ಚಿತ್ರರಂಗದ ಹಳೆಯ ಬೇರುಗಳು ಕಾಲಗತಿಯಲ್ಲಿ ಉರುಳಿಹೋದಾಗ, ಹಳೆಯ ಕೊಂಡಿ ಕಳಚಿ ಕೊಂಡಿತೆಂದೋ, ಗತವೈಭವ ಮರೆಯಾಯಿತೆಂದೋ ಹೇಳುವುದು ಒಂದು ರೀತಿಯಲ್ಲಿ ಕ್ಲೀಷೆ. ಚಿತ್ರರಂಗದ ಆರಂಭಿಕ ಘಟ್ಟದಿಂದ ಬೆಳವಣಿಗೆಯ ಗತಿಯೊಂದಿಗೇ ಹೆಜ್ಜೆಹಾಕಿ ಅದಕ್ಕೊಂದು ಭದ್ರಬುನಾದಿಯನ್ನು ತುಂಬಿಕೊಟ್ಟಿರುವ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಮೊದಲಾದವರೆಲ್ಲ ಇಂದು ನಾವು ನೋಡುತ್ತಿರುವ ಚಿತ್ರರಂಗದ ತಳಪಾಯ.

ಚಿತ್ರಕ್ಕೆ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿದ್ದೇ ಅಲ್ಲದೆ ಹಲವಾರು ಆಯಾಮಗಳ ರೂಪಕಗಳನ್ನು ಅವರು ಕಲೋದ್ಯಮದ ಭಾಗವನ್ನಾಗಿಸಿರುತ್ತಾರೆ. ಜನವರಿ ತಿಂಗಳಲ್ಲಿ ಕೆಲವೇ ದಿನಗಳ ಅಂತರದಲ್ಲಿ ಮರೆಯಾದ ತೆಲುಗಿನ ಖ್ಯಾತನಟ ಅಕ್ಕಿನೇನಿ ನಾಗೇಶ್ವರರಾವ್ (೯೦), ನಟಿ ಅಂಜಲಿದೇವಿ (೮೬) ಹಾಗೂ ಬಂಗಾಳಿ ನಟಿ ಸುಚಿತ್ರಾ ಸೇನ್ (೮೩) ಅಂತಹ ಛಾಪನ್ನು ಬಿಟ್ಟು ಹೋಗಿದ್ದಾರೆ. ಈ ಮೂವರೂ ಒಂದೇ ಕಾಲಾವಧಿ ಯಲ್ಲಿ ಬಂದು ಹೋದವರು ಎನ್ನುವುದೂ ಗಮನಾರ್ಹ.

ದಕ್ಷಿಣಭಾರತದ ಚಲನಚಿತ್ರರಂಗದ ಇತಿಹಾಸವನ್ನು ಪುನರಾವಲೋಕಿಸಿದರೆ ಒಂದು ಸಾದೃಶ್ಯ ಕಂಡುಬರುತ್ತದೆ. ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ನಾಗೇಶ್ವರರಾವ್, ಎನ್.ಟಿ. ರಾಮರಾವ್, ತಮಿಳು ಚಿತ್ರರಂಗದಲ್ಲಿ ಎಂ.ಜಿ. ರಾಮಚಂದ್ರನ್, ಶಿವಾಜಿಗಣೇಶನ್, ಮಲಯಾಳಂ ಭಾಷೆಯಲ್ಲಿ ಪ್ರೇಂನಜೀರ್, ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್ ಆಯಾ ಭಾಷೆಯ ಚಿತ್ರರಂಗಕ್ಕೆ ಆರಂಭದ ದಶಕಗಳಲ್ಲಿ ಗಟ್ಟಿಬುನಾದಿಯನ್ನು ಒದಗಿಸಿಕೊಟ್ಟಿದ್ದಾರೆ. ಚಿತ್ರರಂಗವನ್ನು ಹೆಗಲಮೇಲೆ ಹೊತ್ತು ಪೋಷಿಸಿದ್ದಾರೆ.

ಹಾಗೆ ನೋಡಿದರೆ ಸಮಕಾಲೀನ ನಟರುಗಳ ಪೈಕಿ ಎಲ್ಲರಿಗಿಂತ ಮುನ್ನ ಚಿತ್ರರಂಗ ಪ್ರವೇಶಿಸಿದ (೧೯೪೧) ಅಕ್ಕಿನೇನಿ ನಾಗೇಶ್ವರರಾವ್, ಅವರೆಲ್ಲರ ನಂತರ ಅಂತಿಮ ಪಯಣ ಬೆಳೆಸಿದ್ದಾರೆ. ನೂರುವರ್ಷದ ಭಾರತೀಯ ಚಿತ್ರರಂಗದಲ್ಲಿ ೭೨ ವರ್ಷಗಳ ಕಾಲದ ಸಾಕ್ಷಿಯಾಗಿದ್ದ ಅಕ್ಕಿನೇನಿ ನಾಗೇಶ್ವರರಾವ್ ಅವರ ನಿಧನದಿಂದ ಗತವೈಭವದ ಕೊಂಡಿಯೊಂದು ನಿಜಕ್ಕೂ ಕಳಚಿಕೊಂಡಿತು ಎಂದು ಹೇಳುವುದರಲ್ಲಿ ತಪ್ಪಿಲ್ಲ.

ಎಎನ್ಆರ್ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದ ಅಕ್ಕಿನೇನಿ ನಾಗೇಶ್ವರರಾವ್ ೨೨೫ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಅವರ ಹೆಸರು ಕೇಳಿದ ಕೂಡಲೇ ಎಲ್ಲರಿಗೂ ನೆನಪಾಗುವುದು ‘ದೇವದಾಸ್’ ಚಿತ್ರವೊಂದೇ. ಬಂಗಾಳಿ ಕಾದಂಬರಿಕಾರ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಅದೇ ಹೆಸರಿನ ಕೃತಿ ಆಧರಿಸಿದ ‘ದೇವದಾಸ್’ ಭಾರತೀಯ ಚಿತ್ರರಂಗದ ನೂರು ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎನ್ನುವ ದಾಖಲೆಗೆ ಸೇರಿದೆ. ೧೯೫೩ರಲ್ಲಿ ತೆರೆಕಂಡ ಈ ಚಿತ್ರ ನಿರ್ಮಾಣವಾಗಿ ಅರವತ್ತು ವರ್ಷ ಉರುಳಿದೆ.

ಆದರೂ ಭಗ್ನಪ್ರೇಮಿ ದೇವದಾಸನ ಪಾತ್ರದಲ್ಲಿ ನಾಗೇಶ್ವರರಾವ್ ನೀಡಿದ ಅಭಿನಯ ಒಂದು ಕಾಲಘಟ್ಟದ ಜನರ ಮಿಡಿತವಾಗಿ ಕಾಣುತ್ತಿದೆ. ಇದುವರೆಗೆ ಅಂತಹ ಅಭಿನಯವನ್ನು ಯಾರೂ ಸರಿಗಟ್ಟಿಲ್ಲ. ಕೆಲವೇ ವರ್ಷಗಳ ಹಿಂದೆ ಶಾರುಖ್ ಖಾನ್, ದೇವದಾಸನ ಅಭಿನಯವನ್ನು ಮರುಸೃಷ್ಟಿ ಮಾಡಿ ಚಿಂತಾಜನಕವಾಗಿ ಸೋತರು. ನಾಗೇಶ್ವರರಾವ್ ಆ ಪಾತ್ರಕ್ಕೆ ಅಂತಹ ಒಂದು ಮಾಂತ್ರಿಕತೆಯನ್ನು ತುಂಬಿಬಿಟ್ಟಿದ್ದರು. ಕುಡುಕನ ಪಾತ್ರವನ್ನು ಯಾರೇ ಮಾಡಿದರೂ, ನಾಗೇಶ್ವರರಾವ್ ಅವರ ದೇವದಾಸ್ ಅಭಿನಯದ ಜೊತೆ ಅದನ್ನು ತುಲನೆ ಮಾಡಿ ಅಭಿನಯವನ್ನು ಅಳೆಯುವಷ್ಟರ ಮಟ್ಟಿಗೆ ಅದರ ಛಾಪು ಚಿತ್ರರಂಗದಲ್ಲಿ ಉಳಿದುಬಿಟ್ಟಿದೆ.

ಚಟ್ಟೋಪಾಧ್ಯಾಯರು ಬಂಗಾಳಿಯಲ್ಲಿ ’ದೇವದಾಸ್’ ಕಾದಂಬರಿ ರಚಿಸುವ ಮುನ್ನವೇ ಖ್ಯಾತರಾಗಿದ್ದರು. ಮಧ್ಯಮವರ್ಗದ ಜನರ ಆಶೋತ್ತರಗಳನ್ನು, ಮಹಿಳೆಯರ ಮನೋವೇದನೆಯನ್ನು ಹಿಡಿದಿಡುವಲ್ಲಿ ಅವರು ಯಶಸ್ವಿಯಾಗಿದ್ದರು. ದೇವದಾಸ್ ಕಾದಂಬರಿಯಲ್ಲಿ ಅವರು ಶ್ರೀಮಂತ ಯುವಕ ಹಾಗೂ ಬಡ ಹುಡುಗಿಯ ನಡುವೆ ಉದ್ಭವಿಸುವ ಸಮಸ್ಯೆಯನ್ನು ಬಿಂಬಿಸಿದ್ದಾರೆ. ಆಗರ್ಭ ಶ್ರೀಮಂತ ಜಮೀನ್ದಾರನೊಬ್ಬನ ಪುತ್ರನಾದ ದೇವದಾಸ್, ಪಕ್ಕದ ಮನೆಯಲ್ಲೇ ವಾಸವಾಗಿರುವ ಮಧ್ಯಮವರ್ಗದ ಕುಟುಂಬದ ಪಾರ್ವತಿಯ ಜೊತೆ ಬಾಲ್ಯದಿಂದಲೇ ಆಡಿ ನಲಿದವನು.

ಇಬ್ಬರೂ ಕೊನೆಗೊಂದು ದಿನ ಮದುವೆ ಆಗಿಯೇಬಿಡುತ್ತಾರೆ ಎಂಬುದು ಪ್ರತೀತಿ. ಆದರೆ ದೇವದಾಸನ ಕುಟುಂಬಕ್ಕೆ ಸಾಮಾಜಿಕ ಪ್ರತಿಷ್ಠೆಯೇ ಮುಖ್ಯವಾಗುತ್ತದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೇವದಾಸನನ್ನು ಕಲ್ಕತ್ತಕ್ಕೆ ಕಳುಹಿಸುವ ಹುನ್ನಾರ ನಡೆಯುತ್ತದೆ. ಅವನು ಕಲ್ಕತ್ತದಲ್ಲಿರುವಾಗ ಪಾರ್ವತಿಯನ್ನು ಬೆಳೆದ ಮಕ್ಕಳಿರುವ ಶ್ರೀಮಂತ ವಿಧುರನೊಬ್ಬನೊಂದಿಗೆ ಒತ್ತಾಯದಿಂದ ಮದುವೆ ಮಾಡಿಸಲಾಗುತ್ತದೆ. ದಿಗ್ಭ್ರಮೆಗೊಂಡ, ಸಾಮಾಜಿಕ ಕಟ್ಟುಪಾಡಿನ, ಏರುಪೇರಿನ ವ್ಯವಸ್ಥೆಯ ವಿರುದ್ಧ ಹತಾಶನಾದ ದೇವದಾಸ್, ಸುರೆಯ ಮೊರೆಹೋಗುತ್ತಾನೆ. ಸ್ನೇಹಿತನೊಬ್ಬನ ಕುಯುಕ್ತಿಯಿಂದ ನರ್ತಕಿ ಚಂದ್ರಮುಖಿಯ ಮನೆಯಲ್ಲಿ ಕಾಲಕಳೆಯುವಂತಾಗುತ್ತಾನೆ.

ಕೊನೆಗೂ ಒಂದು ದಿನವಾದರೂ ಪ್ರೀತಿಯ ಪಾರ್ವತಿಯನ್ನು ಭೇಟಿಯಾಗಿಯೇ ತೀರುತ್ತೇನೆ ಎಂಬ ಆಶಾಭಾವನೆಯಿಂದ ಕುಡಿದು, ಕುಡಿದು ಕೊನೆಗೆ ರಸ್ತೆ ಬದಿಯ ಶವವಾಗಿ ಬಿಡುತ್ತಾನೆ. ೧೯೧೭ರ ಕಾಲಘಟ್ಟದ ಸಾಮಾಜಿಕ ಸ್ಥಿತಿಗತಿಯನ್ನು ಹಿಡಿದಿಡುವ ಈ ಚಿತ್ರದಲ್ಲಿ ಹತಾಶನಾದ ಯುವಕ ಅದರಲ್ಲೂ ವಿದ್ಯಾವಂತ ಸುರೆಯ ಮೊರೆಹೋಗುವುದು ವಿದ್ಯಾವಂತರನ್ನು ದಾರಿತಪ್ಪಿಸುತ್ತದೆ ಎಂದು, ಕಾದಂಬರಿಕಾರರ ಮೇಲೆ ಕೆಲವರು ಹರಿಹಾಯ್ದರು. ಕುಡಿತದ ಮೊರೆಹೋಗುವುದು ತಪ್ಪು ಸಂದೇಶ ನೀಡಿದಂತೆ ಎಂಬ ಚರ್ಚೆ ಅಂದಿನ ದಿನದಲ್ಲಿ ವಿವಾದವಾಗಿತ್ತು. ಯುವಕ ದೇವದಾಸ ಕುಡಿತದ ಮೂಲಕ ದುಃಖ ಮರೆಯುವುದು, ಚಿತ್ತಸ್ಖಲನಕ್ಕೆ ಒಳಗಾಗಿ ವಿಷಯ ಲೋಲುಪನಾಗುವುದು ಸ್ವಯಂನಾಶವಷ್ಟೇ ಅಲ್ಲ, ಬಂಡಾಯದ ಸೂಚನೆ ಕೂಡ ಆಗಿದೆ. ಆದರೂ ಭಾವನಾತ್ಮಕ ಪ್ರಪಂಚದ ಮೇರು ಕೃತಿಯಾಗಿ ‘ದೇವದಾಸ್’ ಉಳಿದುಕೊಂಡಿದೆ.

೧೯೫೩ರಲ್ಲಿ ಇಂತಹ ಒಂದು ಪಾತ್ರದಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಕಾಣಿಸಿಕೊಂಡಾಗ, ಅವರು ಆ ಪಾತ್ರದಲ್ಲಿ ಒಳಹೊಕ್ಕು ನೀಡಿದ ಅಭಿನಯ, ದೇವದಾಸ–ಪಾರ್ವತಿಯ ಅಮರಪ್ರೇಮ, ಯುವಕರಲ್ಲಿ ಭಾವೋದ್ರೇಕಕ್ಕೆ ಕಾರಣವಾಗಿತ್ತು. ನಾಗೇಶ್ವರರಾವ್ ಸಹಜವಾಗಿಯೇ ಸೂಪರ್ ಸ್ಟಾರ್ ಆದರು. ವೇದಾಂತ ರಾಘವಯ್ಯ ಅಕ್ಕಿನೇನಿಯವರನ್ನು ದೇವದಾಸ್ ಪಾತ್ರಕ್ಕೆ ಆಯ್ಕೆ ಮಾಡಿದಾಗ ಭಾರತೀಯ ಚಿತ್ರರಂಗಕ್ಕೆ ಇವರೊಂದು ಮಾದರಿ ಅಭಿನಯವನ್ನು ಕೊಡುಗೆಯಾಗಿ ಕೊಡುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಚಿತ್ರದ ನಾಯಕಿಯರಾಗಿ ಸಾವಿತ್ರಿ ಮತ್ತು ಲಲಿತಾ ಇದ್ದರು.

ಬಿ.ಎಸ್. ರಂಗ ಛಾಯಾಗ್ರಾಹಕರಾಗಿದ್ದರು. ಚಿತ್ರದ ಹನ್ನೊಂದು ಹಾಡುಗಳೂ ಜನರ ನಾಲಿಗೆಯ ಮೇಲೆ ಹರಿದಾಡುತ್ತಿದ್ದವು. ‘ದೇವದಾಸ್’ ಕಾದಂಬರಿಗೆ ಓದುಗರು ಇರುವಂತೆಯೇ, ಚಲನಚಿತ್ರಕ್ಕೂ ಅಷ್ಟೇ ಅಭಿಮಾನಿಗಳಿದ್ದಾರೆ.೧೯೩೫ರಲ್ಲೇ ‘ದೇವದಾಸ್’ ಹಿಂದಿ ಮತ್ತು ಬಂಗಾಳಿ ಆವೃತ್ತಿ ತೆರೆಕಂಡಿತ್ತು. ಹಿಂದಿಯಲ್ಲಿ ದೇವದಾಸ್ ಆಗಿ ಕೆ.ಎಲ್. ಸೈಗಾಲ್, ಬಂಗಾಳಿ ಆವೃತ್ತಿಯಲ್ಲಿ ಪಿ.ಸಿ. ಬರೂವ ದೇವದಾಸನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೈಗಾಲ್ ಅವರು ನಿಜಜೀವನದಲ್ಲೂ ಅತಿಯಾದ ಕುಡಿತದ ಚಟಕ್ಕೆ ಬಲಿಯಾದರು.

ಆದರೆ ತೆರೆಯಮೇಲೆ ಕಂಡವರ ಬಾಯಲ್ಲಿ ನೀರೂರುವಂತೆ ಕುಡಿಯುವ ಅಕ್ಕಿನೇನಿ ನಾಗೇಶ್ವರರಾವ್, ಕುಡಿತದಿಂದ ದೂರ. ಅವರನ್ನು ಭೇಟಿಯಾದ ಯುವಕರಿಗೆ ಕುಡಿತದ ದುಷ್ಪರಿಣಾಮಗಳನ್ನು ಹೇಳುತ್ತಿದ್ದರಂತೆ. ೧೯೫೭ರಲ್ಲಿ ಮತ್ತೆ ಇದೇ ಕತೆಯನ್ನು ದಿಲೀಪಕುಮಾರ್ ಅವರ ನಾಯಕತ್ವದಲ್ಲಿ ತಯಾರಿಸಲಾಯಿತು. ಈ ಚಿತ್ರದಲ್ಲಿ ಪಾರ್ವತಿ ಪಾತ್ರದಲ್ಲಿ ಸುಚಿತ್ರಾಸೇನ್ ಅಭಿನಯಿಸಿದ್ದರು. ತೆಲುಗಿನ ದೇವದಾಸ್ ಹಾಗೂ ಬಂಗಾಳಿಯ ಪಾರು ಒಂದೇ ವಾರದ ಅಂತರದಲ್ಲಿ ನಿಧನರಾದರು ಎಂಬುದು ಕಾಕತಾಳೀಯ ಅಷ್ಟೇ.

ದಿಲೀಪಕುಮಾರ್ ಕೂಡ ದುರಂತಪಾತ್ರಗಳಲ್ಲಿ ಎತ್ತಿದ ಕೈ. ೧೯೫೭ರಲ್ಲಿ ಅವರು ದೇವದಾಸ್ ಆಗುವ ಮುನ್ನವೇ ೧೯೫೩ರಲ್ಲಿ ಎಎನ್ಆರ್ ಅದಕ್ಕೊಂದು ಸಿದ್ಧಮಾದರಿಯನ್ನು ಸೃಷ್ಟಿಮಾಡಿಬಿಟ್ಟಿದ್ದರು. ಅಕ್ಕಿನೇನಿ ಅಭಿನಯವನ್ನು ಯಾರೂ ಸರಿಗಟ್ಟಲಾರರು ಎಂದು ದಿಲೀಪಕುಮಾರ್ ಅವರೇ ಅಭಿಪ್ರಾಯಪಟ್ಟಿದ್ದರು.

೧೯೪೧ರಲ್ಲಿ ‘ಧರ್ಮಪತ್ನಿ’ ಚಿತ್ರದ ಮೂಲಕ ಅಕ್ಕಿನೇನಿ ಚಿತ್ರರಂಗ ಪ್ರವೇಶಿಸಿದ ನಂತರದ ದಿನಗಳಲ್ಲಿ ಅದುವರೆಗೆ ಬಹುಬೇಡಿಕೆಯ ನಾಯಕನಟರಾಗಿದ್ದ ತೆಲುಗು ಚಿತ್ರರಂಗದ ಮೊದಲ ಹೀರೋ ಚ. ನಾರಾಯಣರಾವ್ (ಜೀವನಜ್ಯೋತಿ-೧೯೩೫) ಹಾಗೂ ಮತ್ತೊಬ್ಬ ಬಹು ಬೇಡಿಕೆಯ ನಟ ವಿ. ನಾಗಯ್ಯ ತೆರೆಮರೆಗೆ ಸರಿಯಬೇಕಾಯಿತು. ನಾಗೇಶ್ವರರಾವ್ ಚಿತ್ರರಂಗ ಪ್ರವೇಶಿಸಿದ ಒಂದೂವರೆ ವರ್ಷಗಳ ನಂತರ ಎನ್.ಟಿ. ರಾಮರಾವ್ ನಾಯಕನಟರಾಗಿ ತೆರೆಗೆ ಬಂದರು.

ಇಬ್ಬರೂ ನಾಯಕರು ಯಶಸ್ಸಿನ ಏಣಿ ಏರುತ್ತಿದ್ದಂತೆಯೇ ಚಿತ್ರರಂಗ ನಾಯಕ ಪ್ರಧಾನ ಚಿತ್ರಗಳ ಪರಂಪರೆಯತ್ತ ಹೊರಳಿತು. ತೆಲುಗಿನಲ್ಲಿ ಜನಪದ ಹಾಗೂ ಪೌರಾಣಿಕ ಚಲನಚಿತ್ರಗಳ ಒಂದು ಪರಂಪರೆಯೇ ಇದೆ. ಆರಂಭದಲ್ಲಿ ನಾಗೇಶ್ವರರಾವ್ ಹಲವಾರು ಜನಪದ ಚಿತ್ರಗಳಲ್ಲಿ ಅಭಿನಯಿಸಿದರು. ಮಾಯಾಬಜಾರ್ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಮಿಂಚಿದರು. ‘ಚಂಚುಲಕ್ಷ್ಮಿ’ ಚಿತ್ರದಲ್ಲಿ ವಿಷ್ಣುವಾದರು. ಭೂಕೈಲಾಸದಲ್ಲಿ ನಾರದರಾದರು.

ಶ್ರೀಕೃಷ್ಣಾರ್ಜುನಯುದ್ಧಂ ಚಿತ್ರದಲ್ಲಿ ಅರ್ಜುನನಾಗಿ ಅಭಿನಯಿಸಿದರು. ಎಲ್.ವಿ.ಪ್ರಸಾದ್ ನಿರ್ದೇಶನದ ‘ಸಂಸಾರಂ’ ಚಿತ್ರ ಭರ್ಜರಿ ಯಶಸ್ಸು ಪಡೆಯುವ ಮೂಲಕ ತೆಲುಗು ಚಿತ್ರರಂಗದ ಟ್ರೆಂಡನ್ನೂ ಬದಲಿಸಿತು. ಅಕ್ಕಿನೇನಿಗೆ ಇದು ಹೊಸ ಇಮೇಜನ್ನು ನೀಡಿತು. ಅದುವರೆಗೆ ಪೌರಾಣಿಕ, ಜನಪದ ಚಿತ್ರಗಳಿಗೆ ಮಾತ್ರ ಈ ನಟ ಮೀಸಲು ಎನ್ನುತ್ತಿದ್ದವರು ಕೌಟುಂಬಿಕ, ಸಾಂಸಾರಿಕ ಚಿತ್ರಗಳಿಗೂ ಅಕ್ಕಿನೇನಿ ಸರಿ ಎಂದು ಅನುಮೋದಿಸಿದರು. ‘ರೋಜುಲು ಮಾರಾಯಿ’ ತೆಲುಗು ಸಾಮಾಜಿಕಗಳಲ್ಲಿ ಒಂದು ಮೈಲಿಗಲ್ಲು.

ಮಿಸ್ಸಮ್ಮ (೧೯೫೫), ಗುಂಡಮ್ಮ ಕಥಾ (೧೯೬೨), ಮೂಗಮನಸುಲು (೧೯೬೩) ಅಂದಿನ ಜನಪ್ರಿಯ ಚಿತ್ರಗಳು. ಅವರದೇ ಸ್ವಂತ ಅನ್ನಪೂರ್ಣ ಪಿಕ್ಚರ್ಸ್ ಲಾಂಛನದಲ್ಲಿ ತಯಾರಿಸಿ ಅಭಿನಯಿಸಿದ ‘ದೊಂಗರಾಮುಡು’ (ನಿರ್ದೇಶನ ಕೆ.ವಿ.ರೆಡ್ಡಿ) ಸಾಮಾಜಿಕ ಚಿತ್ರಗಳ ಗತಿಯನ್ನೇ ಬದಲಿಸಿತಲ್ಲದೆ, ಜನಪ್ರಿಯ ಧಾಟಿಯೊಂದನ್ನು ಸೃಷ್ಟಿಸಿತು. ೧೯೫೬ರಲ್ಲಿ ತೆಲುಗು ಚಿತ್ರರಂಗ ಮದರಾಸಿನಿಂದ ಹೈದರಾಬಾದಿಗೆ ಮರಳಬೇಕು ಎಂಬ ಚಳವಳಿ ಆರಂಭವಾದಾಗ, ಹೈದ ರಾಬಾದಿಗೆ ಆಗಮಿಸಿದ ಅಕ್ಕಿನೇನಿ ನಾಗೇಶ್ವರರಾವ್ ೨೨ ಎಕರೆ ಪ್ರದೇಶದಲ್ಲಿ ಅನ್ನಪೂರ್ಣ ಸ್ಟುಡಿಯೋ ತೆರೆದರು. ಈಗ ಅಲ್ಲಿ ಅಭಿನಯ ತರಬೇತಿ ಕೇಂದ್ರವೂ ಇದೆ.

‘ಅನಾರ್ಕಲಿ’ ಚಿತ್ರದಲ್ಲಿ ಅಕ್ಕಿನೇನಿ ಅವರೊಂದಿಗೆ ನಾಯಕಿಯಾಗಿ ಅಂಜಲಿದೇವಿ ಅಭಿನಯಿಸಿದ್ದರು. ೨೦೦೭ರಲ್ಲಿ ಅಂಜಲಿದೇವಿ ಅವರಿಗೆ ಎಎನ್ಆರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಕ್ಕಿನೇನಿ ಅಭಿನಯದ ಹೊಳಪನ್ನು ಪ್ರೇಂನಗರ್, ಪ್ರೇಮಾಭಿಷೇಕಂ, ಮೇಘಸಂದೇಶಂ, ಸೀತಾರಾಮಯ್ಯ ಮನವರಾಲು ಚಿತ್ರಗಳಲ್ಲೂ ಕಾಣಬಹುದು.

ದಾಸರಿ ನಾರಾಯಣರಾವ್ ನಿರ್ದೇಶನದ ‘ಪ್ರೇಮಾಭಿಷೇಕಂ’ ಹೈದರಾಬಾದಿನಲ್ಲಿ ೫೩೩ ದಿನ ಸತತವಾಗಿ ಪ್ರದರ್ಶನಗೊಂಡಿತು. ವರ್ಷ ದಾಟಿ ಪ್ರದರ್ಶನಗೊಂಡ ತೆಲುಗಿನ ಮೊದಲ ಚಿತ್ರವಿದು. ೯೦ ವರ್ಷಗಳ ಸುದೀರ್ಘ ಜೀವಿತಾವಧಿಯಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಚಿತ್ರರಂಗದ ಎಲ್ಲ ಏರಿಳಿತಗಳನ್ನು ಕಂಡಿದ್ದಾರೆ. ‘ಮಗಧೀರ’ರ ಆರ್ಭಟದ ಮುಂದೆ ಅಕ್ಕಿನೇನಿಯವರ ತಣ್ಣನೆಯ ಅಭಿನಯವೇ ತೆಲುಗು ಚಿತ್ರರಂಗದ ನಿಜವಾದ ಸತ್ವವಾಗಿ ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.