ಗುರುವಾರ, 5 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹಿಮಪಾತ’ದ ನೆನಪು, ‘ಬಣ್ಣದ ಬುಗುರಿ’ ತಿರುಗಿದ್ದು...

Last Updated 18 ಜುಲೈ 2015, 19:30 IST
ಅಕ್ಷರ ಗಾತ್ರ

‘ಮಣಿಯೇ ಹೇಳಿದ ಮೇಲೆ ಬಂದೇ ಬರುತ್ತೇನೆ, ಸಾರಿ’ ಎಂದು ಸುಹಾಸಿನಿ ಫೋನ್‌ನಲ್ಲಿ ಹೇಳಿದಳು. ನಾನು ಆ ದಿನ ಹೆಚ್ಚು ಮಾತನಾಡಲಿಲ್ಲ. ಅವಳು ಬರುವುದಷ್ಟೇ ನಮಗೆ ಮುಖ್ಯವಾಗಿತ್ತು. ನಿರ್ದೇಶಕ ಸೃಜನಶೀಲತೆಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕು. ಶಾಟ್ ಹೇಗಿರಬೇಕು, ಟ್ರಾಲಿಯನ್ನು ಹೇಗೆ ಬಳಸಬೇಕು, ಲೆನ್ಸ್ ಎಂಥದಿದ್ದರೆ ಸರಿ, ಬೆಳಕಿನ ಪ್ರಮಾಣ ಸೂಕ್ತವಾಗಿದೆಯೇ ಇಂಥ ಹಲವು ಸೂಕ್ಷ್ಮಗಳ ಬಗ್ಗೆ ಗಮನ ಕೊಡಬೇಕು. ಆದರೆ, ನಾನು ನಿರ್ಮಾಪಕನ ಕಷ್ಟಗಳಿಗೂ ಸ್ಪಂದಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸುಹಾಸಿನಿ ಬರುವ ವಿಷಯ ಕೇಳಿ ರಾಕ್‌ಲೈನ್ ಅವರ ಮುಖ ಅರಳಿತು. ಮದ್ರಾಸ್‌ನಲ್ಲಿ ವಿಮಾನ ಹತ್ತಿಸಲು ತಮ್ಮವರೇ ಒಬ್ಬರನ್ನು ಅವರು ಇಲ್ಲಿಂದಲೇ ನಿಯೋಜಿಸಿದರು. ಮೂರ್ತಿ ಎಂಬ ಮ್ಯಾನೇಜರನ್ನು ದೆಹಲಿಗೆ ಕಳುಹಿಸಿ, ಸುಹಾಸಿನಿಯನ್ನು ಬರಮಾಡಿಕೊಳ್ಳುವಂತೆ ಸೂಚಿಸಿದರು. ದೆಹಲಿಯಲ್ಲಿ ವಿಮಾನ ಹತ್ತುತ್ತಿದ್ದಂತೆ ಮೂರ್ತಿ ನಮಗೆ ಫೋನ್ ಮಾಡಬೇಕು ಎಂದು ರಾಕ್‌ಲೈನ್ ಆದೇಶಿಸಿದ್ದರು.

