಡಿಗರೇಕೆ ಅಂತಹ ಅವಕಾಶದಿಂದ ವಂಚಿತರಾಗಬೇಕು ಎಂಬ ವಾದವನ್ನು ಚಿತ್ರರಂಗದಲ್ಲೇ ಹಿರಿಯ ನಿರ್ದೇಶಕರು, ನಿರ್ಮಾಪಕರು ಮುಂದೊಡ್ಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಇದಕ್ಕೆ ಉತ್ತರ ಕೊಟ್ಟರೆ ಚಿತ್ರರಂಗ ತವಕಿಸುತ್ತಿರುವ ಒಂದು ಪ್ರಶ್ನೆಗೆ ಹಾದಿ ತೋರಿಸಿದಂತಾಗುತ್ತದೆ.

ಮೂಕಿ ಚಿತ್ರಗಳ ಕಾಲದಿಂದಲೂ ಸಾಹಿತ್ಯ ಮತ್ತು ಸಿನಿಮಾ ಒಂದು ಅಂತರ್ಗತ ಸಂಬಂಧದ ತಳುಕು ಹಾಕಿಕೊಂಡಿದೆ. ಆದರೆ ಸಾಹಿತಿಗಳ ದೊಡ್ಡ ಗುಂಪು ಸಿನಿಮಾದಿಂದ ಅಂತರ ಕಾಯ್ದುಕೊಂಡಿದೆ. ಅವರನ್ನು ಇವರು, ಇವರನ್ನು ಅವರು ಅರ್ಥಮಾಡಿಕೊಳ್ಳದ ಕಾರಣದಿಂದ ಸಾಹಿತ್ಯ ಮತ್ತು ಸಿನಿಮಾ ಎರಡೂ ವಲಯಗಳಲ್ಲಿನ ಅಂತರ ದಿನೇ ದಿನೇ ಹೆಚ್ಚಾಗುತ್ತಲೇ ಹೋಗಿದೆ. ಸಿನಿಮಾದವರಿಗೆ ಸಾಹಿತಿಗಳ ಬಗ್ಗೆ ಅಪನಂಬಿಕೆ. ಸಾಹಿತಿಗಳಿಗೆ ಸಿನಿಮಾದವರೆಂದರೆ ಅಸಡ್ಡೆ. ಹೀಗಾಗಿ ಸಿನಿಮಾ ಕ್ಷೇತ್ರ ಸಾಹಿತ್ಯದ ಸ್ಪರ್ಶದಿಂದ ದೂರವೇ ಉಳಿದಂತಾಗಿದೆ.

ಈ ರೀತಿ ಒಬ್ಬರಿಗೊಬ್ಬರು ಅವ್ಯಕ್ತ ಭಯದಲ್ಲಿ ತೊಳಲಾಡುತ್ತಿರುವುದರಿಂದ ಸೃಜನಾತ್ಮಕ ಮಾಧ್ಯಮವೊಂದರ ವಾಸ್ತವಿಕ ಕಾಣ್ಕೆಗೆ ಅಪಾರ ನಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಎರಡೂ ಮಾಧ್ಯಮಗಳನ್ನು ಒಂದುಗೂಡಿಸುವ ತಂತುವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಬೇಕಾಗಿತ್ತು. ಸಮ್ಮೇಳನ ಅಂತಹ ಕೆಲಸಕ್ಕೆ ವೇದಿಕೆಯಾಗಬೇಕಿತ್ತು. ಆಗ ಕನ್ನಡದ ಕಥಾಕಣಜ, ತೆರೆಯ ಮೇಲೆ ವಿಜೃಂಭಿಸುವ ದೃಶ್ಯಗಳನ್ನು ನೋಡಬಹುದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.