ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ನಮ್ಮ ನಮ್ಮ ಮನವ ಸಂತೈಸಿಕೊಂಡರೆ...

Published 3 ಜುಲೈ 2024, 20:28 IST
Last Updated 3 ಜುಲೈ 2024, 20:28 IST
ಅಕ್ಷರ ಗಾತ್ರ

ಗುರುಕುಲದಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯಾಭ್ಯಾಸ ಮುಗಿಸಿ ಮರಳಿ ಹೊರಟಿದ್ದ. ಎಲ್ಲರಿಂದ ಒಳ್ಳೆಯ ಶಿಷ್ಯ ಎಂದು ಹೊಗಳಿಸಿಕೊಂಡಿದ್ದನಾತ. ಗುರುಗಳು ಅವನಿಗೊಂದು ಕನ್ನಡಿಯನ್ನು ಕೊಟ್ಟರು. ‘ಮಗೂ ಇದು ಅಮೂಲ್ಯವಾದ ಕನ್ನಡಿ. ಇದರಲ್ಲಿ ಮುಖ ನೋಡಿಕೊಂಡವರ ಸದ್ಗುಣ, ದುರ್ಗುಣವೆಲ್ಲ ಗೊತ್ತಾಗುತ್ತದೆ’ ಎಂದರು. ಶಿಷ್ಯ ಆ ಕನ್ನಡಿಯನ್ನು ಮೊದಲು ಗುರುಗಳ ಕಡೆಗೇ ತಿರುಗಿಸಿದ. ಅವರಲ್ಲಿ ಕ್ರೋಧದ ಒಂದಂಶ ಇನ್ನೂ ಬಾಕಿ ಇರುವುದನ್ನು ನೋಡಿ, ‘ಅಲ್ಲ, ನನ್ನ ಗುರುಗಳನ್ನು ಆದರ್ಶ ವ್ಯಕ್ತಿ ಎಂದು ಭಾವಿಸಿದ್ದೆ, ಇವರಲ್ಲೇ ದುರ್ಗುಣ ಇದೆಯಲ್ಲ’ ಎಂದುಕೊಂಡು ತನಗಾದ ನಿರಾಸೆಯನ್ನು ನುಂಗಿಕೊಂಡು ಮನೆಕಡೆಗೆ ಹೊರಟ.

ಊರ ಹತ್ತಿರ ಬರುತ್ತಿದ್ದಂತೆಯೇ ಸ್ನೇಹಿತನೊಬ್ಬ ಸಿಕ್ಕಿದ. ಅವನನ್ನು ಪರೀಕ್ಷೆ ಮಾಡೋಣವೆಂದು ಕನ್ನಡಿ ಹಿಡಿದರೆ ಅವನಲ್ಲೂ ಕೆಟ್ಟ ಗುಣಗಳು... ಗೆಳೆಯನ ಮೇಲಿನ ನಂಬಿಕೆಯೂ ಹೋಯಿತು. ಮನೆಯ ಹತ್ತಿರ ಬರುತ್ತಿದ್ದಂತೆ ಸಂಬಂಧಿಯೊಬ್ಬ ಸಿಕ್ಕಿದ. ಅವನನ್ನು ಪರೀಕ್ಷೆ ಮಾಡಿದರೆ ಅವನಲ್ಲೂ ಅದೇ...

ಮನೆಗೆ ಹೋಗಿ ತಂದೆಯೆದುರು ಕನ್ನಡಿ ಹಿಡಿದರೆ ಕೆಟ್ಟ ಗುಣ ಕಾಣಲಿಕ್ಕಿಲ್ಲ, ಅಪ್ಪನಿಗೆ, ಅಮ್ಮನಿಗೆ ಸಮಾಜದಲ್ಲಿ ಎಷ್ಟೊಳ್ಳೆಯ ಹೆಸರಿದೆ ಎಂದೆಲ್ಲ ಯೋಚಿಸಿ ಅವರೆದುರು ಕನ್ನಡಿ ಹಿಡಿದರೆ ನೋಡುವುದೇನು... ಅವಗುಣಗಳು ಅವರನ್ನೂ ಬಿಟ್ಟಿಲ್ಲ... ಈತ ನಿರಾಸೆಯಿಂದ ಕುಸಿದು ಕುಳಿತ. ಅಲ್ಲ, ಎಂಥ ಇಬ್ಬಗೆಯ ಜಗತ್ತಿದು... ಎಲ್ಲರೂ ಹೊರಗೆ ಕಾಣುವುದೊಂದು, ಒಳಗಿರುವುದು ಇನ್ನೊಂದು. ಗುರುಗಳಿಂದ ಹಿಡಿದು ತಂದೆತಾಯಿಗಳವರೆಗೆ ಪ್ರತಿಯೊಬ್ಬರಲ್ಲೂ ಕೆಟ್ಟ ಗುಣಗಳಿವೆ. ಬೇಸರದಿಂದ ಮತ್ತೆ ಗುರುಕುಲಕ್ಕೆ ಹೋಗಿ ಗುರುಗಳನ್ನು ಕೇಳಿದ, ‘ಗುರುಗಳೇ ಇದೆಂಥ ಕನ್ನಡಿಯನ್ನು ಕೊಟ್ಟಿದ್ದೀರಿ ನೀವು? ಎಲ್ಲರಲ್ಲೂ ಎಷ್ಟು ಕೆಟ್ಟ ಗುಣಗಳಿವೆ. ನಿಮ್ಮಲ್ಲಿಯೂ ಕೋಪದ ಅಂಶವೊಂದು ಉಳಿದುಕೊಂಡಿದೆ’.

ಗುರುಗಳು ಜೋರಾಗಿ ನಕ್ಕು ಒಂದು ನಿಮಿಷ ತಡಿ ಎಂದವರೇ ಆ ಕನ್ನಡಿಯನ್ನು ತೆಗೆದು ಶಿಷ್ಯನ ಮುಖಕ್ಕೆ ಹಿಡಿದರು. ‘ನೋಡು ನಿನ್ನ ಪೂರ್ತಿ ಮನಸ್ಸು ಮೈಲಿಗೆಯಾಗಿದೆ, ಅದರಲ್ಲಿ ಒಳ್ಳೆಯ ಗುಣಗಳೇ ಕಾಣುತ್ತಿಲ್ಲ’ ಅಂದವರೇ ‘ಮಗೂ ನಾನು ನಿನಗೆ ಈ ಕನ್ನಡಿಯನ್ನು ಕೊಟ್ಟಿದ್ದು ನೀನು ನಿನ್ನ ಪ್ರತಿಬಿಂಬವನ್ನು ನೋಡಿಕೊಂಡು ನಿನ್ನದೇ ಅವಗುಣಗಳನ್ನು ಅರಿತುಕೊಂಡು ಸುಧಾರಣೆ ತಂದುಕೊಳ್ಳಲೆಂದು... ಆದರೆ ನೀನು ಬೇರೆಯವರ ಅವಗುಣಗಳ ಪಟ್ಟಿ ಮಾಡಿದೆಯೇ ಹೊರತು ನಿನ್ನಲ್ಲಿ ಯಾವ ಕೆಟ್ಟ‌ ಗುಣವಿದೆ ಎಂಬುದನ್ನು ನೋಡಿಕೊಳ್ಳಲೇ ಇಲ್ಲ’ ಅಂದರು. ಶಿಷ್ಯ ತಲೆತಗ್ಗಿಸಿದ.

ನಿಜ, ಈಗ ಜಗತ್ತಿನಲ್ಲಿ ಆಗುತ್ತಿರುವುದೂ ಹೀಗೆಯೇ... ಬೇರೆಯವರಲ್ಲಿ ಇರುವ ದೋಷಗಳ ಪಟ್ಟಿ ಮಾಡುತ್ತ ಮಾಡುತ್ತ ನಾವು ನಮ್ಮ ಆಂತರ್ಯವನ್ನು ಇಣುಕಿನೋಡುವುದನ್ನೇ ಮರೆತಿದ್ದೇವೆ. ಇತರರನ್ನು ದೂಷಿಸುವ ಮೊದಲು ನಾವೆಲ್ಲ ನಮ್ಮನ್ನು ಸುಧಾರಿಸಿಕೊಳ್ಳುವುದೇ ಇಂದಿನ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT