ಕನ್ನಡದ ಮೊದಲ ವಾಕ್ಚಿತ್ರಕ್ಕೆ ಮಾರ್ಚ್ ಮೂರರಂದು ಎಂಬತ್ತು ವರ್ಷ ತುಂಬಿದೆ. ಈ ನೆನಪಿಗಾಗಿ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ದ ವಿಶೇಷ ಲಕೋಟೆ ಬಿಡುಗಡೆಯಾಗಿದೆ. ಈ ಮೂಲಕ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳ ಮೆಲುಕು ಆರಂಭವಾಗಿರುವುದು ಮುಂದಿನ ಬೆಳವಣಿಗೆಗಳಿಗೆ ದಾರಿದೀಪವಾಗಬಹುದು.

೧೯೩೧ರಲ್ಲಿ ಭಾರತದ ಮೊದಲ ವಾಕ್ಚಿತ್ರ ‘ಆಲಂ ಅರಾ’ ಬಿಡುಗಡೆಯಾದ ಮೂರು ವರ್ಷಗಳ ನಂತರ ಬಿಡುಗಡೆಯಾದ ಮೊದಲ ಕನ್ನಡ ವಾಕ್ಚಿತ್ರಕ್ಕೆ ಆಯ್ಕೆಯಾದದ್ದು ಅಂದಿನ ದಿನಗಳಲ್ಲಿ ರಂಗಭೂಮಿಯಲ್ಲಿ ಜನಪ್ರಿಯವೆನಿಸಿದ್ದ ಬೆಳ್ಳಾವೆ ನರಹರಿಶಾಸ್ತ್ರಿಗಳು ಬರೆದ ‘ಸತಿ ಸುಲೋಚನ’ ಅರ್ಥಾತ್ ‘ಇಂದ್ರಜಿತ್ ವಧೆ’ ಪೌರಾಣಿಕ ನಾಟಕ. ‘ಸತಿ ಸುಲೋಚನ’ ಆರಂಭಕ್ಕೂ ಮುನ್ನವೇ ಚಿತ್ರೀಕರಣ ಆರಂಭಿಸಿದರೂ ತಡವಾಗಿ ಬಿಡುಗಡೆಯಾದ ‘ಭಕ್ತ ಧ್ರುವ’ ಚಿತ್ರದ ಕತೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಎಲ್ಲವೂ ಮತ್ತೊಬ್ಬ ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಅವರದು.

ಕನ್ನಡದಲ್ಲಿ ಕತೆಗಳಿಲ್ಲ ಎಂದು ಬೇರೆ ಭಾಷೆಗಳ ಚಿತ್ರಗಳನ್ನು ಡಬ್ ಮಾಡಲು ಹಾತೊರೆಯುತ್ತಿರುವ ಈ ಸಂದರ್ಭದಲ್ಲಿ ಗಮನಿಸಬೇಕಾದ ಹಲವು ಸಂಗತಿಗಳನ್ನು ೮೦ ವರ್ಷಗಳ ಹಿಂದೆ ಬಿಡುಗಡೆಯಾದ ‘ಸತಿಸುಲೋಚನ’ ಹಾಗೂ ‘ಭಕ್ತ ಧ್ರುವ’ ಚಿತ್ರಗಳು ನೆನಪಿಸುತ್ತವೆ. ಈ ಎರಡೂ ಚಿತ್ರಗಳನ್ನು ನಿರ್ದೇಶಿಸಿದವರು ಪರಭಾಷಾ ನಿರ್ದೇಶಕರಾದರೂ, ಅವರು ಚಿತ್ರಕ್ಕೆ ಆಯ್ಕೆ ಮಾಡಿಕೊಂಡದ್ದು ಕನ್ನಡದ ಕತೆಗಳನ್ನೇ. ರಂಗಭೂಮಿಯ ಮೂಲಕ ಜನಪ್ರಿಯವಾದ ನಾಟಕಗಳ ವಸ್ತು, ಜನಸಾಮಾನ್ಯರ ಮನಮುಟ್ಟಿದ್ದನ್ನು ಅವರು ಅರಿತಿದ್ದರು. ಹೀಗಾಗಿ ನಮ್ಮ ಜನಪದ ಕಥೆಗಳೇ ಅಂದಿನ ಮೊದಲ ಆಯ್ಕೆಯಾಗಿದ್ದವು.

ಕನ್ನಡ ಚಿತ್ರರಂಗದ ವೈಶಿಷ್ಟ್ಯವೆಂದರೆ ಮೊದಲ ವಾಕ್ಚಿತ್ರವೇ ಸಾಹಿತ್ಯದ ಉಪಧಾರೆಯಿಂದ ಆರಂಭವಾಗಿದೆ. ‘ನಮ್ಮ ಸಂಸ್ಕೃತಿಯ ಪ್ರಧಾನಧಾರೆಯೆಂದು ಪರಿಗಣಿತವಾದ ರಾಮಾಯಣ, ಮಹಾಭಾರತಗಳಲ್ಲಿರುವ ಪ್ರಧಾನ ಪಾತ್ರ ಹಾಗೂ ಕಥಾಕೇಂದ್ರಕ್ಕೆ ಬದಲಾಗಿ ಉಪ ಪಾತ್ರ, ಉಪಕತೆಗಳ ನೆಲೆಯಿಂದ ಸ್ಫೂರ್ತಿಗೊಂಡು ಸಾಹಿತ್ಯವನ್ನು ರೂಪಿಸಿಕೊಂಡದ್ದು ಸಾಂಸ್ಕೃತಿಕವಾಗಿ ಸಾಮಾನ್ಯ ಸಂಗತಿಯಲ್ಲ’ ಎಂದು ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯಪಟ್ಟಿರುವುದು ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ಹೊಸ ಆಯಾಮವನ್ನು ಕುರಿತು. ಸತಿ ಸುಲೋಚನಾ ಸಮಯದಲ್ಲೇ ಏಕಕಾಲದಲ್ಲಿ ತಯಾರಾದ ‘ಭಕ್ತಧ್ರುವ’ ಕೂಡ ಇದೇ ಉಪಧಾರೆಯ ಕತೆಯನ್ನೇ ಹೊಂದಿದೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಆರಂಭದ ದಿನಗಳಿಂದಲೇ ಹೊಸ ದೃಷ್ಟಿಕೋನದ ಜೊತೆ ಹೊಂದಾಣಿಕೆ ಆಗಿತ್ತು ಎಂದು ಭಾವಿಸಬಹುದು.

ಆದರೆ ಕನ್ನಡ ಚಿತ್ರರಂಗ ಮೂಕಿಚಿತ್ರಯುಗದಲ್ಲೇ ಇಂತಹ ವೈಶಿಷ್ಟ್ಯವನ್ನು ಮೆರೆದಿದೆ. ಕನ್ನಡದ ಸಿನಿಮಾ, ಕನ್ನಡದ ಪರಿಕಲ್ಪನೆ, ಕನ್ನಡ ನಾಡಿನಲ್ಲೆ ಚಿತ್ರರಂಗ ನೆಲೆಯೂರಬೇಕು ಎನ್ನುವ ಮನೋಭಾವ ಮೂಕಿಚಿತ್ರಗಳ ಕಾಲದಲ್ಲೇ ನಡೆದಿರುವುದರಿಂದ ಐತಿಹಾಸಿಕವಾಗಿ ಮಹತ್ವದ್ದಾಗಿರುವ ಸಂಗತಿಯನ್ನು ನಾವು ವಿಜೃಂಭಿಸುವುದರಲ್ಲಿ ತಪ್ಪಿಲ್ಲ ಎನ್ನಬಹುದು. ಈ ದೃಷ್ಟಿಯಿಂದ ನೋಡಿದರೆ ನಮ್ಮಲ್ಲಿ ಮೂಕಿ ಚಿತ್ರ ತಯಾರಿಕೆ ೧೯೨೧ರಿಂದಲೇ ನಡೆದಿದೆ. ಹೊಸ ಪ್ರಯೋಗದ ತುಡಿತ ಅಲ್ಲಿಂದಲೇ ಆರಂಭವಾಗಿರುವುದರಿಂದ ಕನ್ನಡ ಚಿತ್ರರಂಗದ ಇಂದಿನ ಸಂಭ್ರಮ ಎಂಬತ್ತರದಲ್ಲ, ತೊಂಬತ್ಮೂರರದು ಎನ್ನಬಹುದು.

