ರಾಜಸ್ಥಾನ ವಿಧಾನಸಭೆಯು ಎರಡು ಮಹತ್ವದ ಮಸೂದೆಗಳನ್ನು ಅಂಗೀಕರಿಸಿದೆ. ಗುಂಪು ಹಲ್ಲೆಯಿಂದ ರಕ್ಷಣೆ ಮಸೂದೆ ಮತ್ತು ಗೌರವ– ಪರಂಪರೆ ಹೆಸರಿನಲ್ಲಿ ವೈವಾಹಿಕ ಸಂಬಂಧದಲ್ಲಿ ಹಸ್ತಕ್ಷೇಪ ನಿಷೇಧ ಮಸೂದೆಗೆ ಶಾಸನಸಭೆಯ ಒಪ್ಪಿಗೆ ದೊರೆತಿದೆ. ಮಸೂದೆಗಳ ಹೆಸರೇ ಅವು ಏನು ಎಂಬುದನ್ನು ಸೂಚಿಸುತ್ತವೆ. ಆದರೆ, ಇಂತಹ ಮಸೂದೆಗಳನ್ನು ರೂಪಿಸಬೇಕಾದ ಅನಿವಾರ್ಯವನ್ನು ನಮ್ಮ ನಾಗರಿಕ ಸಮಾಜ ಸೃಷ್ಟಿಸಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ. ರಾಜಸ್ಥಾನಕ್ಕೂ ಮೊದಲು ಮಣಿಪುರ ವಿಧಾನಸಭೆಯು ಗುಂಪು ಹಲ್ಲೆಯಿಂದ ರಕ್ಷಣೆಯ ಮಸೂದೆಯನ್ನು ಅಂಗೀಕರಿಸಿತ್ತು. ಅದೇ ರೀತಿಯ ಮಸೂದೆಗೆ ಅನುಮೋದನೆ ಕೊಟ್ಟ ಎರಡನೇ ರಾಜ್ಯ ರಾಜಸ್ಥಾನ. ಸುಪ್ರೀಂ ಕೋರ್ಟ್ ಕೊಟ್ಟ ಮಾರ್ಗದರ್ಶಿ ಸೂತ್ರದ ಅನ್ವಯ ಈ ಮಸೂದೆ ರೂಪುಗೊಂಡಿದೆ.

ಗುಂಪು ಹಲ್ಲೆ ನಿಯಂತ್ರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂಬ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ‘ಗುಂಪು ಹಲ್ಲೆಯ ಸಮೂಹಸನ್ನಿಯು ಘೋರ’ ಎಂದು 2018ರ ಜುಲೈನಲ್ಲಿ ಹೇಳಿತ್ತು. ಇದನ್ನು ತಡೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು, ಗುಂಪು ಹಲ್ಲೆ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ತ್ವರಿತಗತಿ ನ್ಯಾಯಾಲಯಗಳ ಮೂಲಕ ಪ್ರಕರಣಶೀಘ್ರವಾಗಿ ಇತ್ಯರ್ಥವಾಗಬೇಕು ಮತ್ತು ಗುಂಪು ಹಲ್ಲೆ ನಡೆಸುವವರಲ್ಲಿ ಭೀತಿ ಮೂಡಿಸಬೇಕು ಎಂದು ಸೂಚಿಸಿತ್ತು. ಗುಂಪು ಹಲ್ಲೆ ತಡೆಗಾಗಿ ಪ್ರತ್ಯೇಕ ಕಾನೂನು ರಚನೆಯ ಬಗ್ಗೆಯೂ ಕೇಂದ್ರ ಯೋಚಿಸಬಹುದು ಎಂಬ ಸಲಹೆ ಕೊಟ್ಟಿತ್ತು. ಸುಪ್ರೀಂ ಕೋರ್ಟ್ನ ಸಲಹೆ ಮತ್ತು ಮಾರ್ಗದರ್ಶಿ ಸೂತ್ರದ ಬಗ್ಗೆ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುವುದಿಲ್ಲ. ಗುಂಪು ಹಲ್ಲೆ ತನಿಖೆ ಮತ್ತು ವಿಚಾರಣೆಗೆ ಭಾರತೀಯ ದಂಡ ಸಂಹಿತೆಯಲ್ಲಿ ಈಗ ಇರುವ ನಿಯಮಗಳೇ ಸಾಕು ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದರು. ಅದೇ ರೀತಿ ಮನಃಸ್ಥಿತಿ ನಂತರವೂ ಮುಂದುವರಿದಿದೆ. ರಾಜಸ್ಥಾನದ ಬಿಜೆಪಿ ಶಾಸಕರು ಎರಡೂ ಮಸೂದೆಗಳನ್ನು ವಿರೋಧಿಸಿರುವುದು ಇದನ್ನು ದೃಢಪಡಿಸುತ್ತದೆ. 2018ರಲ್ಲಿ ನೀಡಿದ್ದ ಮಾರ್ಗದರ್ಶಿಗೆ ಸ್ಪಂದನೆ ಏನು ಎಂದು ಕೇಳಿ ಕೇಂದ್ರ ಮತ್ತು ರಾಜ್ಯಗಳಿಗೆ ಸುಪ್ರೀಂ ಕೋರ್ಟ್2019ರಲ್ಲಿ ಮತ್ತೆ ನೋಟಿಸ್ ನೀಡುವ ಸ್ಥಿತಿಯು ಆಡಳಿತಾರೂಢರ ಅಸಡ್ಡೆಯನ್ನೇ ತೋರಿಸುತ್ತದೆ.

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಏರಿಕೆ ಆಗುತ್ತಿರುವ ಗುಂಪು ಹಲ್ಲೆ ಮತ್ತು ಹತ್ಯೆಯ ಅಪರಾಧ ಪ್ರಕರಣಗಳನ್ನು ಆ ಕ್ಷಣದ ಭಾವೋನ್ಮಾದ ಎಂದಷ್ಟೇ ಹೇಳಿ, ಈಗ ನಮ್ಮಲ್ಲಿ ಇರುವ ದಂಡ ಸಂಹಿತೆ ಅಡಿಯಲ್ಲಿ ತನಿಖೆ, ವಿಚಾರಣೆ ನಡೆಸಬಹುದು ಎನ್ನುವುದು ಸರಿ ಅನಿಸುವುದಿಲ್ಲ. ಧರ್ಮ, ಜಾತಿ, ಪರಂಪರೆ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಜನರನ್ನು ವ್ಯವಸ್ಥಿತವಾಗಿ ಭಾವೋದ್ರೇಕಗೊಳಿಸಿ ಇಂತಹುದೊಂದು ದ್ವೇಷಾಕ್ರಮಣಕ್ಕೆ ಸಿದ್ಧಪಡಿಸಲಾಗಿದೆಯೇ ಎಂಬ ಅನುಮಾನ ಮೂಡುವಂತೆ ಈ ಗುಂಪು ಹತ್ಯೆ ಮತ್ತು ಹಲ್ಲೆಪ್ರಕರಣಗಳು ಕಾಣಿಸುತ್ತಿವೆ. ಗುಂಪು ಹತ್ಯೆ– ಹಲ್ಲೆಯ ಪ್ರತ್ಯೇಕ ದತ್ತಾಂಶವನ್ನುರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಸಂಗ್ರಹಿಸುತ್ತಿಲ್ಲ. ಆದರೆ, ಇಂಡಿಯಾ ಸ್ಪೆಂಡ್– ಹೇಟ್ ಕ್ರೈಮ್ ಫ್ಯಾಕ್ಟ್ ಚೆಕರ್ ಜಾಲತಾಣವು 2010ರಿಂದ ಈ ದತ್ತಾಂಶವನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದೆ. ಅದರ ಪ್ರಕಾರ, ಕಳೆದ ಎಂಟು ವರ್ಷಗಳಲ್ಲಿ ಇಂತಹ 133 ಪ್ರಕರಣಗಳು ವರದಿಯಾಗಿವೆ. 50 ಮಂದಿ ಹತ್ಯೆಯಾಗಿದ್ದರೆ, 340 ಮಂದಿ ಇದರ ಸಂತ್ರಸ್ತರು.

ಈ ವಿದ್ಯಮಾನವು ಯಾವುದೋ ಒಂದು ರಾಜ್ಯ ಅಥವಾ ಪ್ರದೇಶಕ್ಕೆ ಸೀಮಿತವಲ್ಲ ಎಂಬುದನ್ನೂ ಈ ದತ್ತಾಂಶಗಳು ಹೇಳುತ್ತವೆ. ಮುಸ್ಲಿಮರ ವಿರುದ್ಧ ಶೇ 57ರಷ್ಟು, ದಲಿತರ ವಿರುದ್ಧ ಶೇ 9ರಷ್ಟು ಗುಂಪು ಹಲ್ಲೆ ಪ್ರಕರಣಗಳು ನಡೆದಿವೆ. ಗುಂಪು ಹಲ್ಲೆಗಳ ಪೈಕಿ ಶೇ 57.8ರಷ್ಟು ಪ್ರಕರಣಗಳು ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳಲ್ಲಿಯೇ ನಡೆದಿವೆ. ಗೋಹತ್ಯೆಯ ಶಂಕೆ, ದನದ ಮಾಂಸ ತಿಂದಿದ್ದಾರೆ ಅಥವಾ ಸಂಗ್ರಹಿಸಿ ಇಟ್ಟಿದ್ದಾರೆ ಎಂಬುದು ಗುಂಪು ಹಲ್ಲೆಗಳಿಗೆ ಮುಖ್ಯ ಕಾರಣ. ಜೈ ಶ್ರೀರಾಂ ಎಂಬ ಘೋಷಣೆ ಕೂಗುವಂತೆ ಒತ್ತಡ ಹಾಕಿ ಗುಂಪು ಹಲ್ಲೆ ನಡೆಸಿದ ಪ್ರಕರಣಗಳೂ ವರದಿಯಾಗಿವೆ. ಇವೆಲ್ಲವೂ ಅಮಾನವೀಯ. ಈ ಬಗೆಯ ಹಲ್ಲೆಗಳನ್ನು ಅಪರಾಧ ಪ್ರವೃತ್ತಿ ಎಂದಷ್ಟೇ ಪರಿಗಣಿಸಲು ಸಾಧ್ಯವಿಲ್ಲ. ಇಂತಹ ಮನೋಭಾವವು ಸಾಮಾಜಿಕ ಪಿಡುಗು. ಕಠಿಣವಾದ ಕಾನೂನು ಅಗತ್ಯವೇ ಆದರೂ ಸಾಮಾಜಿಕ ಪಿಡುಗನ್ನು ಕಾಯ್ದೆಯ ಮೂಲಕವಷ್ಟೇ ನಿವಾರಿಸಲು ಸಾಧ್ಯವಿಲ್ಲ ಎಂಬುದು ನಮ್ಮ ಗಮನದಲ್ಲಿ ಇರಬೇಕು. ಧರ್ಮ, ಜಾತಿ, ಪರಂಪರೆ, ಭಾಷೆ ಮುಂತಾದವುಗಳ ಶ್ರೇಷ್ಠತೆಯ ಭ್ರಮೆಯಲ್ಲಿ ಪರಸ್ಪರರನ್ನು ದ್ವೇಷಿಸುವುದು ಅನಾಗರಿಕ ಪ್ರವೃತ್ತಿ ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವ ಅಗತ್ಯವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.