ಕುಲುಮನಾಲಿಗೆ ದೆಹಲಿಯಿಂದ ವಿಮಾನದಲ್ಲಿ ಒಂದೂವರೆ ಗಂಟೆಯ ಪ್ರಯಾಣ. ಅಲ್ಲಿ ಇದ್ದುದು ಸಣ್ಣ ವಿಮಾನ ನಿಲ್ದಾಣ. ಎರಡು ಬೆಟ್ಟಗಳ ಮಧ್ಯೆ ಒಂದು ಸಣ್ಣ ರನ್ ವೇ ಇತ್ತು. ನಲವತ್ತು ಅಥವಾ ಅರವತ್ತು ಜನ ಪ್ರಯಾಣಿಸಬಲ್ಲ ಚಿಕ್ಕ ವಿಮಾನವಷ್ಟೇ ಅಲ್ಲಿ ಲ್ಯಾಂಡ್‌ ಆಗುತ್ತಿದ್ದುದು. ಸುಹಾಸಿನಿಯನ್ನು ಸ್ವಾಗತಿಸಲು ನಾನು, ವಿಷ್ಣು, ರಾಕ್‌ಲೈನ್ ಖುದ್ದು ಹೋಗಬೇಕು ಎಂದುಕೊಂಡೆವು. ಅಲ್ಲಿ ಆರ್ಕಿಡ್ ಮತ್ತಿತರ ವರ್ಣರಂಜಿತ ಹೂಗಳು ಸಿಗುತ್ತಿದ್ದವು. ಅವುಗಳಿಂದ ಸೊಗಸಾದ ಗುಚ್ಛ ಮಾಡಿಸಿದೆವು. ರಾಕ್‌ಲೈನ್ ಬೇರೆ ಕೆಲಸಗಳಲ್ಲಿ ತೊಡಗಿಕೊಂಡರು. ದೆಹಲಿಯಲ್ಲಿ  ಸುಹಾಸಿನಿ ವಿಮಾನ ಹತ್ತಿದ ಸುದ್ದಿ ಕಿವಿಮೇಲೆ ಬಿದ್ದಿತು. ವಿಷ್ಣು, ನಾನು ಬೇಗ ನಿಲ್ದಾಣ ತಲುಪಿದ್ದೆವು.

‘ಇನ್ನು ಇಪ್ಪತ್ತು ನಿಮಿಷಗಳಲ್ಲಿ ವಿಮಾನ ಇಲ್ಲಿ ಇಳಿಯುತ್ತದೆ’ ಎಂದು ಪ್ರಕಟಿಸಿದಾಗ ನನಗೆ, ವಿಷ್ಣುವಿಗೆ ಏನೋ ಖುಷಿ. ಅವಳನ್ನು ಬರಮಾಡಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದ ನಾವು ಪದೇಪದೇ ಗಡಿಯಾರ ನೋಡಿಕೊಳ್ಳುತ್ತಿದ್ದೆವು. ನಿಮಿಷ ಇಪ್ಪತ್ತಾಯಿತು, ಮೂವತ್ತಾಯಿತು. ವಿಮಾನ ಇಳಿಯಲೇ ಇಲ್ಲ. ಅಲ್ಲಿ ಎರಡು ಬಂಡೆಗಳ ನಡುವೆ ಮೋಡ ಕವಿದುಬಿಟ್ಟರೆ ವಿಮಾನದ ಪೈಲಟ್‌ಗೆ ರನ್‌ವೇ ಕಾಣುವುದಿಲ್ಲ. ಅಂಥ ಸಂದರ್ಭಗಳಲ್ಲಿ ವಿಮಾನವನ್ನು ಅಲ್ಲಿ ಇಳಿಸದೆ ಚಂಡೀಗಡಕ್ಕೋ ಮರಳಿ ದೆಹಲಿಗೋ ಹಾರಿಸುವುದು ಆಗ ರೂಢಿ.

‘ವಿಮಾನ ಈಗ ಲ್ಯಾಂಡ್ ಆಗುತ್ತಿಲ್ಲ. ಚಂಡೀಗಡಕ್ಕೆ ಹೋಗಲಿದೆ. ಆಮೇಲೆ ಮರಳಲಿದೆ’ ಎಂಬ ಘೋಷಣೆ ಮೈಕ್‌ನಲ್ಲಿ ಬಂತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂದು ನಾನು, ವಿಷ್ಣು ಪೇಚಾಡಿಕೊಂಡೆವು.

