ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಸಾಮೂಹಿಕ ಚುನಾವಣೆ

Published : 24 ಸೆಪ್ಟೆಂಬರ್ 2024, 18:48 IST
Last Updated : 24 ಸೆಪ್ಟೆಂಬರ್ 2024, 18:48 IST
ಫಾಲೋ ಮಾಡಿ
Comments

‘ಒಂದು ದೇಶ, ಒಂದು ಚುನಾವಣೆ ಎಂಬುದು ಒಂದೇ ಮದ್ವೆ ಊಟದ ಖರ್ಚಿನಲ್ಲಿ ಹತ್ತಾರು ಮದುವೆ ಮಾಡಿ ಮುಗಿಸುವ ಸಾಮೂಹಿಕ ವಿವಾಹದಂತೆ ಅಲ್ವೇನ್ರೀ?’ ಸುಮಿ ಕೇಳಿದಳು.

‘ಹೌದು, ಪಂಚಾಯಿತಿಯಿಂದ ಪಾರ್ಲಿಮೆಂಟ್‍ವರೆಗಿನ ಎಲ್ಲಾ ಚುನಾವಣೆಗಳನ್ನು ಒಂದೇ ಬಾರಿಗೆ ನಡೆಸಿದರೆ ಖರ್ಚು, ರಿಸ್ಕು ಕಮ್ಮಿಯಂತೆ. ಸಾಮೂಹಿಕ ಚುನಾವಣೆ ಎನ್ನುವುದು ಒಂದೇ ಕಲ್ಲಿನಲ್ಲಿ ಹತ್ತಾರು ಹಕ್ಕಿ ಹೊಡೆಯುವ ಜಾಣತನವಂತೆ!’ ಅಂದ ಶಂಕ್ರಿ.

‘ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ಪದ್ಧತಿ ಉತ್ತಮ’.

‘ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಪರೀಕ್ಷೆಗಳನ್ನು ಒಮ್ಮೆಗೇ ನಡೆಸುವ ಸಾಮೂಹಿಕ ಪರೀಕ್ಷಾ ಪದ್ಧತಿ ಜಾರಿಯಾಗಬಹುದು’.

‘ಪರೀಕ್ಷೆಯಲ್ಲಿ ಒಂದು ಕೊಶ್ಚನ್ ಪೇಪರ್‌ಗೇ ಉತ್ತರ ಬರೆಯಲು ಮಕ್ಕಳು ಕಣ್ಣುಬಾಯಿ ಬಿಡುತ್ತವೆ. ಮತಗಟ್ಟೆಯಲ್ಲಿ ಒಮ್ಮೆಗೇ ಹಲವು ಅಭ್ಯರ್ಥಿಗಳ ಹಣೆಬರಹ ಬರೆಯಬೇಕಾದ ಮತದಾರರಿಗೆ ಗೊಂದಲ ಆಗಿಬಿಡೋದಿಲ್ವೇ?’

‘ಶಾಲಾ ಮಕ್ಕಳು ಐದಾರು ಸಬ್ಜೆಕ್ಟ್‌ಗಳನ್ನು ಓದಿ ಪರೀಕ್ಷೆ ಬರೆದು ಪಾಸಾಗ್ತಾರೆ, ನಾವು ಹಿರಿಯರು ಮತಯಂತ್ರದ ಗುಂಡಿಗಳನ್ನು
ಒತ್ತಲು ಹೆದರಿದರೆ ಚುನಾವಣೆ ಫೇಲಾಗಿಬಿಡುತ್ತದೆ’.

‘ಪೋಲಿಂಗ್ ಪರ್ಸೆಂಟೇಜ್ 50-60 ಬಂದರೆ ಸಾಕೆ? ಎಲೆಕ್ಷನ್ ಡಿಸ್ಟಿಂಕ್ಷನ್‍ನಲ್ಲಿ ಪಾಸಾಗಬೇಕು’.

‘ಪರೀಕ್ಷೆಯಲ್ಲಿ ಫೇಲಾದವರು ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸಾಗಬಹುದು, ಮತದಾನಕ್ಕೆ ಗೈರಾದವರಿಗೆ ಸಪ್ಲಿಮೆಂಟರಿ ಅವಕಾಶವಿಲ್ಲ’.

‘ರಾಜಕೀಯ ರಗಳೆಯಿಂದ ಈಗಿನ ಚುನಾವಣೆಗಳು ಯುದ್ಧಗಳಂತಾಗಿವೆ, ಮತ ಕ್ಷೇತ್ರಗಳು ರಣರಂಗಗಳಾಗಿವೆ. ಪೊಲೀಸ್ ಕಾವಲು ಭೇದಿಸಿ, ಐ.ಡಿ. ಕಾರ್ಡ್ ತೋರಿಸಿ ಮತದಾನ ಮಾಡುವ ಪರಿಸ್ಥಿತಿ ಜನರಲ್ಲಿ ಜುಗುಪ್ಸೆ ತಂದಿರಬಹುದು. ಇಂಥಾ ರಗಳೆಗಳಿಲ್ಲದ ಸರಳ, ಸಹಜ ಚುನಾವಣೆ ನಡೆಯಬೇಕು’.

‘ಒಂದು ದೇಶ– ಒಂದು ಪಕ್ಷ– ಒಬ್ಬ ಅಭ್ಯರ್ಥಿ ಎನ್ನುವ ಪದ್ಧತಿ ಜಾರಿಗೆ ತಂದು ಅವಿರೋಧ ಆಯ್ಕೆ ಮಾಡಿ, ಖರ್ಚು, ಕಷ್ಟವಿಲ್ಲದೆ ಸರಳವಾಗಿ ಚುನಾವಣೆ ಮುಗಿಸಬಹುದಷ್ಟೇ...’ ಅಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT