ಮೂರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಪರಾಮರ್ಶಿಸೋಣ. ಮೊದಲನೆಯದು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿಭಾ ದ್ವೇಷಿಯೇ? ಎರಡನೆಯದು, ಹಾಗಾಗಿದ್ದೇ ಆದರೆ, ಇದು ಕಳೆದ ಏಳು ದಶಕಗಳ ಅವಧಿಯಲ್ಲಿನ ಅತ್ಯಂತ ಪ್ರತಿಭಾ ದ್ವೇಷಿ ನಾಯಕತ್ವವೇ? ಹಾಗೂ ಮೂರನೆಯದಾಗಿ, ಮೋದಿ, ಬಿಜೆಪಿ ಮತ್ತು ಮತದಾರನಿಗೆ ಅದು ಮುಖ್ಯವೇ?

ಮೊದಲ ಎರಡು ಪ್ರಶ್ನೆಗಳಿಗೆ ‘ಹೌದು’ ಎಂಬುದೇ ನಿಶ್ಚಿತವಾದ ಉತ್ತರ. ಒಮ್ಮೆ ಮೂಲಭೂತ ಪ್ರಮೇಯಗಳನ್ನು ಪುಷ್ಟೀಕರಿಸಿದ ನಂತರ ಮೂರನೇ ಪ್ರಶ್ನೆಯ ಕುರಿತು ನಾವು ಚರ್ಚಿಸಬಹುದು.

ಮೊದಲಿಗೆ, ಈ ಸರ್ಕಾರದ ಸಚಿವ ಸಂಪುಟವನ್ನು ಗಮನಿಸೋಣ. ಇದು ಬಹುತೇಕ ಅನನುಭವಿಗಳಿಂದ ಕೂಡಿದ ಸಂಪುಟ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ 10 ವರ್ಷಗಳ ಕಾಲ ಅಧಿಕಾರದಿಂದ ವಂಚಿತವಾಗಿತ್ತು ಹಾಗೂ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಸಹೋದ್ಯೋಗಿಗಳಾಗಿದ್ದವರು ಒಂದಷ್ಟು ಮಟ್ಟಿಗೆ ವಯಸ್ಸಾದವರಾಗಿ ಪಕ್ಷದ ‘ಮಾರ್ಗದರ್ಶಕ ಮಂಡಲಿ’ಗೆ ಸೀಮಿತಗೊಂಡಿದ್ದರು. ಕಿರಿಯರಾದ ರಾಜನಾಥ ಸಿಂಗ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಅನಂತ ಕುಮಾರ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಯಿತು. ಮೂಲಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ರಾಜ್ಯದ ಸಚಿವರಾಗಿ ಅಗತ್ಯ ಅನುಭವಿಯಾಗಿದ್ದ ನಿತಿನ್ ಗಡ್ಕರಿ, ಸರ್ವಋತು ವ್ಯಕ್ತಿಯಾಗಿ ಬೆಳೆದ ಕಠಿಣ ಪರಿಶ್ರಮಿ ಪೀಯೂಷ್ ಗೋಯಲ್ ಅವರಿಗೆ ನಾಲ್ಕೈದು ಪ್ರಮುಖ ಖಾತೆಗಳ ನಿರ್ವಹಣೆ ಹೊಣೆಯನ್ನು ವಹಿಸಲಾಯಿತು. 70 ಸಚಿವರ ಸಂಪುಟದಲ್ಲಿ ಇವರನ್ನು ಹೊರತುಪಡಿಸಿದರೆ, ಬೇರೆ 10 ಸಚಿವರ ಹೆಸರನ್ನು ಅನ್ಯರ ಸಹಾಯವಿಲ್ಲದೆ ಅಥವಾ ಗೂಗಲ್ ಮೊರೆ ಹೋಗದೆ ನಿಮಗೆ ಹೇಳಲು ಆಗುತ್ತದೇನು?

ನಾನು ಪಾಲ್ಗೊಳ್ಳುವ ಸಾರ್ವಜನಿಕ ಸಮಾರಂಭಗಳಲ್ಲಿ ವಿವಿಧ ಬಗೆಯ ಸಭಿಕರೊಂದಿಗೆ ಪ್ರಶ್ನೋತ್ತರ ರೂಪದ ಸಂವಾದ ನಡೆಸುತ್ತಾ ಬಂದಿದ್ದೇನೆ. ಮೋದಿ ಅವರ ಸರ್ಕಾರ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಈ ಅವಧಿಯಲ್ಲಿ,
ಪತ್ರಿಕೋದ್ಯಮದ ವಿದ್ಯಾರ್ಥಿಗಳಿಂದ ಹಿಡಿದು ಸಾಫ್ಟ್ ವೇರ್ ಕಂಪನಿಯ ಸಿಇಒಗಳವರೆಗೆ ವಿಭಿನ್ನ ಹರಹಿನ ಸಭಿಕರನ್ನು ಎದುರುಗೊಂಡಿದ್ದೇನೆ. ನಮ್ಮ ದೇಶದ ಕೃಷಿ ಸಚಿವರು ಯಾರು ಗೊತ್ತೇ? ಎಂಬ ಪ್ರಶ್ನೆ ಕೇಳಿದ್ದೇನೆ. ಇದುವರೆಗೆ ಯಾರೂ ಕೈ ಎತ್ತಿರುವ ನಿದರ್ಶನ ನನಗೆ ಸಿಕ್ಕಿಲ್ಲ. ರಾಧಾ ಮೋಹನ್ ಸಿಂಗ್ ನಮ್ಮ ಕೃಷಿ ಸಚಿವರು ಎಂದು ತಿಳಿಸಿದರೆ, ‘ಯಾರು ಅವರು?’ ಎಂಬ ಮರುಪ್ರಶ್ನೆಯಷ್ಟೇ ಸಭಿಕರಿಂದ ಕೇಳಿಬರುತ್ತದೆ.

ಇದು ಒಳ್ಳೆಯ ಪ್ರಶ್ನೆಯೇ ಇರಬಹುದು. ಆದರೆ ಯುಪಿಎ ಸರ್ಕಾರದಲ್ಲಿ ಆಗಾಗ ಕಳಂಕಿತ ಆರೋಪಗಳಿಗೆ ತುತ್ತಾಗುತ್ತಿದ್ದ ಶರದ್ ಪವಾರ್ ಅವರು ಕೃಷಿ ಸಚಿವರಾಗಿದ್ದಾಗಿನ ಅವಧಿಗಿಂತ ಈಗಿನ ಕೃಷಿ ಕ್ಷೇತ್ರದ ಬೆಳವಣಿಗೆ ಕೇವಲ ಅರ್ಧದಷ್ಟು ಇರುವಾಗ, ಯಾರು ಕೃಷಿ ಮಂತ್ರಿಯಾದರೇನು ಅಲ್ಲವೇ? ಮುಂಬರುವ ಐದು ವರ್ಷಗಳಲ್ಲಿ ರೈತಾಪಿ ಜನರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಪ್ರಧಾನಿ ಮೋದಿ ಅವರು 2017ರಲ್ಲಿ ನೀಡಿರುವ ವಾಗ್ದಾನ ಈಡೇರಬೇಕೆಂದರೆ ಹಸಿರು ಕ್ರಾಂತಿಯನ್ನು ಮೀರಿಸುವ ಕೆಲಸ ಈಗ ನಡೆಯಬೇಕು. ಆದರೆ ಆಗಿರುವುದಾದರೂ ಏನು? ನಮ್ಮ ದೇಶದಲ್ಲಿ ವೈಜ್ಞಾನಿಕ ಮತ್ತು ಕೃಷಿ ಸಂಶೋಧನೆಗಳನ್ನು ತಿರಸ್ಕರಿಸಿ, ಅವುಗಳನ್ನು ಅನುಮಾನದಿಂದ ನೋಡಲಾಗುತ್ತಿದೆ!

ಇದನ್ನು ಈಗಿಂದೀಗಲೇ ತಿದ್ದಿಕೊಳ್ಳದೇ ಹೋದರೆ ಭಾರತವು ತನ್ನ ಕೃಷಿ ಪ್ರಯೋಗಾಲಯಗಳಲ್ಲಿ ಪ್ರತಿಭಾ ಪಲಾಯನದ ಹೊಸ ಪರ್ವವನ್ನು ಎದುರಿಸಬೇಕಾಗುತ್ತದೆ. ಬರೀ ಹಸುವಿನ ಸಗಣಿ, ಮೂತ್ರ, ವೇದ ಕಾಲದ ಸಾವಯವ ಕೃಷಿಯ ಮಹತ್ವದ ಬಗ್ಗೆಯೇ ಆವಿಷ್ಕಾರ ನಡೆಸುತ್ತಾ ಕೂತರೆ ಭವಿಷ್ಯವು ನಿಸ್ಸಂಶಯವಾಗಿಯೂ ಮಸುಕಾಗುತ್ತದೆ.

ಇಂದಿರಾ ಗಾಂಧಿ ಅವರು ‘ಹಸಿರು ಕ್ರಾಂತಿ’ ಬಯಸಿದಾಗ, ಸಿ. ಸುಬ್ರಮಣ್ಯಂ ಅವರಂತಹ ಮೇಧಾವಿ ಹಾಗೂ ಆಧುನಿಕ ಮನೋಧೋರಣೆಯ ವ್ಯಕ್ತಿಯನ್ನು ಕೃಷಿ ಮಂತ್ರಿಯನ್ನಾಗಿ ನಿಯುಕ್ತಿಗೊಳಿಸಿದ್ದರು. ಆದರೆ ‘ಹಸಿರು ಕ್ರಾಂತಿ 2.0’ ನಡೆಸಲು ಬಯಸುವ ಈ ಸರ್ಕಾರ ಅಂತಹ ಮಹತ್ವದ ಸ್ಥಾನಕ್ಕೆ ಎಂತಹ ವ್ಯಕ್ತಿಯನ್ನು ನಿಯೋಜನೆ ಮಾಡಿದೆ?

ಇದು ಕೇವಲ ಕೃಷಿ ಕ್ಷೇತ್ರವೊಂದಕ್ಕೆ ಅನ್ವಯವಾಗುವಂಥದ್ದಲ್ಲ. ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ, ಭಾರಿ ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ನ್ಯಾಯ ಮತ್ತು ಸಣ್ಣ ಕೈಗಾರಿಕಾ ಸಚಿವರ ಹೆಸರುಗಳನ್ನು ಕೇಳಿದರೂ ಸಭಿಕರಿಂದ ಇಂತಹ ಪ್ರತಿಕ್ರಿಯೆಯೇ ವ್ಯಕ್ತವಾಗುತ್ತದೆ. ಇದು ನಿಶ್ಚಿತವಾಗಿಯೂ ನಮ್ಮ ಚರಿತ್ರೆಯಲ್ಲಿನ ಅತ್ಯಂತ ಅಪರಿಚಿತ ಸಚಿವ ಸಂಪುಟವಾಗಿದೆ.

ಈಗ ಎಲ್ಲಾ ಆಡಳಿತ, ಚಿಂತನೆ ಮತ್ತು ಅನುಷ್ಠಾನಗಳು ಪ್ರಧಾನಿ ಕಚೇರಿಯಿಂದಲೇ ನಡೆಯುತ್ತಿರುವುದರಿಂದ ಅವರೊಂದಿಗೆ ಮಹಾನ್ ತಂಡವೊಂದು ಇದ್ದಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು. ಅವರೊಂದಿಗೆ ದಕ್ಷ ಮತ್ತು ನಿಷ್ಠ ನಾಗರಿಕ ಸೇವಾ ಅಧಿಕಾರಿಗಳೇನೋ ಖಂಡಿತವಾಗಿಯೂ ಇದ್ದಾರೆ. ಹಾಗೆಂದ ಮಾತ್ರಕ್ಕೆ ಸೃಜನಶೀಲತೆ ಅದೆಲ್ಲಿಂದ ಬಂದು ಬಿಡುತ್ತದೆ?ಪ್ರಧಾನ ಮಂತ್ರಿಯವರೇನೋ ಚತುರಮತಿಯೇ ಹೌದು; ಅವರು ಹೇಳಿಕೊಳ್ಳುತ್ತಿರುವ ಪ್ರಕಾರ, ರಾಷ್ಟ್ರದ ಪ್ರತಿಯೊಂದು ಜಿಲ್ಲೆಯನ್ನೂ ಅವರು ಎಡತಾಕಿರಬಹುದು; ಆದರೆ, ಭಾರತದಂತಹ ಖಂಡ ವೈಶಾಲ್ಯದ ರಾಷ್ಟ್ರವೊಂದಕ್ಕೆ ಬೇಕಾಗುವ ಎಲ್ಲ ಚಿಂತನೆಗಳನ್ನೂ ಎಂತಹ ಮಹಾನ್ ನಾಯಕನೂ ಒಬ್ಬಂಟಿಯಾಗಿ ಮಾಡಲಾಗದು.

ಪ್ರಧಾನಿಯವರ ಬಳಗದಲ್ಲಿ ಮುಂಚೆ ಇರುತ್ತಿದ್ದ ಸಂವಾದ ಮತ್ತು ಸಲಹಾ ಮಂಡಳಿಗಳನ್ನು ಈಗ ರದ್ದುಪಡಿಸಿರುವುದು ಅಥವಾ ಅದನ್ನು ಮೊಟಕುಗೊಳಿಸಿರುವುದು ಕಾಕತಾಳೀಯವಾಗಿರಲಿಕ್ಕಿಲ್ಲ. ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯು (ಎನ್ಎಸ್ಎಬಿ) ಕೇವಲ ಐವರು ಸದಸ್ಯರಿರುವ, ಈ ಹಿಂದಿನ ಮಂಡಳಿಯ ಛಾಯೆ ಎಂಬಂತೆ ಮಾತ್ರ ಭಾಸವಾಗುವ ಪುಟ್ಟ ತಂಡವಾಗಿ ಕುಗ್ಗಿ ಹೋಗಿದೆ. ಈ ಮುಂಚೆ ಅದು ಮಹತ್ವದ ರಾಷ್ಟ್ರೀಯ ನೀತಿಗಳಿಗೆ ಕಾರಣವಾಗುತ್ತಿದ್ದ ಪ್ರಮುಖ ಕಾರ್ಯತಂತ್ರ ಶಕ್ತಿ ಕೇಂದ್ರವಾಗಿತ್ತು. ನಮ್ಮ ಪರಮಾಣು ನೀತಿಯ ಕರಡನ್ನು ಕೂಡ ಅದು ಸಿದ್ಧಪಡಿಸಿತ್ತು. ಸಾರ್ವಜನಿಕ ವಲಯದಿಂದ ಮೂಡಿಬಂದ ಬುದ್ಧಿಜೀವಿಗಳು, ಕಾರ್ಯತಂತ್ರ ಚಿಂತಕರು ಸೇರಿದಂತೆ ವೈವಿಧ್ಯಮಯ ಹಿನ್ನೆಲೆಯ ಸದಸ್ಯರನ್ನು ಅದು ಒಳಗೊಂಡಿತ್ತು. ಆದರೆ ಈ ಸರ್ಕಾರದ ಅವಧಿಯಲ್ಲಿ ಅವರೆಲ್ಲರೂ ತಂತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಬಿಡಿಬಿಡಿಯಾಗಿ ಕಾರ್ಯಮಗ್ನರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಬ್ರಜೇಶ್ ಮಿಶ್ರಾ ಅವರು ಅಸ್ತಿವಾರ ಹಾಕಿದ್ದ ದೊಡ್ಡ ಮಟ್ಟದ ಚರ್ಚೆ, ಸಂವಾದ, ಚಿಂತನೆಗಳ ವಿನಿಮಯ ಇತ್ಯಾದಿ ಈಗ ಮುಗಿದ ಅಧ್ಯಾಯವಾಗಿದೆ. ಈಗಿರುವ ಹೊಸದಾದ ಪುಟ್ಟ ಎನ್ಎಸ್ಎಬಿ ಕೇವಲ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ವರದಿ ಸಲ್ಲಿಸುವ ಮಂಡಳಿಯಾಗಿ ಅಸ್ತಿತ್ವದಲ್ಲಿದೆ.

ಪ್ರಧಾನ ಮಂತ್ರಿ ಮತ್ತು ಸಚಿವ ಸಂಪುಟದ ಎರಡು ವೈಜ್ಞಾನಿಕ ಸಲಹಾ ಮಂಡಳಿಗಳು ಕೂಡ ಆಗೊಮ್ಮೆ ಈಗೊಮ್ಮೆ ಸದ್ದು ಮಾಡುತ್ತಿವೆ. ಮೋದಿ ಅವರ ಸರ್ಕಾರವು ತನ್ನದೇ ಮುಖ್ಯ ವೈಜ್ಞಾನಿಕ ಸಲಹೆಗಾರರನ್ನು ಆಡಳಿತದ ಐದನೇ ವರ್ಷದ ಸಂದರ್ಭದಲ್ಲಿ ನೇಮಿಸಿಕೊಂಡಿದೆ. ಈ ಸ್ಥಾನಕ್ಕೆ ಮೇಲ್ಮಟ್ಟದ ಸಾಧಕ ವಿಜ್ಞಾನಿಯೊಬ್ಬರನ್ನು ನಿಯುಕ್ತಿಗೊಳಿಸಿದ್ದರೂ ಅವರ ಸ್ಥಾನಮಾನವನ್ನು ರಾಜ್ಯ ಸಚಿವ ಸ್ಥಾನದಿಂದ ಕಾರ್ಯದರ್ಶಿ ಮಟ್ಟಕ್ಕೆ ತಗ್ಗಿಸಿದೆ. ಈ ಮುಂಚೆ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸ್ಥಾನಕ್ಕೆ ಪರಮಾಣು ವಿಜ್ಞಾನಿ ಆರ್. ಚಿದಂಬರಂ ಅವರನ್ನು ನೇಮಿಸಿದ ಸಂದರ್ಭದಲ್ಲಿ, ಈ ಸ್ಥಾನಮಾನವನ್ನು ಕ್ಯಾಬಿನೆಟ್ ದರ್ಜೆಯಿಂದ ರಾಜ್ಯ ಸಚಿವ ಮಟ್ಟಕ್ಕೆ ಇಳಿಸಲಾಗಿತ್ತು. ಭಾರತ ರತ್ನ ಸಿ.ಎನ್.ಆರ್. ರಾವ್ ಅವರು ಈ ಮುಂಚೆ ಸಚಿವ ಸಂಪುಟದ ವೈಜ್ಞಾನಿಕ ಸಲಹಾ ಮಂಡಳಿಯ ನೇತೃತ್ವ ವಹಿಸಿಕೊಂಡಿದ್ದರು. ಈಗ ಈ ಮಂಡಳಿ ಹೆಚ್ಚೂಕಡಿಮೆ ನಿಷ್ಕ್ರಿಯವಾಗಿ ಹೋಗಿದೆ.

ಇನ್ನು ಆರ್ಥಿಕ ವಲಯದಲ್ಲಿ ಏನಾಗಿದೆ? ಮೋದಿ ಅವರ ಸರ್ಕಾರವು ನಾಲ್ಕು ವರ್ಷದೊಳಗೆ ತನ್ನ ನಾಲ್ವರು ಜಾಗತಿಕ ಅರ್ಥಶಾಸ್ತ್ರಜ್ಞರ ಪೈಕಿ ಮೂವರನ್ನು ಕಳೆದುಕೊಂಡಿದೆ: ರಘುರಾಮ್ ರಾಜನ್, ಅರವಿಂದ್ ಪನಗರಿಯಾ ಮತ್ತು ಅರವಿಂದ್ ಸುಬ್ರಮಣಿಯನ್ ಅವರೇ ಈ ಮೂವರು. ನಾಲ್ಕನೆಯವರಾದ, ನೋಟು ರದ್ದತಿ ಪ್ರಕ್ರಿಯೆಯಲ್ಲಿ ಕೇವಲ ‘ಆಜ್ಞಾನುವರ್ತಿ’ ಆಗಬೇಕಾಗಿ ಬಂದ ಆರ್‌ಬಿಐನ ಈಗಿನ ಗವರ್ನರ್ ಉರ್ಜಿತ್ ಪಟೇಲ್ ವೃತ್ತಿಪರ ಗೌರವ ಮತ್ತು ಸಾಂಸ್ಥಿಕ ಸ್ವಾಯತ್ತತೆಗಾಗಿ ಕಿರಿಕಿರಿಗೊಳ್ಳುತ್ತಲೇ ಹೋರಾಡುತ್ತಿದ್ದಾರೆ.

ನೋಟು ಅಮಾನ್ಯೀಕರಣದ ನಂತರ ಆರ್ಥಿಕತೆ ಸೊರಗಿದ ಮೇಲೆ ಸರ್ಕಾರ ಈಗ ತಡವಾಗಿ, ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯನ್ನು ಕೇವಲ ತೋರಿಕೆಗೆ ಎಂಬಂತೆ ಪುನರ್‌ರಚನೆ ಮಾಡಿದೆ. ಆದರೆ ನಿಮಗೆ ಗೊತ್ತೇ? ಪ್ರಧಾನಿಯವರು ಮಂಡಳಿಯವರನ್ನು ಭೇಟಿ ಮಾಡುವುದೇ ಇಲ್ಲ. ಅವರು ಭೇಟಿ ಮಾಡುವುದು ಏನಿದ್ದರೂ ಸರ್ಕಾರದ ಭಾಗವಾಗಿರುವ ಇಬ್ಬರು ಮುಖ್ಯಸ್ಥರಾದ ಅರ್ಥಶಾಸ್ತ್ರಜ್ಞ ವಿವೇಕ್ ದೇವರಾಯ್, ಮಾಜಿ ಐಎಎಸ್ ಅಧಿಕಾರಿ ಹಾಗೂ ಖರ್ಚು ವೆಚ್ಚ ಕಾರ್ಯದರ್ಶಿ ರತನ್ ವಾಟಲ್ ಅವರನ್ನು ಮಾತ್ರ. ಉಳಿದ ನಾಲ್ವರು ಸದಸ್ಯರು ಹೆಸರಿಗೆ ಮಾತ್ರ ಎಂಬಂತೆ ಇದ್ದಾರೆ. ಪ್ರಧಾನಿ ಅವರಿಗಾಗಿ ದೇವರಾಯ್ ಮತ್ತು ವಾಟಲ್ ಅವರು ಸಿದ್ಧಪಡಿಸುವ ಬಹುತೇಕ ವರದಿಗಳನ್ನು ‘ಹೊರಗಿನವರಾದ’ ಉಳಿದ ನಾಲ್ವರೊಂದಿಗೆ ವಿನಿಮಯ ಕೂಡ ಮಾಡಿಕೊಳ್ಳುತ್ತಿಲ್ಲ. ಇದು ಅಪ್ಪಟವಾಗಿಯೂ ಒಳಗಿರುವವರ ಸರ್ಕಾರ. ಹೊರಗಿನವರು ಕೇವಲ ಉಪಯೋಗಕ್ಕೆ ಬರುವ ಚೀರ್ ಲೀಡರ್ಸ್ ಮಾತ್ರ.

ಈ ಸರ್ಕಾರವು ವಿದ್ವತ್ತು ಹಾಗೂ ವಿದ್ವಜ್ಜನರ ಬಗ್ಗೆ ಅಸಹಿಷ್ಣುತೆಯ ಧೋರಣೆ ಹೊಂದಿದೆ. ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಹಾರ್ಡ್ ವರ್ಕ್ ಬೀಟ್ಸ್ ಹಾರ್ವರ್ಡ್’ ಎಂದು ಹೇಳಿದಾಗಲೇ ಇದು ನಮ್ಮ ಅರಿವಿಗೆ ಬರಬೇಕಿತ್ತು. ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಬೇಕೆಂದರೆ ಅಪಾರ ಪರಿಶ್ರಮ ಅಗತ್ಯವೆಂಬುದು ಮೊದಲಿಗೆ ಸರ್ಕಾರ ನಡೆಸುವವರಿಗೆ ಗೊತ್ತಿರಬೇಕು. ಒಂದೊಮ್ಮೆ ಸರ್ಕಾರವು ತೆರೆದ ಮನಸ್ಸು ಹೊಂದಿದ್ದರೆ ಹಾರ್ವರ್ಡ್, ಎಂಐಟಿ, ಯೇಲ್ ಹಾಗೂ ಜೆಎನ್ ಯುದ ಉತ್ಕೃಷ್ಟರ ಸೇವೆಯನ್ನು ಪಡೆಯಬಹುದಾಗಿದೆ. ಸುಬ್ರಮಣಿಯನ್ ಅವರ ನಿರ್ಗಮನದ ನಂತರ ಸರ್ಕಾರವು ಮುಖ್ಯ ಆರ್ಥಿಕ ಸಲಹೆಗಾರರ ಕನಿಷ್ಠ ವಿದ್ಯಾರ್ಹತೆ ಮಟ್ಟವನ್ನು ಬದಲಾಯಿಸುವಂತಹ ನಿರ್ಧಾರ ತೆಗೆದುಕೊಂಡಿರುವುದರಲ್ಲಿ ಯಾವ ಅಚ್ಚರಿಯೂ ಕಾಣಿಸುತ್ತಿಲ್ಲ. ಈಗಿನ ಬದಲಾವಣೆಯ ಪ್ರಕಾರ, ಮುಖ್ಯ ಆರ್ಥಿಕ ಸಲಹೆಗಾರ ಸ್ಥಾನಕ್ಕೆ ನಿಯುಕ್ತಿಯಾಗಲು ಡಾಕ್ಟರೇಟ್ ಪದವಿಯ ಅಗತ್ಯವಿಲ್ಲ. ಬಹುಶಃ ‘ಕಠಿಣ ಪರಿಶ್ರಮಿ’ ಎಂಬುದಕ್ಕೆ ನಿದರ್ಶನಗಳು ಸಾಕೇನೋ ಎಂಬುದು ನನ್ನ ಅನಿಸಿಕೆಯಾಗಿದೆ.

ಮೋದಿ ಮತ್ತು ಅಮಿತ್ ಶಾ ಇಬ್ಬರೂ ಈ ಹಿಂದೆ ವಾಜಪೇಯಿ ಅವರ ಅವಧಿಯಲ್ಲಿದ್ದ ಎನ್‌ಡಿಎ ಸಚಿವ ಸಂಪುಟವು ತಮ್ಮ ಪಕ್ಷದ ಸಂಪುಟವಾಗಿರಲಿಲ್ಲ ಎಂದು ಭಾವಿಸಿದ್ದಿರಬಹುದು. ಈಗ ಅವರ ಪಕ್ಷಕ್ಕೆ ಭಾರಿ ಬಹುಮತ ಇದೆ. ಹೀಗಾಗಿ ಯಾವುದೇ ‘ಹೊರಗಿನ ವ್ಯಕ್ತಿ’ಗೆ ಎಂತಹುದೇ ಪ್ರತಿಭೆ ಇದ್ದರೂ ಅವರು ಯಾವುದೇ ಅವಕಾಶವನ್ನು ಕೊಡಲಾರರು.

ಈಗ ಮೂರನೇ ಪ್ರಶ್ನೆಗೆ ಬರೋಣ. ಮತದಾರನಿಗೆ ಇದು ಮುಖ್ಯವೇ? ಉತ್ತಮ ನಾಯಕರಿಗೆ ಅದ್ಭುತವಾದ ಮೇಧಾವಿತನ ಇರುತ್ತದೆ. ಆದರೆ ಮಹಾನ್ ನಾಯಕರಿಗೆ ಹೃದಯ ವೈಶಾಲ್ಯವೂ ಇರುತ್ತದೆ. ಇಂದಿರಾ ಗಾಂಧಿ ಅವರೂ ತಮ್ಮ ಕಚೇರಿಯಿಂದಲೇ ಆಡಳಿತ ನಡೆಸಿದರು. ಆದರೆ ಅವರ ಬಳಗದಲ್ಲಿದ್ದ ಪ್ರತಿಭಾವಂತರ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಅಥವಾ ಅತ್ಯುತ್ತಮ ಸಂವಹನಕಾರ, ವಾಕ್ಚತುರ, ಸ್ವಯಂಸ್ಫೂರ್ತಿಯ ನಾಯಕರಾಗಿದ್ದ, ಆದರೆ ಬೌದ್ಧಿಕವಾಗಿ ಮೇಧಾವಿಯಲ್ಲದ ರೊನಾಲ್ಡ್ ರೇಗನ್ ಅವರ ಬಗ್ಗೆ ಒಮ್ಮೆ ಚಿಂತಿಸಿ ನೋಡಿ. ಅತ್ಯಂತ ಪ್ರತಿಭಾನ್ವಿತ ಆರ್ಥಿಕ ಮತ್ತು ಕಾರ್ಯತಂತ್ರ ನೈಪುಣ್ಯದಿಂದ ಬಳಗವನ್ನು ಕಟ್ಟಿದ್ದ ಅವರು ಶೀತಲ ಸಮರವನ್ನು ಗೆದ್ದು ಯಶಸ್ವಿಯಾದರು.

ಮೋದಿ ಮತ್ತು ಶಾ ತಮಗೆ ಅಗತ್ಯವಾದ ಮಹಾನ್ ಸಂಗತಿಗಳು ತಮ್ಮ ವಲಯದೊಳಗೇ ಲಭ್ಯ ಇವೆ ಎಂದು ಭಾವಿಸಿದ್ದಾರೆ. ಆದರೆ, ಯಾವುದೇ ಸಂಪನ್ಮೂಲಕ್ಕಾದರೂ ಮಿತಿ ಎಂಬುದು ಇರುತ್ತದೆ. ಮೋದಿ ಅವರ ಸರ್ಕಾರದ ಬಳಿ ಇದ್ದ ಬೌದ್ಧಿಕ ಸಂಪನ್ಮೂಲವು ಅದರ ಮೂರನೇ ವರ್ಷದ ಹೊತ್ತಿಗೇ ಬರಿದಾಗಿದೆ. ನೀತಿ ಆಯೋಗವು ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿ ಶಿಫಾರಸು ಮಾಡಿದ್ದ ವೈದ್ಯಕೀಯ ಶಿಕ್ಷಣ ಸುಧಾರಣಾ ಮಸೂದೆ ಮತ್ತು ಖಾಸಗಿ ಕಂಪನಿಗಳಿಂದ ಕಲ್ಲಿದ್ದಲು ಗಣಿಗಳ ಮಾರಾಟವನ್ನು ಕೈಬಿಟ್ಟ ಸರ್ಕಾರದ ಇತ್ತೀಚಿನ ನಿರ್ಧಾರಗಳು ಇದಕ್ಕೆ ಕೈಗನ್ನಡಿಯಾಗಿವೆ. ಇದು ಅಗತ್ಯ ಪೂರ್ವ ತಯಾರಿ ಇಲ್ಲದ ಹಾಗೂ ಅದರ ಪರಿಣಾಮವಾಗಿ ಮೂಡುವ ಭೀತಿಯ ಫಲ.

ಇದು ಮೋದಿ ಅವರ ಸರ್ಕಾರ ಅದೆಷ್ಟು ಬಸವಳಿದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಮಹತ್ವದ ವಲಯಗಳಲ್ಲಿ ಸ್ಥಗಿತತೆ, ಚಲನಶೀಲತೆ ಮಂದವಾಗಿರುವುದು ಹಾಗೂ ಅಸಹನೆಯು ಆಡಳಿತದಲ್ಲಿ ಬೇರು ಬಿಟ್ಟಿವೆ. ಪತ್ರಕರ್ತರು ಔಚಿತ್ಯದ ಪ್ರಶ್ನೆಗಳನ್ನು ಕೇಳಿದಾಗ ಕೂಡ ಅವರನ್ನು ದೂಷಿಸಿ ತೆಪ್ಪಗಾಗಿಸುವಂತಹ ಈಗಿನ ರಕ್ಷಣಾ ಸಚಿವರಂಥವರನ್ನು ನಾನು ಈ ಹಿಂದೆ ನೋಡಿಯೇ ಇಲ್ಲ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮೋದಿ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಆಯ್ಕೆಯಾಗುವುದು ನಿಶ್ಚಿತ ಎಂಬಂತೆ ಒಂದು ವರ್ಷದ ಹಿಂದೆ ತೋರುತ್ತಿದ್ದ ವಾತಾವರಣ ಈಗ ಎಲ್ಲಾ ರೀತಿಯಲ್ಲೂ ಬದಲಾಗುತ್ತಿರುವಂತೆ ತೋರುತ್ತಿದೆ.

ಲೇಖಕ: ‘ದಿ ಪ್ರಿಂಟ್’ನ ಸಂಸ್ಥಾಪಕ
ಮತ್ತು ಪ್ರಧಾನ ಸಂಪಾದಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.