ಅಲ್ಲೇ ಹತ್ತಿರದ ಹೋಟೆಲ್ ಒಂದಕ್ಕೆ ಹೋಗಿ ಊಟ ಮಾಡಿಕೊಂಡು ಬಂದೆವು. ಚಂಡೀಗಡದಿಂದ ಸುಹಾಸಿನಿಯನ್ನು ಟ್ಯಾಕ್ಸಿಯಿಂದ ಕರೆತರುವ ಸಾಧ್ಯತೆಯ ಕುರಿತು ಚರ್ಚಿಸಿದೆವು. ಜೋರು ಮಳೆ ಬರುತ್ತಿದ್ದ ಆ ಸಂದರ್ಭದಲ್ಲಿ ಅದು ಕಷ್ಟವಿತ್ತು. ಘಾಟ್ ಸೆಕ್ಷನ್‌ನಲ್ಲಿ ಒಂಬತ್ತು ತಾಸುಗಳ ಪ್ರಯಾಣ ಮಾಡಬೇಕೆಂದರೆ ನಟಿಯರು ಒಪ್ಪುವುದು ಕಷ್ಟ ಎಂದು ಅರಿತು ದೇವರ ಮೇಲೆ ಭಾರ ಹಾಕಿ ಸುಮ್ಮನಾದೆವು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ವಿಮಾನ ಲ್ಯಾಂಡ್ ಆಗುತ್ತದೆ ಎಂಬ ಮಾಹಿತಿ ಬಂತು.

ನಾನು, ವಿಷ್ಣು ಹೋದೆವು. ವಿಮಾನ ಇಳಿದಾಗ ನಮಗೆ ಆನಂದವೋ ಆನಂದ. ಅದರಿಂದ ಇಳಿಯುತ್ತಿದ್ದ ಒಬ್ಬೊಬ್ಬರನ್ನೂ ನೋಡುತ್ತಾ, ಸುಹಾಸಿನಿ ಈಗ ಬಂದಾಳು ಆಗ ಬಂದಾಳು ಎಂದು ನಿರೀಕ್ಷಿಸುತ್ತಲೇ ಇದ್ದೆವು. ಕೊನೆಗೂ ಅವಳ ಮುಖ ಕಂಡಿತು. ಮೊದಲಿಗೆ ಕಂಡದ್ದು ಅವಳ ಸುಂದರ ನಗು. ಹೂಗುಚ್ಛ ಕೊಟ್ಟಮೇಲೆ ಅವಳು ‘ಸಾರಿ ಬಾಬು, ಸಾರಿ ವಿಷ್ಣು’ ಎಂದಳು. ನಮಗೆಲ್ಲಾ ಎಷ್ಟು ಕಾಟ ಕೊಟ್ಟೆಯಮ್ಮ ಎಂದು ನಾನು ಮನಸ್ಸಿನಲ್ಲೇ ಅಂದುಕೊಂಡೆ. ಮಣಿರತ್ನಂ ಹೇಗಿದ್ದಾರೆ ಎಂದು ವಿಚಾರಿಸಿದೆವು.

ಕುಲುಮನಾಲಿ ವಿಮಾನ ನಿಲ್ದಾಣದಿಂದ ನಾವು ಇದ್ದ ಹೋಟೆಲ್‌ಗೆ ಎರಡೂಕಾಲು ತಾಸಿನ ಪ್ರಯಾಣ. ದಾರಿಯುದ್ದಕ್ಕೂ ಸುಹಾಸಿನಿ ತನ್ನ ಮನೆಯ ಮೇಲೆ ಆದ ಬಾಂಬ್ ಸ್ಫೋಟದ ವಿವರಗಳನ್ನೆಲ್ಲಾ ಹೇಳುತ್ತಾ ಹೋದಳು. ನಾನು, ವಿಷ್ಣು ಮೌನವಾಗಿದ್ದು ಎಲ್ಲವನ್ನೂ ಕೇಳಿಸಿಕೊಂಡೆವು. ಸುಹಾಸಿನಿಯ ಮಾತು ಅರಳು ಹುರಿದಂತೆ. ಹೋಟೆಲ್ ತಲುಪುತ್ತಿದ್ದಂತೆ ರಾಕ್‌ಲೈನ್ ಕೂಡ ಅವಳಿಗೆ ಇನ್ನೊಂದು ಹೂಗುಚ್ಛ ನೀಡಿ ಸ್ವಾಗತಿಸಿದರು.

ಒಬ್ಬ ನಾಯಕಿಗೆ ಬೇಕಾದ ಸಕಲ ಸೌಕರ್ಯಗಳನ್ನೂ ಅವರು ಕಲ್ಪಿಸಿದ್ದರು. ಅದುವರೆಗೆ ಪ್ರೊಡಕ್ಷನ್ ಮ್ಯಾನೇಜರ್ ಮನಸ್ಥಿತಿಯಲ್ಲಿ ಇದ್ದ ನಾನು ನಿರ್ದೇಶಕನ ಯೋಚನಾ ಲಹರಿಗೆ ಮರಳಿದೆ. ಸುಹಾಸಿನಿ ಬಂದದ್ದಾಯಿತು, ಇನ್ನು ಭೂಕಂಪವಾದರೂ ಚಿತ್ರೀಕರಣ ಮುಗಿಸಿಕೊಂಡೇ ಹೊರಡುವುದು ಎಂದು ಸಂಕಲ್ಪ ಮಾಡಿದೆ. ಸುಹಾಸಿನಿಯ ವಸ್ತ್ರಗಳು, ಮರುದಿನ ಚಿತ್ರೀಕರಿಸಬೇಕಿದ್ದ ಶಾಟ್‌ಗಳು ಎಲ್ಲದರ ಚರ್ಚೆ ನಡೆಸಿದೆವು.  ನಟಿಯಾಗಿ ಸುಹಾಸಿನಿ ತುಂಬಾ ವೃತ್ತಿಪರಳು. ಪಕ್ಕಾ ಹೋಂವರ್ಕ್ ಮಾಡಿಕೊಳ್ಳುತ್ತಾಳೆ. ಊಟ-ತಿಂಡಿ ವಿಷಯದಲ್ಲಿ ಕಿರಿಕಿರಿ ಇಲ್ಲ. ಕೊಟ್ಟಿದ್ದನ್ನು ಯಾವ ಜಾಗದಲ್ಲಿಯೇ ಆದರೂ ತಿನ್ನುವವರ ಪೈಕಿ. ತನಗೆ ಏನಾದರೂ ತೊಂದರೆ ಆದರೂ ಒಳಗೇ ನುಂಗಿಕೊಂಡು, ನಿರ್ದೇಶಕ ಹಾಗೂ ನಿರ್ಮಾಪಕರ ಕಷ್ಟಗಳನ್ನೂ ಕೇಳಿಸಿಕೊಳ್ಳುವ ಉದಾರ ಮನಸ್ಸಿನವಳು. ತನ್ನ ಪಾತ್ರದ ತಯಾರಿಯನ್ನು ಅವಳು ಶ್ರದ್ಧೆಯಿಂದ ಮಾಡಿಕೊಳ್ಳುತ್ತಿದ್ದಳು. ಸಂಭಾಷಣೆ, ಭಾವ ಎಲ್ಲವೂ ಸರಿಯಾಗಿದೆಯೇ ಎಂದು ಪಕ್ಕದಲ್ಲಿ ಯಾರೇ ಇದ್ದರೂ ಕೇಳಿ ಖಾತರಿಪಡಿಸಿಕೊಳ್ಳುತ್ತಿದ್ದಳು.

ಸುಮಾರು ಇಪ್ಪತ್ತು ದಿನ ನಾವು ಕುಲುಮನಾಲಿಯಲ್ಲಿ ಚಿತ್ರೀಕರಣ ಮುಂದುವರಿಸಿದೆವು. ವಿಷ್ಣು, ಜಯಪ್ರದ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಸಹಕರಿಸಿದರು. ಅವರಿಬ್ಬರನ್ನೂ ಕಳುಹಿಸಿಕೊಟ್ಟ ನಂತರ ನಾನು, ರಾಕ್‌ಲೈನ್ ಹಾಗೂ ಸುಹಾಸಿನಿ ಅಲ್ಲಿ ಉಳಿದುಕೊಂಡೆವು. ಸುಹಾಸಿನಿ ಒಬ್ಬಳದ್ದೇ ಪಾತ್ರಕ್ಕೆ ಒಂದು ಸೋಲೊ ಹಾಡಿನ ಚಿತ್ರೀಕರಣ ಬಾಕಿ ಇತ್ತು. ಉಳಿದ ನಟ-ನಟಿಯರ ಡೇಟ್ಸ್ ಹೊಂದಿಸಬೇಕಾಗಿದ್ದರಿಂದ ಆ ಭಾಗಗಳ ಚಿತ್ರೀಕರಣ ಆದಮೇಲೆ ಇದನ್ನು ಚಿತ್ರೀಕರಿಸುವುದು ಎಂದು ಮೊದಲೇ ತೀರ್ಮಾನಿಸಿದ್ದೆವು.

ಸೋಲೊ ಹಾಡುಗಳನ್ನು ಕೊನೆಯಲ್ಲಿ ಚಿತ್ರೀಕರಿಸುವುದು ಒಂದು ರೀತಿಯಲ್ಲಿ ಪದ್ಧತಿ. ನಾವು ಚಿತ್ರೀಕರಣಕ್ಕೆ ಮುಂದಾದಾಗ ಜೋರು ಮಳೆ. ಅದರ ನಡುವೆಯೇ ಹಾಡಿನ ಚಿತ್ರೀಕರಣ ಆಯಿತು. ಅಲ್ಲಿಂದ ನಾವು ಹೊರಟ ದಿನ ವಿಮಾನ ರದ್ದಾಯಿತು. ಇನ್ನು ಮೂರು ದಿನ ಯಾವುದೇ ವಿಮಾನ ಅಲ್ಲಿಂದ ಹೊರಡುವುದಿಲ್ಲ ಎಂಬ ಘೋಷಣೆ. ಒಂದು ಸಣ್ಣ ಬಸ್ ಮಾಡಿಕೊಂಡು, ಅಲ್ಲಿದ್ದ ಎಂಟೂ ಜನ ಚಂಡೀಗಡಕ್ಕೆ ಪ್ರಯಾಣ ಮಾಡಿ, ಅಲ್ಲಿಂದ ಒಂದು ಕಾರ್‌ನಲ್ಲಿ ನಾನು, ಸುಹಾಸಿನಿ ದೆಹಲಿ ತಲುಪಿದೆವು.

ಮಾರ್ಗಮಧ್ಯೆಯೇ ವಿಷ್ಣುವಿಗೆ ಫೋನ್ ಮಾಡಿ ನಮ್ಮ ಕಷ್ಟ ಹೇಳಿಕೊಂಡೆ. ‘ಅಲ್ಲಿ ಚಿತ್ರೀಕರಣ ಮಾಡುವಂಥ ಕಥೆ ಮಾಡಿದ್ದೀಯ. ನಿನಗೆ ಹೀಗೇ ಆಗಬೇಕು ಮಗನೇ’ ಎಂದು ಅವನು ಕಾಲೆಳೆದ. ಸುಹಾಸಿನಿಗೆ ಒಂದು ಒಳ್ಳೆಯ ಊಟ ಹಾಕಿಸಿ, ಬೀಳ್ಕೊಟ್ಟೆವು.

ಅಷ್ಟೊಂದು ಜನ, ಅಗತ್ಯ ಸಲಕರಣೆಗಳು, ಪರಿಕರಗಳು ಎಲ್ಲವನ್ನೂ ಗೊತ್ತೇ ಇಲ್ಲದ ಜಾಗಗಳಿಗೆ ಸಾಗಿಸಿ, ಚಿತ್ರೀಕರಣ ಮಾಡಿದ್ದು ಸಾಹಸವೇ. ಹಿಮ ಬೀಳುವಾಗ, ಮಳೆ ಬರುವಾಗ ಜನರೇಟರ್‌ಗಳು ಕೈಕೊಡದಂತೆ ನೋಡಿಕೊಳ್ಳಬೇಕು. ಶಾರ್ಟ್ ಆಗಿ ಯಾರಿಗೂ ವಿದ್ಯುದಾಘಾತ ಆಗದಂತೆ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಬೇಕು. ಒಂದು ಬಲ್ಬ್ ಮೇಲೆ ಸಣ್ಣ ಹನಿ ಬಿದ್ದರೂ ಅದು ಬರ್ಸ್ಟ್ ಆಗಿಬಿಡುತ್ತದೆ. ಬೆತ್ತಗಳನ್ನು ಬಳಸಿ, ಅವುಗಳಿಗೆ ವೈರ್‌ಗಳನ್ನು ಸುರಕ್ಷಿತವಾಗಿ ಇರುವಂತೆ ನೇತುಹಾಕಿ, ಎಲ್ಲಾ ಕೆಲಸಗಾರರು ಕಷ್ಟಪಟ್ಟಿದ್ದನ್ನು ಮರೆಯಲಾಗದು. ಇಪ್ಪತ್ತೈದು ದಿನ ಅಲ್ಲಿ ಪಡಿಪಾಟಲು ಪಟ್ಟು, ಚಿತ್ರೀಕರಣ ನಡೆಸಿ ಬಂದದ್ದು ಮರೆಯಲಾಗದ ಅನುಭವ.

* * *
‘ಹಿಮಪಾತ’ ಆದಮೇಲೆ ‘ಮಹಾಕ್ಷತ್ರಿಯ’ ಸಿನಿಮಾ ಕೈಗೆತ್ತಿಕೊಂಡೆ. ನಾನು, ವಿಷ್ಣು ಹಾಗೂ ಹಂಸಲೇಖ ಕಥೆಯ ಕುರಿತು ಚರ್ಚಿಸಿದೆವು. ಅದಕ್ಕೊಂದು ಶೀರ್ಷಿಕೆ ಗೀತೆ ಇತ್ತು. ಫಿಲಾಸಫಿಕಲ್ ಹಾಡು ಅದು. ಆ ಹಾಡು ಹುಟ್ಟಿದ ಕಥೆಯನ್ನು ನಾನು ಈಗಾಗಲೇ ವಿವರವಾಗಿ ಬರೆದಿದ್ದೇನೆ. ‘ಈ ಭೂಮಿ ಬಣ್ಣದ ಬುಗುರಿ’ ಹಾಡು ಕೊನೆ ಕ್ಷಣದಲ್ಲಿ ಸಿದ್ಧವಾಯಿತು. ಆ ಹಾಡು ನಮ್ಮ ಸಹಾಯಕ ನಿರ್ದೇಶಕರಿಗೆ ಅಷ್ಟೇನೂ ಖುಷಿ ಕೊಡಲಿಲ್ಲ. ಅದನ್ನು ಕೇಳಿದ ಮೇಲೆ ವಿಷ್ಣು ಕೂಡ ಥ್ರಿಲ್ ಆಗಲಿಲ್ಲ. ಆದರೆ, ಅದನ್ನು ಹಾಡಿದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮಾತ್ರ ತುಂಬಾ ಭಾವುಕರಾಗಿದ್ದರು. ದೀರ್ಘ ಕಾಲ ಅದು ಉಳಿಯುತ್ತದೆ ಎಂದೂ ಹೇಳಿದ್ದರು.

ಕೆಲವು ಹಾಡುಗಳಿಗೆ ರೆಕಾರ್ಡಿಂಗ್ ಸ್ಟುಡಿಯೊದಲ್ಲಿಯೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ‘ಬಣ್ಣದ ಗೆಜ್ಜೆ’ ಸಿನಿಮಾದ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಹಾಡನ್ನು ಹಂಸಲೇಖ ಮಾಡಿದ ಮೇಲೆ ಅನೇಕರು ಚಪ್ಪಾಳೆ ಹೊಡೆದಿದ್ದರು. ಅದು ಪಾಶ್ಚಿಮಾತ್ಯ ಸಂಗೀತದ ಲಯದಲ್ಲಿ ಮೂಡಿದ್ದ ಕನ್ನಡದ ಹಾಡು. ಇತ್ತೀಚೆಗೆ ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಸಿಕ್ಕಿದ್ದಾಗ ರಾಮ್‌ಗೋಪಾಲ್ ವರ್ಮಾ ನನ್ನ ಯಾವುದೋ ಹಳೆಯ ಸಿನಿಮಾದ ಹಿನ್ನೆಲೆ ಸಂಗೀತವನ್ನು ನೆನಪಿಸಿಕೊಂಡಿದ್ದರು. ‘ಮುತ್ತಿನಹಾರ’ ಸಿನಿಮಾದ ‘ದೇವರು ಹೊಸೆದ ಪ್ರೇಮದ ದಾರ’ ಹಾಡನ್ನು ಬಾಲಮುರಳಿ ಹಾಡಿದ ಮೇಲೆ ಮದ್ರಾಸ್‌ನ ಸ್ಟುಡಿಯೊದಲ್ಲಿ ಇದ್ದವರೆಲ್ಲಾ ನಿಂತು, ಎರಡು ನಿಮಿಷ ಚಪ್ಪಾಳೆ ತಟ್ಟಿದ್ದರು.

ಹಾಡುಗಳು ಹುಟ್ಟುವ ಗಳಿಗೆಗಳೇ ರಸಾನುಭವ ನೀಡಬಲ್ಲ ಸರಕಾಗುತ್ತವೆ. ಸಂಗೀತ ನಿರ್ದೇಶಕರಾದ ಶಂಕರ್‌ ಜೈಕಿಶನ್‌ ಇಲ್ಲವಾದಾಗ ನಿರ್ದೇಶಕ ರಾಜ್‌ಕಪೂರ್‌ಗೆ ತಮ್ಮ ಸಿನಿಮಾಗೆ ಯಾವ ಸಂಗೀತ ನಿರ್ದೇಶಕರು ಸೂಕ್ತ ಎಂಬ ಚಿಂತೆ ಕಾಡಿತ್ತಂತೆ. ಆಗ ಅವರಿಗೆ ಸಿಕ್ಕವರು ಲಕ್ಷ್ಮೀಕಾಂತ್‌–ಪ್ಯಾರೆಲಾಲ್‌. ‘ಬಾಬಿ’ ಸಿನಿಮಾದ ಹಾಡೊಂದಕ್ಕೆ ಸಾಲುಗಳನ್ನು ಹುಡುಕುತ್ತಾ ಇದ್ದಾಗ ಇದ್ದಕ್ಕಿದ್ದಂತೆ ಅವರು ಕಾರಿನಲ್ಲಿ ಸಿಲುಕಿಬಿಟ್ಟರು. ‘ಹಮ್‌ ತುಮ್‌ ಬಂದ್‌ ಹೋ ಗಯೆ’ (ನಾನು, ನೀನು ಇಲ್ಲಿ ಬಂದಿಯಾಗಿಬಿಟ್ಟೆವು) ಎಂದು ಅವರಿಬ್ಬರೂ ಹೇಳಿದರಲ್ಲ; ಆಗ ಒಂದು ಸಾಲಿನ ಯೋಚನೆ ಹುಟ್ಟಿತು. ಅದೇ ಮುಂದೆ ‘ಹಮ್‌ ತುಮ್‌ ಏಕ್‌ ಕಮರೇ ಮೈ ಬಂದ್‌ ಹೊ...’ ಹಾಡಿನ ಹುಟ್ಟಿಗೆ ಕಾರಣವಾಯಿತಂತೆ.

‘ಈ ಭೂಮಿ ಬಣ್ಣದ ಬುಗುರಿ’ ಹಾಡಿನ ಚಿತ್ರೀಕರಣ ಹೇಗೆ ಮಾಡಬೇಕು ಎಂದು ಯೋಚಿಸಿದೆ. ನೃತ್ಯ ನಿರ್ದೇಶಕರೇ ಇಲ್ಲದೆ ಹಾಡನ್ನು ಭಿನ್ನ ರೀತಿಯಲ್ಲಿ ಚಿತ್ರೀಕರಿಸಲು ತೀರ್ಮಾನಿಸಿದೆ. ವಿಷ್ಣುವಿಗೆ ಕೋಟ್‌, ಹ್ಯಾಟ್‌ ಹಾಕಿಸಿ ಒಂದು ಕಡ್ಡಿಯನ್ನು ಕೊಟ್ಟು ಅಭಿನಯಿಸುವಂತೆ ಸೂಚಿಸಿದೆ. ಮನೋಹರ ನಾಯ್ಡು ಅವರ ಮಗ ನವೀನ್‌ ಕೊಳಲು ನುಡಿಸುವಂತೆ ಮಾಡಿದೆ. ‘ಟೇಕಿಂಗ್‌ ಶೈಲಿ’ಯ ಹಾಡು ಅದು. ಹಾಡಿನ ಫಿಲಾಸಫಿಯೂ ಗೊತ್ತಾಗಬೇಕು, ಪ್ರೇಕ್ಷಕರನ್ನೂ ಹಿಡಿದಿಡಬೇಕು ಎಂಬ ಉದ್ದೇಶ ನನ್ನದು. ಚಿತ್ರೀಕರಣದ ವೇಳೆ ವಿಷ್ಣು ‘ಇದೇನೋ, ಹೀಗೆ ಶೂಟ್‌ ಮಾಡುತ್ತಾ ಇದ್ದೀಯ?’ ಎಂದು ಕೇಳಿದ. ಕೆಲವು ಹಾಡುಗಳನ್ನು ನಿರ್ದೇಶಕರೇ ಚಿತ್ರೀಕರಿಸಿದರೆ ಅದು ಕಥೆಯ ಭಾಗವಾಗಿ ಬರುತ್ತದೆ ಎಂದು ನಂಬಿದವನು ನಾನು.

ಸಿನಿಮಾ ಬಿಡುಗಡೆಯಾದ ಮೇಲೆ ಹಾಡು ದೊಡ್ಡ ಹಿಟ್‌ ಆಯಿತು. ಈಗ ಆ ಹಾಡನ್ನು ಏಳನೇ ತರಗತಿಯ ಪಠ್ಯ ಪುಸ್ತಕದಲ್ಲಿ ಅಳವಡಿಸಿರುವ ಸಂಗತಿಯನ್ನು ಹೇಳಿ, ಹಂಸಲೇಖ ಖುಷಿಪಟ್ಟರು.

ವಿಷ್ಣು ನಮ್ಮನ್ನೆಲ್ಲಾ ಅಗಲಿದಾಗ ಅವನ ನೆನಪಿನ ಕಾರ್ಯಕ್ರಮವೊಂದರಲ್ಲಿ ಬಾಲಸುಬ್ರಹ್ಮಣ್ಯಂ ಆ ಹಾಡನ್ನು ಹಾಡಿ, ‘ಇದು ಸದಾ ಉಳಿಯುತ್ತದೆ’ ಎಂದಿದ್ದರು. ವಿವಾಹ ವಿಚ್ಛೇದನಕ್ಕೆ ನಿರ್ಧರಿಸಿದ ದಂಪತಿ ಈ ಹಾಡನ್ನು ನೋಡಿ ಮನಸ್ಸು ಬದಲಿಸಿದ ಸಂಗತಿಯನ್ನೂ ನಾನು ಹಿಂದೆ ಪ್ರಸ್ತಾಪಿಸಿದ್ದೆ. ವಿಷ್ಣು ಹಾಗೂ ಈ ಹಾಡು ಎರಡನ್ನೂ ನಾನು ಮರೆಯಲು ಸಾಧ್ಯವೇ ಇಲ್ಲ.

ಮುಂದಿನ ವಾರ:
ಹೇಳಲು ಇನ್ನೂ ಇವೆ ಕಥೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT