ಚಾತುರ್ವರ್ಣ ಪದ್ಧತಿಯ ಕಾರಣದಿಂದಾಗಿ ಭಾರತದಲ್ಲಿ ತಳ ಸಮುದಾಯಗಳ ಜನರು ಶತಮಾನಗಳ ಕಾಲದಿಂದಲೂ ಸಾಮಾಜಿಕವಾಗಿ ಶೋಷಣೆಗೆ ಗುರಿಯಾಗಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳೂ ಸೇರಿದಂತೆ ಎಲ್ಲ ತಳ ಸಮುದಾಯಗಳ ಜನರಿಗೆ ದೇಶಕ್ಕೆ ಸ್ವಾತಂತ್ರ್ಯ ದೊರಕಿ, ಸಂವಿಧಾನವನ್ನು ಅಳವಡಿಸಿಕೊಳ್ಳುವವರೆಗೂ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಎಂಬುದು ಮರೀಚಿಕೆಯಾಗಿಯೇ ಇತ್ತು. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಪರಿಣಾಮವಾಗಿ ದೇಶದ ಬಹುಸಂಖ್ಯಾತ ಜನರು ಅನುಭವಿಸಿದ್ದ ಶೋಷಣೆಗೆ ಪರಿಹಾರ ಒದಗಿಸಲೆಂದೇ ನಮ್ಮ ಸಂವಿಧಾನದಲ್ಲಿ ‘ಸಾಮಾಜಿಕ ನ್ಯಾಯ’ದ ತತ್ವವನ್ನು ಅಳವಡಿಸಲಾಗಿದೆ. ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಜಾತ್ಯತೀತತೆ ಭಾರತದ ಸಂವಿಧಾನವು ಒಳಗೊಂಡಿರುವ ಬಹುಮಖ್ಯ ವಿಷಯಗಳು. ‘ಸಮಾಜವಾದ’ ಎಂದರೆ ‘ಸಾಮಾಜಿಕ ನ್ಯಾಯ’ ಎಂದರ್ಥ. ‘ಸರ್ವರಿಗೂ ಸಮಪಾಲು– ಸರ್ವರಿಗೂ ಸಮಬಾಳು’ ಎಂಬುದೇ ಸಾಮಾಜಿಕ ನ್ಯಾಯದ ತಿರುಳು. ಚಾತುರ್ವರ್ಣದ ಆಧಾರದಲ್ಲಿ ಅಸ್ತಿತ್ವದಲ್ಲಿದ್ದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯು ಈ ನೆಲದ ತಳ ಸಮುದಾಯಗಳಿಗೆ ಮಾಡಿರುವ ಗಾಸಿಯನ್ನು ಸಂಪೂರ್ಣವಾಗಿ ಗುಣಪಡಿಸುವವರೆಗೂ ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಎಳೆಯುವುದು ಅಗತ್ಯ. ಆದರೆ, ಈ ಪ್ರಕ್ರಿಯೆಯು ಸುಸೂತ್ರವಾಗಿ ನಡೆಯಬೇಕಾದರೆ ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸುವವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ, ಅದರ ಅಗತ್ಯ, ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸುವುದರಿಂದ ದೇಶದಲ್ಲಿ ಆಗುವ ಬದಲಾವಣೆಗಳ ಕುರಿತು ಅರಿವು ಇರಬೇಕಾಗುತ್ತದೆ. ಈ ವಿಚಾರದಲ್ಲಿ ಅರಿವಿನ ಕೊರತೆಯು ಭವಿಷ್ಯದ ದಿನಗಳಲ್ಲಿ ದೊಡ್ಡ ಹಿನ್ನಡೆಗೆ ಕಾರಣವಾಗುವ ಅಪಾಯವಿದೆ.

ಸಂವಿಧಾನವೇ ದೇಶದ ಪರಮೋಚ್ಚ ಕಾನೂನು. ಪ್ರತಿಯೊಬ್ಬ ಪ್ರಜ್ಞೆಯೂ ಸಂವಿಧಾನದ ತತ್ವಗಳನ್ನು ಗೌರವಿಸಿ ಪಾಲಿಸಲೇಬೇಕಾದುದು ಕರ್ತವ್ಯ ಎಂದು ಭಾರತ ಸಂವಿಧಾನದ ವಿಧಿ 51-ಎ ಆಜ್ಞಾಪಿಸಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗಬೇಕು ಎಂದು ಹೇಳುವಾಗ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಲಾಗಿದೆ. ಇದರ ಸಾಧನೆಯ ಮಾರ್ಗಗಳು 14, 15 (4), 16(4), 340, 341, 342ನೇ ವಿಧಿಗಳು ಸೇರಿದಂತೆ ಸಂವಿಧಾನದ ಇನ್ನೂ ಹಲವು ಭಾಗಗಳಲ್ಲಿ ಅಡಕವಾಗಿವೆ. ಸಾಮಾಜಿಕ ನ್ಯಾಯದ ತತ್ವಕ್ಕೆ ಸಂವಿಧಾನದಲ್ಲಿ ಇಷ್ಟೊಂದು ಆದ್ಯತೆಯನ್ನು ಏಕೆ ನೀಡಲಾಯಿತು ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ, ಸಂವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೂ ಮೊದಲು ದೇಶದಲ್ಲಿ ಇದ್ದ ಅಪರಿಮಿತ ಸಾಮಾಜಿಕ ಅಸಮಾನತೆಯ ಕುರುಹುಗಳು ಉತ್ತರದ ರೂಪದಲ್ಲಿ ಕಾಣಸಿಗುತ್ತವೆ. ಸಾಮಾಜಿಕ ನ್ಯಾಯವು ಸಂವಿಧಾನದ ಬದಲಿಸಲಾಗದ ಮೂಲ ತತ್ವಗಳಲ್ಲಿ ಒಂದಾಗಿದೆ. ದೇಶದ ಪ್ರತಿ ಪ್ರಜೆಯೂ ಸಾಮಾಜಿಕ ನ್ಯಾಯವನ್ನು ಅರ್ಥ ಮಾಡಿಕೊಂಡು, ಎಲ್ಲ ಹಂತದಲ್ಲೂ ಅದನ್ನು ಅನುಷ್ಠಾನಕ್ಕೆ ತರಬೇಕಿದೆ. ‘ದೇಶದ ಸಾಂವಿಧಾನಿಕ ನ್ಯಾಯಾಲಯಗಳು (ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್) ಯಾವುದೇ ವ್ಯಾಜ್ಯದಲ್ಲಿ ತೀರ್ಪು ನೀಡಿದರೂ, ಆ ತೀರ್ಪು ಸಾಮಾಜಿಕ ನ್ಯಾಯದ ತತ್ವವನ್ನು ಪ್ರತಿಬಿಂಬಿಸುವಂತೆ ಇರಬೇಕು’ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ವಿ.ಆರ್. ಕೃಷ್ಣ ಅಯ್ಯರ್ ಹೇಳಿದ್ದರು. ಇದು ನ್ಯಾಯಾಂಗಕ್ಕೆ ಸೀಮಿತವಾದ ಸಂಗತಿಯಲ್ಲ. ಅವರ ಮಾತುಗಳು ಶಿಕ್ಷಣ, ಉದ್ಯೋಗ, ಆಸ್ತಿಯ ಒಡೆತನ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತವೆ. ದೇಶದೊಳಗೆ ನಡೆಯುವ ಪ್ರತಿ ಬೆಳವಣಿಗೆಯಲ್ಲೂ ಸಾಮಾಜಿಕ ನ್ಯಾಯದ ತಿರುಳನ್ನು ಹಂಚಬೇಕು ಎಂಬುದೇ ಇದರ ಹಿಂದಿರುವ ದೊಡ್ಡ ಆಶಯ.

1950ರಲ್ಲಿ ನಮ್ಮ ದೇಶವು ಸಂವಿಧಾನವನ್ನು ಜಾರಿಗೊಳಿಸಿತು. ಆ ದಿನಗಳಿಂದಲೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ದೊರಕಿತು. ಆದರೆ, ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿದ್ದು 1992ರಲ್ಲಿ ಇಂದಿರಾ ಸಾಹ್ನಿ (ಮಂಡಲ್) ಪ್ರಕರಣದ ತೀರ್ಪು ಪ್ರಕಟವಾದ ಬಳಿಕ. ಅಲ್ಲಿಗೆ ದೇಶದಲ್ಲಿ ಸಂವಿಧಾನ ಜಾರಿಗೆ ಬಂದು 42 ವರ್ಷಗಳು ಕಳೆದು ಹೋಗಿದ್ದವು. ಐಐಟಿ, ಐಐಎಂನಂಥ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಗಲು 58 ವರ್ಷಗಳೇ ಬೇಕಾಯಿತು. ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿರುವ ಶೇಕಡ 27ರಷ್ಟು ಮೀಸಲಾತಿಯು ನ್ಯಾಯಯುತವಾಗಿ, ತೃಪ್ತಿಕರ ರೀತಿಯಲ್ಲಿ ಜನರನ್ನು ತಲುಪುತ್ತಿಲ್ಲ ಎಂಬುದು ನಿರ್ವಿವಾದವಾದ ಸಂಗತಿ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸ್ಥಿತಿ–ಗತಿಯೂ ಇದೇ ರೀತಿ ಇದೆ. ಆಡಳಿತ ನಡೆಸುವವರು ಸಾಮಾಜಿಕ ನ್ಯಾಯದ ಕುರಿತು ಸರಿಯಾಗಿ ಅರಿಯದೇ ಇರುವುದು ಇದಕ್ಕೆ ಮೂಲ ಕಾರಣ. ಸಾಮಾಜಿಕ ನ್ಯಾಯವು ನಮ್ಮ ಶಿಕ್ಷಣದ ಭಾಗವಾಗದಿರುವುದರಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಾನು ರಾಜ್ಯದಾದ್ಯಂತ ನೂರಾರು ವಿದ್ಯಾರ್ಥಿ ನಿಲಯಗಳು, ಶಾಲೆ, ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದೆ. ಆ ಎಲ್ಲ ಸಂದರ್ಭಗಳಲ್ಲೂ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಅದರ ಅನುಷ್ಠಾನದ ಕುರಿತು ನಮ್ಮ ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತಿದ್ದೆ. ಶಾಲೆಗಳಲ್ಲಿ ಮಾತ್ರವಲ್ಲ ಕಾಲೇಜು ವಿದ್ಯಾರ್ಥಿಗಳಲ್ಲೂ ಬಹುತೇಕರಿಗೆ ಸಾಮಾಜಿಕ ನ್ಯಾಯದ ಕುರಿತು ಅರಿವೇ ಇಲ್ಲ ಎಂಬ ಆಘಾತಕಾರಿ ಸಂಗತಿ ನನ್ನ ಗಮನಕ್ಕೆ ಬಂದಿತು. ಇದಕ್ಕೆ ಕಾರಣವೇನು ಎಂದು ಹುಡುಕಲು ಹೊರಟರೆ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಚಾರಗಳನ್ನು ನಮ್ಮ ವಿದ್ಯಾರ್ಥಿಗಳ ಮನಸ್ಸಿನ ಆಳಕ್ಕೆ ಇಳಿಸುವಂತಹ ವಿಸ್ತೃತವಾದ ಪಠ್ಯಕ್ರಮಗಳಾಗಲೀ, ಬೋಧನಾ ವ್ಯವಸ್ಥೆಯಾಗಲೀ ಇಲ್ಲ ಎಂಬುದು ತಿಳಿಯಿತು.

‘ಶಿಕ್ಷಣವು ನಾಗರಿಕರನ್ನು ಕೆಲವು ಗುರಿ, ಉದ್ದೇಶ ಮತ್ತು ಆದರ್ಶಗಳಿಗೆ ದುಡಿಯುವುದಕ್ಕೆ ಪ್ರೇರೇಪಿಸಬೇಕು. ಇಲ್ಲವಾದರೆ ಅಂತಹ ಶಿಕ್ಷಣ ವ್ಯವಸ್ಥೆಯೇ ಅರ್ಥಹೀನ ಮತ್ತು ಪ್ರಾಮುಖ್ಯ ಇಲ್ಲದ್ದು’ ಎಂದು ದೇಶದ ಶಿಕ್ಷಣ ಸಚಿವರೂ ಆಗಿದ್ದ //ಬಾಂಬೆ ಹೈಕೋರ್ಟ್‌ನ ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿ// ಎಂ.ಸಿ. ಛಾಗ್ಲಾ ಅವರು ತಮ್ಮ ಆತ್ಮಕಥನ ‘ರೋಸಸ್ ಇನ್ ಡಿಸೆಂಬರ್’ನಲ್ಲಿ ಹೇಳಿದ್ದರು. ‘ಶಿಕ್ಷಣವು ಸ್ವದೇಶಿ ದೃಷ್ಟಿಕೋನ ಮತ್ತು ಪ್ರಸ್ತುತತೆಯನ್ನು ಹೊಂದಿರಬೇಕು’ ಎಂದೂ ಉಲ್ಲೇಖಿಸಿದ್ದರು. ಸಾಮಾಜಿಕ ನ್ಯಾಯದ ಅನುಷ್ಠಾನದಲ್ಲಿ ಶಿಕ್ಷಣ ವ್ಯವಸ್ಥೆಯು ಪ್ರಮುಖವಾದ ಪಾತ್ರವನ್ನು ನಿರ್ವಹಿಸಬೇಕು ಎಂಬುದೇ ಅವರ ಮಾತುಗಳ ಹಿಂದಿರುವ ಕಾಳಜಿ. ಛಾಗ್ಲಾ ಅವರ ವಿಚಾರಧಾರೆಯ ನೆರಳಿನಲ್ಲಿ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಪಠ್ಯಕ್ರಮವನ್ನು ಮಾಧ್ಯಮಿಕ ಶಿಕ್ಷಣದ ಹಂತದಲ್ಲೇ ಅಳವಡಿಸಿಕೊಳ್ಳಬೇಕಿದೆ.

ಅಧಿಕಾರಿಗಳು, ನೌಕರರಾಗಿ ಕಾರ್ಯಾಂಗದಲ್ಲಿ ಕೆಲಸ ಮಾಡುವವರು, ನ್ಯಾಯಾಂಗದಲ್ಲಿ ಕೆಲಸ ಮಾಡುವವರು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಸಂಸತ್ತಿನವರೆಗೆ ವಿವಿಧ ಸ್ತರಗಳಲ್ಲಿ ಚುನಾಯಿತ ಪ್ರತಿನಿಧಿಗಳಾಗಿ ಕೆಲಸ ಮಾಡುವವರಿಗೆ ಸಾಮಾಜಿಕ ನ್ಯಾಯದ ಕುರಿತು ಅರಿವು ಇರಬೇಕು. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೂ ಈ ಕುರಿತ ಅರಿವು ಮುಖ್ಯ. ಅದರ ಜತೆಯಲ್ಲೇ ಸಾಮಾಜಿಕ ನ್ಯಾಯದ ತಿರುಳನ್ನು ಹಂಚುವ ಬದ್ಧತೆಯನ್ನೂ ರೂಢಿಸಬೇಕು. ಇದಕ್ಕಾಗಿ ಮಾಧ್ಯಮಿಕ ಶಿಕ್ಷಣದ ಹಂತದಲ್ಲೇ ಸಾಮಾಜಿಕ ನ್ಯಾಯದ ಪಠ್ಯವು ಕಲಿಕೆಯ ಭಾಗವಾಗಬೇಕು. ಅದು ಪಠ್ಯೇತರ ಚಟುವಟಿಕೆಯಂತೆ ಇರಬಾರದು. ನಿಗದಿತ ಅಂಕಗಳಿಗೆ ಪರೀಕ್ಷೆಯನ್ನೂ ಒಳಗೊಂಡು ಕಲಿಕೆಯ ಬಹುಮುಖ್ಯ ಅಂಗವಾದರೆ ಮಾತ್ರವೇ ಎಲ್ಲ ಹಂತಗಳಲ್ಲೂ ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಎಳೆಯುವ ಭವಿಷ್ಯದ ತಲೆಮಾರುಗಳಲ್ಲಿ ಮೊಳಕೆಯೊಡೆದು, ಹೆಮ್ಮರವಾಗಬಹುದು.

ಬಿ.ಆರ್. ಅಂಬೇಡ್ಕರ್ ಅವರು 1949ರ ನವೆಂಬರ್ 25ರಂದು ಸಂವಿಧಾನ ರಚನಾ ಸಮಿತಿಯ ಸಭೆಯಲ್ಲಿ ಮಾಡಿದ್ದ ಚರಿತ್ರಾರ್ಹ ಭಾಷಣದಲ್ಲಿ, ‘ನಾವು ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು. ಇಲ್ಲವಾದಲ್ಲಿ ರಾಜಕೀಯ ಪ್ರಜಾಪ್ರಭುತ್ವ ಉಳಿಯಲಾರದು. ಮತ್ತೊಂದು ಮರೆಯಲಾರದ ಮಾತು. ಎಷ್ಟೇ ಒಳ್ಳೆಯ ಸಂವಿಧಾನವಿದ್ದರೂ ಅದನ್ನು ಜಾರಿಗೊಳಿಸುವವರು ಒಳ್ಳೆಯವರಾಗಿರದಿದ್ದರೆ ಅದರ ಗುರಿ, ಉದ್ದೇಶ ಈಡೇರುವುದಿಲ್ಲ. ಸಂವಿಧಾನ ಸರಿ ಇಲ್ಲದಿದ್ದರೂ, ಅದನ್ನು ಜಾರಿಗೊಳಿಸುವವರು ಸರಿ ಇದ್ದರೆ ಫಲಿತಾಂಶ ಉತ್ತಮವೇ ಆಗಿರುತ್ತದೆ’ ಎಂದಿದ್ದರು. ಈಗ ನಾವು ಶಿಕ್ಷಣ ವ್ಯವಸ್ಥೆಯ ಮೂಲಕ ‘ಸಾಮಾಜಿಕ ನ್ಯಾಯ’ದ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಿದರೆ ಭಾರತದ ಸಂವಿಧಾನದ ಮೂಲ ಆಶಯಗಳಿಗೆ ಮುಕ್ಕಾಗದಂತಹ ಫಲಿತಾಂಶವನ್ನು ಎಂದೆಂದೂ ನಿರೀಕ್ಷಿಸಲು ಸಾಧ್ಯ.

ಲೇಖಕ: ಹಿರಿಯ ವಕೀಲ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.