ಈ ವರ್ಷ ಬೇಸಿಗೆಯ ಪ್ರಾರಂಭದಲ್ಲೇ ಕುಡಿಯುವ ನೀರಿಗಾಗಿ ಬೆಂಗಳೂರಿನಲ್ಲಿ ಹಾಹಾಕಾರವೆದ್ದಿದೆ. ಸಮಸ್ಯೆಯ ಪರಿಹಾರಕ್ಕೆ ₹ 556 ಕೋಟಿ ಮೀಸಲಾಗಿಟ್ಟಿರುವ ಸರ್ಕಾರ, ಯಥಾಪ್ರಕಾರ ಮತ್ತಷ್ಟು ಕೊಳವೆಬಾವಿಗಳನ್ನು ಕೊರೆಯುವುದರ ಜೊತೆಗೆ ಇನ್ನಿತರ ಹಲವಾರು ಕ್ರಮಗಳನ್ನು ಪ್ರಕಟಿಸಿದೆ. ಮಳೆನೀರಿನ ಸಂಗ್ರಹಕ್ಕೆ ಅತಿಹೆಚ್ಚಿನ ಆದ್ಯತೆ ಅಗತ್ಯವೆಂಬ ಮಾತನ್ನು ಪುನರುಚ್ಚರಿಸಿರುವ ಜಲತಜ್ಞರು, ವಾಯುಮಂಡಲದಿಂದ ನೀರು ಪಡೆದು ಪೂರೈಸಬೇಕೆಂಬ ಸಲಹೆಯನ್ನು ನೀಡಿದ್ದಾರೆ. ಈ ಸಲಹೆ ಅತ್ಯಂತ ಸಮಯೋಚಿತ.

ಸಿಕಂದರಾಬಾದ್ ರೈಲು ನಿಲ್ದಾಣದ ಪ್ಲಾಟ್ಫಾರಂ ನಲ್ಲಿ, ಬೆಂಗಳೂರಿನ ಬಿಇಎಲ್ ಸಂಸ್ಥೆ ನಿರ್ಮಿಸಿರುವ ‘ಮೇಘದೂತ’ ಹೆಸರಿನ ಯಂತ್ರವೊಂದಿದೆ. ಈ ಯಂತ್ರ ವಾಯುಮಂಡಲದಿಂದ ಗಾಳಿಯನ್ನು ಹೀರಿಕೊಂಡು ನೇರವಾಗಿ ಕುಡಿಯುವ ನೀರನ್ನು ಉತ್ಪಾದಿಸುತ್ತದೆ. ಒಂದು ಲೀಟರ್ ನೀರಿಗೆ ₹ 8 ದರ ನಿಗದಿಪಡಿಸಲಾ ಗಿದೆ. ಇದು ಮಾರುಕಟ್ಟೆಯಲ್ಲಿರುವ ಎಲ್ಲ ಬಾಟಲಿ ನೀರಿಗಿಂತ ಅಗ್ಗ. ಬಾಟಲಿ ಬೇಡವೆಂದರೆ ಒಂದು ಲೀಟರ್ ನೀರಿಗೆ ₹ 5 ಮಾತ್ರ. ಕೇಂದ್ರ ರೈಲ್ವೆಯ ಮುಂಬೈ ವಿಭಾಗದ ಛತ್ರಪತಿ ಶಿವಾಜಿ ಟರ್ಮಿನಲ್, ದಾದರ್, ಕುರ್ಲಾ, ಠಾಣೆ, ಘಾಟ್ಕೋಪರ್ ಮತ್ತು ವಿಕ್ರೋಲಿ ನಿಲ್ದಾಣಗಳಲ್ಲಿ ಗಾಳಿಯಿಂದ ನೀರು ಪಡೆಯುವ, ಒಟ್ಟು 17 ‘ಮೇಘದೂತ’ ಕಿಯೋಸ್ಕ್ಗಳನ್ನು ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆ ‘ಮೈತ್ರಿ ಅಕ್ವಾಟೆಕ್’ ಸ್ಥಾಪಿಸಿದೆ.

ಹಿಂದಿನ ವರ್ಷದ ಜನವರಿಯಲ್ಲಿ ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆದ ಪುರುಷರ ವಿಶ್ವಕಪ್ ಹಾಕಿ ಪಂದ್ಯಗಳ ಸಂದರ್ಭದಲ್ಲಿ ಪ್ರತಿನಿತ್ಯ 20,000 ಪ್ರೇಕ್ಷಕರಿಗೆ ಗಾಳಿಯಿಂದ ಪಡೆದ ಕುಡಿಯುವ ನೀರನ್ನು ಒದಗಿಸಲಾಗಿದೆ. ಈ ಎರಡೂ ನಗರಗಳ ಕ್ರೀಡಾಂಗಣಗಳಲ್ಲಿ ಗಾಳಿಯಿಂದ ನೀರು ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಿದ್ದು ಇಸ್ರೇಲ್ನ ವಾಟರ್ಜೆನ್ ಎಂಬ ಸಂಸ್ಥೆ. ಪ್ರಪಂಚದ 90 ದೇಶಗಳ ವಿವಿಧ ನಗರ, ಪಟ್ಟಣ ಪ್ರದೇಶಗಳಲ್ಲಿ ಜಲೋತ್ಪಾದಕ ಯಂತ್ರಗಳನ್ನು ವಾಟರ್ಜೆನ್ ಸ್ಥಾಪಿಸಿದೆ.

ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ತಯಾರಿಸಿರುವ ಮೇಘದೂತ ಸಾಧನವನ್ನು ವಿನ್ಯಾಸ ಮಾಡಿ, ರೂಪಿಸಿದವರು ಮೈತ್ರಿ ಅಕ್ವಾಟೆಕ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಸಂಸ್ಥೆಯ ವಿಜ್ಞಾನಿ, ತಂತ್ರಜ್ಞರು. ಆದರೆ ಮೇಘದೂತವೇ ನಮ್ಮ ದೇಶದ ಮೊದಲ ವಾಯುಮಂಡಲ ಜಲೋತ್ಪಾದಕ ಅಲ್ಲ. 2005ರಷ್ಟು ಹಿಂದೆಯೇ ಮುಂಬೈ ಮೂಲದ ‘ವಾಟರ್ ಮೇಕರ್’ ಎಂಬ ಕಂಪನಿ, ಗಾಳಿಯಲ್ಲಿರುವ ತೇವಾಂಶದಿಂದ ಕುಡಿಯುವ ನೀರನ್ನು ಪಡೆಯುವ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿತು. ಪ್ರಾರಂಭದಲ್ಲಿ ತನ್ನ ಉತ್ಪನ್ನಗಳನ್ನು ಮಧ್ಯಪ್ರಾಚ್ಯದ ದೇಶಗಳಿಗೆ ರಫ್ತು ಮಾಡಿದ ವಾಟರ್ ಮೇಕರ್, ಆನಂತರ ಆಂಧ್ರಪ್ರದೇಶ ಹಾಗೂ ಗುಜರಾತ್ನ ತೀವ್ರ ನೀರಿನ ಕೊರತೆಯಿರುವ ಹಳ್ಳಿಗಳಲ್ಲಿ ಇಂತಹ ಯಂತ್ರಗಳನ್ನು ಸ್ಥಾಪಿಸಿತು. ಇದೀಗ ನಮ್ಮ ದೇಶದ ಅನೇಕ ಭಾಗಗಳಲ್ಲಿ ಜಲೋತ್ಪಾದಕ ಯಂತ್ರಗಳು ಕೆಲಸ ಮಾಡುತ್ತಿವೆ.

ಚೆನ್ನೈ ನಗರದಲ್ಲಿ ದಿನವೊಂದಕ್ಕೆ 120 ಲೀಟರ್ ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿರುವ ಕುಟುಂಬಗಳಿವೆ. ಅದೇ ನಗರದ ಸೆಕೆಂಡರಿ ಶಾಲೆಯೊಂದರಲ್ಲಿ ನಾಲ್ಕು ಯಂತ್ರಗಳನ್ನು ಅಳವಡಿಸಲಾಗಿದೆ. ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಸ್ಥಾಪಿಸಲಾಗಿರುವ 1,000 ಲೀಟರ್ ಘಟಕ ಅಲ್ಲಿನ 400 ಜನರಿಗೆ ಶುದ್ಧ ಕುಡಿಯುವ ನೀರನ್ನು ಪ್ರತಿದಿನ ಒದಗಿಸುತ್ತಿದೆ. ಪಶ್ಚಿಮ ಬಂಗಾಳದ ಹಾಲ್ದಿಯಾ ತೈಲ ಸಂಸ್ಕರಣಾ ಸ್ಥಾವರದಲ್ಲಿ 1,000 ಲೀಟರ್ ಸಾಮರ್ಥ್ಯದ ಆರು ಘಟಕಗಳಿವೆ. ಲಡಾಕ್ ಗಡಿ ಪ್ರದೇಶದಲ್ಲಿ ಭಾರತೀಯ ಸೈನ್ಯದ ತುಕಡಿಗಳು ಈ ಯಂತ್ರವನ್ನು ಬಳಸುತ್ತಿವೆ. ಅನೇಕ ಕಾರ್ಪೊರೇಟ್ ಸಂಸ್ಥೆಗಳು ಶಾಲೆ, ಚಿಕಿತ್ಸಾಲಯ, ಆಸ್ಪತ್ರೆ, ಸಮುದಾಯ ಕೇಂದ್ರಗಳಲ್ಲಿ ಈ ಯಂತ್ರಗಳನ್ನು ಸ್ಥಾಪಿಸುತ್ತಿವೆ. ಬೆಂಗಳೂರಿನಲ್ಲೇ ಹಲವಾರು ತಾರಾ ಹೋಟೆಲ್ಗಳಲ್ಲೂ ಇದು ಲಭ್ಯವಿದೆ. ದಿನಕ್ಕೆ 25 ಲೀಟರ್ನಿಂದ 5,000 ಲೀಟರ್ಗಳಷ್ಟು ಕುಡಿಯುವ ನೀರನ್ನು ಒದಗಿಸಬಲ್ಲ ಯಂತ್ರಗಳನ್ನು ತಯಾರಿಸಲಾಗುತ್ತಿದೆ.

ನಮ್ಮ ಭೂಮಿಯನ್ನು ಆವರಿಸಿರುವ ವಾಯಮಂಡಲದಲ್ಲಿ ಇತರ ಅನಿಲಗಳೊಡನೆ ನೀರಾವಿಯೂ ಇದೆ. ಅನಿಲ ಸ್ಥಿತಿಯಲ್ಲಿರುವ ಈ ನೀರು, ದಟ್ಟವಾಗಿರದೆ ವಿರಳವಾಗಿ ಹರಡಿಕೊಂಡಿರುತ್ತದೆ. ಯಾವುದೇ ಸಮಯದಲ್ಲಿ ವಾಯುಮಂಡಲದಲ್ಲಿರುವ ನೀರಾವಿಯ ಪ್ರಮಾಣವು ಇಡೀ ಭೂಮಿಯಲ್ಲಿ ಅಂತರ್ಜಲದ ರೂಪದಲ್ಲಿರುವ ನೀರಿನ ಪ್ರಮಾಣಕ್ಕಿಂತ ಹೆಚ್ಚು. ವಾಯುಮಂಡಲದ ತಾಪ ಹೆಚ್ಚಾದಂತೆ ಅದು ಹಿಡಿದಿಟ್ಟುಕೊಳ್ಳುವ ನೀರಾವಿಯ ಪ್ರಮಾಣವೂ ಏರುತ್ತದೆ. ಈ ಪ್ರಮಾಣ ಗರಿಷ್ಠ ಶೇಕಡ 400ರ ಮಿತಿಯನ್ನು ದಾಟಿದಾಗ ಮತ್ತು ಗಾಳಿಯ ಉಷ್ಣತೆ ಇಳಿದಾಗ, ನೀರಾವಿ ಸಾಂದ್ರೀಕರಣಗೊಂಡು ಇಬ್ಬನಿ, ಕಾವಳ, ಹಿಮದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ನೀರಾವಿಯಿರುವ ವಾಯುಮಂಡಲದ ಗಾಳಿಯ ಉಷ್ಣತೆಯನ್ನು ಇಳಿಸುವುದರ ಮೂಲಕ ಸಾಂದ್ರೀಕರಣವನ್ನು ಪ್ರಾರಂಭಿಸಿ ಕುಡಿಯುವ ನೀರನ್ನು ಪಡೆಯಬಹುದು.

ವಾಯುಮಂಡಲದಿಂದ ನೇರವಾಗಿ ಕುಡಿಯುವ ನೀರನ್ನು ಉತ್ಪಾದಿಸುವ ಕ್ಷೇತ್ರದಲ್ಲಿರುವ ಎಲ್ಲ ಕಂಪನಿಗಳೂ ಮೂಲಭೂತವಾಗಿ ಎರಡು ಮಾರ್ಗಗಳನ್ನು ಬಳಸುತ್ತಿವೆ. ಮೊದಲನೆಯದು, ಶೈತ್ಯೀಕರಣ ಶೀತಲನ (ಕೂಲಿಂಗ್ ಬೈ ರೆಫ್ರಿಜಿರೇಷನ್). ಈ ವಿಧಾನದಲ್ಲಿ ತೇವಾಂಶಭರಿತ ಗಾಳಿಯನ್ನು ಯಂತ್ರದ ಮೂಲಕ ಹಾಯಿಸಿ, ಗಾಳಿಯ ತಾಪವನ್ನು ಅದರ ಇಬ್ಬನಿಯ ಬಿಂದುವಿಗಿಂತ (ಡ್ಯೂ ಪಾಯಿಂಟ್) ಕೆಳಗೆ ಇಳಿಸಲಾಗುತ್ತದೆ. ಹೀಗೆ ಮಾಡಿದಾಗ ನೀರಿನ ಬಾಷ್ಪ ಸಾಂದ್ರೀಕರಣಗೊಂಡು ನೀರಿನ ಹನಿಗಳಾಗಿ ಸಂಗ್ರಹವಾಗುತ್ತದೆ. ಎರಡನೆಯ ವಿಧಾನದಲ್ಲಿ, ವಾಯುಮಂಡಲದಲ್ಲಿನ ತೇವಾಂಶವನ್ನು ಸಮರ್ಥವಾಗಿ ಹೀರಿ ಕೊಳ್ಳುವ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹೀಗೆ ಹೀರಿಕೊಂಡ ನೀರನ್ನು ಆನಂತರ ಪ್ರತ್ಯೇಕಿಸಿ ಪಡೆಯಲಾಗುತ್ತದೆ.

ವಾಯುಮಂಡಲದಲ್ಲಿರುವ ತೇವಾಂಶದ ಪ್ರಮಾಣವೇ ಆರ್ದ್ರತೆ (ಹ್ಯುಮಿಡಿಟಿ). ಗಾಳಿಯಲ್ಲಿ ಈಗ ಇರುವ ನೀರಿನ ಪ್ರಮಾಣಕ್ಕೂ ಅದೇ ಒತ್ತಡ, ತಾಪದಲ್ಲಿ ಇರಬಹುದಾದ ಗರಿಷ್ಠ ನೀರಾವಿಯ ಪ್ರಮಾಣಕ್ಕೂ ಇರುವ ಅನುಪಾತವೇ ಸಾಪೇಕ್ಷ ಆರ್ದ್ರತೆ (ರಿಲೇಟಿವ್ ಹ್ಯುಮಿಡಿಟಿ). ಗಾಳಿಯಿಂದ ಉತ್ಪಾದಿಸಬಹುದಾದ ಕುಡಿಯುವ ನೀರಿನ ಪ್ರಮಾಣ ಆ ಸ್ಥಳದಲ್ಲಿನ ಗಾಳಿಯ ತಾಪ, ಸಾಪೇಕ್ಷ ಆರ್ದ್ರತೆ ಮತ್ತು ಯಂತ್ರದಲ್ಲಿನ ಕಂಪ್ರೆಸರ್ ಗಾತ್ರದ ಮೇಲೆ ಅವಲಂಬಿತವಾಗಿದೆ. ಇವು ಹೆಚ್ಚಾದಾಗ ಪಡೆಯಬಲ್ಲ ನೀರಿನ ಪ್ರಮಾಣವೂ ಏರುತ್ತದೆ.

ವಾಯುಮಾಲಿನ್ಯ ಹೆಚ್ಚಾದಷ್ಟೂ ಗಾಳಿಯಿಂದ ಪಡೆಯುವ ನೀರಿನಲ್ಲೂ ಮಾಲಿನ್ಯದ ಅಂಶಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ, ಈ ಎಲ್ಲ ಯಂತ್ರಗಳಲ್ಲಿ ಗಾಳಿ ಮತ್ತು ನೀರು ಎರಡನ್ನೂ ವಿವಿಧ ಮಾರ್ಗಗಳಿಂದ ಶೋಧಿಸಿ, ಶುದ್ಧೀಕರಿಸುವ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಅಗತ್ಯವಾದ ಖನಿಜಗಳನ್ನು ಸೇರಿಸುವ ಸೌಲಭ್ಯವೂ ಇದೆ. ವಾಯುಮಂಡಲದಿಂದ ಶುದ್ಧ ನೀರನ್ನು ಉತ್ಪಾದಿಸುವ ಈ ಯಂತ್ರಗಳ ಬೆಲೆ, ನೀರನ್ನು ಉತ್ಪಾದಿಸುವ ಯಂತ್ರದ ಸಾಮರ್ಥ್ಯಕ್ಕೆ ಅನುಸಾರವಾಗಿ ₹ 45,000ದಿಂದ ಹಿಡಿದು ₹ 1 ಕೋಟಿಯವರೆಗೂ ಬದಲಾಗುವುದುಂಟು. ಆದರೆ ಕೆಲವೊಮ್ಮೆ ಕೊಳವೆಬಾವಿ ಕೊರೆಯುವುದಕ್ಕಿಂತ ಅಗ್ಗವಾಗುವುದೂ ಇದೆ.

ಈ ಜಲೋತ್ಪಾದಕ ಯಂತ್ರಗಳು ವಾಯು ಮಂಡಲದಿಂದ ತೇವಾಂಶವನ್ನು ಸತತವಾಗಿ ಹೀರಿ ತೆಗೆಯುತ್ತಿದ್ದರೆ ಅಲ್ಲಿನ ತೇವಾಂಶ ಕಡಿಮೆಯಾಗುವುದಿಲ್ಲವೇ, ಜಲಚಕ್ರ ವ್ಯವಸ್ಥೆ ಏರುಪೇರಾಗುವು
ದಿಲ್ಲವೇ ಎಂಬಂತಹ ಪ್ರಶ್ನೆಗಳು ಸಹಜ. ಆದರೆ ವಾಯುಮಂಡಲದಲ್ಲಿರುವ ಒಟ್ಟು ನೀರಾವಿಯಲ್ಲಿ ಶೇ 0.1ರಷ್ಟನ್ನು ತೆಗೆದರೂ ಪ್ರಪಂಚದ ಜನಸಂಖ್ಯೆಯ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ. ವಾಯುಮಂಡಲದಲ್ಲಿರುವ ನೀರಾವಿಯ ಪ್ರಮಾಣ ವರ್ಷದಲ್ಲಿ 40 ಬಾರಿ ಮರು ಪೂರೈಕೆಯಾಗುವುದರಿಂದ, ನೀರಾವಿಯನ್ನು ಹೊರತೆಗೆಯುವುದರಿಂದ ಲಭ್ಯವಿರುವ ನೀರಿನ ಪ್ರಮಾಣ ಕಡಿಮೆಯಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಆದರೆ ಪ್ರಕೃತಿಯ ಜಲವ್ಯವಸ್ಥೆಯಲ್ಲಿ ನಾವು ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವುದರಿಂದ ಅದರ ಪರಿಣಾಮಗಳು ಮತ್ತೆಲ್ಲೋ ಕಾಣಬಹುದೆಂಬ ಅನುಮಾನ ಸದ್ಯಕ್ಕಂತೂ ಬಗೆಹರಿದಿಲ್ಲ.

ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಜನರಿಗೆ ತಕ್ಷಣಕ್ಕೆ ಬೇಕಿರುವುದು ನೀರು. ಅಳವಡಿಸಿದ ಎರಡೇ ಗಂಟೆಯಲ್ಲಿ ನೀರನ್ನು ಒದಗಿಸುವ ಸಾಮರ್ಥ್ಯ ಈ ಯಂತ್ರಗಳಿಗಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಕಂಪನಿಗಳು ಬೆಂಗಳೂರಿನಲ್ಲೇ ಇವೆ. ಸಮರೋಪಾದಿಯಲ್ಲಿ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿರುವ ಸರ್ಕಾರ ಈ ಪ್ರಯತ್ನವನ್ನೂ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.