ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಅತ್ತೆ ಕ್ಯಾಂಟೀನ್

ಚುರುಮುರಿ
Published : 4 ಸೆಪ್ಟೆಂಬರ್ 2024, 19:17 IST
Last Updated : 4 ಸೆಪ್ಟೆಂಬರ್ 2024, 19:17 IST
ಫಾಲೋ ಮಾಡಿ
Comments

ಶಾಸಕರು ತಮ್ಮ ಅಮೃತಹಸ್ತದಿಂದ ಸುಮಿಯ ‘ಅತ್ತೆ ಕ್ಯಾಂಟೀನ್’ ಉದ್ಘಾಟಿಸಿದರು. ಅತ್ತೆ ಹನುಮಕ್ಕ ತಾನು ಕೂಡಿಟ್ಟಿದ್ದ ಗೃಹಲಕ್ಷ್ಮಿ ಹಣವನ್ನು ಕ್ಯಾಂಟೀನ್ ಆರಂಭಿಸಲು ಸುಮಿಗೆ ನೀಡಿ ನೆರವಾಗಿದ್ದಳು. ಆಕೆಯ ಹೆಸರಿಟ್ಟು ಸುಮಿ ಅತ್ತೆಪ್ರೇಮ ಮೆರೆದಿದ್ದಳು. ಶಾಸಕರು ಹನುಮಕ್ಕನನ್ನು ಸನ್ಮಾನಿಸಿ ಆಕೆಯ ಕೊಡುಗೆ ಶ್ಲಾಘಿಸಿದರು.

‘ಗೃಹಲಕ್ಷ್ಮಿ ಯೋಜನೆಗೆ ವರ್ಷ ತುಂಬಿದೆ. ಸುಮಿಯ ಅತ್ತೆ ಕ್ಯಾಂಟೀನ್ ಉದ್ಘಾಟನೆಯನ್ನು ಯೋಜನೆಯ ವಾರ್ಷಿಕೋತ್ಸವದ ಆಚರಣೆ ಎಂದೇ ಭಾವಿಸುತ್ತೇನೆ’ ಎಂದ ಶಾಸಕರು, ‘ಗೃಹಲಕ್ಷ್ಮಿಯ ಎರಡು ಸಾವಿರ ರೂಪಾಯಿಯಿಂದ ಏನಾಗುತ್ತೆ ಎಂದು ಹಲವರು ಟೀಕಿಸಿದ್ದರು. ಅದರಿಂದ ಬದುಕು ಕಟ್ಟಿಕೊಳ್ಳಬಹುದು ಎಂದು ಅತ್ತೆ, ಸೊಸೆ ತೋರಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯು ಅತ್ತೆ, ಸೊಸೆಯರ ಬಾಂಧವ್ಯ ಬೆಸೆದು ಸಂಸಾರದಲ್ಲಿ ಸಾಮರಸ್ಯ ಬೆಳೆಸಿದೆ’ ಎಂದರು.

‘ನಿನಗೆ ಒಳ್ಳೆ ಅತ್ತೆ ಸಿಕ್ಕಿದ್ದಾರೆ. ಬಳೆ ಅಂಗಡಿ ತೆರೆಯುತ್ತೇನೆ ಗೃಹಲಕ್ಷ್ಮಿ ದುಡ್ಡು ಕೊಡಿ ಅಂತ ಕೇಳಿದರೆ ನನ್ನ ಅತ್ತೆ ಕೊಡಲಿಲ್ಲ. ಕನಿಷ್ಠ ಹಬ್ಬಕ್ಕೆ ಡಜನ್ ಬಳೆಯನ್ನೂ ಕೊಡಿಸಲಿಲ್ಲ...’ ನೆರೆಮನೆ ನಿರ್ಮಲ ತನ್ನ ಅತ್ತೆಯನ್ನು ಶಪಿಸಿದಳು.

‘ಮನೆ ಯಜಮಾನಿ ಪಟ್ಟಕ್ಕೆ ಸುಮಿ ಆಸೆಪಡಲಿಲ್ಲ. ನನ್ನ ಹೆಸರಿನಲ್ಲಿ ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಿಸಿದಳು. ಬೇರೆ ಮನೆ ಮಾಡಿ ನೀನೂ ಮನೆ ಯಜಮಾನಿಯಾಗಿ ಗೃಹಲಕ್ಷ್ಮಿ ಫಲಾನುಭವಿಯಾಗು ಎಂದು ನೆರೆಹೊರೆ ಹೆಂಗಸರು ಕಿವಿ ಚುಚ್ಚಿದರೂ ನನ್ನ ಸೊಸೆ ಮನೆ ಒಡೆಯಲಿಲ್ಲ...’ ಎಂದು ಅತ್ತೆ ಹನುಮಕ್ಕ ಸುಮಿಯ ಗುಣಗಾನ ಮಾಡಿದಳು.

ಅತ್ತೆ ಕ್ಯಾಂಟೀನ್‍ನ ಓಪನಿಂಗ್ ಸ್ಪೆಷಲ್ ಎಂದು ಮಾಡಿದ್ದ ಚಿತ್ರಾನ್ನವನ್ನು ಸುಮಿ ಶಾಸಕರಿಗೂ ಬಡಿಸಿದಳು. ಸವಿದ ಶಾಸಕರು, ‘ಅದ್ಭುತವಾಗಿದೆ!’ ಎಂದು ಸುಮಿಯ ಕೈ ರುಚಿ ಹೊಗಳಿ, ‘ಇಂದಿರಾ ಕ್ಯಾಂಟೀನ್ ರೀತಿ ಅತ್ತೆ ಕ್ಯಾಂಟೀನ್ ಫೇಮಸ್ ಆಗಲಿ’ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT