ಮನುಷ್ಯ ‘ಪುರುಷೋತ್ತಮ’ ನಾಗಬೇಕಾದರೆ ಏನೆಲ್ಲಾ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೋ ಆ ಎಲ್ಲಾ ಆದರ್ಶಗಳನ್ನು ಶಿಕ್ಷಣ ನೀಡಬೇಕೆಂದು ನಾವು ಬಯಸುತ್ತೇವೆ. ಈ ಆದರ್ಶಗಳನ್ನು ಹೇಳಿದ ಮರುಕ್ಷಣವೇ ನಾವು ನಿಗದಿಪಡಿಸುವ ಶಿಕ್ಷಣದ ಮತ್ತೊಂದು ಉದ್ದೇಶ ಅನ್ನ ಸಂಪಾದನೆಗೆ ಸಂಬಂಧಪಟ್ಟಿದ್ದು. ಶಿಕ್ಷಣ ಜೀವನಾಧಾರಿತವಾಗಿರಬೇಕು, ಜೀವನದ ನಿಜ ಪ್ರಸಂಗಗಳಲ್ಲಿ ಉಪಯೋಗಕ್ಕೆ ಬಾರದ ತತ್ವದಿಂದ ಏನು ಉಪಯೋಗ? ಇದು ಮುಳುಗಲಿದ್ದ ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಕಾಂಡ ಪಂಡಿತನ ಪ್ರಲಾಪದಂತೆ. ವೇದ ಉಪನಿಷತ್ತುಗಳನ್ನು ಕರಗತ ಮಾಡಿಕೊಂಡಿದ್ದ ಪಂಡಿತನಿಗೆ ಈಜು ಬಾರದು. ಇದಾವುದನ್ನೂ ಕಲಿಯದ ಅಂಬಿಗನಿಗೆ ಈಜು ಬರುತ್ತಿತ್ತು. ಈ ವಿಶೇಷ ಪ್ರಸಂಗದಲ್ಲಿ ಕೊನೆಗೆ ಉಪಯೋಗಕ್ಕೆ ಬಂದದ್ದು ಈಜು.

ಆದರೆ ಜೀವನದ ಬಹಳಷ್ಟು ಸಂದರ್ಭಗಳಲ್ಲಿ ತಾತ್ವಿಕ ಜ್ಞಾನ ಪ್ರಶ್ನಾತೀತ ಸ್ಥಾನವನ್ನು ಅಲಂಕರಿಸುತ್ತದೆ. ಶ್ರಮ ಯಾವಾಗಲೂ ಕನಿಷ್ಠ ಸ್ಥಾನಕ್ಕೆ ಸೇರಿ ಹೋಗುತ್ತದೆ. ವೇದ ಉಪನಿಷತ್ತುಗಳು ಹೊಟ್ಟೆ ತುಂಬಿದ, ಸೌಖ್ಯವಾಗಿ ಅರಮನೆ ಆಶ್ರಯದಲ್ಲಿ ಬದುಕುವ ಪಂಡಿತರ ಪಾಲು. ಈ ಸಮೀಕರಣ ಇಂದಿಗೂ ಪರ್ಯಾಯ ರೂಪ ತೊಟ್ಟು ಚಾಲ್ತಿಯಲ್ಲಿರುವ ವಿದ್ಯಾಮಾನ. ಇಂದು ದುಡಿಯುವ ವರ್ಗ ಹಳ್ಳಿಗಳಲ್ಲಿ ವಾಸಿಸುತ್ತಾರೆ. ತತ್ವ ಚಿಂತನೆ ಮಾಡಬಲ್ಲವರು ದೇಶದ, ಶಿಕ್ಷಣದ, ರಾಜಕೀಯದ ರೀತಿನೀತಿಗಳನ್ನು ರೂಪಿಸುವವರು ಪಂಡಿತರು. ಇವರು ಪಟ್ಟಣಗಳಲ್ಲಿ ವಾಸ ಮಾಡುತ್ತಾರೆ. ಪಟ್ಟಣಗಳಲ್ಲಿ ವಾಸಮಾಡುವ ದುಡಿಯುವ ವರ್ಗವೂ ಈ ತಾತ್ವಿಕ ಚಿಂತನೆಗಳಿಂದ ದೂರವಾಗೇ ಉಳಿಯುತ್ತವೆ. ಹೀಗೆ ಯಥಾಸ್ಥಿತಿ ಮುಂದುವರೆದಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಎಷ್ಟರಮಟ್ಟಿಗೆ ಪೋಷಿಸುತ್ತದೆ ಎಂಬ ಪ್ರಶ್ನೆ ಹುಟ್ಟುತ್ತದೆ. ಏಕೆಂದರೆ ಶಿಕ್ಷಣ ಎಲ್ಲಬಗೆಯ ಸಾಮಾಜಿಕ ಅಸಮಾನತೆಗಳನ್ನು ಸೃಷ್ಟಿಸಬಲ್ಲ ಪಿತೂರಿಗಳನ್ನು ಸುಪ್ತವಾಗಿ ಪೋಶಿಸುವುದನ್ನು ನಾವು ಗುರುತಿಸದೇ ಇರಲಾಗುವುದಿಲ್ಲ.

ಶಿಕ್ಷಣದ ನಿರೀಕ್ಷೆಗಳನ್ನು ನಾವು ಸ್ಥೂಲವಾಗಿ ಎರಡು ಆಯಾಮಗಳಲ್ಲಿ ಗುರುತಿಸಬಹುದು. ಮನುಷ್ಯ ತನ್ನ ಅಮೋಘ ಸಾಧ್ಯತೆಗಳನ್ನು ತನಗೆ ತಾನೆ ತೆರೆದುಕೊಳ್ಳುವ ಸಾಧನವಾಗಬೇಕು. ಈ ಪ್ರಕ್ರಿಯೆಯಲ್ಲಿ ಅವನು ವಾಸ್ತವದಿಂದ ಅತೀತಕ್ಕೆ ಏರಬೇಕಾದ್ದು ಅನಿವಾರ್ಯ. ಎರಡನೆಯ ನಿರೀಕ್ಷೆ ಎಂದರೆ ಅವನು ಉತ್ಪಾದನೆಯಲ್ಲಿ ನೇರವಾಗಿ ಭಾಗವಹಿಸದೆ ಕೇವಲ ತತ್ವ ಚಿಂತನೆ ಮಾಡಿ ಅಂದಿನ ಊಟಕ್ಕೆ ಹಕ್ಕುದಾರನಾಗಬಾರದು. ಆದರೆ ಈ ಶ್ರಮದಿಂದ ಸಾಧ್ಯವಾಗುವ ಉತ್ಪಾದನೆ ಬೌದ್ಧಿಕ ಚಿಂತನೆಯಿಂದ ಹುಟ್ಟಬಹುದಾದ ಸೃಜನಶೀಲ ಕೃತಿಗಳಿಗೆ ಹೋಲಿಸಿದರೆ ಅತಿ ಸಾಮಾನ್ಯ. ಹಾಗಾಗಿ ‘ಶ್ರಮ’ ವನ್ನು ಆಶ್ರಯಿಸಿ ಬದುಕುವ ಮನುಷ್ಯ ಏನನ್ನೋ ಸಾಧಿಸಿದ ಸಂತೃಪ್ತಿಯನ್ನು ಶ್ರಮದಿಂದಾಗಿ ಪಡೆಯಲು ಸಾಧ್ಯವಾಗಲಾರದು. ಏಕೆಂದರೆ ಯಾರೂ ಸಾಧಿಸದ ಕಾರ್ಯ ಇದೇನಲ್ಲ. ಆದರೆ ‘ರಾಮಾಯಣ ದರ್ಶನಂ’ ನಂತಹ ಕೃತಿ ರಚನೆ ಬಹುಶಃ ಎಲ್ಲರ ದೃಷ್ಟಿಯಲ್ಲಿ ಅದ್ವಿತೀಯ ಸಾಧನೆ. ಮನುಷ್ಯನ ಮನಸ್ಸಿಗೆ ಒಂದು ಬಹಳ ವಿಚಿತ್ರವಾದ ತುಡಿತವಿದೆ. ಅದೇನೆಂದರೆ ಅದ್ವಿತೀಯವಾದ ಏನೋ ಒಂದನ್ನು ಸಾಧಿಸುವ ಮೂಲಕ ತೃಪ್ತಿ ಪಡೆಯುವುದು. ಕೊನೆಗೆ ಈ ಸಾಧನೆಯ ಮೂಲಕ ಬರುವ ತೃಪ್ತಿ ಪರ್ಯಾವಸನವಾಗುವುದು ಎಲ್ಲಿ ಎಂದರೆ ಸಾಧಿಸಿದ್ದು-ಸಾಧಿಸದೇ ಇದ್ದದ್ದು ಎರಡು ಒಂದೇ ಎಂಬ ಸತ್ಯ ಅರಿವಾಗಿ ಅವನು ಸಾಧಿಸಿದುದರ ಭ್ರಮೆನಿರಸನವಾದಾಗ ಮಾತ್ರ. ಹೀಗೆ ದೈಹಿಕ ಶ್ರಮ ಬದುಕುಳಿಯಲು ಅನಿವಾರ್ಯವಾದರೂ ಈ ಶ್ರಮದ ಸಾರ್ಥಕ್ಯವನ್ನು ಬೌದ್ಧಿಕ ಸಾಧನೆ ಮತ್ತು ಅದರಿಂದ ಹುಟ್ಟುವ ತೃಪ್ತಿ ಹಿಂದೆಹಾಕುತ್ತದೆ ಮತ್ತು ಎಲ್ಲಾ ಕಾಲಘಟ್ಟಗಳಲ್ಲೂ ಅದನ್ನು ಮೆಟ್ಟಿ ನಿಲ್ಲುತ್ತದೆ.

ಒಟ್ಟಿನಲ್ಲಿ ಶಿಕ್ಷಣದ ಆದರ್ಶಗಳು, ದ್ವಂದ್ವಗಳು ಅನಿವಾರ್ಯವಾಗಿ ದುಡಿಯುವ ವರ್ಗ ಮತ್ತು ಆಳುವ ವರ್ಗಗಳನ್ನು ಸೃಷ್ಟಿಸಲು ಕಾರಣವಾಗಿದೆ. ಹಾಗಾಗಿ ನಮ್ಮ ಇಂದಿನ ಶಿಕ್ಷಣದ ನಿರೀಕ್ಷೆಗಳನ್ನು ಕುರಿತು ಮತ್ತಷ್ಟು ಆಳವಾದ ಚಿಂತನೆ ಅಗತ್ಯ. ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಇಂದಿನ ಶಿಕ್ಷಣದ ನಿರೀಕ್ಷೆಗಳು ಹೊಸತಿರುವುಗಳನ್ನು ಪಡೆಯುತ್ತಿವೆ. ಈ ತಿರುವುಗಳ ಪ್ರೇರಕ ಶಕ್ತಿ ಜಾಗತೀಕರಣ ಎಂದು ಬೇರೆ ಹೇಳಬೆಕಾಗಿಲ್ಲ. ಬಹಳ ಮುಖ್ಯವಾಗಿ ಶಿಕ್ಷಣ ಸಾಮಾಜಿಕ ಜವಾಬ್ದಾರಿಯನ್ನು ತಂದು ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಎನ್.ಎಸ್.ಎಸ್. ಇತ್ಯಾದಿ ಕಾರ್ಯಕ್ರಮಗಳೆಲ್ಲ ಹೆಸರಿಗೆ ಮಾತ್ರ ಇರುವ ಕಾರ್ಯಕ್ರಮಗಳು.

ಈ ಎಂಟು ಹತ್ತು ದಿನಗಳ ಕಾರ್ಯಕ್ರಮ ಯುವಕ-ಯುವತಿಯರಿಗೆ ಒಂದು ಪಿಕ್ನಿಕ್ ಅನುಭವವನ್ನು ಕೊಡಬಹುದೇ ಹೊರತು ಅದಕ್ಕಿಂತ ಹೆಚ್ಚಿನದೇನನ್ನು ಕೊಡಲಾರದು. ಹಳ್ಳಿಗಳಲ್ಲಿ ವಾಸ್ತವ್ಯ ಹೂಡುವ ಯುವಕರು-ಯುವತಿಯರು ತಮ್ಮದೇ ಹಳ್ಳಿಯನ್ನು ಹೊಸ ದೃಷ್ಟಿಯಿಂದ ನೋಡಲು ಸಾಧ್ಯವಾಗುವುದು ನಿಜ. ಆದರೆ ಇದರ ಮುಂದುವರಿದ ಭಾಗವಾಗಿ ಶಾಲಾ ಕಾಲೇಜುಗಳು ಏನನ್ನೂ ಮಾಡುವುದಿಲ್ಲ. ಈ ಸಂದರ್ಭದಲ್ಲಿ ಒಂದು ಘಟನೆ ನೆನಪಿಗೆ ಬರುತ್ತಿದೆ.

ಒಂದು ಶಾಲೆಯ ಪಕ್ಕದಲ್ಲಿ ದೊಡ್ಡದೊಂದು ರಾಜಕೀಯ ಸಮಾವೇಶ ನಡೆದು ಅವರು ಬಳುವಳಿಯಾಗಿ ಬಿಟ್ಟುಹೋದ ಸಾವಿರಾರು ಖಾಲಿ ಪ್ಲಾಸ್ಟಿಕ್ ಲೋಟಗಳು, ತಿಂದು ಅಸ್ತವ್ಯಸ್ತವಾಗಿ ಎಸೆದ ಪ್ಲಾಸ್ಟಿಕ್ ತಟ್ಟೆಗಳು ಹರಡಿದ್ದವು. ಒಂದು ವೇಳೆ ಎನ್.ಎಸ್.ಎಸ್. ಕ್ಯಾಂಪ್ ಆ ಕಾಲದಲ್ಲಿ ಆ ಸ್ಥಳದಲ್ಲಿ ನಡೆದಿದ್ದರೆ ಶಿಬಿರಾರ್ಥಿಗಳು ಈ ಕಸವನ್ನು ಹುಮ್ಮಸ್ಸಿನಿಂದ ಸ್ವಚ್ಛ ಮಾಡುತ್ತಿದ್ದರೋ ಏನೋ? ಆದರೆ ಕ್ಯಾಂಪ್ ಇಲ್ಲದ್ದರಿಂದ ಈ ಕಸದ ರಾಶಿಯ ಕಡೆ ಶಾಲೆಯ ಸಿಬ್ಬಂದಿಯಾಗಲೀ, ಮಕ್ಕಳಾಗಲೀ ಯಾರೂ ಗಮನ ಹರಿಸಲಿಲ್ಲ.

ಮುನಿಸಿಪಾಲಿಟಿಯವರಂತು ಈ ಕಡೆಗೆ ಕಣ್ಣು ಕೂಡ ಹಾಕಲಿಲ್ಲ. ಸುತ್ತ ಅಸಹ್ಯವಾಗಿ ಬಿದ್ದಿದ್ದ ಈ ಕಸವನ್ನು, ಸಮಾವೇಶವನ್ನು ಕುರಿತು ಬಯ್ಯುತ್ತಾ, ವಾಸನೆಯನ್ನು ಸಹಿಸುತ್ತಾ ಇಡೀ ಶಾಲೆ ತನ್ನ ಅಸಹನೆಯನ್ನು ದಾಖಲಿಸಿತು. ಆದರೆ ಕೈಮುಟ್ಟಿ ಏನನ್ನು ಮಾಡಲೂ ತಯಾರಿರಲಿಲ್ಲ. ನಮ್ಮ ಕಾರ್ಯಕ್ರಮಗಳನ್ನು ನಾವು ಅರ್ಥ ಮಾಡಿಕೊಳ್ಳುವ ರೀತಿ ನೀತಿಗಳೇ ಹೀಗೆ. ಶಿಕ್ಷಣ ನಮಗೆ ಕಲಿಸುತ್ತಿರುವುದು ಈ ಬಗೆಯ ನಿಲುವುಗಳನ್ನೇ. ನಮ್ಮ ಕಲಿಕೆಯನ್ನು ನಾವು ನಮ್ಮ ನಿಜ ಜೀವನದಲ್ಲಿ ಅನ್ವಯಿಸುವ ಸಲುವಾಗಿ ಕಲಿಯುತ್ತಿದ್ದೇವೆ ಎಂದು ನಾವು ಭಾವಿಸಿಯೇ ಇಲ್ಲ.

ನಮ್ಮ ಶಿಕ್ಷಣ ಕುರಿತಾದ ತಾತ್ವಿಕ ಚಿಂತನೆಗಳಲ್ಲಿ ‘ಬೌದ್ಧಿಕತೆ’ ಹಾಗೂ ‘ಶ್ರಮಕ್ಕೆ’ ಸಂಬಂಧಪಟ್ಟ ಆದರ್ಶಗಳ ನಡುವೆ ಸ್ವಲ್ಪಮಟ್ಟಿನ ಸಮತೋಲನವನ್ನು ಕಾಯ್ದು ಕೊಂಡಿದ್ದೇವೆ. ಸ್ವಾಮಿ ವಿವೇಕಾನಂದರ ಚಿಂತನೆಗಳಾಗಲಿ, ಟಾಗೂರ್ಅವರ ಚಿಂತನೆಗಳಾಗಲೀ ಅಥವಾ ಗಾಂಧೀಜಿಯವರ ನಯಿತಾಲೀಮ್ ಪರಿಕಲ್ಪನೆಯಾಗಲೀ ಬೌದ್ಧಿಕ ಹಾಗೂ ದೈಹಿಕ ಶ್ರಮಗಳ ಸಮತೋಲನವನ್ನು ಪ್ರತಿಪಾದಿಸುತ್ತವೆ. ಆದರೆ ಇಂದಿನ ವಾಸ್ತವ ವಿದ್ಯಮಾನವನ್ನು ಗಮನಿಸಿದಾಗ ನಮ್ಮ ಶಿಕ್ಷಣ ಈ ತಾತ್ವಿಕ ನಿರೀಕ್ಷೆಗಳನ್ನಾಗಲಿ ಅಥವಾ ವಾಸ್ತವ ಜಗತ್ತಿನ ನಿರೀಕ್ಷೆಗಳನ್ನಾಗಲಿ ಎರಡನ್ನೂ ಹುಸಿಗೊಳಿಸಿದೆ. ಹಾಗಾದರೆ ಇಂದು ನಾವು ಕೊಡುತ್ತಿರುವ ಶಿಕ್ಷಣದ ಸುಪ್ತ ನಿರೀಕ್ಷೆಗಳಾದರೂ ಏನು?
ಈ ಸಂದರ್ಭದಲ್ಲಿ ಮತ್ತೊಂದು ಗಂಭೀರವಾದ ಪ್ರಶ್ನೆ ಎದುರಾಗುತ್ತದೆ. ಶಿಕ್ಷಣ ಬದುಕನ್ನು ಗಂಭೀರವಾಗಿ ಪರಿಗಣಿಸಿದೆಯೇ? ಎಂದರೆ ನಮ್ಮ ಶಿಕ್ಷಣ ಜೀವನ ಪ್ರೀತಿಯುಳ್ಳ ಮನುಷ್ಯನನ್ನು ಗುರುತಿಸುತ್ತಿದೆಯೇ? ನಮ್ಮ ಶಿಕ್ಷಣ ರೂಪಿಸುತ್ತಿರುವ ಮನುಷ್ಯ ಸಂಬಂಧಗಳು ಈ ಜೀವನ ಪ್ರೀತಿಯನ್ನು ಉಳಿಸುವ ಸಾಧನವಾಗಿದೆಯೆ? ನಮ್ಮ ಶಿಕ್ಷಣದ ಪ್ರಧಾನ ಆದ್ಯತೆ ಯಾವುದು? ಎಲಿಯಟ್ ಕವಿಯ ಈ ಸಾಲುಗಳನ್ನು ನೋಡಿ-

Where is the life we have lost in living,
Where is the wisdom we have lost in knowledge?
Where is the knowledge we have lost in Information?

ಈ ಸಾಲುಗಳು ಮನುಷ್ಯನ ಬದುಕು ಶಿಕ್ಷಣಕ್ಕಿಂತ ಮುಖ್ಯ ಎಂಬ ಸತ್ಯವನ್ನು ಹೇಳುತ್ತವೆ. ಏಕೆಂದರೆ ಶಿಕ್ಷಣ ಇರುವುದೇ ಬದುಕಿಗಾಗಿ. ಶಿಕ್ಷಣ ಜೀವನಕ್ಕೆ ಊರುಗೋಲು ಇದ್ದಂತೆ. ಈ ಊರುಗೋಲು ಮನುಷ್ಯನಿಗಿಂತ ಮುಖ್ಯವಾದೀತು ಹೇಗೆ? ಆದರೆ ನಮ್ಮ ಇಂದಿನ ಶಿಕ್ಷಣ ಈ ಊರುಗೋಲನ್ನೇ ವೈಭವೀಕರಿಸಿದಂತೆ ಕಾಣುತ್ತದೆ. ಮನುಷ್ಯನ ಪ್ರಧಾನ ದೌರ್ಬಲ್ಯ-ಸ್ವಾರ್ಥವನ್ನೇ ಬಂಡವಾಳ ಮಾಡಿಕೊಂಡಿರುವ ಜಾಗತೀಕರಣ ಮನುಷ್ಯ ತನ್ನ ವ್ಯಕ್ತಿಗತ ತೆವಲುಗಳನ್ನು ಹೆಚ್ಚಿಸಿಕೊಂಡು, ಈ ತೆವಲುಗಳನ್ನು ಪೋಷಿಸುವ ಜಾಗತೀಕರಣದ ಭಾಗವಾಗಿ ಬದುಕುವುದನ್ನು ಕಲಿಸುತ್ತದೆ. ಇಂದು ಶಿಕ್ಷಣ ಪಡೆಯುತ್ತಿರುವ ತಾತ್ವಿಕ ತಿರುವುಗಳು ಇದಕ್ಕೆ ಪೂರಕವಾಗೇ ಇದೆ. ನಮ್ಮ ಸ್ವಾಮಿ ವಿವೇಕಾನಂದರ, ಗಾಂಧೀಜಿಯವರ ಅಥವಾ ಟಾಗೂರರ ಶಿಕ್ಷಣಕ್ಕೆ ಸಂಬಂಧಪಟ್ಟ ತಾತ್ವಿಕ ಚಿಂತನೆಗಳೆಲ್ಲ ಮನುಷ್ಯ ಮೂಲತಃ ‘ಏನಾಗಿರಬೇಕು’? ಎಂಬುದನ್ನು ಕುರಿತ ಚಿಂತನೆಗಳು. ಆದರೆ ಜಾಗತೀಕರಣದ ಪ್ರಭಾವದಲ್ಲಿ ಮನುಷ್ಯ ಏನಾಗಿದ್ದರೂ ಚಿಂತೆಯಿಲ್ಲ ಅವನ ‘ಸಾಮರ್ಥ್ಯ’ಗಳೇನು ಎಂಬುದರ ಕಡೆ ನಮ್ಮ ಶಿಕ್ಷಣ ಗಮನ ಕೊಡುತ್ತಿದೆ. ಏಕೆಂದರೆ ಮನುಷ್ಯನ ಸಾಮರ್ಥ್ಯಗಳು ಜಾಗತೀಕರಣಾಧಾರಿತ ಬಂಡವಾಳಶಾಹಿಗಳಿಗೆ ಅತ್ಯಗತ್ಯ. ಅದು ತನ್ನ ವ್ಯಾಪಾರವನ್ನು ‘ನಿಖರತೆ’ ಮತ್ತು ‘ವೇಗ’ ಎಂಬ ಎರಡು ಸೌಲಭ್ಯಗಳನ್ನು ಅಸಾಮಾನ್ಯ ತಾಂತ್ರಿಕ ಸಾಧನಗಳ ಮೂಲಕ ಇಡೀ ಜಗತ್ತಿಗೆ ನೀಡುತ್ತಿವೆ. ಆದರೆ ನಿಜವಾಗಿ ನೋಡಿದರೆ ಈ ಪ್ರಮಾಣದ ‘ನಿಖರತೆ’ ಮತ್ತು ‘ವೇಗ’ ನಮ್ಮ ದಿನನಿತ್ಯದ ಬದುಕಿಗೆ ಅಗತ್ಯವೇ ಇಲ್ಲ. ಇದನ್ನು ಒಂದು ಅಗತ್ಯ ಎಂಬಂತೆ ಬಿಂಬಿಸಿ ಜಾಹೀರಾತುಗಳ ಮೂಲಕ ಇದು ಬದುಕಿಗೆ ಅತ್ಯಾವಶ್ಯಕ ಎಂಬ ಭ್ರಮೆಯನ್ನು ಶ್ರೀಸಾಮಾನ್ಯರ ತಲೆಗೆ ತುಂಬಲಾಗುತ್ತಿದೆ. ಇದರಿಂದಾಗಿ ಶ್ರೀಸಾಮಾನ್ಯ ಅಸಹಜವಾದ ನಡವಳಿಕೆಗಳನ್ನು ಬೆಳೆಸಿಕೊಂಡು ಆತಂಕದಲ್ಲಿ ನರಳುತ್ತ ಜೀವನ ಕಳೆಯುವಂತಾಗಿದೆ. ಈ ಇಡೀ ಜಾಗತೀಕರಣದ ವಿದ್ಯಾಮಾನಕ್ಕೆ ಇಂದಿನ ಶಿಕ್ಷಣವು ಪೂರಕವಾಗಿರುವುದು ದೊಡ್ಡ ದುರಂತ. ಬೇಡಿಕೆಗೆ ತಕ್ಕಂತೆ ಶಿಕ್ಷಣದ ರೀತಿ ನೀತಿಗಳು ರೂಪುಗೊಳ್ಳುವುದರಿಂದ ಬೇಡಿಕೆಗೆ ತಕ್ಕಂತಹ ಶಿಕ್ಷಣ ನಮ್ಮ ಶಾಲಾ ಕಾಲೇಜುಗಳಲ್ಲಿ ತಾವೇ ತಾವಾಗಿ ಅಗತ್ಯ ಸ್ವರೂಪಗಳನ್ನು ಪಡೆದುಕೊಳ್ಳುತ್ತಿವೆ. ಶಿಕ್ಷಣದ ಈ ಸ್ವರೂಪಗಳು ಬಹುಸಂಖ್ಯಾತರ ಆಶಯಗಳನ್ನು ಪೂರೈಸುತ್ತಿರುವುದರಿಂದ ಇವು ಸರಿಯಲ್ಲ. ನಿಮ್ಮ ಶಿಕ್ಷಣ ನೀತಿಯನ್ನು ಬದಲಿಸಿ ಎಂದು ಸ್ವಾಮಿ ವಿವೇಕಾನಂದರನ್ನಾಗಲೀ, ಗಾಂಧೀಜಿಯನ್ನಾಗಲೀ ಅಥವಾ ಟಾಗೂರರನ್ನಾಗಲೀ ಉದಾಹರಿಸಿ ಹೇಳಲು ಸಾಧ್ಯವಿಲ್ಲ. ಹೇಳಿದರೆ ಕೇಳುವವರೂ ಇಲ್ಲ. ಈ ಸಂದರ್ಭದಲ್ಲಿ ಇಡೀ ಮನುಕುಲ ಕಣ್ಣು ಮುಚ್ಚಿ ಒಂದು ದೊಡ್ಡ ಪ್ರಪಾತದೆಡೆಗೆ ನಡೆಯುತ್ತಿರುವ ದುರಂತ ದೃಶ್ಯ ಕಂಡಂತೆ ಭಾಸವಾಗುತ್ತದೆ.

ಈ ಎಲ್ಲ ಗೋಜಲಿನಿಂದ ಹೊರನಿಂತು ಶಿಕ್ಷಣ ತಪಸ್ಸನ್ನು ಕೈಗೊಂಡ ಅನೇಕ ಪರ್ಯಾಯ ಶಾಲೆಗಳಿವೆ. ಆದರೆ ಹೊಸದಾಗಿ ಬಂದ ಶಿಕ್ಷಣ ಹಕ್ಕು ಕಾಯ್ದೆ ಇಂತಹ ಪರ್ಯಾಯ ಪ್ರಯೋಗಗಳಿಗೆ ಕಡಿವಾಣ ಹಾಕಬಹುದು. ಈ ಕಾಯ್ದೆ ಸಮಾನ ಶಿಕ್ಷಣದ ಆಶಯಗಳನ್ನು ಎತ್ತಿ ಹಿಡಿದರೂ ಎಲ್ಲವನ್ನೂ ಸರಾಸರಿಗೊಳಿಸುವ ಇತರೆಲ್ಲಾ ಕಾಯ್ದೆದೆಗಳಂತೆ ಶಿಕ್ಷಣದಲ್ಲಿ ಹೊಸ ಸಾಧ್ಯತೆಗಳ ಪ್ರಯೋಗಕ್ಕೂ ಅವಕಾಶ ನೀಡದಿರಬಹುದು. ಹಾಗಾಗಿ ಈ ಪರ್ಯಾಯ ಶಾಲೆಗಳ ಸೃಜನಶೀಲ ಪ್ರಯೋಗಗಳು ಮತ್ತು ಹೊಸ ಅನ್ವೇಷಣೆಗಳು ಕಾಯ್ದೆ ಉದಾರವಾಗದೆ ಇದ್ದರೆ ಇಲ್ಲಿಗೆ ಮುಗಿದು ಹೋಗಬಹುದು. ಈ ಎಲ್ಲ ಕಾರಣಗಳಿಂದ ನಾವು ಶಿಕ್ಷಣದ ನಿರೀಕ್ಷೆಗಳನ್ನು ಹೆಚ್ಚು ಸ್ಪಷ್ಟವಾಗಿ ಚಿಂತಿಸಬೇಕಾದ್ದು ಬಹಳ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.