ಸ್ವಯಂಸೇವಾ ಸಂಸ್ಥೆಯೊಂದರ ಅಧ್ಯಕ್ಷರು ಕರೆ ಮಾಡಿದ್ದರು. ಅವರು ಕೃಷಿಕರೂ ಹೌದು. ‘ಕೃಷಿಕರ ಒಕ್ಕೂಟದ ಸಭೆಯಿದೆ. ಅವರಿಗೆ ಹೈನುಗಾರಿಕೆಯ ಮಹತ್ವವನ್ನು ಮನದಟ್ಟು ಮಾಡಿಸಬಹುದೇ? ನಮ್ಮಲ್ಲಿ ಬಹುತೇಕರು ಹಸು-ಕರುಗಳನ್ನು ಸಾಕಲು ಕಷ್ಟವೆಂದು ಈಗಾಗಲೇ ಮಾರಿಬಿಟ್ಟಿದ್ದಾರೆ. ಉಳಿದವರಲ್ಲೂ ಪಶು ಸಾಕಣೆಯಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಇದು ಕೃಷಿಯ ಮೇಲಷ್ಟೇ ಅಲ್ಲ, ಕೃಷಿಕರ ಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮ ಮಾಡೋಣ ಅಂತ ಅನ್ನಿಸಿದೆ’ ಎಂದರು. ರೈತರು ಪಶುಪಾಲನೆಯಿಂದ ವಿಮುಖವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅವರ ಮಾತಿನಲ್ಲಿ ರೈತರಲ್ಲಿ ಇಂದು ಮನೆಮಾಡಿರುವ ಮನಃಸ್ಥಿತಿಯ ಜೊತೆಗೆ ಭವಿಷ್ಯದ ಬಗ್ಗೆ ಆತಂಕವೂ ಎದ್ದು ಕಾಣುತ್ತಿತ್ತು!

ನಮ್ಮ ಕೃಷಿಕರು ಸಾಂಪ್ರದಾಯಿಕ ಜಾನುವಾರು ಸಾಕಣೆಯಿಂದ ದೂರ ಸರಿಯುತ್ತಿರುವುದರ ನಡುವೆಯೂ ಕರ್ನಾಟಕ ಹಾಲು ಮಹಾಮಂಡಲವು (ಕೆಎಂಎಫ್) ಹಾಲು ಸಂಗ್ರಹಣೆಯಲ್ಲಿ ದಾಖಲೆ ನಿರ್ಮಿಸಿದೆ. ಕಳೆದ ತಿಂಗಳ ಕೊನೆಯಲ್ಲಿ ಕೆಎಂಎಫ್ನ ನಿತ್ಯದ ಹಾಲು ಸಂಗ್ರಹಣೆಯು ಒಂದು ಕೋಟಿ ಲೀಟರ್ ದಾಟಿ ಇತಿಹಾಸ ಸೃಷ್ಟಿಸಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಹಾಲು ಉತ್ಪಾದನೆ ಹೆಚ್ಚುತ್ತಿದೆ. ಇಲ್ಲೆಲ್ಲ ಹಲವು ರೈತರು ಹೈನುಗಾರಿಕೆಯನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ಸರ್ಕಾರದ ಐದು ರೂಪಾಯಿ ಪ್ರೋತ್ಸಾಹಧನದ ಕಾರಣಕ್ಕೆ ತಕ್ಕಮಟ್ಟಿಗೆ ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ. ನಮ್ಮ ರಾಜ್ಯದಾದ್ಯಂತ 25 ಲಕ್ಷಕ್ಕೂ ಅಧಿಕ ಹೈನುಗಾರರು ಹಾಲಿನ ಸೊಸೈಟಿಗಳಿಗೆ ಹಾಲು ಹಾಕುವುದರ ಮೂಲಕ ನಮ್ಮ ಕಾಲದ ಕ್ಷೀರ ಕ್ರಾಂತಿಗೆ ಕಾರಣರಾಗಿದ್ದಾರೆ.

ಒಂದೆಡೆ ಹಾಲು ಉತ್ಪಾದನೆ ಏರುಮುಖದಲ್ಲಿದೆ, ಮತ್ತೊಂದೆಡೆ ಸಾಕಣೆ ಕಷ್ಟವೆಂದು ಗೋಪಾಲಕರು ಹಸು–ಕರುಗಳನ್ನು ಮಾರುತ್ತಿರುವುದೂ ಇದೆ. ಹೌದು, ಕೃಷಿಕರು ಪಶುಪಾಲನೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿ ಈ ಪ್ರವೃತ್ತಿ ತೀವ್ರವಾಗಿದೆ. ಈ ಪ್ರದೇಶಗಳಲ್ಲಿ ಹಸು–ಕರುಗಳನ್ನು ಸಾಕುವುದು ರಾಜ್ಯದ ಇತರೆಡೆಗಳಿಗೆ ಹೋಲಿಸಿದರೆ ಕಷ್ಟಕರವೂ ಹೌದು. ಇದಕ್ಕೆ ಪ್ರಮುಖ ಕಾರಣ ಪ್ರತಿ ಮಳೆಗಾಲದಲ್ಲೂ ಇಲ್ಲಿನ ಮೇಲ್ಮಣ್ಣು ಕೊಚ್ಚಿಕೊಂಡು ಹೋಗಿ ಭೂಮಿ ಬರಡಾಗುವುದು. ಭೂಮಿಯಲ್ಲಿ ಫಲವತ್ತತೆ ಉಳಿಯುತ್ತಿಲ್ಲ. ಇಂತಹ ಮಣ್ಣಿನಲ್ಲಿ ಬೆಳೆದ ಮೇವಿನಲ್ಲಿ ಸಹಜವಾಗಿಯೇ ಲವಣಾಂಶಗಳ ಕೊರತೆ ಇರುತ್ತದೆ. ಜೊತೆಗೆ ಇಲ್ಲಿ ಬಳಸುವ ಭತ್ತದ ಹುಲ್ಲು ಹಸುಗಳಿಗೆ ಬಹಳ ಒಳ್ಳೆಯ ಆಹಾರವೇನೂ ಅಲ್ಲ. ಇದರಲ್ಲಿ ನಾರಿನಾಂಶ ಹೊರತುಪಡಿಸಿದರೆ ಇತರ ಪೌಷ್ಟಿಕಾಂಶಗಳ ತೀವ್ರ ಕೊರತೆ ಇದೆ.

ಹಾಗಾಗಿ ರಾಗಿ, ಜೋಳದ ಮೇವಿನ ಜೊತೆ ತುಲನೆ ಮಾಡಿ ನೋಡಿದರೆ, ಭತ್ತದ ಹುಲ್ಲು ಒಳ್ಳೆಯ ಆಹಾರ ಅನ್ನಿಸುವುದಿಲ್ಲ. ಭತ್ತದ ಹುಲ್ಲಿನಲ್ಲಿರುವ ಕೊರತೆ ಸರಿದೂಗಿಸಲು ಪಶುಆಹಾರ (ಹಿಂಡಿ) ಹೆಚ್ಚು ಬಳಸಿದರೆ ನಿರ್ವಹಣೆಯ ವೆಚ್ಚ ಏರಿ ಹೈನುಗಾರಿಕೆ ನಷ್ಟ ತರುತ್ತದೆ! ಮಲೆನಾಡು ಗಿಡ್ಡದಂತಹ ಸ್ಥಳೀಯ ಹಸುಗಳನ್ನು ಹೊರಗೆ ಬಿಟ್ಟು ಮೇಯಿಸಲು ಜಾಗದ ಕೊರತೆ, ಅತಿಕ್ರಮಣ
ದಿಂದಾಗಿ ಗೋಮಾಳಗಳು ಕಣ್ಮರೆಯಾಗಿರುವುದು, ಹಸಿರು ಮೇವಿನ ಕೊರತೆ, ಪಶು ಆಹಾರದ ಬೆಲೆ ದಿನದಿನಕ್ಕೂ ಏರುತ್ತಿರುವುದು, ಗದ್ದೆ-ತೋಟಗಳಲ್ಲಿ ಹಸಿರು ಹುಲ್ಲು ಇದ್ದರೂ ಕೊಯ್ದು ತಂದು ಹಾಕಲು ಕಾರ್ಮಿಕರ ಕೊರತೆ, ಪಶು ಸಾಕಣೆಯಲ್ಲಿ ಯುವಜನಾಂಗದ ನಿರಾಸಕ್ತಿ, ಜಾನುವಾರುಗಳಿರುವ ಕೃಷಿ ಕುಟುಂಬದ ಯುವಕರನ್ನು ವರಿಸಲು ಯುವತಿಯರು ಹಿಂದೇಟು ಹಾಕುತ್ತಿರುವುದು, ದನ–ಕರುಗಳು ಇದ್ದರೆ ಕೆಲಸ ಜಾಸ್ತಿ, ಆರಾಮವಾಗಿ ಸುತ್ತಾಡಲು ತೊಡಕು ಎಂಬ ಭಾವನೆ… ಹೀಗೆ ಜಾನುವಾರು ಸಾಕಣೆಯಿಂದ ದೂರ ಸರಿಯಲು ಕಾರಣಗಳು ಹತ್ತಾರು.

ಅದರಲ್ಲೂ ಪ್ರಮುಖ ಕಾರಣ ಇಲ್ಲಿ ಲಾಭವೆಂಬುದೇ ಇಲ್ಲ, ಇದು ಪೂರ್ಣವಾಗಿ ಲುಕ್ಸಾನಿನ ಬಾಬತ್ತು ಎಂಬ ನಂಬಿಕೆಯೊಂದು ಮಲೆನಾಡು, ಕರಾವಳಿ ಭಾಗದಲ್ಲಿ ಬಹಳ ವ್ಯಾಪಕವಾಗಿದೆ. ಆದರೆ, ಬಯಲುಸೀಮೆಯ ರೈತರು ಹೈನುಗಾರಿಕೆಯ ಮೂಲಕವೇ ಜೀವನ ಕಂಡುಕೊಂಡಿರುವುದೂ ಇದೆ. ಹಲವಾರು ಮಂದಿ ಕೃಷಿಕರು ಉಪಕಸುಬಾಗಿಯೂ ಹೈನುಗಾರಿಕೆಯನ್ನು ಆಶ್ರಯಿಸಿದ್ದಾರೆ. ಹೈನುಗಾರಿಕೆ ಎಂಬುದು ನಷ್ಟದ ಕಸುಬು ಎಂದು ಸಾರಾಸಗಟಾಗಿ ಹೇಳುವವರು ಜಮಾ-ಖರ್ಚಿನ ಲೆಕ್ಕಾಚಾರದಲ್ಲಿ ಎಡವುತ್ತಿರುವುದು ಸ್ಪಷ್ಟ. ಎಮ್ಮೆ, ದನಗಳಿಂದ ಸಿಗುವ ಹಾಲನ್ನು ಮಾತ್ರ ಆದಾಯವೆಂದು ಪರಿಗಣಿಸುತ್ತಿರುವುದರಿಂದ ಲೆಕ್ಕ ತಪ್ಪಾಗುತ್ತಿದೆ. ಹಿಂಡಿ, ಮೇವಿಗೆಂದು ಮಾಡುವ ಖರ್ಚಿಗೆ ಹೋಲಿಸಿದರೆ ಹಾಲಿನಿಂದ ದೊರಕುವ ಆದಾಯ ಸ್ವಲ್ಪ ಕಡಿಮೆ ಇರಬಹುದು. ಜೊತೆಗೆ ಇತರೆ ಆದಾಯದ ಮೂಲಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಮನೆಯಲ್ಲೇ ಉತ್ಪಾದಿಸುವ ತಾಜಾ ಹಾಲನ್ನು ಮಕ್ಕಳು ಸೇರಿದಂತೆ ಮನೆಮಂದಿ ಉಪಯೋಗಿಸುವುದರಿಂದ ಆರೋಗ್ಯಕ್ಕಾಗುವ ಗಳಿಕೆ, ಹೈನೋತ್ಪನ್ನಗಳಾದ ಮೊಸರು, ಮಜ್ಜಿಗೆ, ತುಪ್ಪವನ್ನು ನಿತ್ಯ ಬಳಸುವುದರಿಂದ ಶರೀರಕ್ಕೆ ಸಿಗುವ ಅಗತ್ಯ ಪೋಷಕಾಂಶಗಳನ್ನು ಹಲವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.

ಅದರಲ್ಲೂ ತುಪ್ಪವು ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಮಹತ್ವವಿರುವ ಹೈನು ಪದಾರ್ಥ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (ಎಲ್ಡಿಎಲ್) ಕಡಿಮೆ ಮಾಡಿ, ದೇಹಕ್ಕೆ ಅಗತ್ಯವಿರುವ ಉತ್ತಮ ಕೊಬ್ಬಿನ (ಎಚ್ಡಿಎಲ್) ಪ್ರಮಾಣ ಹೆಚ್ಚಿಸುವ ಸಾಮರ್ಥ್ಯ ತುಪ್ಪಕ್ಕಿರುವುದರಿಂದ ಹೃದಯ, ರಕ್ತನಾಳಗಳು, ಮಾಂಸಖಂಡ, ಮೂಳೆಗಳ ಆರೋಗ್ಯಕ್ಕೆ ಇದು ಸಹಕಾರಿ ಎಂದು ಆಯುರ್ವೇದಶಾಸ್ತ್ರ ಹೇಳುತ್ತದೆ.

ಜಾನುವಾರುಗಳಿಂದ ಸಿಗುವ ಸಗಣಿ ಒಂದು ಉತ್ಕೃಷ್ಟ ಗೊಬ್ಬರ. ಅದನ್ನು ಬಳಸಿದಾಗ ಮಣ್ಣಿಗೆ ಅಗತ್ಯ ಸಾವಯವ ಅಂಶ ಸೇರಿ ಉಪಯುಕ್ತ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗುವುದಲ್ಲದೆ ಬೆಳೆಯ ಇಳುವರಿ ಹೆಚ್ಚುತ್ತದೆ. ಸಗಣಿ ಗೊಬ್ಬರಕ್ಕೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಜಾಸ್ತಿ. ಗಂಜಲ (ಗೋಮೂತ್ರ) ಮಣ್ಣಿನ ಫಲವತ್ತತೆ ವೃದ್ಧಿಸುವ ಜೊತೆಗೆ ಕೀಟನಾಶಕ ಸೇರಿದಂತೆ ಹಲವು ರೂಪದಲ್ಲಿ ಬಳಕೆಯಲ್ಲಿದೆ. ಸಗಣಿ, ಗಂಜಲ, ದ್ವಿದಳ ಧಾನ್ಯಗಳ ಹಿಟ್ಟು, ಬೆಲ್ಲದಿಂದ ತಯಾರಿಸುವ ಜೀವಾಮೃತವನ್ನು ಬೆಳೆಗಳಿಗೆ ಉಣಿಸಿ ಉತ್ತಮ ಫಸಲು ಪಡೆಯುತ್ತಿರುವ ರೈತರ ಸಂಖ್ಯೆ ದೊಡ್ಡದಿದೆ. ಹಲವರು ಗೋಬರ್ ಗ್ಯಾಸ್ ಘಟಕ ನಿರ್ಮಿಸಿಕೊಂಡು ಎಲ್ಪಿಜಿಯಂತಹ ಇಂಧನಗಳ ಬಳಕೆ ತಗ್ಗಿಸಿದ್ದಾರೆ. ಗೋವುಗಳ ಸಾಂಗತ್ಯದಿಂದ ಸಿಗುವ ಸಂತೋಷ, ನೆಮ್ಮದಿ, ಖುಷಿಯಂತಹ ಹಿತಾನುಭವಗಳು ಮಾನಸಿಕ ಆರೋಗ್ಯ ವೃದ್ಧಿಸುತ್ತವೆ. ಪಶುಪಾಲನೆಯು ಮಕ್ಕಳಲ್ಲಿ ದಯೆ, ಅನುಕಂಪ, ಪ್ರೀತಿ, ಕಾಳಜಿಯಂತಹ ಗುಣಗಳನ್ನು ಬಿತ್ತಲು ಸಹಕಾರಿ. ನಿತ್ಯ ಮೈತೊಳೆಯುವುದು, ಹಿಂಡಿ-ಹುಲ್ಲು ಹಾಕುವುದು, ಹಾಲು ಕರೆಯುವುದು, ಕೊಟ್ಟಿಗೆಯ ಸ್ವಚ್ಛತೆ ನಿರ್ವಹಣೆ ಎಂದೆಲ್ಲಾ ಸದಾ ಚಟುವಟಿಕೆಯಿಂದಿರಬೇಕಾದ ಅನಿವಾರ್ಯದಿಂದ ಶರೀರಕ್ಕೂ ವ್ಯಾಯಾಮ ಸಿಗುತ್ತದೆ.

ಹೌದು, ಹೈನುಗಾರಿಕೆಯ ಈ ಎಲ್ಲಾ ಉಪಯೋಗಗಳನ್ನು ಪರಿಗಣಿಸಿದರೆ ಇದು ಖಂಡಿತ ಲಾಭದಾಯಕ ಎಂಬುದು ಖಚಿತವಾಗುತ್ತದೆ. ಹಾಗಂತ ಇದನ್ನು ಒಂದು ಉದ್ಯಮವಾಗಿಯೋ ಕಸುಬಾಗಿಯೋ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಮಾಡಲು ಕಷ್ಟಸಾಧ್ಯವಾದರೂ ಮನೆಗೆ ಒಂದೋ ಎರಡೋ ಹಸುಗಳನ್ನು ಕಟ್ಟಿಕೊಂಡು ಸರಳವಾಗಿ ಪಶುಪಾಲನೆ ಮಾಡುವುದು ಕಷ್ಟವಲ್ಲ. ಜಮೀನಿನಲ್ಲಿ ಒಂದಷ್ಟು ಜಾಗವನ್ನು ಹಸಿರು ಮೇವಿಗಾಗಿಯೇ ಮೀಸಲಿಡುವುದು, ಮನೆ, ತೋಟದ ಬೇಲಿ ಸಾಲುಗಳಲ್ಲಿ ಗೊಬ್ಬರದ ಗಿಡ, ಹಾಲುವಾಣ, ಅಗಸೆ, ನುಗ್ಗೆಯಂತಹ ಮೇವಿನ ಮರಗಳನ್ನು ಬೆಳೆಸಿಕೊಳ್ಳುವುದರಿಂದ ಪಶು ಆಹಾರದ ವೆಚ್ಚವನ್ನು ಖಂಡಿತ ಮಿತಗೊಳಿಸಬಹುದು. ಜೊತೆಗೆ ಕೊಟ್ಟಿಗೆಯಲ್ಲಿ ಗಾಳಿ, ಬೆಳಕು, ಸ್ವಚ್ಛತೆ ಚೆನ್ನಾಗಿರುವಂತೆ ನೋಡಿಕೊಂಡಾಗ ರಾಸುಗಳ ಸ್ವಾಸ್ಥ್ಯವೂ ಚೆನ್ನಾಗಿರುತ್ತದೆ.

‘ಮಣ್ಣಿನಲ್ಲಿ ಬೆಳೆದ ಬೆಳೆ ಮಾನವನಿಗೆ, ಬೆಳೆಯ ತ್ಯಾಜ್ಯ ಜಾನುವಾರುಗಳಿಗೆ, ಜಾನುವಾರುಗಳ ತ್ಯಾಜ್ಯ ಮರಳಿ ಮಣ್ಣಿಗೆ’ ಎಂಬುದು ಸಾವಯವ ನಿಯಮ. ಈ ದಿಸೆಯಲ್ಲಿ ರೈತರು ಚಿಂತಿಸಿ ಸಣ್ಣ ಪ್ರಮಾಣದಲ್ಲಾದರೂ ಪಶುಪಾಲನೆ ಮಾಡುವುದು ಕುಟುಂಬದ ಸ್ವಾಸ್ಥ್ಯದ ಜೊತೆಗೆ ಪ್ರಕೃತಿಯ ಸಾವಯವ ಚಕ್ರದ ಚಲನೆಗೂ ಸಹಕಾರಿ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.