ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಹಳ್ಳಿ ಮಣ್ಣಿನ ನೆನಹು..

ನುಡಿ ಬೆಳಗು
Published 25 ಜೂನ್ 2024, 18:46 IST
Last Updated 25 ಜೂನ್ 2024, 18:46 IST
ಅಕ್ಷರ ಗಾತ್ರ

ಹಳ್ಳಿಯಲ್ಲಿ ಹುಟ್ಟಿ ಬೆಳೆದ ಇವರು ದೊಡ್ಡ ವೈದ್ಯರಾಗಿ ದೂರದ ಪಟ್ಟಣ ಸೇರಿದರು. ದುಡಿದು ಹೆಸರು, ಹಣ, ಜನ ಸಂಪರ್ಕ ಎಲ್ಲಾ ಗಳಿಸಿದರು. ಇವರ ಕೈಗುಣ, ತ್ವರಿತ ಸ್ಪಂದನೆಗೆ ಜನ ಮನ್ನಣೆ ಸಿಕ್ಕಿತು. ವೈದ್ಯರ ಮಾನವೀಯ ನಡವಳಿಕೆಯನ್ನು ಜನ ಇಷ್ಟಪಟ್ಟರು. ಅವರ ಮೃದುನುಡಿಯ ವಿಚಾರಣೆಯಲ್ಲೇ ಅರ್ಧ ರೋಗ ವಾಸಿಯಾದ ಭಾವನೆ ಸಿಗುತ್ತಿತ್ತು. ಅನೇಕ ಸಲ ವೈದ್ಯರ ಹತಾಶ ಸಿಟ್ಟು, ಸಣ್ಣ ಗದರಿಕೆ ಕೂಡ ತಮ್ಮ ಕಾಯಿಲೆ ಗುಣಪಡಿಸುವ ಒಂದು ವಿಧಾನ ಎಂದುಕೊಂಡರು. ವೈದ್ಯರ ಚಿಕಿತ್ಸೆ, ಕಮ್ಮಿರೇಟು, ಸರಿರಾತ್ರಿಗೆ ಹೋಗಿ ಮನೆ ಕದ ಬಡಿದರೂ ಸೂಜಿ ಚುಚ್ಚಿ, ಔಷಧಿ ಕೊಟ್ಟು, ಕೊನೆಗೆ ತಿಳಿಹೇಳಿ ಕಳಿಸುವ ಪರಿ ಪ್ರಚಲಿತವಾಯಿತು. ದುಡಿದ ಕಾಸಿನಿಂದ ವೈದ್ಯರು ನಗರದಲ್ಲೇ ಸ್ವಂತ ಆಸ್ಪತ್ರೆ ಕಟ್ಟಿಸಿದರು. ಆದರೆ ಅವರೊಳಗಿನ ಹಳ್ಳಿತನದ ನೆನಪು ಮಾಸಿರಲಿಲ್ಲ. ಆಗಾಗ ಕಾಡಿಸುತ್ತಲೇ ಇತ್ತು.

ತನ್ನ ಹಳ್ಳಿಯ ಹಬ್ಬಗಳು, ಮದುವೆ, ಜಾತ್ರೆ, ಸಂಬಂಧಿಕರ ಸಾವುಗಳಲ್ಲಿ ಭಾಗಿಯಾಗುವ ಅನೇಕ ಸಂದರ್ಭಗಳನ್ನು ಅವರ ಕೆಲಸದ ಜವಾಬ್ದಾರಿ ತಪ್ಪಿಸಿತು. ಹಳ್ಳಿಯ ಕೆಲ ಜನ ಇದನ್ನು ಕೊಬ್ಬು, ಧಿಮಾಕು, ಹಣದ ಮದ, ಎಂದೆಲ್ಲಾ ವ್ಯಾಖ್ಯಾನಿಸಿಕೊಂಡರು. ಹಳ್ಳಿ ತೊರೆದು ಜಗಮಗಿಸುವ ಸಿಟಿ ಸಿಕ್ಕ ಮೇಲೆ ಇಲ್ಲಿನ ಕೆಸರು, ಸೌದೆ ಒಲೆ, ಎತ್ತು, ಕಣ, ಹಸಿವು, ನೀರಡಿಕೆ ಎಲ್ಲಿ ನೆನಪಿರುತ್ತೆ ಎಂದು ಜರೆದರು. ಡಾಕ್ಟ್ರು ಜೊತೆ ಓದಿದ ಸ್ನೇಹಿತರು, ನೆಂಟರು, ಊರಿನ ಹಿರೀಕರು ಆಗಾಗ ನಗರಕ್ಕೆ ಹೋಗಿ ವೈದ್ಯರ ಕಂಡು ಸಹಾಯ ಪಡೆದು ಬರುತ್ತಿದ್ದರು. ತನ್ನೂರಿನವರು ಬಂದರೆ ವೈದ್ಯರು ಪುಳಕಿತರಾಗುತ್ತಿದ್ದರು. ಅಷ್ಟೇ ಭಾವುಕರಾಗುತ್ತಿದ್ದರು.

ಅಪ್ಪ ಹೇಳಿದ ಮಾತು ಮನಸ್ಸಿನಲ್ಲೇ ಕೊರೆಯುತಿತ್ತು. ‘ನಮ್ಮ ಹಳ್ಳಿ ಜನರಿಗೆ ನಿನ್ನ ಸೇವೆ ಸಿಗಬೇಕು. ನಿನ್ನ ಎತ್ತಾಡಿಸಿದ ಜನ, ಓದಿದ ಶಾಲೆ, ನಾನು ಗೇದ ಹೊಲ ಯಾವುದನ್ನೂ ನೀನು ಮರೆಯಕೂಡದು. ನೀನು ಎಲ್ಲೇ ಹೋದರೂ ನಿನ್ನ ಬೇರುಗಳು ಈ ಹಳ್ಳಿಗೆ ವಾಪಸ್ಸು ಬರಬೇಕು. ಸರಿಯಾದ ವೈದ್ಯಕೀಯ ಸೌಲಭ್ಯ ಸಿಗದೆ ನಿಮ್ಮವ್ವ ಸತ್ತಿದ್ದು ನೆನಪಿಟ್ಟುಕೋ. ನಿನ್ನ ಕಷ್ಟ ಬಿದ್ದು ನಾನು ಓದಿಸಿದ್ದು ಇದಕ್ಕೇನೆ. ನನ್ನ ಈ ಆಸೆ ನೀನು ಸ್ವಾರ್ಥ ಅಂತಾನೇ ತಿಳಿದರೂ ಪರ್ವಾಗಿಲ್ಲ’ ಎಂದಿದ್ದರು.

ಅಪ್ಪನ ಆಸೆಯಂತೆ ವಾರದಲ್ಲಿ ಎರಡು ದಿನ ತನ್ನ ಹಳ್ಳಿಗೆ ಅವರೀಗ ಬರುತ್ತಿದ್ದಾರೆ. ಔಷಧಿಗಳ ಗಂಟು ಮೂಟೆ ಸುತ್ತಿಕೊಂಡು ಎರಡು ದಿನ ಉಳಿಯುತ್ತಿದ್ದಾರೆ. ಎಲ್ಲರಿಗೂ ಉಚಿತ ಚಿಕಿತ್ಸೆ ಕೊಟ್ಟು ಅವರ ಇತರೆ ಅಹವಾಲುಗಳನ್ನೂ ಆಲಿಸುತ್ತಾರೆ. ಹಳ್ಳಿಯಲ್ಲಿ ಓದುವ ಮಕ್ಕಳ ಪಟ್ಟಿ ತಯಾರಿಸಿ ಅವರಿಗೆ ಬೇಕಾದ ಸಹಾಯ ಮಾಡುತ್ತಾರೆ. ಬಾಲ್ಯದ ಗೆಳೆಯರ ಕರೆಸಿಕೊಂಡು ಕಷ್ಟ ಸುಖ ಮಾತಾಡಿ ನಕ್ಕು ಹಗುರಾಗುತ್ತಾರೆ. ತಮ್ಮ ದುಡಿಮೆಯನ್ನು ಅಪ್ಪನ ಆಸೆಯಂತೆ ಹಳ್ಳಿಗೆ ಮರಳಿಸುತ್ತಿದ್ದಾರೆ. ಸಂತೋಷವಿದೆ, ಆತ್ಮತೃಪ್ತಿಯಿದೆ. ನನ್ನೂರಿನ ಋಣ ಈ ಜೀವನದಲ್ಲಿ ತೀರಿಸಲಾರೆ ಎಂದು ಅಹಂಭಾವ ಇಲ್ಲದೆ ಹೇಳುತ್ತಾರೆ. ಮರಳಿ ಹೆಜ್ಜೆ ಕಲಿತ ಮಣ್ಣಿನ ಓಣಿಗೆ ಬಂದು ನಿಲ್ಲುವ ಸುಖ ಎಷ್ಟು ಜನರಿಗೆ ಸಿಗಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT