ಬೆಲ್ಜಿಯಂ ದೇಶದ ಗೃಹಸ್ಥನೊಬ್ಬ ಎರಡು ವಾರಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ. ಮೊಬೈಲ್ ಪರದೆಯ ಮೇಲೆ ಬೇಕೆಂದಾಗ ಮೂಡಿಬರುವ ‘ಎಲಿಝಾ’ ಹೆಸರಿನ ಬೊಂಬೆಯ ಜೊತೆ ಬಿಸಿಪ್ರಳಯದ ಕುರಿತು ಆತ ಆಗಾಗ ಚರ್ಚೆಯಲ್ಲಿ ತೊಡಗಿರುತ್ತಿದ್ದ. ಸ್ವಸ್ಥಚಿತ್ತದ, ಇಬ್ಬರು ಮಕ್ಕಳ ಈ ತಂದೆ ಕ್ರಮೇಣ ಮಂಕಾಗುತ್ತ ಹೋದ. ಚಾಟ್ಬಾಟ್ (ಅಂದರೆ ಮಾತಾಡುವ ರೋಬಾಟ್) ಜೊತೆ ಚರ್ಚಿಸುತ್ತ ಹೋದಂತೆ ಮನುಕುಲಕ್ಕೆ ಭವಿಷ್ಯವೇ ಇಲ್ಲವೇನೊ ಎಂಬ ಭ್ರಾಂತಿ ಆವರಿಸಿ ಸಾವಿಗೆ ಶರಣಾದ.

ನಮ್ಮಲ್ಲಿ ಸ್ಮಾರ್ಟ್ಫೋನ್ ಬಳಕೆದಾರರಿಗೆ ಅಲೆಕ್ಸಾ, ಸಿರಿ, ಎಲಿಝಾ, ರೆಪ್ಲಿಕಾ ಮುಂತಾದ ನಾನಾ ಹೆಸರುಗಳ ಚಾಟ್ಬಾಟ್ಗಳು ಗೊತ್ತು. ಚಿಕ್ಕಮಕ್ಕಳೂ ಅಲೆಕ್ಸಾ ಅಥವಾ ಸಿರಿಯ ಜೊತೆ ಸಂಭಾಷಣೆ ನಡೆಸುತ್ತವೆ. ಅಂತರ್ಜಾಲವನ್ನು ಮಿಂಚಿನಂತೆ ಅವು ಜಾಲಾಡಿ ನಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತವೆ. ನಮ್ಮ ಪರಿಣತಿಯ ಕ್ಷೇತ್ರದಲ್ಲಿ (ಉದಾ: ಷೇರು ಮಾರುಕಟ್ಟೆಯ ವಿಶ್ಲೇಷಣೆಯಲ್ಲಿ) ಪಳಗಿದ ಚಾಟ್ಬಾಟ್ಗಳ ಉದ್ದ ಪಟ್ಟಿಯೇ ಇದೆ. ಈಗಂತೂ ನಮಗೆ ಬೇಕಾದ ರೂಪ, ಲಕ್ಷಣಗಳಿರುವ ಚಾಟ್ಬಾಟ್ ಬೊಂಬೆಗಳನ್ನು ನಾವೇ ಸೃಷ್ಟಿಸಬಹುದು. ನಮ್ಮ ಅಗತ್ಯಕ್ಕೆ ತಕ್ಕಂತೆ (ಉದಾ: ಪಶುವೈದ್ಯಕೀಯದಲ್ಲಿ) ಅದನ್ನು ವಿಶ್ವಕೋಶವನ್ನಾಗಿಸಿ, ನಮ್ಮಿಷ್ಟದ ಭಾಷೆಯಲ್ಲಿ ಅದರೊಂದಿಗೆ ಸಂಭಾಷಿಸಬಹುದು.

ಬೊಂಬೆಯಂತೆಯೇ ಇರಬೇಕೆಂದಿಲ್ಲ. ನಿಮ್ಮೆದುರಿನ ಕಿರುಪರದೆಯೇ ಕಣ್ಣು ಕಿವಿಗಳಾಗಿ ನೀವು ಕೇಳಿದ್ದಕ್ಕೆಲ್ಲ ಉತ್ತರಿಸಬಹುದು. ‘ಡಾಲ್-ಇ’ ಹೆಸರಿನ ಜಾಲತಾಣಕ್ಕೆ ಹೋಗಿ ನೀವು ‘ಕತ್ತೆಯ ಮೇಲೆ ಕೂತ ಬೆರ್ಚಪ್ಪನ ಚಿತ್ರ ಬೇಕು’ ಎಂದು ಆದೇಶ ಕೊಡಿ. ಕೆಲವೇ ಕ್ಷಣಗಳಲ್ಲಿ ಆ ಚಿತ್ರ ಮೂಡುತ್ತದೆ. ಕತ್ತೆ- ಬೆರ್ಚಪ್ಪ ಎರಡನ್ನೂ ಬದಲಿಸಿ ನಿಮ್ಮಿಷ್ಟದ ಪಾತ್ರಗಳನ್ನು ಹೆಸರಿಸಿ. ಅವುಗಳ ಚಿತ್ರವೂ ಮೂಡುತ್ತದೆ. ಕಾರ್ಟೂನ್ ಬೇಕೆ, ಫೋಟೊ ಬೇಕೆ? ಇದೋ ರೆಡಿ! ಮಕ್ಕಳಿಗೆ ಇಂಥ ವೆಬ್ಸೈಟ್ಗಳ ಉದಾಹರಣೆಯನ್ನು ಕೊಡಲು ಹೋಗಬೇಡಿ. ‘ಇವೆಲ್ಲ ಹಳತಾದವು ಅಂಕಲ್, ಯಾವ ಲೋಕದಲ್ಲಿದೀರಿ?’ ಎನ್ನುತ್ತ ಇನ್ನಷ್ಟು ಅಂಥ ವೆಬ್ಸೈಟ್ಗಳ ಉದಾಹರಣೆ
ಗಳನ್ನು ನಿಮ್ಮ ಮುಂದಿಡುತ್ತವೆ. ನೀವು ಕೊಟ್ಟ ವಿಡಿಯೊದಲ್ಲಿನ ಯಾರ ಮುಖವನ್ನಾದರೂ ಬದಲಿಸಿ ಇನ್ಯಾರದ್ದನ್ನಾದರೂ ಜೋಡಿಸಬಹುದು. ಯಾರದೋ ಆರಾಧ್ಯದೈವವನ್ನು ಮೋಟರ್ಸೈಕಲ್ ಮೇಲೆ ಕೂರಿಸಿ ಓಡಿಸಬಹುದು- ಲಂಗು-ಲಗಾಮಿಲ್ಲದೆ! ಡಿಜಿಟಲ್ ಲೋಕದ ಈ ಯಾಂತ್ರಿಕ ಬುದ್ಧಿಮತ್ತೆ (ಯಾಂಬು=A.I. ಅಂದರೆ Artificial Intelligence) ನಮ್ಮ ಕಲ್ಪನೆಯನ್ನೂ ಮೀರಿದ ಅವತಾರಗಳಲ್ಲಿ ಗೋಚರಿಸತೊಡಗಿದೆ. ಅನೂಹ್ಯ ವೇಗದಲ್ಲಿ ಜಗತ್ತನ್ನು ಯಾಂಬು ಆವರಿಸತೊಡಗಿದೆ.

ಈ ಬೆಳವಣಿಗೆ ಒಳ್ಳೆಯದಕ್ಕೊ ಅಥವಾ ನಮ್ಮೆಲ್ಲರ ಭವಿಷ್ಯವನ್ನು ಹಳ್ಳ ಹಿಡಿಸಲಿಕ್ಕೊ? ತೀವ್ರ ಚರ್ಚೆ ಇದೀಗ ಆರಂಭವಾಗಿದೆ. ‘ಪರಮಾಣು ಬಾಂಬ್ಗಿಂತ ಯಾಂಬು ಜಾಸ್ತಿ ಅಪಾಯಕಾರಿ’ ಎಂದು ಸ್ವತಃ ಇಲಾನ್ ಮಸ್ಕ್ ಕಳೆದ ವಾರ ಹೇಳಿದ್ದು ವೈರಲ್ ಆಗಿದೆ. ಮಸ್ಕ್ ಗೊತ್ತಲ್ಲ? ಸ್ವತಃ ನಾನಾ ಬಗೆಯ ಯಾಂಬು ಯೋಜನೆಗಳಲ್ಲಿ ಹಣ ಹೂಡಿ, ಚಾಲಕರಿಲ್ಲದೆ ಓಡುವ ಯಾಂಬು ಕಾರುಗಳನ್ನು ಸೃಷ್ಟಿಸಿ ‘ತಾಂತ್ರಿಕ ಮಾಂತ್ರಿಕ’ ಎಂದೇ ಖ್ಯಾತಿ ಪಡೆದ ಈತ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ. ಅಷ್ಟೇಕೆ, ಯಾಂಬು ಭೂತವನ್ನು ಹೊರಕ್ಕೆ ಬಿಟ್ಟ ‘ಓಪನ್ ಎಐ’ ಎಂಬ ಕಂಪನಿಯ ಪ್ರವರ್ತಕರಲ್ಲಿ ಆತನೂ ಒಬ್ಬ.

ತುಸು ಹಿಂದಕ್ಕೆ ಹೋಗೋಣ. ನಮಗೆ ಬೇಕಿದ್ದ ಮಾಹಿತಿಯನ್ನು ಅಂತರ್ಜಾಲದಿಂದ ಕ್ಷಣಾರ್ಧದಲ್ಲಿ ಹೆಕ್ಕಿ, ನಮಗೆ ಬೇಕಿದ್ದ ರೂಪದಲ್ಲಿ ನಮ್ಮ ಭಾಷೆಯಲ್ಲೇ ಮಾತಿನ ಮೂಲಕವೂ ನೀಡುವ ಚಾಟ್ಬಾಟ್ ವ್ಯವಸ್ಥೆಯನ್ನು ‘ಓಪನ್ ಎಐ’ ಹೆಸರಿನ ಕಂಪನಿಯೊಂದು ಮೂರು ವರ್ಷಗಳಿಂದ ರೂಪಿಸುತ್ತಿತ್ತು. ಅದಕ್ಕೆ ‘ಚಾಟ್ಜಿಪಿಟಿ’ (ChatGPT) ಎಂದು ಹೆಸರಿಟ್ಟು ಹಂತಹಂತವಾಗಿ ಜನಬಳಕೆಗೆ ರಿಲೀಸ್ ಮಾಡಿತ್ತು. ವಿಶೇಷ ಏನೆಂದರೆ, ಜನರು ಜಾಸ್ತಿ ಬಳಸಿದಷ್ಟೂ ಈ ಚಾಟ್ಜಿಪಿಟಿ ಹೆಚ್ಚು ಹೆಚ್ಚು ಚುರುಕಾಗತೊಡಗಿತ್ತು. ಆ ಕಂಪನಿಯನ್ನು ಮೈಕ್ರೊಸಾಫ್ಟ್ ತನ್ನದಾಗಿಸಿಕೊಂಡು ಜಾಸ್ತಿ ಬಂಡವಾಳ ಹೂಡಿ ಇನ್ನಷ್ಟು ಚುರುಕುಗೊಳಿಸಿ ಹಿಂದಿನ ನವೆಂಬರ್ 30ರಂದು ಬಿಡುಗಡೆ ಮಾಡಿತು.

ಬ್ರಹ್ಮಾಂಡದ ಯಾವ ವಿಷಯವಾದರೂ ಸೈ, ಅಥವಾ ‘ನನ್ನ ಮಗಳ ಮದುವೆಗೆ ಏನೇನು ಸಿದ್ಧತೆ ಬೇಕು’ ಎಂಬಂಥ ತೀರ ಖಾಸಾ ವಿಷಯವಾದರೂ ಸೈ, ಅದು ನಿಮ್ಮೊಂದಿಗೆ ಚರ್ಚಿಸುತ್ತ, ನಿಮಗೆ ಹೆಚ್ಚಿನ ಪ್ರಶ್ನೆ ಕೇಳುತ್ತ, ನಿಮ್ಮ ಬಜೆಟ್ ಪ್ರಕಾರ, ನಿಮ್ಮೂರಿನ ಯಾವ ಅಂಗಡಿಯ ರೇಷ್ಮೆ ಸೀರೆಯ ಬೆಲೆ ಎಷ್ಟು, ಯಾವ ಕಲ್ಯಾಣ ಮಂಟಪದಲ್ಲಿ ಯಾವ ಮುಹೂರ್ತಕ್ಕೆ ಬುಕಿಂಗ್ ಸೂಕ್ತ ಎಂದೆಲ್ಲವನ್ನೂ ತಾನೇ ಪತ್ತೆ ಮಾಡಿ ಸೂಚಿಸುತ್ತ ಹೋಗುತ್ತದೆ. ಪುರೋಹಿತರ ರೇಟು, ಲಭ್ಯತೆಯನ್ನೂ ಹೇಳೀತು. ‘ಚಾಟ್ಜಿಪಿಟಿ’ ಬಿಡುಗಡೆಯಾದ ಐದೇ ದಿನಗಳಲ್ಲಿ ದಾಖಲೆಯ ಹತ್ತು ಲಕ್ಷ ಜನರನ್ನು ತನ್ನತ್ತ ಸೆಳೆಯಿತು (ಇಷ್ಟು ಜನರನ್ನು ಆಕರ್ಷಿಸಲು
ಇನ್ಸ್ಟಾಗ್ರಾಮ್ಗೆ 75 ದಿನ ಬೇಕಾದವು).

ಮೈಕ್ರೊಸಾಫ್ಟ್ನ ‘ಚಾಟ್ಜಿಪಿಟಿ’ಯ ಪ್ರಚಂಡ ಯಶಸ್ಸನ್ನು ನೋಡಿ, ಗೂಗಲ್ ಕೂಡ ಅವಸರದಲ್ಲಿ ಜಿಗಿದೆದ್ದು, ತಾನೂ ಅಂಥದೇ ‘ಬಾರ್ಡ್’ ಹೆಸರಿನ ವಾಚಸ್ಪತಿಯನ್ನು ಸೃಷ್ಟಿಸಿತು. ಅದನ್ನು ನೋಡಿ ಮೈಕ್ರೊಸಾಫ್ಟ್ನ ಸತ್ಯ ನಾದೆಲ್ಲ ‘ಓಹ್, ಪೈಪೋಟಿಗೆ ಬರುತ್ತಿದ್ದೀರಾ, ಬನ್ನಿ! ಜಿದ್ದಾಜಿದ್ದಿ ಇಂದೇ ಆರಂಭ!’ ಎಂದು ಫೆಬ್ರುವರಿ 7ರಂದು ಘೋಷಿಸಿದರು. ಮಾರ್ಚ್ 14ರಂದು ಚಾಟ್ಜಿಪಿಟಿಯ 4ನೇ ಅವತಾರವನ್ನು ಬಿಡುಗಡೆ ಮಾಡಿದರು. 1960ರ ದಶಕದ ಅಣ್ವಸ್ತ್ರ ಪೈಪೋಟಿಗಿಂತ, ಚಂದ್ರನತ್ತ ರೇಸ್ ಮಾಡಿದ್ದಕ್ಕಿಂತ ಈ ಸಮರ ತೀವ್ರವಾಗಿದೆ ಎಂಬ ಮಾತು ಕೇಳಬಂತು. ಮೈಕ್ರೊಸಾಫ್ಟ್ ತನ್ನ 10 ಸಾವಿರ ಮತ್ತು ಗೂಗಲ್ 12 ಸಾವಿರ ನೌಕರರನ್ನು ಕಿತ್ತುಹಾಕಿ, ಯಾಂಬುಸೇನೆಯ ಬಲವರ್ಧನೆಗೆ ಹಣ ಹೂಡಿದವು. ತುರುಸಿನ ತೀವ್ರತೆ ಎಷ್ಟಿತ್ತೆಂದರೆ, ಮಸ್ಕ್ ಸೇರಿದಂತೆ ನೂರಾರು ಯಾಂಬು ದಿಗ್ಗಜರು ‘ಈ ಪೈಪೋಟಿಯನ್ನು ನಿಲ್ಲಿಸಿ, ಇನ್ನಾರು ತಿಂಗಳು ನಿಲ್ಲಿಸಿ!’ ಎಂದು ಉದ್ಘೋಷಿಸುವಂತಾಯಿತು.
ನೆನಪಿಡಿ: ಜಾಗತಿಕ ಸಮರೋತ್ಸಾಹದ ಈ ಎರಡು ಬಣಗಳಲ್ಲಿ ಒಂದೆಡೆ ಸತ್ಯ ನಾದೆಲ್ಲ, ಇನ್ನೊಂದೆಡೆ ಆಲ್ಫಾಬೆಟ್ (ಗೂಗಲ್) ಮುಖ್ಯಸ್ಥ ಸುಂದರ ಪಿಚ್ಚೈ!

ಯಾಂಬು ಏನೆಲ್ಲ ವಿಪ್ಲವಗಳನ್ನು ಸೃಷ್ಟಿಸಬಹುದು? ಕಲಾವಿದರು, ಲೇಖಕರು, ಕತೆಗಾರರು, ಸಂಗೀತಕಾರರು, ಫ್ಯಾಶನ್ ಡಿಸೈನರ್ಗಳು ಬೇಕಾಗಿಲ್ಲ. ವೈದ್ಯರಂಗದಲ್ಲಿ ರೇಡಿಯಾಲಜಿಸ್ಟ್ಗಳು ಬೇಕಾಗಿಲ್ಲ. ಮಾರುಕಟ್ಟೆ ತಜ್ಞರು, ವಕೀಲರು, ಎಂಜಿನಿಯರ್ಗಳು, ವಾಸ್ತುತಜ್ಞರು, ಔಷಧ ತಯಾರಕರು ಬೇಕಾಗಿಲ್ಲ (ನಮ್ಮ ಶರೀರದಲ್ಲಿ 20 ಸಾವಿರ ಪ್ರೋಟೀನುಗಳಿವೆ; ವಿಜ್ಞಾನಿಗಳು ಕಷ್ಟಪಟ್ಟು ಶೇ 10ರಷ್ಟನ್ನು ಮಾತ್ರ ಗುರುತಿಸಿದ್ದಾರೆ. ಯಾಂಬು ಇನ್ನುಳಿದ ವನ್ನು ಫಟಾಫಟ್ ಗುರುತಿಸಿ ಯಾವ ಕಾಯಿಲೆಗಾದರೂ ಔಷಧವನ್ನು ರೂಪಿಸಬಹುದು. ಅಮೆರಿಕದ ಮೆಡಿಕಲ್ ಲೈಸೆನ್ಸ್ ಪರೀಕ್ಷೆಯನ್ನು ಚಾಟ್ಜಿಪಿಟಿ ಈಚೆಗೆ ಪಾಸ್ ಮಾಡಿದೆ). ಕಂಪ್ಯೂಟರ್ ತಜ್ಞರೂ ಬೇಕಾಗಲಿಕ್ಕಿಲ್ಲ! (ಯಾಂಬು ಕೋಡಿಂಗ್ ಕೂಡ ಮಾಡುತ್ತದೆ). ಶಿಕ್ಷಕರ ಅಗತ್ಯವೂ ಇರುವುದಿಲ್ಲ. ಪಾಠಕ್ರಮಕ್ಕೆ ತಕ್ಕಂತೆ ವಿದ್ಯಾರ್ಥಿ ತನ್ನಿಷ್ಟದ ಶಿಕ್ಷಕಿಯನ್ನು ಪರದೆಯ ಮೇಲೆ ಆವಾಹಿಸಿ
ಕೊಳ್ಳಬಹುದು. ಇವೆಲ್ಲ ಈ ವರ್ಷವೇ ಆಗಬೇಕಿಲ್ಲ. ಯಾಂಬು ದೈತ್ಯನತ್ತ ಹೆಚ್ಚು ಹೆಚ್ಚು ಜನ ಆಕರ್ಷಿತರಾದಷ್ಟೂ
ದೈತ್ಯನ ಕ್ಷಮತೆ ಹೆಚ್ಚುತ್ತ ಹೋಗುತ್ತದೆ. ಬೆಲ್ಜಿಯಂ ಪ್ರಜೆಯ ಆತ್ಮಾಹುತಿ ಒಂದು ಅಪವಾದ ಇದ್ದೀತು. ಬಿಸಿಪ್ರಳಯದಿಂದ ಬಚಾವಾಗುವ ಸೂಕ್ತ ಸಮರತಂತ್ರವನ್ನು ಯಾಂಬು ರೂಪಿಸಲೂಬಹುದು.

‘ಬೆಂಕಿಯನ್ನು ಪಳಗಿಸಿದ್ದಕ್ಕಿಂತ, ವಿದ್ಯುತ್ ಶಕ್ತಿಯನ್ನು ಹೊಮ್ಮಿಸಿದ್ದಕ್ಕಿಂತ ದೊಡ್ಡ ಕ್ರಾಂತಿಯತ್ತ ಹೆಜ್ಜೆ ಇಡುತ್ತಿದ್ದೇವೆ’ ಎಂದು ಕಳೆದ ವರ್ಷವೇ ದಾವೋಸ್ ಸಭೆಯಲ್ಲಿ ಪಿಚ್ಚೈ ಹೇಳಿದ್ದರು. ಹೆಜ್ಜೆಯನ್ನಂತೂ ಇಟ್ಟಾಗಿದೆ. ಆ ಹೆಜ್ಜೆಗುರುತು ಅದಿನ್ನೆಷ್ಟು ದೊಡ್ಡದಾಗಿ ಬೆಳೆಯುತ್ತದೊ? ಎಂಥೆಂಥ ಸಾಮಾಜಿಕ ತುಮುಲಗಳನ್ನು ಸೃಷ್ಟಿಸುತ್ತದೊ? ‘ಯಾಂಬು ಪೂರ್ತಿ ವಿಕಾಸಗೊಂಡರೆ ಅಲ್ಲಿಗೆ ಮನುಷ್ಯನ ಕತೆ ಮುಗಿಯಿತು’ ಎಂಬರ್ಥದಲ್ಲಿ ಸ್ಟೀಫನ್ ಹಾಕಿಂಗ್ ಹೇಳಿದ್ದು ನಿಜವಾಗಲು ಇನ್ನೆಷ್ಟು ವರ್ಷ ಬಾಕಿ ಇದೆಯೊ?

(ಇಂದಿನ ಈ ಅಂಕಣವನ್ನು ನಾನೇ ಬರೆದಿದ್ದೆಂದೂ ಇದು ಚಾಟ್ಜಿಪಿಟಿ ಸೃಷ್ಟಿಸಿದ ಬರಹ ಅಲ್ಲವೆಂದೂ ಈ ಮೂಲಕ ಘೋಷಿಸುತ್ತಿದ್ದೇನೆ. ನಾ.ಹೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.