1975-77ರ ತುರ್ತುಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳು ಒಟ್ಟಾಗಿದ್ದರ ಹಿನ್ನೆಲೆಯ ಬಗ್ಗೆ ಚಾಲ್ತಿಯಲ್ಲಿದ್ದ ಒಂದು ಜೋಕ್: ‘ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ವಿರೋಧ ಪಕ್ಷದವರನ್ನು ಒಟ್ಟಾಗಿ ಜೈಲಿಗೆ ಹಾಕಿದ್ದರಿಂದ ಅಲ್ಲೇ ಅವರೆಲ್ಲ ಮಾತಾಡಿಕೊಂಡು ಒಂದಾದರು; ತುರ್ತು ಪರಿಸ್ಥಿತಿ ರದ್ದಾಗಿ ಚುನಾವಣೆ ಘೋಷಣೆಯಾದ ಮೇಲೆ ಹೊರಬಂದು ಒಟ್ಟಾಗಿ ಜನತಾ ಪಾರ್ಟಿ ಮಾಡಿಕೊಂಡು ಚುನಾವಣೆ ಎದುರಿಸಿ ಗೆದ್ದರು. ಇದಕ್ಕೆ ಅವರು ಇಂದಿರಾ ಗಾಂಧಿಯವರಿಗೆ ಕೃತಜ್ಞರಾಗಿರಬೇಕು!’

ಆದರೆ ಆ ಅಪೂರ್ವ ಗೆಲುವು ಸಾಧ್ಯವಾದದ್ದು ಜಯಪ್ರಕಾಶ ನಾರಾಯಣರಂಥ ನಿಸ್ವಾರ್ಥಿ ನಾಯಕರು ಈ ಪಕ್ಷಗಳ ನೈತಿಕ ಅಂಕುಶವಾಗಿ ಕೆಲಸ ಮಾಡಿದ್ದರಿಂದ ಎಂಬುದನ್ನು ಮರೆಯಬಾರದು. ವಿಭಿನ್ನ ಧಾರೆಯ ಪಕ್ಷಗಳ ಏಕದನಿಯ ಹೋರಾಟದ ಇಚ್ಛಾಶಕ್ತಿ ಹಾಗೂ ಸ್ವಾತಂತ್ರ್ಯಪ್ರಿಯರಾದ ಜನರ ಇಚ್ಛಾಶಕ್ತಿಯ ಜೊತೆಗೆ ದಿಟ್ಟ, ಪ್ರಾಮಾಣಿಕ ಪತ್ರಿಕೋದ್ಯಮದ ಹೋರಾಟವೂ ಸೇರಿದ್ದರಿಂದ ಕೂಡ ಸರ್ಕಾರ ಬದಲಾಯಿತು.

ಈಗಲೂ ವಿರೋಧ ಪಕ್ಷದ ಹಲವರನ್ನು ಜೈಲಿಗೆ ಕಳಿಸಲಾಗುತ್ತಿದೆ. ಬಿಜೆಪಿ ಸೇರಿದ ಮೇಲೆ ವಿಚಾರಣೆ, ಜೈಲು, ಇ.ಡಿ. ದಾಳಿಗಳಿಂದ ವಿನಾಯಿತಿ ಪಡೆದವರ ಪಟ್ಟಿಯನ್ನೂ ಈಚೆಗೆ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಮಹಾರಾಷ್ಟ್ರದ ಅಜಿತ್ ಪವಾರ್, ಅಶೋಕ್ ಚವಾಣ್, ಛಗನ್ ಭುಜಬಲ್, ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ಥರದವರಿಂದ ಹಿಡಿದು ಹತ್ತಾರು ಹೆಸರುಗಳಿವೆ. ದೆಹಲಿಯ ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ, ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ ಜೈಲಿನಲ್ಲಿದ್ದಾರೆ. ಕೇಜ್ರಿವಾಲ್ ಇ.ಡಿ. ಸಮನ್ಸ್ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ.

ವಿರೋಧಿ ನಾಯಕರ ಅಸ್ತಿತ್ವದ ಆತಂಕ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ‘ಇಂಡಿಯಾ’ ಒಕ್ಕೂಟ ಸೇರಿದ್ದ ಹದಿನೈದು ಪಕ್ಷಗಳಲ್ಲಿ ರಾಷ್ಟ್ರೀಯ ಲೋಕದಳ ಹಾಗೂ ಸಂಯುಕ್ತ ಜನತಾದಳವು ಒಕ್ಕೂಟಕ್ಕೆ ಕೈ ಕೊಟ್ಟಿವೆ. ಕೆಲವು ಪಕ್ಷಗಳು ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ತರಲೆ ಮಾಡಿ ಕೊಂಡರೂ ಒಕ್ಕೂಟದಲ್ಲಿ ಮುಂದುವರಿಯುತ್ತಿವೆ. ಚಂಡೀಗಢ ಕಾರ್ಪೊರೇಷನ್ ಚುನಾವಣೆಯಲ್ಲಿ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶದಿಂದ ಕಾಂಗ್ರೆಸ್–ಎಎಪಿ ಒಕ್ಕೂಟಕ್ಕೆ ಮೇಯರ್ ಸ್ಥಾನ ಸಿಕ್ಕ ತಕ್ಷಣ ದೆಹಲಿಯಲ್ಲಿ ಎಎಪಿ 4, ಕಾಂಗ್ರೆಸ್ 3 ಲೋಕಸಭಾ ಕ್ಷೇತ್ರಗಳನ್ನು ಹಂಚಿ ಕೊಂಡಿವೆ. ಹರಿಯಾಣ, ಗುಜರಾತ್, ಗೋವಾದಲ್ಲಿ ಕಾಂಗ್ರೆಸ್-ಎಎಪಿ ಮಿಂಚಿನ ವೇಗದಲ್ಲಿ ಹೊಂದಾಣಿಕೆ ಮಾಡಿಕೊಂಡಿವೆ.

ಸೀಟು ಹಂಚಿಕೆಯಲ್ಲಿ ತೋರಿರುವ ತರಾತುರಿಯನ್ನು ಪರಸ್ಪರ ಮತಗಳ ವರ್ಗಾವಣೆಯಲ್ಲೂ ಪ್ರಾಮಾಣಿಕವಾಗಿ ತೋರಿದರೆ ಮಾತ್ರ ಎಎಪಿ- ಕಾಂಗ್ರೆಸ್ ಮೈತ್ರಿ ದೇಶದ ಮತದಾರ ವಲಯದಲ್ಲಿ ಹೊಸ ಸಂದೇಶ ಹೊರಡಿಸ
ಬಲ್ಲದು. ತನ್ನ ಜೊತೆ ಕೈಜೋಡಿಸಿದ ಪಕ್ಷಕ್ಕೆ ತನ್ನ ಪಾಲಿನ ಮತಗಳನ್ನು ವರ್ಗಾವಣೆ ಮಾಡುವ ಕಾರ್ಯತಂತ್ರ, ಬದ್ಧತೆ, ನೈತಿಕತೆಯನ್ನು ಕಾಂಗ್ರೆಸ್ ಮೊದಲು ರೂಢಿಸಿ ಕೊಳ್ಳಬೇಕಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ತಾಳ್ಮೆಯ ಸಂಧಾನದ ರಾಜಕಾರಣದಲ್ಲಿ ಕಾಂಗ್ರೆಸ್ ಈ ಹೊಸ ಪಾಠವನ್ನೂ ಕಲಿಯಲೆಂದು ಆಶಿಸೋಣ. ಅದೇ ರೀತಿ ಸೀಟು ಹೊಂದಾಣಿಕೆಯಾಗದ ರಾಜ್ಯಗಳಲ್ಲೂ ಎಎಪಿಯ ನಾಯಕ, ಕಾರ್ಯಕರ್ತರನ್ನು ಹಾಗೂ ಕಮ್ಯುನಿಸ್ಟ್ ಪಕ್ಷಗಳನ್ನು ಚುನಾವಣಾ ಸಿದ್ಧತೆ, ಪ್ರಚಾರದಲ್ಲಿ ಒಳ ಗೊಳ್ಳುವುದು ಅತ್ಯಗತ್ಯ. ಈ ಬಗೆಯ ಸಾಮೂಹಿಕ ದನಿ ದೇಶದಾದ್ಯಂತ ಮತದಾರ ವಲಯದಲ್ಲಿ ಪರ್ಯಾಯದ ಆಸೆ ಹುಟ್ಟಿಸಬಲ್ಲದು.

ಒಂದು ಮಟ್ಟದಲ್ಲಾದರೂ ಅಖಿಲ ಭಾರತ ಹಾಜರಿಯಿರುವ ಬಹುಜನ ಸಮಾಜ ಪಕ್ಷದ ಶಕ್ತಿ ಕುಂದಿ ದ್ದರೂ ಅದು ಏಕಾಂಗಿಯಾಗೇ ಚುನಾವಣೆಗೆ ಹೊರಟಿದೆ. ಕಾಂಗ್ರೆಸ್-ಎಎಪಿ ಗುಜರಾತಿನಲ್ಲಿ 26:2, ಹರಿಯಾಣದಲ್ಲಿ 9:1 ಪ್ರಮಾಣದಲ್ಲಿ ಸೀಟು ಹಂಚಿಕೊಂಡಿವೆ; ಆದರೆ ಪಂಜಾಬಿನಲ್ಲಿ ಏಕಾಂಗಿಯಾಗಿ ಹೊರಟಿವೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಶೇ 42ರಷ್ಟು ಮತ ಗಳಿಸಿದ್ದರೆ, ಕಾಂಗ್ರೆಸ್ ಶೇ 23ರಷ್ಟು ಮತಗಳನ್ನು ಗಳಿಸಿತ್ತು. ಕಿಸಾನ್ ಆಂದೋಲನದ ಪ್ರಭಾವವಿರುವ ಪಂಜಾಬಿನಲ್ಲಿ ಎಎಪಿ-ಕಾಂಗ್ರೆಸ್ ಕೊನೇಪಕ್ಷ 10:2ರ
ಪ್ರಮಾಣದಲ್ಲಾದರೂ ಸೀಟು ಹೊಂದಾಣಿಕೆ ಮಾಡಿ ಕೊಂಡು ಒಟ್ಟಾಗಿ ಸ್ಪರ್ಧಿಸಿದರೆ ರೈತರ ವೋಟುಗಳು ಇತ್ತ ಒಗ್ಗೂಡಬಲ್ಲವು; ಆ ಮೂಲಕ ಈ ಸಂಬಂಧದ ಗಟ್ಟಿತನದ ಸ್ಪಷ್ಟ ಸಂದೇಶ ದೇಶದುದ್ದಕ್ಕೂ ತಲುಪಬಲ್ಲದು. ರಾಜಕೀಯ ಪಂಡಿತರ ಏಕಮುಖ ವಿಶ್ಲೇಷಣೆ ಏನೇ ಇರಲಿ, ರಾಹುಲ್ ಗಾಂಧಿ ಹಾಗೂ ಕೇಜ್ರಿವಾಲ್ ಈ ಶತಮಾನದ ಹೊಸ ನಾಯಕರಾಗಿ ಬೆಳೆಯುತ್ತಿರುವುದನ್ನು ಕಡೆಗಣಿಸಲಾಗದು.

ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ ಕೈ ಕೊಟ್ಟ ತಕ್ಷಣ ಸಮಾಜವಾದಿ ಪಕ್ಷವು ಕಾಂಗ್ರೆಸ್ಸಿಗೆ 17 ಸೀಟುಗಳನ್ನು ಬಿಟ್ಟುಕೊಟ್ಟಿದೆ. ಬಿಎಸ್ಪಿಯ ಏಕಾಂಗಿ ಸ್ಪರ್ಧೆ ಪಕ್ಷದ ನಿಷ್ಠಾವಂತ ಮತದಾರರಲ್ಲಿ ಕೂಡ ಈಗ ಉತ್ಸಾಹ ಹುಟ್ಟಿಸಲಾರದು. ಬಿಎಸ್ಪಿ ನಾಯಕರ ವಲಸೆ ಶುರುವಾಗಿದೆ. ಮಾಯಾವತಿ ಅವರ ನಂತರ ಉತ್ತರ ಪ್ರದೇಶದಲ್ಲಿ ಹೊಸ ದಲಿತ ನಾಯಕನಾಗಿ ಬೆಳೆಯುತ್ತಿರುವ ಚಂದ್ರಶೇಖರ ಆಜಾದ್ ರಾವಣ್ ಅವರನ್ನು ಸ್ವಾಗತಿಸಲು ಎಸ್ಪಿ- ಕಾಂಗ್ರೆಸ್ ಉತ್ಸುಕವಾಗಿವೆ. ರಾಷ್ಟ್ರೀಯ ಲೋಕ ದಳದ ಕಾರ್ಯಕರ್ತರು ಈಚೆಗೆ ನ್ಯಾಯಯಾತ್ರೆಯಲ್ಲಿ ರಾಹುಲ್, ಅಖಿಲೇಶ್ ಜೊತೆ ಹೆಜ್ಜೆ ಹಾಕಿದ್ದಾರೆ. ಇಂಥ ಬಿಡಿಬಿಡಿ ಬೆಳವಣಿಗೆಗಳು ಹನಿಹನಿಗೂಡಿದಂತೆಲ್ಲ ಚುನಾವಣೆಯ ಅಲೆಯೇ ಬದಲಾಗತೊಡಗುತ್ತದೆ.

ಬಿಹಾರದಲ್ಲಿ ಕಾಂಗ್ರೆಸ್- ಆರ್ಜೆಡಿ- ಕಮ್ಯುನಿಸ್ಟ್ ಪಕ್ಷಗಳ ಮೈತ್ರಿಯು ಗೊಂದಲವಿಲ್ಲದೆ ಸೀಟು ಹಂಚಿಕೆ ಮಾಡಿಕೊಳ್ಳಬಲ್ಲದು. ತಮಿಳುನಾಡಿನಲ್ಲೂ ಹೆಚ್ಚು ಗೊಂದಲವಿಲ್ಲ. ಮಹಾರಾಷ್ಟ್ರದಲ್ಲಿ ಪ್ರಕಾಶ್ ಅಂಬೇಡ್ಕರ್ ಬಲವೂ ಸೇರಿದರೆ ‘ಇಂಡಿಯಾ’ ಒಕ್ಕೂಟ ಎನ್ಡಿಎಗೆ ಸಮಬಲದ ಪೈಪೋಟಿ ನೀಡಬಲ್ಲದು. ಮಮತಾ ಬ್ಯಾನರ್ಜಿ ಅತಿ ಮಾಡಿದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಗೆ ಆದ ಹಿನ್ನಡೆಯು ಪುನರಾವರ್ತನೆಯಾದರೂ ಅಚ್ಚರಿಯಲ್ಲ. ಮಮತಾ ಥರವೇ ಆಡುತ್ತಿದ್ದ ಕೆ. ಚಂದ್ರಶೇಖರ ರಾವ್ ಅವರಿಗೆ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಆದ ಗತಿಯನ್ನು ವಿರೋಧ ಪಕ್ಷಗಳು ಎಚ್ಚರದಿಂದ ಗಮನಿಸಿ ಪಾಠ ಕಲಿಯಬೇಕು.

ಬಿಜೆಪಿ ಬಗೆಗಿನ ಹೆದರಿಕೆಯೊಂದೇ ವಿರೋಧ ಪಕ್ಷಗಳನ್ನು ಗುರಿ ಮುಟ್ಟಿಸಲಾರದು. ಲೋಹಿಯಾ ಅವರು ವಿರೋಧ ಪಕ್ಷಗಳಿಗೆ ಮತ್ತೆ ಮತ್ತೆ ಹೇಳುತ್ತಿದ್ದ ‘ಅಧಿಕಾರ ಹಿಡಿಯುವ ಇಚ್ಛಾಶಕ್ತಿ’ (ವಿಲ್ ಟು ಪವರ್) ಮುಖ್ಯ ಚಾಲಕಶಕ್ತಿ ಎಂಬುದನ್ನು ಮರೆಯಬಾರದು. ತಾವು ಯಾಕೆ ಅಧಿಕಾರ ಹಿಡಿಯಲೇಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಗಟ್ಟಿ ಚಿಂತನೆ ಒಕ್ಕೂಟದಿಂದ ಮೂಡಿಬರಬೇಕು. ಈ ಪಕ್ಷಗಳನ್ನು ತಾತ್ವಿಕವಾಗಿ ಒಗ್ಗೂಡಿಸಿ ಏಕದನಿ ಹೊರಡಿಸಲು ನಾಯಕರು ಮಾನಸಿಕವಾಗಿ ತಯಾರಾಗಬೇಕು. ತಂತಮ್ಮ ಭಾಷಾ ಪ್ರದೇಶಗಳಲ್ಲಿ ದೇಶದ ಎಲ್ಲ ವಲಯಗಳ ಭವಿಷ್ಯದ ಬಗ್ಗೆ ಖಚಿತ ಮುನ್ನೋಟ ಮಂಡಿಸಬಲ್ಲ ಪ್ರಾದೇಶಿಕ ನಾಯಕರ ಅಗತ್ಯವೂ ಈ ಒಕ್ಕೂಟಕ್ಕಿದೆ. ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ, ಸ್ಟಾಲಿನ್ ಥರದವರು ತಂತಮ್ಮ ರಾಜ್ಯದಾಚೆಗೆ ಜನಪ್ರಿಯತೆ ಉಳ್ಳವರಲ್ಲ. ಆದರೂ ಕರ್ನಾಟಕದಂಥ ಕಡೆ ತಮಿಳು ಭಾಷಿಕರ ವಲಯದಲ್ಲಿ ಸ್ಟಾಲಿನ್ ಪ್ರಭಾವ ಬೀರಬಲ್ಲರು.

ಅಖಿಲ ಭಾರತ ವ್ಯಾಪ್ತಿಯುಳ್ಳ ನಾಯಕರನ್ನು ಸದಾ ತಯಾರು ಮಾಡುವ ಯೋಜನೆ, ಸಿದ್ಧತೆಗಳು ನಮ್ಮ ಬಹುತೇಕ ರಾಜಕೀಯ ಪಕ್ಷಗಳ ಸಂಕುಚಿತ ಮನಸ್ಸಿನ ಮುಂದಾಳುಗಳಲ್ಲಿಲ್ಲ. ನಾಯಕತ್ವದ ಸಾಮರ್ಥ್ಯ ಇರುವವರು ತಮ್ಮ ಪಕ್ಷದಲ್ಲೇ ಇದ್ದರೂ ತಂತಮ್ಮ ಉಳಿವಿಗಾಗಿ ಅವರನ್ನು ಮಟ್ಟ ಹಾಕುವ ಕಾಯಿಲೆಯಿಂದ ವಿರೋಧ ಪಕ್ಷಗಳಾದರೂ ಪಾರಾಗಬೇಕಾಗಿದೆ.

ಕೊನೆಯದಾಗಿ, ಅಧಿಕಾರದ ಇಚ್ಛಾಶಕ್ತಿ ರಾಜಕೀಯ ಪಕ್ಷಗಳಲ್ಲಷ್ಟೇ ಹೊಮ್ಮಿದರೆ ಸಾಲದು. ಆ ಇಚ್ಛಾಶಕ್ತಿ ಜನರಲ್ಲೂ ಉಕ್ಕಬೇಕು. ತಮಗೆ ಬೇಕಾದ ಪಕ್ಷಗಳನ್ನು ಅಧಿಕಾರಕ್ಕೆ ತರುವುದರಿಂದ ತಮಗೆ ಅಧಿಕಾರ ದಕ್ಕುತ್ತದೆ ಎಂಬ ಇಚ್ಛಾಶಕ್ತಿ ಜನರಲ್ಲಿ ಪ್ರಬಲವಾಗಿ ಮೂಡಿದಾಗ ಮಾತ್ರ ಚುನಾವಣೆಗಳಲ್ಲಿ ಊಹಾತೀತ ಫಲಿತಾಂಶ ಬರಬಲ್ಲದು. ಈಚಿನ ಸಮೀಕ್ಷೆಗಳಲ್ಲಿ ದೇಶದ ಆರ್ಥಿಕ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಶೇ 50ಕ್ಕಿಂತ ಹೆಚ್ಚು ಜನ ಕೇಂದ್ರ ಸರ್ಕಾರದ ಬಗ್ಗೆ ಅಸಮಾಧಾನ ಸೂಚಿಸಿರುವು ದನ್ನು ಚುನಾವಣಾ ತಜ್ಞ ಯೋಗೇಂದ್ರ ಯಾದವ್ ಗುರುತಿಸಿದ್ದಾರೆ. ಈ ಪ್ರಶ್ನೆಗಳ ಬಗ್ಗೆ ವಿರೋಧಿ ಒಕ್ಕೂಟ ತೀವ್ರ ಗಮನ ಕೊಡುವ ಅಗತ್ಯವಿದೆ. ವಿರೋಧಿ ಒಕ್ಕೂಟ ಈ ಆರ್ಥಿಕ ಸವಾಲುಗಳನ್ನು ಜನರಿಗೆ ಸರಳವಾಗಿ ಮನವರಿಕೆ ಮಾಡಿಕೊಟ್ಟಾಗ ಮಾತ್ರ ಜನರ ಇಚ್ಛಾಶಕ್ತಿಯೂ ವಿರೋಧ ಪಕ್ಷಗಳ ಇಚ್ಛಾಶಕ್ತಿಯೂ ಬೆರೆತು ಚುನಾವಣೆಯ ದಿಕ್ಕು ಬದಲಾಗಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.