ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಸುವ್ಯವಸ್ಥೆ ಸೋಗಲ್ಲಿ ಧಾರ್ಮಿಕ ಅಸಹನೆ: ಸುಪ್ರೀಂ ತಡೆ ಸ್ವಾಗತಾರ್ಹ

Published 22 ಜುಲೈ 2024, 23:53 IST
Last Updated 22 ಜುಲೈ 2024, 23:53 IST
ಅಕ್ಷರ ಗಾತ್ರ

ಅಂಗಡಿಗಳ ಮುಂದೆ ಮಾಲೀಕರ ಹೆಸರು, ಮೊಬೈಲ್‌ ಫೋನ್‌ ಸಂಖ್ಯೆ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿ ಉತ್ತರಪ್ರದೇಶ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆ ನೀಡಿರುವುದು ಸ್ವಾಗತಾರ್ಹ. ವ್ಯಾಪಾರಿಗಳು ತಮ್ಮ ಹೆಸರು ಪ್ರಕಟಿಸುವುದನ್ನು ಕಡ್ಡಾಯಪಡಿಸಿ ಉತ್ತರ ಪ್ರದೇಶ ಸರ್ಕಾರ ಹಾಗೂ ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಯೊಂದು ಹೊರಡಿಸಿರುವ ಆದೇಶಗಳು ಕೋಮು ಧ್ರುವೀಕರಣಕ್ಕೆ ಅವಕಾಶ ಕಲ್ಪಿಸುವ ಧಾರ್ಮಿಕ ಅಸಹನೆಯ ಕೆಟ್ಟ ಮಾದರಿಗಳಾಗಿವೆ ಹಾಗೂ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿವೆ. ಕಾವಡ್‌ ಯಾತ್ರೆಯ ಮಾರ್ಗದುದ್ದಕ್ಕೂ ಇರುವ ಅಂಗಡಿ, ಹೋಟೆಲ್‌, ಡಾಬಾಗಳ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಪ್ರದರ್ಶಿಸಬೇಕು ಎಂದು ಉತ್ತರಪ್ರದೇಶ ಸರ್ಕಾರ ಆದೇಶ ಹೊರಡಿಸಿತ್ತು. ಅದರ ಬೆನ್ನಿಗೇ ಉಜ್ಜಯಿನಿಯಲ್ಲಿನ ಅಂಗಡಿಗಳ ಮುಂದೆ ಮಾಲೀಕರ ಹೆಸರಿನ ಪ್ರಕಟಣೆಯನ್ನು ಮಧ್ಯಪ‍್ರದೇಶದ ನಗರಪಾಲಿಕೆ ಕಡ್ಡಾಯಗೊಳಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಹೆಸರಿನಲ್ಲಿ ಜಾರಿಗೊಂಡಿರುವ ಈ ಆದೇಶಗಳು ಸುರಕ್ಷತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಸಂಕಷ್ಟಕ್ಕೆ ದೂಡುವ ರಾಜಕೀಯಪ್ರೇರಿತ ಕ್ರಮಗಳಾಗಿವೆ. ಮುಸ್ಲಿಂ ವ್ಯಾಪಾರಿ
ಗಳನ್ನು ಗುರಿಯಾಗಿಸಿಕೊಂಡು ಹೊರಡಿಸಿರುವ ಈ ಆದೇಶಗಳು, ಹಿಂದೂ ವೋಟ್‌ ಬ್ಯಾಂಕನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ನಡೆಸಿರುವ ಪ್ರಯತ್ನಗಳಾಗಿವೆ; ಮುಸ್ಲಿಂ ವ್ಯಾಪಾರಿಗಳ ಆರ್ಥಿಕತೆಗೆ ಪೆಟ್ಟು ಕೊಡುವ ಉದ್ದೇಶ ಹೊಂದಿವೆ. ಎರಡೂ ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಬಿಜೆಪಿ ಕೈಯಲ್ಲಿದೆ. ಉಜ್ಜಯಿನಿಯ ಮಹಾಕಾಳ್‌ ಮಂದಿರದ ಶ್ರಾವಣ ಮಾಸದ ಉತ್ಸವ ಹಾಗೂ ಹರಿದ್ವಾರವನ್ನು ಕೇಂದ್ರವನ್ನಾಗಿಸಿಕೊಂಡು ನಡೆಯುವ ಕಾವಡ್‌ ಯಾತ್ರೆ ಸಂದರ್ಭದಲ್ಲಿ ವ್ಯಾಪಾರಿಗಳ ಧರ್ಮವನ್ನು ಯಾತ್ರಿಗಳ ಗಮನಕ್ಕೆ ತರುವ ಪ್ರಯತ್ನಗಳು ಈ ಮೊದಲು ನಡೆದಿರಲಿಲ್ಲ. ಈಗ ಇದ್ದಕ್ಕಿದ್ದಂತೆ ವ್ಯಾಪಾರಿಗಳ ಧರ್ಮದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿರುವ ಆಡಳಿತಾರೂಢರ ನಡವಳಿಕೆಗಳು ನಿರ್ಲಜ್ಜೆಯಿಂದ ಕೂಡಿದ ಕೋಮುರಾಜಕಾರಣದ ಭಾಗವಾಗಿವೆ. ಮುಸ್ಲಿಂ ವ್ಯಾಪಾರಿಗಳ ದುಡಿಮೆಯ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳು ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲೂ ನಡೆದಿದ್ದವು. ಶಿವಮೊಗ್ಗದ ಮಾರಿಕಾಂಬಾ ಜಾತ್ರೆ ಹಾಗೂ ಉಡುಪಿ ಜಿಲ್ಲೆಯ ಕಾಪುವಿನ ಮಾರಿಗುಡಿಗಳಲ್ಲಿನ ಸುಗ್ಗಿ ಮಾರಿ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳ ವಹಿವಾಟಿಗೆ ಅವಕಾಶ ನಿರಾಕರಿಸುವ ಪ್ರಯತ್ನಗಳು ಹಿಂದೂ ಸಂಘಟನೆಗಳಿಂದ ನಡೆದಿದ್ದವು. ಆ ಪ್ರಯತ್ನಗಳ ಮುಂದುವರಿಕೆಯಾಗಿ, ಮುಸ್ಲಿಮರ ಜೀವನೋಪಾಯದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳಿಗೆ ಕಾನೂನು ಮಾನ್ಯತೆ ತಂದುಕೊಡುವ ಪ್ರಯತ್ನ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶ ಸರ್ಕಾರದ ಈ ಕ್ರಮದಿಂದಾಗಿ, ಕಾವಡ್‌ ಯಾತ್ರೆಯ ಮಾರ್ಗದಲ್ಲಿ ಹಿಂದೂಗಳು ನಡೆಸುವ ಹೋಟೆಲ್‌ಗಳಲ್ಲಿ ಕಾರ್ಯ ನಿರ್ವಹಿಸುವ ಮುಸ್ಲಿಂ ಕೆಲಸಗಾರರಿಗೆ ರಜೆಯ ಮೇಲೆ ಹೋಗುವಂತೆ ತಿಳಿಸಲಾಗಿದೆ ಎಂದು ವರದಿಯಾಗಿದೆ. 

ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡುವುದಿಲ್ಲ ಎನ್ನುವ ಯೋಚನೆ ನಂಜಿನಿಂದ ಕೂಡಿದೆ ಹಾಗೂ ಅಲ್ಪಸಂಖ್ಯಾತರಲ್ಲಿ ಅಸುರಕ್ಷತೆಯನ್ನು ಮೂಡಿಸುವಂತಿದೆ. ದಿನದ ದುಡಿಮೆಯನ್ನು ನೆಚ್ಚಿಕೊಂಡು ಬದುಕುವ ವ್ಯಾಪಾರಿಗಳನ್ನು ಧರ್ಮದ ಹೆಸರಿನಲ್ಲಿ ಗುರುತಿಸಿ, ವ್ಯಾಪಾರದ ಅವಕಾಶಗಳಿಂದ ವಂಚಿಸುವುದು ಅಮಾನವೀಯ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಎಸಗುವ ಅಪಚಾರ. ಹತ್ತು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಉತ್ತರಪ್ರದೇಶ ಸರ್ಕಾರವು ಕಾವಡ್‌ ಯಾತ್ರೆಯನ್ನು ಬಳಸಿಕೊಳ್ಳುತ್ತಿದೆ ಎನ್ನುವ ವಿಶ್ಲೇಷಣೆಗಳಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿನ ಹಿನ್ನಡೆಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪಕ್ಷದೊಳಗೇ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆಂತರಿಕ ಭಿನ್ನಮತಕ್ಕೆ ಉತ್ತರ ರೂಪದಲ್ಲಿ ವಿಧಾನಸಭಾ ಕ್ಷೇತ್ರಗಳ ಮುಂಬರುವ ಉಪಚುನಾವಣೆಯನ್ನು ಆದಿತ್ಯನಾಥ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಕಟು
ಹಿಂದುತ್ವವಾದಿಗಳು ಪಕ್ಷದಿಂದ ದೂರ ಸರಿದಿಲ್ಲ ಎನ್ನುವ ಸಂದೇಶವನ್ನು ತಮ್ಮ ಟೀಕಾಕಾರರಿಗೆ ರವಾನಿಸುವ ಪ್ರಯತ್ನದಲ್ಲಿದ್ದಾರೆ. ತಮ್ಮ ಮೇಲಿನ ಟೀಕೆಗಳಿಂದ ಜನಸಾಮಾನ್ಯರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದಲೂ ಅವರು ಕಾವಡ್‌ ಯಾತ್ರೆಯ ವಾಣಿಜ್ಯ ಚಟುವಟಿಕೆಗಳಿಗೆ ಧರ್ಮದ ಬಣ್ಣ ನೀಡುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಈ ವಿಭಜಕ ರಾಜಕೀಯವು ಇತರ ರಾಜ್ಯಗಳಿಗೆ ಒಂದು ಕೆಟ್ಟ ಸಂಪ್ರದಾಯ ಹಾಕಿಕೊಡುವಂತಿದೆ. ಸರ್ಕಾರಗಳ ಕೆಲಸ ಯಾತ್ರಾರ್ಥಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದೇ ವಿನಾ ಆ ಸೌಕರ್ಯಗಳನ್ನು ಒದಗಿಸುವವರು ಯಾವ ಜಾತಿ–ಧರ್ಮಕ್ಕೆ ಸೇರಿದವರೆಂದು ನಿರ್ಣಯಿಸುವುದಲ್ಲ. ಕೋಮು ಧ್ರುವೀಕರಣವನ್ನು ಉತ್ತೇಜಿಸುವ ಸರ್ಕಾರದ ಯಾವುದೇ ನಡೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು. ಉತ್ತರ ಪ್ರದೇಶ ಸರ್ಕಾರದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ಮಧ್ಯಂತರ ತಡೆ, ಕೋಮು ರಾಜಕಾರಣ ಕುರಿತ ವ್ಯಾಪಕ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಧಾರ್ಮಿಕ ಯಾತ್ರೆಗಳು ಸಾಮಾಜಿಕ ಸಾಮರಸ್ಯಕ್ಕೆ ಪೂರಕವಾಗಿರಬೇಕೇ ವಿನಾ ಸಮಾಜವನ್ನು ವಿಭಜಿಸುವಂತಾಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT