ನನ್ನ ದಾನಿಗಳಲ್ಲಿ ಒಬ್ಬರು ತಾವು ಹುಟ್ಟಿ ಬೆಳೆದ ಕುಗ್ರಾಮವನ್ನು ಬಿಟ್ಟು ಅಮೆರಿಕಾದಲ್ಲಿ ನೆಲೆಸಿ ದೊಡ್ಡ ಕಂಪೆನಿಯೊಂದನ್ನು ಕಟ್ಟಿ ಅಪಾರ ಹಣ ಗಳಿಸಿದರು. ಅವರು ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಹಣದ ಮುಗ್ಗಟ್ಟು ಉಂಟಾಯಿತು. ಇವರ ಕಷ್ಟವನ್ನರಿತ ಅನಾಮಧೇಯನೊಬ್ಬ ಇವರಿಗೆ ಅಗತ್ಯವಾದ ಹಣ ಒದಗಿಸಿ ಒಂದು ಸಂದೇಶವನ್ನು ನೀಡಿದ್ದ. ‘ನಾನು ಯಾರೆಂದು ತಿಳಿಯುವ ಅಗತ್ಯ ನಿನಗಿಲ್ಲ; ನಾನು ಕೊಡುತ್ತಿರುವ ಹಣವನ್ನು ನೀನು ಹಿಂತಿರುಗಿಸುವ ಅಗತ್ಯವೂ ಇಲ್ಲ. ಆದರೆ ನೀನು ಮುಂದೆ ಒಂದು ದಿನ ಹಣ ಗಳಿಸಿದಾಗ ನಾನು ನಿನಗೆ ಸಹಾಯ ಮಾಡಿದಂತೆ ನೀನು ಸಹ ಮತ್ತೊಬ್ಬರಿಗೆ ಸಹಾಯ ಮಾಡು’ ಈ ಸಂದೇಶದಿಂದ ಪ್ರಭಾವಿತರಾದ ಇವರು ಅಮೆರಿಕಾದಲ್ಲೇ ಅನೇಕರಿಗೆ ನೆರವು ನೀಡುತ್ತಿದ್ದರು. ಆದರೆ ತಮ್ಮ ಕಂಪೆನಿಯ ಬಿಡುವಿಲ್ಲದ ಕೆಲಸಗಳ ನಡುವೆ ಹಾವೇರಿ ಜಿಲ್ಲೆಯಲ್ಲಿದ್ದ ತಮ್ಮ ಗ್ರಾಮಕ್ಕೆ ಭೇಟಿ ನೀಡಲು ಸಾಧ್ಯವಾಗಲೇ ಇಲ್ಲ.

ಈ ಭೇಟಿ ಸಾಧ್ಯವಾಗಿದ್ದು ಸುಮಾರು 45 ವರ್ಷಗಳ ನಂತರ. ನಾನೂ ಅವರೊಡನೆ ಹೋಗಿದ್ದೆ. ಹಳೆಯ ನೆನಪುಗಳೆಲ್ಲ ಅವರ ಸ್ಮೃತಿಪಟಲದಲ್ಲಿ ಒಂದೊಂದಾಗಿ ತೆರೆದುಕೊಂಡವು. ಅವರ ಹಳ್ಳಿಯ ಮನೆ ಅಂದು ಇದ್ದಂತೆ ಇಂದೂ ಇತ್ತು. ರಸ್ತೆಗಳು, ಜೋಪಡಿಗಳು, ದೇವಸ್ಥಾನ ಹೀಗೆ ಎಲ್ಲವೂ ಇದ್ದ ಹಾಗೆಯೇ ಇದ್ದುದನ್ನು ನನಗೆ ವರ್ಣಿಸಿದರು. ಜನಸಂಖ್ಯೆ ಮಾತ್ರ ಹೆಚ್ಚಾಗಿತ್ತು. ನಲವತ್ತು-ಐವತ್ತು ಎಕರೆ ಜಮೀನು ಹೊಂದಿದ್ದ ಅಂದಿನ ಸಂಪದ್ಭರಿತ ಮನೆಗಳು ಈಗ ಮಕ್ಕಳು ಮೊಮ್ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಇದ್ದ ಕೃಷಿ ಭೂಮಿಯನ್ನೇ ಇವರೆಲ್ಲರೂ ಹಂಚಿಕೊಂಡಿದ್ದರಿಂದ ಸಣ್ಣ ಹಿಡುವಳಿದಾರರೇ ಎಲ್ಲೆಲ್ಲೂ ಕಾಣುತ್ತಿದ್ದರು.

ಒಟ್ಟಿನಲ್ಲಿ ಯಾವುದೇ ಪ್ರಗತಿಯನ್ನು ಕಾಣದ ತನ್ನೂರಿನ ಸ್ಥಿತಿ ಈ ನನ್ನ ಸ್ನೇಹಿತನ ನೆಮ್ಮದಿ ಕೆಡಿಸಿತು. ಅವರು ಚಿಂತಾಕ್ರಾಂತರಾದರು, ಹತಾಶೆಯ ಕಪ್ಪುಛಾಯೆ ಅವರ ಮುಖವನ್ನು ಆವರಿಸಿತು. ತಮ್ಮ ಮನೆಯ ಜಗುಲಿಯ ಮೇಲೆ ಸುಸ್ತಾಗಿ ಕುಳಿತು ಬಿಟ್ಟರು. ಇವರ ನೆಂಟರಿಷ್ಟರು ಹಳೆಯ ಪರಿಚಿತರು ಸುತ್ತುವರಿದರು. ಈ ಊರಿನ ಶ್ರೀಮಂತ ತನ್ನ ಊರನ್ನು ನೆನಪಿಟ್ಟುಕೊಂಡು ಹಿಂತಿರುಗಿ ಬಂದಿರುವುದರಿಂದ ತಮಗೆ ಏನಾದರೂ ಸಹಾಯ ಮಾಡುತ್ತಾನೆಂಬುದು ಹಳ್ಳಿಗರ ನಿರೀಕ್ಷೆ. ಕೆಲವು ಮುಂದಾಳುಗಳು ಅದೂ ಇದೂ ಮಾತನಾಡುತ್ತಾ ತಮ್ಮ ಊರಿನ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಮಾತು ಎತ್ತಿದರು. ಅದಕ್ಕೆ ತಗುಲಬಹುದಾದ ಒಂದು ಸಣ್ಣ ಮೊತ್ತವನ್ನು ಅಳುಕುತ್ತಾ ಹೇಳಿದರು. ಹಳ್ಳಿಗರ ಮಾತನ್ನು ಆಲಿಸಿದ ನನ್ನ ಸ್ನೇಹಿತ ಒಂದು ಪ್ರಶ್ನೆ ಕೇಳಿದರು ‘ನಿಮ್ಮೂರಿನಲ್ಲಿ ಎಷ್ಟು ಮಂದಿಗೆ ಶೌಚಾಲಯವಿದೆ’? ಅನಿರೀಕ್ಷಿತವಾದ ಈ ಪ್ರಶ್ನೆಯಿಂದ ಅವಾಕ್ಕಾದ ಈ ಜನ ಒಬ್ಬರ ಮುಖ ಒಬ್ಬರು ನೋಡಿದರು. ಬೆರಳೆಣಿಕೆಯ ಕೆಲವು ಮಂದಿಗೆ ಮಾತ್ರ ಶೌಚಾಲಯಗಳಿರುವ ಸತ್ಯ ಹೊರಬಿತ್ತು. ನನ್ನ ಸ್ನೇಹಿತರು ಹೇಳಿದರು ‘ದೇವಸ್ಥಾನಕ್ಕೆಂದು ನನ್ನ ಬಳಿ ಒಂದು ಬಿಡಿಗಾಸು ಇಲ್ಲ. ಆದರೆ ನೀವೆಲ್ಲರೂ ಇಷ್ಟಪಟ್ಟರೆ ಶೌಚಾಲಯ ನಿರ್ಮಾಣಕ್ಕೆ ಹಣ ಎಷ್ಟು ಖರ್ಚಾದರೂ ನಾನು ಕೊಡುತ್ತೇನೆ. ಈ ಊರಿನಲ್ಲಿ ಪ್ರತಿಯೊಬ್ಬರು ಮನೆಗೊಂದರಂತೆ ಶೌಚಾಲಯ ಕಟ್ಟಿಸಿಕೊಳ್ಳಿ’.

ಮಾತು ಮುಂದುವರೆಯಿತು. ಇದಕ್ಕೆ ಸರ್ಕಾರದ ಅನುದಾನ ಇರುವ ವಿಷಯವೂ ಪ್ರಸ್ತಾಪವಾಯಿತು. ಸರ್ಕಾರದ ಅನುದಾನದ ಜೊತೆ ಕೊರತೆಬಿದ್ದ ಹಣವನ್ನು ಸೇರಿಸಿ ಶೌಚಾಲಯ ನಿರ್ಮಿಸುವುದು; ಈ ಶೌಚಾಲಯಗಳಿಗೆ ಒಂದು ಇಂಗುಗುಂಡಿಯ ಬದಲು ಎರಡು ಇಂಗುಗುಂಡಿಗಳನ್ನು ಮಾಡಿಸಿ ಮುಂದಿನ ಅನೇಕ ವರ್ಷಗಳ ಕಾಲ ನಿರಂತರವಾಗಿ ಶೌಚಾಲಯವನ್ನು ಜನ ಬಳಸುವಂತೆ ವ್ಯವಸ್ಥೆ ಮಾಡುವುದು - ಹೀಗೆಲ್ಲ ಚರ್ಚೆ ನಡೆಯಿತು. ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಲು ಗ್ರಾಮಪಂಚಾಯ್ತಿ ಕಚೇರಿಗೆ ಹೋದೆವು. ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಊರ ಜನ ಹೀಗೆ ಎಲ್ಲರೂ ಸೇರಿದರು. ನನ್ನ ಈ ದಾನಿಗಳು ನಮ್ಮ ಸಂಸ್ಥೆಯ ಮೂಲಕ ಹಣ ಒದಗಿಸುವುದು, ಆದರೆ ಜನ ತಮ್ಮ ದೈಹಿಕ ಶ್ರಮವನ್ನು ದಾನವಾಗಿ ಕೊಡುವುದು- ಹೀಗೆ ನಿರ್ಧಾರವಾಯಿತು. ಹಳ್ಳಿಗರೆಲ್ಲ ಇದಕ್ಕೆ ಉತ್ಸಾಹದಿಂದ ಒಪ್ಪಿದರು. ಆನಂತರ ಜಿಲ್ಲಾ ಪಂಚಾಯ್ತಿ ಕಚೇರಿಗೆ ಹೋಗಿ ಅಲ್ಲಿಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿದೆವು. ಅಂದಿನ ಕಾರ್ಯದರ್ಶಿ ‘ಸರ್ಕಾರ ಮಾಡಬೇಕಾದ ಕೆಲಸವನ್ನು ತಾವು ಮಾಡುತ್ತಿದ್ದೀರಿ; ಸರ್ಕಾರದ ನೆರವಿನ ಹಣವನ್ನು ನಾವು ನೇರವಾಗಿ ನಿಮ್ಮ ಸಂಸ್ಥೆಗೆ ಬಿಡುಗಡೆ ಮಾಡುತ್ತೇವೆ; ನೀವು ಶೌಚಾಲಯವನ್ನು ಆದಷ್ಟು ಬೇಗ ನಿರ್ಮಿಸಿ’ ಎಂದು ಆಶ್ವಾಸನೆ ನೀಡಿದರು.

ಸರ್ಕಾರಿ ಅಧಿಕಾರಿಯಿಂದಲೇ ನಮಗೆ ಉತ್ತೇಜನ ದೊರೆತದ್ದರಿಂದ ಒಟ್ಟು 500 ರಿಂದ 600 ಶೌಚಾಲಯ ಕಟ್ಟಿಸಿಕೊಡಲು ನಿರ್ಧರಿಸಿದೆವು. ಸಂಸ್ಥೆ ಭರಿಸಬೇಕಾದ ಹಣವನ್ನು ನನ್ನ ದಾನಿಗಳು ನೀಡಿದರು. ಉಳಿದದ್ದನ್ನು ಸರ್ಕಾರದಿಂದ ಪಡೆದುಕೊಂಡರಾಯಿತು ಎಂದು ನಾವು ಕೆಲಸ ಪ್ರಾರಂಭಿಸಿದೆವು. ಜನಗಳ ಸಹಕಾರದ ಕೊರತೆ, ಕಟ್ಟಡ ಸಾಮಗ್ರಿಗಳ ಕಳ್ಳತನ, ಗಾರೆ ಕೆಲಸಗಾರರ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾದವು. ಪರಿಚಯವಿಲ್ಲದ ಈ ದೂರದ ಊರಿನಲ್ಲಿ ಕೆಲಸ ಮಾಡುವುದು ಬಹಳ ಕಷ್ಟವಾಯಿತು. ನಿರೀಕ್ಷೆಗಿಂತ ಹೆಚ್ಚು ಹಣ ಖರ್ಚಾದರೂ ಒಳ್ಳೆಯ ಗುಣಮಟ್ಟದ ಶೌಚಾಲಯಗಳನ್ನು ಕಟ್ಟಿ ಮುಗಿಸಿದೆವು. ಸುಂದರವಾದ ಬಣ್ಣ ತುಂಬಿದ ನೂರಾರು ಶೌಚಾಲಯಗಳನ್ನು ಹೆದ್ದಾರಿಯಲ್ಲಿ ಪ್ರಯಾಣ ಮಾಡುವ ಅನೇಕ ಅಧಿಕಾರಿಗಳು ದೂರದಿಂದಲೇ ನೋಡಿ ಹೊಗಳಿದರು. ನಾವು ಪದೇ ಪದೇ ಆಹ್ವಾನಿಸಿದರೂ ಹಿರಿಯ ಅಧಿಕಾರಿಗಳ್ಯಾರೂ ಸ್ಥಳಕ್ಕೆ ಭೇಟಿ ನೀಡಿ ನಾವು ಕಟ್ಟಿಸಿದ ಶೌಚಾಲಯವನ್ನು ಪರಿಶೀಲಿಸಲೇ ಇಲ್ಲ.

ಆನಂತರ ‘ನಾವು ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಇದಕ್ಕೆ ಸಂಬಂಧಪಟ್ಟ ಅನುದಾನವನ್ನು ದಯವಿಟ್ಟು ಸಂಸ್ಥೆಗೆ ನೇರವಾಗಿ ಬಿಡುಗಡೆ ಮಾಡಿ’ ಎಂದು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಕಾಗದ ಬರೆದೆವು. ನಮಗೆ ಆಶ್ವಾಸನೆ ನೀಡಿದ್ದ ಅಧಿಕಾರಿ ಈಗಾಗಲೇ ವರ್ಗವಾಗಿ ಹೋಗಿದ್ದರು. ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ನಮ್ಮ ಪತ್ರಗಳಿಗೆ ಪ್ರತಿಯಾಗಿ ಒಂದೇ ಒಂದು ಉತ್ತರವೂ ಬರಲಿಲ್ಲ. ಇದರಿಂದ ನಮಗೆ ಗಾಬರಿಯಾಯಿತು. ನಾವು ಮಾಡಿರುವ ಕೆಲಸವನ್ನು ಗುರುತಿಸಿ ಸರ್ಕಾರ ಕೃತಜ್ಞತೆಯಿಂದ ನಮಗೆ ಸಲ್ಲಬೇಕಾದ ಹಣವನ್ನು ನಮಗೆ ಬಿಡುಗಡೆ ಮಾಡಬೇಕು. ಆದರೆ ನಮ್ಮ ಪತ್ರಗಳಿಗೆ ಒಂದೂ ಉತ್ತರವನ್ನೂ ನೀಡದೆ ಇರುವುದರ ಉದ್ದೇಶವಾದರೂ ಏನು? ದಾರಿಕಾಣದೆ ನಾವು ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕರನ್ನು ಕಂಡು ನಮ್ಮ ಕಷ್ಟ ಹೇಳಿಕೊಂಡೆವು. ಅವರು ಸಹಾನುಭೂತಿಯಿಂದ ನಮ್ಮ ಕಷ್ಟವನ್ನು ಆಲಿಸಿ, ‘ನೋಡಿ, ನಮಗೆ ಕೆಲವೊಮ್ಮೆ ಸ್ಥಳದಲ್ಲಿ ಆಗುವ ಅವಾಂತರಗಳು ಗೊತ್ತಾಗುವುದೇ ಇಲ್ಲ, ಸಂಬಂಧಪಟ್ಟವರಿಗೆ ಒಂದು ಮಾತು ಹೇಳುತ್ತೇನೆ’ ಎಂದರು. ಜೊತೆಗೆ ಅಧಿಕಾರಿಯೊಬ್ಬರನ್ನು ಕಳುಹಿಸಿ ಸ್ಥಳ ಪರಿಶೀಲನೆ ಮಾಡಿ ನಾವು ನಿರ್ಮಿಸಿರುವ ಶೌಚಾಲಯಗಳ ಗುಣಮಟ್ಟದ ಬಗ್ಗೆ ನೇರವಾಗಿ ಮಾಹಿತಿ ಪಡೆದರು.

ಅಂತೂ ಇಂತೂ ನಮ್ಮ ಹಣ ಬಿಡುಗಡೆಯಾಗುವ ಸೂಚನೆಗಳು ಕಂಡವು. ಆದರೆ ನಾವು ಹಿರಿಯ ಅಧಿಕಾರಿಗಳ ಬಳಿ ಹೋಗಿದ್ದರಿಂದ ನಮಗೆ ಬುದ್ಧಿ ಕಲಿಸಲು ಮತ್ತೊಂದು ಹುನ್ನಾರು ನಡೆದಿತ್ತು. ಸಂಬಂಧಪಟ್ಟ ತಾಲ್ಲೂಕು ಮಟ್ಟದ ಅಧಿಕಾರಿ ನಮಗೆ ತಿಳಿಯದಂತೆ ಮೂವತ್ತು ಜನ ಫಲಾನುಭವಿಗಳಿಗೆ ಅವರವರ ಹೆಸರಿನಲ್ಲಿ ಕ್ರಾಸ್ ಮಾಡಿದ ತಲಾ ಮೂರು ಸಾವಿರ ರೂಪಾಯಿಗಳ ಚೆಕ್ಕುಗಳನ್ನು ಹಂಚಿಬಿಟ್ಟಿದ್ದ. ಹಣ ಸೇರಬೇಕಾದ್ದು ಸಂಸ್ಥೆಗೆ; ತಮಗೇಕೆ ಈ ಹಣ ಬಂತು ಎಂದು ಜನರಿಗೆ ತಿಳಿಯಲಿಲ್ಲ. ಬಹುಪಾಲು ಹಳ್ಳಿಗರು ನಮ್ಮ ಪರವಾಗಿ ನಿಂತರೂ ಕೆಲವರು ಈ ಹಣವನ್ನು ಬಳಸಿಕೊಂಡೇ ಬಿಟ್ಟರು. ಗಾಬರಿಗೊಂಡು ನಾವು ಪುನಃ ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳನ್ನು ಹೋಗಿ ಕಂಡೆವು. ಯಾರೊಬ್ಬರೂ ನಮಗೆ ಸಹಾಯ ಮಾಡಲು ಸಿದ್ದರಿಲ್ಲ. ನಮ್ಮ ಪ್ರಶ್ನೆಗೆ ಈ ಮಹನೀಯರು ನೀಡುತ್ತಿದ್ದುದು ಒಂದೇ ಉತ್ತರ - ‘ನಿಯಮದ ಪ್ರಕಾರ ನಾವು ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಬೇಕು, ಅದರಂತೆ ನಾವು ಮಾಡಿದ್ದೇವೆ’. ನಮ್ಮ ಕಥೆ ತಬರನ ಕಥೆಯಾಯಿತು. ಪುನಃ ನಿರ್ದೇಶಕರ ಬಳಿ ಓಡಿದೆವು. ಅವರು ನೊಂದು ಹೇಳಿದರು: ‘ನಮ್ಮ ವ್ಯವಸ್ಥೆಯೇ ಹೀಗಿದೆ ನೋಡಿ; ಈ ಕೆಳಗಿನ ಅಧಿಕಾರಿ ನಿಮ್ಮ ಸಂಸ್ಥೆಗೇ ಹಣ ಬಿಡುಗಡೆ ಮಾಡಬೇಕೆಂದು ಬಯಸಿದರೆ ಅದನ್ನು ಯಾರೂ ತಡೆಯುವುದಿಲ್ಲ. ಆದರೆ ಅವನಿಗೆ ಮನಸ್ಸಿಲ್ಲ. ನಾನು ಆದೇಶ ನೀಡುತ್ತೇನೆ’.

ಈ ಸಂದರ್ಭದಲ್ಲಿ ನನಗೆ ಮತ್ತೊಂದು ಘಟನೆ ನೆನಪಾಗುತ್ತದೆ. ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಫಂಡ್ಸ್ (ಯುಎನ್‌ಪಿಎಫ್) ಸಂಸ್ಥೆ ಭಾರತದಲ್ಲಿ ಲಿಂಗಸಂಬಂಧಿ ತಾಯಿ ಮಕ್ಕಳ ಆರೋಗ್ಯಕ್ಕೆಂದು ಅಪಾರ ಹಣವನ್ನು ತೊಡಗಿಸಿದೆ. ಈ ಹಣವನ್ನು ಕೇಂದ್ರ ಸರ್ಕಾರದ ಮೂಲಕ ಅನೇಕ ಸಂಘ ಸಂಸ್ಥೆಗಳಿಗೆ ನೀಡಿ ತಾಯಿ ಮಕ್ಕಳ ಆರೋಗ್ಯ ಅಭಿವೃದ್ದಿ ಮಾಡಬೇಕೆಂಬುದು ಈ ಯೋಜನೆಯ ಉದ್ದೇಶ. ನಮ್ಮ ದೇಶದಲ್ಲಿ ಪ್ರತಿ ಐದು ನಿಮಿಷಕ್ಕೆ ಒಬ್ಬ ಗರ್ಭಿಣಿ ಸ್ತ್ರೀ ಸಾಯುತ್ತಾಳೆ.

ಒಂದು ಸ್ವಯಂಸೇವಾ ಸಂಸ್ಥೆಯ ಪರವಾಗಿ ನಾನು ದೆಹಲಿಗೆ ಹೋಗಿದ್ದೆ. ಅಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಒಂದು ಸಭೆ ನಡೆದಿತ್ತು. ಯುಎನ್‌ಪಿಎಫ್ ಅಧಿಕಾರಿ ಅತ್ಯಂತ ಬೇಸರದಿಂದ ಮಾತನಾಡಿದ. ಏಕೆಂದರೆ ತಮ್ಮ ಸಂಸ್ಥೆ ಅಪಾರ ಹಣವನ್ನು ಕೇಂದ್ರ ಸರ್ಕಾರಕ್ಕೆ ನೀಡಿದರೂ ಅಧಿಕಾರಿಗಳು ಈ ಹಣವನ್ನು ಸುಸೂತ್ರವಾಗಿ ಬಿಡುಗಡೆ ಮಾಡದೆ ಇರುವುದರಿಂದ ಕೆಲಸ ಮುಂದೆ ಸಾಗುತ್ತಿಲ್ಲ; ಹಾಗಾಗಿ ತಾವು ಬೇರೆ ದೇಶವನ್ನು ಆಯ್ದುಕೊಂಡು ತಮ್ಮ ಕೆಲಸವನ್ನು ಮುಂದುವರೆಸಲು ಆಲೋಚಿಸುತ್ತಿರುವುದಾಗಿ ತಿಳಿಸಿದ. ನಮ್ಮ ದೇಶದ ಜನಗಳ ಆರೋಗ್ಯದ ಬಗ್ಗೆ ಅನ್ಯರಿಗೆ ಕಾಳಜಿ ಇದೆ. ಆದರೆ ನಮ್ಮ ಅಧಿಕಾರಿಗಳಿಗೆ ಸ್ವಲ್ಪವೂ ಕನಿಕರವಿಲ್ಲವೇಕೆ? ಈ ಸಂದರ್ಭದಲ್ಲೂ ನಮ್ಮ ಸಂಸ್ಥೆಗೆ ಮಂಜೂರಾದ ಹಣವನ್ನು ನಾವು ಕೇಂದ್ರ ಸರ್ಕಾರದಿಂದ ಬಿಡಿಸಿಕೊಳ್ಳಲಾಗಲೇ ಇಲ್ಲ. ಏಕೆಂದರೆ ಮೊದಲು ಲಂಚ ಕೊಟ್ಟು ಆಮೇಲೆ ಸಮಾಜಕಾರ್ಯ ಮಾಡುವ ಹಂಬಲ ನಮಗಿಲ್ಲ.

ಕೇಂದ್ರ ಸರ್ಕಾರದ ಬಹುಪಾಲು ಅನುದಾನಗಳು ವಿನಿಯೋಗವಾಗುವುದೇ ಇಲ್ಲ. ಅದರಲ್ಲೂ ದಕ್ಷಿಣ ಭಾರತಕ್ಕೆಂದು ಮೀಸಲಾದ ಅನುದಾನ ಇಲ್ಲಿಯವರೆಗೆ ತಲುಪುವುದೇ ಅಪರೂಪ. ಒಂದು ವೇಳೆ ಅದು ತಲುಪಿದರೂ ಅನೇಕ ಭ್ರಷ್ಟ ಕೈಗಳನ್ನು ದಾಟಿ ಬರುವುದರಿಂದ ಅದರ ಪರಿಣಾಮವನ್ನು ಯಾರು ಬೇಕಾದರೂ ಊಹಿಸಬಹುದು. ಕಾಗದದಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ ಅನೇಕ ಸಂಸ್ಥೆಗಳಿಗೆ ಕೇಂದ್ರ ಸುಲಭವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ಈ ವಿಷಯ ತಿಳಿದೂ ನಮ್ಮ ಸಂಸದರು ಏನು ಮಾಡುತ್ತಿದ್ದಾರೆ? ಈ ಸಂಬಂಧವಾದ ಕೇಂದ್ರಸರ್ಕಾರದ ಕಚೇರಿಗಳು ದೆಹಲಿಯಲ್ಲಿ ಮಾತ್ರ ಏಕಿರಬೇಕು? ದಕ್ಷಿಣಭಾರತದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಕರ್ನಾಟಕದಲ್ಲೋ ಕೇರಳದಲ್ಲೋ ಕೇಂದ್ರ ಸರ್ಕಾರದ ಶಾಖಾ ಕಚೇರಿಗಳು ಏಕೆ ಇರಬಾರದು?
g

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.