ಲೋಕಸಭೆಗೆ ಚುನಾವಣೆ ನಡೆಯುವ ಕೆಲವೇ ತಿಂಗಳ ಮೊದಲು ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆದಿದೆ. ಈ ಪೈಕಿ ನಾಲ್ಕು ಪ್ರಮುಖ ರಾಜ್ಯಗಳ ಫಲಿತಾಂಶವು ರಾಷ್ಟ್ರ ರಾಜಕಾರಣವು ಯಾವ ದಿಕ್ಕಿನತ್ತ ಸಾಗಲಿದೆ ಎಂಬುದರ ಸುಳಿವು ನೀಡಿದೆ. ಹಿಂದಿ ಭಾಷಿಕ ಪ್ರದೇಶದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿ ಭಾರಿ ಅಂತರದಿಂದ ಗೆಲುವು ದಾಖಲಿಸಿದೆ. ಟಿಕೆಟ್ ಹಂಚಿಕೆ, ಚುನಾವಣಾ ಪ್ರಚಾರ ನಿರ್ವಹಣೆ ಸೇರಿ ಚುನಾವಣೆಯ ಎಲ್ಲ ವಿಚಾರಗಳಲ್ಲಿಯೂ ತನಗೆ ಸರಿಸಾಟಿ ಇಲ್ಲ ಎಂಬುದನ್ನು ಬಿಜೆಪಿ ಸಾಬೀತು ಮಾಡಿದೆ. ರಾಜ್ಯ ಮಟ್ಟದಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ನಾಯಕ
ರಿದ್ದಾಗಲೂ ಪಕ್ಷವು ಅವರನ್ನು ಅತಿಯಾಗಿ ನೆಚ್ಚಿಕೊಳ್ಳಲಿಲ್ಲ. ಬಿಜೆಪಿ ವರಿಷ್ಠರು ಎಲ್ಲವನ್ನೂ ತಮ್ಮ ಮುಷ್ಟಿಯಲ್ಲಿಯೇ ಇರಿಸಿಕೊಂಡು ಚುನಾವಣೆಯನ್ನು ನಿರ್ವಹಿಸಿ ಗೆಲುವು ದೊರಕಿಸಿಕೊಟ್ಟಿದ್ದಾರೆ. ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದಲ್ಲಿ ದೊಡ್ಡ ವರ್ಚಸ್ಸು ಹೊಂದಿರುವ ವಸುಂಧರಾ ರಾಜೇ, ಛತ್ತೀಸಗಢದ ರಮಣ್ ಸಿಂಗ್ ಅವರನ್ನು ಪಕ್ಷವು ಪ್ರಚಾರದ ಮುಂಚೂಣಿಗೆ ತರಲಿಲ್ಲ. ಕೇಂದ್ರದ ಸಚಿವರು ಮತ್ತು ಸಂಸದರನ್ನು ಕಣಕ್ಕೆ ಇಳಿಸುವ ಮೂಲಕ ಗೆಲ್ಲುವ ಯಾವ ಅವಕಾಶವನ್ನೂ ಬಿಟ್ಟುಕೊಡಬಾರದು ಎಂಬ ಕಾರ್ಯತಂತ್ರವನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ಮಧ್ಯಪ್ರದೇಶದಲ್ಲಿ ಹಲವು ಹೊಸ ಮುಖಗಳಿಗೆ ಟಿಕೆಟ್ ನೀಡುವ ಮೂಲಕ ಆಡಳಿತ ವಿರೋಧಿ ಅಲೆ ಬಾಧಿಸದಂತೆ ನೋಡಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೋಡಿಯ ಚುನಾವಣೆ ಗೆಲ್ಲಿಸಿಕೊಡುವ ಸಾಮರ್ಥ್ಯಕ್ಕೆ ಕಿಂಚಿತ್ತೂ ಚ್ಯುತಿ ಬಂದಿಲ್ಲ ಎಂಬುದನ್ನು ಫಲಿತಾಂಶವು
ಸ್ಪಷ್ಟಪಡಿಸಿದೆ. ಮತಗಟ್ಟೆ ಮಟ್ಟದವರೆಗಿನ ವ್ಯವಸ್ಥಿತವಾದ ಸಂಘಟನೆಯು ಬಿಜೆಪಿಯ ದೊಡ್ಡ ಶಕ್ತಿ ಎಂಬುದು ಮತ್ತೆ ಮತ್ತೆ ನಿಚ್ಚಳವಾಗುತ್ತಿದೆ.

ಈ ಫಲಿತಾಂಶದಿಂದ ಬಿಜೆಪಿಯೇತರ ಪಕ್ಷಗಳಿಗೆ ಹಲವು ಪಾಠಗಳನ್ನು ಮತದಾರ ಕಲಿಸಿದ್ದಾನೆ. ಕಾಂಗ್ರೆಸ್ ಪಕ್ಷವು ಹೀನಾಯವಾಗಿ ಸೋತಿದೆ. ಈ ಮೂಲಕ, ಉತ್ತರ ಭಾರತದಲ್ಲಿ ಪುಟ್ಟ ರಾಜ್ಯ ಹಿಮಾಚಲ ಪ್ರದೇಶವನ್ನು ಬಿಟ್ಟರೆ ಬೇರೆಲ್ಲೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಲ್ಲದಂತಾಗಿದೆ. ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿ ಆತ್ಮವಿಶ್ವಾಸವು ಕಾಂಗ್ರೆಸ್ಗೆ ಮುಳುವಾಗಿದೆ. ‘ಗ್ಯಾರಂಟಿ’ ಭರವಸೆಗಳ ಮೂಲಕ ಕರ್ನಾಟಕದಲ್ಲಿ ಗೆಲುವು ಕಂಡಿರುವ ಕಾಂಗ್ರೆಸ್, ಅದೇ ಕಾರ್ಯತಂತ್ರವನ್ನು
ಇತರ ರಾಜ್ಯಗಳಿಗೂ ವಿಸ್ತರಿಸಿತು. ಉಚಿತ ಕೊಡುಗೆಗಳನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದ
ಬಿಜೆಪಿಯು ಕಾಂಗ್ರೆಸ್ ‘ಗ್ಯಾರಂಟಿ’ಗಳಿಗೆ ಬದಲಾಗಿ ‘ಮೋದಿ ಗ್ಯಾರಂಟಿ’ ಎಂಬ ಅಸ್ತ್ರ ಹೂಡಿತು. ಮತದಾರನು ಕಾಂಗ್ರೆಸ್ ‘ಗ್ಯಾರಂಟಿ’ ಬದಲಿಗೆ ‘ಮೋದಿ ಗ್ಯಾರಂಟಿ’ ಮೇಲೆ ವಿಶ್ವಾಸ ಇರಿಸಿದ್ದನ್ನು ಫಲಿತಾಂಶವು ತೋರಿಸಿಕೊಟ್ಟಿದೆ. ಹಿಂದಿ ಭಾಷಿಕ ಪ್ರದೇಶದ ಮೂರು ರಾಜ್ಯಗಳ ಕಾಂಗ್ರೆಸ್ ನಾಯಕರ ನಡುವೆ ಇದ್ದ ಒಳಜಗಳಗಳನ್ನು ಆ ಕೂಡಲೇ ಬಗೆಹರಿಸದೆ, ಕಾಂಗ್ರೆಸ್ ನಾಯಕತ್ವವು ತೋರಿದ ನಿರಂತರ ಅಸಡ್ಡೆಯು ಆ ಪಕ್ಷಕ್ಕೆ ದುಬಾರಿಯಾಗಿದೆ. ಚುನಾವಣೆಗೆ ಕೆಲ ಕಾಲ ಮೊದಲು ಒಳಜಗಳಕ್ಕೆ ತೇಪೆ ಹಚ್ಚುವ ಕೆಲಸ ನಡೆದರೂ ಅದು ತಳಹಂತದವರೆಗೆ ಇಳಿಯಲಿಲ್ಲ. ರಾಜಕೀಯವು ನಿರಂತರವಾಗಿ ಚಲನಶೀಲವಾಗಿಯೂ
ಸೃಜನಶೀಲವಾಗಿಯೂ ಇರಬೇಕು ಎಂಬುದನ್ನು ಮತದಾರ ಬಯಸುತ್ತಾನೆ. ಆದರೆ, ಕಾಂಗ್ರೆಸ್ ಪಕ್ಷವು ಅವೇ ಹಳೆಯ, ವರ್ಚಸ್ಸು ಕಳೆದುಕೊಂಡ ಮುಖಗಳಿಗೇ ಮಣೆ ಹಾಕುವುದನ್ನು ಮುಂದುವರಿಸಿತು. ಯುವ ಚೈತನ್ಯ ಆ ಪಕ್ಷದಲ್ಲಿ ಕಾಣಿಸಲಿಲ್ಲ. ತೆಲಂಗಾಣದಲ್ಲಿ ಸಿಕ್ಕ ಗೆಲುವು ಮಾತ್ರ ಆ ಪಕ್ಷಕ್ಕೆ ಇರುವ ಏಕೈಕ ಸಮಾಧಾನ. ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರ ಭಾರತ ರಾಷ್ಟ್ರ ಸಮಿತಿಯು ತೆಲಂಗಾಣವನ್ನು ಕಳೆದುಕೊಂಡಿದೆ. ಪ್ರತ್ಯೇಕ ರಾಜ್ಯ ಹೋರಾಟದ ಕೆಚ್ಚು ಮತ್ತು ಭಾವನೆಗಳ ಆಧಾರದಲ್ಲಿಯೇ ಎರಡು ಅವಧಿಗೆ ಅವರ ಪಕ್ಷವು ಗೆದ್ದಿತ್ತು. ಆದರೆ, ಹೆಚ್ಚುತ್ತಲೇ ಇದ್ದ ನಿರುದ್ಯೋಗಕ್ಕೆ ಪರಿಹಾರ ಕಂಡುಕೊಳ್ಳಲು ಕೆಸಿಆರ್ ಯತ್ನಿಸಲಿಲ್ಲ. ಆಡಳಿತ ಮತ್ತು ಪಕ್ಷದ ಮೇಲೆ ಕೆಸಿಆರ್ ಕುಟುಂಬದ ಬಿಗಿಹಿಡಿತ, ಚುನಾವಣೆ ಸಮೀಪಿಸಿದಾಗ ಪಕ್ಷದ ಹೆಸರು ಬದಲಾಯಿಸಿದ್ದು ಆ ಪಕ್ಷದ ಸೋಲಿಗೆ ಕಾರಣವಾದ ಕೆಲವು
ಅಂಶಗಳಾಗಿರಬಹುದು. ಮಧ್ಯಪ್ರದೇಶವೊಂದನ್ನು ಬಿಟ್ಟು ಬೇರೆಲ್ಲಿಯೂ ಆಡಳಿತ ಪಕ್ಷ ಮರಳಿ ಅಧಿಕಾರ ಹಿಡಿದಿಲ್ಲ. ರಾಜಕೀಯ ಪಕ್ಷಗಳು ಮತ್ತು ಅವುಗಳ ಆಳ್ವಿಕೆಯನ್ನು ಮತದಾರ ನಿರಂತರವಾಗಿ ವಿಮರ್ಶೆಗೆ ಒಳಪಡಿಸುತ್ತಲೇ ಇದ್ದಾನೆ ಎಂಬುದನ್ನು ಇದು ದೃಢಪಡಿಸಿದೆ. ಪ್ರಜಾಪ್ರಭುತ್ವ ಹೆಚ್ಚು ಹೆಚ್ಚು
ಪ್ರಬುದ್ಧವಾಗಲು ಮತದಾರನ ಈ ಎಚ್ಚರಿಕೆ ಅತ್ಯಂತ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.