ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಅಂದಿನ ಮುನ್ನೋಟ ಇಂದಿಗೂ ಪ್ರಸ್ತುತ

ಎಸ್‌.ವೆಂಕಟರಾಮ್‌ 100: ಸಮಾಜವಾದಿ ನಾಯಕನ ವಿಶಿಷ್ಟ ಮುಂಗಾಣ್ಕೆ
ವಾಸು ಎಚ್‌.ವಿ.
Published 26 ಜುಲೈ 2024, 0:02 IST
Last Updated 26 ಜುಲೈ 2024, 0:02 IST
ಅಕ್ಷರ ಗಾತ್ರ

ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ ಮಂಡನೆಯಾಗಿದೆ. ಅನುದಾನ ಹಂಚಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಹಲವು ರಾಜ್ಯಗಳು ಕೇಂದ್ರದ ವಿರುದ್ಧ ದನಿಯೆತ್ತಿವೆ. ಕರ್ನಾಟಕ, ತಮಿಳುನಾಡು ಒಳಗೊಂಡಂತೆ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಇದನ್ನು ಪ್ರತಿಭಟಿಸಿ, ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವ ಮಾತನಾಡಿದ್ದಾರೆ. ವಿವಿಧ ರಾಜ್ಯಗಳಿಗೆ ತೆರಿಗೆಯ ಪಾಲು ಹಾಗೂ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂಬ ಕೂಗು ಬಲ ಪಡೆದು ಬಹಳಷ್ಟು ಕಾಲವಾಗಿದೆ. ನಮ್ಮದು ಅಸಲಿ ಒಕ್ಕೂಟ ವ್ಯವಸ್ಥೆ ಹೌದೋ ಅಲ್ಲವೋ ಎಂಬ ಚರ್ಚೆಗೂ ಇದು ದಾರಿ ಮಾಡಿಕೊಟ್ಟಿದೆ.

ವಾಸ್ತವದಲ್ಲಿ ಈ ಬಗೆಯ ಚರ್ಚೆ ಹೊಸದಲ್ಲ. 1980ರ ಹೊತ್ತಿಗಾಗಲೇ ಇಂತಹ ಚರ್ಚೆಯು ಬಹಳ ಗಂಭೀರವಾಗಿ ಶುರುವಾಗಿಬಿಟ್ಟಿತ್ತು. ಕರ್ನಾಟಕದ ಆಡಳಿತ ಕರ್ನಾಟಕದಿಂದಲೇ (ಹೈಕಮಾಂಡ್‌ನಿಂದಲ್ಲ) ಎಂಬ ಘೋಷಣೆಯು ಜನತಾಪಕ್ಷದ ನೇತೃತ್ವದ ಸರ್ಕಾರ ರಚನೆಯಾಗುವ ಮೊದಲೇ ಚಾಲ್ತಿಗೆ ಬಂದಿತ್ತು. ಅದಕ್ಕೂ ಮುಂಚೆಯೇ ಕರ್ನಾಟಕದ ಸಮಾಜವಾದಿ ಧುರೀಣರೊಬ್ಬರು ಬಹಳ ವಿದ್ವತ್ಪೂರ್ಣವಾದ ಲೇಖನವೊಂದನ್ನು ಒಕ್ಕೂಟ ವ್ಯವಸ್ಥೆಯ ಕುರಿತು ಬರೆದಿದ್ದರು. ಬದುಕಿದ್ದಿದ್ದರೆ ಈ ವಾರದಲ್ಲಿ ನೂರು ವರ್ಷದವರಾಗಿರುತ್ತಿದ್ದ ಎಸ್‌.ವೆಂಕಟರಾಮ್‌ (ಜನನ: 24.7.1924) ಅವರ ಈ ಲೇಖನ ಹಲವು ಕಾರಣಗಳಿಂದ ಮಹತ್ವದ್ದು. ಅವರು ಮೂಲತಃ ಕಾರ್ಮಿಕ ಸಂಘಟನೆಯ ನಾಯಕರು. ಸಮಾಜವಾದಿ ಚಳವಳಿ ಹಾಗೂ ಸಂಯುಕ್ತ ಸೋಷಿಯಲಿಸ್ಟ್‌ ಪಕ್ಷದಲ್ಲಿ (ಎಸ್‌ಎಸ್‌ಪಿ) ಪ್ರಮುಖರಾಗಿದ್ದ ಅವರು ಬರೆದಿದ್ದ ಲೇಖನವು 44 ವರ್ಷಗಳ ಹಿಂದೆ ಒಕ್ಕೂಟ ವ್ಯವಸ್ಥೆ ಕುರಿತಂತೆ ಬಹಳ ಆಳವಾಗಿ ಮತ್ತು ನಿಷ್ಠುರವಾಗಿ ಚರ್ಚಿಸಿತ್ತು. ಅವರ ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ ಅದನ್ನು ನೆನೆಯುವುದು ಸಂದರ್ಭೋಚಿತವಾದುದು.

ಆದರೆ, ಅವರ ಲೇಖನದಲ್ಲೊಂದು ಆಶ್ಚರ್ಯದ ಸಂಗತಿ ಇದೆ. ಇಂದಿರಾ ಗಾಂಧಿ ಅವರನ್ನು ಮತ್ತು ಕಾಂಗ್ರೆಸ್ಸನ್ನು ನಖಶಿಖಾಂತ ವಿರೋಧಿಸುವುದು ಆ ಕಾಲದ ಸಮಾಜವಾದಿಗಳ ‘ಮೂಲಭೂತ ಗುಣ’ಗಳಲ್ಲಿ ಒಂದಾಗಿತ್ತು. ಅದು ಯಾವ ಪ್ರಮಾಣದಲ್ಲಿ ಇತ್ತೆಂದರೆ, ಸೈದ್ಧಾಂತಿಕವಾಗಿ ವಿರೋಧಿಯಾಗಿದ್ದ ಬಿಜೆಪಿಯ ಜೊತೆಗೂ ಜಾರ್ಜ್‌ ಫರ್ನಾಂಡಿಸ್‌ ಮತ್ತು ನಿತೀಶ್‌ ಕುಮಾರ್‌ ಅಂಥವರು ಅದೊಂದೇ ಕಾರಣಕ್ಕೆ ಕೈಜೋಡಿಸಿಬಿಟ್ಟರು. ಆದರೆ, ವೆಂಕಟರಾಮ್‌ ಅವರ ಲೇಖನವು ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಅವರಂಥ ಕೆಲವರನ್ನು ಒಕ್ಕೂಟ ಮೌಲ್ಯದ ವಿಚಾರದಲ್ಲಿ ಸಮಾನ ನೆಲೆಯಲ್ಲಿ ಕಟಕಟೆಯಲ್ಲಿ ನಿಲ್ಲಿಸುತ್ತದೆ! ಮೊರಾರ್ಜಿ ಹಾಗೂ ಇತರ ಕೆಲವರ ಊಳಿಗಮಾನ್ಯ ಹಿನ್ನೆಲೆಯನ್ನೂ ಅವರು ಕಟುವಾಗಿ ವಿಮರ್ಶಿಸಿದ್ದಾರೆ. ಅವರ ಇನ್ನೊಂದು ಲೇಖನವು ‘ಮೊರಾರ್ಜಿ ಗುಂಪಿನ ಒತ್ತಡಕ್ಕೆ ಮಣಿಯದೆ, ಅವರು ಮತ್ತು ಜಗಜೀವನರಾಂ ನಡುವೆ ಸ್ಪರ್ಧೆ ನಡೆದಿದ್ದರೆ ಜಗಜೀವನರಾಂ ಅವರೇ ಪ್ರಧಾನಿಯಾಗಿರುತ್ತಿದ್ದರು’ ಎಂಬ ಸಂಗತಿಯನ್ನು ಉಲ್ಲೇಖಿಸುತ್ತದೆ!

ವೆಂಕಟರಾಮ್‌ ಅವರ ಪ್ರಕಾರ, ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಾತ್ರ ಒಕ್ಕೂಟ ತತ್ವವಿದ್ದರೆ ಸಾಲದು; ಪಕ್ಷ ವ್ಯವಸ್ಥೆಯೇ ಒಕ್ಕೂಟ ತತ್ವವನ್ನು ಪಾಲಿಸಬೇಕು. 1980ರ ಸುಮಾರಿನಲ್ಲಿ ಬರೆದ ತಮ್ಮ ಲೇಖನದಲ್ಲಿ ‘ಮುಂಬರುವ ವರ್ಷಗಳಲ್ಲಿ ಒಕ್ಕೂಟ ತತ್ವವು ಭಾರತದ ರಾಜಕಾರಣಕ್ಕೆ ಅನಿವಾರ್ಯವೂ ಆಗಲಿದೆ’ ಎಂದು ಭವಿಷ್ಯ ನುಡಿದಿದ್ದರು. ಇಂದಿರಾ ಗಾಂಧಿಯವರ ಹತ್ಯೆಯ ಕಾರಣಕ್ಕೆ 1984ರ ಲೋಕಸಭಾ ಚುನಾವಣೆಯನ್ನು ಹೊರತುಪಡಿಸಿದರೆ ಅಲ್ಲಿಂದಾಚೆಗಿನ 7 ಲೋಕಸಭಾ ಚುನಾವಣೆಗಳಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಬರಲಿಲ್ಲ. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಮಾತ್ರ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಸರಳ ಬಹುಮತ ಬಂದಿತ್ತು. ಆದರೆ, ಮತ್ತೆ 2024ರ ಲೋಕಸಭಾ ಚುನಾವಣೆಯಲ್ಲಿ ಈ ದೇಶವು ಇನ್ನೊಮ್ಮೆ ‘ಮೈತ್ರಿ ಸರ್ಕಾರ’ವನ್ನೇ ನೋಡುತ್ತಿದೆ.

ವೆಂಕಟರಾಮ್‌ ಅವರು ಭಾರತದ ಸಂವಿಧಾನದಲ್ಲೇ ಒಂದು ಕೇಂದ್ರೀಕೃತ ವ್ಯವಸ್ಥೆಗೆ ಪೂರಕವಾದ ಅಂಶಗಳಿರುವುದನ್ನು ಹೇಳುತ್ತಾ, ಅದಕ್ಕೆ ಭಾರತ ದೇಶವು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಕಾರಣಗಳನ್ನು ಗುರುತಿಸುತ್ತಾರೆ. ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಒಂದು ಕೇಂದ್ರೀಕೃತ ವ್ಯವಸ್ಥೆ ರೂಪುಗೊಳ್ಳದೇ ಇದ್ದಿದ್ದರೆ, ಭಾರತವು ಛಿದ್ರಗೊಂಡುಬಿಡಬಹುದಾದ ಅಪಾಯ ಇತ್ತೆಂದು ಅಭಿಪ್ರಾಯಪಡುತ್ತಾರೆ. ಆದರೆ, ಅವರು ಲೇಖನ ಬರೆಯುವ ಹೊತ್ತಿಗೆ, ಸ್ವಾತಂತ್ರ್ಯ ಬಂದು ಮೂರು ದಶಕಗಳು ಕಳೆದಿದ್ದವು. ಆಗಲೂ ಕೇಂದ್ರೀಕೃತ ವ್ಯವಸ್ಥೆಯೇ ಮುಂದುವರಿದರೆ ಭಾರತಕ್ಕೆ ಅದು ಅಪಾಯಕಾರಿಯಾದುದು ಎನ್ನುತ್ತಾರೆ. ಈ ಲೇಖನದಲ್ಲಿ ಅವರು ಮುಂದಿಡುವ ಇಂತಹ ಹಲವು ಸಂಗತಿಗಳು ಇಂದು ಹೆಚ್ಚು ಸಾರ್ವಜನಿಕ ಚರ್ಚೆಗೆ ಒಳಪಡಬೇಕಿದೆ. ಬಹುಶಃ ಅವರು ಬರೆದ ದಿನಕ್ಕಿಂತಲೂ ಆ ಲೇಖನದಲ್ಲಿನ ಸಂಗತಿಗಳು ಇಂದು ಹೆಚ್ಚು ಪ್ರಸ್ತುತವಾಗಿವೆ.

45 ವರ್ಷಗಳ ಕೆಳಗೇ ರೈತರು ಮತ್ತು ಕಾರ್ಮಿಕರ ನಡುವೆ ಕೆಲಸ ಮಾಡುತ್ತಿದ್ದ ಸಮಾಜವಾದಿ ಧುರೀಣರೊಬ್ಬರು (ಅವರು ಹಿಂದ್‌ ಮಜ್ದೂರ್‌ ಸಭಾದ ಅಖಿಲ ಭಾರತ ಅಧ್ಯಕ್ಷರೂ ಆಗಿದ್ದರು) ಒಕ್ಕೂಟ ವ್ಯವಸ್ಥೆಯ ಕುರಿತಂತೆ ಹೊಂದಿದ್ದ ಮುನ್ನೋಟದ ಅಗಾಧತೆಯ ದೃಷ್ಟಿಯಿಂದಲೂ ಅದು ಚರ್ಚಾರ್ಹವಾಗಿದೆ.

ಒಕ್ಕೂಟ ಸರ್ಕಾರವು ರಾಜ್ಯಗಳ ವಿವಿಧ ವಿದ್ಯಮಾನಗಳಲ್ಲಿ ತಲೆ ಹಾಕಬಾರದು ಎಂಬುದನ್ನು ವೆಂಕಟರಾಮ್‌ ಅವರು ಹಲವು ನೆಲೆಗಳಲ್ಲಿ ಚರ್ಚಿಸಿದ್ದಾರೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಕ್ಕೂಟ ಸರ್ಕಾರದ ತನಿಖಾ ಏಜೆನ್ಸಿಗಳು ಬಂಧಿಸಿ ಜೈಲಿನಲ್ಲಿ ಇರಿಸಿರುವ ಹೊತ್ತಿದು. ಕರ್ನಾಟಕವು 15ನೇ ಹಣಕಾಸು ಆಯೋಗದ ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯ ಅನುಭವಿಸಿದ್ದು, ಇದೀಗ 16ನೇ ಹಣಕಾಸು ಆಯೋಗವನ್ನು ಎದುರುಗೊಳ್ಳಲು ತಯಾರಿ ನಡೆಸಿದೆ. ಕರ್ನಾಟಕ ಸರ್ಕಾರವು ನೀರಾವರಿ ಯೋಜನೆಗಳ ವಿಚಾರದಲ್ಲಿ ಮಾತ್ರವಲ್ಲದೆ, ಮೀಸಲಾತಿ ಬದಲಾವಣೆಯ ಪ್ರಸ್ತಾವಕ್ಕೆ ಅನುಮತಿ ಪಡೆಯಲೂ ದೆಹಲಿಯ ಅಧಿಕಾರಸ್ಥರ ಮುಂದೆ ಕಾಯುತ್ತಲೇ ಇದೆ. ಕೇಂದ್ರ ಪುರಸ್ಕೃತ ಯೋಜನೆಗಳು ಎಂದು ಕರೆಯಲಾಗುವ ಯೋಜನೆಗಳಲ್ಲೂ ರಾಜ್ಯದ ಪಾಲೇ ದಿನೇ ದಿನೇ ಹೆಚ್ಚಾಗುತ್ತಿರುವುದು, ರಾಜ್ಯಗಳ ಜೊತೆಗೆ ಹಂಚಿಕೊಳ್ಳುವ ಅಗತ್ಯವಿಲ್ಲದ ಸೆಸ್‌ ಮತ್ತು ಸರ್‌ಚಾರ್ಜುಗಳನ್ನೇ ಕೇಂದ್ರವು ಹೆಚ್ಚೆಚ್ಚು ಹೇರುತ್ತಿರುವುದು ಸೇರಿದಂತೆ ಹಲವು ರೀತಿಯ ‘ಕೇಂದ್ರೀಕರಣದ ಅನ್ಯಾಯ’ವನ್ನು ಕರ್ನಾಟಕ ಮತ್ತು ಕೆಲವು ರಾಜ್ಯಗಳು ಎದುರಿಸುತ್ತಿವೆ. ಇದಕ್ಕೆ ಏನು ಮಾಡಬೇಕು ಎಂಬುದನ್ನು 1980ರಲ್ಲೇ ಆ ಲೇಖನವು ಚರ್ಚಿಸಿದೆ.

ತುರ್ತುಸ್ಥಿತಿಯ ನಂತರ ಜನಸಂಘವನ್ನೂ ಸೇರಿಸಿಕೊಂಡು ಜನತಾಪಕ್ಷ ರಚಿಸಿದ್ದ ಸಮಾಜವಾದಿಗಳ ಪೈಕಿ ಅವರು ಭಿನ್ನವಾಗಿ ನಿಲ್ಲುವುದು ಇನ್ನೊಂದು ಕಾರಣಕ್ಕೆ. ಒಕ್ಕೂಟ ತತ್ವವನ್ನು ಬಲವಾಗಿ ಪ್ರತಿಪಾದಿಸುವುದಷ್ಟನ್ನೇ ಅವರು ಮಾಡಿಲ್ಲ. ಎಡಕ್ಕೆ ವಾಲಿರುವ ಆರ್ಥಿಕ ನೀತಿ ಮತ್ತು ಸಾಮಾಜಿಕ ನ್ಯಾಯದ ಕುರಿತು ವೆಂಕಟರಾಮ್‌ ಒತ್ತಿ ಹೇಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭೆಯಲ್ಲಿ ಸ್ಥಾನ ಪಡೆಯದ ಸಮುದಾಯಗಳಿಗೆ, ಅದರಲ್ಲೂ ಶೋಷಿತ ಸಮುದಾಯಗಳಿಗೆ ರಾಜ್ಯಸಭೆಯಲ್ಲಿ ಪ್ರಾತಿನಿಧ್ಯ ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂಬ ಅಂಶವನ್ನು ವೆಂಕಟರಾಮ್‌ ಪ್ರಸ್ತಾಪಿಸುತ್ತಾರೆ.

ಒಂದು ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ ಮತ್ತು ಒಕ್ಕೂಟ ಗಣರಾಜ್ಯದ ಸ್ವರೂಪಕ್ಕೆ ಎಡದ ಕಡೆಗೆ ವಾಲಿರುವ ಆರ್ಥಿಕ ಕಾರ್ಯಕ್ರಮ ಅತ್ಯಗತ್ಯ; ಅಂತಹ ಆರ್ಥಿಕ ಕಾರ್ಯಕ್ರಮವಿದ್ದರಷ್ಟೇ ಅಪಾರ ಪ್ರಮಾಣದ ವೈವಿಧ್ಯ ಹೊಂದಿರುವ ಈ ದೇಶದಲ್ಲಿ ಏಕತೆಯನ್ನು ಸಾಧಿಸುವುದು ಸಾಧ್ಯ ಮತ್ತು ಆಗಮಾತ್ರ ಈ ವೈವಿಧ್ಯಗಳನ್ನು ನಾವು ಒಂದು ಅನುಕೂಲಕರ ಅಂಶವನ್ನಾಗಿ ಪರಿವರ್ತಿಸಬಹುದು ಎಂದು ಪದೇ ಪದೇ ಒತ್ತಿ ಹೇಳುತ್ತಾರೆ. ಇವೆಲ್ಲವೂ ಮತ್ತೆ ಮತ್ತೆ ಸಾರ್ವಜನಿಕ ಚರ್ಚೆಗೆ ಒಳಪಡುವ ಅಗತ್ಯ ಇಂದು ಕರ್ನಾಟಕಕ್ಕೆ ಮಾತ್ರವಲ್ಲದೆ, ಇಡೀ ದೇಶಕ್ಕೆ ಇದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಕೇಂದ್ರೀಕರಣದಿಂದ ಆಗುತ್ತಿರುವ ಅನ್ಯಾಯದ ಕುರಿತು ದನಿ ಏಳುತ್ತಿರುವ ಹೊತ್ತಿನಲ್ಲಿ, ಪರಿಹಾರದ ದಾರಿಗಳ ಬಗ್ಗೆಯೂ ಸಮಗ್ರ ಚರ್ಚೆಯಾದರೆ ಮಾತ್ರ ಈ ದೇಶದಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆ ಗಟ್ಟಿಯಾಗಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT