ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಚರ್ಚೆ: ಮಂಡಿಯೂರಿ ತುತ್ತೂರಿ ಊದಿದ ಕಸಿವಿಸಿ

Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ
ಸಾಹಿತಿಗಳು ಈ ಪ್ರಮಾಣದಲ್ಲಿ ಸ್ಥಾನ–ಸಂಗದ ಚಪಲದಲ್ಲಿ ಚಡಪಡಿಸುತ್ತಿದ್ದರೆ ಇದರ ಗಂಧ ಗಾಳಿಯೂ ಇಲ್ಲದ ರಾಜಕಾರಣಿಗೆ ಏನನಿಸಬೇಡ? ಶಿವಕುಮಾರರು ಒರಟು ಹೇಳಿಕೆ ಮೂಲಕ ಅನಾವರಣಗೊಳಿಸಿದ್ದು ಈ ವಾಸ್ತವವನ್ನು. ಆದರೆ, ಅವರು ಇದೇ ಸಮಯದಲ್ಲಿ ಸಾಹಿತ್ಯ ಸಂಸ್ಕೃತಿ ಬಗ್ಗೆ ಲವಲೇಶ ಅರಿವಿಲ್ಲದ ರಾಜಕಾರಣಿ ಎಂತಹ ಅಪಾಯಕಾರಿ ಮನಃಸ್ಥಿತಿಯಲ್ಲಿರುತ್ತಾನೆ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ.

ಕರ್ನಾಟಕ ಘನ ಸರ್ಕಾರದ ಉಪಮುಖ್ಯಮಂತ್ರಿಯೂ ಆಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‌ ಕಚೇರಿಯಲ್ಲಿ ನಡೆಸಿದ ಸಭೆ ಈಗ ಅವರ ಕತ್ತಿಗೆ ಹೆಬ್ಬಾವಿನಂತೆ ಸುತ್ತಿಕೊಂಡಿದೆ. ಇದನ್ನು ಶಿವಕುಮಾರರ ಸ್ವಭಾವ ದೋಷ ಎಂಬಂತೆ ಬಿಂಬಿಸುವುದು ಸರಳೀಕರಣ. ಆಳುವ ಪಕ್ಷ ಪಿಸುಮಾತಲ್ಲಿ ಹೇಳುವುದನ್ನು ಅವರು ಒರಟು (ಕ್ರೂಡ್) ನುಡಿಗಟ್ಟಿನಲ್ಲಿ ಹೇಳಿದ್ದಾರೆ.

ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದವರು ಮತ್ತು ಪ್ರಭುತ್ವದ ಸಂಬಂಧದ ಬಗ್ಗೆ ಇರುವ ನೈತಿಕ ಶೀಲದ ಲಕ್ಷ್ಮಣ ರೇಖೆ ಈಗ ಮತ್ತೊಮ್ಮೆ ಹೆಡೆ ಎತ್ತಿದೆ.

‘ಕವಿಗಳು ಜಗತ್ತಿನ ಅಘೋಷಿತ ಶಾಸಕರು’ ಎಂದು ಶೆಲ್ಲಿ 19ನೇ ಶತಮಾನದಲ್ಲಿ ಘೋಷಿಸಿದ್ದ. ಈ ಸೆಟೆವ ಬಗೆಗೊಂದು ಇತಿಹಾಸವಿದೆ. ಅಲೆಕ್ಸಾಂಡರ್‌ ತನ್ನ ಕಾಲದ ಖ್ಯಾತ ತತ್ವಶಾಸ್ತ್ರಜ್ಞನಲ್ಲಿ ಹೋಗಿ , ‘ನನ್ನಿಂದ ಏನು ಸಹಾಯ ಬೇಕು , ಹೇಳಿ’ ಎಂದನಂತೆ. ಓದುತ್ತಾ ಕೂತಿದ್ದ ಆ ತತ್ವಜ್ಞ, ‘ಸ್ವಲ್ಪ ಆಕಡೆ ನಿಲ್ಲು ಅಷ್ಟು ಸಾಕು, ನೀನು ಸೂರ್ಯನ ಬೆಳಕಿಗೆ ಅಡ್ಡ ನಿಂತಿದೀಯಾ’ ಎಂದನಂತೆ.

ಶೆಲ್ಲಿಯ ಸ್ಫೂರ್ತಿಯನ್ನೇ ಮುಂದೊತ್ತಿ ಕುವೆಂಪು ಅವರು ರಾಜಕಾರಣದ ಹುಸಿ ದೌಲಿಗೆ ಝಾಡಿಸಿ ಬರೆದದ್ದನ್ನು ಶಿವಕುಮಾರ್ ಆದಿಯಾಗಿ ನಮ್ಮ ರಾಜಕಾರಣಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು

‘ಅಖಂಡ ಕರ್ನಾಟಕ/ ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ/ ಇಂದು ಬಂದು ನಾಳೆ ಸಂದು / ಹೋಹ ಸಚಿವ ಮಂಡಲ... ನೃಪತುಂಗನೇ ಚಕ್ರವರ್ತಿ/ ಪಂಪನಲ್ಲಿ ಮುಖ್ಯಮಂತ್ರಿ/ ರನ್ನ ಜನ್ನ ನಾಗವರ್ಮ/ ರಾಘವಾಂಕ ಹರಿಹರ/ ಬಸವೇಶ್ವರ ನಾರಣಪ್ಪ/ ಸರ್ವಜ್ಞ ಷಡಕ್ಷರ/ ಸರಸ್ವತಿಯೆ ರಚಿಸಿದೊಂದು/ ನಿತ್ಯ ಸಚಿವ ಮಂಡಲ... ಎಂದು ಹೇಳುವ ಕುವೆಂಪುರವರು, ನಾಡಿಗೆ ಯಾರೆಲ್ಲ ಶ್ರೇಷ್ಠರು ಎಂದು ನಿದರ್ಶನಗಳನ್ನು ನೀಡುತ್ತಾರೆ.

ಅರಸರ ಸ್ತುತಿ ಗೀತೆ ಬರೆಯಲು ಕುವೆಂಪು ನಿರಾಕರಿಸಿದ್ದೂ ಜನಜನಿತ.

ಅಧಿಕಾರ ಕೇಂದ್ರದ ಜೊತೆ ಸಾಹಿತಿಯ ಸಂಬಂಧದ ವಿನ್ಯಾಸದ ಬಗ್ಗೆ ಇದು ಹೇಳುತ್ತದೆ. ಆದರೆ ಇಂಥಾ ಕತೆಗಳ ಸಂಖ್ಯೆ ಕಡಿಮೆ ಎಂಬುದನ್ನು ನಾವು ಮರೆಯಬಾರದು.

ರಾಜರ ಆಶ್ರಯದಲ್ಲಿ ಸಾರ್ಥಕ್ಯ ಕಂಡ ಕವಿಗಳ ಗುಂಪೇ ಜಗತ್ತಿನಾದ್ಯಂತ ಇದೆ... ‘ಪೊಯೆಟ್‌ ಲಾರೆಟ್‌’ ಎಂಬ ಹುದ್ದೆ ಇಂಗ್ಲೆಂಡಿನಲ್ಲಿತ್ತು. ಉಳಿದೆಡೆಯೂ ಇತ್ತು. ಇದರಾಚೆಗೆ ಜನರ ನಡುವೆಯೇ ಇದ್ದು ರಾಜ ಸಮ್ಮಾನಕ್ಕೆ ಲಜ್ಜೆಪಟ್ಟು ದೂರವಿದ್ದವರ ಘನತೆಯನ್ನು ಹೇಗೆ ಗ್ರಹಿಸಬೇಕು?

ಕೇರಳದಲ್ಲಿ ರಾಜನೊಬ್ಬ ಕವಿಗಳಿಗೆ ಇನಾಮು ಕೊಡುತ್ತಾನೆ ಎಂದು ಒಬ್ಬ ಆಸ್ಥಾನಕ್ಕೆ ಹೋಗಿ ‘ಕವನ ವಾಚಿಸಲೇ’ ಎಂದು ಕೇಳಿದನಂತೆ. ರಾಜ ಠೀವಿಯಲ್ಲಿ ಒಪ್ಪಿಗೆ ಕೊಟ್ಟ.

ಕವಿ ಪುಂಗವ, ‘ದೀಪಸ್ತಂಭಂ ಮಹಾಶ್ಚರ್ಯಂ…’ ಎಂಬ ಸಾಲು ಓದಿದ್ದೇ ರಾಜ, ‘ಅದರಲ್ಲೇನಿದೆ ಆಶ್ಚರ್ಯ?’ ಎಂದು ಕೇಳಿದನಂತೆ. ಈ ಅಕ್ಷರ ದಾರಿದ್ರ್ಯದ ಕವಿ ಉಗುಳು ನುಂಗಿ, ಎರಡನೇ ಸಾಲು ಓದಿದನಂತೆ

‌‘ಎನಕ್ಕುಂ ಕಿಟ್ಟಣಂ ಪಣಂ’ ಅಂದರೆ ‘ಜೀಯಾ ನನಗೆ ಕಾಸು ಬೇಕು’ ಎಂದು ಕವಿ ಪ್ರಾಮಾಣಿಕವಾಗಿ ಉಸುರಿದನಂತೆ.

ಇಲ್ಲಿಯೂ ಈಗ ‘ಎನಕ್ಕುಂ ಕಿಟ್ಟಣಂ ಪಣಂ ಸ್ಥಾನಂ...’ (ನನಗೂ ಬೇಕು ಹಣ ಮತ್ತು ಸ್ಥಾನ) ಎಂದು ಉರು ಹಚ್ಚುವುದನ್ನು ನಾವು ಕೇಳಿಸಿಕೊಳ್ಳುತ್ತಿದ್ದೇವೆ.

ಬಲಪಂಥೀಯ ಎಂದು ಕರೆಯುವ ಕೋಮು ಪೂರ್ವಗ್ರಹ, ಹುಸಿ ಶ್ರೇಷ್ಠತೆಯ ಅಮಲಿನ ಸಿದ್ಧಾಂತಕ್ಕೆ ಅಬ್ಬರದ ಕೊರಳಾಗುವ ಕವಿ, ಲೇಖಕರ ಬಗ್ಗೆ ನಾವಿಲ್ಲಿ ಮಾತಾಡುತ್ತಿಲ್ಲ. ಯಾಕೆಂದರೆ ಅದಕ್ಕೆ ಬೌದ್ಧಿಕ ಸಮರ್ಥನೆಯೂ ಇಲ್ಲ. ಅದು ಕೇವಲ ಪೂರ್ವಗ್ರಹ, ಹುಸಿ ವಿತಂಡ ಸಿದ್ಧಾಂತದ ವಿಸ್ತರಣೆ ಅಷ್ಟೆ. ಅಂಥವರೆಲ್ಲಾ ರಾಜ್ಯದಲ್ಲಿ, ಕೇಂದ್ರದಲ್ಲಿ ದಕ್ಷಿಣೆ ದಾನ ಸಮೇತ ಕೃತಾರ್ಥರಾಗುತ್ತಿರುವುದು ನಮಗೆ ವೇದ್ಯ.

ಬಹುತೇಕ ಆಕ್ಷೇಪವಿರುವುದು ಜನಪರವೆಂದು ಬಗೆಯುವ, ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಕಕ್ಕುಲಾತಿ ತೋರುವ ಬರಹಗಾರರು ಬಿಜೆಪಿಯೇತರ ಸರ್ಕಾರ ಬಂದಾಗ ಇನ್ನು ಹತ್ತಿರಾ ಹೋಗುವ ಬಗೆಯ ಬಗ್ಗೆ. ಇದು ನೈತಿಕ ಶೀಲದ ಲಕ್ಷ್ಮಣ ರೇಖೆಯ ಪ್ರಶ್ನೆ.

ಅಕಾಡೆಮಿ, ಮತ್ತಿತರ ಸದಸ್ಯತ್ವಗಳನ್ನು ಸ್ವರ್ಗೋಪಮ ಸ್ಥಾನವೆಂದು ಬಗೆದು ಅದಕ್ಕಾಗಿ ಹೋರಾಡುತ್ತಿರುವುದನ್ನು ಕಂಡರೆ ಚೋದ್ಯವಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಹೀಗೆ ಸದಸ್ಯರಾದವರ ಹೆಸರು ನೆನಪಿದೆಯಾ ಎಂದು ಕೇಳಿ ನೋಡಿ. ಜಿಕೆ ( general knowledge) ಯಲ್ಲೂ ಅದು ನಮೂದಾಗಿಲ್ಲ. ಹೋಗಲಿ ಅಕಾಡೆಮಿ ಪ್ರಶಸ್ತಿ ಪಡೆದ ಹತ್ತು ಕೃತಿಗಳನ್ನು ಹೆಸರಿಸಿ ಎಂದು ಕೇಳಿ ನೋಡಿ.

ಈ ಚಪಲ ಇಷ್ಟೇಕೆ ಹಬ್ಬಿತು; ಸಾಹಿತಿಗಳು ಈ ಪ್ರಮಾಣದಲ್ಲಿ ಸ್ಥಾನ–ಸಂಗದ ಚಪಲದಲ್ಲಿ ಚಡಪಡಿಸುತ್ತಿದ್ದರೆ ಇದರ ಗಂಧ ಗಾಳಿಯೂ ಇಲ್ಲದ ರಾಜಕಾರಣಿಗೆ ಏನನಿಸಬೇಡ? ಶಿವಕುಮಾರರು ಒರಟು (ಕ್ರೂಡ್) ಹೇಳಿಕೆ ಮೂಲಕ ಅನಾವರಣಗೊಳಿಸಿದ್ದು ಈ ವಾಸ್ತವವನ್ನು. ಆದರೆ, ಅವರು ಇದೇ ಸಮಯದಲ್ಲಿ ಸಾಹಿತ್ಯ ಸಂಸ್ಕೃತಿ ಬಗ್ಗೆ ಲವಲೇಶ ಅರಿವಿಲ್ಲದ ರಾಜಕಾರಣಿ ಎಂತಹ ಅಪಾಯಕಾರಿ ಮನಃಸ್ಥಿತಿಯಲ್ಲಿರುತ್ತಾನೆ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ರಾಜಕೀಯ ಧುರೀಣರಿಗೆ ಸಾಹಿತಿ ಕಲಾವಿದರ ಬಗ್ಗೆ ಅಪಾರ ಗೌರವವಿತ್ತು. ನಮ್ಮನ್ನು ಎಚ್ಚರಿಸುವ, ಮುನ್ನಡೆಸುವ ಶಕ್ತಿ ಇವರು ಎಂಬ ಎಚ್ಚರದ ಆದರ ಅವರಿಗಿತ್ತು. ಕನ್ನಡದ ಹಿರಿಯ ಲೇಖಕರ ಜೊತೆ ಹಳೆ ತಲೆಮಾರಿನ ರಾಜಕಾರಣಿಗಳ ಫೋಟೋಗಳಲ್ಲಿ ಕಾಣಿಸಿದ್ದ ‘ಬಾಡಿ ಲಾಂಗ್ವೇಜ್‌’ ಗಮನಿಸಿದರೆ ಇದು ಗೊತ್ತಾಗುತ್ತದೆ.

ತ.ಸು. ಶ್ಯಾಮರಾಯರು ತಮ್ಮ ಹಳೆ ವಿದ್ಯಾರ್ಥಿಗಳಿಗೆ ವರ್ಷಕ್ಕೊಮ್ಮ ಊಟ ಹಾಕುತ್ತಿದ್ದರು. ಬಂಗಾರಪ್ಪ, ನಜೀರ್‌ ಸಾಬರಂಥವರು ಬಂದು ಊಟ ಮಾಡುತ್ತಿದ್ದರು. ಶ್ಯಾಮರಾಯರು, ‘ಏನು ಮಗೂ ಚೆನ್ನಾಗಿದೀಯ?’ ಎಂದು ವಿಚಾರಿಸುತ್ತಿದ್ದರಂತೆ. ಒಮ್ಮೆಯೂ ಈ ಜೀವ ಶಿಷ್ಯಂದರಲ್ಲಿ ಏನನ್ನೂ ಕೇಳಲಿಲ್ಲ.

ಇವೆಲ್ಲಾ ಮನೋ ಧರ್ಮಕ್ಕೆ ಸಂಬಂಧಿಸಿದ್ದು.

ನಾರ್ವೆಯ ನುಟ್‌ ಹ್ಯಾಂಪ್ಸನ್‌ ಎಂಬ ಲೇಖಕ ದಾಸ್ತೋವಸ್ಕಿಯ ಉತ್ತರಾಧಿಕಾರಿ ಎಂದೇ ಖ್ಯಾತಿ ಪಡೆದಿದ್ದ. ನೊಬೆಲ್‌ ಪ್ರಶಸ್ತಿಯೂ ಬಂದಿತ್ತು. ಆತನಿಗೇನು ಬಡಿಯಿತೋ, ಆತ ಹಿಟ್ಲರನ ಸ್ತುತಿಕಾರನಾದ. ನಾರ್ವೆಯನ್ನು ಹಿಟ್ಲರ್‌ ಆಕ್ರಮಿಸಿದಾಗ ಸ್ವಾಗತಿಸಿದ. ಆತನಿಗೆ ನೀಡಿದ ಸಕಲ ಪ್ರಶಸ್ತಿ ಸನ್ಮಾನಗಳನ್ನು ನಾರ್ವೆ ಯುದ್ಧಾನಂತರ ಕಿತ್ತುಕೊಂಡಿತು. ನುಟ್‌ ಹ್ಯಾಂಪ್ಸನ್‌ ಮಾನಸಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಕಾಲದ ತೀರ್ಪು ಅದು.

ಪ್ರಭುತ್ವದ ಎದುರು ಸೆಣೆಸಿ ಜೈಲುಪಾಲಾದ, ಹುತಾತ್ಮರಾದ ಕವಿಗಳ, ಲೇಖಕರ ಪಟ್ಟಿ ಇದೆ. ಅಂಥಾದ್ದೇನೂ ಆಗದು ಎಂಬ ‘ಭರವಸೆ’ಯ ಭರತವರ್ಷದಲ್ಲಿ ಆಳುವವನ ಜೊತೆಗಿನ ಸಂಬಂಧವನ್ನು ಈ ಸೆಲ್ಫಿ ಯುಗದಲ್ಲಿ ಪುನರ್‌ ನಿರ್ವಚಿಸಲಾಗುತ್ತಿದೆ.

ನಾಲ್ಕು ದಶಕಗಳ ಹಿಂದೆ ಕರ್ನಾಟಕದಲ್ಲಿ ಅಭೂತಪೂರ್ವ ಸಾಹಿತ್ಯ, ಸಾಮಾಜಿಕ ಬದ್ಧತೆಯ ಮಥನವೊಂದು ನಡೆಯಿತು. ಬಂಡಾಯದ ಇತಿಮಿತಿಗಳೇನಿದ್ದರೂ ಅದು ತೋರಿದ ಸೂಚಿಗಳು ಗಮನಾರ್ಹ. ಆಮೇಲೆ ಕನ್ನಡ ಜಡತ್ವದೆಡೆಗೆ ಸಾಗಿ ಸ್ವಸಂತೃಪ್ತ/ ಸ್ವರತಿ ಸುಖ–ಸ್ವಕುಚಮರ್ದನದ ಲೋಲುಪತೆಯಲ್ಲಿ ಮಗ್ನವಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ಹೊತ್ತಿನೊಳಗೆ ಮತ್ತೆ ಇನ್ನೊಂದು ಬೌದ್ಧಿಕ ಬದ್ಧತೆಯ ಸಾದ್ಯಂತ ಮಥನ ಈ ವಿವಾದದ ನೆಪದಲ್ಲಿ ಆರಂಭವಾದರೆ ಚೆನ್ನ.

ಇನ್ನು ಅನುಷ್ಠಾನಯೋಗ್ಯವಾಗಿ ಒಂದು ಸಲಹೆ; ಈ ಅಕಾಡೆಮಿ ಸಿಂಡಿಕೇಟ್‌ ಇತ್ಯಾದಿಗಳಿಗೆ ನಾಮಕರಣಗೊಳಿಸಲು ಒಂದು ಸ್ವಾಯತ್ತ ಆಯ್ಕೆ ಸಮಿತಿಯನ್ನು ಸರ್ಕಾರ ಸ್ಥಾಪಿಸುವುದು ವಿಹಿತ. ಅದು ಎಷ್ಟು ಪಾರದರ್ಶಕವಾಗಿರುತ್ತದೆ ಎಂಬುದು ಬೇರೆ ಮಾತು. ಸರ್ಕಾರದ ಕನಿಷ್ಠ ಮರ್ಜಿಯಲ್ಲಿ ಇಲ್ಲದ ಒ೦ದು ಮಾದರಿಯಾದರೂ ಸೃಷ್ಟಿಯಾಗಬಹುದು.

ಲೇಖಕ: ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT