ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಎಲ್ಲೆಲ್ಲೂ ಬಿಪಿಎಲ್ಲು!

Published 12 ಜುಲೈ 2024, 23:26 IST
Last Updated 12 ಜುಲೈ 2024, 23:26 IST
ಅಕ್ಷರ ಗಾತ್ರ

‘ನಮ್ ಕರುನಾಡಿನ ಬಡವರ ಸಂಖ್ಯೆಗೂ ಬಿಪಿಎಲ್ ಕಾರ್ಡು ನಂಬ್ರುಗೂ ಟ್ಯಾಲಿ ಆಯ್ತಿಲ್ಲ ಅಂತ ಸಿಎಂ ತಲೆ ಕೆಡುಸ್ಕಂಡವ್ರಂತೆ’ ಸಿಬಿರೆಬ್ಬಿದ ಗುದ್ಲಿಂಗ.

‘ಓದ್ಸಾರಿಯರ‍್ದು 40 ಪರ್ಸೆಂಟು, ಈ ಸಾರಿದು 40 ಪರ್ಸೆಂಟು ಅಂದ್ರೂ ಇನ್ನೂ ಬಡವರು 80 ಪರ್ಸೆಂಟ್ ಎಂಗಾಯ್ತದೆ’ ಎಂದ ಮಾಲಿಂಗ.

‘ಹೂ ಕಣ್ಲಾ, ಬಡತನದ ರೇಖೆಗಿಂತ ಕೆಳಗಿರ‍್ಬೇಕು ಅಂತ ನೀ ಮುಂದು ತಾ ಮುಂದು ಅಂತ ಜನ ಕಾರ್ಡು ಮಾಡಿಸ್ಕಂಡವ್ರೆ’.

‘ಇದು ತಪ್ಪಲ್ವಾ? ಇಂಗ್ ಉಳ್ಳೋರೂ ಬಿಪಿಎಲ್ ಕಾರ್ಡು ಮಾಡುಸ್ಕಂಡ್ರೆ ನಿಜವಾದ ಬಡುವ್ರುಗೆ ಅನ್ಯಾಯ ಮಾಡ್ದಂಗಲ್ವಾ?’

‘ಯಾವುದ್ಲಾ ಅನ್ಯಾಯ? ಈಗ ನೋಡು ಗಂಡ ದುಡ್ದಿದ್ದೆಲ್ಲಾ ಹೆಂಡತಿ ಕಿತ್ಕೊತಾಳೆ. ಗಂಡ ಬಡವನಾಗೇ ಉಳಿದವ್ನೆ. ಹೆಂಡತಿ ಇದ್ದಬದ್ದ ದುಡ್ನೆಲ್ಲಾ ಒಡವೆ, ವಸ್ತು ಅಂತ ಆಕಿ ಆಗತ್ಯವಸ್ತು ಕೊಂಡ್ಕಳೋ ಶಕ್ತಿ ಇಲ್ದಂಗಾಗದೆ. ಇನ್ನು ಕೆಲವು ಮಕ್ಕಳು ಪಾಕೆಟ್ ಮನಿ, ಲಾಕೆಟ್ ಮನಿ ಅಂತ ಅಪ್ಪನ ಎಲ್ಲಾ ಕೆಟ್ ಮನಿ ತಗಂಡು ಕೆಟ್ ಕೆರ ಇಡ್ದು ಓಗಿರ‍್ತಾವೆ. ಅಂದಮ್ಯಾಗೆ ಇಡೀ ಕುಟುಂಬ ಬಡತನದ ರೇಖೆ ಕೆಳಗೇ ಇದ್ದಂಗಾಗ್ಲಿಲ್ವಾ?’

‘ನೀನು ಏನೇ ಯೋಳು, ಐಶಾರಾಮಿ ವಸ್ತು ಮನೆ ಒಳಗೆ, ಮಣಗಟ್ಲೆ ಚಿನ್ನ ಹೆಂಡ್ತಿ ಕೊರಳಿಗೆ, ಸಾಲು ವಾಹನಗಳು ಮನೆ ಹೊರಗೆ, ನಾವ್‌ ಬಡತನ ರೇಖೆಗಿಂತ ತೀರಾ ಕೆಳಗೆ ಅನ್ನೋದು ತಪ್ಪಲ್ವೇನ್ಲಾ?’

‘ಎಂಗ್ ತಪ್ ಆಯ್ತದೆ? ಮನೆ, ಫ್ಯಾನು, ಫ್ರಿಜ್ಜು, ಕಾರು, ಸ್ಕೂಟ್ರು ಎಲ್ರದರ ಮೇಲೂ ಸಾಲ ಇರ‍್ತದಲ್ಲ’.

‘ಹೌದೌದು, ಈ ಚೀಟಿ ಪಾಟಿ ಅಂತ ಆಕ್ಕಂಡು ಉಂಡೆನಾಮ ತಿಕ್ಕುಸ್ಕೊಂಡರ‍್ತೀವಿ...’

‘ಊ ಕಣ್ ಬಿಡಪ್ಪ, ಆಮೇಲೆ ಈ ಕೋಟಿಗಟ್ಲೆ ಸಾಲ ತಕಂಡು ಬ್ಯಾಂಕಿಗೆ ಪಂಗನಾಮ ಹಾಕಿ ಓಡ್ ಓಗಿರ‍್ತಾರಲ್ಲ ದೊಡ್ ಮನುಷ್ಯರು, ಅವರ ಸಾಲ ಎಲ್ಲ ನಮ್ ತಲೆ ಮೇಲೆ ಬತ್ತದಲ್ಲ’.

‘ಬಡವನ ಕೋಪ ದವಡೆಗೆ ಮೂಲ ಅಂತ ಯೋಳಿಲ್ವಾ? ಯಾರ‍್ಮೇಲೆ ಸಿಟ್ಕಬೇಕು? ಬಡವಾ ನೀ ಮಡಗಿದಂಗಿರು ಅಂತ ಅಂಗೇ ಬಡವರಾಗೇ ಉಳ್ಕಂಡ್ ಬುಟ್ಟವ್ರೆ’ ಎಂದ ಪರ್ಮೇಶಿ. ನಿಜ ನಿಜ ಎಂದು ತಲೆಯಾಡಿಸಿ ಎಲ್ಲಾ ‘ಲಾಂಗ್ ಲಿವ್ ಬಿಪಿಎಲ್’ ಎಂದು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT