‘ನ್ಯಾಷನಲ್ ಜಿಯಾಗ್ರಫಿಕ್ ಟ್ರಾವಲರ್’ ನಿಯತಕಾಲಿಕವು ಗುರುತಿಸಿರುವ ವಿಶ್ವದ ಹತ್ತು ‘ಪ್ರವಾಸಿ ಸ್ವರ್ಗ’ಗಳ ಪೈಕಿ ಒಂದಾದ ಹಾಗೂ ಅತಿ ಹೆಚ್ಚಿನ ಸಾಕ್ಷರತೆಗೆ ಇಡೀ ದೇಶದಲ್ಲೇ ಪ್ರಖ್ಯಾತವಾದ ಕೇರಳವು ಅಸ್ಪೃಶ್ಯತೆ ಆಚರಣೆಯಿಂದ ಈಗ ಗಮನ ಸೆಳೆದಿದೆ.

ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ತ್ರಿಶ್ಶೂರ್ ಜಿಲ್ಲೆಯ ಚೇರ್ಪು ಗ್ರಾಮದ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿ, ನಾಟ್ಟಿಕ ಕ್ಷೇತ್ರದ ಶಾಸಕಿ, ಸಿಪಿಐ ಮುಖಂಡೆ, ದಲಿತ ಸಮುದಾಯದ ಗೀತಾ ಗೋಪಿ ಅವರು ಧರಣಿ ನಡೆಸಿದ್ದ ಸ್ಥಳವನ್ನು, ಕಾಂಗ್ರೆಸ್ನ ಯುವ ಕಾರ್ಯಕರ್ತರು ಸಗಣಿ ಮಿಶ್ರಿತ ನೀರಿನಿಂದ ಶುದ್ಧೀಕರಿಸಿದ್ದಾರೆ. ಜಾತ್ಯತೀತ ಮೌಲ್ಯಗಳ ಪ್ರತಿಪಾದಕ ಪಕ್ಷವೆಂದು ಕರೆದುಕೊಳ್ಳುವ ಕಾಂಗ್ರೆಸ್ಗೆ ಸೇರಿದವರು ಅವರು. ಶಾಸಕಿಯ ಪ್ರತಿಭಟನೆ ದುರುದ್ದೇಶದಿಂದ ಕೂಡಿದ್ದರೆ, ರಾಜಕೀಯ ಪ್ರೇರಿತವಾಗಿದ್ದರೆ ಅದನ್ನು ಖಂಡಿಸುವ ಹಕ್ಕು ಎಲ್ಲರಿಗೂ ಇದ್ದೇ ಇದೆ. ಆದರೆ ಆ ನೆಪದಲ್ಲಿ ಜಾಗ ತೊಳೆದಿರುವುದು ಅಮಾನವೀಯ.

ಶಾಸಕಿ ನೀಡಿದ ದೂರನ್ನು ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿ ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇದ್ದರೆ, ಅದು ಕೂಡ ಅಸ್ಪೃಶ್ಯತೆ ಆಚರಣೆಗೆ ಕುಮ್ಮಕ್ಕು ಕೊಟ್ಟಂತೆಯೇ ಸರಿ. ಒಬ್ಬ ಜನಪ್ರತಿನಿಧಿಯನ್ನು ದಲಿತ ಎಂಬ ಕಾರಣಕ್ಕೆ ಅವರ ಉಪಸ್ಥಿತಿಯಲ್ಲಾಗಲೀ, ಅನುಪಸ್ಥಿತಿಯಲ್ಲಾಗಲೀ ಸಾರ್ವಜನಿಕವಾಗಿ ಅವಮಾನಗೊಳಿಸಿದರೆ, ಅಲ್ಲಿ ಜಾತಿ ಪದ್ಧತಿಯ ಕ್ರೌರ್ಯ ಮನೆ ಮಾಡಿದೆ ಎಂದೇ ಅರ್ಥ.

ದುರಂತವೆಂದರೆ, ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳುವ, ಎಲ್ಲ ತತ್ವದೆಲ್ಲೆ ಮೀರಿ ಬದುಕುವ ದಾರಿಗಳನ್ನು ಕಂಡುಕೊಳ್ಳುವ ವಿಪುಲ ಅವಕಾಶಗಳುಳ್ಳ ಯುವಪಡೆಯೇ ಅಸ್ಪೃಶ್ಯತೆಯನ್ನು ಆಚರಿಸುತ್ತಿರುವುದು. ಇಲ್ಲಿ ಅಭಿವೃದ್ಧಿಯಾಗಲೀ, ಅದರ ಬಗೆಗಿನ ಭಿನ್ನಾಭಿಪ್ರಾಯವಾಗಲೀ ಮುಖ್ಯವೇ ಆಗಿಲ್ಲ. ಅಸ್ಪೃಶ್ಯತೆಯೇ ಮುಖ್ಯ. ಈ ಕಾಲಘಟ್ಟದಲ್ಲೂ ಭಾರತ ಎತ್ತ ಸಾಗುತ್ತಿದೆ?

ಈ ಶುದ್ಧೀಕರಣ ಯತ್ನ ಏನನ್ನು ಸೂಚಿಸುತ್ತದೆ? ಅಸ್ಪೃಶ್ಯತೆ ನಿವಾರಣೆ ಎಂಬುದು ಈಗಿನ ಡಿಜಿಟಲ್ ಯುಗದಲ್ಲಿಯೂ ಅತ್ಯಂತ ದುಬಾರಿ ಬಾಬತ್ತಿನದು ಎಂಬ ಸಂದೇಶವನ್ನು ತ್ರಿಶ್ಶೂರ್ ಘಟನೆ ಸೂಚಿಸುತ್ತಿದೆ. ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಒಂದು ಕ್ಷೇತ್ರದ ಶಾಸಕಿ ಧರಣಿ ಕುಳಿತಿದ್ದ ಸ್ಥಳವನ್ನು, ಆಕೆ ದಲಿತರೆಂಬ ಕಾರಣಕ್ಕೆ ತೊಳೆಯುವುದು ಪ್ರಜಾಪ್ರಭುತ್ವ ವಿರೋಧಿಯಾದ ದುರ್ನಡೆ.

ಸಾಕ್ಷರತೆಯ ಪ್ರಮಾಣ ಹೆಚ್ಚಿರುವ ಕೇರಳದಲ್ಲೇ ದಲಿತ ಜನಪ್ರತಿನಿಧಿಗಳ ಪರಿಸ್ಥಿತಿ ಹೀಗಿದ್ದರೆ, ಸಾಕ್ಷರತೆ ಪ್ರಮಾಣ ಕಡಿಮೆ ಇರುವ ಕಡೆ ಇನ್ನು ಹೇಗಿರಬಹುದು? ಬಳ್ಳಾರಿ, ಕೋಲಾರ, ಮೈಸೂರು, ಚಾಮರಾಜನಗರ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ದಲಿತರೆಂಬ ಕಾರಣಕ್ಕೆ ಜನಪ್ರತಿನಿಧಿಗಳನ್ನು ಪಂಚಾಯಿತಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿಯೇ ಮಾತನಾಡುವ, ಹತ್ತಿರ ಬಿಟ್ಟುಕೊಳ್ಳದೇ ಇರುವ ವರ್ತನೆಗಳು ಸಾಮಾನ್ಯವಾಗಿವೆ. ಇನ್ನು ಸಾಮಾನ್ಯ ಮನುಷ್ಯರ ಪಾಡೇನು? ಹಾಗಿದ್ದರೆ ಸಾಕ್ಷರತೆಗೂ ಮನುಷ್ಯತ್ವಕ್ಕೂ ಸಂಬಂಧವೇ ಇಲ್ಲವೇ? ದಲಿತನೆಂಬ ಕಾರಣಕ್ಕೆ ಚಾಮರಾಜನಗರದಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ನಡೆಸಿದ್ದನ್ನು ಮನುಷ್ಯರಾದವರು ಮರೆಯಲು ಸಾಧ್ಯವೇ?

