ಮಲೆನಾಡಿನ ತಾಲ್ಲೂಕು ಕೇಂದ್ರವೊಂದರ ಖಾಸಗಿ ಶಾಲೆಯೊಂದರಲ್ಲಿ ತಮ್ಮ ಮಗುವನ್ನು ಓದಿಸುತ್ತಿರುವ ಸ್ನೇಹಿತರೊಬ್ಬರು ಹೇಳಿದ ಸಂಗತಿಯನ್ನು ಕೇಳಿ, ನಿಂತ ನೆಲವೇ ಒಂದು ಕ್ಷಣ ಕುಸಿದಂತಾಯಿತು. ಅದೆಂದರೆ, ಅಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲು ಇರುವ ಬಸ್ಸುಗಳಲ್ಲಿ ಆ ದಾರಿಯಲ್ಲಿಯೇ ಮನೆಯಿರುವ ಕೆಲವು ಶಿಕ್ಷಕ, ಶಿಕ್ಷಕಿಯರೂ ಪ್ರಯಾಣಿಸುತ್ತಾರೆ. ಯಾರಾದರೂ ಶಿಕ್ಷಕಿ ಬಸ್ಸು ಹತ್ತಿದ ಕೂಡಲೇ ಮಕ್ಕಳು ಗಡಿಬಿಡಿಯಿಂದ ಎದ್ದು ‘ಮಿಸ್ ಇಲ್ಲಿ ಕುಳಿತುಕೊಳ್ಳಿ’ ಎಂದು ಅವರಿಗೆ ಸೀಟು ಬಿಟ್ಟುಕೊಡಲು ನಾಮುಂದು ತಾಮುಂದು ಎನ್ನುತ್ತಾರೇನೋ ಎಂದು ನೀವು ಅಂದುಕೊಂಡಿದ್ದರೆ, ನೀವಿನ್ನೂ ಹಳೆಯ ಕಾಲದಲ್ಲಿಯೇ ಇದ್ದೀರಿ ಎಂದರ್ಥ.

ಇಲ್ಲಿ ಹಾಗಾಗುವುದಿಲ್ಲ. ಮಕ್ಕಳಿಗೆ ಕುಳಿತುಕೊಳ್ಳಲು ಸೀಟುಗಳು ಖಾಲಿಯಿದ್ದರೆ ಶಿಕ್ಷಕರು ಕುಳಿತೇ ಇರಬಹುದು. ಒಂದು ವೇಳೆ ಜಾಗ ಖಾಲಿ ಇರದಿದ್ದರೆ ಆಗ ಶಿಕ್ಷಕರು ಎದ್ದು ನಿಂತು ಮಕ್ಕಳಿಗೆ ಸೀಟು ಬಿಟ್ಟು ಕೊಡುವುದು ಕಡ್ಡಾಯ. ಒಂದು ವೇಳೆ ಯಾರಾದರೂ ಶಿಕ್ಷಕರು ಮಕ್ಕಳಿಗೆ ಸೀಟು ಬಿಟ್ಟುಕೊಡಲಿಲ್ಲ ಎನ್ನಿ, ‘ನಮ್ಮ ಮಕ್ಕಳು ಹತ್ತಿದಾಗ ಜಾಗ ಇರಲಿಲ್ಲ. ಇಂತಹ ಶಿಕ್ಷಕರು ಸೀಟು ಬಿಟ್ಟುಕೊಡಲಿಲ್ಲ’ ಎಂದು ಅದೇ ಸಂಜೆ ಪಾಲಕರಿಂದ ಪ್ರಾಂಶುಪಾಲರಿಗೋ ಶಾಲಾ ಆಡಳಿತ ಮಂಡಳಿಗೋ ಕರೆ ಹೋಗುತ್ತದೆ.

ಎಷ್ಟೆಂದರೂ ಮಕ್ಕಳು ಹಣ ಕೊಟ್ಟು ಬಸ್ಸಿಗೆ ಬರುವವರು, ಶಿಕ್ಷಕರು ಪುಕ್ಕಟೆ ಬರುವವರಲ್ಲವೇ? ಹ್ಞಾಂ, ಯಾರೋ ಒಬ್ಬರೋ ಇಬ್ಬರೋ ಆ ರೀತಿಯ ಪಾಲಕರು ಇರಬಹುದು ಎಂದುಕೊಂಡು ಸಮಾಧಾನ ಮಾಡಿಕೊಳ್ಳುವ ಹಾಗಿಲ್ಲ. ಅರ್ಧಕ್ಕಿಂತಲೂ ಜಾಸ್ತಿ ಜನರು ಈ ಥರದವರೇ ಎಂಬುದನ್ನು ಕೇಳಿದರೆ ದಿಗಿಲಾಗದೇ ಇರದು!

ಇದು ಕಾಲ್ಪನಿಕವಾದ ಸಂಗತಿಯಲ್ಲ. ಆದರೆ ಇಂತಹ ವಿಷಯಗಳನ್ನು ನಂಬಲು ಸಂಕಟ ಆಗುತ್ತದೆ. ಒಂದೆರಡು ದಿನ ನನಗೆ ಈ ಸಂಗತಿಯನ್ನು ಅರಗಿಸಿಕೊಳ್ಳುವುದಕ್ಕೇ ಆಗಲಿಲ್ಲ. ಬೇರೆ ಬೇರೆ ಮೂಲಗಳಿಂದ ಖಚಿತಪಡಿಸಿಕೊಂಡ ಮೇಲಷ್ಟೇ, ಇದು ಒಂದೆರಡು ಶಾಲೆಗಳಲ್ಲಿ ಮಾತ್ರವಲ್ಲ ಹಲವು ಶಾಲೆಗಳಲ್ಲಿ ಕಂಡುಬರುತ್ತಿರುವ ವಿದ್ಯಮಾನ ಎಂಬುದು ತಿಳಿಯಿತು. ಸಾರ್ವಜನಿಕ ಸಾರಿಗೆಯಲ್ಲೂ ಶಿಕ್ಷಕರನ್ನು ಕಂಡರೆ ವಿದ್ಯಾರ್ಥಿಗಳು ಸೀಟುಗಳನ್ನು ಬಿಟ್ಟುಕೊಡುವ ಪ್ರವೃತ್ತಿ ನಿಧಾನವಾಗಿ ಮರೆಯಾಗುತ್ತಿದೆ.

ಗುರುವನ್ನು ಉನ್ನತ ಸ್ಥಾನದಲ್ಲಿಟ್ಟ ಸಂಸ್ಕೃತಿ ನಮ್ಮದು. ಶಾಲಾ ಕಾಲೇಜು ಮುಗಿದು ದಶಕಗಳೇ ಕಳೆದರೂ ಶಿಕ್ಷಕರ ಪಕ್ಕ ಕೂರಲೂ ಸಂಕೋಚಪಡುವ ನಮ್ಮಂತಹ ಮತ್ತು ನಮ್ಮ ಹಿಂದಿನ ಪೀಳಿಗೆಯಂತಹವರಿಗೆ ಇಂತಹ ಸುದ್ದಿ ಆಘಾತವನ್ನೇ ಉಂಟು ಮಾಡುವುದು ತೀರಾ ಸಹಜ.

ವಿದ್ಯಾರ್ಥಿ, ಶಿಕ್ಷಕರ ನಡುವೆ ಮುಖ್ಯವಾಗಿ ಇರಬೇಕಾದದ್ದು ಗೌರವ. ಪ್ರೌಢಶಾಲೆ ಮತ್ತು ಕೆಳ ಹಂತದ ತರಗತಿಗಳಲ್ಲಿ ಗೌರವದ ಜತೆಗೆ ಕೊಂಚ ಭಯವೂ ಇರಬೇಕಾಗುತ್ತದೆ. ಹಾಗೆಂದು ಭಯವೆಂದರೆ ಭೀತಿ ಹುಟ್ಟಿಸುವುದಲ್ಲ, ಒಂದು ಹಂತದ ಗೌರವಮಿಶ್ರಿತ ಭಯ ಮಕ್ಕಳಲ್ಲಿ ಶಿಸ್ತು ತರಲು ಅನಿವಾರ್ಯ. ಇತ್ತೀಚೆಗಂತೂ ಕೋವಿಡ್‌ನ ಎರಡು ವರ್ಷಗಳನ್ನು ಮನೆಯಲ್ಲಿಯೇ ಕಳೆದಿರುವ ವಿದ್ಯಾರ್ಥಿಗಳಿಗೆ ಓದಿ, ಬರೆಸಲು ಹರಸಾಹಸ ಪಡುತ್ತಿರುವ ಶಿಕ್ಷಕರಿಗಷ್ಟೇ ಅದರ ಗಂಭೀರ ಸ್ಥಿತಿ ಅರ್ಥವಾಗಲು ಸಾಧ್ಯ.

ಶಿಕ್ಷಕರು ಸ್ನೇಹಿತರಂತೆ ಇರಬೇಕು ಎಂಬ ವಾದವಿದ್ದರೂ ಆ ಸ್ನೇಹದ ನಡುವೆ ಗಾಂಭೀರ್ಯ, ಗೌರವದ ಎಲ್ಲೆ ಇರಲೇಬೇಕು. ಪರಿಸ್ಥಿತಿ ಹೀಗಿರುವಾಗ, ಬಸ್ಸಿನಲ್ಲಿ ತಮಗೆ ಸೀಟು ಬಿಟ್ಟುಕೊಟ್ಟು ಎದ್ದು ನಿಂತು ತಮ್ಮ ಜತೆಗೇ ಪಯಣಿಸುವ ಶಿಕ್ಷಕರ ಬಗ್ಗೆ ಮಕ್ಕಳಿಗೆ ಗೌರವ ಇರಲು ಸಾಧ್ಯವೇ? ಗೌರವ ಇಲ್ಲದಿದ್ದಲ್ಲಿ ಆ ಮಕ್ಕಳು ಶಾಂತಚಿತ್ತದಿಂದ ಪಾಠ ಕೇಳಲು ಸಾಧ್ಯವೇ? ಅಕಸ್ಮಾತ್ ಕೇಳಿದರೂ ಅವರ ವ್ಯಕ್ತಿತ್ವ ಏನಾಗಬಹುದು? ಶಿಕ್ಷಕರಿಗೆ ಏನೆನಿಸಬಹುದು?

ಮಕ್ಕಳ ಕಥೆ ಬಿಡಿ. ಶಿಕ್ಷಕರು ತಮ್ಮ ಮಕ್ಕಳಿಗೆ ಸೀಟು ಬಿಟ್ಟುಕೊಡಬೇಕು ಎಂದು ಬಯಸುವ ಪಾಲಕರ ಮನಃಸ್ಥಿತಿ ಎಂತಹದ್ದಿರಬಹುದು? ಹಿಂದೆಲ್ಲ ಶಾಲೆಗೆ ಬಂದರೆ ಶಿಕ್ಷಕರ ಹತ್ತಿರ ‘ಏನಾದರೂ ಮಾಡಿ, ಬೇಕಾದರೆ ಚೆನ್ನಾಗಿ ನಾಲ್ಕು ಬಿಡಿ. ನಾವಂತೂ ಕೇಳಲು ಬರುವುದಿಲ್ಲ’ ಎಂದೇ ಪಾಲಕರು ಹೇಳುತ್ತಿದ್ದರು. ಆದರೆ ತಾವು ಮಕ್ಕಳನ್ನು ಶಾಲೆಗೆ ದುಡ್ಡು ಕೊಟ್ಟು ಸೇರಿಸಿರುವುದರಿಂದ, ಶಿಕ್ಷಕರೆಂದರೆ ತಮ್ಮ ಮಕ್ಕಳ ಸೇವೆಗೆ ಇರುವ ಗುಲಾಮರು ಎಂದು ತಿಳಿದುಕೊಂಡಿರುವ ಈ ಆಧುನಿಕ ಪಾಲಕರಿಗೆ ಏನೆನ್ನೋಣ!

ಯಾವುದೋ ಶಿಕ್ಷಕರು ಕಲಿಸಿದ ನಾಲ್ಕಕ್ಷರದಿಂದಲೇ ನಾಲ್ಕು ಕಾಸು ಸಂಪಾದಿಸುತ್ತ ಜೀವನ ನಡೆಸುತ್ತಿರುವ ಇಂತಹ ಪಾಲಕರಿಗೆ ಗೊತ್ತಿಲ್ಲದೇ ಇರುವುದೇನೆಂದರೆ, ತಮ್ಮ ಕೃತ್ಯದ ಮೂಲಕ ತಾವೇ ತಮ್ಮ ಮಗುವಿನ ವ್ಯಕ್ತಿತ್ವವನ್ನು ನಾಶ ಮಾಡುತ್ತಿದ್ದೇವೆ ಎನ್ನುವ ಸತ್ಯ! ಮನೆಯಲ್ಲಿ ಶಿಕ್ಷಕರ ಬಗ್ಗೆ ಅಗೌರವ ಮೂಡಿಸುವ ಮಾತುಗಳನ್ನಾಡುವ ಪಾಲಕರಿಗೂ ಈ ಮಾತು ಅನ್ವಯವಾಗುತ್ತದೆ.

ಹಣ, ಆರೋಗ್ಯಕ್ಕಿಂತ ಹೆಚ್ಚಾಗಿ, ವ್ಯಕ್ತಿತ್ವ ನಾಶವಾದರೆ ಎಲ್ಲವೂ ನಾಶವಾದಂತೆ ಎಂಬ ಮಾತಿದೆ. ಕೃತಜ್ಞತೆ, ಕರುಣೆ, ಗೌರವ, ವಿಶ್ವಾಸ, ಪ್ರೀತಿಯಂತಹ ಕೋಮಲ ಭಾವನೆಗಳ ಜತೆ ಬೆಳೆಯಬೇಕಾದ ಮಕ್ಕಳು ಉಡಾಫೆ, ಅಸಹನೆ, ಅಪನಂಬಿಕೆಯ ಜತೆ ಬೆಳೆದರೆ ಮುಂದೆ ಅವರ ವೈಯಕ್ತಿಕ, ಸಾಮಾಜಿಕ ಬದುಕಿನ ಭವಿಷ್ಯವೇನು? ಯೋಚಿಸಿದಷ್ಟೂ ಪ್ರಶ್ನಾರ್ಥಕ ಚಿಹ್ನೆ ದೊಡ್ಡದಾಗುತ್ತಲೇ ಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.