ಹಿಂದಿ ಸಾಹಿತಿ ಉದಯ ಪ್ರಕಾಶ್ ಅವರು ಎಂ.ಎಂ. ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿ 2015ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದರು. ಇದಾದ ನಂತರ, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳಿಕೆ ನೀಡಿ ನಯನತಾರಾ ಸೆಹಗಲ್, ಅಶೋಕ್ ವಾಜಪೇಯಿ, ಸಾರಾ ಜೋಸೆಫ್ ಮುಂತಾ ದವರು ಪ್ರಶಸ್ತಿ ವಾಪಸಾತಿ ಅಭಿಯಾನ ಪ್ರಾರಂಭಿಸಿದರು. ಕರ್ನಾಟಕದಲ್ಲೂ ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ ಮುಂತಾದ ಲೇಖಕರು ಇದೇ ಮೇಲ್ಪಂಕ್ತಿ ಅನುಸರಿಸಿದರಲ್ಲದೆ, ಲೆಕ್ಕವಿಲ್ಲದಷ್ಟು ಯುವ ಸಾಹಿತಿಗಳೂ ರಾಜ್ಯ ಮಟ್ಟದ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ನಿರಾಕರಿಸಿದರು. 2018ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನಿರಾಕರಿಸಿರುವ ರಂಗಕರ್ಮಿ ಎಸ್.ರಘುನಂದನ ಅವರ ನಿರ್ಧಾರವನ್ನು ಈ ಅಭಿಯಾನದ ಮುಂದುವರಿಕೆಯಾಗಿಯೇ ನೋಡಬೇಕಾಗುತ್ತದೆ.

ಪ್ರಶಸ್ತಿ ನಿರಾಕರಣೆಯು ನಮ್ಮ ವಾಙ್ಮಯ ಪರಂಪರೆಗೆ ಹೊಸತಲ್ಲ. ನಮ್ಮ ಪ್ರಾಚೀನ ಕವಿಗಳು ಜೀವಯಾಪನೆಗಾಗಿ ರಾಜಾಶ್ರಯವನ್ನು ಅವಲಂಬಿಸಿದ್ದರು ನಿಜ. ಆದರೆ ತಮಗೆ ದೊರೆತಿದ್ದ ರಾಜಮನ್ನಣೆಯನ್ನು ಇಂದಿನವರಂತೆ ಹೆಮ್ಮೆಯ ಅಥವಾ ಪ್ರತಿಷ್ಠೆಯ ವಿಷಯವೆಂದು ಭಾವಿಸಿದವರಲ್ಲ. ಬದಲಾಗಿ ಅದನ್ನು ‘ಹಂಗು’, ‘ಅನ್ನದ ಋಣ’ (ಜೋಳದ ಪಾಳಿ) ಎಂದು ತಿಳಿದಿದ್ದರು. ಪಂಪ ತನಗೆ ‘ಜಿನೇಂದ್ರ ಗುಣಸ್ತುತಿಯಿಂದ ಎಲ್ಲವೂ ದೊರೆತಿದೆ’ ಎಂದು ಹೇಳುತ್ತ, ಮುಂದುವರಿದು ‘ಪೆರರೀವುದೇಂ? ಪೆರರ ಮಾಡುವುದೇಂ? ಪೆರರಿಂದಮಪ್ಪುದೇಂ?’ (ಬೇರೆಯವರು ಏನನ್ನು ಕೊಟ್ಟಾರು, ಏನನ್ನು ಮಾಡಿಯಾರು? ಅವರಿಂದ ಆಗುವ ಉಪಕಾರವಾದರೂ ಏನು?) ಎಂದು ಪರೋಕ್ಷವಾಗಿ ರಾಜರನ್ನು ಉದ್ದೇಶಿಸಿ ಕೇಳುತ್ತಾನೆ. ಪ್ರಭುತ್ವವನ್ನು ಮೊಲದ ಹೆಣಕ್ಕೆ ಹೋಲಿಸುವ ನಮ್ಮ ವಚನಕಾರರು ‘ಕುಲ ಮದ, ಛಲ ಮದ, ವಿದ್ಯಾ ಮದ’ ಬೆಳೆಸಿಕೊಂಡ ಪ್ರಭುತ್ವವನ್ನು ಶಾಶ್ವತವಾಗಿ ದೂರ ವಿಡುತ್ತಾರೆ. ಹರಿಹರನಂತೂ ಇನ್ನೂ ಒಂದು ಹೆಜ್ಜೆ ಮುಂದುವರಿದು ‘ಮನುಜರ ಮೇಲೆ ಸಾವರ ಮೇಲೆ ಕನಿಷ್ಠರ ಮೇಲೆ (ಅಂದರೆ ರಾಜ ಮಹಾರಾಜರುಗಳ ಮೇಲೆ) ಕಾವ್ಯ ಬರೆಯಲಾರೆ’ ಎಂದು ಸ್ಪಷ್ಟವಾಗಿ ಪ್ರತಿಜ್ಞೆ ಮಾಡಿ ರಾಜಮನ್ನಣೆಯನ್ನು ನಿರಾಕರಿಸುತ್ತಾನೆ.

ಸರ್ಕಾರಗಳು ಪ್ರಶಸ್ತಿ ನೀಡುವ ಪರಿಪಾಟವೇ ಜನ ತಂತ್ರ ವ್ಯವಸ್ಥೆಗೊಗ್ಗದ ಒಂದು ಫ್ಯೂಡಲ್ ಸಂಪ್ರದಾಯವಾಗಿದೆ. ಹಿಂದೆ ರಾಜಮಹಾರಾಜರು ತಮ್ಮ ಕೀರ್ತಿಯನ್ನು ಆಚಂದ್ರಾರ್ಕವಾಗಿಸಲೆಂದೋ, ತಾವು ನಂಬಿದ ಧರ್ಮವನ್ನು ಪ್ರಚಾರ ಮಾಡಲೆಂದೋ ಕವಿಗಳನ್ನು ಸಾಕುತ್ತಿದ್ದರು, ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿದ್ದರು. ಆದರೆ ಇಂದಿನ ಕವಿ, ಉತ್ತರದಾಯಿಯಾಗಬೇಕಾದುದು ರಾಜ ಮಹಾರಾಜರಿಗಲ್ಲ, ಜನರಿಗೆ ಮತ್ತು ಒಟ್ಟಾರೆ ಸಮಾಜಕ್ಕೆ. ಒಬ್ಬ ಕಲಾವಿದನಿಗೆ ಸಹೃದಯನ ಪ್ರಶಂಸೆ ದೊರೆತರೆ ಸಾಲದೇ? ಸಹೃದಯರ ಮನ್ನಣೆಯೇ ಅರ್ಥಪೂರ್ಣವಾದುದು. ಅದನ್ನು ಪಡೆವವನು ಪ್ರಭುತ್ವದ ಮನ್ನಣೆ ಬಯಸಲಾರ.

ಪ್ರಭುತ್ವಕ್ಕೂ ಸಾಹಿತ್ಯ ಸಂವೇದನೆಗೂ ಎತ್ತಣಿಂದೆತ್ತ ಸಂಬಂಧ? ಕಲೆ, ಸಾಹಿತ್ಯ, ಸಂಸ್ಕೃತಿಯ ಗಂಧವರಿಯದ ರಾಜಕಾರಣಿಗಳಿಗೆ, ಪ್ರಶಸ್ತಿ ನೀಡುವ ಯಾವ ಅರ್ಹತೆ ಇದೆ? ಪ್ರಭುತ್ವದಿಂದ ಪ್ರಶಸ್ತಿ ಪಡೆವುದೇ ಹೆಗ್ಗಳಿಕೆಯಾಗಿಬಿಟ್ಟರೆ, ರಾಜಕಾರಣಿಗಳ ಊಳಿಗದವರಂತೆ ಕವಿ ಕಲಾವಿದರು ವರ್ತಿಸಬೇಕಾಗುತ್ತದೆ. ಲಾಬಿ ಮಾಡ ಬೇಕಾಗುತ್ತದೆ. ಇದನ್ನೆಲ್ಲ ಕಂಡೇ ‘ನಮ್ಮಲ್ಲಿ ಕೆಲವರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಮತ್ತೆ ಕೆಲವರು ಪ್ರಶಸ್ತಿಯನ್ನು ಹೊಡೆದುಕೊಂಡಿದ್ದಾರೆ’ ಎಂದು ಹಿರಿಯ ಸಾಹಿತಿ ಚಂಪಾ ಹಿಂದೊಮ್ಮೆ ಲೇವಡಿ ಮಾಡಿದ್ದು.

2010ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋ ಆಗಿದ್ದ ಲೇಖಕ ಖುಷ್ವಂತ್ ಸಿಂಗ್ ಅವರು ಸಾಹಿತಿಗಳು ರಾಷ್ಟ್ರಮಟ್ಟದಲ್ಲಿ ಲಾಬಿ ಮಾಡುತ್ತಿದ್ದುದನ್ನು ಕಂಡು ಬೇಸತ್ತಿದ್ದರು. ಆರೋಗ್ಯಕರ ಸಾಹಿತ್ಯಿಕ ವಾತಾವರಣ ಸ್ಥಾಪನೆಯಾಗಬೇಕೆಂದರೆ ಕೇಂದ್ರ ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಯನ್ನು ತಕ್ಷಣವೇ ವಿಲೀನಗೊಳಿಸಿಬಿಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗಲೂ ಕೇಂದ್ರ ಸಾಹಿತ್ಯ ಅಕಾಡೆಮಿ ಹಲವು ವಿವಾದಗಳಿಂದ, ಆರೋಪಗಳಿಂದ ಮುಕ್ತವಾಗಿಲ್ಲ. ನೇಮಕಾತಿ, ಪ್ರಶಸ್ತಿ ಪ್ರದಾನ, ಹಣಕಾಸು ನಿರ್ವಹಣೆ ಮುಂತಾದ ವಿಷಯಗಳಲ್ಲಿ ಅಕ್ರಮಗಳು ನಡೆದಿವೆಯೆಂಬ ಹಲವು ಆರೋಪಗಳು ಇವೆ.

ಈ ಎಲ್ಲ ಕಾರಣಗಳಿಂದಾಗಿ, ಇಂದು ನಮ್ಮ ಸಾಹಿತ್ಯಿಕ ವಲಯದವರು ಪ್ರಶಸ್ತಿ ವಾಪಸಾತಿಯ ಮಾತನ್ನೆತ್ತಿದಾಗಲೆಲ್ಲ ಅಪಹಾಸ್ಯಕ್ಕೆ ಈಡಾಗುವಂತಾಗಿದೆ. ದೇಶದಲ್ಲಿ ಏನೇ ಅಹಿತಕರ ಘಟನೆ ನಡೆದರೂ ‘ಪ್ರಶಸ್ತಿ ವಾಪಸಾತಿ ಗುಂಪಿನವರು ಈಗ ಎಲ್ಲಿ ತಲೆಮರೆಸಿಕೊಂಡಿದ್ದಾರೆ?’ ಎಂದು ಬಲಪಂಥೀಯರು ಕೇಳುವಂತಾಗಿದೆ. ಹಿಂದೆಂದೋ ನಡೆದ ನೂರೆಂಟು ಅಹಿತಕರ
ಪ್ರಕರಣಗಳನ್ನು ಉಲ್ಲೇಖಿಸಿ ‘ಆಗೆಲ್ಲ ಇವರೆಲ್ಲ ಎಲ್ಲಿದ್ದರು?’ ಎಂದು ಅವರು ಲೇವಡಿ ಮಾಡುವಂತಾಗಿದೆ. ಇಂಥವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಅನ್ಯರನ್ನು ಟೀಕಿಸುವ ಮುನ್ನ ನಾವು ನಮ್ಮ ಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕಾಗುತ್ತದೆ.

ಅದೇನೇ ಇರಲಿ, ಪ್ರಶಸ್ತಿ ವಾಪಸಾತಿಯ ನಿರ್ಧಾರ ನಿಜಕ್ಕೂ ಕ್ರಾಂತಿಕಾರಕವಾದುದು. ಆದರೆ ಈ ವಾಪಸಾತಿ ತತ್‍ಕ್ಷಣದ ಬೇಸರ, ಭಾವುಕತೆ ಅಥವಾ ಸಿಟ್ಟಿಗೆ ಒಂದು ಆತುರದ ಪ್ರತಿಕ್ರಿಯೆ ಆಗಬಾರದು. ಇದಕ್ಕೊಂದು ದೃಢ ವಾದ ತಾತ್ವಿಕ ನೆಲೆಗಟ್ಟನ್ನು ನೀಡಬೇಕಾದ ಅಗತ್ಯವಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲೂ ಕೋಮು ಹಿಂಸೆ, ಮತದ್ವೇಷ ಮುಂತಾದವು ನಡೆದಿದ್ದವು ಎಂದು ರಘು ನಂದನ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿ ದ್ದಾರೆ. ನಮ್ಮ ಕಲ್ಪನೆಯ ಪ್ರಜಾಪ್ರಭುತ್ವ ಸಾಕಾರಗೊಳ್ಳುವವರೆಗೂ, ಹಿಂಸೆ, ದ್ವೇಷದ ವಾತಾವರಣ ಹೀಗೇ ಮುಂದುವರಿಯುತ್ತಿರುವವರೆಗೂ ನಾವು ಸರ್ಕಾರ ಗಳಿಂದ ಯಾವುದೇ ಪ್ರಶಸ್ತಿ ಸ್ವೀಕರಿಸುವುದಿಲ್ಲವೆಂದು ಸಾಹಿತಿ-ಕಲಾವಿದರು ಒಮ್ಮತದಿಂದ ಸಂಕಲ್ಪಿಸಬೇಕಾಗಿದೆ. ಪ್ರಶಸ್ತಿ ನೀಡುವ ಬಡಿವಾರವನ್ನು ಮೀರಿದ ಹಲವು ಹೊಣೆಗಾರಿಕೆಗಳು ತಮ್ಮ ಮೇಲಿವೆ ಎಂದು ಈ ಪ್ರಾಧಿಕಾರ, ಅಕಾಡೆಮಿ ಇತ್ಯಾದಿ ಸರ್ಕಾರಿ ಸಂಸ್ಥೆಗಳು ಸಹ ಅರ್ಥ ಮಾಡಿಕೊಳ್ಳಬೇಕಾಗಿದೆ. ಸಾಹಿತಿಗಳ ನೆರವಿನಿಂದ ಭಾಷೆ, ಕಲೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಅವು ಮಾಡಬೇಕಾಗಿದೆ.

ಸರ್ಕಾರ ಹೆಚ್ಚೆಂದರೆ ಸಾಹಿತಿ, ಕಲಾವಿದರಿಗೆ ಪಿಂಚಣಿ, ವೈದ್ಯಕೀಯ ಸವಲತ್ತು, ಮೂಲ ಸೌಲಭ್ಯ, ಕನಿಷ್ಠ ಜೀವನಾಂಶ ಇತ್ಯಾದಿಗಳನ್ನು ನೀಡಲಿ. ಹಾಗೆ ನೀಡಬೇಕಾದುದು ಅದರ ಕರ್ತವ್ಯ ಕೂಡ. ಆದರೆ ಕವಿ- ಕಲಾವಿದರ ಕೃತಿಗಳಿಗೆ ಸರ್ಕಾರದ ಪ್ರೋತ್ಸಾಹ, ಪ್ರವರ್ಧನೆಯ ಅಗತ್ಯವಿಲ್ಲ. ಒಂದು ಸಾಹಿತ್ಯ ಕೃತಿ ಓದುಗರ ಮೆಚ್ಚುಗೆಯಿಂದ ಸಾರ್ಥಕವಾಗುತ್ತದೆಯಲ್ಲದೆ ಪ್ರಭುತ್ವದ ಪ್ರವರ್ಧನೆ, ಪ್ರೋತ್ಸಾಹದಿಂದ ಯಾವ ಸಾಹಿತ್ಯ ಕೃತಿಯೂ ಜನಮನದಲ್ಲಿ ಚಿರಕಾಲ ಉಳಿಯುವುದಿಲ್ಲ.

ಕೆಲವು ವರ್ಷಗಳ ಹಿಂದೆ ‘ರಾಷ್ಟ್ರಕವಿ’ ಗೌರವ ನೀಡುವ ಪದ್ಧತಿಯನ್ನು ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ವಿದ್ವತ್ ವಲಯದಲ್ಲಿ ಚರ್ಚೆಯಾಗಿತ್ತು. ಇದು, ಬ್ರಿಟಿಷ್ ವಸಾಹತುಶಾಹಿಯಿಂದ ಪ್ರಾರಂಭವಾಗಿದ್ದು, ಇದನ್ನು ಇಂದಿಗೂ ಮುಂದುವರಿಸುವುದರಲ್ಲಿ ಅರ್ಥವಿಲ್ಲ ವೆಂದು ವಿದ್ವಾಂಸರು ಹೇಳಿದ್ದರು. ನಿನ್ನೆ ಮೊನ್ನೆ ಆಳ್ವಿಕೆ ಮಾಡಿದ ಬ್ರಿಟಿಷರ ಕೆಲವು ಪದ್ಧತಿಗಳೇ ಇಂದಿಗೆ ಅಪ್ರಸ್ತುತವಾಗುತ್ತವೆ ಎಂದ ಮೇಲೆ, ಪ್ರಶಸ್ತಿ ಪ್ರದಾನವೆಂಬ ಮಧ್ಯಯುಗದ ಸಾಮ್ರಾಜ್ಯಶಾಹಿ ಪದ್ಧತಿಯನ್ನು ಸರ್ಕಾರಗಳು ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿದೆಯೇ?

ಕವಿಯಾದವನು ಹಿಂಸಾಚಾರ, ಭ್ರಷ್ಟಾಚಾರಗಳಿಂದ ಮುಕ್ತವಾದ ವ್ಯವಸ್ಥೆಯತ್ತ ಸಮಾಜವನ್ನು ಮುನ್ನಡೆಸಬೇಕಾಗಿದೆ. ಕೊನೆಯಪಕ್ಷ ಅಂತಹ ಆದರ್ಶ ರಾಜ್ಯದ ಕನಸನ್ನು ಜನಮಾನಸದಲ್ಲಿ ಬಿತ್ತುವ ಮೂಲಕ, ಅಂತಹ ರಾಜ್ಯ ನಮ್ಮ ನಡುವೆ ಇನ್ನೂ ಸಾಕಾರಗೊಂಡಿಲ್ಲ ಎಂಬ ವೇದನೆಯನ್ನು ಜನಮನದಲ್ಲಿ ಉಳಿಸುವ ಮೂಲಕ ಸಮಾಜವನ್ನು ಸದಾ ಅನುಗ್ರಹಿಸುತ್ತಿರಬೇಕಾಗಿದೆ. ಇಂತಹ ಕವಿ, ಈಗಾಗಲೇ ಕಂಗೆಟ್ಟು ಕೂತಿರುವ ಸಮಾಜ ತನಗೆ ಪ್ರಶಸ್ತಿ ಅನುಗ್ರಹಿಸಬೇಕೆಂದು ಹಾತೊರೆಯುವುದು ಕೃಪಣತನವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.