ಇತ್ತೀಚೆಗೆ ಸಂಜೆ ಫೋನ್ ಕರೆಯೊಂದು ಬಂತು. ‘ಗೂಬೆಯೊಂದು ರಸ್ತೆಯಲ್ಲಿ ಬಿದ್ದಿದೆ, ನಿಮ್ಮ ಹತ್ತಿರ ತರುತ್ತಿದ್ದೇವೆ’ ಎಂದು. ಆಗ ನಾನು ಅರಣ್ಯ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಯಾವುದೋ ಚರ್ಚೆಯಲ್ಲಿ ನಿರತನಾಗಿದ್ದೆ. ಅವರಿಗೂ ಗೂಬೆಯ ವಿಷಯ ತಿಳಿಸಿ ಹೊರಬಂದು ಕಾಯುತ್ತಾ ನಿಂತೆ. ಸ್ಕೂಟಿಯಲ್ಲಿ ಬಂದ ಯುವಕರು ರಟ್ಟಿನ ಪೆಟ್ಟಿಗೆಯೊಂದನ್ನು ಹಸ್ತಾಂತರಿಸಿ ಹೊರಟುಹೋದರು.

ಗೂಬೆಯ ಉಸಿರಾಟಕ್ಕೆ ತೊಂದರೆಯಾಗಬಾರದೆಂದು ರಟ್ಟಿನ ಪೆಟ್ಟಿಗೆಗೆ ಹಲವು ರಂಧ್ರಗಳನ್ನು ಮಾಡಿದ್ದರು. ಪೆಟ್ಟಿಗೆಯನ್ನು ತೆಗೆದರೆ, ಸುಂದರ ವದನದ ಗೂಬೆ ತನ್ನೆರಡು ಮಹಾಗಾತ್ರದ ಕಣ್ಣುಗಳಿಂದ ಎವೆಯಿಕ್ಕದೆ ನೋಡಿತು. ಅಷ್ಟರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬಂದರು. ಗೂಬೆಗೆ ಪೆಟ್ಟಾಗಿದೆಯೋ ಅಥವಾ ವಿದ್ಯುತ್ ತಂತಿ ಏನಾದರೂ ತಗುಲಿದೆಯೋ ಗೊತ್ತಾಗಲಿಲ್ಲ. ಚಿಕಿತ್ಸೆ ಅಗತ್ಯವಿದೆಯೇ ಎಂಬ ಬಗ್ಗೆ ಚರ್ಚೆ ನಡೆಯಿತು.

ಗೂಬೆಯ ರೆಕ್ಕೆಗಾಗಲೀ ಕಾಲಿಗಾಗಲೀ ಯಾವುದೇ ಪೆಟ್ಟಾಗಿರಲಿಲ್ಲ. ನೋಡಲು ಪಾರಿವಾಳದಷ್ಟು ದೊಡ್ಡದಾಗಿದ್ದರೂ ಅದು ಹಾರಲು ಕಲಿಯಲು ಪ್ರಾರಂಭಿಸಿದ ಮರಿಯಾಗಿತ್ತು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯವರ ಮನೆಯ ಕಾಂಪೌಂಡಿನಲ್ಲಿ ಒಂದಿಷ್ಟು ಮರಗಳಿದ್ದವು. ಹಾರಿದರೆ ಹಾರಿ ಹೋಗಲಿ ಎಂದುಕೊಂಡು ಕತ್ತಲಲ್ಲಿ ಬಿಟ್ಟೆವು. ಮೂರ್ನಾಲ್ಕು ಮೀಟರ್ ದೂರವಷ್ಟೇ ಹಾರಲು ಶಕ್ತವಾಯಿತು. ಎತ್ತರಕ್ಕೆ ಜಿಗಿದು ಮರವೇರಿ ಶತ್ರುಗಳಿಂದ ತಪ್ಪಿಸಿಕೊಳ್ಳುವಷ್ಟು ಶಕ್ತವಾಗಿರಲಿಲ್ಲ. ಅಂದರೆ, ಅದರ ರೆಕ್ಕೆ ಬಲಿಯುವಷ್ಟು ದಿನ ಸಾಕಬೇಕು.

ಗೂಬೆಗಳು ನಿಶಾಚರ ಪಕ್ಷಿಗಳು. ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆದು, ರಾತ್ರಿ ಸಂಚರಿಸುತ್ತವೆ. ರೈತರಿಗೆ ಪಿಡುಗಾದ ಇಲಿಗಳೇ ಅವುಗಳ ಮುಖ್ಯ ಆಹಾರ. ಸಸ್ಯಾಹಾರ, ಮಾಂಸಾಹಾರ ಎಂಬ ಚರ್ಚೆ ರಾಜ್ಯದಲ್ಲಿ ಬಿಸಿಯೇರಿದ ಹೊತ್ತಿನಲ್ಲೇ ‘ನನಗೆ ಮಾಂಸಾಹಾರವೇ ಶ್ರೇಷ್ಠ’ ಎಂದು ಸವಾಲು ಹಾಕುವಂತೆ ಗೂಬೆ ನಮ್ಮ ಅತಿಥಿಯಾಗಿ ಬಂದಿತ್ತು. ತಜ್ಞರನ್ನು ಸಂಪರ್ಕಿಸಲಾಗಿ, ಗೂಬೆಯನ್ನು ಪಂಜರದಲ್ಲಿಟ್ಟು, ಕೋಳಿಯ ತಲೆಯನ್ನು ನಾಲ್ಕಾರು ದಿನ ಹಾಕಿದರೆ, ಅಷ್ಟರಲ್ಲಿ ಅದರ ರೆಕ್ಕೆ ಬಲಿಯುತ್ತದೆ, ನಂತರದಲ್ಲಿ ಹಾರಲು ಬಿಡಿ ಎಂದರು. ಈಗ ಅದಕ್ಕೊಂದು ಪಂಜರ ಬೇಕಿತ್ತು. ಇಡೀ ಸಾಗರದಲ್ಲಿ ಎಲ್ಲಿ ಹುಡುಕಿದರೂ ಗೂಬೆಯನ್ನಿಡುವ ಪಂಜರ ಸಿಗಲಿಲ್ಲ. ಪರ್ಯಾಯವೇನು ಎಂಬ ಪ್ರಶ್ನೆಗೆ ಬೆತ್ತದ ಬುಟ್ಟಿ ಉತ್ತರವಾಯಿತು.

ಮಣ್ಣುಮುಕ್ಕ ಹಾವಿನ ಬಗೆಗೆ ಇರುವಂತೆ ಗೂಬೆಗಳ ಕುರಿತಾಗಿಯೂ ಮೂಢನಂಬಿಕೆಗಳಿವೆ. ಗೂಬೆ ಕಳ್ಳರು ದೊಡ್ಡ ಮಟ್ಟದ ಹಣಕಾಸಿನ ವ್ಯವಹಾರ ಮಾಡುತ್ತಾರೆ. ಲಕ್ಷ್ಮಿಯ ವಾಹನವೆಂದು ಕರೆಯಲಾಗುವ ಗೂಬೆಯನ್ನು ಸಾಕಿದವರು ದಿಢೀರನೆ ಶ್ರೀಮಂತರಾಗುತ್ತಾರೆ ಎಂದುಕೊಂಡವರಿದ್ದಾರೆ. ಈ ಕಲ್ಪನೆ ಅತಿದೊಡ್ಡ ಮೂರ್ಖತನ. ಬದಲಿಗೆ ಇಲಿಗಳನ್ನು ಹಿಡಿದು ತಿನ್ನುವ ಗೂಬೆಗಳನ್ನು ತಂದು ಮನೆಯಲ್ಲಿ ಸಾಕಿಕೊಂಡರೆ ಅದು ರೈತರಿಗೆ ತುಂಬಲಾರದ ನಷ್ಟ. ಗೂಬೆಗಳ ವ್ಯಾಪಾರ ಎಗ್ಗಿಲ್ಲದೇ ನಡೆಯುತ್ತಿದೆ. ಇಲಾಖೆಯವರು ಗೂಬೆ ಕದಿಯುವವರನ್ನು ಹಿಡಿಯುವ ಪ್ರಮಾಣ ಅಥವಾ ಅವರು ಸಿಕ್ಕಿಬೀಳುವ ಪ್ರಮಾಣ ಶೇ 1ರಷ್ಟಿದೆ ಅಷ್ಟೆ.

ರಾಜ್ಯ ಮಟ್ಟದ ದಿನಪತ್ರಿಕೆಯೊಂದರ ಮೇಲೆ ಗೂಬೆಯನ್ನಿಟ್ಟು, ದಿನಾಂಕ ಹಾಗೂ ಜಿಲ್ಲೆ ಕಾಣುವ ಹಾಗೆ ವಿಡಿಯೊ ಮಾಡಲಾಗುತ್ತದೆ. ಗೂಬೆ ದೊಡ್ಡದಿದ್ದಷ್ಟೂ ಅದಕ್ಕೆ ಬೆಲೆ ಹೆಚ್ಚು. ಗೂಬೆಯ ಎತ್ತರ, ಅಗಲ, ತೂಕ ಇತ್ಯಾದಿಗಳನ್ನು ವಿಡಿಯೊದಲ್ಲಿ ನಮೂದಿಸಿ, ಕಳ್ಳಕಾಕರ ವಾಟ್ಸ್ಆ್ಯಪ್ ಗುಂಪಿಗೆ ಹಾಕಲಾಗುತ್ತದೆ. ಅಲ್ಲಿಗೆ ಅಂತರಜಿಲ್ಲಾ ಗೂಬೆ ಕಳ್ಳಸಾಗಣೆದಾರರಿಗೆ ಗೂಬೆ ಯಾವ ಜಿಲ್ಲೆಯಲ್ಲಿ ಲಭ್ಯವಿದೆ ಎಂಬ ವಿವರ ಸಿಗುತ್ತದೆ. ಇಲಾಖೆಯವರಿಗೆ ಸುಲಭವಾಗಿ ಮಾಹಿತಿ ಸಿಗಬಾರದು ಎಂಬ ಉದ್ದೇಶದಿಂದ ಈ ತರಹದ ತಂತ್ರಗಳನ್ನು ಗೂಬೆ ಕಳ್ಳರು ಅಳವಡಿಸಿಕೊಂಡಿದ್ದಾರೆ.

ಜೀವಿವೈವಿಧ್ಯದ ಹಾರದಲ್ಲಿ ಗೂಬೆಯದು ಬಹುಮುಖ್ಯ ಪಾತ್ರ. ರೈತರು ಬೆಳೆಯುವ ಬೆಳೆಯ ಶೇ 40ರಷ್ಟನ್ನು ಇಲಿಗಳು ನಾಶ ಮಾಡುತ್ತವೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ನೈಸರ್ಗಿಕವಾಗಿ ಇಲಿ ಸಂತತಿಯನ್ನು ನಿಯಂತ್ರಿಸುವಲ್ಲಿ ಉರಗಗಳು ಪ್ರಥಮ ಸ್ಥಾನದಲ್ಲಿದ್ದರೆ, ಗೂಬೆ ಸಂತತಿ ಎರಡನೇ ಸ್ಥಾನದಲ್ಲಿದೆ. ನಗರ, ಮಹಾನಗರಗಳ ಅಳಿದುಳಿದ ಮರಗಳಲ್ಲೂ ಇವು ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿತಿವೆ.

ಬಿದಿರಿನ ಬುಟ್ಟಿಯಡಿಯಲ್ಲಿ ಗೂಬೆಮರಿಗೆ ತಿನ್ನಲು ಕೋಳಿ ತಲೆ ಸಿಕ್ಕಿತು. ಒಂದು ಬೌಲಿನಲ್ಲಿ ನೀರನ್ನಿಟ್ಟು ಮನೆಗೆ ಹೋದೆವು. ಬೆಳಗ್ಗೆ ಬಂದು ನೋಡಿದರೆ, ಕೋಳಿ ತಲೆಯಲ್ಲಿನ ಕೊಂಚ ಮಾಂಸವನ್ನು ಹಿಸಿದು ತಿಂದ ಕುರುಹು ಕಂಡಿತು. ನೀರನ್ನು ಕುಡಿದಿತ್ತು. ಮನುಷ್ಯರ ಹಸ್ತಕ್ಷೇಪದಿಂದ ಆದ ಮಾನಸಿಕ ಒತ್ತಡದಿಂದ ಹೊರಬಂದಿತ್ತು. ಮೂರನೇ ದಿನದಲ್ಲೂ ಗೂಬೆಮರಿಯ ಆರೋಗ್ಯ ಸೂಚ್ಯಂಕ ಏರುಗತಿಯಲ್ಲಿ ಮತ್ತು ಒತ್ತಡದ ಸೂಚ್ಯಂಕ ಇಳಿಗತಿಯಲ್ಲಿತ್ತು.

ಇನ್ನು ಎರಡು ದಿನಗಳ ಆರೈಕೆ ಬೇಕಾಗಬಹುದು ಎಂಬುದು ತಜ್ಞರ ಅಭಿಮತ. ನಂತರದಲ್ಲಿ, ನಾವೇ ಬೆಳೆಸುತ್ತಿರುವ ‘ಉಷಾಕಿರಣ’ವೆಂಬ ಖಾಸಗಿ ಕಾಡಿನಲ್ಲಿ ಅದನ್ನು ಬಿಡಲು ಅರಣ್ಯ ಇಲಾಖೆಯ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಸಾಗರ ಪಟ್ಟಣದಿಂದ ಸುಮಾರು ಏಳು ಕಿಲೊಮೀಟರ್ ದೂರದಲ್ಲಿರುವ ಉಷಾಕಿರಣದಲ್ಲಿ ಅದು ಬೇಗನೇ ಹೊಂದಿಕೊಳ್ಳುವ ವಿಶ್ವಾಸ ನಮಗಿದೆ. ಉಷಾಕಿರಣವನ್ನು ನೋಡಿದ ಮೇಲೆ ಗೂಬೆಗೂ ಈ ವಿಶ್ವಾಸ ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.