ಭಾರತೀಯ ಚಿತ್ರರಂಗದ ವಾಕ್ಚಿತ್ರಕ್ಕೆ ‘ಆಲಂ ಅರಾ’ ವೇ ಮುನ್ನುಡಿಯಾದರೂ, ಭಾರತೀಯ ಚಿತ್ರರಂಗಕ್ಕೆ ಶತಮಾನೋತ್ಸವ ಸಂಭ್ರಮ ಎಂದು ಹೇಳುವಾಗ ದಾದಾಸಾಹೇಬ್ ಫಾಲ್ಕೆಯವರ ‘ರಾಜಾ ಹರಿಶ್ಚಂದ್ರ’ ಚಿತ್ರದಿಂದ ಆರಂಭಿಸುತ್ತೇವೆ. ಅದರೆ ಕನ್ನಡದ ಸಂದರ್ಭಕ್ಕೆ ಬಂದಾಗ ಸತಿಸುಲೋಚನಾದಿಂದ ಆರಂಭಿಸುತ್ತೇವೆ. ಮೂಕಿ ಚಿತ್ರಗಳ ಕಾಲದಲ್ಲಿ ಕನ್ನಡ ನೆಲದಲ್ಲಿ ನಡೆದ ಚಟುವಟಿಕೆ ಚಿತ್ರರಂಗ ಬೆಂಗಳೂರಿನಲ್ಲಿ ಸಮೃದ್ಧನೆಲೆಯನ್ನು ಕಂಡುಕೊಳ್ಳಲು ಅಡಿಪಾಯ ಹಾಕುವಂತಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ.

೧೯೨೯ರಲ್ಲಿ ಬಿಡುಗಡೆಯಾದ ಶೂದ್ರಕನ ‘ಮೃಚ್ಛ ಕಟಿಕ’ ಸಂಸ್ಕೃತ ನಾಟಕ ಆಧರಿತ ‘ವಸಂತಸೇನ’ ಮೂಕಿ ಚಿತ್ರ ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಮಹತ್ವದ ಪಾತ್ರವಹಿಸಿದೆ. ಸಂಪೂರ್ಣ ಬೆಂಗಳೂರಿನಲ್ಲಿ ತಯಾರಾದ ‘ವಸಂತಸೇನ’ ಭಾರತೀಯ ಮೂಕಿಚಿತ್ರಗಳ ಸಾಲಿನಲ್ಲೊಂದು ಅಪೂರ್ವ ಘಟನೆಯಾಗಿದೆಯಲ್ಲದೆ, ಬೆಂಗಳೂರು ನಗರ ಮೂಕಿ ಚಿತ್ರಗಳ ನಿರ್ಮಾಣಕ್ಕೆ ಪ್ರಮುಖ ಕೇಂದ್ರವಾಗಲು ಭದ್ರಬುನಾದಿ ಹಾಕಿತು. ಇದಕ್ಕೂ ಹಿಂದೆ ನಿರುಪಮಾ (೧೯೨೧), ಮಹಾತ್ಮ ಕಬೀರ್ (೧೯೨೫) ನಾಟಕಗಳು ನಾಟಕರೂಪದ ಯಥಾವತ್ ಚಿತ್ರೀಕರಣವಾಗಿತ್ತು. ಸಿನಿಮಾ ಸಾಧ್ಯತೆಗಳನ್ನು, ಕಲಾತ್ಮಕ ದೃಷ್ಟಿಕೋನದಿಂದ ರೂಪಿಸಿದ ‘ವಸಂತಸೇನ’ ಕನ್ನಡ ನೆಲದಲ್ಲಿ ಕನ್ನಡ ಸಿನಿಮಾದ ಸ್ಪಷ್ಟ ಸ್ವರೂಪವನ್ನು ಸಾಬೀತು ಪಡಿಸಿದ ಚಲನಚಿತ್ರವಾಗಿದೆ.

