ಹುಬ್ಬಳ್ಳಿಯು ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣ ಕೂಡ ರಾಜ್ಯದ ಇತರೆ ಮಾರುಕಟ್ಟೆಗಳಿಗೆ ಹೋಲಿಸಿದರೆ ವಿಸ್ತೀರ್ಣದ ದೃಷ್ಟಿಯಿಂದ ಭಾರಿ ದೊಡ್ಡದು. ವಹಿವಾಟು ಕೂಡ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ. ಆದರೂ ಈ ಮಾರುಕಟ್ಟೆಯನ್ನು ರೈತರ ಮತ್ತು ವ್ಯಾಪಾರಿಗಳ ಹಿತದೃಷ್ಟಿಯಿಂದ ಅಭಿವೃದ್ಧಿಪಡಿಸುವ ಕಾರ್ಯ 20–25 ವರ್ಷ ಕಳೆದರೂ ಆಗದಿರುವುದು ಸೋಜಿಗವೇ ಸರಿ.

ಹತ್ತಾರು ವರ್ಷಗಳಿಂದ ಖಾಲಿ ಖಾಲಿ ಕಾಣುತ್ತಿದ್ದ ಎಪಿಎಂಸಿ ಆವರಣದಲ್ಲಿ ಈಗ ಎಲ್ಲೆಡೆ ವರ್ತಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಮಳಿಗೆಗಳು ಹಾಗೂ ಗೋದಾಮುಗಳನ್ನು ನಿರ್ಮಿಸಿಕೊಂಡಿರುವುದರಿಂದ ಕಟ್ಟಡಗಳು ಎದ್ದು ನಿಂತಿವೆ. ಇಲ್ಲಿ ಅಭಿವೃದ್ಧಿ ಎಂದರೆ ಇದೊಂದೇ. ಆ ಮಳಿಗೆಗಳಿಗೆ ಹೋಗಲು ರಸ್ತೆಗಳಿಲ್ಲದೆ ದೂಳಿನಲ್ಲೇ ಸಾಗಬೇಕಾದ ಸ್ಥಿತಿ ಇದ್ದರೂ ಕನಿಷ್ಠ ಡಾಂಬರೀಕಣ ಕಾರ್ಯವೂ ಆಗಿಲ್ಲ. ಆಗ ಖಾಲಿ ಜಾಗದಲ್ಲಿ ರಸ್ತೆ ಮಾಡಿ ಏನು ಪ್ರಯೋಜನ ಎಂದು ಕೇಳುತ್ತಿದ್ದ ಆಡಳಿತ ಮಂಡಳಿ, ಈಗ ಉತ್ತರ ಕೊಡಲು ಆಗದ ಸ್ಥಿತಿಯಲ್ಲಿದೆ.

ಅಕ್ಕಿ ಹೊಂಡವನ್ನು ಎಪಿಎಂಸಿಗೆ ಸ್ಥಳಾಂತರಿಸಲು ನಿರ್ಧರಿಸಿದಾಗಲೇ ಸೌಕರ್ಯ ಕಲ್ಪಿಸಬೇಕು ಎಂಬ ಆಲೋಚನೆಯೂ ಅಧಿಕಾರಿಗಳು ಮತ್ತು ಆಡಳಿತಮಂಡಳಿಗೆ ಇರಬೇಕಿತ್ತು. ಆಗ ಇವರಾರೂ ಆ ನಿಟ್ಟಿನಲ್ಲಿ ಯೋಚಿಸದ ಕಾರಣ ಇಂದು ವರ್ತಕರು ದೂಳಿನಲ್ಲಿ ಅಂಗಡಿ ತೆರೆದು ಕುಳಿತು, ಸಂಜೆಗೆ ಬಾಗಿಲು ಹಾಕಿಕೊಂಡು ಹೋಗುವಂತಾಗಿದೆ. ಈ ಅಂಗಡಿಗಳ ಮುಂದೆ ಜನರೇ ಸುಳಿದಾಡುವುದಿಲ್ಲ! ನಿಜ. ಇಲ್ಲಿ ಮನೆಗಳಿಗೆ ಬೇಕಾದ ದಿನಸಿ ಖರೀದಿಸಲು ಜನರು ಬರುವುದಿಲ್ಲ. ಚಿಲ್ಲರೆ ಮಾರಾಟಕ್ಕೂ ಆಸ್ಪದವಿಲ್ಲ. ಬದಲಿಗೆ ಕಿರಾಣಿ ಅಂಗಡಿಗಳನ್ನು ಇಟ್ಟುಕೊಂಡಿರುವ ಸಣ್ಣ ಸಣ್ಣ ವರ್ತಕರು ಬರುತ್ತಾರೆ. ಅವರಷ್ಟೇ ಇಲ್ಲಿ ಸಗಟು ರೂಪದಲ್ಲಿ ಒಂದಿಷ್ಟು ವಸ್ತುಗಳನ್ನು ಖರೀದಿಸಿ ಕೊಂಡೊಯ್ಯುತ್ತಾರೆ. ಆದರೆ ಇಲ್ಲಿನ ವಹಿವಾಟನ್ನು ನೋಡಿದಾಗ ವ್ಯಾಪಾರವೇ ನಡೆಯುವುದಿಲ್ಲವೇನೋ ಎನಿಸುತ್ತದೆ. ಈ ವರ್ತಕರು ಅಕ್ಕಿ, ಬೆಲ್ಲ, ರವೆ, ಸಕ್ಕರೆ ಮೊದಲಾದ ಪದಾರ್ಥಗಳನ್ನು ಬೇರೆ ಕಡೆಯಿಂದ ತರಿಸಿ ಇಲ್ಲಿ ಮಾರುತ್ತಾರೆ. ಈ ವಸ್ತುಗಳನ್ನು ರೈತರಿಂದ ಖರೀದಿಸುವುದಿಲ್ಲ. ಎಪಿಎಂಸಿಗೆ ಸೆಸ್ ಕೂಡ ಕೊಡುವಂತಿಲ್ಲ. ಆದರೂ ಇಲ್ಲಿಗೆ ಸ್ಥಳಾಂತರಿಸಿರುವುದಕ್ಕೆ ಆ ವರ್ತಕರಲ್ಲಿ ಅಸಮಾಧಾನವಿದೆ.

ದವಸ–ಧಾನ್ಯ, ಕಾಳು–ಕಡಿ, ಸೊಪ್ಪು–ತರಕಾರಿ ಎಲ್ಲವೂ ಒಂದೇ ಕಡೆ ದೊರೆಯುವ ಏಕರೂಪ ಮಾರುಕಟ್ಟೆ ವ್ಯವಸ್ಥೆ ಇರಬೇಕು ಎಂಬುದೇನೋ ಸರಿ. ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನೂ ಕಲ್ಪಿಸಬೇಕಲ್ಲವೇ? ಪ್ರಾಂಗಣದಲ್ಲಿ ರಸ್ತೆ, ಬೀದಿ ದೀಪ, ನೀರು ಪೂರೈಕೆ, ಭದ್ರತೆ ಯಾವುದನ್ನೂ ಒದಗಿಸದೇ ಇಲ್ಲಿಗೆ ವರ್ತಕರನ್ನು ಸ್ಥಳಾಂತರಿಸಿರುವುದು ಸರಿಯಲ್ಲ. ಸಂಜೆ ನಂತರ ಇಲ್ಲಿ ಓಡಾಡಲು ಅಂಜಿಕೆಯಾಗುತ್ತದೆ ಎಂಬ ವರ್ತಕರ ಸಂಘದ ಅಧ್ಯಕ್ಷ ಜಿ.ಎಂ. ಚಿಕ್ಕಮಠ ಅವರ ಮಾತು ಅಕ್ಷರಶಃ ನಿಜ.

ಇನ್ನು, ಎಪಿಎಂಸಿಗಳಲ್ಲಿ ಪ್ರಧಾನವಾಗಿ ನಡೆಯುವುದು ರೈತರು ತರುವ ಕೃಷಿ ಉತ್ಪನ್ನಗಳ ಖರೀದಿ. ಇದು ಪ್ರಾಥಮಿಕ ಮಾರುಕಟ್ಟೆ. ಕಮಿಷನ್ ಏಜೆಂಟರು ಇವನ್ನು ಖರೀದಿಸಿ, ಬೇರೆಡೆಗೆ ಸಾಗಿಸುತ್ತಾರೆ. ಹುಬ್ಬಳ್ಳಿ ಎಪಿಎಂಸಿಗೆ ಹತ್ತಿ, ಅರಳೆ, ಶೇಂಗಾ, ಒಣಮೆಣಸಿನಕಾಯಿ, ಆಹಾರ ಧಾನ್ಯ, ದ್ವಿದಳ ಧಾನ್ಯ, ಈರುಳ್ಳಿ, ಆಲೂಗಡ್ಡೆ ಪ್ರಮುಖವಾಗಿ ಆವಕವಾಗುತ್ತದೆ. ಹತ್ತಿ ಮತ್ತು ಈರುಳ್ಳಿಗೆ ಅತ್ಯಂತ ದೊಡ್ಡ ಮಾರುಕಟ್ಟೆ ಹುಬ್ಬಳ್ಳಿ. ಈಗೀಗ ಶೇಂಗಾ ಆವಕವೂ ಹೆಚ್ಚುತ್ತಿದೆ. ಎಪಿಎಂಸಿಗೆ ವಾರ್ಷಿಕ ಸುಮಾರು ₨ 9 ಕೋಟಿ ವರಮಾನವೂ ಇದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಏಕೆ ಎಂಬುದೇ ತಿಳಿಯದು. ವಿಪರ್ಯಾಸವೆಂದರೆ, ಎಪಿಎಂಸಿಯ ಚುನಾಯಿತ ಆಡಳಿತ ಮಂಡಳಿಯಲ್ಲಿ ರೈತರು, ವರ್ತಕರು, ದಲಾಲರು, ಅಧಿಕಾರಿಗಳು ಎಲ್ಲರೂ ಇರುತ್ತಾರೆ. ಆದರೂ ಎಪಿಎಂಸಿ ಸ್ಥಿತಿ ಮಾತ್ರ ಸುಧಾರಿಸಿಲ್ಲ!

ಎಪಿಎಂಸಿ ಅಭಿವೃದ್ಧಿಗಾಗಿ ಸರ್ಕಾರ ಅನುದಾನವನ್ನೇನೂ ಕೊಡುವುದಿಲ್ಲ. ಕೊನೆಪಕ್ಷ ಅಲ್ಲಿ ಉತ್ಪತ್ತಿಯಾಗುವ ವರಮಾನವನ್ನು ಆ ಮಾರುಕಟ್ಟೆ ಅಭಿವೃದ್ಧಿಗೇ ಬಳಸಿಕೊಳ್ಳುವ ವ್ಯವಸ್ಥೆಯನ್ನೂ ಸರ್ಕಾರ ಮಾಡಿಲ್ಲ. ಅದೂ ಅಲ್ಲದೇ, ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರಿ ನೌಕರರಾದರೂ ಅವರ ಸಂಬಳಕ್ಕೂ ಆಯಾ ಎಪಿಎಂಸಿಗಳೇ ಹಣವನ್ನು ಸರ್ಕಾರಕ್ಕೆ ಜಮಾ ಮಾಡಬೇಕು. ಇಷ್ಟು ವರ್ಷಗಳಾದರೂ ಸಿಬ್ಬಂದಿಗೆ ಕನಿಷ್ಠ ಸಂಬಳವನ್ನೂ ಕೊಡಲೂ ಸರ್ಕಾರ ಮುಂದಾಗಿಲ್ಲ. ಇದು ಹೊಣೆಗೇಡಿತನವಲ್ಲದೇ ಬೇರೇನು? ವರಮಾನದಲ್ಲಿ ಇಂತಿಷ್ಟು ಶೇಕಡಾವಾರು ಹಣವನ್ನು ಮಾತ್ರ ಅಭಿವೃದ್ಧಿಗೆ ಬಳಸಬೇಕು ಎಂಬ ನಿಯಂತ್ರಣವನ್ನೂ ಹೇರಿರುವುದು ಯಾವ ಸುಖಕ್ಕಾಗಿ? ಒಟ್ಟಾರೆ ಎಪಿಎಂಸಿಗಳು ಹೀಗೆ ಅವ್ಯವಸ್ಥಿತವಾಗಿಯೇ ಇರಬೇಕು ಎಂಬ ಬಯಕೆ ಸರ್ಕಾರದ್ದಾಗಿದೆ ಎನಿಸುತ್ತದೆ.

ರೈತರ ಹಿತದೃಷ್ಟಿಯಿಂದ ಆಗಾಗ್ಗೆ ರಚಿಸಿರುವ ಕಾಯ್ದೆಗಳು ಇನ್ನೂ ಜಾರಿಯಾಗಿಲ್ಲ ಎಂದರೆ ಎಪಿಎಂಸಿ ಮೇಲಿನ ವರ್ತಕರ ಮತ್ತು ದಲಾಲರ ಲಾಬಿ ಎಷ್ಟು ಬಲಿಷ್ಠ ಎಂಬುದು ಎಂತಹವರಿಗೂ ಅರ್ಥವಾಗುತ್ತದೆ. ಇನ್ನು ಮಾರುಕಟ್ಟೆ ನಿಯಂತ್ರಣ ಸಾಧ್ಯವಾಗುವುದಾದರೂ ಹೇಗೆ? ರೈತರಿಂದ ಕಮಿಷನ್ ಪಡೆಯಬಾರದು ಎಂಬ ಕಾಯ್ದೆ 1986ರಲ್ಲಿಯೇ ರಚನೆಯಾಗಿದ್ದರೂ ಅದು ಇನ್ನೂ ಅನುಷ್ಠಾನವಾಗಿಲ್ಲ ಎಂದರೆ ಅಂತಹ ಕಾಯ್ದೆಯನ್ನೇಕೆ ರಚನೆ ಮಾಡಬೇಕು? ವಿಧಾನಮಂಡಲ ಅಂಗೀಕರಿಸಿದ ಕಾಯ್ದೆಯನ್ನು ಅನುಷ್ಠಾನ ಮಾಡುವ ಎದೆಗಾರಿಕೆ ಸರ್ಕಾರಕ್ಕಿರಬೇಕು. ರೈತರಿಂದ ಕೃಷಿ ಉತ್ಪನ್ನವನ್ನು ಖರೀದಿಸಿದ ಮೇಲೆ ಕೊಡಬೇಕಾದ ಹಣವನ್ನು ದಲ್ಲಾಳಿಯು ಎಪಿಎಂಸಿಗೇ ಪಾವತಿಸುವಂತೆ ಮಾಡಬೇಕು; ಅಲ್ಲಿಂದ ರೈತರಿಗೆ ಹಣ ಸಂದಾಯವಾಗುವ ವ್ಯವಸ್ಥೆ ಜಾರಿ ಮಾಡಬೇಕು. ಆಗ ಮಾತ್ರ ರೈತರಿಗೆ ಪೂರ್ಣ ಹಣ ಕೈಸೇರುತ್ತದೆ. ಈಗ ದಲ್ಲಾಳಿಗಳು ಶೇ 2 ರಿಂದ 3ರಷ್ಟು ಹಣವನ್ನು ಮುರಿದುಕೊಂಡು ರೈತರಿಗೆ ಕೊಡುತ್ತಿದ್ದಾರೆ. ಇದನ್ನು ಕಂಡೂ ಕಾಣದಂತೆ ಅಧಿಕಾರಿಗಳೂ ಸುಮ್ಮನಿರುತ್ತಾರೆ. ರೈತರೂ ದೂರು ಕೊಡಲು ಹಿಂಜರಿಯುತ್ತಾರೆ. ಏಕೆಂದರೆ ಅವರಿಗೆ ಕಷ್ಟಕಾಲದಲ್ಲಿ ಆಗುವವರು ಅದೇ ಸಾಹುಕಾರ ದಲ್ಲಾಳಿ. ಕಮಿಷನ್ ಪಾವತಿಸುವ ಮೂಲಕ ರೈತರು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸುವತ್ತ ಗಮನಹರಿಸದ ಸರ್ಕಾರ, ಸಾಲ ಮನ್ನಾ ಘೋಷಿಸಿ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಆದ್ಯತೆ ನೀಡುತ್ತದೆ. ದಲ್ಲಾಳಿಗಳ ವಿರುದ್ಧ ಕ್ರಮ ಜರುಗಿಸುವ ಧೈರ್ಯವೇ ಅದಕ್ಕಿಲ್ಲ.

ರೈತರ ಹಿತ ಕಾಯುವ ಮನಸ್ಸುಳ್ಳ ಚುನಾಯಿತ ಪ್ರತಿನಿಧಿಗಳು ಕನಿಷ್ಠ ಬೆಳಗಾವಿ ಅಧಿವೇಶನದಲ್ಲಾದರೂ ಸರ್ಕಾರದ ಮೇಲೆ ಒತ್ತಡ ಹೇರಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಮಾಡಬೇಕು.

‘ರಾಜ್ಯದಲ್ಲಿ (ವಿವಿಧ ಪ್ರಾಂತ್ಯಗಳಲ್ಲಿ ಜಾರಿಯಲ್ಲಿದ್ದ ವಿವಿಧ ಕಾಯ್ದೆಗಳ ಬದಲಿಗೆ ಸಮಗ್ರವಾಗಿ ಜಾರಿಗೆ ತಂದ 1966ರ ಕಾಯ್ದೆ) 1968ರಲ್ಲಿ ಸಮಗ್ರ ಕಾಯ್ದೆ ಜಾರಿಯಾಗುವ ಮೊದಲು ಮುಂಬೈ–ಕರ್ನಾಟಕ ಭಾಗದ ಎಪಿಎಂಸಿಗಳ ಕಾರ್ಯನಿರ್ವಹಣೆ ಉತ್ತಮವಾಗಿಯೇ ಇತ್ತು. ಮುಂಬೈ ಸರ್ಕಾರದ ಹಸ್ತಕ್ಷೇಪವಿರಲಿಲ್ಲ. ನಂತರ ರಾಜ್ಯ ಸರ್ಕಾರ ಜಾರಿಗೊಳಿಸಿದ ಈ ಕಾನೂನಿನಿಂದಲೇ ತೊಂದರೆ ಆರಂಭವಾಯಿತು ಎಂಬ ಭಾವನೆ ಈ ಭಾಗದಲ್ಲಿದೆ. ಅದನ್ನು ಸರ್ಕಾರ ನಿವಾರಿಸಬೇಕು’ ಎಂಬ ಹಿರಿಯ ಸಹಕಾರಿ ಧುರೀಣ ಡಿ.ಆರ್. ಪಾಟೀಲರ ಒತ್ತಾಯ ಸಮಂಜಸವಾಗಿದೆ. ಸರ್ಕಾರ ಕಣ್ತೆರೆಯಬೇಕಷ್ಟೇ.

ಎಪಿಎಂಸಿ ಅಧಿಕಾರಿಗಳು ಕೂಡ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುವ ಬದಲಿಗೆ ಮಾರುಕಟ್ಟೆಯಲ್ಲಿ ತೂಕ ಪರಿಶೀಲಿಸುವ ಕೆಲಸವನ್ನು ಪ್ರತಿನಿತ್ಯ ಮಾಡಬೇಕು. ರೈತರಿಗೆ ತೂಕದಲ್ಲಿ ಮೋಸವಾಗದಂತೆ ನೋಡಿಕೊಂಡು, ತ್ವರಿತವಾಗಿ ಹಣ ಪಾವತಿಯಾಗುವಂತೆ ಮಾಡಿದರೆ ಮಾತ್ರ ರೈತರಿಗೆ ಮಾರುಕಟ್ಟೆ ಮೇಲೆ ವಿಶ್ವಾಸ ಮೂಡುತ್ತದೆ. ಅದೇ ರೀತಿ, ರೈತರಲ್ಲಿ ಅರಿವು ಮೂಡಿಸಿ, ಉತ್ಪನ್ನಗಳ ಗ್ರೇಡಿಂಗ್ ಮಾಡುವಂತೆ ಮನವೊಲಿಸಿ, ಅನುಷ್ಠಾನಗೊಳಿಸಿದರೆ ದಲಾಲರೂ ಈ ಮಾರುಕಟ್ಟೆಯಲ್ಲಿ ಉತ್ತಮ ಪದಾರ್ಥ ಸಿಗುತ್ತದೆ ಎಂದು ಬರುತ್ತಾರೆ. ರೈತರು–ದಲಾಲರ ಸಂಖ್ಯೆ ಹೆಚ್ಚಾದರೆ ವಹಿವಾಟೂ ತಾನಾಗಿಯೇ ಹೆಚ್ಚಾಗುತ್ತದೆ. ಇದಕ್ಕೆ ಅಧಿಕಾರಿ ವರ್ಗ ಹೆಚ್ಚು ಗಮನಕೊಡಬೇಕು. ರೈತರಿಗೆ ಅನ್ಯಾಯವಾಗಬಾರದು, ಶೋಷಣೆಯನ್ನು ತಪ್ಪಿಸಬೇಕು ಎಂಬುದು ಎಪಿಎಂಸಿ ರಚನೆಯ ಮುಖ್ಯ ಉದ್ದೇಶ. ಇದನ್ನು ನೋಡಿಕೊಳ್ಳಬೇಕಾದವರು ಅಧಿಕಾರಿಗಳು ಮತ್ತು ಆಡಳಿತ ಮಂಡಳಿ. ಆ ಜವಾಬ್ದಾರಿಯನ್ನು ಅವರು ಸಮರ್ಪಕವಾಗಿ ನಿರ್ವಹಿಸಬೇಕು. ಜತೆಗೆ ಸರ್ಕಾರ ಅಗತ್ಯ ಸಿಬ್ಬಂದಿಯನ್ನು ಒದಗಿಸಬೇಕು. ಅವ್ಯವಹಾರ ತಡೆಗೆ ಎಲ್ಲರೂ ಕೈಜೋಡಿಸಿ, ರೈತರ ಹಿತಕಾಯಬೇಕು. ಆದರೆ ಆ ಇಚ್ಛಾಶಕ್ತಿ ಯಾರಿಗಿದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.