ಬೆಂಗಳೂರಿನಿಂದ ಕಲಬುರಗಿ ಪ್ರಯಾಣಕ್ಕೆ ರಾತ್ರಿ 8.45ಕ್ಕೆ ಯಶವಂತಪುರದಿಂದ ಹೊರಡುವ ಹಾಸನ, ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲು ಅತ್ಯಂತ ಸೂಕ್ತವಾದದ್ದು. ಬೆಳಿಗ್ಗೆ 6.30ಕ್ಕೆ ಅದು ಕಲಬುರಗಿ ತಲುಪುವ ಕಾರಣಕ್ಕೆ, ಕಚೇರಿ ಸಮಯಕ್ಕೆ ಸರಿಯಾಗಿ ಹೊಂದುತ್ತದೆ. ಆದ್ದರಿಂದ ನಾನು ಬಹುತೇಕ ಅದೇ ರೈಲಿನಲ್ಲಿ ಪ್ರಯಾಣ ಮಾಡುವುದು ಅಭ್ಯಾಸವಾಗಿಬಿಟ್ಟಿದೆ.

ಇದು ಆರು ತಿಂಗಳ ಹಿಂದಿನ ಪ್ರಕರಣ. ಎಂದಿನಂತೆ ನಾನು, ನನ್ನ ಮಡದಿ ರಾತ್ರಿ 8.45ಕ್ಕೆ ಯಶವಂತಪುರದಲ್ಲಿ ಹಾಸನ, ಸೊಲ್ಲಾಪುರ ರೈಲು ಹತ್ತಿದೆವು. ಸ್ಲೀಪರ್ ಕೋಚ್ ಆದ ಕಾರಣ ರೈಲು ಹೊರಟ ತಕ್ಷಣ ಊಟ ಮುಗಿಸಿ ಮಲಗುವ ಇರಾದೆ ನಮ್ಮದು. ಆದರೆ ನಮ್ಮ ಕೋಚಿನಲ್ಲಿ ಯಾರೋ ಒಬ್ಬರು ವಿಪರೀತ ಗಲಾಟೆ ಮಾಡುತ್ತಾ, ಅಸಭ್ಯ ಭಾಷೆ ಬಳಸುತ್ತಾ ಜೋರಾಗಿ ಮಾತನಾಡುವುದು ಕೇಳಿಸಿತು. ಸುಮ್ಮನೆ ಗಮನಿಸಿದೆ. ಅದೊಂದು ಮೂರು ಜನರ ಕುಟುಂಬ. ವ್ಯಕ್ತಿಯೊಬ್ಬ ತನ್ನ ಮಡದಿ ಮತ್ತು ಮಗನೊಂದಿಗೆ ರೈಲು ಹತ್ತಿದ್ದ. ವೇಷಭೂಷಣ ನೋಡಿದರೆ ಕೆಳ ಮಧ್ಯಮ ವರ್ಗದ ಕುಟುಂಬದಂತೆ ತೋರುತ್ತಿತ್ತು. ಆತ ವಿಪರೀತ ಕುಡಿದಂತೆ ಕಾಣುತ್ತಿದ್ದ ಮತ್ತು ಮಡದಿಯನ್ನು ಹಿಗ್ಗಾಮುಗ್ಗ ಬೈಯ್ಯುತ್ತಿದ್ದ. ಆ ತಾಯಿ ಅವನನ್ನು ಸುಧಾರಿಸಲು ಏನೆಲ್ಲಾ ಪ್ರಯತ್ನ ಮಾಡಿದರೂ ಆತ ಸುಮ್ಮನಾಗುತ್ತಿರಲಿಲ್ಲ.

