ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆ.29ರಂದು ಬೆಂಗಳೂರಿನಲ್ಲಿ ಬಿಸಿಸಿಐ ಮಹಾಸಭೆ; ನೂತನ ಎನ್‌ಸಿಎ ಕೇಂದ್ರ ಉದ್ಘಾಟನೆ

Published : 5 ಸೆಪ್ಟೆಂಬರ್ 2024, 10:49 IST
Last Updated : 5 ಸೆಪ್ಟೆಂಬರ್ 2024, 10:49 IST
ಫಾಲೋ ಮಾಡಿ
Comments

ಬೆಂಗಳೂರು: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ 93ನೇ ವಾರ್ಷಿಕ ಮಹಾಸಭೆ ಇದೇ ತಿಂಗಳ 29ರಂದು ನಗರದಲ್ಲಿ ನಡೆಯಲಿದೆ. ಆದರೆ ಈ ಸಭೆಯಲ್ಲಿ ಮಂಡಳಿಯ ನೂತನ ಕಾರ್ಯದರ್ಶಿ ಆಯ್ಕೆಯ ಸಾಧ್ಯತೆ ದೂರವಾಗಿದೆ.

ಆದರೆ ಇದೇ ಸಂದರ್ಭದಲ್ಲಿ ನಗರದಲ್ಲಿ ಹೊರವಲಯದ ಜಕ್ಕೂರಿಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾಗಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಕೇಂದ್ರವನ್ನು ಉದ್ಘಾಟಿಸಲಾಗುವುದು.

ಎರಡು ದಶಕಗಳ ಹಿಂದೆ ಆರಂಭವಾದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಭೆಯಲ್ಲಿ ಬಿಸಿಸಿಐಗೆ ಹೊಸ ಕಾರ್ಯದರ್ಶಿ ಆಯ್ಕೆ ನಡೆಯುವುದಿಲ್ಲ. ಆದರೆ ಈ ಉದ್ದೇಶಕ್ಕಾಗಿ ವಿಶೇಷ ಮಹಾಸಭೆಯ ದಿನಾಂಕವನ್ನು 29ರ ಸಭೆಯಲ್ಲಿ ನಿರ್ಧರಿಸಲಾಗುವುದು.

ಜಯ್‌ ಶಾ ಅವರು ಐಸಿಸಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಕಾರಣ, ಬಿಸಿಸಿಐ ಕಾರ್ಯದರ್ಶಿ ಹುದ್ದೆ ತೆರವಾಗಿದೆ. ಡಿಸೆಂಬರ್‌ 1ರಂದು ಶಾ ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಅಧಿಕಾರಾವಧಿ ಇರುವ ಕಾರಣ ಅವರು ಈಗಿನ ಹುದ್ದೆಯಲ್ಲಿರಲಿದ್ದಾರೆ.

ಐಸಿಸಿ ಸಭೆಗೆ ಬಿಸಿಸಿಐ ಪ್ರತಿನಿಧಿಯನ್ನು ನೇಮಕ ಮಾಡುವ ವಿಷಯವೂ 18 ಅಂಶಗಳ ಕಾರ್ಯಸೂಚಿಯಲ್ಲಿ ಒಳಗೊಂಡಿದೆ. ಈ ಸಂಬಂಧ ಎಲ್ಲ ರಾಜ್ಯ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ. ಈ ಹಿಂದೆ ಶಾ ಅವರೇ ಪ್ರತಿನಿಧಿಯಾಗಿದ್ದರು.

ಪ್ರತಿನಿಧಿಯಾಗಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರನ್ನು ನೇಮಕ ಮಾಡುವ ಚರ್ಚೆ ನಡೆಯಬಹುದು. ಅಥವಾ ನೂತನ ಕಾರ್ಯದರ್ಶಿಗೆ ಈ ಹೊಣೆ ವಹಿಸಲೂಬಹುದು. ಬಿನ್ನಿ ಅವರ ವಯಸ್ಸು ಈಗ 69 ವರ್ಷಗಳಾಗಿರುವ ಕಾರಣ ಆ ಸಾಧ್ಯತೆ ಕಡಿಮೆ. ಆಡಳಿತದಲ್ಲಿ ಭಾಗವಹಿಲು ಗರಿಷ್ಠ ವಯೋಮಿತ 70 ವರ್ಷ.

ಐಪಿಎಲ್‌ನ ಆಡಳಿತ ಮಂಡಳಿಯ ಮಹಾಸಭೆಗೆ ಇಬ್ಬರು ಪ್ರತಿನಿಧಿಗಳನ್ನೂ ಸಭೆಯು ಆಯ್ಕೆ ಮಾಡಲಿದೆ. ಒಂಬುಡ್ಸ್‌ಮನ್ ಮತ್ತು ಎಥಿಕ್ಸ್‌ ಅಧಿಕಾರಿಯ ನೇಮಕವೂ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT