ನನ್ನ ಮಿತ್ರನೊಬ್ಬ ಹೇಳಿದ ಪ್ರಸಂಗ ನೆನಪಿಗೆ ಬರುತ್ತದೆ. ಅದು ಸುಮಾರು 40 ವರ್ಷಗಳ ಹಿಂದಿನ ಘಟನೆ.ಅವನಿದ್ದದ್ದು ಬೆಂಗಳೂರಿನ ಬಳಿಯ ಹಳ್ಳಿಯೊಂದರಲ್ಲಿ. ಅವನ ಮನೆಯ ಹಿಂದೆ ಹೂವಿನ ತೋಟಗಳು ಯಥೇಚ್ಛವಾಗಿದ್ದವು. ಅಂದು ಅವ ಮುಂಜಾನೆ 6.30ಕ್ಕೆ ಮನೆಯಿಂದ ಹೊರಬಂದಿದ್ದ. ಕಣ್ಣಿಗೆ ಕಂಡದ್ದು, ರಸ್ತೆಯಲ್ಲಿ ನಡೆದು ಬರುತ್ತಿದ್ದಡಾ. ರಾಜ್ಕುಮಾರ್. ಅವರ ಸಿಬ್ಬಂದಿಯೆಲ್ಲಾ ಇನ್ನೂ ಕಾರಿನಲ್ಲಿದ್ದರು. ಡಾ. ರಾಜ್ರನ್ನು ಕಣ್ಣೆದುರಿನಲ್ಲಿ ನೋಡಿದ ಖುಷಿಯಿಂದ ಮೂಕನಾಗಿ ಅವರಿಗೆ ನಮಸ್ಕಾರ ಮಾಡಿ, ಅವರ ಹಿಂದೆ ಹೆಜ್ಜೆ ಹಾಕತೊಡಗಿದ. ‘ಶೂಟಿಂಗ್ ಇತ್ತಪ್ಪಾ ಬಂದೆ’ ಎಂದು ಮುನ್ನಡೆದ ರಾಜ್ಕುಮಾರ್ ಅವರ ಕಣ್ಣಿಗೆ ಬಿದ್ದಿದ್ದು ಆ ಹೂವಿನ ತೋಟದ ಪಕ್ಕದಲ್ಲಿ ಮಾಡಿದ್ದ ರಾಗಿಯ ಕಣ. ಅಲ್ಲಿ ಒಟ್ಟಿದ್ದ ರಾಗಿಯ ರಾಶಿ. ಅವನ್ನು ನೋಡಿದ ಕೂಡಲೇ, ರಾಜ್ಕುಮಾರ್ ತಮ್ಮ ಚಪ್ಪಲಿಯನ್ನು ಕಣದ ಹೊರಗೆ ಬಿಟ್ಟು ಭಕ್ತಿಭಾವದಿಂದ ನಡೆದು ರಾಗಿಯ ರಾಶಿಗೆ ಶಿರಸಾಷ್ಟಾಂಗ ನಮಸ್ಕರಿಸಿದರು. ಅನ್ನದೇವನಿಗೆ ನಮನ ಸಲ್ಲಿಸಿದರು. ಬಹುಶಃ ಅದು‘ನಾ ನಿನ್ನ ಮರೆಯಲಾರೆ’ ಚಿತ್ರದ ಚಿತ್ರೀಕರಣದ ಸಮಯ.

ಈ ಘಟನೆಗೆ ನನ್ನ ಪ್ರತಿಕ್ರಿಯೆ ಇಷ್ಟೆ. ‘ಗೆಳೆಯಾ... ಅದು ನಮ್ಮ ರಾಜ್ಕುಮಾರ್, ಅವರಿದ್ದದ್ದೇ ಹಾಗೆ, ಸಜ್ಜನಿಕೆಯೇ ಮೈವೆತ್ತ, ಸಂಸ್ಕಾರ ತುಂಬಿದ ಸರಳ ವ್ಯಕ್ತಿ’. ಈ ಸರಳತೆಗಾಗಿಯೇ ರಾಜ್ಕುಮಾರ್ ನನಗೆ ಅತ್ಯಂತ ಆದರಣೀಯರು. ಚಿತ್ರರಂಗದ ಸಾಮ್ರಾಟನಾದ ವ್ಯಕ್ತಿ ಯಾವುದೇ ಬಿಗುಮಾನವಿಲ್ಲದೆ ರಾಗಿಯ ರಾಶಿಗೆ ನಮಸ್ಕರಿಸಿದ್ದು ಅವರಲ್ಲಿದ್ದ ಸಂಸ್ಕಾರಕ್ಕೆ ಸಾಕ್ಷಿ. ಸರಳತೆ, ಅಂತಃಕರಣ, ಎಲ್ಲರಿಗೂ ಸಮಾನ ಪ್ರೀತಿ ತೋರುತ್ತಿದ್ದ ಉದಾತ್ತ ಗುಣ ಎಲ್ಲವೂ ನನಗೆ ಅನುಕರಣೀಯ.

ಚಲನಚಿತ್ರವೆಂಬ ಭ್ರಾಮಕ ಜಗತ್ತಿನಲ್ಲಿದ್ದೂ, ಆರು ದಶಕಗಳಿಗೂ ಮಿಕ್ಕಿ ನಿರಂತರವಾಗಿ ಜನಾದರವನ್ನು ಕಾಪಾಡಿಕೊಳ್ಳುವುದು ಸುಲಭದ ಸಂಗತಿಯಲ್ಲ. ಚಲನಚಿತ್ರವೇ ಏಕೆ, ಬೇರಾವ ಕ್ಷೇತ್ರದಲ್ಲಿಯಾದರೂ ಇದು ಕಷ್ಟಸಾಧ್ಯ. ವ್ಯಕ್ತಿಯಲ್ಲಿನ ಅಲುಗದ ಅಂತಃಸತ್ವದಿಂದಾಗಿ ಮಾತ್ರ ಇದು ಸಾಧ್ಯ. ಸ್ವ-ಸಾಧನೆಯ ಕಹಳೆಯೂದದೆ, ಸಿದ್ಧಾಂತ ಬೋಧನೆಯ ಸಾಹಸ ಮಾಡದೆ, ಸಮುದಾಯದ ಹಿಂಡು ಕಟ್ಟದೆ ಜನನಾಯಕರಾದವರು ಅವರು. ಈ ಎಲ್ಲಕ್ಕೂ ಅತೀತವಾಗಿ ಬದುಕುವ ಸರಳ ಮನ, ಮುಗ್ಧ ಮಾನವಪ್ರೇಮ ಅವರದ್ದಾಗಿತ್ತು. ಅವರ ಸಿನಿಮಾಗಳೆಂದೂ ಕೆಡಹುವ- ಕೆಡಿಸುವ ದಾರಿ ಅರಸಲಿಲ್ಲ. ಬದಲಿಗೆ, ಅವು ಕಟ್ಟುವ ಕೆಲಸ ಮಾಡಿದವು. ಮನಮನಗಳ ನಡುವೆ ಬಾಂಧವ್ಯದ ಬೆಸುಗೆ ಬಿಗಿದು, ಮಾನವ ಧರ್ಮದ ಹಿನ್ನೆಲೆಯಲ್ಲಿ ನೈತಿಕತೆ-ಮೌಲಿಕತೆಗಳ ನೇಯ್ಗೆ ಹೆಣೆದು ಬದುಕು ಕಟ್ಟಿದ ಅವರ ಬದುಕಿನ ರೀತಿ ಮತ್ತು ಅವರ ಸಿನಿಮಾಗಳು ಮಾಡಿದ ಸಮಾಜ ನಿರ್ಮಾಣದ ಕಾರ್ಯಗಳು ಸಣ್ಣವೇನಲ್ಲ.

ಸಾಮಾನ್ಯರು ರಾಜ್ರೊಂದಿಗೆ ತಮ್ಮನ್ನು ಸಮೀಕರಿಸಿಕೊಂಡರು. ಅಣ್ಣ, ಅಪ್ಪ, ತಮ್ಮ, ಕುಟುಂಬ ರಕ್ಷಕನ ತಮ್ಮ ಜೀವನ ಪಾತ್ರಗಳನ್ನು ರಾಜ್ರಲ್ಲಿ ಕಂಡರು. ಹೀಗೆ ಕಂಡ ರಾಜ್ಕುಮಾರ್ ಬದುಕಿದ್ದೂ ಇದೇ ರೀತಿ ಎಂದಾಗ, ಅವರನ್ನು ತಮ್ಮವರಲ್ಲಿ ಒಬ್ಬರಾಗಿಸಿಕೊಂಡರು. ರಾಜ್ಕುಮಾರ್ ಅವರ ಸಾರ್ವಕಾಲಿಕ ಮಾನ್ಯತೆಗೆ ಇದೇ ಕಾರಣ. ನಿಜ ಜನನಾಯಕ ಹೇಗಿರಬೇಕು ಎಂಬುದರ ಸಾಕ್ಷಿಪ್ರಜ್ಞೆ ಅವರು. ಸರ್ವಜನ ಪ್ರೀತಿಯೆಂಬ ಅಗಾಧ, ಅತ್ಯಮೂಲ್ಯ ಐಶ್ವರ್ಯದ ಒಡೆಯನಾದರೂ ಅದನ್ನೆಂದೂ ದುರ್ಬಳಕೆ ಮಾಡದ, ಸ್ವಾರ್ಥಸಾಧನೆಗೆ ಬಳಸಿಕೊಳ್ಳದ ರಾಜ್ ನಮ್ಮ ನಡುವೆ ಬದುಕಿದ್ದ ಅಪೂರ್ವ ಯೋಗಿಯಂತೆ ನನಗೆ ಕಾಣುತ್ತಾರೆ.

ರಾಜ್ಕುಮಾರ್ ಅವರ ಸಿನಿಮಾಗಳಿಂದ, ಅವರ ಜೀವನ ರೀತಿಯಿಂದ ಮಾರ್ಪಾಡುಗೊಂಡ, ಹೊಸ ಜೀವನ ರೂಪಿಸಿಕೊಂಡ ಅಸಂಖ್ಯ ಉದಾಹರಣೆಗಳು ನಮ್ಮ ಮುಂದಿವೆ. ತನ್ನ ಪಾತ್ರ, ಸಿನಿಮಾ, ಸಂಭಾಷಣೆಯ ಮೂಲಕವೇ ಸಮಾಜ ಪರಿವರ್ತನೆಯ ಹಾದಿ ತುಳಿದ ಮತ್ತೊಂದು ದೃಷ್ಟಾಂತ ಸಿಗಲಾರದು. ನಾನು ಕೂಡ ಅವರಿಂದ ಪ್ರಭಾವಿತನಾಗಿದ್ದೇನೆ. ರಾಜ್ಕುಮಾರ್ ಚಿತ್ರದ ಹಾಡುಗಳೆಂದರೆ ನನಗೆ ಬಹಳ ಅಕ್ಕರೆ. ಒತ್ತಡದಿಂದ ಹೊರಬರಲು ಇದೊಂದು ಅತ್ಯುತ್ತಮ ಮಾರ್ಗ ಎಂದುಕೊಂಡಿದ್ದೇನೆ. ‘ಬಂಗಾರದ ಮನುಷ್ಯ’ ಚಿತ್ರವನ್ನು ಅದೆಷ್ಟು ಬಾರಿ ನೋಡಿದ್ದೆನೋ ನೆನಪಿಲ್ಲ. ಪ್ರತಿ ಬಾರಿಯೂ ರಾಜೀವನ ಪಾತ್ರದಿಂದ ಸ್ಫೂರ್ತಿಗೊಂಡಿದ್ದೇನೆ.

ರಾಜ್ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿ. ಸಿ.ಎಂ.ಇಬ್ರಾಹಿಂ ವಾರ್ತಾ ಸಚಿವರು. ನಾನು ಸಂಸದ. ಅದು ಕನ್ನಡಕ್ಕೆ ಸಂದ ಮೊದಲ ಫಾಲ್ಕೆ, ದೆಹಲಿಯಲ್ಲಿ ಮೊದಲ ಬಾರಿಗೆ ಕನ್ನಡದ ಪ್ರಧಾನಿ, ನಾನೂ ದೆಹಲಿಯಲ್ಲಿ. ಇದೊಂದು ಯೋಗಾಯೋಗವೆಂದೇ ಭಾವಿಸಿ ರೋಮಾಂಚಿತನಾಗಿದ್ದೆ. ಕನ್ನಡದ ಬಗೆಗೆ ಅವರಿಗಿದ್ದ ಕಾಳಜಿ, ಭಾಷೆಯ ಉಚ್ಚಾರದಲ್ಲಿದ್ದ ಸ್ಫುಟತೆ ನನ್ನನ್ನು ಮಂತ್ರಮುಗ್ಧನನ್ನಾಗಿಸಿದೆ. ನಟನೆಯ ಉಚ್ಛ್ರಾಯದಲ್ಲಿದ್ದಾಗಲೂ, ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗಲೊಲ್ಲೆ ಎಂದ ಅವರ ಬದ್ಧತೆ ನನ್ನನ್ನು ಅಚ್ಚರಿಗೆ ದೂಡಿದೆ.

ಕನ್ನಡ ಭಾಷಾ ಬೆಳವಣಿಗೆಯ ದಿಕ್ಕನ್ನು ಬದಲಿಸಿದ ಗೋಕಾಕ್ ಚಳವಳಿಯು ಆಧುನಿಕ ಕರ್ನಾಟಕದ ಇತಿಹಾಸದ ಭಾಗ. ಈ ಚಳವಳಿಗೆ ತೀವ್ರ ಹೋರಾಟದ ಸ್ಪರೂಪ ಬಂದದ್ದೇ ರಾಜ್ಕುಮಾರ್ ಅವರು ಚಳವಳಿಗೆ ಧುಮುಕಿದ ಮೇಲೆ. ಕರ್ನಾಟಕದ ಯಾವ ಮೂಲೆಯಲ್ಲಾದರೂ ರಾಜ್ಕುಮಾರ್ ಪಡೆದಿದ್ದ ಸರ್ವಮಾನ್ಯ ಅಭಿಮಾನ ಅತ್ಯಂತ ಅಪರೂಪದ್ದು.

ಇತ್ತೀಚೆಗೆ ಕನ್ನಡ ದಿನಪತ್ರಿಕೆಯೊಂದನ್ನು ಓದುತ್ತಿದ್ದೆ. ಅದರಲ್ಲಿ ಅಭಿಮಾನಿಗಳು ರಾಜ್ರಿಂದ ಪ್ರಭಾವಿತರಾಗಿ ತಮ್ಮ ಬದುಕು ಬದಲಿಸಿಕೊಂಡ ಉದಾಹರಣೆಗಳ ಅನೇಕ ಕಥನಗಳಿದ್ದವು. ತಂದೆ ತಾಯಿಯನ್ನು ಗೌರವಿಸುವ, ಇತರ ಹೆಣ್ಣುಮಕ್ಕಳನ್ನು ಅಕ್ಕತಂಗಿಯರಂತೆ ಕಾಣುವ ಸಂಸ್ಕಾರ ರೂಢಿಸಿಕೊಂಡವರು, ಕಷ್ಟಪಟ್ಟು ದುಡಿಯುವ ಮಾರ್ಗ ಕಂಡುಕೊಂಡವರು, ರಾಜ್ರನ್ನು ದೇವರಂತೆ ಆರಾಧಿಸಿದ ಅನೇಕರ ಕಥೆಗಳಿದ್ದವು. ನನಗೇ ತಿಳಿದಿರುವಂತೆ ‘ಸತ್ಯ ಹರಿಶ್ಚಂದ್ರ’ ಚಿತ್ರ ನೋಡಿ ಪ್ರಭಾವಿತರಾದವರಿದ್ದಾರೆ. ‘ಬಂಗಾರದ ಮನುಷ್ಯ’ ನೋಡಿ ಹಳ್ಳಿ ಬದುಕಿಗೆ ಮರಳಿದವರಿದ್ದಾರೆ. ವ್ಯಕ್ತಿಯೊಬ್ಬರು ಸಮಷ್ಟಿಯ ಮೇಲೆ ಈ ಪರಿ ಪ್ರಭಾವ ಬೀರಲು ಸಾಧ್ಯವಾಗಿದ್ದರೆ ಅದು ರಾಜ್ಕುಮಾರ್ರಿಂದ ಮಾತ್ರ.

2006ರ ಏಪ್ರಿಲ್ 12ರಂದು ಅವರು ನಮ್ಮನ್ನು ಅಗಲಿದಾಗ, ನಾನು ರಾಜ್ಯದ ಮುಖ್ಯಮಂತ್ರಿ. ಅಂದು ಟಾಟಾ ವಿಜ್ಞಾನ ಸಂಸ್ಥೆಯಲ್ಲಿ ಅಧಿಕಾರಿಗಳ ಸಭೆಯಲ್ಲಿದ್ದೆ. ಸುದ್ದಿ ಬಂತು. ರಾಜ್ಕುಮಾರ್ ಅವರ ಮನೆಗೆ ಧಾವಿಸಿದೆ.ದೇವೇಗೌಡರೂ ಬಂದರು. ಅಲ್ಲಿ ಜನಸಾಗರ. ದೇವರನ್ನು ಕಳೆದುಕೊಂಡ ಅಭಿಮಾನಿಗಳು ಹರಿಸಿದ ಅಭಿಮಾನ- ಪ್ರೀತಿ, ದುಃಖ- ದುಃಖಾಶ್ರುವಿನ ಸ್ವರೂಪದ ತೀವ್ರತೆ ಇನ್ನೂ ನನ್ನ ಮನದಲ್ಲಿದೆ. ‘ಶರಣರ ಸಾವನ್ನು ಮರಣದಲ್ಲಿ ನೋಡು’ ಎನ್ನುವ ಪದಪುಂಜ ಪೂರ್ಣಾರ್ಥ ಆಗಿದ್ದು ನನಗೆ ಅಂದು. ವ್ಯಕ್ತಿಯೊಬ್ಬ ಜೀವಮಾನದಲ್ಲಿ ಅಷ್ಟೊಂದು ಜನರ ಪ್ರೀತಿಯನ್ನು ಗಳಿಸಬಹುದಾದರೆ, ಅದಕ್ಕಿಂತ ಮಿಗಿಲಾದ ಸಾಧನೆ ಇನ್ನೊಂದಿಲ್ಲ. ರಾಜ್ಕುಮಾರ್ ಒಬ್ಬ ಶರಣರೂ ಹೌದು, ಸಾಧಕರೂ ಹೌದು, ಸದ್ಗುರುವೂ ಹೌದು. ಎಲ್ಲಕ್ಕಿಂತ ಮಿಗಿಲಾಗಿ ಅವರೊಬ್ಬ ಅಧ್ಯಾತ್ಮ ಯೋಗಿ.

ಎಲ್ಲರ ಪ್ರೀತಿಯ ‘ಅಣ್ಣಾವ್ರ’ ಸ್ಮಾರಕಕ್ಕಾಗಿ ಶಾಶ್ವತವಾದ ಒಂದು ಜಾಗ ದೊರಕಿಸಿಕೊಟ್ಟ ಅಲ್ಪತೃಪ್ತಿ ನನ್ನದಾಗಿದೆ. ಈ ಕಲಾಸಾಮ್ರಾಟನ, ಕನ್ನಡ ಸಂಸ್ಕೃತಿಯ ಮೇರು ಪ್ರತಿನಿಧಿಯ ಜನ್ಮದಿನಾಚರಣೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಇದೊಂದು ಸಾರ್ಥಕವಾದ ಸರ್ಕಾರಿ ಕಾರ್ಯಕ್ರಮ.

ಲೇಖಕ: ಕರ್ನಾಟಕದ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.