‘ವಸಂತಸೇನ’ದ ವೈಶಿಷ್ಟ್ಯವೆಂದರೆ ಮೂಕಿಚಿತ್ರಗಳಿಗೆ ಅಂದು ಬಾಕ್ಸ್ ಆಫೀಸ್ ಸೂತ್ರವಾಗಿದ್ದ ಸ್ಟಂಟ್ಗಳಿಂದ ಹೊರತಾದ ಕತೆಯನ್ನು ಆಯ್ಕೆ ಮಾಡಿಕೊಂಡದ್ದು. ಸಾಹಿತಿಗಳನ್ನು ಒಳಗೊಂಡದ್ದು. ಸದಭಿರುಚಿಯನ್ನೇ ಅಭಿವ್ಯಕ್ತಿಸುವ ತಂಡವೊಂದು ಸಿನಿಮಾ ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಿ ಅದರ ಒಳಹೊಕ್ಕಿದ್ದು ಬಹು ಮುಖ್ಯವಾದ ಸಂಗತಿಯಾಗಿದೆ. ನಿರುಪಮಾ (೧೯೨೧)ದಿಂದ ಆರಂಭವಾದ ಕನ್ನಡ ಚಿತ್ರರಂಗದ ಇತಿಹಾಸ, ‘ವಸಂತಸೇನ’ದ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನಸೆಳೆದದ್ದು ಗಮನಾರ್ಹ ಸಂಗತಿ ಎನಿಸಿದೆ.

‘ವಸಂತಸೇನ’ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಮೋಹನ್ ಭವನಾನಿ. ಮುಂಬೈನ ಅಜಂತಾ ಸಿನಿಟೋನ್ ಮಾಲೀಕರಾಗಿದ್ದ ಭವನಾನಿ, ಜರ್ಮನಿಯಲ್ಲಿ ಚಲನಚಿತ್ರ ನಿರ್ಮಾಣ ಹಾಗೂ ಛಾಯಾಗ್ರಹಣ ತರಬೇತಿ ಪಡೆದಿದ್ದರು. ಮೈಸೂರು ದಸರಾ ವೀಕ್ಷಣೆಗೆಂದು ಬಂದವರು, ಅದರ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಇದೇ ಸಂದರ್ಭದಲ್ಲಿ ನಾಟಕಕಾರ ಟಿ.ಪಿ. ಕೈಲಾಸಂ ಅವರ ಪರಿಚಯವಾಯಿತು. ಸಾಹಿತ್ಯದ ಬಗ್ಗೆ ಇಬ್ಬರೂ ಚರ್ಚೆ ಮಾಡುತ್ತಿದ್ದಾಗ ಶೂದ್ರಕ ಮಹಾಕವಿಯ ‘ಮೃಚ್ಛ ಕಟಿಕ’ದ ಮಾತು ಬಂತು. ಈ ಕತೆಯನ್ನು ಚಲನಚಿತ್ರವಾಗಿಸುವ ಆಲೋಚನೆ ಭವನಾನಿಯವರಿಗೆ ಬಂದಾಗ, ಅದನ್ನು ಕೈಲಾಸಂ ಅನುಮೋದಿಸಿದರು. ಮಾತುಮಾತು ಮಥಿಸಿ, ಸದಭಿರುಚಿಯ ಮೂಕಿಚಿತ್ರವೊಂದು ಕನ್ನಡನಾಡಿನಲ್ಲಿ ಚಿಗುರಲಾರಂಭಿಸಿತು.

ಮೋಹನ್ ಭವನಾನಿಯವರೇ ಚಿತ್ರದ ಛಾಯಾಗ್ರಾಹಕರೂ, ನಿರ್ದೇಶಕರೂ ಆಗಬೇಕೆಂದು ತೀರ್ಮಾನವಾಯಿತು. ಅಂದಿನ ಕಾಲದ ಹೆಸರಾಂತ ಕಲಾವಿಮರ್ಶಕರಾಗಿದ್ದ ಜಿ. ವೆಂಕಟಾಚಲಂ ಅವರನ್ನು ಕಲಾನಿರ್ದೇಶಕರಾಗಿ ಒಪ್ಪಿಸಲಾಯಿತು. ನಾಟಕ ಹಾಗೂ ನೃತ್ಯದಲ್ಲಿ ಅನುಭವಿಗಳಾಗಿದ್ದ ಏಣಾಕ್ಷಿ ರಾಮರಾವ್ ಅವರನ್ನು ವಸಂತಸೇನೆ ಪಾತ್ರಕ್ಕೆ ಆಯ್ಕೆ ಮಾಡಲಾಯಿತು.

ಹಿಂದಿ ಮೂಕಿ ಚಿತ್ರಗಳ ಮೂಲಕ ಹೆಸರು ಮಾಡಿದ್ದ ಜೈಕಿಷನ್ ನಂದ ಅವರನ್ನು ಚಾರುದತ್ತನ ಪಾತ್ರಕ್ಕೆ ಆಯ್ಕೆಮಾಡಲಾಯಿತು. ಟಿ.ಪಿ. ಕೈಲಾಸಂ ಅವರು ಶಕಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಉಳಿದ ಮುಖ್ಯ ಪಾತ್ರಗಳಲ್ಲಿ ಡಾ. ಎನ್.ಎಸ್. ನಾರಾಯಣ ಶಾಸ್ತ್ರಿ, ನಳಿನಿ ತರ್ಕಾಡ್, ಕಮಲಾದೇವಿ ಚಟ್ಟೋಪಾಧ್ಯಾಯ, ಕತೆಗಾರ ಆನಂದ (ಅಜ್ಜಂಪುರ ಸೀತಾರಾಂ), ಡಾ. ಡಿ.ಕೆ. ಭಾರದ್ವಾಜ್, ಹರೀಂದ್ರ, ಕೆ. ಸೀತಾರಾಂ, ಬಿ.ಎಸ್. ರಾಮರಾವ್ ಮತ್ತು ವಿ. ಕೃಷ್ಣ ಆಯ್ಕೆಯಾದರು.

ಮೈಸೂರಿನ ಭರತನಾಟ್ಯಶೈಲಿಯ ನಾಟ್ಯಗುರು ಜಟ್ಟಿತಾಯಮ್ಮ ನೃತ್ಯ ಸಂಯೋಜನೆ ಮಾಡಿದ್ದರು. ರಂಗಭೂಮಿಯಲ್ಲಿ ಪ್ರಖ್ಯಾತರಾಗಿದ್ದ ರವಳಪ್ಪ ಮೇಕಪ್ ಹಾಗೂ ವೇಷಭೂಷಣಗಳ ಮೇಲ್ವಿಚಾರಕರಾಗಿದ್ದರು. ಡಾ. ವಿ. ಸೀತಾರಾಮಯ್ಯ ಮತ್ತು ವಿ. ವೆಂಕೋಬ ರಾವ್ ಅವರು ಸಲಹೆಗಾರ ರಾಗಿದ್ದರು.ಚಲನಚಿತ್ರವೆಂದರೆ ಮಾರುದೂರ ಎನ್ನುತ್ತಿದ್ದ ಕಾಲದಲ್ಲಿ ಬುದ್ಧಿಜೀವಿಗಳು ಒಂದುಗೂಡಿ ತಯಾರಿಸಿದ ಈ ಚಿತ್ರವನ್ನು ಕಲಾತ್ಮಕ ಚಿತ್ರವೆಂದೇ ಹೆಸರಿಸಬಹುದು.

ಹೊಯ್ಸಳ ಶಿಲ್ಪಕಲೆಗೆ ಪ್ರಖ್ಯಾತವಾದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಪರಿಸರ ಹಾಗೂ ಶ್ರೀರಂಗಪಟ್ಟಣದ ಟಿಪ್ಪು ಅರಮನೆ, ಶ್ರವಣಬೆಳಗೊಳ, ಬೆಂಗಳೂರಿನ ಲಾಲ್ ಬಾಗ್, ತಮಿಳುನಾಡಿನ ಮಧುರೆ, ರಾಮೇಶ್ವರ ದೇವಾಲಯಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಿತು. ಬೆಂಗಳೂರಿನ ರಿಚ್ಮಂಡ್ರಸ್ತೆಯಲ್ಲಿರುವ ‘ದಿಲ್ಕುಷ್’ ಕಟ್ಟಡದಲ್ಲಿ ಕಲಾನಿರ್ದೇಶಕ ಜಿ. ವೆಂಕಟಾಚಲಂ ಅವರು ಸೆಟ್ಗಳನ್ನು ನಿರ್ಮಿಸಿದ್ದರು. ಅಲ್ಲಿ ಹಲವಾರು ದೃಶ್ಯಗಳ ಚಿತ್ರೀಕರಣ ನಡೆಯಿತು.

‘ವಸಂತಸೇನ’ದ ಮತ್ತೊಂದು ವೈಶಿಷ್ಟ್ಯವೆಂದರೆ ಅದರ ಬಣ್ಣ. ಜರ್ಮನಿಯ ಯು.ಎಫ್.ಎ. ಸ್ಟುಡಿಯೊಸ್ನಲ್ಲಿ ಬೆಂಗಳೂರಿನಿಂದ ತೆಗೆದುಕೊಂಡು ಹೋಗಿದ್ದ ಕಪ್ಪುಬಿಳುಪು ಚಿತ್ರಕ್ಕೆ ಹ್ಯಾಂಡ್ಕಲರ್ ಹಾಕಿಸಿ ತರಲಾಯಿತು. ಎರಡು ವರ್ಷಗಳ ನಂತರ ಅಂದರೆ ೧೯೩೧ ರ ಏಪ್ರಿಲ್ ೧೧ರಂದು ಈ ಚಿತ್ರ ಮತ್ತೆ ನ್ಯೂ ಎಂಪೈರ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಮೂರುವಾರಗಳ ಕಾಲ ಪ್ರದರ್ಶನಗೊಂಡಿತು. ಜರ್ಮನಿಯಲ್ಲಿಯೂ ತೆರೆಕಂಡಿತ್ತು ಎನ್ನಲಾಗಿದೆ. ಚಿತ್ರರಂಗದ ಶೈಶವಾವಸ್ಥೆಯಲ್ಲಿಯೇ ಬಣ್ಣದ ಪ್ರಯೋಗ ಅವಿಸ್ಮರಣಿಯ.

ಯಾವುದೇ ಸ್ಟುಡಿಯೊ ಸೌಲಭ್ಯವಾಗಲಿ, ಸ್ಥಳೀಯವಾಗಿ ಬೆಳೆದ ತಾಂತ್ರಿಕ ಜ್ಞಾನವಾಗಲಿ ಇನ್ನೂ ಪರಿಪಕ್ವವಾಗದಿದ್ದ ಕಾಲದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯ ದೃಷ್ಟಿಯಿಂದ ಸಂಪೂರ್ಣವಾಗಿ ಅಂದಿನ ಮೈಸೂರು ರಾಜ್ಯದಲ್ಲೇ ಚಿತ್ರೀಕರಣವಾದ ವಸಂತಸೇನ ಮೂಕಿಚಿತ್ರವನ್ನು ಭಾರತದ ರಾಷ್ಟ್ರೀಯ ಚಲನಚಿತ್ರ ಪ್ರತಿಭೆಯ ಅಪೂರ್ವಸಂಗಮ ಎಂದೇ ಬಣ್ಣಿಸಲಾಗಿದೆ. ಹೀಗಾಗಿ ಕನ್ನಡಚಿತ್ರರಂಗಕ್ಕೆ ಎಂಬತ್ತರ ಸಂಭ್ರಮಕ್ಕಿಂತ ತೊಂಬತ್ಮೂರರ ಸಂಭ್ರಮವೇ ಹೆಚ್ಚು ಹೊಳಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.