ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಕಿರುನಿದ್ರಾಸನ

Published 21 ಜುಲೈ 2024, 23:53 IST
Last Updated 21 ಜುಲೈ 2024, 23:53 IST
ಅಕ್ಷರ ಗಾತ್ರ

‘ಮಧ್ಯಾಹ್ನ ಊಟ ಆದ್ಮೇಲೆ ಕಿರುನಿದ್ದೆ ಮಾಡಾಕೆ ನನಗೆ ಒಂದು ವಿಶೇಷ ಆಸನ ಬೇಕು, ಇವತ್ತೇ ಆರ್ಡರ್‌ ಮಾಡು’ ಎಂದು ಬೆಕ್ಕಣ್ಣ ದುಂಬಾಲು ಬಿದ್ದಿತ್ತು.

‘ಕುಂತಲ್ಲೇ ತೂಕಡಿಸ್ತೀಯ ನೀ, ಅಂತಾದ್ರಾಗೆ ಕಿರುನಿದ್ದೆಗೆ ವಿಶೇಷ ಆಸನ ಎದಕ್ಕ ಬೇಕಲೇ?’

‘ಹಂಗೆ ಕುಂತಲ್ಲಿ ತೂಕಡಿಸಿ, ಕತ್ತು ಆಕಡಿಗಿ ಈಕಡಿಗಿ ವಾಲಾಡಿ ಕುತ್ತಿಗೆ ನೋವು ಬರತೈತಿ, ಕುಂತಲ್ಲೇ ತೂಕಡಿಸಬಾರದು ಅಂತ ಆರ್ಥೋಪೆಡಿಕ್‌ ಡಾಕ್ಟ್ರು ಹೇಳ್ಯಾರೆ. ನನಗೆ ವಿಶೇಷ ಆಸನ ತರಿಸಿಕೊಡು’ ಮತ್ತೆ ಅದೇ ವರಾತ.

‘ಅಷ್ಟ್‌ ನಿದ್ದೆ ಬಂದರೆ ಮಂಚದ ಮ್ಯಾಲೆ ಮಲಕ್ಕೋ, ವಿಶೇಷ ಆಸನ ಎದಕ್ಕ ಬೇಕು?’ ಎಂದು ಬೈದೆ.

‘ನಮ್ ಮಾರ್ಜಾಲ ಅಧಿವೇಶನ ನಡೆದಾಗ, ಮಧ್ಯಾಹ್ನ ಊಟ ಆದಮ್ಯಾಗೆ ಹಂಗೆಲ್ಲ ದೀರ್ಘನಿದ್ರೆ ಮಾಡಂಗಿಲ್ಲ. ವಿಧಾನಸಭೆ ಒಳಗೆ ಶಾಸಕರಿಗೆ ಊಟದ ನಂತರದ ಕಿರುನಿದ್ರೆಗೆ ವಿಶೇಷ ಆಸನ ಮಾಡತೀವಿ ಅಂತ ಖಾದರ್‌ ಅಂಕಲ್ಲು ಹೇಳ್ಯಾರೆ. ಅವರು ಎಷ್ಟು ದಿಲ್‌ದಾರ್‌ ಅದಾರೆ… ನೀ ನೋಡಿದರೆ ಎಷ್ಟರ ಜಿಪುಣಿ ಇದ್ದೀ’ ಮೂತಿ ಉಬ್ಬಿಸಿದ ಬೆಕ್ಕಣ್ಣ ಸುದ್ದಿಯನ್ನೂ ತೋರಿಸಿತು.

‘ಶಾಸಕರಿಗೆ ಸಂಬಳ ಅಲ್ಲದೇ ಹತ್ತಾರು ಭತ್ಯೆ ಸೇರಿದರೆ ತಿಂಗಳಿಗೆ ಎರಡೂವರೆ ಲಕ್ಷ ರೂಪಾಯಿ ಬರತೈತಿ. ಅಷ್ಟ್‌ ರೊಕ್ಕ ತಗಂಡವ್ರು ಛಲೋತ್ನಾಗೆ ಕೆಲಸ ಮಾಡೂದು ಬಿಟ್ಟು ಸದನದಾಗೆ ಕಿರುನಿದ್ರೆ ಮಾಡೂದೇನು? ಶಾಸಕರು ಅಧಿವೇಶನಕ್ಕೆ ಮುಂಜಾನೆ ಲಗೂನೆ ಬರಲಿ ಅಂತ ಬಿಸಿತಿಂಡಿ ವ್ಯವಸ್ಥೆನೂ ಮಾಡಿದ್ರು. ಶಾಸಕರ ಅಟೆಂಡೆನ್ಸ್‌ ಹೆಚ್ಚಾಗಲಂತ ಪಾಪ ಖಾದರ್‌ ಅಂಕಲ್ಲು ಎಷ್ಟ್‌ ಪ್ರಯತ್ನ ಮಾಡತಾರೆ’.

‘ಕೆಲವು ಶಾಸಕರು ಊಟ ಆದಮ್ಯಾಗೆ ಜರಾ ನಿದ್ದಿ ಮಾಡಿಬರತೀವಿ ಅಂತ ಶಾಸಕರ ಭವನಕ್ಕೆ ಹೋದವರು ವಾಪಸು ಬರಂಗಿಲ್ಲಂತ. ಅದಕ್ಕೇ ವಿಶೇಷ ಆಸನದ ವ್ಯವಸ್ಥೆ ಮಾಡ್ತಾರಂತೆ. ಬೆಳಗ್ಗೆ ಶಾಸಕರೆಲ್ಲ ಬಂದಮ್ಯಾಗೆ ಸದನದ ಬಾಗಿಲು ಮುಚ್ಚಿ, ಸಂಜಿತನಾ ತೆಗಿಯಂಗಿಲ್ಲ ಅನ್ನೂದೊಂದು ಬಾಕಿ ಉಳದೈತಿ!’ ಎಂದು ಬೆಕ್ಕಣ್ಣ ಕಿಸಕ್ಕನೆ ನಕ್ಕಿತು.

...
...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT