ಬಿ.ಎಸ್.ಭಗವಾನ್

ಅಂಥ ಕೇಡು ದುಃಸ್ವಪ್ನಕ್ಕೂ ಬೇಡ. 1945ರ ಆಗಸ್ಟ್ 6 ಮತ್ತು 9ರಂದು ಕ್ರಮವಾಗಿ ಅಮೆರಿಕವು ಜಪಾನಿನ ಹಿರೋಶಿಮ ಮತ್ತು ನಾಗಸಾಕಿ ನಗರಗಳ ಮೇಲೆ ತಲಾ ಒಂದು ಪರಮಾಣು ಬಾಂಬ್ ಹಾಕಿತು. ‘ಲಿಟಲ್ ಬಾಯ್’ ಮತ್ತು ‘ಫ್ಯಾಟ್ ಮ್ಯಾನ್’ ಎಂಬ ಹೆಸರುಗಳ, ಬಂದೂಕಿನ ಆಕಾರದ ಬಾಂಬ್‍ಗಳು ಅವು. ಕ್ರಮವಾಗಿ 4,400 ಹಾಗೂ 4,656 ಕಿಲೊಗ್ರಾಂ ತೂಕ. ಅವು 20,000 ಮತ್ತು 22,000 ಟನ್‍ಗಳ ಟ್ರೈನೈಟ್ರೊಟಾಲಿನ್ (ಟಿ.ಎನ್.ಟಿ.) ಸ್ಫೋಟಕಕ್ಕೆ ಕಾರಣವಾಗುವಷ್ಟು ಸಾಮರ್ಥ್ಯದವು. ಹೊಗೆ, ದೂಳು, ಮಸಿಯದ್ದೇ ಕಾರುಬಾರು.

ಬಾಂಬ್ ಬಿದ್ದ 11 ಕಿ.ಮೀ. ಸರಹದ್ದಿನಲ್ಲಿ ಸೂರ್ಯ ಮರೆಯಾಗಿದ್ದ. ಬಾಂಬ್ ಸ್ಫೋಟಿಸುವುದು 10 ಸೆಕೆಂಡುಗಳು ಮಾತ್ರ. ಆದರೆ ಅದರಿಂದ ಭಾವಿ ಪೀಳಿಗೆಗಳೇ ಯಾತನೆಗೊಳಗಾಗುತ್ತವೆ. ನೆಲದ ತಾಪಮಾನ 4,000 ಡಿಗ್ರಿ ಸೆಲ್ಸಿಯಸ್‍ನಷ್ಟಿತ್ತು. ಅದು ಬಹುತೇಕ ಎಲ್ಲ ವಸ್ತುಗಳೂ ಆವಿಯಾಗುವಂಥ ಉಷ್ಣ ವಿಕಿರಣ. ಕಿವಿ, ಶ್ವಾಸಕೋಶಕ್ಕೆ ಹಾನಿ. ಆಂತರಿಕ ರಕ್ತಸ್ರಾವ. ಅಂದಾಜಿಗೂ ಸಿಗದ ಅಗಾಧ ಸಾವು ನೋವು. ಕಡೆಗೆ ಅಳೆದು ಸುರಿದು ಒಟ್ಟಾರೆ 1.50 ಲಕ್ಷ ಮಂದಿ ಸಾವು, 1 ಲಕ್ಷ ಗಾಯಾಳುಗಳು ಎಂದು ಪ್ರಕಟಿಸಲಾಯಿತು. ಅರ್ಧದಷ್ಟು ಸಾವು ಬಾಂಬ್ ದಾಳಿಯ ದಿನವೇ ಸಂಭವಿಸಿತ್ತು. ಈ ಬಾಂಬ್‌ಗಳನ್ನು ಕ್ರಮವಾಗಿ 9,448 ಮೀಟರ್ ಹಾಗೂ 8,840 ಮೀಟರ್ ಎತ್ತರದಿಂದ ಬೀಳಿಸಲಾಗಿತ್ತು. ಹಿರೋಶಿಮಾದಲ್ಲಂತೂ ಶೇ 90ರಷ್ಟು ವೈದ್ಯರು, ನರ್ಸ್‍ಗಳೇ ಸಾವಿಗೀಡಾಗಿದ್ದಾಗ ಇನ್ನು ಪರಿಹಾರ ಕಾರ್ಯಗಳು ಹೇಗೆ ತಾನೆ ಸಾಧ್ಯ?

ಹಾರಿ ಬರುತ್ತಿದ್ದ ಅವಶೇಷಗಳಿಂದ ರಕ್ಷಿಸಿಕೊಳ್ಳಲು ಜನ ಹೆಣಗಾಡಿದರು. ಆಸರೆಯಾಗಬೇಕಾದ ಸೂರುಗಳೇ ಛಿದ್ರವಾಗಿ ತಲೆ ಮೇಲೆ ಬೀಳುತ್ತಿದ್ದವು. ನಾಗಸಾಕಿಯಲ್ಲಿ ರಾದ್ಧಾಂತ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆ ನಗರಗಳಲ್ಲಿ ಇಂದಿಗೂ ದಾಳಿಯ ದುಷ್ಪರಿಣಾಮಗಳು ಮಳೆ ನಿಂತರೂ ಮರದಡಿಯ ಹನಿ ನಿಂತಿಲ್ಲ ಎನ್ನುವಂತೆ ಕಾಡುತ್ತಲೇ ಇವೆ. ಕ್ಯಾನ್ಸರ್ ಮತ್ತು ದೀರ್ಘಕಾಲದ ವ್ಯಾಧಿಗಳು ಹೆಚ್ಚುತ್ತಲೇ ಇವೆ. ವಿಶ್ವಸಮರವಾದರೇನು, ಇಷ್ಟು ಅಮಾನವೀಯವಾಗಬೇಕೆ ಎಂದು ಅಮೆರಿಕ ಅರೆಕ್ಷಣ ಯೋಚಿಸಿದ್ದರೂ ಮನುಷ್ಯ ಮನುಷ್ಯರ ನಡುವಿನ ಮಾಹಾಕ್ರೌರ್ಯವೊಂದು ಇತಿಹಾಸವಾಗುವುದು ತಪ್ಪುತ್ತಿತ್ತು. E= mc^2 ಸೂತ್ರದ ಮೂಲಕ, ದ್ರವ್ಯ ಮತ್ತು ಶಕ್ತಿ ಒಂದೇ ಎಂದು ನಿರೂಪಿಸಿದ ಆಲ್ಬರ್ಟ್ ಐನ್‍ಸ್ಟೀನ್, ಈ ಗಂಡಾಂತರಕ್ಕೆ ತಮ್ಮ ಸಂಶೋಧನೆಯೇ ಎಂದು ಮರುಗಿದ್ದರು.

ಟಿ.ಎನ್.ಟಿ. ಹಳದಿ ಬಣ್ಣದ ಸ್ಫಟಿಕೀಯ ಘನವಸ್ತು. ಅದನ್ನು ಕಾಯಿಸಿ ಸ್ಫೋಟಕವಾಗಿ ಬಳಸಲಾಗುತ್ತದೆ. ನಂಜಿನ ಈ ವಸ್ತು ಅದೆಷ್ಟು ವಿನಾಶಕಾರಿ ಗೊತ್ತೇ? ಬರೀ ಒಂದು ಗ್ರಾಂ ಟಿ.ಎನ್.ಟಿ. ಸ್ಫೋಟಿಸಿ 70 ಕೆ.ಜಿ. ತೂಕದ ವ್ಯಕ್ತಿಯೊಬ್ಬನನ್ನು ಆಗಸಕ್ಕೆ 12 ಕಿಲೊಮೀಟರ್‌ಗಳ ತನಕ ಚಿಮ್ಮಿಸಬಹುದು! ಜಗತ್ತಿನ ಯಾವುದೇ ಭಾಗದಲ್ಲಿ ಪ್ರಬಲ ಬಾಂಬ್ ದಾಳಿಯಾದರೆ ಇತರೆಡೆಯಲ್ಲೂ ಬೆಳೆ ವೈಫಲ್ಯ, ತಾಪಮಾನ ಏರಿಕೆ, ಸಾಗರ ವಿಸ್ತರಣೆಯಂಥ ರಂಪಗಾಳಾದಾವು.

ಪರಮಾಣು ಅಸ್ತ್ರಗಳನ್ನು ಹೊಂದಿರುವುದೇ ಘನತೆ ಎಂದು ಭಾವಿಸುವ ಪ್ರವೃತ್ತಿಯನ್ನು ರಾಷ್ಟ್ರಗಳು ಮೊದಲು ಬಿಡಬೇಕು. ಪರಮಾಣು ಅಥವಾ ಬೈಜಿಕ ಅಸ್ತ್ರಗಳ ಬಳಕೆ ಇನ್ನಿಲ್ಲವೆಂಬ ಏಕೈಕ ಖಾತರಿಯೆಂದರೆ ಅವುಗಳ ನಿಷೇಧ ಮತ್ತು ವರ್ಜ್ಯ. ತಂತ್ರಜ್ಞಾನ ಪೈಪೋಟಿಯನ್ನು ಮಂದ ಇಲ್ಲವೆ ಸ್ಥಿರಗೊಳಿಸುವುದು ಅತ್ಯಗತ್ಯ. ವೈರಿಯ ತೀವ್ರ ಆಕ್ರಮಣದಲ್ಲಿದ್ದರೂ ಬೈಜಿಕ ಅಸ್ತ್ರಗಳು ಅನಿವಾರ್ಯವಾಗಬಾರದು. ಇಂದಿಗೆ ವಿಶ್ವದಾದ್ಯಂತ ಕನಿಷ್ಠ 10,000 ಬಗೆ ಬಗೆಯ ಪರಮಾಣು ಅಸ್ತ್ರಗಳುಂಟು ಎನ್ನಲಾಗಿದೆ. ಕಂದಕ, ಕ್ಷಿಪಣಿ ಹಗೇವು, ವಾಯುನೆಲೆ ಮತ್ತು ನೌಕಾನೆಲೆಯೇ ಅವುಗಳ ಉಗ್ರಾಣಗಳಾಗಿರುವುದು ಆತಂಕಕಾರಿ. ಈ ಅತಿ ಮಾರಕ ಆಯುಧಗಳನ್ನು ಸಾಗಿಸುವುದು ಸಬ್‍ಮರೀನ್‍ಗಳು! ಇವೆಲ್ಲವೂ ಸ್ಫೋಟಿಸಿದರೆ ಜಗತ್ತಿಗೆ ಸರ್ವನಾಶವಲ್ಲದೆ ಅನ್ಯ ದಾರಿ ಯಾವುದು?

ಅಣ್ವಸ್ತ್ರ ನಿಶ್ಶಸ್ತ್ರೀಕರಣದ ದಿಸೆಯಲ್ಲಿ ‘ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ’ (ಎನ್.ಪಿ.ಟಿ.– ದಿ ನ್ಯೂಕ್ಲಿಯರ್ ನಾನ್ ಪ್ರಾಲಿಫಿರೇಷನ್ ಟ್ರೀಟಿ) 1968ರಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಮಹತ್ತರ ಒಪ್ಪಂದ. ವಿಶ್ವಸಂಸ್ಥೆ ಅದನ್ನು ಪ್ರಾಯೋಜಿಸಿದಾಗ ಹದಿನೆಂಟು ದೇಶಗಳು ಉತ್ಸಾಹ ತೋರಿದವು. ಪರಮಾಣು ಆಯುಧಗಳನ್ನು ಬಳಸುವ ಮಾತಿರಲಿ ಅವನ್ನು ಪ್ರಯೋಗಿಸಲೂಕೂಡದು, ಪರಮಾಣು ಅಸ್ತ್ರಪರ ರಾಷ್ಟ್ರಗಳನ್ನು ಪ್ರೋತ್ಸಾಹಿಸಬಾರದು, ಅವುಗಳ ಪರವಾಗಿ ವಕಾಲತ್ತು ವಹಿಸಬಾರದು, ಪರಮಾಣು ಶಕ್ತಿಯನ್ನು ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು ಎನ್ನುವುದು ಒಡಂಬಡಿಕೆಯ ಸಾರಾಂಶ.

ರಷ್ಯಾ, ಅಮೆರಿಕ ಸೇರಿದಂತೆ 191 ದೇಶಗಳು ಸಮ್ಮತಿಸಿದ ಈ ಒಪ್ಪಂದ 1970ರಲ್ಲಿ ಜಾರಿಗೆ ಬಂದಿತು. ಪ್ರತಿವರ್ಷ ಆಗಸ್ಟ್ 6ನೇ ತೇದಿ ‘ವಿಶ್ವ ಹಿರೋಶಿಮ ದಿನ’ ಆಗಿರುವುದರ ಉದ್ದೇಶ ಅಣ್ವಸ್ತ್ರಗಳಿಂದ ಪರಿಣಮಿಸುವ ಕಲ್ಪನಾತೀತ ಘನಘೋರ ಅನಾಹುತಗಳ ಕುರಿತು ಜನಜಾಗೃತಿ ಮೂಡಿಸುವುದು. ಇದರ ಜೊತೆಗೆ ಈ ದಿನವು ಶಾಂತಿ, ನೆಮ್ಮದಿಯ ಮೌಲ್ಯವನ್ನು ಮನಗಾಣಿಸುತ್ತದೆ. ಸಂಯಮ, ಸಮಾಧಾನಶೀಲತೆಯು ಮನುಕುಲದ ಪ್ರಭುತ್ವವಾಗಬೇಕೇ ವಿನಾ ಪರಮಾಣು ಆಯುಧವಲ್ಲ. ಹಿರೋಶಿಮಾದಲ್ಲಿ ಬಾಂಬ್ ಬಿದ್ದ ಸಮಯವಾದ ಬೆಳಿಗ್ಗೆ 8.15ಕ್ಕೆ ಸರಿಯಾಗಿ, ಹಣತೆಯಿರಿಸಿದ ಬಣ್ಣದ ಬುಟ್ಟಿಗಳನ್ನು ನದಿ, ಸರೋವರಗಳಲ್ಲಿ ಶಾಂತಿಯ ದ್ಯೋತಕವಾಗಿ ಆಬಾಲವೃದ್ಧರೆಲ್ಲ ತೇಲಿಬಿಡುತ್ತಾರೆ.

ಪರಮಾಣು ಸಮರೋತ್ಸಾಹಿ ದೇಶಗಳಿಗೆ ನೈತಿಕ ಮತ್ತು ತರ್ಕಬದ್ಧ ಪ್ರತಿಕ್ರಿಯೆಯಾಗಿ ಆಗಸ್ಟ್ 6 ಜಾಗತಿಕ ಜಾಗೃತ ದಿನವಾಗಬೇಕು. ಅಲ್ಲಲ್ಲಿ ಆ ಕುರಿತ ಚರ್ಚೆ, ವಿಚಾರಸಂಕಿರಣ, ಸಭೆ, ರೂಪಕ ಮೇಳೈಸಬೇಕು. ಮನುಷ್ಯನ ನಾಗರಿಕತೆಯ ಮುನ್ನಡೆಯು ಪರಮಾಣು ಶಕ್ತಿಯನ್ನು ಸಮಷ್ಟಿಹಿತಕ್ಕಾಗಿ ಉಪಯೋಗಿಸಿಕೊಳ್ಳುವ ಅವನ ಜಾಣತನದಲ್ಲಿದೆ. ಕಟ್ಟುನಿಟ್ಟಾದ ಸುರಕ್ಷಿತ ವ್ಯವಸ್ಥೆಯಿಲ್ಲದಿದ್ದರೆ ಪರಮಾಣು ವಿದ್ಯುತ್ ಸ್ಥಾವರಗಳೂ ಸೆರಗಿನಲ್ಲಿಟ್ಟ ಬೆಂಕಿಯಂತೆಯೇ. 1986ರಲ್ಲಿ ಚೆರ್ನೊಬಿಲ್ ಹಾಗೂ 2011ರಲ್ಲಿ ಫುಕುಶಿಮಾದಲ್ಲಿ ಸಂಭವಿಸಿದ ಪ್ರಕರಣಗಳು ಇನ್ನೂ ಕಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.