ರೈಲು ಯಶವಂತಪುರ ಸ್ಟೇಷನ್ ಬಿಟ್ಟು ಸಾಗುತ್ತಿತ್ತು. ಆತ ಇಡೀ ಬೋಗಿಯ ತುಂಬಾ ಓಡಾಡುತ್ತಾ, ಜೋರಾಗಿ ಮಾತನಾಡುವುದನ್ನು ಮುಂದುವರಿಸಿದ್ದ. ಸಮಯ ಮೀರುತ್ತಿದ್ದಂತೆ ಆತನೊಳಗಿದ್ದ ವ್ಯಾಘ್ರತನವೂ ಮೀರಿತ್ತು. 8-10 ವರ್ಷದ ಹುಡುಗನನ್ನು ಜೋರಾಗಿ ಹೊಡೆಯಲು ಆರಂಭಿಸಿದ. ಅಡ್ಡಬಂದ ಹೆಂಡತಿಯನ್ನು ಬಡಿಯತೊಡಗಿದ. ಒಂದಿಬ್ಬರು ಬುದ್ಧಿ ಹೇಳಲು ನೋಡಿದರೂ ಅವನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇಡೀ ಬೋಗಿ ಆತನ ಅಟಾಟೋಪದಿಂದ ತುಂಬಿ ಹೋಗಿತ್ತು. ಅವನು ಬೋಗಿಯ ಆ ತುದಿಯಿಂದ ಈ ತುದಿಯ ತನಕ ಕೂಗಾಡುತ್ತಾ ಓಡಾಡುವುದು, ಹೆಂಡತಿ ಮತ್ತು ಮಗ ಆತನ ಹಿಂದೆ ಓಡುತ್ತಾ ಆತನನ್ನು ಮಲಗಿಸಲು ಶ್ರಮಪಡುವುದು, ಆತ ಅವರನ್ನು ಹೊಡೆಯುವುದು ಇದೇ ನಡೆದಿತ್ತು.

ಒಂದು ಹೊತ್ತಿನಲ್ಲಿ ಆ ತಾಯಿ ಮತ್ತು ಮಗ ರೋಸಿಹೋಗಿ ಒಂದು ಕಡೆ ಅಳುತ್ತಾ ಕುಳಿತರು. ಆತ ಬಡಬಡಿಸುತ್ತಾ ರೈಲಿನ ತುಂಬಾ ಓಡಾಡುತ್ತಲೇ ಇದ್ದ. ಅಷ್ಟರಲ್ಲಿ ಸಮಯ ಮಧ್ಯರಾತ್ರಿಯ ಮೂರು ಗಂಟೆ ಆಗಿತ್ತು ಅನ್ನಿಸುತ್ತದೆ. ಅಷ್ಟೊತ್ತಿಗೆ ನನ್ನ ಸಹೋದ್ಯೋಗಿಯ ಕರೆಯೊಂದು ಬಂತು. ಆತನೂ ಬಿಹಾರದಿಂದ ಕಲಬುರಗಿಗೆ ಕುಟುಂಬದ ಜೊತೆ ಬರುತ್ತಿದ್ದ. ಆತ ಪ್ರಯಾಣಿಸುತ್ತಿದ್ದ ರೈಲು ಬೇಗ ಕಲಬುರಗಿ ತಲುಪುತ್ತಿದ್ದ ಕಾರಣಕ್ಕೆ, ಕ್ಯಾಂಪಸ್‌ಗೆ ಹೋಗಲು ವ್ಯವಸ್ಥೆ ಏನಿದೆ ಎಂದು ಕೇಳಿದ. ನಾನು ಆತನಿಗೆ ಟ್ಯಾಕ್ಸಿ ನಂಬರ್ ಕೊಟ್ಟು, ಇವರನ್ನು ಸಂಪರ್ಕಿಸಿ ಎಂದು ಕರೆ ಕಟ್ ಮಾಡಿದೆ. ನಾವು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವುದರಿಂದ ಬಹುತೇಕ ಸಹೋದ್ಯೋಗಿಗಳು ಹಿಂದಿಯಲ್ಲೇ ಮಾತನಾಡುವುದರಿಂದ, ನಮ್ಮ ಸಂಭಾಷಣೆ ಹಿಂದಿಯಲ್ಲಿ ನಡೆದಿತ್ತು.

ಅದನ್ನು ಕೇಳಿಸಿಕೊಂಡ ಈ ವ್ಯಕ್ತಿ ಇದ್ದಕ್ಕಿದ್ದಂತೆ ಜೋರಾಗಿ ‘ಇಲ್ಲೊಬ್ಬ ಪಾಕಿಸ್ತಾನಿ ಇದ್ದಾನೆ, ಅವನು ಈಗಷ್ಟೇ ಭಯೋತ್ಪಾದಕರ ಜೊತೆ ಮಾತನಾಡಿದ್ದು ನಾನು ಕೇಳಿಸಿಕೊಂಡೆ, ಆತ ಉರ್ದುವಿನಲ್ಲಿ ಮಾತನಾಡಿದ, ಪೋಲಿಸರನ್ನು ಕರೆಯಿರಿ, ಅವನನ್ನು ಹಿಡಿಯಬೇಕು’ ಎಂದು ನನ್ನ ಮುಂದೆ ಅರಚಿ, ರೈಲಿನಲ್ಲಿ ಇದ್ದ ಎಲ್ಲರನ್ನೂ ಎಬ್ಬಿಸತೊಡಗಿದ. ಯಾರ್‍ಯಾರಿಗೋ ಫೋನ್ ಮಾಡಿ ಹೇಳುತ್ತಿದ್ದ. ಆತ ಎಷ್ಟು ಗಂಭೀರ ಆರೋಪ ಮಾಡುತ್ತಿದ್ದ ಅಂದರೆ, ಅರೆಕ್ಷಣ ಏನಾಗುತ್ತಿದೆ ಎಂದೇ ನನಗೆ ಅರ್ಥವಾಗಲಿಲ್ಲ. ನನ್ನ ಮಡದಿಯೂ ಇದೇನಾಗುತ್ತಿದೆ ಎಂದು ಅತಂಕಕ್ಕೆ ಒಳಗಾಗಿ ಹೆದರುತ್ತಿದ್ದಳು. ನಮ್ಮ ಪುಣ್ಯ, ರೈಲು ಹೊರಟಾಗಿನಿಂದ ಆತನ ಮಾತುಗಳನ್ನು ಕೇಳುತ್ತಿದ್ದ ಜನರ ತಾಳ್ಮೆಯ ಕಟ್ಟೆ ಒಡೆದಿತ್ತು. ಎಲ್ಲರೂ ಎದ್ದು ಆತನಿಗೆ ‘ಸುಮ್ಮನೆ ಕೂರಬೇಕು, ಇಲ್ಲ ಅಂದರೆ ನಿನ್ನನ್ನು ಇಲ್ಲಿಯೇ ಇಳಿಸುತ್ತೇವೆ’ ಎಂದು ಜೋರಾಗಿ ಗದರಿದಾಗ ಸುಮ್ಮನಾಗಿ ಒಂದು ಕಡೆ ಕುಳಿತು, ಪಾಕಿಸ್ತಾನ, ಭಯೋತ್ಪಾದಕ ಎಂದೆಲ್ಲ ಗೊಣಗುತ್ತಲೇ ಇದ್ದ. ಆತನ ಮಡದಿ ‘ಅಣ್ಣೋವ್ರೆ ಬೇಜಾರಾಗಬೇಡಿ, ಕುಡಿದರೆ ಆತ ಮನುಷ್ಯನೇ ಅಲ್ಲ’ ಎಂದು ಜನರ ಕ್ಷಮೆ ಕೇಳುತ್ತಿದ್ದಳು. ಅಷ್ಟು ಜನರ ಮುಂದೆ ತಂದೆಯ ವರ್ತನೆ, ಆತ ಕೊಟ್ಟ ಹೊಡೆತಗಳಿಂದ ಜರ್ಜರಿತನಾಗಿದ್ದ ಬಾಲಕ ಆ ತಾಯಿಯನ್ನು ಗಟ್ಟಿಯಾಗಿ ಹಿಡಿದು ಕುಳಿತಿದ್ದ.

ಈ ಪ್ರಕರಣ ನನ್ನನ್ನು ಆಘಾತಕ್ಕೆ ಒಳಗುಮಾಡಿತ್ತು. ಒಂದು ವೇಳೆ ಆತ ಕುಡಿಯದೇ, ರಾತ್ರಿಪೂರ್ತಿ ಗಲಾಟೆ ನಡೆಸದೇ ಇದ್ದಕ್ಕಿದ್ದಂತೆ ಸಹಪ್ರಯಾಣಿಕರ ಮೇಲೆ ಹೀಗೆ ಆರೋಪ ಮಾಡಿದ್ದರೆ, ಪ್ರಯಾಣಿಕರಲ್ಲಿ ಕೆಲವರು ಆತನ ಮನಃಸ್ಥಿತಿಯವರೇ ಆಗಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು ಎಂದು ಯೋಚಿಸಿ ನಡುಗಿಹೋದೆ. ತನ್ನ ಸಂಸಾರವನ್ನು ನೆಟ್ಟಗೆ ಪೋಷಿಸಲಾಗದ, ವಿಪರೀತ ಕುಡಿದು ಹೆಂಡತಿ, ಮಗುವನ್ನು ಹಿಡಿದು ಬಡಿಯುತ್ತಿರುವ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ರಾಷ್ಟ್ರೀಯವಾದಿ, ದೇಶಭಕ್ತ ಆಗಿಬಿಡುವ ಈ ವಿಚಿತ್ರ ಸನ್ನಿವೇಶ ನನ್ನನ್ನು ಇನ್ನೂ ಆತಂಕಕ್ಕೆ ದೂಡಿತ್ತು.

ನಾವೊಂದು ದ್ವಂದ್ವದ ಕಾಲದಲ್ಲಿ ನಿಂತಿದ್ದೇವೆ. ಪ್ರಜಾತಾಂತ್ರಿಕ ಸಂಬಂಧಗಳನ್ನು ಜನರ ನಡುವೆ ಕಟ್ಟಬೇಕು ಎಂಬ ಆಶಯವನ್ನು ಹೊತ್ತ ಸಂವಿಧಾನ ಒಂದು ಕಡೆ ಇದ್ದರೆ, ಮತ್ತೊಂದು ಕಡೆ, ಬರೀ ರಾಜಕೀಯ ಅಧಿಕಾರದ ಕಾರಣಕ್ಕೆ ಹುಸಿ ರಾಷ್ಟ್ರೀಯವಾದದ ಹೆಸರಿನಲ್ಲಿ ಕಟ್ಟಲಾಗುತ್ತಿರುವ ಸಂಕುಚಿತ ರಾಜಕೀಯ ನಿರೂಪಣೆಗಳಿವೆ. ಈ ಸಂಕುಚಿತ ರಾಷ್ಟ್ರೀಯತೆಯ ಸಂಕಥನಗಳನ್ನು ವ್ಯವಸ್ಥಿತವಾಗಿ ಯುವ ಮನಸ್ಸುಗಳಿಗೆ ದಾಟಿಸುತ್ತಿರುವ ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಂತಹ ಆಧುನಿಕ ಸಂವಹನ ಸಾಧನಗಳು ತಳಮಟ್ಟದ ಜನರನ್ನು ಎಷ್ಟು ಅಪಾಯಕಾರಿ ಮನಃಸ್ಥಿತಿಗೆ ದೂಡಬಲ್ಲವು ಎಂಬುದನ್ನು ಈ ಪ್ರಕರಣ ನನಗೆ ಮನವರಿಕೆ ಮಾಡಿಕೊಟ್ಟಿತ್ತು.

‘ಯಾವುದೇ ಸ್ವರೂಪದ ಮೂಲಭೂತವಾದ ಮೊದಲು ಕಲ್ಪಿತ ಶತ್ರುವೊಂದನ್ನು ಸೃಷ್ಟಿಸಿಕೊಳ್ಳುತ್ತದೆ. ಆ ಶತ್ರುವಿನ ಭಯ ತೋರಿಸುವ ಮೂಲಕ ತಾನು ನಡೆಸುವ ಹಿಂಸೆಗೆ ಜನರ ಒಪ್ಪಿಗೆಯನ್ನು ಉತ್ಪಾದಿಸಿಕೊಳ್ಳುತ್ತಿರುತ್ತದೆ’. ಅದು ಮೊನ್ನೆ ಬೆಂಗಳೂರಿನಲ್ಲಿ ಭಾಷೆಯ ಹೆಸರಿನಲ್ಲಿ ಹೋಟೆಲೊಂದರ ಅರೇಬಿಕ್ ಶ್ಲೋಕದ ಮೇಲೆ ಕನ್ನಡಸೇನೆಯ ಕಾರ್ಯಕರ್ತ ನಡೆಸಿದ ದಾಳಿ ಇರಬಹುದು ಅಥವಾ ಕೆಲವೇ ದಿನಗಳ ಹಿಂದೆ ನಮ್ಮ ನಡುವೆ ಘಟಿಸಿದ ಹಿಜಾಬ್, ಹಲಾಲ್, ಬುರ್ಖಾ, ಜಟ್ಕಾ ಕಟ್‌ನಂತಹ ಅಭಿಯಾನಗಳನ್ನು ಬೆಂಬಲಿಸಿದ ಮನಸ್ಸುಗಳು ಇರಬಹುದು. ಇಂಥ ಕೆಲವರ ಮನಃಸ್ಥಿತಿಗೂ ರೈಲಿನಲ್ಲಿ ಪಾಕಿಸ್ತಾನ, ಭಯೋತ್ಪಾದಕ ಎಂದು ಅರಚಿದ ಆ ವ್ಯಕ್ತಿಯ ಮನಃಸ್ಥಿತಿಗೂ ಹೆಚ್ಚಿನ ವ್ಯತ್ಯಾಸ ಇರಲಾರದು. ಆದರೆ ಸ್ವರೂಪದಲ್ಲಿ ಮಾತ್ರ ಭಿನ್ನತೆಯಿದೆ ಅನ್ನಿಸುತ್ತಿದೆ.

ಈ ಸ್ಥಿತಿಯನ್ನು ಬದಲಾಯಿಸುವ ಕಡೆ ನಮ್ಮ ಆಡಳಿತ ವ್ಯವಸ್ಥೆ ಗಂಭೀರ ಪ್ರಯತ್ನವನ್ನು ಮಾಡಬೇಕಿದೆ. ಬಹಳ ಮುಖ್ಯವಾಗಿ, ಸಂವಿಧಾನ ಬಯಸಿದ ಜಾತ್ಯತೀತ ಸಮಾಜದ ಪರಿಕಲ್ಪನೆಯನ್ನು ಶಿಕ್ಷಣದ ಮೂಲಕ ಮಕ್ಕಳಲ್ಲಿ ಮೂಡಿಸುವ, ಬುದ್ಧ, ಬಸವ, ಕುವೆಂಪು, ಶಿಶುನಾಳರ ಆಶಯದ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಪ್ರಜ್ಞೆಯೇ ನಮ್ಮ ಸಾಮಾಜಿಕ ಮೌಲ್ಯ ಎಂಬ ಅರಿವನ್ನು ಯುವಜನರಿಗೆ ದಾಟಿಸುವ ಕಡೆ ನಾವು ಯೋಚಿಸಬೇಕಿದೆ. ಸಂವಿಧಾನದ ಪೂರ್ವ ಪೀಠಿಕೆಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಓದಿಸುವ ಯೋಜನೆ ಈ ದಿಕ್ಕಿನಲ್ಲಿನ ಆರಂಭಿಕ ಹೆಜ್ಜೆಯೇ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.