ಅದು 2015ರ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭ. ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಏಳೆಂಟು ಕಿ.ಮೀ ದೂರದಲ್ಲಿರುವ ಪಂಚಾಯಿತಿಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಹಿಂದಿನ ಅವಧಿಯ ಕೆಲವು ಸದಸ್ಯರು ಹಳ್ಳಿ ಹೋಟೆಲಿನಲ್ಲಿ ಸೇರಿದ್ದರು. ಕೆಲವರು ಕಟ್ಟೆ ಮೇಲೆ ಕುಳಿತಿದ್ದರು. ಇಬ್ಬರು ನಿಂತಿದ್ದರು. ಚುನಾವಣೆ ಬಗ್ಗೆಯೇ ಎಲ್ಲರ ಮಾತು. ನಿಂತಿದ್ದವರನ್ನು ‘ಬನ್ನಿ ಕುಳಿತುಕೊಳ್ಳಿ’ ಎಂದು ಜಗುಲಿ ಪಕ್ಕದ ಜಾಗ ತೋರಿಸಿದೆ. ಅವರು ‘ಒಲ್ಲೆ, ನಾವು ಅಲ್ಲಿ ಕುಂಡ್ರಬಾರದು’ ಎಂದರು. ಕುಳಿತಿದ್ದವರೂ ‘ಅಲ್ಲೇ ನಿಂತಿರ್ಲಿ ಬಿಡ್ರಿ’ ಎಂದರು. ಅವರಿಗೆ ಒಟ್ಟಿಗೇ ಕುಂತು ಅಭ್ಯಾಸವಿಲ್ಲ. ಇವರಿಗೆ ಅವರನ್ನು ತಮ್ಮೊಟ್ಟಿಗೆ ಕುಂಡ್ರಿಸಿಕೊಂಡು ಅಭ್ಯಾಸವಿಲ್ಲ.

ಇದು ಗೌರವಾನ್ವಿತ ಅಸ್ಪೃಶ್ಯತೆ. ನಿರ್ದಿಷ್ಟ ಅಂತರವನ್ನು ಕಾಪಾಡಿಕೊಂಡು ಗೌರವವನ್ನು ಉಳಿಸಿಕೊಳ್ಳುವ ದಲಿತರ ಅನಿವಾರ್ಯ ಸ್ಥಿತಿ. ಇಂಥ ಹಳ್ಳಿಗಳಲ್ಲಿ ತಳವರ್ಗದ ಜನರಿಗೂ, ಜನಪ್ರತಿನಿಧಿಗಳಿಗೂ ಮೇಲ್ಜಾತಿಯ ಜನರು ಕೊಡುವುದು ಒಂದೇ ಬಗೆಯ ಗೌರವ! ದೂರ ನಿಲ್ಲಿಸಿ ಮಾತನಾಡಿಸುವುದು, ಮನೆಯಿಂದಾಚೆ ನಿಲ್ಲಿಸಿ ನೀರು ಕೊಡುವುದು ಇತ್ಯಾದಿ.

ನಮ್ಮ ಆಸುಪಾಸಿನ ಯಾವುದೇ ಹಳ್ಳಿಗೆ ಹೋಗಿ ಸೂಕ್ಷ್ಮವಾಗಿ ನೋಡಿದರೂ ಈ ಅಸ್ಪೃಶ್ಯತೆ ನಮ್ಮನ್ನು ಅಣಕಿಸಿ ನಗುತ್ತಿರುತ್ತದೆ. ಅದು ಇರುವುದು ಎಲ್ಲರಿಗೂ ಗೊತ್ತು. ಅದನ್ನು ನಿಯಂತ್ರಿಸಲು ಕಠಿಣ ಕಾನೂನು–ಕಾಯ್ದೆಗಳಿವೆ ಎಂಬುದೂ ಗೊತ್ತು. ಗೊತ್ತಿದ್ದರೂ ಅದನ್ನು ಉಲ್ಲಂಘಿಸುವವರಿಗೇ ಪ್ರಾಮುಖ್ಯ ದೊರಕುವುದು ನಮ್ಮ ದೇಶದ ಸದ್ಯದ ದುರಂತ. ಇನ್ನು ಸಂತ್ರಸ್ತೆಯಾದ ದಲಿತ ಶಾಸಕಿಗೆ ನ್ಯಾಯ ದೊರಕುವುದೇ? ಇಂತಹ ಘಟನೆಗಳು ಮರುಕಳಿಸದಂತೆ ಮಾಡುವಲ್ಲಿ, ಮನುಷ್ಯರಾದ ನಾವು ಯಾವ ಪ್ರಯತ್ನ ಮಾಡುತ್ತಿದ್ದೇವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.