ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಒಳ್ಳೆಯತನ 

Published 9 ಜುಲೈ 2024, 0:02 IST
Last Updated 9 ಜುಲೈ 2024, 0:02 IST
ಅಕ್ಷರ ಗಾತ್ರ

ಓಶೋ ಅವರನ್ನು ಒಬ್ಬ ಕೇಳಿದ, ‘ಒಳ್ಳೆಯತನವನ್ನು ಕಂಡುಕೊಳ್ಳುವುದು ಹೇಗೆ? ಅದು ಮನುಷ್ಯನ ಮುಖದಿಂದ ಅಳೆಯಲಾಗುವುದಿಲ್ಲ. ಎಷ್ಟೋ ವೇಳೆ ಒಳ್ಳೆಯತನದ ಸೋಗಿನಿಂದ ಕೆಟ್ಟತನ ಮರೆಯಾಗಿರುತ್ತದೆ. ಇಂಥಾ ಅನುಭವಗಳೇ ಹೆಚ್ಚಿರುವಾಗ ಇದನ್ನು ಕಂಡುಕೊಳ್ಳುವುದು ಹೇಗೆ’ ಎಂದು. 
ಓಶೋ ನಗುತ್ತಾ, ‘ಒಳ್ಳೆಯತನ ಕಾಣುವ ವಸ್ತು ಎನ್ನುವುದೆಂದು ನೀನು ನಿರ್ಧಾರ ಮಾಡಿದ್ದೀಯಾ?’ ಎಂದರು. ಅದಕ್ಕೆ ಪ್ರಶ್ನೆ ಕೇಳಿದವ, ‘ಕಾಣದೆ ನಾವು ಕಂಡುಕೊಳ್ಳುವುದು ಹೇಗೆ ಕಣ್ಣಿಗೆ ಕಾಣುವ ಸತ್ಯಗಳನ್ನು ತಾನೆ ನಾವು ನಂಬಬೇಕಿರುವುದು’ ಎಂದ. ಓಶೋಗೆ ಅವನ ಪ್ರಶ್ನೆಯಲ್ಲಿ ಮಹತ್ವದ್ದನ್ನು ಹುಡುಕುವ ತವಕ. ಕೇಳಿದರು, ‘ಹಾಗಾದರೆ ಎಲ್ಲವನ್ನು ಕಂಡೇ ನಿರ್ಧಾರ ಮಾಡುತ್ತೀಯಾ ಎನ್ನುವುದಾದರೆ ಕಾಣುವ ಮೊದಲಿನ ಪಯಣದ ಬಗ್ಗೆ ನೀನು ಎಂದೂ ಯೋಚಿಸಿಲ್ಲವೆ?’ ಎಂದರು. ಪ್ರಶ್ನೆ ಕೇಳಿದವ ಮಂಕಾದ- ತಾನು ಕೇಳಿದ ಪ್ರಶ್ನೆ ಸರಿಯಿಲ್ಲವೇ ಎಂದು.

ಓಶೋಗೆ ಅವನ ಗೊಂದಲ ಅರ್ಥವಾಯಿತು. ಅವರು ಅವನನ್ನು ಕುರಿತು, ‘ನೀನು ಒಂದು ಸುಂದರ ಉದ್ಯಾನವನದತ್ತ ಹೊರಟಿದ್ದೀಯ. ನಿನಗೆ ಮೊದಲು ಆಗುವ ಅನುಭವ ತಣ್ಣನೆಯ ಗಾಳಿ. ಅದು ನಿನ್ನನ್ನು ತೀಡಿ ಇಲ್ಲೇ ಮುಂದೆ ಉದ್ಯಾನವನವಿದೆ ಎಂದು ಹೇಳುತ್ತದೆ. ಇನ್ನೂ ಸ್ವಲ್ಪ ದೂರ ಹೋಗು ಹೂಗಳ ಹಿತವಾದ ಪರಿಮಳ ನಿನ್ನ ನಾಸಿಕಾಘ್ರವನ್ನು ತಾಕುತ್ತದೆ.  ಆಗ ನಿನಗೆ ಗೊತ್ತಾಗುತ್ತದೆ ಮುಂದೆ ಉದ್ಯಾನವನದಲ್ಲಿ ಹೂಗಳು ಅರಳಿವೆ ಎಂದು. ಇನ್ನೂ ಸ್ವಲ್ಪ ದೂರಕ್ಕೆ ದುಂಬಿಗಳ ಝೇಂಕಾರ ಕೇಳಿ ಅರಳಿದ ಹೂಗಳು ವಾಸನಾಭರಿತ ಮಾತ್ರವಲ್ಲ ಅವು ಮಧುವಿನಿಂದಲೂ ಕೂಡಿವೆ ಎಂದು. ಹೀಗೆ ಮುಂದೆ ಹೋದರೆ ಉದ್ಯಾನವನ ನಿನ್ನ ಕಣ್ಣಿಗೆ ಗೋಚರವಾಗುತ್ತದೆ. ಆ ಹಸಿರು ರಾಶಿಯಲ್ಲಿ ಕಣ್ಣಿಗೆ ಹಬ್ಬವೆನ್ನಿಸುವಂತೆ ಅರಳಿರುವ ಹೂಗಳು, ಖುಷಿ ಖುಷಿಯಿಂದ ಜೇನನ್ನು ಹೀರುವ ದುಂಬಿ-ಜೇನ್ನೊಣಗಳ ಹಿಂಡು ಎಲ್ಲವೂ ಒಟ್ಟಿಗೆ ಕಂಡು ಮನಸ್ಸು ಹಿಗ್ಗುತ್ತದೆ ಅಲ್ಲವೆ? ಎಂದು ಕೇಳಿದರು.

ಪ್ರಶ್ನೆ ಕೇಳಿದವ ನಿಜ ಎನ್ನುವಂತೆ ತಲೆ ಆಡಿಸಿ, ‘ನಿಜ. ಆದರೆ, ಒಳ್ಳೆಯತನ ಉದ್ಯಾನವನದಂತೆ ದೃಗ್ಗೋಚರವಲ್ಲ ಅಲ್ಲವೇ’ ಎಂದ. ನಕ್ಕ ಓಶೋ ಹೇಳಿದರು, ‘ಪ್ರಿಯಮಿತ್ರ ಕಾಣುವುದು ಎಂದರೆ ಕಣ್ಣಳತೆ ಎಂದು ಭಾವಿಸುವುದು ತಪ್ಪು. ಕಂಡುಕೊಳ್ಳುವುದು ಒಂದು ಪಯಣ ಎಂದು ನಂಬು. ಒಂದು ತೋಟವನ್ನು ಹುಡುಕುವುದು ನಿನ್ನ ಲಕ್ಷ್ಯವೇ ಆಗಿದ್ದರೆ, ನಿನ್ನೊಳಪ್ರಜ್ಞೆ ಜಾಗೃತವಾಗಿ ಅದಕ್ಕೆ ಸಂಬಧಿಸಿದ್ದು ನಿನಗೆ ತಾನಾಗೇ ಗೋಚರವಾಗುತ್ತಾ ಹೋಗುತ್ತದೆ. ಹಾಗೆ ಒಳ್ಳೆಯತನವನ್ನು ಲಕ್ಷ್ಯ ಮಾಡಿದರೆ ಅದೂ ತಾನಾಗೇ ತೆರೆದುಕೊಳ್ಳುತ್ತಾ ಹೋಗುತ್ತದೆ. ನಿನ್ನ ಗಮನ ಯಾವುದೆಂದು ನೀನು ಗುರಿ ಮಾಡಿಕೊಳ್ಳುತ್ತೀಯೋ ಆ ಜಗತ್ತಿನ ಎಲ್ಲವೂ ನಿನ್ನ ಅವಗಾಹನೆಗೆ ಬಂದೇ ಬರುತ್ತದೆ. ಕೆಟ್ಟತನದ ಕಟುತ್ವ ಒಳ್ಳೆಯತನಕ್ಕಿರುವುದಿಲ್ಲ. ಹಾಗಾಗಿ ಪಯಣ ಅನಿವಾರ್ಯ. ಗಾಳಿ ತಳ್ಳುವ ತನಕವೂ ಆಕಾಶ ಮೋಡಗಳಿಂದ ಮರೆಯಾಗೇ ಇರುತ್ತದೆ. ಜಗತ್ತಿನ ಎಲ್ಲವೂ ಪಯಣ ಎನ್ನುವುದನ್ನು ಅರ್ಥ ಮಾಡಿಕೋ. ಒಳ್ಳೆಯತನ ಮಾತ್ರವಲ್ಲ, ನಿನ್ನ ಒಳಗೂ ನಿನಗೆ ಸಿಗುತ್ತದೆ’ ಎನ್ನುತ್ತಾರೆ.

ಹೌದು, ಬೇಕೆನ್ನುವುದನ್ನು ಕಂಡುಕೊಳ್ಳುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ನಮ್ಮನ್ನು ನಾವು ಹದಗೊಳಿಸಿಕೊಳ್ಳಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT