ಮುಖ್ಯಮಂತ್ರಿ ಈ ತಿಂಗಳ ಪ್ರಾರಂಭದಲ್ಲಿ ರಾಜ್ಯದ ಹಿರಿಯ ಅರಣ್ಯಾಧಿಕಾರಿಗಳೊಡನೆ ನಡೆಸಿದ ಸಭೆಯಲ್ಲಿ ವನ್ಯಜೀವಿಗಳು, ಅದರಲ್ಲೂ ಮುಖ್ಯವಾಗಿ ಆನೆಗಳು ನಾಡಿಗೆ ಬರುವುದನ್ನು ತಪ್ಪಿಸಿ, ವನ್ಯಜೀವಿ- ಮಾನವ ಸಂಘರ್ಷವನ್ನು ತಗ್ಗಿಸಬೇಕೆಂಬ ಸೂಚನೆಯನ್ನು ನೀಡಿದ್ದಾರೆ. 2022- 23ರಲ್ಲಿ ವನ್ಯಜೀವಿಗಳ ದಾಳಿಯಿಂದ 30 ಮಂದಿ ಸಾವಿಗೀಡಾಗಿದ್ದರೆ, ಈ ವರ್ಷದ ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ 28 ಮಂದಿ ಮರಣ ಹೊಂದಿದ್ದಾರೆ. ಇದರಲ್ಲಿ ಆನೆಗಳಿಂದ ಸತ್ತವರ ಸಂಖ್ಯೆ 22. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಸಮಯೋಚಿತ ಸೂಚನೆಗೆ ಹೆಚ್ಚಿನ ಮಹತ್ವವಿದೆ.

ಅರಣ್ಯದಂಚಿನ ಜಮೀನಿನ ಬೆಳೆಗಳ ಮೇಲೆ ಆನೆಗಳು ಯಾಕೆ ದಾಳಿ ಮಾಡುತ್ತವೆ? ಎರಡು ಪ್ರಮುಖ ಸಂಶೋಧನೆಗಳು ಈ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತವೆ. ಮೊದಲನೆಯದು, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ರಾಮನ್ ಸುಕುಮಾರ್ ಅವರ ‘ಹೈ ರಿಸ್ಕ್, ಹೈ ಈಲ್ಡ್’ ವಾದ. ಈ ವಾದದಂತೆ, ಅರಣ್ಯವು ಉತ್ತಮ ಸ್ಥಿತಿಯಲ್ಲಿರುವಾಗ ಅದರಲ್ಲಿನ ಹೆಣ್ಣು ಆನೆಗಳು ಸಾಮಾನ್ಯವಾಗಿ ಬೆಳೆಯ ಮೇಲೆ ದಾಳಿ ಮಾಡುವುದಿಲ್ಲ. ಆದರೆ ತಮ್ಮ ಸಂತತಿಯನ್ನು ಮುಂದುವರಿಸುವ ಪ್ರಬಲವಾದ ಸಹಜ ಪ್ರವೃತ್ತಿಯಿಂದ ಗಂಡಾನೆಗಳು, ಅರಣ್ಯದಲ್ಲಿನ ಆಹಾರಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವಿರುವ ಬೆಳೆಗಳ ಮೇಲೆ ದಾಳಿ ಮಾಡಿ ಆಹಾರ ಸೇವಿಸುತ್ತವೆ. ಅನೇಕ ವೇಳೆ ಈ ದಾಳಿ ಅಪಾಯಕಾರಿಯಾದರೂ, ಅದರಿಂದ ದೊರೆಯುವ ವಿಶೇಷ ಪ್ರಯೋಜನದಿಂದಾಗಿ ಗಂಡಾನೆಗಳು ಆ ರಿಸ್ಕ್ ತೆಗೆದುಕೊಳ್ಳುತ್ತವೆ.

ಎರಡನೆಯ ಸಂಶೋಧನೆ ಡಾ. ಅಜಯ್ ದೇಸಾಯಿ ಅವರದು. ಆ ಸಂಶೋಧನೆಯಂತೆ, ಆನೆಗಳ ಆವಾಸದ ನಾಶ ಮತ್ತು ಛಿದ್ರೀಕರಣದ ನೇರ ಪರಿಣಾಮವೇ ಬೆಳೆಗಳ ಮೇಲಿನ ದಾಳಿ. ಆನೆಗಳ ಆವಾಸದಲ್ಲಿ ಆಹಾರ ಸಂಪನ್ಮೂಲದ ಪ್ರಮಾಣ ಕಡಿಮೆಯಾಗಿ, ಸೀಮಿತ ಅರಣ್ಯ ಪ್ರದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಾದಾಗ ಅವು ಬೆಳೆಗಳ ಮೇಲೆ ದಾಳಿ ಮಾಡುತ್ತವೆ. ಮರಿಗಳ ಜವಾಬ್ದಾರಿಯಿರುವ ಹೆಣ್ಣಾನೆಗಳು ತೀರಾ ಅನಿವಾರ್ಯವಾದ ಹೊರತು ಬೆಳೆಗಳ ಮೇಲೆ ದಾಳಿ ಮಾಡುವುದಿಲ್ಲ.

ಅರಣ್ಯಗಳಿಂದ ಹೊರಬರುವ ಆನೆಗಳ ದಾಳಿಯಿಂದಾಗುವ ಬೆಳೆ ಮತ್ತು ಪ್ರಾಣಹಾನಿಯನ್ನು ತಡೆಯಲು ಅರಣ್ಯ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆನೆ ದಾಟಲು ಸಾಧ್ಯವಾಗದಂತಹ ಕಂದಕಗಳು, ಕಲ್ಲುಮಣ್ಣುಗಳ ತಡೆಗೋಡೆ, ತಂತಿಯ ಬೇಲಿ, ಸೌರವಿದ್ಯುತ್ ಬೇಲಿ, ಪುಂಡಾನೆಗಳ ಸ್ಥಳಾಂತರದಂತಹ ಕ್ರಮಗಳು ಬಳಕೆಯಲ್ಲಿವೆ.

ಆನೆಗಳ ಹಾವಳಿಯಿರುವ ಬಹುತೇಕ ಪ್ರದೇಶಗಳಲ್ಲಿ ಸ್ಥಳೀಯ ಜನ ತಮ್ಮದೇ ಆದ ತಂತ್ರಗಳನ್ನು ರೂಪಿಸಿಕೊಂಡಿದ್ದಾರೆ. ಹೊಲಗದ್ದೆಗಳ ಅಂಚಿನಲ್ಲಿ ಜೇನು ಸಾಕುವುದು, ತೀವ್ರ ಘಾಟುಳ್ಳ ದ್ರವ, ಪೇಸ್ಟುಗಳನ್ನು ಹೊಲದ ಅಂಚಿನಲ್ಲಿ ಸವರುವುದು, ಬೇಲಿಯ ಸಮೀಪ ಬಂದೊಡನೆ ಸ್ಫೋಟಿಸುವ ಪಟಾಕಿ, ಸಂಕಷ್ಟದಲ್ಲಿರುವ ಆನೆ ಹೊರಡಿಸುವ ಆರ್ತನಾದವನ್ನು ಧ್ವನಿಮುದ್ರಿಸಿಕೊಂಡು ಆನೆಗಳನ್ನು ಓಡಿಸುವ ಪ್ರಯತ್ನಗಳೂ ನಡೆದಿವೆ. ಆದರೆ ಕಾಲಕ್ರಮೇಣ ಈ ಎಲ್ಲ ಕ್ರಮಗಳೂ ಆನೆಗಳನ್ನು ತಡೆಯುವುದರಲ್ಲಿ ಬಹುತೇಕ ವಿಫಲವಾಗುವುದನ್ನು ಸಂಶೋಧನೆಗಳು ತೋರಿಸಿವೆ.

ರೈಲು ಹಳಿಗಳಿಂದ ನಿರ್ಮಿಸಿದ ಬೇಲಿ ಯಶಸ್ವಿಯಾಗಿದ್ದರೂ ಕಿಲೊಮೀಟರೊಂದಕ್ಕೆ 1.50 ಕೋಟಿ ವೆಚ್ಚವಾಗುವ ಈ ಕ್ರಮ ಬಹು ದುಬಾರಿ. ಕರ್ನಾಟಕದಲ್ಲಿ 641 ಕಿ.ಮೀ. ಉದ್ದಕ್ಕೆ ಇಂತಹ ಬೇಲಿಯನ್ನು ಹಾಕುವ ಕ್ರಮ ಜಾರಿಯಲ್ಲಿದ್ದು, 310 ಕಿ.ಮೀ.ಗಳಿಗೆ ಈಗಾಗಲೇ ರೈಲುಹಳಿಗಳ ಬೇಲಿ ಹಾಕಲಾಗಿದೆ.

ಆನೆಗಳಿಂದಾಗುವ ಬೆಳೆ ಮತ್ತು ಪ್ರಾಣಹಾನಿಯನ್ನು ತಗ್ಗಿಸುವ ಕಾರ್ಯೋಪಾಯಗಳಲ್ಲಿ ಬೇಲಿ ಹಾಕುವ ಕ್ರಮಕ್ಕೆ ಮುಖ್ಯ ಸ್ಥಾನವಿದೆ, ನಿಜ. ಆದರೆ ಅರಣ್ಯದ ಸುತ್ತ ಹೀಗೆ ಹಾಕುವ ಬೇಲಿ ಅರಣ್ಯದಲ್ಲಿ ಆನೆಗಳ ದಟ್ಟಣೆಯನ್ನು ಹೆಚ್ಚಿಸಿ, ಅವುಗಳ ವರ್ತನೆಯಲ್ಲಿ ಬದಲಾವಣೆ ತಂದು, ಎರಡು ಅರಣ್ಯ ಪ್ರದೇಶಗಳ ನಡುವಿನ ಸಂಚಾರಕ್ಕೆ ಅಡ್ಡಿಯುಂಟುಮಾಡಿ, ಸಂಘರ್ಷದ ಪ್ರಕರಣಗಳನ್ನು ಹೆಚ್ಚಿಸಿರುವ ಅನೇಕ ನಿದರ್ಶನಗಳಿವೆ. ‘ಸಂಘರ್ಷ ಮತ್ತು ಆವಾಸಗಳ ನಡುವಿನ ಸಂಪರ್ಕ’ವನ್ನು (ಕಾನ್ಫ್ಲಿಕ್ಟ್ ಆ್ಯಂಡ್ ಕನೆಕ್ಟಿವಿಟಿ) ಎರಡು ಪ್ರತ್ಯೇಕ ಸಂಗತಿಗಳಾಗಿ ಪರಿಗಣಿಸದೆ, ಪರಸ್ಪರ ಸಂಬಂಧಿತ ವಿಷಯಗಳೆಂದು ಪರಿಶೀಲಿಸಿದಾಗ ಮಾತ್ರ ಸಂಘರ್ಷದ ಪ್ರಕರಣಗಳನ್ನು ಕಡಿಮೆ ಮಾಡಬಹುದೆಂಬುದು ಸಂಶೋಧಕರ ಅಭಿಪ್ರಾಯ.

ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಟ್ಟು 6,724 ಚ.ಕಿ.ಮೀ ಪ್ರದೇಶದ ಅರಣ್ಯಗಳನ್ನೊಳಗೊಂಡು, 2002ರಲ್ಲಿ ಅಸ್ತಿತ್ವಕ್ಕೆ ಬಂದ ‘ಮೈಸೂರು ಎಲಿಫೆಂಟ್ ರಿಸರ್ವ್’ ಪ್ರದೇಶದಲ್ಲಿ, ಗುವಾಹಟಿ ಮೂಲದ ‘ಕನ್ಸರ್ವೇಶನ್ ಇನಿಶಿಯೇಟಿವ್’ ಸಂಸ್ಥೆ ನಡೆಸಿರುವ ಅಧ್ಯಯನಗಳಿಂದ ಅನೇಕ ಉಪಯುಕ್ತ ಮಾಹಿತಿ ದೊರೆತಿದೆ. ಕಾನ್ಫ್ಲಿಕ್ಟ್ ಮತ್ತು ಕನೆಕ್ಟಿವಿಟಿಗಳನ್ನು ಪರಸ್ಪರ ಸಂಬಂಧಿತ ಸಂಗತಿಗಳೆಂದು ಪರಿಗಣಿಸಿ, ಅಧ್ಯಯನದ ಪ್ರದೇಶದಲ್ಲಿ ಸಂಘರ್ಷದ ಸಮಸ್ಯೆಯನ್ನು ಎದುರಿಸುತ್ತಿರುವ 9,100 ರೈತರನ್ನು ಸಂದರ್ಶಿಸಿ, ಸಂಘರ್ಷದ ಸಮಸ್ಯೆಯನ್ನು ಎದುರಿಸಲು ವಿಶೇಷ ಮಾದರಿಯನ್ನು ಈ ಸಂಸ್ಥೆ ರೂಪಿಸಿದೆ. ಆನೆಗಳ ಓಡಾಟ ಮತ್ತು ಸಂಘರ್ಷದ ಪ್ರಮಾಣವನ್ನು ಆಧರಿಸಿ, ಅಧ್ಯಯನದ ಅರಣ್ಯ ಪ್ರದೇಶದಲ್ಲಿ, ಹೆಚ್ಚಿನ ಓಡಾಟ- ಕಡಿಮೆ ಸಂಘರ್ಷ (ಹೈ ಮೂವ್ಮೆಂಟ್- ಲೋ ಕಾನ್ಫ್ಲಿಕ್ಟ್), ಕಡಿಮೆ ಓಡಾಟ- ಕಡಿಮೆ ಸಂಘರ್ಷ, ಕಡಿಮೆ ಓಡಾಟ- ಹೆಚ್ಚಿನ ಸಂಘರ್ಷ ಮತ್ತು ಹೆಚ್ಚಿನ ಓಡಾಟ- ಹೆಚ್ಚಿನ ಸಂಘರ್ಷಗಳೆಂಬ ನಾಲ್ಕು ವಿವಿಧ ಪ್ರದೇಶಗಳನ್ನು ಗುರುತಿಸಿ, ನಕ್ಷೆಗಳನ್ನು ಸಿದ್ಧಪಡಿಸಿ, ಇಂತಹ ಪ್ರತಿಯೊಂದು ಪ್ರದೇಶಕ್ಕೂ ಆವಾಸಗಳ ನಡುವಿನ ಸಂಚಾರಕ್ಕೆ ತೊಂದರೆಯಾಗದಂತೆ ಸಂಘರ್ಷವನ್ನು ತಗ್ಗಿಸುವ ಪ್ರತ್ಯೇಕ ಕಾರ್ಯೋಪಾಯಗಳನ್ನು ಸಂಶೋಧಕರು ಸೂಚಿಸಿದ್ದಾರೆ.

ಆನೆಗಳಿಂದ ಆಗುವ ಪ್ರಾಣಹಾನಿಯನ್ನು ತಡೆಯುವ ಯಶಸ್ವಿ ಪ್ರಯೋಗದ ಅತ್ಯುತ್ತಮ ನಿದರ್ಶನ ತಮಿಳುನಾಡಿನ ಅಣ್ಣಾಮಲೈ ಘಟ್ಟ ಶ್ರೇಣಿಯ ವಾಲ್ಪರೈ ಪ್ರಸ್ಥಭೂಮಿಯಲ್ಲಿ ನಮಗೆ ದೊರೆಯುತ್ತದೆ. 220 ಚದರ ಕಿ.ಮೀ ವಿಸ್ತೀರ್ಣದ ಈ ಪ್ರದೇಶದಲ್ಲಿ ಟೀ ಮತ್ತು ಕಾಫಿ ಪ್ಲಾಂಟೇಶನ್ಗಳು, ಛಿದ್ರೀಕರಣಗೊಂಡ 40 ಮಳೆಕಾಡಿನ ಭಾಗಗಳ ಜೊತೆಗೆ 70,000 ಪ್ಲಾಂಟೇಶನ್ ಕಾರ್ಮಿಕರಿದ್ದಾರೆ. ಯಾವುದೇ ಸಮಯದಲ್ಲಿ ಸರಾಸರಿ 120 ಆನೆಗಳಿರುವ ಈ ಪ್ರದೇಶದಲ್ಲಿ ಆನೆಗಳ ದಾಳಿ ತಪ್ಪಿದ್ದೇ ಇಲ್ಲ. 1994- 2019ರ ಅವಧಿಯಲ್ಲಿ 45 ಸಾವುಗಳಾಗಿದ್ದ ಈ ಪ್ರದೇಶದಲ್ಲಿ, 2017- 19ರ ಅವಧಿಯಲ್ಲಿ ಒಂದೇ ಒಂದು ಸಾವೂ ಸಂಭವಿಸಿಲ್ಲ. ಈ ಯಶಸ್ಸಿನ ಹಿಂದಿರುವುದು ‘ನೇಚರ್ ಕನ್ಸರ್ವೇಶನ್ ಫೌಂಡೇಶನ್’ ಸಂಸ್ಥೆ, ತಮಿಳುನಾಡು ಅರಣ್ಯ ಇಲಾಖೆ, ಟೀ ಮತ್ತು ಕಾಫಿ ಪ್ಲಾಂಟೇಶನ್ ಕಂಪನಿಗಳು, ಪ್ಲಾಂಟೇಶನ್ ಕಾರ್ಮಿಕರು ಮತ್ತು ಸ್ಥಳೀಯ ಅರಣ್ಯವಾಸಿಗಳ ಸಂಘಟಿತ ಪ್ರಯತ್ನಗಳ ಮೂಲಕವಾಗಿ ಅಸ್ತಿತ್ವಕ್ಕೆ ಬಂದಿರುವ ‘ಎಲಿಫೆಂಟ್ ಇನ್ಫರ್ಮೇಶನ್ ನೆಟ್ವರ್ಕ್’ನ ನಿರಂತರ ಶ್ರಮದಿಂದ.

ಈ ವ್ಯವಸ್ಥೆಯ ಮೂಲ ಘಟಕ ‘ಕಾನ್ಫ್ಲಿಕ್ಟ್ ರೆಸ್ಪಾನ್ಸ್ ಯುನಿಟ್’ ತಂಡ. ಜಿಪಿಎಸ್ ಸೌಲಭ್ಯದಿಂದ ಸಜ್ಜಾದ, ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯ ಗುಡ್ಡಗಾಡು ಸಮುದಾಯದ ಸದಸ್ಯರನ್ನು ಒಳಗೊಂಡ ಈ ತಂಡ ದಿನವಿಡೀ ಆನೆಗಳ ಗುಂಪನ್ನು ಹಿಂಬಾಲಿಸಿ, ಅವು ಇರುವ ಜಾಗ, ಆನೆಗಳ ಸಂಖ್ಯೆ, ಚಲಿಸುತ್ತಿರುವ ದಿಕ್ಕು, ಗುಂಪಿನ ರಚನೆಯಂತಹ ಮಾಹಿತಿಯನ್ನು ‘ಆನೆ ಮಾಹಿತಿ ಕೇಂದ್ರ’ಕ್ಕೆ ಒದಗಿಸುತ್ತದೆ. ಈ ಮಾಹಿತಿಯನ್ನು ಸಂಸ್ಕರಿಸಿದ ಕೇಂದ್ರ, ಸೂಕ್ತ ಮುನ್ಸೂಚನಾ ಎಚ್ಚರಿಕೆಯನ್ನು, ಕೇಂದ್ರದಲ್ಲಿ ನೋಂದಣಿಯಾಗಿರುವ ಕಾರ್ಮಿಕರ 4,500 ಮೊಬೈಲ್ ಫೋನ್ಗಳಿಗೆ ಎಸ್ಎಮ್ಎಸ್ ಮೂಲಕ ಒದಗಿಸುತ್ತದೆ. ಆನೆಗಳು ಎರಡು ಕಿ.ಮೀ ದೂರದಲ್ಲಿರುವಾಗಲೇ ಈ ಎಚ್ಚರಿಕೆ ಜನರಿಗೆ ದೊರೆಯುತ್ತದೆ. ಅದೇ ಸಮಯದಲ್ಲಿ ಅರಣ್ಯ ಸಿಬ್ಬಂದಿಗೂ ಮಾಹಿತಿ ಒದಗುತ್ತದೆ. ಇದರ ಜೊತೆಗೆ ವಾಲ್ಪರೈ ಪ್ರದೇಶದ 32 ಸೂಕ್ಷ್ಮ ಜಾಗಗಳಲ್ಲಿ, ಎತ್ತರದ ಕಂಬಗಳ ಮೇಲೆ ಕೆಂಪು ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದ್ದು, ಆನೆಗಳ ಸಂಚಾರದ ಮಾಹಿತಿ ದೊರೆತ ಕೂಡಲೇ ಈ ದೀಪಗಳು ಮಿಂಚಿ ಜನರನ್ನು ಎಚ್ಚರಿಸುತ್ತವೆ. ಪ್ರಾಣಹಾನಿ ಶೂನ್ಯವಾಗಿರುವುದರ ಜೊತೆಗೆ ಆಸ್ತಿಹಾನಿಯ ಪ್ರಮಾಣ ಶೇ 50ರಷ್ಟು ಕಡಿಮೆಯಾಗಿರುವ ವರದಿಗಳಿವೆ.

2017ರ ಅಕ್ಟೋಬರ್ನಷ್ಟು ಹಿಂದೆಯೇ ಇದೇ ವಿಧಾನವನ್ನು ಬಳಸಿ, ಹಾಸನ ಜಿಲ್ಲೆಯಲ್ಲಿ ಅರಣ್ಯ ಸಮೀಪದ 35,000 ಜನರಿಗೆ ಮೊಬೈಲ್ ಮೂಲಕ ಎಚ್ಚರಿಕೆ ರವಾನಿಸಿದ ಪ್ರಯತ್ನ ನಮ್ಮಲ್ಲೂ ನಡೆದಿದೆ. ಕೊಡಗು ಅರಣ್ಯ ಇಲಾಖೆಗೂ ಈ ಅನುಭವವಿದ್ದು, ಈ ವರ್ಷದ ಫೆಬ್ರುವರಿಯಿಂದ ಮುನ್ನೆಚ್ಚರಿಕೆ ನೀಡುವ ಹೊಸ ತಂತ್ರಜ್ಞಾನವೊಂದರ ಬಳಕೆ ಪ್ರಾರಂಭವಾಗಿದೆ.

ಮಾನವ- ವನ್ಯಜೀವಿ ಸಂಘರ್ಷದ ನಿರ್ವಹಣೆ ಬರೀ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಕೃಷಿ, ತೋಟಗಾರಿಕೆ, ವಿಮಾ ಕಂಪನಿಗಳು, ಭೂ ಬಳಕೆಯ ಯೋಜನಾ ತಜ್ಞರು, ವನ್ಯಜೀವಿ ವಿಜ್ಞಾನಿಗಳು, ಸ್ಥಳೀಯ ರೈತ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಯಿದ್ದು, ಪ್ರಬಲ ರಾಜಕೀಯ ಇಚ್ಛಾಶಕ್ತಿಯಿದ್ದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.