ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಕೊರಿಯಾ ವಿರುದ್ಧ ಭಾರತ ಫೆವರೀಟ್

ಸೆಮಿಫೈನಲ್ಸ್‌ ಇಂದು
Published : 15 ಸೆಪ್ಟೆಂಬರ್ 2024, 23:30 IST
Last Updated : 15 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಹುಲುನ್‌ಬುಯಿರ್‌ (ಚೀನಾ): ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ತಂಡ, ಸೋಮವಾರ ನಡೆಯುವ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದ್ದು, ಫೇವರೀಟ್ ಎನಿಸಿದೆ.

ಪ್ಯಾರಿಸ್ ಒಲಿಂಪಿಕ್ ಕಂಚಿನ ಪದಕ ವಿಜೇತ ಭಾರತ ತಂಡ, ಹಾಲಿ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದೆ. ಹರ್ಮನ್‌ಪ್ರೀತ್ ಬಳಗ ರೌಂಡ್‌ರಾಬಿನ್‌ ಲೀಗ್‌ನ ಮೂರು ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದುಕೊಂಡಿದೆ. ಕೊನೆಯ ಎರಡು ಪಂದ್ಯಗಳಲ್ಲಿ ಮಾತ್ರ (ಕೊರಿಯಾ ವಿರುದ್ಧ 3–1 ಮತ್ತು ಬದ್ಧ ಎದುರಾಳಿ ಪಾಕ್ ವಿರುದ್ಧ 2–1 ಗೆಲುವಿಗೆ) ಹೆಚ್ಚು ಹೋರಾಡಬೇಕಾಯಿತು.

ಫಾರ್ವರ್ಡ್‌ ಲೈನ್‌, ಮಿಡ್‌ಫೀಲ್ಡ್ ಮತ್ತು ಡಿಫೆನ್ಸ್‌– ಈ ಮೂರೂ ವಿಭಾಗಗಳಲ್ಲಿ ಭಾರತ ತಂಡದ ಪ್ರದರ್ಶನ ಗಮನಾರ್ಹವಾಗಿದೆ. ಮುಂಚೂಣಿ ಆಟಗಾರರು ಉತ್ತಮ ಲಯದಲ್ಲಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಗೋಲುಗಳು ಸುಲಭವಾಗಿ ಬರುತ್ತಿರಲಿಲ್ಲ. ಆದರೆ ಇಲ್ಲಿ ಸುಖಜೀತ್‌ ಸಿಂಗ್, ಅಭಿಷೇಕ್, ಉತ್ತಮ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಅರಿಜಿತ್ ಸಿಂಗ್ ಹುಂಡಲ್ ಅವರನ್ನೊಳಗೊಂಡ ತಂಡ ನಿರೀಕ್ಷೆಗೆ ಮೀರಿ ಉತ್ತಮ ಪ್ರದರ್ಶನ ನೀಡಿದೆ.

ಯುವ ಮಿಡ್‌ಫೀಲ್ಡರ್‌ ರಾಜಕುಮಾರ್ ಪಾಲ್ ಕೂಡ ಗಮನ ಸೆಳೆದಿದ್ದಾರೆ. ಕೆಲವು ಫೀಲ್ಡ್‌ ಗೋಲುಗಳ ಕಾಣಿಕೆ ನೀಡಿದ್ದಾರೆ. ಅನುಭವಿಗಳಾದ ಮನ್‌ಪ್ರೀತ್, ಉಪನಾಯಕ ವಿವೇಕ್ ಸಾಗರ್ ಪ್ರಸಾದ್ ಮತ್ತು ನೀಲಕಂಠ ಶರ್ಮಾ ಕೂಡ ಮಿಡ್‌ಫೀಲ್ಡ್‌ನಲ್ಲಿ ಮಿಂಚಿದ್ದಾರೆ.

ಭಾರತ ಎದುರಾಳಿಗಳಿಗೆ ನಾಲ್ಕು ಗೋಲುಗಳನ್ನು ಬಿಟ್ಟುಕೊಟ್ಟಿದೆ. 15 ವರ್ಷ ತಂಡದಲ್ಲಿ ಗೋಲ್‌ಕೀಪರ್‌ ಆಗಿದ್ದ ಪಿ.ಆರ್‌.ಶ್ರೀಜೇಶ್‌ ನಿವೃತ್ತಿ ನಿರ್ವಾತ ಸೃಷ್ಟಿಸದಂತೆ ಕೃಷನ್ ಬಹಾದ್ದೂರ್ ಪಾಠಕ್ ಮತ್ತು ಸೂರಜ್ ಕರ್ಕೇರಾ ತಮಗೊದಗಿದ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ವಿಶ್ವದ ಶ್ರೇಷ್ಠ ಡ್ರ್ಯಾಗ್‌ಫ್ಲಿಕರ್‌ಗಳಲ್ಲಿ ಒಬ್ಬರಾದ ಹರ್ಮನ್‌ಪ್ರೀತ್ ಸಿಂಗ್ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ತಾವೇ ಜವಾಬ್ದಾರಿ ವಹಿಸಿ ಐದು ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಗೋಲು ಗಳಿಸಿದ್ದಾರೆ. ಫೀಲ್ಡ್‌ ಗೋಲುಗಳಿಗೆ ಪರದಾಡುವಾಗ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಜುಗರಾಜ್ ಸಿಂಗ್, ನಾಯಕನಿಗೆ ಹೆಗಲು ನೀಡಿದ್ದಾರೆ.

ಪುಟಿದೇಳಬಲ್ಲ ತಂಡ: ಆದರ ಯಾವುದೇ ಹಂತದಲ್ಲಿ ಪುಟಿದೇಳುವ ಸಾಮರ್ಥ್ಯ ಹೊಂದಿರುವ ಕೊರಿಯಾವನ್ನು ಭಾರತ ನಿರ್ಲಕ್ಷಿಸುವಂತಿಲ್ಲ. ಕೊನೆಯ ರೌಂಡ್‌ ರಾಬಿನ್ ಲೀಗ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಕೊನೆಗಳಿಗೆಯಲ್ಲಿ ಚೇತರಿಸಿಕೊಂಡು 3–3 ಸಮಮಾಡಿಕೊಂಡ ಆ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು.

ಭಾರತದ ರಕ್ಷಣಾಪಡೆ ಹೆಚ್ಚು ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಡದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಕೊರಿಯಾದ ಜಿಹುನ್ ಯಾಂಗ್ ಅವರು ಏಳು ಗೋಲುಗಳನ್ನು ಗಳಿಸಿದ್ದು, ಕೊರಿಯಾದ ಪ್ರಬಲ ಅಸ್ತ್ರ. ಈ ಡ್ರ್ಯಾಗ್‌ಫ್ಲಿಕರ್‌ ಆಟಗಾರ ಟೂರ್ನಿಯ ಅತ್ಯಧಿಕ ಸ್ಕೋರರ್‌ ಕೂಡ.

ಪಾಕಿಸ್ತಾನ ತಂಡವು, ದಿನದ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಚೀನಾ ವಿರುದ್ಧ ಆಡಲಿದೆ.

ಫೈನಲ್ ಪಂದ್ಯ ಮಂಗಳವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT