ಒಂದು ಕುಟುಂಬ ಕಾಡಿನಲ್ಲಿ ವಾಸಿಸುತ್ತಿದೆ ಎಂದಾಕ್ಷಣ ಆ ಕುಟುಂಬಕ್ಕೆ ಮೂಲಸೌಕರ್ಯ ಒದಗಿಸುವುದನ್ನು ನಿರಾಕರಿಸಲಾಗುವುದಿಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಒಂದು ದೇಶದ ಹಿರಿಮೆ ಮತ್ತು ಅದರ ನೈತಿಕತೆಯು ಆ ದೇಶ ತನ್ನ ವನ್ಯಜೀವಿಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಸಹ ಅವರು ಪ್ರತಿಪಾದಿಸಿದ್ದರು. ಅವರ ಈ ಎರಡೂ ಮಹತ್ವದ ಹೇಳಿಕೆಗಳು ಸಾರ್ವಕಾಲಿಕವಾಗಿ ಮನ್ನಣೆ ಪಡೆಯುವಂತಹವು.

ವನ್ಯಜೀವಿ ಸಂರಕ್ಷಣಾ ತಾಣಗಳು, ಅಭಯಾರಣ್ಯಗಳು, ಹುಲಿ ಸಂರಕ್ಷಿತ ತಾಣಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲಾಗುತ್ತದೆ. ಈ ಪ್ರದೇಶಗಳಿಂದ ಲಭ್ಯವಾಗುವ ಹಾಗೂ ಹಣದಿಂದ ಬೆಲೆ ಕಟ್ಟಲಾಗದ ನೈಸರ್ಗಿಕ ಸಂಪತ್ತಿನ ಮೇಲೆ ದೇಶದ ಪ್ರತಿ ಪ್ರಜೆಗೂ ಹಕ್ಕಿದೆ. ಬಂಡೀಪುರ, ನಾಗರಹೊಳೆ ಅಭಯಾರಣ್ಯಗಳು ಆರೋಗ್ಯಕರವಾಗಿ ಇರುವುದರಿಂದಲೇ ಬೆಂಗಳೂರು ಇಂದು ವಾಸಯೋಗ್ಯ ಸ್ಥಳವಾಗಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವರದಿಯ ಪ್ರಕಾರ, ಅಭಯಾರಣ್ಯದ ಒಂದು ಎಕರೆ ಅರಣ್ಯದಿಂದ ಸಿಗುವ ನೈಸರ್ಗಿಕ ಸೇವೆಯನ್ನು ಆರ್ಥಿಕ ನೆಲೆಯಲ್ಲಿ ಲೆಕ್ಕಾಚಾರ ಹಾಕಿದಾಗ ಸಿಗುವ ಮೊತ್ತವು ವರ್ಷಕ್ಕೆ ಒಂಬತ್ತು ಲಕ್ಷ ರೂಪಾಯಿಯಾಗುತ್ತದೆ. ಅಂದರೆ ಇದು, ಅಭಯಾರಣ್ಯಗಳ ಮಹತ್ವವನ್ನು ಎತ್ತಿ ತೋರುವ ಸಂಗತಿಯಾಗಿದೆ. ದೇಶದಲ್ಲಿ ಹಾಲಿ ಇರುವ 140 ಕೋಟಿ ಜನಸಂಖ್ಯೆಯು ಸಂರಕ್ಷಿತಗೊಂಡ ವನ್ಯಜೀವಿ ತಾಣಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉಪಕೃತವಾಗಿಯೇ ಬದುಕುತ್ತಿದೆ. ಮುಂದಿನ ಪೀಳಿಗೆಯವರಿಗೂ ಇಂತಹ ಪ್ರದೇಶಗಳನ್ನು ಉಳಿಸಬೇಕಾಗಿದೆ. ಸರ್ಕಾರಗಳು ಈ ಸೂಕ್ಷ್ಮ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕಿದೆ.

ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಅಭಯಾರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಒಂದು ಚಿಕ್ಕ ಹಳ್ಳಿಯಿದೆ. ಅಲ್ಲಿ ಜನಿಸುವ ಮಕ್ಕಳು ಶಿಕ್ಷಣ ಪಡೆಯಬೇಕೆಂದರೆ, ಬೆಳಿಗ್ಗೆ ಐದು ಗಂಟೆಗೆ ಹೊರಟು, ಎಂಟು ಕಿಲೊ ಮೀಟರ್ ಕಾಡಹಾದಿಯಲ್ಲಿ ನಡೆದುಕೊಂಡು ಹತ್ತು ಗಂಟೆಗೆ ಶಾಲೆ ತಲುಪಬೇಕು. ಮಳೆಗಾಲದಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದಲ್ಲಿ ನಾಲ್ಕು ಜನ ಸೇರಿಕೊಂಡು ಅವರನ್ನು ಹೊತ್ತು ತರಬೇಕಾದ ಚಿಂತಾಜನಕ ಸ್ಥಿತಿಯಿದೆ. ಅಭಯಾರಣ್ಯದ ಈ ಪ್ರದೇಶದಲ್ಲಿ ಯಾವುದೇ ಮೂಲ ಸೌಕರ್ಯಗಳು ಲಭ್ಯವಿಲ್ಲ. ವನ್ಯಜೀವಿ ಸಂರಕ್ಷಣಾ ಕಾನೂನುಗಳು ಅವರಿಗೆ ಮೂಲಸೌಕರ್ಯ ಒದಗಿಸಲು ಅವಕಾಶ ಮಾಡಿಕೊಡುತ್ತಿಲ್ಲ. ಕಾನೂನಿನ ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಆ ಕುಟುಂಬಗಳಿಗೆ ಸೌಕರ್ಯ ಒದಗಿಸಲು ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಹೊರ ಪ್ರಪಂಚಕ್ಕೆ ಆಪ್ಯಾಯಮಾನವಾಗಿ ತೋರುವ ಅಭಯಾರಣ್ಯದ ಇಂತಹ ಪ್ರದೇಶಗಳು ಅಲ್ಲಿ ವಾಸಿಸುವವರಿಗೆ ಅಕ್ಷರಶಃ ನರಕಸದೃಶವಾಗಿವೆ.

ಅಭಯಾರಣ್ಯ ಘೋಷಣೆಯಾಗುವುದಕ್ಕೂ ಮುನ್ನ ಶರಾವತಿ ಮುಳುಗಡೆಯಿಂದ ಸಂತ್ರಸ್ತವಾದ ಈ ಕುಟುಂಬಗಳು ಇಲ್ಲಿ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಿದವು. ಆದರೆ, ಅನೇಕ ಕುಟುಂಬಗಳು ಇಂದಿಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ‘ಶಾಲೆ, ಆಸ್ಪತ್ರೆಯಂತಹ ಸೌಕರ್ಯಗಳು ಇರುವ ಸಮಾಜದಲ್ಲಿ ಬದುಕುವ ಅವಕಾಶ ಮಾಡಿಕೊಡಿ. ನಮ್ಮನ್ನು ಈ ಕಾನುಕೂಪದಿಂದ ಮೇಲೆತ್ತಿ’ ಎಂಬುದು ಆ ಕುಟುಂಬಗಳ ಲಾಗಾಯ್ತಿನ ಬೇಡಿಕೆಯಾಗಿದೆ. ‘ಸ್ವಯಂಪ್ರೇರಿತವಾಗಿ ನಾವು ಅಭಯಾರಣ್ಯವನ್ನು ತ್ಯಜಿಸಲು ಸಿದ್ದರಿದ್ದೇವೆ. ನಮಗೆ ತಕ್ಕುದಾದ ಪರಿಹಾರವನ್ನು ಕೊಡಿ’ ಎಂದು ಒಕ್ಕೊರಲಿನಿಂದ ಕೂಗುತ್ತಿದ್ದಾರೆ. ಇಂತಹ ನತದೃಷ್ಟ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ.

ಅರಣ್ಯ ಪ್ರದೇಶಗಳನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಅನಿವಾರ್ಯ ಸಂದರ್ಭ ಬಂದಾಗ, ಅದಕ್ಕಾಗಿ ಬದಲಿ ಅರಣ್ಯವನ್ನು ರೂಪಿಸುವ ನಿಯಮಗಳು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಇಲಾಖೆಯ ಬಳಿ ಇವೆ. ಬದಲಿ ಅರಣ್ಯ ರೂಪಿಸುವ ಸಲುವಾಗಿ ಪರಿಹಾರ ಅರಣ್ಯೀಕರಣ ನಿಧಿ (ಕಾಂಪಾ) ಅಡಿಯಲ್ಲಿ ಬಹಳಷ್ಟು ಅನುದಾನ ಲಭ್ಯವಿದೆ. ಈ ಪೈಕಿ ಶೇ 80ರಷ್ಟು ಮೊತ್ತವನ್ನು ಸ್ವಯಂಪ್ರೇರಿತ ಪುನರ್ವಸತಿಗಾಗಿ ಬಳಸಬಹುದಾಗಿದೆ. ಅದನ್ನು ಬಳಸಿಕೊಂಡು, ಅಭಯಾರಣ್ಯದಲ್ಲಿ ಸೌಕರ್ಯವಂಚಿತವಾಗಿ ಬದುಕುತ್ತಿರುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಇದು ಸಕಾಲ.

ಮನುಷ್ಯನು ನೆಮ್ಮದಿಯಾಗಿ ಮತ್ತು ಸಮೃದ್ಧವಾಗಿ ಬದುಕಲು ಕಾಡು, ನದಿ, ಜೀವಿವೈವಿಧ್ಯಗಳ ರಕ್ಷಣೆ ಮುಖ್ಯ ಎಂದು ಸಾರಿದ ಕುವೆಂಪು, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ ಅವರು ಬಾಳಿ ಬದುಕಿದ ಹೆಮ್ಮೆಯ ಕರುನಾಡು ನಮ್ಮದು. ಸ್ವಾತಂತ್ರ್ಯೋತ್ತರ ಭಾರತವನ್ನು ಮುನ್ನಡೆಸಿದ ಕೇಂದ್ರದಲ್ಲಿನ ವಿವಿಧ ಪಕ್ಷಗಳ ನೇತೃತ್ವದ ಸರ್ಕಾರಗಳೂ ಪರಿಸರ ಸಂರಕ್ಷಣೆಗಾಗಿ ಅನೇಕ ಕಾಯ್ದೆ, ಕಾನೂನು ಮತ್ತು ಅವಕಾಶಗಳನ್ನು ರೂಪಿಸಿವೆ. ವನ್ಯಜೀವಿ ನೆಲೆಗಳಲ್ಲಿ ಕಡುಕಷ್ಟದಿಂದ ಬದುಕುವ ಕುಟುಂಬಗಳಿಗೆ ಪರ್ಯಾಯ ಮತ್ತು ಆರೋಗ್ಯಕರ ಬದುಕನ್ನು ಕಟ್ಟಿಕೊಡಲು ಸ್ವಯಂಸೇವಾ ಸಂಸ್ಥೆಗಳಿಗೂ ಅವಕಾಶಗಳಿವೆ. ಅಭಯಾರಣ್ಯದಲ್ಲಿರುವ ಕೃಷಿ ಕುಟುಂಬಗಳ ಜಮೀನುಗಳನ್ನು ಖರೀದಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವುದು ಅದರಲ್ಲಿ ಒಂದು ಭಾಗ. ಸರ್ಕಾರದ ವಶದಲ್ಲಿರುವ ‘ಸಿ’ ಮತ್ತು ‘ಡಿ’ ದರ್ಜೆಯ ಭೂಮಿಯನ್ನು, ಸ್ವಯಂಪ್ರೇರಿತವಾಗಿ ನಾಗರಿಕ ಸಮಾಜವನ್ನು ಸೇರಬಯಸುವ ಕುಟುಂಬಗಳಿಗೆ ನೀಡುವುದು ಇನ್ನೊಂದು ಭಾಗ. ಈ ಬಗೆಯ ಅನೇಕ ಸಾಧ್ಯತೆಗಳನ್ನು ಬಳಸಿಕೊಂಡ ಪಕ್ಕದ ಮಹಾರಾಷ್ಟ್ರ ಸರ್ಕಾರ ಮತ್ತು ಮಧ್ಯಪ್ರದೇಶ ಸರ್ಕಾರವು ಮನುಷ್ಯ ಹಾಗೂ ವನ್ಯಜೀವಿ ಇಬ್ಬರನ್ನೂ ಗೆಲ್ಲಿಸುವಲ್ಲಿ ಯಶಸ್ಸು ಕಂಡಿವೆ.

ಭದ್ರಾ, ನಾಗರಹೊಳೆ ಹಾಗೂ ಕಾಳಿ ಅಭಯಾರಣ್ಯದಲ್ಲಿ ಬಹು ಯಶಸ್ವಿಯಾಗಿ ಸ್ವಯಂಪ್ರೇರಿತ ಪುನರ್ವಸತಿ ಕಲ್ಪಿಸಿದ ಸಿದ್ಧ ಮಾದರಿ ನಮ್ಮ ಮುಂದಿದೆ. ಭದ್ರಾ ಅಭಯಾರಣ್ಯದ ಉದಾಹರಣೆಯನ್ನು ನೀಡುವುದಾದರೆ, ಸ್ವಯಂಪ್ರೇರಿತವಾಗಿ ಪುನರ್ವಸತಿಗೊಂಡ 500ಕ್ಕೂ ಹೆಚ್ಚು ಕುಟುಂಬಗಳು ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತಿವೆ. ಅವುಗಳ ಸಾಮಾಜಿಕ ಸ್ಥಿತಿ ಹಾಗೂ ಆರ್ಥಿಕ ಮಟ್ಟಉತ್ತಮವಾಗಿದೆ. ಹಾಗೆಯೇ ಪುನರ್ವಸತಿಗಿಂತ ಪೂರ್ವದಲ್ಲಿ ಅಲ್ಲಿ ಏಳು ಹುಲಿಗಳಿದ್ದವು, ಇಪ್ಪತ್ತು ವರ್ಷಗಳ ನಂತರದಲ್ಲಿ ಅವುಗಳ ಸಂಖ್ಯೆ ಮೂವತ್ತಕ್ಕೇರಿದೆ. ಇಂತಹ ವಿನ್-ವಿನ್ ಮಾದರಿಗಳನ್ನು ರಾಜ್ಯ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಗಮನಿಸಿ ಮುನ್ನೆಲೆಗೆ ತರಬೇಕು.

ಸ್ವಯಂಪ್ರೇರಿತವಾಗಿ ಹೊರಬರಲು ಇಚ್ಛಿಸಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಆ ಕುಟುಂಬಗಳು ಇನ್ನೂ ಎಷ್ಟು ತಲೆಮಾರಿನವರೆಗೆ ತಮ್ಮದಲ್ಲದ ತಪ್ಪಿಗೆ ಸವಲತ್ತುಗಳಿಂದ ವಂಚಿತವಾಗಿ ಬದುಕಬೇಕು? ಎಲ್ಲ ರಕ್ಷಿತಾರಣ್ಯಗಳಲ್ಲೂ ಅಲ್ಲಲ್ಲಿ ಚದುರಿದಂತೆ ಕೆಲವು ಕುಟುಂಬಗಳು ವಾಸಿಸುತ್ತಿವೆ. ಮಲೆನಾಡಿನ ರಕ್ಷಿತಾರಣ್ಯಗಳಲ್ಲಿ ಒಂದೊಂದು ಮನೆಗೂ ಒಂದೊಂದು ಊರಿನ ಹೆಸರಿದೆ. ಇಂತಹ ಭಾಗಗಳಲ್ಲಿ ಅವರಿದ್ದಲ್ಲಿಗೇ ಎಲ್ಲಾ ಮೂಲ ಸೌಕರ್ಯಗಳನ್ನು ನೀಡಲು ಸರ್ಕಾರ ಮುಂದಾದರೆ, ಕಾಡಿಗೂ ನಾಡಿಗೂ ವ್ಯತ್ಯಾಸವೇ ಉಳಿಯದು. ಉದಾಹರಣೆಗೆ, ಶರಾವತಿ ಸಿಂಗಳೀಕ ಅಭಯಾರಣ್ಯದಲ್ಲಿ ಇರುವ ಸಿಂಗಳೀಕ ಸಂತತಿಗೆ ಬದುಕಲು ಸುಮಾರು 100-150 ಜಾತಿಯ ಮರಗಳ ಹಣ್ಣು, ಕಾಯಿ, ಸೊಪ್ಪು, ತೊಗಟೆಯಂತಹವು ಬೇಕು. ಅಭಯಾರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ರಸ್ತೆ, ಶಾಲೆ, ಆಸ್ಪತ್ರೆ, ಅಂಗನವಾಡಿ, ವಿದ್ಯುತ್ ಸಂಪರ್ಕದಂತಹ ಸೌಲಭ್ಯಗಳು ಬೇಕು. ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಂಡುಬರುವ ಸಿಂಗಳೀಕಗಳು ಇವುಗಳ ಜೊತೆ ಜೊತೆಯಲ್ಲಿ ಬದುಕುತ್ತಿರುವ ಇನ್ನಿತರ ಅಸಂಖ್ಯ ಜೀವಿವೈವಿಧ್ಯಗಳ ರಕ್ಷಣೆಗಾಗಿ ಈ ‘ಗೆಲ್ಲು-ಗೆಲ್ಲಿಸು’ ಸೂತ್ರ ಶಾಶ್ವತವಾದ ಪರಿಹಾರವಾಗಬಲ್ಲದು. ಈ ಕೆಲಸ ಸಮರೋಪಾದಿಯಲ್ಲಿ ನಡೆದರೆ, ಗಾಂಧಿಯವರ ಆಶಯದಂತೆ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ. ಇಲ್ಲದಿದ್ದಲ್ಲಿ, ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಲೇ ಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.