ಭಾರತದಲ್ಲಿ ಜನರು ಗುಂಪುಗೂಡಿ ವ್ಯಕ್ತಿಗಳನ್ನು ಸಾಯಹೊಡೆದ ಪ್ರಕರಣಗಳನ್ನು ನಮೂದಿಸಿ, ನ್ಯಾಯ ಒದಗಿಸಿಕೊಡಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹೊಣೆಗೇಡಿತನವನ್ನು ತರಾಟೆಗೆ ತೆಗೆದುಕೊಂಡಿದೆ. ‘ಈ ಬಗೆಯ ಹಿಂಸೆಯ ನಿಯಂತ್ರಣಕ್ಕೆ ವಿಶೇಷ ಕಾನೂನನ್ನು ತುರ್ತಾಗಿ ಜಾರಿ ಮಾಡಬೇಕು’ ಎಂದು ತೀರ್ಪು ನೀಡಿದೆ. ನ್ಯಾಯಾಲಯ ನೀಡಿರುವ ಗಡುವಿಗೆ ಸರ್ಕಾರಗಳು ಯಾವ ರೀತಿ ಸ್ಪಂದಿಸುತ್ತವೆ ಎಂಬ ಊಹೆಗಳನ್ನು ಬದಿಗಿಟ್ಟು, ಈ ಬಗೆಯ ಅರ್ಜಿ ಹಾಗೂ ತೀರ್ಪುಗಳ ಕಾರ್ಯಕಾರಣ ಸಂಬಂಧವನ್ನು ಗಮನಿಸಿದರೆ, ಭಾರತದ ರಾಜ್ಯಾಂಗ ಮತ್ತು ಕಾರ್ಯಾಂಗಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಮೀನಮೇಷ ಎಣಿಸುತ್ತಿವೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಇಂಥ 70 ಪ್ರಕರಣಗಳು ಹಾಡಹಗಲೇ ನಡೆದರೂ ಅದಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿ, ಶಂಖದಿಂದ ತೀರ್ಥ ಬರುವುದಕ್ಕೆ ಕಾಯಬೇಕಾದ ಸ್ಥಿತಿ ಹಾಗೂ ಈ ವಿದ್ಯಮಾನದ ಕುರಿತು ರಾಜ್ಯಾಂಗ- ಕಾರ್ಯಾಂಗಗಳು ಸಡಿಲ ಮನೋಭಾವ ಹೊಂದಿರುವುದು ಏನನ್ನು ಸೂಚಿಸುತ್ತದೆ? ಇದು, ದುರ್ಬಲರ ರಕ್ಷಣೆಯ ಏಕೈಕ ಆಧಾರವಾಗಿರುವ ಕಾನೂನು–ಸುವ್ಯವಸ್ಥೆ ಕುಸಿಯುತ್ತಿರುವುದರ ಆತಂಕಕಾರಿ ಸೂಚನೆ. ನಮ್ಮ ಮುಂದಿರುವುದು, ಈ ಬಗೆಯ ಕುಸಿತಕ್ಕೆ ಕಾರಣಗಳೇನು ಎಂಬ ಪ್ರಶ್ನೆ.

2018ರಲ್ಲಿ ‘ಗುಂಪು ಹಿಂಸೆ’ಯ ಹೊಸ ಅವತರಣಿಕೆಯನ್ನು ನೋಡುತ್ತಿದ್ದೇವೆ. ಕಳೆದ ಏಳು ತಿಂಗಳಲ್ಲಿ ತಿಂಗಳಿಗೊಂದರಂತೆ, ‘ಮಕ್ಕಳ ಕಳ್ಳರೆಂದು ಶಂಕಿಸಿ’ ಜನಜಂಗುಳಿಯು ನಿರಪರಾಧಿಗಳನ್ನು ಬಡಿದು ಕೊಂದ ಘಟನೆಗಳ ಬಗ್ಗೆ ಓದಿದ್ದೇವೆ. ದೇಶದ ಹಲವು ದಿಕ್ಕುಗಳಲ್ಲಿ ನಡೆದಿರುವ ಈ ‘ಗುಂಪು ಹಿಂಸೆಯ ಕೊಲೆ’ಗಳಲ್ಲಿ ಒಂದು ಸಿದ್ಧ ಸೂತ್ರದ ಕಥನವಿದೆ: ಒಂದು ಊರು ಅಥವಾ ಕೇರಿಯಲ್ಲಿ, ‘ಅಪರಿಚಿತರು’ ಕಾಣಿಸಿಕೊಳ್ಳುತ್ತಾರೆ; ಆ ಊರು ಅಥವಾ ಕೇರಿಯ ಗುಂಪು ಅವರನ್ನು ‘ಮಕ್ಕಳ ಕಳ್ಳರು’ ಎಂದು ‘ತೀರ್ಮಾನಿಸಿ’ ಹೊಡೆದು ಕೊಂದುಬಿಡುತ್ತದೆ! ಕೇರಿಯ ನಲ್ಲಿಯಲ್ಲಿ ನೀರು ಬರುತ್ತಿಲ್ಲ, ಸಾರ್ವಜನಿಕ ಪಡಿತರ ವಿತರಣೆ ಸರಿಯಾಗಿಲ್ಲ... ಇವೇ ಮುಂತಾದ ದೈನಂದಿನ ಬವಣೆಗಳನ್ನು ಅಧಿಕಾರಿಗಳ ಎದುರು ಹಿಡಿದು ನ್ಯಾಯ ಪಡೆಯಲು ನೊಂದ ಜನರನ್ನು ಒಗ್ಗೂಡಿಸುವುದು ಕಷ್ಟವಾಗಿರುವ ಸನ್ನಿವೇಶದಲ್ಲಿ ಬರೀ ಅನುಮಾನದ ಮೇಲೆ ಕ್ಷಣಾರ್ಧದಲ್ಲಿ ಜನ ಹೇಗೆ ಸೇರುತ್ತಾರೆ? ಹೇಗೆ ‘ಮರಣ ದಂಡನೆ’ ವಿಧಿಸುತ್ತಾರೆ ಎನ್ನುವುದು ನಮ್ಮನ್ನು ಯಾಕೆ ದಿಗ್ಭ್ರಾಂತಗೊಳಿಸುತ್ತಿಲ್ಲ!?

ಈ ವಿದ್ಯಮಾನಗಳನ್ನು ವರದಿ ಮಾಡುವವರು ಹಾಗೂ ವರದಿಗಳನ್ನು ಓದುವ ನಾಗರಿಕರಿಗೆ ಯಾಕೆ ಇದು ಒಂದು ಸಾಮಾನ್ಯ ಸುದ್ದಿಯ ಹಾಗೆ ಕಾಣುತ್ತದೆ? ದೇಶದಾದ್ಯಂತ ನಡೆಯುವ ಅಪರಾಧ ಪ್ರಕರಣಗಳನ್ನು ಕಲೆ ಹಾಕಿ, ವಿವಿಧ ಬಗೆಯ ಅಪರಾಧಗಳಾಗಿ ವಿಂಗಡಿಸಿ, ಮಾಹಿತಿ ನೀಡುವ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊ ವರದಿಗಳನ್ನು ವಿಶೇಷವಾಗಿ ಹುಡುಕಿ ಪಡೆಯಬೇಕು. ಅದು ಅಪರಾಧ ಮಾಹಿತಿಗಳನ್ನು ನಿತ್ಯ ಸಾರ್ವಜನಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದಿಲ್ಲ. ಇಂತಿರುವಾಗ, ‘ಮಕ್ಕಳ ಕಳ್ಳರ’ ಬಗ್ಗೆ ಜನರು ಒಮ್ಮೆಲೇ ಜಾಗೃತರಾಗುವುದು ಹೇಗೆ?! ತಾತ್ಪರ್ಯವಿಷ್ಟೇ: ರಕ್ಷಣೆ ಇಲ್ಲದ ನಿಸ್ಸಹಾಯಕರ ಮೇಲೆ ಯಾರೋ ‘ಉತ್ಪಾದಿಸಿದ ಸಮಜಾಯಿಷಿ’ಯ ನೆಪದಲ್ಲಿ ಗುಂಪಾಗಿ ಹಿಂಸೆ ನಡೆಸಿ, ವೈಯಕ್ತಿಕ ಅಪರಾಧದ ಗುರುತಿಲ್ಲದಂತೆ ಸಾಂವಿಧಾನಿಕ ಕಾನೂನಿನ ವಿಚಾರಣೆ, ಸಾಕ್ಷ್ಯ, ಶಿಕ್ಷೆಗಳಿಂದ ನುಣುಚಿಕೊಳ್ಳಬಹುದು ಎಂಬ ನಿರಾಳ ವಾತಾವರಣದಲ್ಲಿ ಮಾತ್ರವೇ ಈ ಬಗೆಯ ಗುಂಪು ಹಿಂಸೆ ನಡೆಯಲು ಸಾಧ್ಯವಿರುತ್ತದೆ.

ಕೆಲವು ಬಗೆಯ ‘ಉತ್ಪಾದಿತ ಸಮಜಾಯಿಷಿ’ಗಳ ನೆಪದಲ್ಲಿ ಗುಂಪು ಹಿಂಸೆ ನಡೆದಾಗ, ಪೊಲೀಸರು ‘ಗುರುತುಪತ್ತೆ ಇಲ್ಲದ ಗುಂಪಿನ ದಾಳಿ’ ಎಂದು ಪ್ರಕರಣ ದಾಖಲಿಸುತ್ತಾರೆ. ಹಿಂಸೆಯಲ್ಲಿ ತೊಡಗಿದವರು ಖುಲಾಸೆಯಾಗಲು ನೆರವಾಗುವ ರೀತಿಯಲ್ಲಿ ಅಪರಾಧ, ತನಿಖೆ-ವಿಚಾರಣೆ ಪ್ರಕ್ರಿಯೆ ನಡೆಯುತ್ತದೆ. ಇವೆಲ್ಲ ‘ಸಾಮಾನ್ಯ’ವಾಗದ ಹೊರತು ‘ಗುಂಪು ಹಿಂಸೆ’ಗಳು ನಿರಾಳವಾಗಿ ನಡೆಯುವುದಿಲ್ಲ. ಅಧಿಕಾರಸ್ಥ ಸಾಮಾಜಿಕ- ರಾಜಕೀಯ ಶಕ್ತಿಗಳ ಒತ್ತಾಸೆ ಇಲ್ಲದೆ, ಕಾನೂನು ಪಾಲಕರೂ ಇಷ್ಟು ಸಡಿಲವಾಗಿ ಇರುವುದಿಲ್ಲ! ಅಂದರೆ ಕಳೆದ ಮೂರೂವರೆ ದಶಕಗಳಿಂದ ದೇಶದಾದ್ಯಂತ ಗುಂಪು ಹಿಂಸೆಯನ್ನು ಪ್ರಚೋದಿಸುವ ಅಧಿಕಾರಸ್ಥ ಶಕ್ತಿಗಳ ಸಮಜಾಯಿಷಿಗಳ ಉತ್ಪಾದನೆ, ಆ ಪ್ರಚೋದನೆಯಲ್ಲಿ ನಡೆಯುವ ಗುಂಪು ಹಿಂಸೆ, ಅದನ್ನು ಸಹಜ ಸಾಮಾನ್ಯವೆಂದು ಪರಿಗಣಿಸುವ ಕಾನೂನು ಪಾಲಕರು, ತತ್ಫಲವಾಗಿ ಅಧಿಕಾರ ವೃದ್ಧಿಗೊಳಿಸಿಕೊಳ್ಳುವ ಅಧಿಕಾರ ಶಕ್ತಿಗಳ ಯೋಜನೆ- ಈ ಯಾಂತ್ರಿಕ ಸರಣಿಯು ಪಶ್ಚಾತ್ತಾಪಗಳಿಲ್ಲದ ಸಮೂಹ ಹಿಂಸಾ ಸಂಸ್ಕೃತಿಯನ್ನು ‘ಸಹಜ’ಗೊಳಿಸಿಬಿಟ್ಟಿದೆ. ದಶಕಗಳ ಕಾಲ ಈ ಬಗೆಯ ಹಿಂಸೆಯು ಸಾರ್ವಜನಿಕವಾಗಿ ಶಿಕ್ಷಾ ಭಯವಿಲ್ಲದೆ ನಡೆದಾಗ ಗುಂಪು ಹಿಂಸೆಗೆ ಹೊಸ ‘ಸಮಜಾಯಿಷಿ’ಗಳು ಉತ್ಪಾದಿತವಾಗುವುದು ಅಚ್ಚರಿ ಮೂಡಿಸುವುದಿಲ್ಲ.

ಗುಂಪು ಹಿಂಸೆಯನ್ನು ಪ್ರಚೋದಿಸುವ ಅಧಿಕಾರಸ್ಥ ಶಕ್ತಿಗಳ ‘ಸಮಜಾಯಿಷಿ ಉತ್ಪಾದನೆ’ ಎಂದರೆ ಏನು? ಮೊನ್ನೆ ಯಾವ 70 ಪ್ರಕರಣಗಳ ಸಾರ್ವಜನಿಕ ಅರ್ಜಿಯನ್ನು ಪರಿಗಣಿಸಿ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ‘ಸಂವಿಧಾನ ರಕ್ಷಣೆ’ಯ ಎಚ್ಚರಿಕೆ ನೀಡಿರುವುದೋ ಅವುಗಳನ್ನೇ ಗಮನಿಸೋಣ. ಗುಂಪಾಗಿ ನಡೆಸಿದ ಆ 70 ಕೊಲೆಗಳಿಗೆ ತುತ್ತಾದವರಲ್ಲಿ ಬಹುತೇಕರು ಅಲ್ಪಸಂಖ್ಯಾತರು ಹಾಗೂ ದಲಿತರು. ಆ ಪ್ರಕರಣಗಳು ಗೋಸಾಗಾಟ, ಗೋಮಾಂಸಗಳಿಗೆ ಸಂಬಂಧಿಸಿದವು. ಆ ಗುಂಪು ಹಿಂಸೆ ನಡೆಸಿದ ಹೆಚ್ಚಿನವರು ‘ಗೋರಕ್ಷಕ’ರೆಂದು ಗುರುತಿಸಿಕೊಂಡವರು. ದೇಶದ ಪ್ರಧಾನಮಂತ್ರಿ ತಮ್ಮ ದೀರ್ಘ ಮೌನ ಮುರಿದು ‘ನಕಲಿ ಗೋರಕ್ಷಕರ ಹಿಂಸೆ’ಯನ್ನು ಸಹಿಸಲಾಗದು ಎಂದರು. ಹಾಗಾದರೆ, ‘ಅಸಲಿ ಗೋರಕ್ಷಕ’ರ ಗುಂಪು ಇದೆಯೇ? ಇದ್ದರೆ ಅವರು ಯಾರು? ಅವರು ನಡೆಸುತ್ತಿರುವ ಕಾರ್ಯಾಚರಣೆಗಳು ಯಾವುವು? ಅವು ಹಿಂಸಾತ್ಮಕವಾಗಿರುವುದು ಸಮರ್ಥನೀಯವೇ?

ಈ ಪ್ರಶ್ನೆಗಳಿಗೆ ದೇಶದ ಶಾಸಕಾಂಗದ ಉನ್ನತ ನಾಯಕರು ಉತ್ತರಿಸುವ ಗೋಜಿಗೇ ಹೋಗುವುದಿಲ್ಲ ಎಂದಾದರೆ, ಗೋ ಸಂರಕ್ಷಣೆಯ ‘ಉತ್ಪಾದಿತ ಸಮಜಾಯಿಷಿ’ಯ ಅಧಿಕಾರ ಶಕ್ತಿ ಎಂತಹುದು ಎನ್ನುವುದು ಗೊತ್ತಾಗದೇ ಇರದು. ಜಾನುವಾರು ಸಾಕಣೆ, ಬಳಕೆ, ವಿಲೇವಾರಿ, ಮಾಂಸಾಹಾರ ವ್ಯವಹಾರಗಳ ಕುರಿತ ವಾದ-ವಿವಾದಗಳೂ, ಕಾನೂನುಗಳೂ ದೇಶಕ್ಕೆ ಹೊಸತೇನೂ ಅಲ್ಲ. ದೇಶದ ಅನೇಕ ಸಾರ್ವಜನಿಕ ವಿಷಯಗಳಲ್ಲಿ ಇದೂಒಂದು. ಆದರೆ, ಇದು ಗುಂಪು ಹಿಂಸೆಯ ಕೊಲೆಗಳ ಸಮಜಾ
ಯಿಷಿಯಾಗಿ ಬದಲಾಗಿದ್ದು ಕಳೆದ ಎರಡು ದಶಕಗಳಲ್ಲಿ. ಇದಕ್ಕೆ ಕಾರಣವಾದ ಸಾಮಾಜಿಕ– ರಾಜಕೀಯ ವಾತಾವರಣ, ಗುಂಪು ಹಿಂಸೆಯ ವಿದ್ಯಮಾನಗಳು, ಸಡಿಲ ಕಾನೂನು ಪಾಲನೆ ಹಾಗೂ ಇವುಗಳ ಬಗ್ಗೆ ರಾಜ್ಯಾಂಗ- ಕಾರ್ಯಾಂಗಗಳ ಮೌನಕ್ಕೂ ಸಂಬಂಧವಿದೆ. ಅದನ್ನು ಸುಪ್ರೀಂ ಕೋರ್ಟ್ ಅಧಿಕೃತವಾಗಿ ಗುರುತಿಸಿ, ಎಚ್ಚರಿಸಿದೆ.

ಗುಂಪು ನ್ಯಾಯ, ಗುಂಪು ಹಿಂಸೆ ಹಾಗೂ ಗುಂಪಾಗಿ ನಡೆಸುವ ಕೊಲೆಗಳಿಗೆ ತಾರ್ಕಿಕ ಸಂಬಂಧವಿದೆ. ಒಂದು ಮತ್ತೊಂದನ್ನು ಹುಟ್ಟಿಸುತ್ತದೆ. ಅಲ್ಪಸಂಖ್ಯಾತ ಮತದವರನ್ನು ‘ಅನ್ಯರು– ಹಾಗಾಗಿ ಬಹುಮತೀಯರ ಶತ್ರುಗಳು’ ಎಂಬ ಉತ್ಪಾದಿತ ಸಮಜಾಯಿಷಿಯನ್ನು, ಅನ್ಯ ಮತೀಯರು ಹಾಗೂ ಬಹುಮತೀಯರ ನಡುವಿನ ಸಂಬಂಧಗಳ ಕುರಿತು ಗುಂಪು ನ್ಯಾಯ ಮತ್ತು ಗುಂಪು ಹಿಂಸೆಗಳನ್ನು ಪ್ರಚೋದಕವಾಗಿ ಬಳಸುವ ಪ್ರಯೋಗವು 1990ರ ದಶಕದಿಂದಲೂ ದೇಶದಾದ್ಯಂತ ಜಾರಿಯಲ್ಲಿದೆ. ಪ್ರೇಮ- ಗೆಳೆತನಗಳಂತಹ ವೈಯಕ್ತಿಕ ಸಂಬಂಧಗಳನ್ನು ನ್ಯಾಯಯುತವೋ ಅಲ್ಲವೋ ಎಂದು ಗುಂಪು ನ್ಯಾಯದಲ್ಲಿ ಪರಿಗಣಿಸಿ, ಸ್ಥಳದಲ್ಲೇ ಗುಂಪು ಹಿಂಸೆಯ ಮೂಲಕ ಶಿಕ್ಷಿಸುವ ವಿದ್ಯಮಾನಗಳು ಕಾನೂನಿನ ಲಂಗುಲಗಾಮು ಇಲ್ಲದೆ ಹಾಡಹಗಲೇ ಸಾರ್ವಜನಿಕವಾಗಿ ನಡೆಯುವಾಗ, ಗುಂಪಾಗಿ ನಡೆಸುವ ಕೊಲೆಗಳಿಗೆ ಭದ್ರವಾದ ಬುನಾದಿ ಒದಗುವುದು ಸಹಜವಾಗಿದೆ. ‘ಅನೈತಿಕ ಪೊಲೀಸ್ಗಿರಿ’ ಎಂಬ ನಯವಾದ ಪರಿಭಾಷೆಯಲ್ಲಿ ಚಾಲ್ತಿಯಲ್ಲಿರುವ ಆಚರಣೆಯು ಗುಂಪಾಗಿ ನಡೆಸುವ ಕೊಲೆಗಳ ಪ್ರಚೋದಕ ಶಕ್ತಿಯೂ ಆಗಿದೆ.

ಭಾರತದಲ್ಲಿ ಗುಂಪು ಸೇರಿ ನಡೆಸುತ್ತಿರುವ ಕೊಲೆಗಳಿಗೆ ಒಂದು ಇತಿಹಾಸ ಕ್ರಮವಿದೆ. ಸ್ವಾತಂತ್ರ್ಯೋತ್ತರದ 70 ವರ್ಷಗಳಲ್ಲಿ ನಡೆದಿರುವ ಈ ಬಗೆಯ ಹಿಂಸೆಗೆ ಹೆಚ್ಚಿಗೆ ತುತ್ತಾದವರು ಅಲ್ಪಸಂಖ್ಯಾತರು ಹಾಗೂ ದಲಿತರು. ಇವುಗಳಲ್ಲಿ ಕೋಮು ಗಲಭೆ ಹಾಗೂ ದಲಿತ ಹತ್ಯಾಕಾಂಡಗಳಿಗೆ ಪ್ರಮುಖ ಸ್ಥಾನವಿದೆ. ಸರ್ಕಾರದ ಗೃಹ ಸಚಿವಾಲಯ ಒದಗಿಸುವ ಅಂಕಿ ಸಂಖ್ಯೆಗಳನ್ನೇ ಗಮನಿಸಿದರೂ, ಕೋಮು ಗಲಭೆಗಳು ಎಂದು ಸಮಾಜಶಾಸ್ತ್ರೀಯವಾಗಿ ಗುರುತಿಸುವ ಘಟನೆಗಳಲ್ಲಿ ಗುಂಪು ನಡೆಸುವ ಕೊಲೆಗಳಿಗೆ ತುತ್ತಾದವರಲ್ಲಿ ಶೇ 95ರಷ್ಟು ಮಂದಿ ಮುಸಲ್ಮಾನರು. ಕನಿಷ್ಠ ಐದು ದೊಡ್ಡ ಹತ್ಯಾಕಾಂಡಗಳ ತನಿಖೆ ನಡೆಸಿದ ಆಯೋಗಗಳು, ಗುಂಪು ಸೇರಿ ನಡೆಸಿದ ಈ ಕೊಲೆಗಳಿಗೆ ಕಾರಣಗಳು ಹಾಗೂ ಕೊಲೆಗಳ ಹಿಂದಿರುವ ಅಧಿಕಾರಸ್ಥ ಶಕ್ತಿಗಳು ಯಾವುವು ಎಂದು ಸ್ಪಷ್ಟವಾಗಿ ಗುರುತಿಸಿವೆ. ಆದಾಗ್ಯೂ, ಗುಂಪು ಹಿಂಸೆಯಲ್ಲಿ ತೊಡಗಿದವರಲ್ಲಿ ಶಿಕ್ಷೆಯಾಗಿರುವುದು ಶೇ 5ಕ್ಕಿಂತ ಕಡಿಮೆ ಜನರಿಗೆ ಮಾತ್ರ! ಆದರೆ ಕೋಮು ಹಿಂಸೆಯ ಸಂಬಂಧ ಪ್ರತ್ಯೇಕವಾದ ಬಿಗಿಯಾದ ಕಾನೂನು ಸಂಹಿತೆಯನ್ನು ರೂಪಿಸುವ ಮಸೂದೆಯ ಬಗ್ಗೆ ದೇಶದ ರಾಜ್ಯಾಂಗ- ಕಾರ್ಯಾಂಗಗಳು ಯಾವ ಉತ್ಸಾಹವನ್ನೂ ತೋರುತ್ತಿಲ್ಲ. ಮಾತ್ರವಲ್ಲ, ಈಗ ಲಭ್ಯವಿರುವ ಕಾನೂನು- ಮಿತಿಯಲ್ಲಿಯೇ, ಕೋಮು ಹಿಂಸೆಗೆ ಬಲಿಯಾದವರಿಗೆ ನ್ಯಾಯ ದೊರಕಿಸಲು ಸೆಣಸುತ್ತಿರುವವರ ವಿರುದ್ಧವೇ ‘ವಿದೇಶಿ ಏಜೆಂಟರು’, ‘ದೇಶದ್ರೋಹಿ’ಗಳು ಎಂಬ ‘ಸಮಜಾಯಿಷಿ’ ಉತ್ಪಾದಿಸಲಾಗುತ್ತಿದೆ. ರಾಜ್ಯಾಂಗ-ಕಾರ್ಯಾಂಗ ಅಂತಹವರನ್ನು ದಂಡಿಸಲು ದಾರಿಗಳನ್ನು ಹೆಣೆಯುತ್ತಿವೆ.

ದಲಿತರ ಹತ್ಯಾಕಾಂಡಗಳು ಮೇಲಿನ ತರ್ಕವನ್ನೇ ಸಮರ್ಥಿಸುತ್ತವೆ. 1968ರಲ್ಲಿ ತಮಿಳುನಾಡಿನ ಕಿಲ್ವಾನ್ಮನಿಯಿಂದ ಹಿಡಿದು 2006ರಲ್ಲಿ ಮಹಾರಾಷ್ಟ್ರದ ಖೈರ್ಲಾಂಜಿ ಹತ್ಯಾಕಾಂಡದವರೆಗಿನ ಘಟನೆಗಳು, ಗುಂಪು
ಹಿಂಸೆಯ ಸಾಮಾಜಿಕ ಸ್ವರೂಪದ ಅಧ್ಯಯನಕ್ಕೆ ಪಠ್ಯಗಳಾಗಿವೆ. ದಲಿತರು ಸಂಘಟಿತವಾಗಿ ಹಕ್ಕಿನ ಪಾಲನ್ನು ಬೇಡಿದಾಗಲೆಲ್ಲಾ, ಅವರ ಮೇಲೆ ಗುಂಪು ಹಿಂಸೆ ನಡೆಸಿ ಸಾಮೂಹಿಕ ಕಗ್ಗೊಲೆಗಳನ್ನು ಮಾಡಲಾಗಿದೆ. ಇಂತಹ ಪ್ರಕರಣಗಳ
ಆರೋಪಿಗಳಲ್ಲಿ ಶೇ 98ರಷ್ಟು ಮಂದಿಯನ್ನು ಕಾನೂನು ವ್ಯವಸ್ಥೆ ಬೇಷರತ್ ಖುಲಾಸೆಗೊಳಿಸಿದೆ. ಹಾಗೆ ಖುಲಾಸೆಗೊಂಡವರು ಸಾಮೂಹಿಕ ಹಿಂಸೆಯನ್ನು ದಲಿತ ದಮನದ ವಿಜಯಾಸ್ತ್ರವಾಗಿ ಪ್ರಯೋಗಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಕಿಲ್ವಾನ್ಮನಿ ಹತ್ಯಾಕಾಂಡದ ಪ್ರಮುಖ ಆರೋಪಿಗಳಾಗಿದ್ದ ಜಮೀನುದಾರರನ್ನು ನ್ಯಾಯಾಲಯವು ‘ಇವರೆಲ್ಲಾ ಸಮಾಜದಲ್ಲಿ ಅತಿಗಣ್ಯರಾಗಿರುವುದರಿಂದ ಈ ಬಗೆಯ ಕ್ರೌರ್ಯ ನಡೆಸಿರಲಾರರು’ ಎಂದು ಖುಲಾಸೆಗೊಳಿಸಿದ ಕ್ರೂರ ವ್ಯಂಗ್ಯಕ್ಕೆ ಇದೇ ಡಿಸೆಂಬರ್ 25ಕ್ಕೆ ಅರ್ಧ ಶತಮಾನವಾಗುತ್ತದೆ. ಮೊನ್ನೆ ಸುಪ್ರೀಂ ಕೋರ್ಟ್ ನೀಡಿರುವ ಎಚ್ಚರಿಕೆಯು ಈ ಅರ್ಧ ಶತಮಾನದಲ್ಲಿ ಗುಂಪುಗೂಡಿ ನಡೆಸಿದ ಕೊಲೆಗಳಿಗೆ ಹಾಡಿದ ಜೋಗುಳದಲ್ಲಿ ಒಂದು ಅಪಸ್ವರದಂತೆ ಕಂಡರೆ, ಕ್ಷಮೆ ಇರಲಿ. ಗುಂಪುಗೂಡಿ ನಡೆಸುವ ಕೊಲೆಗಳಿಗೆ ಇತಿಹಾಸ ಕ್ರಮವಿದೆ.

ಬೀದರ್ನ ಮುರ್ಕಿಯಲ್ಲಿ ಮಕ್ಕಳ ಕಳ್ಳನೆಂದು ‘ಭಾವಿಸಿ’ ಗುಂಪು ಹಿಂಸೆಯಲ್ಲಿ ಕೊಲೆಯಾದ ಹೈದರಾಬಾದಿನ ಮುಸಲ್ಮಾನ ಯುವಕ, ಕೊಂದ ಜಂಗುಳಿಗೆ ‘ಅನಾಮಿಕ’ನಾಗಿದ್ದ ಎಂಬ ‘ಸಮಜಾಯಿಷಿ’ ಕೊಡಬಹುದು. ಆದರೆ,‘ವಿದೇಶಿ ಏಜೆಂಟ್’ ಎಂಬ ಆರೋಪದ ಮೇಲೆ ಗುಂಪು ಹಿಂಸೆಗೆ ಈಡಾದ ಆರ್ಯ ಸಮಾಜದ ಸ್ವಾಮಿ ಅಗ್ನಿವೇಶ್, ಯಾವ ಬಗೆಯಲ್ಲೂ ಹಿಂಸಾನಿರತರಿಗೆ ಅಪರಿಚಿತರಾಗಿರಲಿಲ್ಲ. ಇವೆರಡು ವಿದ್ಯಮಾನಗಳ ನಡುವೆ ಇರುವ ಸಾಮಾಜಿಕ- ರಾಜಕೀಯ ಗುಂಪು ಹಿಂಸೆಯ ನಂಟನ್ನು ಗ್ರಹಿಸಲಾರೆವಾದರೆ, ‘ಅಂಗೈ ಹುಣ್ಣಿಗೆ ಕನ್ನಡಿ’ ಹುಡುಕಬೇಕು.

ಲೇಖಕ: ಎಂಜಿನಿಯರಿಂಗ್ ಪ್ರಾಧ್ಯಾಪಕ,
ಮಾನವ ಹಕ್ಕು ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.