ಮಾನವಿಕ ಅಧ್ಯಯನಗಳು ತಮ್ಮ ಹರಹು ಮತ್ತು ಕ್ಷೇತ್ರಗಳನ್ನು ಹಿಂದೆಂದೂ ಇಲ್ಲದ ಬಗೆಯಲ್ಲಿ ವಿಸ್ತರಿಸಿಕೊಳ್ಳುತ್ತಿರುವ ಕಾಲಘಟ್ಟ ಇದು. ಸಾಮಾಜಿಕ ಮತ್ತು ರಾಜಕೀಯ ನೆಲೆಗಳು ತಮ್ಮ ಮೂರ್ತತೆಯಲ್ಲಿ ಸಾಂಸ್ಕೃತಿಕ ಸನ್ನಿವೇಶಗಳ ಅಮೂರ್ತತೆಯನ್ನೂ ಒಳಗೊಂಡು ಬಹುಮುಖಿ ಅಧ್ಯಯನ ಮಾದರಿಗಳು ಸಶಕ್ತವಾಗಿ ರೂಪುಗೊಳ್ಳುತ್ತಾ ಇತಿಹಾಸದ ಹೊಸ ಮಗ್ಗುಲುಗಳನ್ನು ತೆರೆಯುತ್ತಿರುವ ಈ ಕಾಲಘಟ್ಟದಲ್ಲಿ ಸ್ತ್ರೀವಾದವು ಪಡೆದುಕೊಳ್ಳುತ್ತಿರುವ ಮುನ್ನೆಲೆಯನ್ನು ಚರ್ಚಿಸುವುದು ಚೇತೋಹಾರಿಯಾದ ಸಂಗತಿ.

ಈ ಹಿನ್ನೆಲೆಯಲ್ಲಿ ಸ್ತ್ರೀವಾದಿಗಳು ಇಂದು ಪ್ರಸ್ತುತ ಪಡಿಸುತ್ತಿರುವ ಅಧ್ಯಯನ ಮಾದರಿಗಳು ಕೇವಲ ಶೈಕ್ಷಣಿಕ ಚೌಕಟ್ಟಿನವಲ್ಲವೇ ಅಲ್ಲ, ಅವುಗಳಿಗೆ ಈ ಚೌಕಟ್ಟನ್ನು ಮೀರಿದ ದೇಶೋವಿಶಾಲವಾದ ಆಶಯಗಳಿವೆ. ಈ ಆಶಯಗಳು ಹೆಣ್ಣಿಗೆ ಸಂಬಂಧಪಟ್ಟವು ಎನ್ನುವುದು ನಿಜ, ಅವು ಕೇವಲ ಹೆಣ್ಣಿಗೆ ಮಾತ್ರ ಸಂಬಂಧಪಟ್ಟವಲ್ಲ ಎನ್ನುವುದು ಇನ್ನೂ ನಿಜ. ಗಂಡು ಮತ್ತು ಹೆಣ್ಣನ್ನು ಏಕಪ್ರಕಾರವಾಗಿ ಒಳಗೊಳ್ಳಲು ನಡೆಸುತ್ತಿರುವ ಈ ಪ್ರಯತ್ನಗಳನ್ನು ಹೊಸ ಲೋಕದೃಷ್ಟಿಯೊಂದರ ರಚನೆ ಮತ್ತು ಪ್ರತಿಪಾದನೆ ಎಂದು ಈ ಅಂಕಣದಲ್ಲಿ ಮತ್ತೆ ಮತ್ತೆ ಚರ್ಚಿಸುತ್ತಲೇ ಬರಲಾಗಿದೆ.

ಸಾಹಿತ್ಯವೆನ್ನುವುದು, ಸಾಹಿತ್ಯ ವಿಮರ್ಶೆಯೆನ್ನುವುದು ಆ ಕಾಲದ ಅವಶ್ಯಕತೆಯ ಧ್ವನಿ ಎನ್ನುವುದು ಸಾಹಿತ್ಯವನ್ನು ಕುರಿತ ಆದಿಮ ವ್ಯಾಖ್ಯಾನಗಳಲ್ಲೊಂದು. ಈ ಅಂಕಣದಲ್ಲಿ ಕಳೆದ ಎರಡು ವರ್ಷಗಳಿಂದ ಕನ್ನಡದ, ಇತರ ಭಾರತೀಯ ಭಾಷೆಗಳ, ಕೆಲವು ಜಾಗತಿಕ ಲೇಖಕರ ಕೃತಿಗಳನ್ನು, ಚಿತ್ರಕಲೆ, ಸಂಗೀತ, ರಾಜಕಾರಣವೂ ಒಳಗೊಂಡಂತೆ ಇತರ ಕ್ಷೇತ್ರಗಳ ಕೆಲವು ಸ್ತ್ರೀಮಾದರಿಗಳನ್ನು ಭಿನ್ನವೆನ್ನಬಹುದಾದ ನೆಲೆಯಲ್ಲಿ ಅಥವಾ ನಮ್ಮ ಕಾಲದ ಓದಿಗೆ ಒಳಪಡಿಸಿದಾಗ ಸಿಕ್ಕದ್ದೇನು?

ಹೆಣ್ಣಿನ ಸಹಜ ಸಾಮಾನ್ಯ ಚಿತ್ರವೊಂದು ಹೇಗಿರುತ್ತದೆ? ‘ಹೆಣ್ಣು ಉದ್ದಕ್ಕೂ ನಡೆಸುವುದು ಅಷ್ಟಾವಧಾನ’ ಎಂದು ನನಗೆ ಮತ್ತೆ ಮತ್ತೆ ಅನಿಸುತ್ತದೆ. ಅಪಾರ ಶ್ರದ್ಧೆಯಲ್ಲಿ, ಪ್ರಯತ್ನದಲ್ಲಿ, ನಿಡುಗಾಲದ ಅಭ್ಯಾಸದಲ್ಲಿ ಪುರುಷ ಅಷ್ಟಾವಧಾನಿಗಳು (ಇದರಲ್ಲಿ ಮಹಿಳೆಯರ ಸಂಖ್ಯೆ ತೀರವೆಂದರೆ ತೀರಾ ಕಡಿಮೆ) ಇದನ್ನು ದಕ್ಕಿಸಿಕೊಂಡು ಲೋಕಮನ್ನಣೆಯನ್ನು ಪಡೆಯುತ್ತಾರೆ. ಆದರೆ ಹೆಣ್ಣು ಈ ಯಾವ ಸಾಧನೆಯ ಮನ್ನಣೆಯೂ ಇಲ್ಲದೆಯೇ ಅನಾಯಾಸವಾಗಿ ಬದುಕಿನುದ್ದಕ್ಕೂ ಅಷ್ಟಾವಧಾನವನ್ನು ಸಿದ್ಧಿಸಿಕೊಂಡಿರುತ್ತಾಳೆ.

ಹೆಣ್ಣು ಹೇಗೆ ಭಿನ್ನ ಹೇಳಿ ಎಂದು ಯಾರಾದರೂ ಕೇಳಿದರೆ, ಕೊಡಬಹುದಾದ ಸಹಜ ಉತ್ತರವೆಂದರೆ, ಅವಳು ತನ್ನ ಹಲವು ಪಾತ್ರಗಳನ್ನು ಸಮಾನ ಆದ್ಯತೆಯಲ್ಲಿ, ಸಮಾನ ಪ್ರೀತಿಯಲ್ಲಿ, ಸಮಾನ ದಕ್ಷತೆಯಲ್ಲಿ ಮತ್ತು ಒಂದು ಇನ್ನೊಂದನ್ನು ಒಳಗೊಂಡ ಸಾಂಗತ್ಯದಲ್ಲಿ ನಿಭಾಯಿಸುವುದು ಎನಿಸುತ್ತದೆ. ಗಂಡಿನಲ್ಲಿ ಒಳಗು ಮತ್ತು ಹೊರಗುಗಳನ್ನು, ಶ್ರೇಣೀಕರಣದಷ್ಟೇ ಮೇಲುಕೀಳಿನ, ಬೇಕು ಬೇಡಗಳ ಆದ್ಯತೆಗಳನ್ನು ಹೆಣ್ಣಿನಲ್ಲಿ ಗುರುತಿಸುವುದು ಕಷ್ಟ. ಒಳ್ಳೆಯ ಲೇಖನ ಬರೆಯುವುದರಲ್ಲಿ ಇರುವಷ್ಟೇ ಆಸ್ಥೆ ಒಳ್ಳೆಯ ಕಾಫಿಯನ್ನು, ಸೊಗಸಾದ ದೋಸೆಯನ್ನು ಮಾಡುವುದರಲ್ಲಿಯೂ ಸವಿಯುವುದರಲ್ಲಿಯೂ ಅವಳಿಗೆ ಇರುತ್ತದೆ.

ಮನೆಯನ್ನು ಚಂದವಾಗಿ ಇಡುವುದು, ತನ್ನ ವೃತ್ತಿಜೀವನದಲ್ಲಿನ ಯಶಸ್ಸಿನಷ್ಟೇ ಮುಖ್ಯವಾಗಿರುತ್ತದೆ. ಬದುಕಿಗೆ ಸಂಬಂಧ ಪಟ್ಟ ಯಾವುದನ್ನೂ ಅವಳು ನಿರಾಕರಿಸುವುದಿಲ್ಲ. ಅವುಗಳನ್ನು ನಿರ್ವಹಿಸುವಲ್ಲಿ ಅವಳಿಗೆ ಕೀಳರಿಮೆಯೂ ಕಾಡುವುದಿಲ್ಲ. ಇದನ್ನೇ ಗಂಭೀರವಾದ ತಾತ್ವಿಕತೆಯ ಮಾತಿನಲ್ಲಿ ಹೇಳುವುದಾದರೆ, ಹೆಣ್ಣಿನ ಅನುಭವ ಗಂಡಿಗಿಂತ ಬಹುಮುಖಿಯಾದದ್ದು ಹಾಗೂ ಸಾಂದ್ರವಾದದ್ದು. ಹೆಣ್ಣಿನದ್ದು ಗಂಡಿಗೆ ವಿರುದ್ಧವಾದ ಸ್ಥಿತಿ ಎಂದು ಸಾಬೀತು ಮಾಡುವುದು ನನ್ನ ಉದ್ದೇಶವಲ್ಲ, ಅಂಥ ಮೇಲಾಟದಲ್ಲಿ ಸ್ತ್ರೀವಾದಕ್ಕೆ ಯಾವ ಆಸಕ್ತಿಯೂ ಇಲ್ಲವಾದ್ದರಿಂದ ಆ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಆದರೆ, ಮನೆಯ ಕೆಲಸವೋ, ಮಕ್ಕಳ ಜವಾಬ್ದಾರಿಯೋ– ಈ ಯಾವುದನ್ನೂ ಮಾಡುವುದರಲ್ಲಿಯೂ ಅವಳಿಗೆ ಇದು, ಬೇಡದ ಸಂಗತಿಯೋ, ತಾನು ಮಾಡಬಾರದ ಕೆಲಸವೆಂದೋ ಸಾಮಾನ್ಯವಾಗಿ ಅನಿಸುವುದಿಲ್ಲ.

ಈ ಎಲ್ಲವೂ ಹೆಣ್ಣು ಮಾಡಬೇಕಾದ ಕೆಲಸಗಳೆನ್ನುವ ಮನೋವಿನ್ಯಾಸ ಇಲ್ಲಿ ಕೆಲಸ ಮಾಡುತ್ತಿರುತ್ತದೆ ಎನ್ನುವುದನ್ನು ಒಪ್ಪೋಣ. ಪ್ರಶ್ನೆ ಶುರುವಾಗುವುದೇ ಇಲ್ಲಿಂದ. ಆ ಕೆಲಸಗಳು ಒಟ್ಟೂ ಒಂದು ಸಂಸಾರ, ಒಂದು ಕೌಟುಂಬಿಕ ವ್ಯವಸ್ಥೆ ಸರಾಗವಾಗಿ ನಡೆಯಲು ಅತ್ಯವಶ್ಯಕ ಎನ್ನುವುದಾದರೆ, ಅದರ ಬಹುಪಾಲನ್ನು ಹೆಣ್ಣು ನಿಭಾಯಿಸುತ್ತಾಳೆ ಎಂದಾದರೆ, ಅವಳ ಬಗ್ಗೆ ಇರಬೇಕಾದ ನಿಲುವು ಯಾವುದು? ಹೆಣ್ಣು ಕುಟುಂಬದ ಕಣ್ಣು ಎನ್ನುವ ರೀತಿಯ ಮಾತುಗಳೇ ಪಿತೃಸಂಸ್ಕೃತಿಯು ಹೆಣ್ಣನ್ನು ಕರಾರಿಗೆ ಒಳಗು ಮಾಡುವ ಹೀನ ಕಾರ್ಯತಂತ್ರವಾಗಿ ಕಾಣಿಸುತ್ತದೆ.

ಏಕೆಂದರೆ, ಯಾವ ಹೆಣ್ಣಿನ ಈ ಅಸಾಮಾನ್ಯ ಶಕ್ತಿಗೆ ಈ ಬಗೆಯ ಬೊಗಳೆಯ ಮಾತನ್ನು ಮೀರಿದ ಗೌರವ ಮತ್ತು ನಾಯಕತ್ವದ ಸ್ಥಾನಮಾನಗಳು ಸಿಗಬೇಕೋ ಆ ಜಾಗದಲ್ಲಿ ಒಂದು ಭಾವುಕವಾದ ಮಾತನ್ನು ಸ್ಥಾಪಿಸಿ ಅವಳನ್ನು ಯಾವಜ್ಜೀವವೂ ಎರಡನೆಯ ಪ್ರಜೆಯ ಜಾಗದಲ್ಲಿ ಉಳಿಸುವ ಹುನ್ನಾರದ ಘೋಷವಾಕ್ಯಗಳ ಹಾಗೆ ಇವು ಕಾಣಿಸುತ್ತಾ ಹೋಗುತ್ತವೆ. ಹೆಣ್ಣು ಅಹರ್ನಿಶಿ ದುಡಿಯಬೇಕು. ಆದರೆ ಅದು ಅವಳ ಬಾಧ್ಯತೆಯೆಂದು, ಅವಳು ಇರಬೇಕಾದ್ದೇ ಹಾಗೆಂದು ಫರ್ಮಾನು ಹೊರಡಿಸುವ ಮೂಲಕ ಹೆಣ್ಣನ್ನು ರಾಜಕೀಯವಾಗಿ ದುರ್ಬಲಗೊಳಿಸಲಾಗುತ್ತದೆ.

ಮತ್ತೆ ಸಮಾನ ಆದ್ಯತೆಯ ವಿಷಯಕ್ಕೆ ಬರುವುದಾದರೆ ಹೆಣ್ಣಿನ ವ್ಯಕ್ತಿತ್ವವೇ ಮೂಲತಃ ಹೆಣಿಗೆಯ ಅಥವಾ ನೇಯ್ಗೆಯ ಗುಣಸ್ವರೂಪದ್ದು. ಕುತೂಹಲಕಾರಿಯಾದ ಸಂಗತಿಯೆಂದರೆ ಸಮಕಾಲೀನ ಮಹಿಳಾ ಚಿಂತನೆಗಳ ಅಧ್ಯಯನ ಮಾದರಿಯನ್ನೂ ‘ನೇಯ್ಗೆ’ (composition) ಎಂದೇ ಗುರುತಿಸಲಾಗುತ್ತಿದೆ. ಗುಬ್ಬಚ್ಚಿಯ ಗೂಡಿನ ಹಾಗೆ, ಸುಂದರ ದುಕೂಲದ ಹಾಗೆ ಅವಳು ತನ್ನನ್ನು ತಾನೇ ನೇಯ್ದುಕೊಳ್ಳುತ್ತಾ ಹೋಗುತ್ತಾಳೆ ಎನ್ನುವುದು ಒಂದು ಅರ್ಥವಾದರೆ ಇತಿಹಾಸ ಮತ್ತು ವರ್ತಮಾನಗಳ ಹಲವು ದಿಕ್ಕು ಮತ್ತು ಮೂಲಗಳಿಂದ, ಹಲವು ಜ್ಞಾನ ಶಿಸ್ತುಗಳಿಂದ ತನ್ನ ಪರಂಪರೆ ಮತ್ತು ಹೋರಾಟವನ್ನು ರೂಪಿಸಿಕೊಳ್ಳುತ್ತಿದ್ದಾಳೆ ಎನ್ನುವುದು ಇನ್ನೊಂದು ಅರ್ಥ.

ಮರು ಇತಿಹಾಸ, ನಿರೂಪಣೆ ಮತ್ತು ನೇಯ್ಗೆಗಳನ್ನು ಮಹಿಳಾ ಸಂಕಥನವು ತನ್ನ ದಾರಿಯಾಗಿಸಿಕೊಂಡಿದೆ. ಈ ಅಂಕಣದಲ್ಲಿ ನಡೆಸಿದ ಪ್ರಯತ್ನಗಳನ್ನಾದರೂ ಈ ಹಿನ್ನೆಲೆಯಲ್ಲಿ ನೋಡಬಹುದು. ಮರು ಇತಿಹಾಸವೆಂದರೆ, ಇತಿಹಾಸವನ್ನು, ಅದರ ವಿವರಗಳನ್ನು ಬದಲಿಸುವ ಪ್ರಯತ್ನವೆಂದಲ್ಲ, ಅದನ್ನು ಈ ತನಕ ನೋಡುತ್ತಿದ್ದ ಜಾಗಕ್ಕಿಂತ ಭಿನ್ನವಾದ ಜಾಗದಲ್ಲಿ ನಿಂತು ನೋಡುವುದು. ಇಡೀ ರಾಮಾಯಣವನ್ನು ಹೆಣ್ಣಿನ ಕಣ್ಣಿನಿಂದ ನೋಡಿದರೆ ಅದು ಈಗಿರುವುದಕ್ಕಿಂತ ಭಿನ್ನವಾಗಿರುತ್ತದೆ ಮಾತ್ರವಲ್ಲ, ಅದಕ್ಕೊಂದು ಸಮಗ್ರತೆಯೂ ಸಿಗುತ್ತದೆ.

ಈ ತನಕ ಗಂಡಿನ ಕಣ್ಣಿನಿಂದ ನೋಡಿದ್ದನ್ನೇ ಸಮಗ್ರ ಮಾನವತೆಯ ನೋಟವೆಂದು ಹೇಳುತ್ತಾ ಅದನ್ನೇ ನಾಗರಿಕತೆಯ ಇತಿಹಾಸವೆಂದು ಬಿಂಬಿಸಲಾಗಿದೆ. ಅದರೊಳಗೆ ಇನ್ನೂ ಬೆಳಕಿಗೆ ಬಾರದ, ಬಂದರೆ ಇತಿಹಾಸದ ನಕಾಶೆಯೇ ಬದಲಾಗಬಹುದಾದಷ್ಟು ಶಕ್ತವಾದ ಸತ್ಯಗಳು ಅದರಲ್ಲಿವೆ. ಈ ಸತ್ಯಗಳು ಗಂಡು ಮತ್ತು ಹೆಣ್ಣು ಇಬ್ಬರೂ ತಮ್ಮನ್ನು ತಾವು ಪರಿಭಾವಿಸಿಕೊಳ್ಳುವ ಬಗೆಯನ್ನೇ ಬದಲಿಸಬಹುದಾದವು. ಪಾರ್ಶ್ವಿಕವಾದ ಲೋಕದೃಷ್ಟಿಯನ್ನು ಸಂಪೂರ್ಣವಾಗಿಸುವ ಮಾನವೀಯ ಉದ್ದೇಶದ್ದು ಇದು.

ಟಾಲ್ಸ್‌ಟಾಯ್‌ನ ಹೆಂಡತಿ ಸೋಫಿಯಾ ಬರೆದ ಆತ್ಮಚರಿತ್ರೆಯ ವಿವರಗಳು ಟಾಲ್ಸ್‌ಟಾಯ್‌ನನ್ನು ಇನ್ನೊಂದು ದೃಷ್ಟಿಯಲ್ಲೂ ನೋಡುವುದು ಅನಿವಾರ್ಯ ಎನ್ನುವುದನ್ನು ಸತ್ಯದ ನವದರ್ಶನದ ಹಾಗೆ ಕಾಣಿಸುತ್ತವೆ. ಗಾಂಧಿಯ ಮತ್ತೊಂದು ರೂಪಾಂತರವೋ ಎನಿಸುವಷ್ಟು ಆರ್ದ್ರತೆಯಲ್ಲಿ ಮನುಷ್ಯ ತನ್ನಲ್ಲಿರುವುದನ್ನು ಕೊಡುವುದರ ಬಗ್ಗೆ ಟಾಲ್ಸ್‌ಟಾಯ್‌ನಷ್ಟು ತೀವ್ರವಾಗಿ ಚಿಂತಿಸಿದವರು, ಬದುಕು ಬರವಣಿಗೆಯಲ್ಲಿ ಅದನ್ನು ತಂದವರು ಬಹು ಕಡಿಮೆ. ಮನುಷ್ಯ ತನ್ನ ರಾಗದ್ವೇಷಗಳನ್ನು ಪಳಗಿಸಿಕೊಳ್ಳಬೇಕಾದ್ದರ ಬಗ್ಗೆಯೂ ಟಾಲ್ಸ್‌ಟಾಯ್ ಆಳವಾಗಿ ಯೋಚಿಸಿದವನು. ಆ ಕಾರಣಕ್ಕಾಗಿಯೇ ಋಷಿಸದೃಶ ವ್ಯಕ್ತಿತ್ವದ ಹಿರಿಮೆಯನ್ನೂ ಪಡೆದವನು.

ಇವುಗಳನ್ನು ಕೇವಲ ಆಡದೆ ಕೃತಿಯಲ್ಲೂ ತರಲೆಂದು ತನ್ನ ಆಸ್ತಿಯ ಮೇಲಿನ ಹಕ್ಕನ್ನೂ ನಿಧಾನವಾಗಿ ಬಿಟ್ಟುಕೊಡುತ್ತಾ ಬಂದದ್ದು ಲೇಖಕ ಲೇಖಕಿಯರ ಪರಂಪರೆಯ ಒಂದು ಮೈಲಿಗಲ್ಲು ಎನ್ನುವಂತೆಯೇ ಚಿತ್ರಿತವಾಗುತ್ತಾ ಬಂದಿದೆ. ಇದಕ್ಕೆ ಅಡ್ಡಿಪಡಿಸಿದ ಅವನ ಹೆಂಡತಿ ಸೋಫಿಯಾ ಲೌಕಿಕವನ್ನು ಮೀರಲಾಗದ ಅತಿ ಸಾಮಾನ್ಯ, ಕ್ಷುದ್ರ ಹೆಣ್ಣಿನಂತೆಯೂ ಟಾಲ್ಸ್‌ಟಾಯ್ ಉದಾತ್ತ ಧೀರೋದಾತ್ತ ನಾಯಕ ಮಣಿಯಂತೆಯೂ ಕಾಣಿಸುವ ನೂರು ಬರವಣಿಗೆಗಳನ್ನು ನಾವು ನೋಡಬಹುದು. ಆದರೆ ಸೋಫಿಯಾ ತನ್ನ ಡೈರಿಯಲ್ಲಿ ಬರೆದ ವಿವರಗಳನ್ನು ಗಮನಿಸಿದರೆ ಟಾಲ್ಸ್‌ಟಾಯ್‌ನ ಚಹರೆ ಪೂರ್ಣವಾಗುತ್ತದೆ. ಹೊರಗೆ ಇಷ್ಟನ್ನೆಲ್ಲ ಜಿತೇಂದ್ರಿಯನಂತೆ ಆಡಿ, ಬರೆದು ಮುಗಿಸಿದ ಗಂಡ ಅಪ್ಪಟ ಲೌಕಿಕನಂತೆ ತನ್ನನ್ನು ಭೋಗಿಸುತ್ತಾ ಮೇಲಿಂದ ಮೇಲೆ ಗರ್ಭಿಣಿಯಾಗಿಸುವುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎನ್ನುವ ಪ್ರಶ್ನೆಯನ್ನು ಸೋಫಿಯಾ ಎತ್ತುತ್ತಾಳೆ.

ಟಾಲ್ಸ್‌ಟಾಯ್‌ನ ಮೇಲಿನ ನಮ್ಮ ಗೌರವ ಈ ಕಾರಣಕ್ಕಾಗಿ ಕಡಿಮೆಯಾಗಲು ಕಾರಣಗಳೇ ಇಲ್ಲ ನಿಜ. ಆದರೆ, ಸೋಫಿಯಾಳ ವ್ಯಕ್ತಿತ್ವವನ್ನು ಕಾರಣವೇ ಇಲ್ಲದೇ ಘಾಸಿಗೊಳಿಸಲಾಗಿದೆಯಲ್ಲವೆ? ಎಲ್ಲವನ್ನೂ ಗೆದ್ದವನಂತೆ ಕಾಣಿಸುವ ಟಾಲ್ಸ್‌ಟಾಯ್ ಇನ್ನೂ ಗೆಲ್ಲಬೇಕಾದ್ದು ಇತ್ತಲ್ಲವೆ?

ಇಷ್ಟಕ್ಕೂ ಇವನ್ನೆಲ್ಲ ಗೆಲ್ಲುವ ಹಂಬಲವೇ ಇಲ್ಲದೇ ಇಡೀ ಸಂಸಾರವನ್ನು ತನ್ನ ವ್ಯಕ್ತಿತ್ವದ ಒಂದು ಭಾಗವೇ ಎಂದು ತಿಳಿದು ಕೊನೆಯತನಕ ಅದಕ್ಕಾಗಿ ಜೀವ ತೇಯ್ದ ಸೋಫಿಯಾ ವ್ಯಕ್ತಿತ್ವವೂ ಅಷ್ಟೇ ಮುಖ್ಯವಾದುದಲ್ಲವೆ? ಅವನ ಮನೆಯ ಆವರಣದ ಮರಗಳನ್ನು ಕಡಿಸಲು ಮುಂದಾದಾಗ ಅವು ತನ್ನ ಗಂಡನಿಗೆ ಪ್ರಿಯವಾದವು ಎನ್ನುವ, ಆ ಮರಗಳಿಂದ ಬರುವ ಆದಾಯ ತನ್ನ ಸಂಸಾರಕ್ಕೆ ತೀರಾ ಅಗತ್ಯ ಎನ್ನುವ ಸ್ಥಿತಿಯಲ್ಲಿ ಅದನ್ನು ವಿರೋಧಿಸಿದ ಸೋಫಿಯಾಳನ್ನು ಖಳನಾಯಕಿಯಂತೆ ನೋಡಬೇಕೋ? ‘ತನ್ನವ್ವ ಬದುಕಿದ್ದು, ರೊಟ್ಟಿ, ಸೂರು, ಹಚಡಕ್ಕೆ’ ಎಂದು ನೋಡಬೇಕೋ?

ಇಂಥ ಘನವಾದ ವಿಚಾರಗಳನ್ನೆಲ್ಲ ಚರ್ಚಿಸಲು ಟಾಲ್ಸ್‌ಟಾಯ್‌ನಿಗೂ ಅವನ ಮಿತ್ರಮಂಡಲಿಗೂ ಹೊತ್ತಿಗೊತ್ತಿಗೆ ಆಹಾರ ಪಾನೀಯಗಳೂ ಬೇಕೇ ಇತ್ತಲ್ಲ? ಈ ಎಲ್ಲ ಸೌಕರ್ಯಗಳೂ ಬೇಕು, ಅವುಗಳನ್ನು ಸೋಫಿಯಾಳೇ ನಿಭಾಯಿಸಬೇಕು, ಗಂಡು ಮಾತ್ರ ‘ತನಗೆ ಇದು ಯಾವುದೂ ಬೇಕಿಲ್ಲಪ್ಪ, ಇವಳು ನೋಡಿ ಹೇಗೆ ತನಗೆ ಅಡ್ಡಿ ಮಾಡುತ್ತಾಳೆ’ ಎನ್ನುವ ಧಿಮಾಕು ಮತ್ತು ಆತ್ಮವಂಚನೆಯಲ್ಲಿ ಬೀಗುವುದೂ ಬೇಕು.

ಮರು ಇತಿಹಾಸದಲ್ಲಿ ಸ್ತ್ರೀವಾದಿಗಳು ಪ್ರಯತ್ನಿಸುತ್ತಿರುವುದು ಇಂಥ ಪೂರ್ಣ ದೃಷ್ಟಿಗಾಗಿ. ಇದು ಸಾಧ್ಯವಾಗುವುದು ನಾವು ಇದನ್ನು ನಿರೂಪಿಸುವ ಬಗೆಯಲ್ಲಿ ಮತ್ತು ಒಂದನ್ನು ಇನ್ನೊಂದರೊಂದಿಗೆ ಜೋಡಿಸಿ ಹೆಣೆಯುವ, ನೇಯುವ ಪರಿಯಲ್ಲಿ. ನೇಯ್ಗೆ ಎನ್ನುವುದು ಕಲೆಯೂ ಹೌದು ಶಾಸ್ತ್ರವೂ ಹೌದು. ಯಾವುದನ್ನೋ ಎಲ್ಲಿಂದಲೋ ತಂದು ಯಾವುದರೊಂದಿಗೋ ಸೇರಿಸಿ ನೇಯುತ್ತಾ ಹೆಣ್ಣು ತನ್ನ ಪರಂಪರೆಯ ಮತ್ತು ವ್ಯಕ್ತಿತ್ವದ ಬಟ್ಟೆಯನ್ನು, ಚಹರೆಯನ್ನು ನೇಯುತ್ತಿದ್ದಾಳೆ. ಈ ದೃಷ್ಟಿಯಿಂದ ಎಲ್ಲ ಕಾಲದ ಹೆಣ್ಣು ಮನಸ್ಸುಗಳೂ ಇಲ್ಲಿ ತೊಡಗಿಸಿಕೊಂಡಿವೆ. ಅದು ಸೀತೆ, ದ್ರೌಪದಿಯರಿರಬಹುದು, ಅದೇ ಹೆಸರನ್ನು ಹೊತ್ತ ಕಾಲದ ವ್ಯತ್ಯಾಸವಿರುವ ಆದರೆ ವ್ಯಕ್ತಿತ್ವದ ಅದೇ ಚೈತನ್ಯವನ್ನು ಹೊಂದಿರುವ, ಹೆಚ್ಚುಕಡಿಮೆ ಅದೇ ಸವಾಲುಗಳನ್ನು ಎದುರಿಸುತ್ತಿರುವ ಈ ನಮ್ಮ ಕಾಲದವರಿರಬಹುದು.

ಇತಿಹಾಸದುದ್ದಕ್ಕೂ ಹೆಣ್ಣು ನಡೆಸುತ್ತಲೇ ಬಂದಿರುವ ಹಲವು ಮಾದರಿಗಳನ್ನು ಗುರುತಿಸಿ ಒಂದೆಡೆಗೆ ತಂದುಕೊಳ್ಳುವುದರಲ್ಲಿ ಅನೇಕ ಅನುಕೂಲಗಳಿವೆ. ನಾವು ನೋಡುವ ನೋಟ ಬದಲಾದದ್ದೇ ಸೋತ ಹೆಣ್ಣಾಗಿ, ದುರಂತ ನಾಯಕಿಯ ಹಾಗೆ ಕಾಣುತ್ತಿದ್ದ ಹೆಣ್ಣು ತನ್ನ ಧೀಶಕ್ತಿಯ ಬಲದಿಂದ ಉಜ್ವಲವಾಗಿ ಬೆಳಗುವ ಹೆಣ್ಣಾಗಿ ಕಾಣಿಸುತ್ತಾ ಹೋಗುತ್ತಾಳೆ. ಬರೆಹಗಾರರ ಉದ್ದೇಶಗಳನ್ನು, ಪೂರ್ವಗ್ರಹಗಳನ್ನು ತನ್ನ ಆತ್ಮದ ಬಲದಿಂದಲೇ ಎದುರಿಸುವ ಹೆಣ್ಣಾಗಿ ಕಾಣಿಸುತ್ತಾ ನಮ್ಮ ಸ್ವಮರುಕವನ್ನು ತೊಡೆದು ಹಾಕುತ್ತಾ ದಾರಿ ತೋರಿಸುವ ದೀಪಗಳಾಗುತ್ತಾ ಹೋಗುತ್ತಾರೆ.

ಈ ಅಂಕಣ ಉದ್ದೇಶಿಸಿದ್ದು ಇಂಥ ಸ್ವಯಂಪ್ರಭೆಯರ ಸಾಲುದೀಪಗಳನ್ನು. ಹೆಣ್ಣಿನ ಸ್ಥಿತಿಗತಿಗಳು ಬದಲಾಗಬೇಕು ಎನ್ನುವುದಲ್ಲ, ನಾವು ಅವಳನ್ನು ನೋಡುವ, ನಮ್ಮನ್ನು ನಾವು ನೋಡಿಕೊಳ್ಳುವ ಪರಿ ಬದಲಾದರೆ ನಮ್ಮ ಇತಿಹಾಸ, ವರ್ತಮಾನ ಮತ್ತು ಭವಿಷ್ಯಗಳು ನಿಧಾನವಾಗಿ ಬದಲಾಗುತ್ತವೆ ಎನ್ನುವ ಆಶಯದಲ್ಲಿ, ನಂಬಿಕೆಯಲ್ಲಿ ಈ ಪ್ರಯಾಣ ಆರಂಭವಾಯಿತು. ಒಂದು ರೀತಿಯಲ್ಲಿ ಇದು ರಚನೆಯೂ ಹೌದು ನಿರಚನೆಯೂ ಹೌದು. ಕಟ್ಟುವುದೂ ಹೌದು, ಕೆಡವುವುದೂ ಹೌದು. ಅಥವಾ ಇದನ್ನು ಹೀಗೆ ಹೇಳೋಣ. ತನ್ನನ್ನು ತಾನೇ ಹೆಣ್ಣು ರಚಿಸಿಕೊಳ್ಳುತ್ತಾ ಕಟ್ಟಿಕೊಳ್ಳುತ್ತಾ ಹೋಗುವುದು. ಅವರಲ್ಲ ನಾನು ಬದಲಾಗಬೇಕು ಮೊದಲು, ಆಮೇಲೆ ಅವರು ಅನಿವಾರ್ಯವಾಗಿ ಬದಲಾಗುತ್ತಾರೆ– ಅಂಥ ಹಕ್ಕೊತ್ತಾಯವನ್ನು ನಮ್ಮ ನಿರೂಪಣೆಗಳು ಮತ್ತು ನೇಯ್ಗೆ ನಿರ್ಮಿಸಬೇಕು.

ಇಂಥ ಆಸೆ ಹುಟ್ಟಿದ್ದು ಬಹು ಹಿಂದೆ ಕೂಡಲ ಸಂಗಮದಲ್ಲಿ. ನಾನು ಮಂಡಿಸಿದ ಪ್ರಬಂಧಕ್ಕೆ ವಿರೋಧ ಬಂದಾಗ, ಕನ್ನಡದ ಎಲ್ಲ ಮುಖ್ಯ ಲೇಖಕ-ಲೇಖಕಿಯರನ್ನು ಹೀಗೊಂದು ಮರು ಓದಿಗೆ ಒಳಗು ಮಾಡಬೇಕು, ಆಗ ಕಾಣುವ ಸಾಹಿತ್ಯ ಚರಿತ್ರೆಯ ಸ್ವರೂಪವೇ ಬೇರೆಯಾಗಿರುತ್ತದೆ ಅಲ್ಲವೆ ಎಂದು ಅನ್ನಿಸಿಬಿಟ್ಟಿತ್ತು. ‘ಸಾಪ್ತಾಹಿಕ ಪುರವಣಿಗೆ (ಮುಕ್ತಛಂದ) ಅಂಕಣ ಬರೆಯಿರಿ’ ಅಂದಾಗ, ಸಂಪಾದಕರ ಧೈರ್ಯ ತುಸು ಹೆಚ್ಚಾಯಿತಲ್ಲವೆ ಅನಿಸಿದ್ದೂ ನಿಜ. ಪರಿಭಾಷಾದೇವಿಯೆನ್ನುವ ಖ್ಯಾತಿ ಮತ್ತು ಅಪಖ್ಯಾತಿಯ ವಿಮರ್ಶಕಿಯನ್ನು ಅಂಕಣಕ್ಕಾಗಿ ಕೇಳುವುದು ಒಂದು ರಿಸ್ಕ್ ಅಂತಲೇ ಕಾಣಿಸಿತ್ತು. ಆದರೆ ಘಟಿಸಿದ್ದು ಮಾತ್ರ ಇದಕ್ಕೆ ವಿರುದ್ಧವಾಗಿತ್ತು! ಈ ಅಂಕಣದ ಮೂಲಕ ನಾನೇ ರೂಪಾಂತರಗೊಂಡೆ. ಹೇಳಬೇಕಾದ್ದನ್ನು ಆದಷ್ಟು ಸರಳವಾಗಿ ಹೇಳಲು ಪ್ರಯತ್ನಿಸುತ್ತಾ ಹೋದೆ.

ಇದು ಸಾಧ್ಯವಾದದ್ದು ಓದುಗರ ಅಪೂರ್ವವೆನಿಸುವ ಪ್ರತಿಕ್ರಿಯೆಗಳಿಂದಾಗಿ. ಮುಖ್ಯವಾಗಿ ಸಾಹಿತ್ಯ ಪಠ್ಯಗಳನ್ನು ಆಧರಿಸಿ ನಡೆಸಿದ ಈ ಶೋಧ ಹೀಗೆ ಎಲ್ಲ ವರ್ಗದವರನ್ನು, ಎಲ್ಲ ವಯಸ್ಸಿನವರನ್ನು, ಎಲ್ಲಕ್ಕಿಂತ ಹೆಚ್ಚಾಗಿ ಹೆಣ್ಣಿನ ಇಂಥ ಪ್ರಯತ್ನಗಳನ್ನೇ ವಿರೋಧಿಸುವವರನ್ನೂ ಮುಟ್ಟಬಹುದೆಂದು ನಾನು ಎಣಿಸಿರಲಿಲ್ಲ.

ಕಳೆದ ೧೦–೧೫ ವರ್ಷಗಳಿಂದ ವಿಮರ್ಶೆ, ಸ್ತ್ರೀವಾದದಲ್ಲಿ ನಾನು ನಡೆಸಿದ ಚೂರು ಪಾರು ಪ್ರಯತ್ನಗಳು ಈ ಅಂಕಣದ ಮೂಲಕ ನನಗೆ ಕೊಟ್ಟ ವಿಶ್ವಾಸಾರ್ಹತೆ, ಪ್ರೀತಿ, ಆತ್ಮವಿಶ್ವಾಸ ಬಲು ದೊಡ್ಡದು, ನನ್ನ ಮಟ್ಟಿಗೆ ಊಹಾತೀತವಾದದ್ದು. ಬ್ಯಾಂಕಿನಲ್ಲಿ, ರೈಲಿನಲ್ಲಿ, ಸಾರ್ವಜನಿಕ ಕಚೇರಿಗಳಲ್ಲಿ, ವಾಕಿಂಗ್‌ನಲ್ಲಿ, ಕೊನೆಗೆ ಕಾರಿನ ಸರ್ವೀಸ್ ಸ್ಟೇಷನ್‌ನಲ್ಲಿ ಅಂಕಣದ ಬಗ್ಗೆ ಚರ್ಚೆಗೆ ಓದುಗರು ಮುಂದಾಗುತ್ತಿದ್ದುದನ್ನು ನೆನೆದರೆ ಒಂದು ಅಂಶ ಸ್ಪಷ್ಟವಾಗುತ್ತದೆ.

ಹೆಣ್ಣನ್ನು ನೋಡುವ ನಿಲುವು, ಪರಿಭಾವಿಸುವ ಸಂವೇದನೆ ಎಲ್ಲದರಲ್ಲೂ ಒಂದು ಮೂಲಭೂತ ಪಲ್ಲಟದ ಅಗತ್ಯ ಇದೆ ಎನ್ನುವುದು ಸಮುದಾಯದಲ್ಲಿ ಸ್ಪಷ್ಟವಾಗಿ, ಅಸ್ಪಷ್ಟವಾಗಿ ಮೂಡಿದೆ. ಅದಕ್ಕೆ ಬೇಕಾದ ಆವರಣವನ್ನು ಈ ಅಂಕಣ ಸಣ್ಣದಾಗಿ ಕೊಟ್ಟಿದೆ ಎನ್ನುವ ಅಂಶವದು. ಹೀಗಾಗಿ ಇದಕ್ಕೊಂದು ಪ್ರಾತಿನಿಧಿಕ ನೆಲೆಯೂ ದಕ್ಕಿತೇನೋ. ಅವರೆಲ್ಲರ ಮನಸ್ಸಿನಲ್ಲಿದ್ದದನ್ನೇ, ಅವರಿಗೆ ಬೇಕಾದದ್ದನ್ನೇ ನಾನು ಹೇಳಲು ಪ್ರಯತ್ನ ಪಟ್ಟಿದ್ದಿರಬೇಕು.

ತುಂಬ ಮುಖ್ಯವಾಗಿ ಗೃಹಿಣಿಯರು ಮತ್ತು ಈ ತಲೆಮಾರಿನ ಹುಡುಗ ಹುಡುಗಿಯರು ಇದಕ್ಕೆ ಸ್ಪಂದಿಸಿದ್ದು ನನಗೆ ಸಾರ್ಥಕಭಾವವನ್ನೇ ಹುಟ್ಟಿಸಿದೆ. ನನ್ನ ಶಕ್ತಿಮೂಲಗಳಲ್ಲೊಂದಾದ ನನ್ನ ಅಮ್ಮನಿಂದ ಹಿಡಿದು ಅಕ್ಷರಶಃ ನೂರಾರು ಹೆಣ್ಣುಮಕ್ಕಳು ನಿರಂತರವಾಗಿ ಸ್ಪಂದಿಸಿದ್ದು ಅವರ ಧ್ವನಿಯಾಗಿ ಇದನ್ನು ಕಂಡದ್ದರಿಂದಲೆ ಇರಬೇಕು. ಸೆಮಿನಾರ್ ಒಂದರಲ್ಲಿ ಹುಡುಗನೊಬ್ಬ ‘ನಿಮ್ಮ ಅಂಕಣದಿಂದ ನಾನು ನನ್ನ ಅಮ್ಮ, ಅಕ್ಕತಂಗಿಯರನ್ನು ನೋಡುವ ಕ್ರಮವೇ ಬದಲಾಯಿತು’ ಎಂದಾಗ, ‘ಸಾಕಲ್ಲವೆ ಇಷ್ಟಾದರೆ, ಒಂದು ಸಣ್ಣ ಸಂಚಲನೆ ಈ ತಲೆಮಾರಿನವರಲ್ಲಿ ಹುಟ್ಟಿದರೆ ಅದು ಮುಂದುವರಿದೀತು’ ಎನ್ನುವ ಆಶಾಭಾವನೆ ಹುಟ್ಟಿತು.

ವೈದ್ಯರೊಬ್ಬರು ‘ಹೆಣ್ಣಿನ ವ್ಯಕ್ತಿತ್ವವನ್ನು ಹೀಗೆ ನೋಡುವ ಕ್ರಮಕ್ಕೆ ವೈದ್ಯಕೀಯ ಆಧಾರಗಳು ಇವೆ’ ಎನ್ನುವ ಅರ್ಥದಲ್ಲಿ ಪ್ರತಿಕ್ರಿಯಿಸಿದಾಗ, ದೇವರೇ ಎನಿಸಿಬಿಟ್ಟಿತು. ದಯವಿಟ್ಟು ಇದನ್ನು ಆತ್ಮರತಿಯಲ್ಲಿ ನೋಡಬೇಡಿ ಎನ್ನುವ ವಿನಂತಿಯೊಂದಿಗೆ ಮುಂದುವರೆಸುತ್ತೇನೆ.

ಕಳೆದ ಕೆಲವು ವರ್ಷಗಳಿಂದ ಸ್ತ್ರೀವಾದವು ಜಗತ್ತಿನ ಮುಂದಿನ ತಾತ್ವಿಕ ಆಯ್ಕೆ ಮತ್ತು ಭವಿಷ್ಯದ ಲೋಕದೃಷ್ಟಿ ಎನ್ನುವ ವಾದ ಮಂಡನೆಗೆ ಸಿಗುತ್ತಿರುವ ಸಮರ್ಥನೆಗಳಾಗಿ ಮಾತ್ರ ಇವುಗಳನ್ನು ದಾಖಲಿಸುತ್ತಿದ್ದೇನೆ. ಕೆಲವರು ಸ್ತ್ರೀವಾದವನ್ನು ಪ್ರತ್ಯೇಕೀಕರಣದ ನೆಲೆಯಲ್ಲಿ ಕಟ್ಟುತ್ತಿದ್ದೀರಿ ಎನ್ನುವ ಆಕ್ಷೇಪವನ್ನೂ ಎತ್ತಿದರು. ಅದು ಪ್ರತ್ಯೇಕೀಕರಣದ ಪ್ರಯತ್ನವಲ್ಲ, ಅನನ್ಯತೆಯನ್ನು ಗುರುತಿಸಿ, ಅದಕ್ಕೆ ಅಧಿಕೃತತೆಯನ್ನು ಕೊಟ್ಟು ಮತ್ತೆ ಅಖಂಡತೆಯ ಭಾಗವಾಗುವ ಪ್ರಕ್ರಿಯೆ ಇದು.

ಎರಡು ವರ್ಷದ ಈ ಬರವಣಿಗೆಯು ಸ್ವಗತವೂ ಹೌದು, ಲೋಕದೊಂದಿಗೆ ನಡೆಸಿದ ಸಂವಾದವೂ ಹೌದು. ಇದಕ್ಕೆ ಅವಕಾಶ ಮಾಡಿಕೊಟ್ಟ ‘ಪ್ರಜಾವಾಣಿ’ ಬಳಗಕ್ಕೆ, ಉದ್ದಕ್ಕೂ ಸಲಹೆ ಸೂಚನೆಗಳನ್ನು, ಎಚ್ಚರಿಕೆಗಳನ್ನು ಕೊಡುತ್ತಾ ಸಹಪ್ರಯಾಣಿಕರಾಗಿ ನನ್ನೊಂದಿಗಿದ್ದ ಎಲ್ಲ ಸಖ ಸಖಿಯರಿಗೆ, ಓದುಗರಿಗೆ ಕೃತಜ್ಞತೆಯ ಕಣ್ಣೀರು.

ಈ ಬರಹದೊಂದಿಗೆ ಎಂ.ಎಸ್. ಆಶಾದೇವಿ ಅವರ ‘ನಾರೀಕೇಳಾ’ ಅಂಕಣ ಕೊನೆಗೊಳ್ಳುತ್ತಿದೆ. –ಸಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.