ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡದ ಅಭಿವೃದ್ಧಿಗೆ ಶ್ರಮಿಸಿ

Published : 7 ಮೇ 2014, 19:30 IST
ಫಾಲೋ ಮಾಡಿ
Comments

‘ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕಲಿಕಾ ಮಾಧ್ಯಮವಾಗಿ ಮಾತೃ­ಭಾಷೆಯನ್ನು ಹೇರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದು ಪೋಷಕರಿಗೆ ಬಿಟ್ಟ ವಿಚಾರ’ ಎಂದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ತೀರ್ಪು ನೀಡಿದೆ.

ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತೃ­ಭಾಷೆ ಅಥವಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು 1994ರಲ್ಲಿ ಕರ್ನಾಟಕ ಸರ್ಕಾರ ಎರಡು ಆದೇಶಗಳನ್ನು ಹೊರಡಿಸಿತ್ತು. ಅವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ­ಕೋರ್ಟಿನ ಸಂವಿಧಾನ ಪೀಠವು, ಮಾತೃಭಾಷೆ ಅಥವಾ ರಾಜ್ಯಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಹೇರಿದರೆ ಸಂವಿಧಾನದ 19, 29 ಮತ್ತು 30ನೇ ವಿಧಿಗಳ ಅನ್ವಯ ನೀಡಲಾಗಿರುವ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬರುತ್ತದೆ ಎಂದು ಹೇಳಿದೆ.

ಸಂವಿಧಾನದ ಕಲಮುಗಳ ಅರ್ಥವ್ಯಾಖ್ಯಾನದ ಪರಿಧಿಗಳಲ್ಲಿ ಸುಪ್ರೀಂಕೋರ್ಟ್  ಈ ತೀರ್ಪು ನೀಡಿದೆ. ಹೀಗಾಗಿ ಈ ತೀರ್ಪಿನಿಂದ ಕನ್ನಡ ಭಾಷೆಗೆ ತೀವ್ರ ಹಿನ್ನಡೆಯಾಗುತ್ತದೆ ಎಂದು ಭಾವಿಸುವುದು ಅನಗತ್ಯ.  ಏಕೆಂ­ದರೆ ಅಂಕಿಸಂಖ್ಯೆಗಳ ಪ್ರಕಾರ, ಶೇ 16ರಷ್ಟು ಶಾಲೆಗಳು ಮಾತ್ರ ಭಾಷಾ ನೀತಿಯ ವ್ಯಾಪ್ತಿಯಿಂದ ಹೊರಗಿರುತ್ತವೆ.  ಇನ್ನುಳಿದ ಶೇ 84ರಷ್ಟು ಶಾಲೆ­ಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಅವಕಾಶ ಇದೆ. ಹೀಗಾಗಿ ಇದನ್ನು ಒಂದು ದೊಡ್ಡ ಅವಕಾಶ ಎಂದು  ಭಾವಿಸಿಕೊಂಡು  ಸರ್ಕಾರ ಕಾರ್ಯಪ್ರವೃತ್ತವಾಗುವುದು ಜಾಣ ನಡೆ. ಮೊದಲಿಗೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು.

 ಈ ಶಾಲೆಗಳಿಗೆ ಸೇರಲು ಜನರಿಂದ ಬೇಡಿಕೆ ಹೆಚ್ಚಾಗುವ ರೀತಿಯಲ್ಲಿ  ಉತ್ತಮ ಪಡಿಸುವ ಎಲ್ಲಾ ಅವಕಾಶಗಳೂ ಸರ್ಕಾರಕ್ಕಿದೆ. ಆದರೆ ಈ ನಿಟ್ಟಿನಲ್ಲಿ   ರಾಜಕೀಯ ಇಚ್ಛಾ­ಶಕ್ತಿ ಪ್ರಕಟವಾಗಬೇಕು ಅಷ್ಟೆ.  ಆಧುನಿಕ ಕಾಲದ ಅಗತ್ಯಗಳಿಗೆ ಅನು­ಸಾರ­­ವಾಗಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನೂ ಒಂದು ಭಾಷೆ­ಯಾಗಿ ಸಮರ್ಥವಾಗಿ ಕಲಿಸುವ ಏರ್ಪಾಡುಗಳಾಗುವುದೂ ಅಗತ್ಯ.

ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಮಕ್ಕಳ ಗ್ರಹಿಕೆಯ ಸಾಮರ್ಥ್ಯದ ಸಂಪೂರ್ಣ ಬಳಕೆಯಾಗುತ್ತದೆ ಎನ್ನುವುದನ್ನು ಬಹುತೇಕ ಎಲ್ಲ ಶಿಕ್ಷಣ ತಜ್ಞರೂ ಒತ್ತಿ ಹೇಳಿದ್ದಾರೆ. ಜಗತ್ತಿನಾದ್ಯಂತ ಮಾನವ ಸಂಪನ್ಮೂಲ ತಜ್ಞರೂ ಇದನ್ನೇ ಹೇಳಿದ್ದಾರೆ.  ಜರ್ಮನಿ, ಜಪಾನ್, ಫ್ರಾನ್ಸ್‌ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇನೂ ಇಂಗ್ಲಿಷ್ ಭಾಷೆ ಪ್ರಾಧಾನ್ಯ ಸಾಧಿಸಿಲ್ಲ. ಆಯಾ ರಾಷ್ಟ್ರಗಳ ಮಾತೃಭಾಷೆಗಳೇ ಈಗಲೂ ಪ್ರಾಧಾನ್ಯ ಸಾಧಿಸಿವೆ ಎಂಬು­ದನ್ನು ನಾವು ಗಮನಿಸಬೇಕು.  ಆಡುಮಾತಾಗಿ ಇಂಗ್ಲಿಷ್‌ ಕಲಿಸದೆ, ಅದನ್ನು ಶಿಕ್ಷಣದ ಪ್ರಾಥಮಿಕ ಹಂತದಲ್ಲಿ  ಮಾಧ್ಯಮವಾಗಿ ಹೇರುವುದು ಖಂಡಿತಾ ಅವೈಜ್ಞಾನಿಕ.

ಮಾತೃಭಾಷೆಯನ್ನು ಬಿಟ್ಟು ಪರಕೀಯ ಆಂಗ್ಲ­ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವುದರಿಂದ ಮಾತೃಭಾಷೆ­ಯಲ್ಲಿ­ರುವ ಅಪಾರ ದೇಸಿ ಜ್ಞಾನ ಸಂಪತ್ತಿನಿಂದಲೂ ಮಕ್ಕಳು ವಂಚಿತರಾಗ­ಬೇಕಾ­ಗುತ್ತದೆ.   ಈಗಾಗಲೇ ಸಂವಿಧಾನದಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಧಿ­­ಗಳನ್ನು ಉಲ್ಲೇಖಿಸಿ ರಾಜ್ಯದ ಹಾದಿ ಬೀದಿಗಳಲ್ಲಿ ಆಂಗ್ಲ ಮಾಧ್ಯಮದ ಶಾಲೆ­­ಗಳನ್ನು ತೆರೆದಿರುವ ಶಿಕ್ಷಣದ ವ್ಯಾಪಾರಸ್ಥರಿಗೆ ಈ ತೀರ್ಪಿನಿಂದ ಇನ್ನಷ್ಟು ಕುಮ್ಮಕ್ಕು ಒದಗಬಹುದು. ಆದರೆ ಸುಪ್ರೀಂಕೋರ್ಟಿನ ತೀರ್ಪಿನ ಕುರಿತಂತೆ ಭಾವೋ­ದ್ವೇಗ­ಗಳಿಗೆ ಅವಕಾಶ ಕೊಡದಂತೆ,  ಕನ್ನಡ ಭಾಷೆಯ ಹಿತ ಕಾಯುವ  ತುರ್ತು ಕ್ರಮಗಳನ್ನು ರಾಜ್ಯ ಸರ್ಕಾರ  ಕೈಗೊಳ್ಳಬೇಕು. ಮುಖ್ಯ­ವಾಗಿ, ರಾಜ್ಯದಲ್ಲಿ ಕನ್ನಡವನ್ನು ‘ದುಡಿಮೆಯ ಭಾಷೆ’ಯಾಗಿ ಗಟ್ಟಿಯಾಗಿ ರೂಪಿಸಲು ಸಮಗ್ರ ಕ್ರಮಗಳನ್ನು ಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT