ಸಮಾಜವಾದಿ ತತ್ವಚಿಂತಕ ಮತ್ತು ನಾಯಕ ಡಾ. ರಾಮಮನೋಹರ ಲೋಹಿಯಾ ಅವರ 107ನೇ ಹುಟ್ಟಿದ ದಿನದ (1910 ಮಾರ್ಚ್ 23) ಸಂದರ್ಭದಲ್ಲಿ, ಅವರು ಪ್ರಜಾತಂತ್ರದ ಕುರಿತು ನಡೆಸಿದ ಚಿಂತನೆ ಮತ್ತು ಹೋರಾಟದ ಒಂದು ಸ್ಥೂಲಾವಲೋಕನವನ್ನು ಮಾಡುವುದು ಈ ಬರಹದ ಉದ್ದೇಶ. ಇಂದು ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಪ್ರಜಾತಂತ್ರಕ್ಕೆ ಬಂದೊದಗಿದ ವಿಪತ್ತು ಮತ್ತು ಅದರ ಭವಿಷ್ಯದ ಕುರಿತು ವ್ಯಕ್ತಗೊಳ್ಳುತ್ತಿರುವ ಆತಂಕಗಳ ಹಿನ್ನೆಲೆಯಲ್ಲಿ, ಲೋಹಿಯಾರ ಪ್ರಜಾತಂತ್ರದ ಕುರಿತಾದ ಕಾಳಜಿಗಳು ಅತ್ಯಂತ ಮಹತ್ವಪೂರ್ಣವಾದದ್ದೆಂದು ನಾನು ತಿಳಿಯುತ್ತೇನೆ.

ಲೋಹಿಯಾರ ಅತ್ಯಂತ ಸಂಕೀರ್ಣವಾದ ರಾಜಕೀಯ ಚಿಂತನೆಯ ಜಾಲದಲ್ಲಿ ಕನಿಷ್ಠ ಮೂರು ಪ್ರಮುಖ ಎಳೆಗಳನ್ನು ಗುರುತಿಸಬಹುದು. ಅವುಗಳಲ್ಲಿ ಮೊದಲನೆಯದು, ರಾಷ್ಟ್ರ, ರಾಷ್ಟ್ರೀಯತೆ ಹಾಗೂ ರಾಷ್ಟ್ರವಾದಗಳಿಗೆ ಸಂಬಂಧಿಸಿದ ಅವರ ವಿಮರ್ಶಾತ್ಮಕ ದೃಷ್ಟಿ. ಎರಡನೆಯದು, ಅತ್ಯಂತ ಪ್ರಖರವಾದ ಸ್ವಾತಂತ್ರ್ಯದ ಕಲ್ಪನೆಯಲ್ಲಿ ರೂಪು ತಳೆದ ಅವರ ಪ್ರಜಾತಾಂತ್ರಿಕ ನೋಟ ಹಾಗೂ ಮೂರನೆಯದು, ವಸಾಹತುಶಾಹಿ ಉತ್ಪಾದಿಸಿದ ಐರೋಪ್ಯ ಕೇಂದ್ರಿತ ಜ್ಞಾನಮೀಮಾಂಸೆಗೆ ಎದುರಾಗಿ ಅವರು ಮಂಡಿಸಿದ ಸಮಾಜವಾದಿ ದರ್ಶನ.

ತಮ್ಮ ರಾಜಕೀಯ ಬದುಕಿನುದ್ದಕ್ಕೂ ಈ ಮೂರು ಪ್ರಮುಖ ಎಳೆಗಳನ್ನು ಲೋಹಿಯಾ ವಿಮರ್ಶೆಗೆ ಒಳಪಡಿಸುತ್ತಾ, ಪರಿಷ್ಕರಿಸುತ್ತಾ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಮರುನಿರ್ವಚಿಸುತ್ತಾ ಬಂದಿದ್ದಾರೆ. ಪರಸ್ಪರಾವಲಂಬಿಯಾದ ಅವರ ಚಿಂತನೆಯ ಈ ಮೂರು ಎಳೆಗಳ ಆಳದಲ್ಲಿ, ವಸಾಹತುಶಾಹಿ ಸೃಷ್ಟಿಸಿದ ಬೌದ್ಧಿಕ ಅವಲಂಬನೆಯ ವಿರುದ್ಧದ ಸಾಂಸ್ಕೃತಿಕ ಅನನ್ಯತೆಯ ಪರವಾದ ಅಭಿಲಾಷೆ ಪುಟಿದೇಳುತ್ತದೆ.

ಬಹುಶಃ ಆಧುನಿಕ ಭಾರತದಲ್ಲಿ ಪ್ರಜಾತಂತ್ರದ ತಾತ್ವಿಕ ಸ್ವರೂಪಕ್ಕೆ ಸಂಬಂಧಪಟ್ಟಂತೆ ಲೋಹಿಯಾರಷ್ಟು ಪ್ರಖರವಾಗಿ ಚಿಂತನೆ ನಡೆಸಿದವರು ಅತಿ ವಿರಳವೆನ್ನಬಹುದು. ಲೋಹಿಯಾ ಅತ್ಯಂತ ಕ್ರಾಂತಿಕಾರಿಯಾದ ಹಾಗೂ ಮೂಲ ಜಿಜ್ಞಾಸಿಕವಾದ ಪ್ರಜಾತಾಂತ್ರಿಕ ಅಭಿಲಾಷೆಗಳನ್ನು ಪ್ರತಿನಿಧಿಸುತ್ತಾರೆ. ಅವರ ಸಮಾಜವಾದಿ ಪುನರ್ ನಿರ್ಮಾಣದ ಕಲ್ಪನೆ ಸಾಕಾರಗೊಳ್ಳುವುದೇ ಒಂದು ವ್ಯಾಪಕವಾದ, ವಿಶ್ವರೂಪಿಯಾದ ಪ್ರಜಾತಂತ್ರದ ತಾತ್ವಿಕ ಅಡಿಪಾಯದಲ್ಲಿ. ಪ್ರಜಾತಂತ್ರವನ್ನು ಲೋಹಿಯಾ ಕೇವಲ ಒಂದು ರಾಜಕೀಯ ವ್ಯವಸ್ಥೆಯಾಗಿ ಪರಿಕಲ್ಪಿಸಲಿಲ್ಲ.

ಅವರಿಗೆ ಅದು ಒಂದು ಜೀವನ ದೃಷ್ಟಿ ಮತ್ತು ಬದುಕಿನ ಮಾರ್ಗ. ಇಡೀ ಸಮಾಜದ ಒಳಿತು ಕ್ರಿಯಾಶೀಲವಾಗಿ ಸಾರ್ವಜನಿಕ ನಿಷ್ಕರ್ಷೆಯ ಮೂಲಕ ಮತ್ತು ಸ್ವತಂತ್ರ ವಿಚಾರಗಳ ಬೆಳಕಿನಲ್ಲಿ ನಿರೂಪಿತವಾಗಬೇಕು ಎಂದು ಪ್ರತಿಪಾದಿಸುವ ಪ್ರಜಾತಂತ್ರದ ತೆರೆದ ಅಂಚಿನ ಲೋಕದೃಷ್ಟಿ ಲೋಹಿಯಾರ ಸ್ವಾತಂತ್ರ್ಯಪ್ರಿಯತೆ ಹಾಗೂ ಸಮಾನತೆಯ ಆಕಾಂಕ್ಷೆಗೆ ಅತ್ಯಂತ ಹಾರ್ದಿಕವಾಗಿ ಕಾಣಿಸಿಕೊಳ್ಳುತ್ತದೆ. ಈ ಬಗೆಯ ಸಮಾನತೆಯ ಆಧಾರದ ಹಾಗೂ ಸ್ವಾತಂತ್ರ್ಯಪ್ರಿಯತೆಯ ವಿಶ್ವದೃಷ್ಟಿಯಲ್ಲಿ ಮೂಡಿಬರುವ ಪ್ರಜಾತಂತ್ರದ ರಾಜಕೀಯ ಕಾರ್ಯತಂತ್ರದ ಎಲ್ಲಾ ಸಾಧ್ಯತೆಗಳನ್ನು ಹಾಗೂ ಇತಿಮಿತಿಗಳನ್ನು ಲೋಹಿಯಾ ತಮ್ಮ ಚಿಂತನೆಯಲ್ಲಿ ಗ್ರಹಿಸಲು ಪ್ರಯತ್ನಿಸುತ್ತಾರೆ.

ಬಹುಮುಖ್ಯವಾದ ಅಂಶವೆಂದರೆ, ಪ್ರಜಾತಂತ್ರ ಕುರಿತಾದ ಲೋಹಿಯಾರ ತಾತ್ವಿಕ ದೃಷ್ಟಿ ಮೊಳಕೆಯೊಡೆಯುವುದು ಹಾಗೂ ರೂಪ ತಳೆಯುವುದು ಅವರು ಫ್ಯಾಸಿವಾದ ಅನ್ನುವ ಅತ್ಯಂತ ಸಂಕೀರ್ಣವಾದ ಮತ್ತು ಭೀಕರವಾದ ಸೈದ್ಧಾಂತಿಕ ವಿದ್ಯಮಾನವನ್ನು ಎದುರಾದ ಹಿನ್ನೆಲೆಯಲ್ಲಿ. ತಮ್ಮ ಉನ್ನತ ಶಿಕ್ಷಣಕ್ಕಾಗಿ ಅವರು 1929ರಿಂದ 1934ರ ತನಕ ಜರ್ಮನಿಯಲ್ಲಿ ಕಳೆದ ಐದು ಮಹತ್ವದ ವರ್ಷಗಳು ಅವರನ್ನು ಪ್ರಜಾತಂತ್ರದ ತಾತ್ವಿಕ ಸ್ವರೂಪದ ಹುಡುಕಾಟವನ್ನು ನಡೆಸುವಂತೆ ಮಾಡಿದವು. ಲೋಹಿಯಾ ಜರ್ಮನಿಯಲ್ಲಿ ಕಳೆದ ದಿನಗಳು ಹಿಟ್ಲರ್ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಚಾರಿತ್ರಿಕ ಕಾಲಘಟ್ಟವೇ ಆಗಿತ್ತು. ತನ್ನ ಭಾವಾವೇಶದ ರಾಷ್ಟ್ರೀಯತೆಯ ಮೂಲಕ ಜರ್ಮನಿಗೆ ಕಳೆದುಹೋದ ವೈಭವವನ್ನು ಮತ್ತೆ ದೊರಕಿಸುವ ಭರವಸೆಯನ್ನು ಹಾಗೂ ಒಂದು ವರ್ಣಮಯವಾದ ಭವಿಷ್ಯವನ್ನು ಜರ್ಮನ್ನರ ಮುಂದೆ ಹಿಟ್ಲರ್ ಇರಿಸಿದ. ಫ್ಯಾಸಿವಾದದ ಅಥವಾ ನಾಜಿವಾದದ ಯಾರೂ ತಡೆಹಿಡಿಯಲಾಗದ ಮುನ್ನಡೆಯ ಆ ಕಾಲಘಟ್ಟದಲ್ಲಿ ಪ್ರಜಾತಂತ್ರಕ್ಕೆ ಒದಗಿ ಬರುವ ಅಪಾಯಗಳನ್ನು ಲೋಹಿಯಾ ಮನಗಂಡರು. ಅಂತೆಯೇ, ಅದರ ತಾತ್ವಿಕ ಸ್ವರೂಪದ ನಿಷ್ಕರ್ಷೆಯಲ್ಲಿಯೂ ಅವರು ತೊಡಗಿದರು.

ಲೋಹಿಯಾ ಫ್ಯಾಸಿವಾದದ ಅತ್ಯುತ್ತಮ ವಿಮರ್ಶಕರಲ್ಲಿ ಒಬ್ಬರು ಎನ್ನುವುದನ್ನು ಇಲ್ಲಿ ವಿಶೇಷವಾಗಿ ಹೇಳಬೇಕಾಗಿದೆ ಮತ್ತು ಅವರ ಈ ಫ್ಯಾಸಿವಾದದ ವಿಮರ್ಶೆಯಿಂದಲೇ ಪ್ರಜಾತಂತ್ರದ ತಾತ್ವಿಕ ಅರಿವು ರೂಪ ಪಡೆಯುತ್ತದೆ. ರಾಷ್ಟ್ರವಾದದ ಭಾವಾವೇಶದಲ್ಲಿ ಹೇಗೆ ಪ್ರಜಾತಂತ್ರ ಬಹುಸಂಖ್ಯಾಕವಾದವಾಗುತ್ತದೆ (ಮೆಜಾರಿಟೇರಿಯನಿಸಂ) ಹಾಗೂ ಈ ಬಹುಸಂಖ್ಯಾಕತೆ ಹೇಗೆ ಅಲ್ಪಸಂಖ್ಯಾಕತೆಯ ಅಸ್ತಿತ್ವವನ್ನು ಮತ್ತು ಅಸ್ಮಿತೆಯನ್ನು ನಿರಾಕರಿಸುತ್ತದೆ ಎನ್ನುವ ಸತ್ಯವನ್ನು ಲೋಹಿಯಾ ಜರ್ಮನಿಯ ಫ್ಯಾಸಿವಾದದ ಪರಿಪ್ರೇಕ್ಷದಲ್ಲಿ ಕಂಡುಕೊಂಡರು. ಪ್ರಜಾತಂತ್ರ ಬಹುಸಂಖ್ಯಾಕವಾದವಾಗಿ ವಿರೂಪಗೊಳ್ಳುವ ಪ್ರಕ್ರಿಯೆಯೇ ಫ್ಯಾಸಿವಾದದ ಉಗಮಕ್ಕೆ ಕಾರಣವಾಗುತ್ತದೆ ಮತ್ತು ಫ್ಯಾಸಿವಾದ ನಿರ್ದಯವಾಗಿ ಅಲ್ಪಸಂಖ್ಯಾಕತನವನ್ನು ಒಂದೋ ಬದಿಗೆ ಸರಿಸುತ್ತದೆ ಇಲ್ಲ ಅನಾಥಗೊಳಿಸುತ್ತದೆ ಅಥವಾ ಅಳಿಸಿ ಹಾಕುತ್ತದೆ ಎನ್ನುವ ಭೀಕರ ಸತ್ಯದ ಅರಿವು ಲೋಹಿಯಾರನ್ನು ಪ್ರಜಾತಂತ್ರದ ಕುರಿತು ಆಳವಾದ ತಾತ್ವಿಕ ಚಿಂತನೆಯನ್ನು ನಡೆಸುವಂತೆ ಪ್ರೇರೇಪಿಸುತ್ತದೆ.

ಜೀವನ ದೃಷ್ಟಿಯಾಗಿ ಹಾಗೂ ರಾಜಕೀಯ ವ್ಯವಸ್ಥೆಯಾಗಿ ಪ್ರಜಾತಂತ್ರ ಸಂಕೀರ್ಣವಾದ ವಿದ್ಯಮಾನವಾಗಿದೆ. ಜೀವನ ದೃಷ್ಟಿಯಾಗಿ ಅದು ಸಾಮುದಾಯಿಕ ನಿಷ್ಕರ್ಷೆಯ ಮೂಲಕ ರೂಪ ಪಡೆಯುವ ಚಲನಶೀಲ ಸತ್ಯದ ಪ್ರತಿಪಾದನೆಯನ್ನು ಮಾಡಿದರೆ, ರಾಜಕೀಯ ವ್ಯವಸ್ಥೆಯಾಗಿ ಅದು ಈ ಚಲನಶೀಲ ಸತ್ಯದ ಸಾಧನೆಗೆ ಮತ್ತು ನಿರ್ವಹಣೆಗೆ ಅಗತ್ಯವಿರುವ ಅತ್ಯಂತ ಕ್ಲಿಷ್ಟವಾದ, ಸುದೀರ್ಘವಾದ ಹಾಗೂ ತ್ರಾಸದಾಯಕವಾದ ನೀತಿ ನಿಯಮಗಳ ಮತ್ತು ಸಂಘ ಸಂಸ್ಥೆಗಳ ಜಾಲವನ್ನು ಪರಿಕಲ್ಪಿಸುತ್ತದೆ. ಆದ್ದರಿಂದಲೇ, ಪ್ರಜಾತಂತ್ರ ಕಲ್ಪನೆಯಲ್ಲಿ ನವಿರಾದ ಆದರೆ ಕಾರ್ಯಶೀಲತೆಯಲ್ಲಿ ಕಷ್ಟಕರವಾದ ವಿದ್ಯಮಾನವಾಗಿದೆ.

ಈ ಅರಿವು ಲೋಹಿಯಾರ ಪ್ರಜಾತಂತ್ರದ ತಾತ್ವಿಕ ಗ್ರಹಿಕೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗಾಗಿ, ಪ್ರಜಾತಂತ್ರ ಮುಂದಿರಿಸುವ ಗತಿಶೀಲವಾದ ಸತ್ಯದ ಪ್ರತಿಪಾದನೆಗೆ ಅಗತ್ಯವಿರುವ ಸಂಕೀರ್ಣವಾದ ರಾಜಕೀಯ ವ್ಯವಸ್ಥೆಯ ರೂಪುರೇಷೆಗಳ ಕುರಿತು ಮತ್ತು ವಿಧಿವಿಧಾನಗಳ ಬಗ್ಗೆ ಲೋಹಿಯಾ ಅಪಾರವಾದ ಬೌದ್ಧಿಕ ಪರಿಶ್ರಮವನ್ನು ವಹಿಸಿದ್ದಾರೆ. ನಾಗರಿಕ ಸ್ವಾತಂತ್ರ್ಯ, ಪ್ರಜಾತಾಂತ್ರಿಕ ಹಕ್ಕುಗಳು, ಸಕ್ರಿಯ ಪೌರತ್ವ, ಅಧಿಕಾರದ ವಿಕೇಂದ್ರೀಕರಣ, ಸಾರ್ವಜನಿಕ ಕ್ರಿಯಾಶೀಲತೆಗೆ ಆದ್ಯತೆ, ಪಕ್ಷಗಳ ಒಳಗಿನ ಪ್ರಜಾತಂತ್ರ ಮತ್ತು ಪಾರದರ್ಶಕತೆ, ಅಲ್ಪಸಂಖ್ಯಾತರ ಹಿತಸಂರಕ್ಷಣೆ, ಸರ್ಕಾರಿ ಸಂಸ್ಥೆಗಳ ಜವಾಬ್ದಾರಿತನ ಇವು ಪ್ರಜಾತಂತ್ರದ ಪರಿಣಾಮಕಾರಿ ಅನುಷ್ಠಾನಕ್ಕೆ ಲೋಹಿಯಾ ನಡೆಸಿದ ಚಿಂತನೆಯ ವಿನ್ಯಾಸಗಳು.

ಫ್ಯಾಸಿವಾದದ ಭೀಕರತೆಯ ಅರಿವಿನಲ್ಲಿ ಅಭಿವ್ಯಕ್ತಗೊಂಡ ಲೋಹಿಯಾರ ಪ್ರಜಾತಂತ್ರದ ತಾತ್ವಿಕತೆ ಭಾರತದ ಸ್ವಾತಂತ್ರ್ಯ ಹೋರಾಟದ ಕರ್ಷಣೆಯಲ್ಲಿ ಮತ್ತು ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದ ಘರ್ಷಣೆಯಲ್ಲಿ ಪರಿಪಕ್ವಗೊಂಡಿತು. ಸ್ವತಂತ್ರ ಭಾರತದಲ್ಲಿ ಸಮಾಜವಾದಿ ಹೋರಾಟದ ನಾಯಕರಾಗಿ ಮತ್ತು ತತ್ವ ಪ್ರತಿಪಾದಕರಾಗಿ ಲೋಹಿಯಾ ಚಿಂತನೆಯಲ್ಲಿ ಮೂಲಜಿಜ್ಞಾಸಿಕವಾದ ಹಾಗೂ ಕ್ರಿಯಾಚರಣೆಯಲ್ಲಿ ಕ್ರಾಂತಿಕಾರಕವಾದ ಪ್ರಜಾತಂತ್ರದ ಸಾಧನೆಗಾಗಿ ಪರಿಶ್ರಮಿಸಿದ್ದಾರೆ. ಅವರ ಪ್ರಜಾತಂತ್ರ ಭಾರತೀಯ ಸಮಾಜವನ್ನು ಅಸಮಾನವಾಗಿ ವಿಭಜಿಸಿದ ಜಾತಿ, ವರ್ಗ, ಲಿಂಗ, ಭಾಷೆ ಮತ್ತು ಪ್ರಾದೇಶಿಕತೆಗಳ ಅರಿವಿನಲ್ಲಿ ವ್ಯಕ್ತಗೊಂಡಿತು. ಸಮಾನತೆ ಮತ್ತು ಸಾಮಾಜಿಕ ನ್ಯಾಯ ಲೋಹಿಯಾರ ಪ್ರಜಾತಂತ್ರದ ಎರಡು ಪ್ರಮುಖ ನೆಲೆಗಳು.

ಭಾರತದ ರಾಜಕೀಯ ಬದುಕಿನಲ್ಲಿ ರಾರಾಜಿಸುವ ಅಸತ್ಯವಂತಿಕೆ, ಎಡಬಿಡಂಗಿತನ ಹಾಗೂ ನೈತಿಕ ಮೌಲ್ಯಗಳ ಸಂಪೂರ್ಣ ನಿರ್ಲಕ್ಷ್ಯದ ವಿರುದ್ಧವಾಗಿ ಪ್ರಜಾತಾಂತ್ರಿಕ ಆಶಯಗಳನ್ನು ಪ್ರತಿನಿಧಿಸುವ ಕ್ರಿಯಾಶೀಲ ಸಾರ್ವಜನಿಕ ವಲಯದ ನಿರ್ಮಾಣಕ್ಕಾಗಿ ಅವರು ಪ್ರಯತ್ನಿಸಿದರು. ರಾಜಕೀಯ ನಾಯಕತ್ವದ ಬೌದ್ಧಿಕ ದಿವಾಳಿಕೋರತನ ಹಾಗೂ ದೂರದರ್ಶಿತ್ವದ ಕೊರತೆಯನ್ನು ಅವರು ಕಟುವಾಗಿ ವಿಮರ್ಶಿಸಿದರು. ಅಲ್ಪಕಾಲೀನ ಚುನಾವಣಾ ಲಾಭಕ್ಕಾಗಿ ಮತಿಹೀನ ಸಂಧಾನಗಳನ್ನು ನಡೆಸುವ ರಾಜಕೀಯ ಪಕ್ಷಗಳ ಸಿದ್ಧಾಂತ ಶೂನ್ಯತೆಯನ್ನು ಅವರು ಅಸಹನೆಯಿಂದ ಖಂಡಿಸಿದರು. ಎಲ್ಲ ಬಗೆಯ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಅಧಿಕಾರಶಾಹಿಯ ವಿರುದ್ಧ ಪ್ರಜಾತಾಂತ್ರಿಕ ಆಶೋತ್ತರಗಳ ನೆಲೆಯಲ್ಲಿ ಜನರನ್ನು ಅವರು ಸಂಘಟಿಸಿದರು. ವಸಾಹತು ಆಳ್ವಿಕೆಯ ನಂತರವೂ ವಸಾಹತುಶಾಹಿಯ ಬೌದ್ಧಿಕ ಗುಲಾಮಗಿರಿಗೆ ಶರಣಾದ ಮಧ್ಯಮವರ್ಗದ ಅಲ್ಪಮತಿಗಳನ್ನು ಅವರು ತಿರಸ್ಕರಿಸಿದರು. ಜಾತಿ ವಿನಾಶ, ಲಿಂಗ ಸಮಾನತೆ ಹಾಗೂ ದೇಶ ಭಾಷೆಗಳ ಮರುಸಂಘಟನೆಯ ಆಧಾರದಲ್ಲಿ ಸಮಾಜವಾದಿ ನವನಿರ್ಮಾಣದ ಮೂಲಜಿಜ್ಞಾಸಿಕ ಪ್ರಜಾತಂತ್ರದ ಕಾರ್ಯಸೂಚಿಯೊಂದನ್ನು ಲೋಹಿಯಾ ಭಾರತದ ಜನರ ಮುಂದಿರಿಸಿದರು.

ಲೋಹಿಯಾರ ಪ್ರಜಾತಂತ್ರದ ಇಂದಿನ ಮಹತ್ವವೇನು? ಈ ಪ್ರಶ್ನೆಗೆ ನೇರ ಉತ್ತರವಿಲ್ಲ. ಭಾರತದ ರಾಜಕಾರಣದಿಂದ ಲೋಹಿಯಾ ಕಣ್ಮರೆಯಾಗಿ ಐವತ್ತು ವರ್ಷಗಳು ಸಂದಿವೆ. ಭಾರತೀಯ ಸಮಾಜ ಮತ್ತು ರಾಜಕಾರಣ ಇಂದು ಲೋಹಿಯಾ ಬದುಕಿದ ಕಾಲಘಟ್ಟಕ್ಕಿಂತ ಸಂಪೂರ್ಣವಾಗಿ ಮಾರ್ಪಾಡುಗೊಂಡಿದೆ. ಭೂಮಂಡಲೀಕರಣ ಎನ್ನುವ ವ್ಯಾಪಕವಾದ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿದ್ಯಮಾನವೊಂದು ಭಾರತೀಯ ಸಮಾಜವನ್ನು ಮತ್ತು ಇಡೀ ಜಗತ್ತನ್ನು ಮೂಲೋತ್ಕಟನಕ್ಕೆ ಒಳಪಡಿಸಿದೆ. ಈ ಸಂಪೂರ್ಣವಾಗಿ ಬೇರೆಯಾದ ಕಾಲಘಟ್ಟದಲ್ಲಿ ಲೋಹಿಯಾರಂಥವರು ಪ್ರತಿಪಾದಿಸಿದ ತಾತ್ವಿಕ ರಾಜಕಾರಣಕ್ಕೆ ಯಾವ ಮಹತ್ವವೂ ಇಲ್ಲವೆಂದು ಹೊರನೋಟಕ್ಕೆ ಅನಿಸುತ್ತದೆ. ಹಾಗಿದ್ದೂ, ಕಾಲಕ್ಕೆ ಒಂದು ನಿರಂತರತೆ ಇದೆ ಎಂದು ತಿಳಿಯುವುದಾದ ಪಕ್ಷದಲ್ಲಿ ವರ್ತಮಾನದ ಅರ್ಥವನ್ನು ಗತಿಸಿಹೋದ ಕಾಲದ ನೆಲೆಯಿಂದ ಗ್ರಹಿಸಿದಾಗ ಮಾತ್ರ ಮಾನವಿಕವಾದ ಭವಿಷ್ಯವೊಂದನ್ನು ಆಶಾವಾದದಲ್ಲಿ ಕಲ್ಪಿಸಲು ಸಾಧ್ಯವಾಗಬಹುದು.

ಈ ನಿಟ್ಟಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಮತ್ತು ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದ ಸಂಘರ್ಷದ ಮಹತ್ವದ ಅಧ್ಯಾಯಗಳನ್ನು, ಚಿಂತನೆಗಳನ್ನು ಹಾಗೂ ಚಿಂತಕರನ್ನು ವರ್ತಮಾನದಲ್ಲಿ ನಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ಅರ್ಥದಲ್ಲಿ ಭಾರತದ ಪ್ರಜಾತಂತ್ರವನ್ನು ಪರಿಕಲ್ಪಿಸಿದ ಹಾಗೂ ಅದರ ಕ್ರಿಯಾಚರಣೆಗೆ ಸೂಕ್ತವಾದ ನೀತಿನಿಯಮಗಳನ್ನು ಮತ್ತು ಸಂಘ ಸಂಸ್ಥೆಗಳನ್ನು ರೂಪಿಸಿದ ಎಲ್ಲ ಮಹಾನುಭಾವರನ್ನು ನಾವು ವಿಮರ್ಶಾತ್ಮಕವಾಗಿ ನೆನೆಯಬೇಕಾಗುತ್ತದೆ. ಇಂತಹ ಒಂದು ಪಟ್ಟಿಯಲ್ಲಿ ಲೋಹಿಯಾರ ಹೆಸರು ಮುಖ್ಯವಾದದ್ದು ಎಂದು ನಾನು ತಿಳಿಯುತ್ತೇನೆ. ಇಡೀ ವಿಶ್ವ ಪ್ರಜಾತಂತ್ರದ ಒಂದು ಭೀಕರವಾದ ಸಂಕಟದ ಅಸಹಾಯ ಸ್ಥಿತಿಯನ್ನು ಎದುರಿಸುತ್ತಿದೆ. ಪ್ರಜಾಸತ್ತೆಗೆ ಒದಗಿದ ಈ ಭೀಕರ ಸಂಕಟ ಅನೇಕ ರೂಪಗಳಲ್ಲಿ ನಮ್ಮ ಕಣ್ಣ ಮುಂದಿದೆ.

ತೀರ ಅಮಾನವೀಯಗೊಳ್ಳುತ್ತಿರುವ ಹಾಗೂ ಮಾರುಕಟ್ಟೆಯಾಗಿ ಪರಿವರ್ತಿತವಾಗುತ್ತಿರುವ ಜಗತ್ತು ಮತ್ತು ಮಾನವ ಸಂಬಂಧಗಳು, ಅನುಭೋಗ ಸಂಸ್ಕೃತಿಯ ಮಿತಿಮೀರಿದ ಆಧಿಪತ್ಯ, ಹಿಂಸಾತ್ಮಕವಾಗಿ ವ್ಯಕ್ತಗೊಳ್ಳುತ್ತಿರುವ ಜನಾಂಗೀಯ ಹಾಗೂ ಸಾಮುದಾಯಿಕ ಅಸ್ಮಿತೆಗಳು, ಹದ್ದು ಮೀರಿದ ಭಾವಾವೇಶದ ರಾಷ್ಟ್ರವಾದಿ ಅಧಿಕಾರಶಾಹಿ ಧ್ವನಿಗಳು, ಅಸಹಾಯಕರ ಅಥವಾ ಬದಿಗೆ ಸರಿಸಿಕೊಂಡವರ ನಿರ್ದಯ ದಮನ, ಮಾನವೀಯತೆಯ ಸೋಂಕೇ ಇಲ್ಲದ ಅಭಿವೃದ್ಧಿಯ ಅಟ್ಟಹಾಸ ಇವೆಲ್ಲವೂ ಪ್ರಜಾತಂತ್ರದ ಸಂಕಟದ ವಿವಿಧ ದೃಶ್ಯಗಳು.

ಇವೆಲ್ಲವಕ್ಕೆ ನೇರವಾದ ಸಮಾಧಾನ ಅಥವಾ ಪರಿಹಾರ ಲೋಹಿಯಾರ ಪ್ರಜಾತಂತ್ರದಲ್ಲಿ ಇದೆ ಎಂದು ಹೇಳುವುದು ನನ್ನ ಉದ್ದೇಶವಲ್ಲ. ಬದಲಾಗಿ, ಲೋಹಿಯಾ ಪ್ರಜಾತಂತ್ರದ ಕುರಿತಾಗಿ ತೋರಿಸಿದ ಅಧ್ಯಯನಶೀಲತೆ ನಮ್ಮ ಅರಿವಿನಲ್ಲಿದೆ. ಅಂತೆಯೇ, ಅವರು ಪ್ರಜಾತಂತ್ರದ ಉಳಿವಿಗಾಗಿ ನಡೆಸಿದ ಹೋರಾಟದ ಪಾಠಗಳು ನಮ್ಮ ಜೊತೆಗಿವೆ. ಅವರ ಈ ಚಿಂತನೆ ಹಾಗೂ ಸಾಧನೆಗಳ ಎಳೆಗಳನ್ನು ಅರಿವಿಗೆ ತಂದುಕೊಂಡು ಈ ದೇಶದ ಹಾಗೂ ವಿಶ್ವದ ಪ್ರಜಾತಂತ್ರದ ಸಂಕಟವನ್ನು ಹೆಚ್ಚು ಸ್ಪಷ್ಟವಾಗಿ ಅರಿತುಕೊಳ್ಳಲು ನಮಗೆ ಸಾಧ್ಯವಾಗಬಹುದು ಮತ್ತು ಈ ಅರಿವು ಪ್ರಜಾತಂತ್ರದ ಪುನರುಜ್ಜೀವನಕ್ಕೆ ಎಡೆಮಾಡಿಕೊಡಬಹುದು ಎನ್ನುವುದು ನಿರಾಶೆಯ ಅಸಂಖ್ಯಾತ ಸುಳಿಗಳ ನಡುವಿನ ನನ್ನ ಆಶಾವಾದ.

ಲೇಖಕ: ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.